Wednesday, February 6, 2008

ಅತಿಥಿ

ಯಾರೋ ಬರುತ್ತಿರುವಂತಿದೆ ಪರಿಚಿತರೆ?
ನಡೆವ ಭಂಗಿ ಎಲ್ಲೋ ಕಂಡಂತಿದೆಯಲ್ಲಾ
ಎಂದು ಕಣ್ಣ ಮೇಲೆ ಕೈ ಹಿಡಿದು ಊಹಿಸದಿರು
ಖಂಡಿತಾ ಆತ ಬರುತ್ತಿರುವುದು ನಮ್ಮ ಮನೆಗಲ್ಲ


ಪ್ರತಿಯೊಬ್ಬರಿಗೂ ಇಲ್ಲಿ ಹೊತ್ತು ಗೊತ್ತಿದೆ
ಹಾಗೆಲ್ಲ ಬಡಿದು ನಮ್ಮ ಕೋಟೆಯ ಕದ
ತಪೋಭಂಗ ಮಾಡುವುದಿಲ್ಲ ಈ ಪೇಟೆಯ ಜನ
ಚಪ್ಪಾಳೆನೂ ಸದ್ದಾಗದಂತೆ ಹೊಡೆವ ನಾಜೂಕು ಮನ

ಬನ್ನಿ ಯಾವಾಗಾದರೂ ಒಮ್ಮೆ ಮನೆಗೆ
ಹಾ! ಹೊರಡುವ ಮುನ್ನ ಒಂದು ಫೋನ್‌ ಮಾಡಿ
ನಾಳೆ ಬೇಡ ಈ ವಾರ ನಾನು ಸ್ವಲ್ಪ ಬಿಸಿ
ಬನ್ನಿ ಯಾವಾಗಾದರೂ- ಫೋನ್‌ ಮಾಡಿಕೊಂಡು

ತೆರೆದಿದೆ ಮನೆ ಓ ಅಂತ ಅತಿಥಿ ಸೀದಾ ನುಗ್ಗುವಂತಿಲ್ಲ
ಕರೆಗಂಟೆಯೂ ಅನುಮತಿ ಇಲ್ಲದೆ ಕಿರುಚುವಂತಿಲ್ಲ
ಬಾಗಿಲು ತೆರೆದು ವಾಟ್‌ ಎ ಸರ್ ಪ್ರೈಜ್‌ ಎನ್ನುವಂತಿಲ್ಲ
ಬಂದವರನ್ನು ಊಹಿಸಿದವರಿಗೆ ಯಾವ ಪ್ರೈಜೂ ಇಲ್ಲ

ಬಂದಿದ್ದೀರಾ? ಎಲ್ಲಿದ್ದೀರಿ? ಹಾಗೇ ನೇರ ಬನ್ನಿ
ಇಲ್ಲ ಹೆದರಬೇಡಿ ನಾಯಿ ಇಲ್ಲ ಬನ್ನಿ
ಅಂಗಳಕೆ ಬಂದಮೇಲೆ ಮತ್ತೊಂದು ರಿಂಗ್‌ ಮಾಡಿ
ಬಾಗಿಲು ತೆರೆದಾಯ್ತು ಇಳಿಸೋಣ ಕಿವಿಯಿಂದ ಮೊಬೈಲು

**
ರಾತ್ರಿ ಎಂಟರ ಈ ಅಪವೇಳೆಯಲ್ಲಿ
ಬೆಚ್ಚಿ ಬೀಳಿಸುವಂತೆ ಬಾಗಿಲೇಕೆ ಬಡಿಯುತಿದೆ
ಅಯ್ಯೋ! ನಮಗೆ ಯಾರ ನಿರೀಕ್ಷೆಯೂ ಇರಲಿಲ್ಲವಲ್ಲ
ಯಾರಾಗಿರಬಹುದು ದೇವರೆ?!


ಬೆವರುವ ಬೆರಳುಗಳಲ್ಲಿ ಬೋಲ್ಟ್‌ ತೆಗೆದರೆ
ಹಸಿರು ರೇಷ್ಮೆ ಲಂಗದಲ್ಲೊಂದು ಮುದ್ದು ಪುಟ್ಟಿ
ಹುಟ್ಟುಹಬ್ಬವೋ ಏನೋ ಚಾಚಿದ ಕೈಲಿ ಚಾಕ್ಲೇಟ್‌ ಬುಟ್ಟಿ
ಮಂಡಿಯೂರಿ ಕೂತು ಆ ಅಪರಿಚಿತಳನ್ನು ಬರಸೆಳೆದೆ
~ಅಪಾರ

4 comments:

Vasanth Kaje said...

Super!... nimma 'mestra saikallina..' katheya thara..

Anonymous said...

ನಮಸ್ತೇ.

ಸುಮಾರು ಹನ್ನೆರಡು ವರ್ಷಗಳ ಹಿಂದೆ ತುಷಾರದಲ್ಲಿ ‘ಕನಸು ಹೊತ್ತ ಹುಡುಗ ಮತ್ತು ಹೂ ಮಾರುವ ಹುಡುಗಿ’ ಅಂತ ಒಂದು ಕಥೆ ಬಂದಿತ್ತು. ಅದನ್ನ ಬರೆದವರು ‘ಅಪಾರ’. ಅದು ನೀವಾ?
ಆಗೆಲ್ಲ ಚೆಂದದ ಸಾಲುಗಳನ್ನ ಡೈರಿಯಲ್ಲಿ ಬರೆದುಕೊಳ್ಳೋ ಕ್ರೇಜಿತ್ತು. ಹೆಚ್ಚು ಕಡಿಮೆ ಕಥೆಯನ್ನೇ ಇಳಿಸಿಕೊಂಡಿದ್ದೆ ನಾನು.
ಅದು ನೀವಾ?
ಹಾಗಾದರೆ ನಾನು ನಿಮ್ಮ ಬಹಳ ಹಳೆಯ ಅಭಿಮಾನಿ.
- ಚೇತನಾ

Anonymous said...

ನಮಸ್ತೆ ಚೇತನಾ
ಅದು ನಾನೇ ಅಂತ ಹೇಳುವ ಆಸೆಯಾಗುತ್ತಿದೆ! ಆದರೆ ಎಷ್ಟು ಯೋಚಿಸಿದರೂ ಸರಿಯಾಗಿ ನೆನಪಾಗುತ್ತಿಲ್ಲ. ನನಗೆ ತಿಳಿದಂತೆ ಆಗೆಲ್ಲಾ ತುಷಾರಕ್ಕೆ ನಾನು ಕಳಿಸಿದ ಏನೂ ಪ್ರಕಟವಾಗಲಿಲ್ಲ. ನಾಗತಿಹಳ್ಳಿ ಚಂದ್ರಶೇಖರ್ ಥರದ ಬರವಣಿಗೆಯಿಂದ ಉತ್ತೇಜಿತನಾದ ಕಾಲವದು. ಅಂಥದೊಂದು ರಮ್ಯ ಶೀರ್ಷಿಕೆಯಲ್ಲಿ ಏನಾದರೂ ಬರೆದಿದ್ದರೂ ಬರೆದಿರಬಹುದು. ಆದರೆ ಅದರ ಬಗ್ಗೆ ಖಚಿತವಾಗಿ ಏನೂ ನೆನಪಾಗಲಿಲ್ಲ. ಈ ನೆಪದಲ್ಲಿ ಹನ್ನೆರಡು ವರ್ಷದ ಹಿಂದಿನ ಕಾಲೇಜು, ಕ್ಯಾಂಪಸ್ಸು, ಹಾಸ್ಟೆಲ್ಲು, ಲೈಬ್ರರಿ, ಧಾರವಾಡ, ರಾಯಚೂರು, ಮೊದಲ ಕತೆ ಅಂತೆಲ್ಲಾ ಕಾಲ ಹಾದಿಯ ಚಂದದ ಬೀದಿಗಳಲ್ಲಿ ಅಲೆದಾಡುವುದು ಸಾಧ್ಯವಾಯಿತು. ಅದಕ್ಕಾಗಿ ನಿಮಗೆ ಕೃತಜ್ಞತೆಗಳು.
~ಅಪಾರ

Anonymous said...

:)

ಅದು ನೀವಲ್ಲದಿದ್ರೂ ನಷ್ಟ ಏನಿಲ್ಲ. ನೀವೇ ಆಗಿರಲಿ ಅಂತ ಅಂದ್ಕೊಳ್ತೀನಷ್ಟೆ!
ನಿಮಗೆ ‘ಬಹಳ ಚೆನ್ನಾಗಿ ಬರೀತೀರಿ’ ಅಂತ ಹೇಳ್ತಿರುವ ನಾನು ಅದೆಷ್ಟನೆಯವಳೋ?

ನಿಮ್ಮ ಮದ್ಯ ಸಾರ ಬಹಳ ಇಷ್ಟ ಆಗತ್ತೆ.

-ಚೇತನಾ

~~~~~~ಮೀ ನ ಹೆ ಜ್ಜೆ