Sunday, August 17, 2008

ಭಾಮಿನಿ ಮುಖ


ಚೇತನಾ ತೀರ್ಥಹಳ್ಳಿ ಅವರ ಪುಸ್ತಕ 'ಭಾಮಿನಿ ಷಟ್ಪದಿ' ಇಂದು ಸಂಜೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲಿನಲ್ಲಿ ಬಿಡುಗಡೆ ಆಗುತ್ತಿದೆ. ಪುಸ್ತಕದ ಮುಖಪುಟ ಇಲ್ಲಿದೆ-ನಿಮಗಾಗಿ, ಕೆಲವು ಗಂಟೆ ಮೊದಲೇ!
ಕಲಾಕೃತಿ ಪ ಸ ಕುಮಾರ್ ಅವರದು.

Wednesday, August 13, 2008

ಅಪ್ಪಿ -ತಪ್ಪಿ

ಅಷ್ಟಲಕ್ಷ್ಮಿಯರನ್ನೆಲ್ಲಾ
ನೀವಾಳಿಸಿ ಎಸೆದ ಮೇಲೆ
ನನ್ನ ಇಷ್ಟಲಕ್ಷ್ಮಿ
ಮೂಡಿಬರುತಾಳೆ

ಥಳುಕಿಲ್ಲ ಬಳುಕಿಲ್ಲ
ಕತ್ತಲೊಳಗಿಂದ ತೇಲಿಬರುತಿರುವ
ನಿರಾಭರಣೆಯ
ಸೊಗಸೇ ಬೇರೆ

ಬಂದಳೆ ನಿಂದಳೆ
ತಬ್ಬಿದಳೆ ನನ್ನ ಸವರಿದಳೆ ಬೆನ್ನ
(ಅವಳ ಪರಿಮಳ ಅದೆಷ್ಟು ಚೆನ್ನ)
ಸುತ್ತ ಆವರಿಸಿದ ದಿವ್ಯ ಕತ್ತಲೂ ಉನ್ಮತ್ತ

ನನ್ನ ಎದೆಯಲ್ಲಿ ಬಿಟ್ಟ
ಅವಳ ಕಣ್ಣುಗಳಿಗದೇ ಕತ್ತಲು
ಅವಳ ಹೆಗಲ ಮೇಲೆ ಮುಚ್ಚಿದ
ನನ್ನ ಕಣ್ಣುಗಳಿಗೂ ಅದೇ ಕತ್ತಲು

ಬೆನ್ನ ಸಂತೈಸುತ್ತಿರುವ ಅವಳ
ಕಣ್ಣೊಳಗಿರಬಹುದು ಪ್ರೇಮದ ಬೆಳಕು
ಅಪ್ಪುಗೆಯಿಂದ ಹೊರಬಂದು
ಪರೀಕ್ಷಿಸುವ ಧೈರ್ಯವುಂಟೆ ನನ್ನಲಿ

ಮಿಸುಕಿದರೆ ಕರಗೀತು ಅಲುಗಿದರೆ ನಲುಗೀತು
ಉಸಿರಾಡಿದರೂ ಕಲಕೀತು ಈ ನನ್ನ ಜೀವದ ಚಿತ್ರ
ಹೇಗೆ ವಿವರಿಸಲಿ ಹೇಳು ನಿನಗೆ
ಕಳೆದುಕೊಳುವ ನೋವನ್ನು ಮಿತ್ರ

ಈ ಅದ್ಭುತ ಕ್ಷಣವೀಗ
ಜಾರಿ ಹೊರಬಿದ್ದಿದೆ ಕಾಲಚಕ್ರದಿಂದ
ಸೊಗಸಾದ ಒಂದು ಮೌನಬಿಂಬವಾಗಿ
ತೂಗಿದೆ ಅಂತರಿಕ್ಷದಲ್ಲಿ

ಇನ್ನು ಕೂಗದಿರಲಿ ಕೋಳಿ
ಆಗದಿರಲಿ ನಾಳೆ
ನನ್ನ ಪ್ರಾರ್ಥನೆಯೊಂದೆ:
ನಿನ್ನೊಲುಮೆ ನಮಗಿರಲಿ ತಂದೆ
ಕೈಹಿಡಿದು ನಡೆಸದಿರು ಮುಂದೆ!

Friday, August 8, 2008

ವಿಚಿತ್ರ-ಕೂಟ!

1
ನಿನ್ನ ಮುದ್ದಿಸಿ ಮರಳುತಿದ್ದೆ
ಜೋರುಮಳೆಗೆ ಸಿಕ್ಕಿಬಿದ್ದೆ
ಒಳಗೂ ಒದ್ದೆ ಹೊರಗೂ ಒದ್ದೆ
ಕಣ್ಣ ತುಂಬ ಸುಖದ ನಿದ್ದೆ

2
ಬಟನ್‌ಗೆ ಸಿಲುಕಿದ ಕೂದಲು ಇಲ್ಲ
ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ
ನಾವು ಕೂಡಿದ್ದಾದರೂ ನಿಜವೆ ತಿಳಿಯುತಿಲ್ಲ
ಒಂದೇ ಸಾಕ್ಷಿ, ಆಗಿನಿಂದ ನಿದ್ರೆ ಇಲ್ಲ

3
ಬೀಡಾ ಹಾಕಿಕೊಂಡು ತುಟಿ ಕೆಂಪ ಮರೆಸಿದೆ
ಸೆಂಟು ಪೂಸಿಕೊಂಡು ಮೈಕಂಪನಳಿಸಿದೆ
ಗೆಳತಿ, ನಿನ್ನ ಕೂಡಿ ಮನೆಗೆ ಮರಳಿದವನು
ಎಷ್ಟು ನಟಿಸಿದರೂ ಕಣ್ಣ ಹೊಳಪನಡಗಿಸದಾದೆ

4
ನಾವು ಅಷ್ಟೊಂದು ಮೈ ಮರೆಯಬಾರದಿತ್ತು
ಈಗ ನೋಡು ಮೆಲುಕುಹಾಕಲು ಕೂತರೆ
ಕೂಟದ ಒಂದು ವಿವರವೂ ನೆನಪಾಗುತಿಲ್ಲ
ಈ ತುಟಿಯ ಗಾಯವೂ ಏನೂ ಹೇಳುತಿಲ್ಲ