1
ಮಧ್ಯಾಹ್ನವ ಕಳೆಯುತಿದ್ದ
ಉದ್ಯಾನದ ಬೆಂಚು
ಮಳೆಯ ರಾತ್ರಿ ಹೊಳೆಯುತಿದ್ದ
ಒದ್ದೆ ಮುಖದ ಮಿಂಚು
ಒಬ್ಬರಿಗೆ ಇನ್ನೊಬ್ಬರು
ಕಾದು ಕೆಂಪಾದ ತಿರುವು
ಕಾಡಿದರೂ ಇರಲಿ ನೆನಪು
ಬೇಡ ಜಾಣ ಮರೆವು
ನಿನ್ನ ನೆನಪಲೆ ಕೊರಗುತಿರುವೆ
ಎನುವರೆಲ್ಲ ಜನ
ನಿನ್ನ ನೆನೆದೇ ಬದುಕುತಿರುವೆ
ಅರಿಯರೆನ್ನ ಮನ
2
ಶುಭಾಶಯ ಕೋರುವ ಹೆಸರಲ್ಲಿ
ಮೃದು ಅಂಗೈಯ ಮುಟ್ಟಿದೆ
ಸುಣ್ಣ ಆಗಿದೆ ಎಂದು ಸುಳ್ಳು ಹೇಳಿ
ಬೆನ್ನನೊಮ್ಮೆ ಮುಟ್ಟಿದೆ
ರಸ್ತೆ ದಾಟುವಾಗ 'ಎಚ್ಚರ' ಎಂದು
ತೋಳು ಮುಟ್ಟಿ ಕಂಪಿಸಿದೆ
ಯಾವ ನೆಪವೂ ಇಲ್ಲದೆ ತಬ್ಬಿ
ಮನವ ಮುಟ್ಟುವ ಹಂಬಲ ಮಾತ್ರ
ಉಳಿದೇ ಹೋಯ್ತು
3
ನಿನ್ನ ಕರೆಗೆ ಹಾಡುತ್ತಿತ್ತು
ನಿನ್ನ ಕೋಪಕೆ ಕಂಪಿಸುತ್ತಿತ್ತು
ಮುದ್ದು ಮಾಡಿದರೆ ಬಿಸಿಯಾಗುತಿತ್ತು
ಈಗ ಕ್ರೆಡಿಟ್ ಕಾರ್ಡಿನವರ ಕಾಟಕ್ಕೆ
ಕಂಗೆಟ್ಟಿದೆ ನನ್ನ ಮೊಬೈಲು
ನಿನ್ನ ನಂಬರು ಚಾಲ್ತಿಯಲ್ಲಿಲ್ಲ
4
ನೀನು ತೊರೆದು ಹೋದ ಮೇಲೆ
ನಾನು ಗಡ್ಡ ಬಿಟ್ಟಿಲ್ಲ, ಕುಡಿವುದ ಕಲಿತಿಲ್ಲ
ಕೆಲಸಕ್ಕೆ ಹೋಗುವುದನ್ನೂ ಬಿಟ್ಟಿಲ್ಲ
ನಿನ್ನ ನೆನಪಲ್ಲಿ ಕಣ್ಣೀರು ಸುರಿಸುತಿಲ್ಲ
ಈ ಪದ್ಯ ಬರೆಯುವಾಗಲೂ ಕಂಪಿಸುತಿಲ್ಲ
ಹೇಳು, ನಿನಗೆ ಖುಷಿಯಾಯಿತೆ?
7 comments:
kavana tumaba chennagide...
ಇಲ್ಲ, ಹುಡುಗಿ ಹೇಳುವಳು- ಖಂಡಿತ ಖುಷಿಯಾಗಲಿಲ್ಲ!!
ಕವನ ಸೊಗಸಾಗಿದೆ.
- ಚೇತನಾ
modala padya chennagide.
-SD
ಇದು ಹುಸಿ ಮುನಿಸಿನಿಂದ ಬರೆದ ಕವನವೋ ಅಥವಾ ನಾನು ಹೊರಬಂದಿದ್ದೇನೆ ಅಂತ ಹೇಳಲಿಕ್ಕೆ ಬರೆದ ಕವನವೋ ? ಕವನ ಚೆನ್ನಾಗಿ ಮೂಡಿಬಂದಿದೆ
ಅಪಾರ
ಮೊದಲ ಕವಿತೆಯ ಮೂರೂ ಸ್ಟ್ಯಾಂಜಾಗಳು ತಮ್ಮ ಹಿಡಿತದಿಂದ ಬಹಳ ತಟ್ಟುತ್ತವೆ. ಮತ್ತೆ ಎರಡೂ ಕವಿತೆಗಳು.. ಎಲ್ಲೊ ಒಂದು ಕಡೆ ಇನ್ನೂ ಎಡಿಟಿಂಗ್ ಬೇಕಿತ್ತು ಅನ್ನಿಸುವ ಹಾಗೆ..
ನಿಮ್ಮ ಕಾಮೆಂಟ್-ರೀ ಗಳು, ಮದ್ಯಸಾರಗಳು as usual ತಮ್ಮ ಹದವಾದ,ಹರಿತ ಗುಣದಿಂದ ವಿಪರೀತ ಖುಶಿ ಕೊಡುತ್ವೆ.
ನಂಗನ್ಸತ್ತೆ ನಾನು ನಿಮ್ಮನ್ನ ಜಿ.ಎನ್ ಮೋಹನರ ಕೇಳುಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನೋಡಿದೇನೆ ಅಂತ!
-ಟೀನಾ.
ಹೌದು. ಕೊನೆಯ ಎರಡು ಸ್ಟಾಂಜಾಗಳಲ್ಲಿ ಬಿಗಿ ಇಲ್ಲ ಎಂದು ನನಗೂ ಅನಿಸಿದೆ. ಥ್ಯಾಂಕ್ಸ್
~ಅಪಾರ
ಅಪಾರ,
ಚೆನ್ನಾಗಿದೆ. ಮೊಬೈಲು ಗಟ್ಟಿಯಾಗಿಟ್ಟುಕೊಳ್ಳಿ. ಮತ್ತೆ ಕಂಪಿಸಲೂ ಬಹುದು.
ಗುರು
Post a Comment