Thursday, February 21, 2008

ಕವಿತೆ (ಜಸ್ಟಿಫೈಡ್ ಅಲೈನ್‌ಮೆಂಟ್‌ನಲ್ಲಿ)

ಭವಂತಿ ಮನೆ. ನಡುವೆ ಪುಟ್ಟ ಜಲಪಾತದಂತೆ ಸುರಿವ ಮಾಯದ ಮಳೆ. ನೋಡುತ್ತಾ ಕೂತ ನಮ್ಮಿಬ್ಬರ ಕಣ್ಣಲ್ಲಿ ಜೋಗದ ಸಿರಿ ಬೆಳಕು. ಗಾಳಿಗೆ ದಿಕ್ಕು ತಪ್ಪುವ‌ ಹನಿಗಳು ಮನವನ್ನು ಪನ್ನೀರಿನಂತೆ ಸೋಕುತ್ತಿದೆ. ತೊಟ್ಟ ಅರಿವೆ ನೆನೆಯುತ್ತಿರುವದರ ಪರಿವೆಯೂ ಇಲ್ಲದ ಆ ಸ್ಥಿತಿಯನ್ನು ನಿನ್ನ ಪದಗಳಲ್ಲಿ ಧ್ಯಾನ ಎನ್ನುವುದೇ ಸರಿ.

ನಾನು ಮರಳಿ ಬಂದ ಮರುದಿನ ನೀನು ಹೇಳಿದ್ದ ಪದವದು. ನೀನು ಹೋಗಿದ್ದಕ್ಕೆ ಬೇಸರವಾಗುತ್ತಿಲ್ಲ, ಏನೋ ಸಂತೃಪ್ತಿಯಿದೆ ಎಂದಿದ್ದೆ. ಇದು ಪ್ರೀತಿಯಲ್ಲ, ಧ್ಯಾನ ಎಂದಿದ್ದೆ. ಈಗ ಅನ್ನಿಸುತ್ತಿದೆ-ನಾನು ಅಲ್ಲಿಗೆ ಬಂದಿದ್ದಾದರೂ ನಿಜವೇ ಅಂತ.ನಡುಗುತ್ತಿದ್ದ ನಸುಕಿನಲ್ಲಿ ಯಾರಿರಿಸಿಹರೋ ಮುಗಿಲಿನ ಮೇಲಿಂದ ಇಲ್ಲಿಗೆ ಇದ ತಂದು ಎನ್ನಿಸಿದ ಕೆರೆಯನ್ನು ಹಾದು, ಸಣ್ಣ ಹಾದಿಗಳನ್ನು ದಾಟಿ, ಬೇಲಿಯ ಗೇಟನ್ನು ಸರಿಸಿಕೊಂಡು ಮೊದಲು ಕಂಡ ಕೆಂಪು ಮನೆಯನ್ನು ಸುತ್ತು ಹಾಕಿ ತಲೆಯೆತ್ತಿದರೆ ನೀನು ದೂರದಲ್ಲಿ ನಿಂತಿದ್ದೆ. ಹತ್ತಿರ ಬಂದರೆ ಎರಡೂ ಕೈ ಹಿಡಿದುಕೊಂಡು ನಕ್ಕೆ.

ಆಮೇಲೆ ತೆರೆಯಿತು ನಿನ್ನ ಅಪೂರ್ವ ಲೋಕ. ಬಿಥೋವೆನ್‌ನ ಸಿಂಫೋನಿ ನಡುವೆಯೇ ತಮ್ಮ ಹಾಡು ತೂರಿಸುವ ಹಕ್ಕಿಗಳು. ಪುಟ್ಟ ಮನೆಯನ್ನು ಸದಾ ಬೆಚ್ಚಗಿಡುವ ಚೆಂದದ ಒಲೆ. ಆಗಷ್ಟೆ ಸ್ನಾನ ಮಾಡಿ ಬಂದಾಗ ಕರೆಂಟ್ ಹೋದ ರಾತ್ರಿಯನ್ನೇ ಕರಗಿಸುವಂತೆ ಕೇಳಿಸಿದ ಇಳಿದು ಬಾ ತಾಯಿ. ಕೇಳುತ್ತಲೆ ಹಳೆಯ ಹಾಲಿನಲ್ಲಿ ನೀನು ಮಾಡಿದ ಹೊಸರುಚಿ. ಕಿಟಕಿಯಿಂದ ನಕ್ಷತ್ರಗಳನ್ನು ನೋಡುತ್ತಾ ತಬ್ಬಿ ಮಲಗಿದರೆ ಅದು ಬೇರೆಯದೇ ಕನಸು.ಎಷ್ಟು ಮುಟ್ಟಿದರೂ ಮುಗಿಯದಂಥ ಕನಸು. ................ ...... ....... ....... .... ........ ..... ಲಾಲ್ ಪಹಾಡಿ ಹಾಡಿಗೆ ನೀನು ಹೇಳಿದ ಅರ್ಥ, ನಿನ್ನ ಕಂಠದಲ್ಲಿ ಹೊಮ್ಮುವ ಕುಮಾರ ಗಂಧರ್ವನ ಹಾಡಿಗೆ ತಲೆದೂಗುವ ಅಂಗಳದ ೧೪ ಬಗೆಯ ಹೂವುಗಳು(ನಾವು ಎಣಿಸಿದೆವಲ್ಲ?) ಎಲ್ಲ ಕಣ್ಣ ಮುಂದೇ ಇವೆ.

ಬಿಕ್ಕೆ ಮರದ ಮೇಲೆ ಹತ್ತಿ ಹಣ್ಣು ಉದುರಿಸುತ್ತಿರುವ ನೀನು. ಕೆಳಗೆ ಬಿದ್ದವನ್ನು ಆರಿಸುತ್ತಿರುವ ನಾನು. ನನ್ನ ಮನೆ ಕಾಯ್ತಿಯೇನೋ ಎಂದು ನೀನು ಮುದ್ದಿನಿಂದ ಕಾಲಿನಲ್ಲೇ ಮಾತಾಡಿಸಿದ ನಾಯಿ, ಎಂದೂ ಮರೆಯಲಾಗದ ಸ್ನಾನದ ತಡಿಕೆ ಎಲ್ಲವೂ ಸ್ಪಷ್ಟವಾಗಿ ಕೂತಿವೆ ಮನದಲ್ಲಿ. ಯಾವುದೋ ಜಾತ್ರೆಯಲ್ಲಿ ನಿನ್ನನ್ನು ಬರ್ತೀಯಾ ಎಂದು ಕರೆದ ಮಧ್ಯವಯಸ್ಕ,ಗೆಳತಿಯರ ಜತೆ ನೀನೆಂದೋ ಮಾಡಿರಬಹುದಾದ ಗುಜರಾತಿ ನೃತ್ಯ, ಹೂದೋಟದಲ್ಲಿ ಒಬ್ಬೊಬ್ಬಳೆ ತಿರುಗಾಡುತ್ತಿರುವ ನೀನು, ಅಣ್ಣ ಕಡಿಸಿ ಹಾಕಿದ ಆ ನಿನ್ನ ಪ್ರೀತಿಯ ಮರ, ನಿನ್ನ ಆಲ್ಬಂನಲ್ಲಿ ಸುಮ್ಮನೆ ಕೂತ ಹಳದಿ ಉಡುಪಿನ ಹುಡುಗ ಎಲ್ಲವನ್ನೂ ಕಾಣುತ್ತಿದ್ದೇನೆ.

ಮುಂದೆ ತೆರೆದುಕೊಂಡಿರುವ ಲಡಾಖ್‌ನ ಹಿಮಾವೃತ ಹಾದಿ ನಮ್ಮಿಬ್ಬರನ್ನೂ ನಲುಮೆಯಿಂದ ಕರೆಯುವಂತಿದೆ.

3 comments:

Anonymous said...

ಅಪಾರ,
ಜಸ್ಟಿಫೈಡ್ ಅಲೈನ್ಮೆಂಟಲ್ಲಿರೋದಕ್ಕೇ ಸವಿ ಹೆಚ್ಚಾಗಿದೆ. ಲೆಫ್ಟು, ರೈಟು, ಸೆಂಟ್ರು ಅಂತ ಹೋಗಿದ್ರೆ ಬೇರೆ ಥರವೇ ಓದಿಕೋತಿದ್ದುವೇನೋ. ಬಹಳ ತೀವ್ರವಾದ ತೂಕದ ಬರವಣಿಗೆ, ಮನಮುಟ್ಟುವ ಬಿಂಬಗಳು, ಕಣ್ಣಿಗೆ ಕಟ್ಟುವ ವರ್ಣನೆ..ನಾವು ಪರವಶರಾಗುವುದಕ್ಕೆ ಇನ್ನೇನು ಬೇಕು ಹೇಳಿ?
ಪ್ರೀತಿ ನಮ್ಮಿಂದ ಏನೇನು ಹೊರತರತ್ತೆ! ಇನ್ನೂ ಮಿನಿಮಂ ಮೂರು ಸಾರಿಯಾದರು ಓದಬೇಕು ನಾನು.
-ಟೀನಾ.

Girish Rao H said...

ಜಯಂತ್ ಕಾಯ್ಕಿಣಿ ಅವರ ಅಂಕಣಬರಹಗಳನ್ನು ಓದಿದ ನೆನಪಾಯಿತು. ಅವರೂ ಅಂಕಣ ಅಂತ ಕವಿತೆಗಳನ್ನು ಜಸ್ಟಿಫೈಡ್ ಅಲೈನ್ ಮೆಂಟಲ್ಲಿ ಬರೀತಿದ್ರೋ ಏನೋ. ಮತ್ತೊಮ್ಮೆ ಓದಬೇಕು.
ತುಂಬಾ ಖುಷಿಯಾಯ್ತು ಕಣ್ರೀ.
-ಜೋಗಿ

Anonymous said...

ಪ್ರತಿ ಸಾರ್ತಿಯೂ ಕಮೆಂಟು ಮಾಡಿದರೆ ತೂಕವಿರೋಲ್ಲ ಅನ್ನೋದು ಬ್ಲಾಗ್ ಲೋಕದ ಅಘೋಷಿತ ನಿಯಮ. ಏನು ಮಾಡೊದು? ಏನಾದರೂ ಹೊಸತು ಮಾಡುತ್ತಲೇ ಇರುತ್ತೀರ ನೀವು.
ಬಹಳ ಚೆನ್ನಾಗಿದೆ ಜಸ್ಟಿಫೈಡ್ ಕವಿತೆ. ಇದನ್ನ ಲೇಖನ ಅಂತ ಬರೆದಿದ್ದರೂ ಕವಿತೆ ಹಾಗೇ ಓದಿಕೊಳ್ಳುತ್ತಿದ್ದೆನೇನೋ?
ಮತ್ತೆ ಮತ್ತೆ ಓದಿಕೊಂಡು ಸುಖಿಸಿದೆ.
ಧನ್ಯವಾದ.
- ಚೇತನಾ