Sunday, February 24, 2008

ಕಾಮೆಂಟ್‌ ರೀ

ಕಳೆದ ವರ್ಷ ನಮ್ಮ ಕ್ರಿಕೆಟ್ ಆಟಗಾರರು ವಿಶ್ವಕಪ್‌ನ ಮೊದಲ ಸುತ್ತಿನಲ್ಲೇ ಸೋತು ಮರಳುವ ಮೂಲಕ ದೇಶದ ಮಾನವನ್ನು ಹರಾಜು ಹಾಕಿದ್ದರು. ಈಗ ಅವರನ್ನೇ ಹರಾಜು ಹಾಕುವ ಮೂಲಕ ಸೇಡು ತೀರಿಸಿಕೊಂಡಂತಾಗಿದೆ. ಇನ್ನುಮುಂದೆ ಆಟಗಾರರು ಕ್ರೀಸಿಗೆ ಬಂದಾಗ ಟಿವಿಯಲ್ಲಿ ಬ್ಯಾಟಿಂಗ್ ಬೌಲಿಂಗ್ ಅಂಕಿ ಅಂಶಗಳ ಜತೆ ಅವರ ರೇಟನ್ನೂ ತೋರಿಸಬಹುದು. ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ಪ್ರವಾಸದಲ್ಲೇ ಹುಟ್ಟಿ ಬೆಳೆದ ಇಶಾಂತ್ ಶರ್ಮ ಎಂಬ ೧೯ ವರ್ಷದ ಹುಡುಗನಿಗೆ ೩.೮ ಕೋಟಿ ರೂ ರೇಟು ಸಿಕ್ಕಿದೆ. ನಾಲ್ಕು ಅರ್ಧಶತಕಗಳನ್ನೂ ಹೊಡೆದಿರದ ಉತ್ತಪ್ಪ, ರೋಹಿತ್ ಶರ್ಮಗಳಿಗೂ ಹತ್ತಿರಹತ್ತಿರ ಮೂರು ಕೋಟಿ ರೂ ಸಿಕ್ಕಿದೆ. ಆದರೆ ಹೈದರಾಬಾದ್‌ನ ಕಲಾತ್ಮಕ ಆಟಗಾರ ಲಕ್ಷ್ಮಣ್‌ಗೆ ಕೇವಲ ಒಂದೂವರೆ ಕೋಟಿ, ನಮ್ಮ ಕುಂಬ್ಳೆಗೆ ಬರೀ ೨ ಕೋಟಿ ಬೆಲೆ ಬಂದಿದೆ. ಐಕಾನ್ ಪ್ಲೇಯರ್ ಅಂತ ಹಣೆಪಟ್ಟಿ ಹಚ್ಚಿ ಬಚಾವು ಮಾಡದಿದ್ದರೆ ಸಚಿನ್, ಗಂಗೂಲಿ, ದ್ರಾವಿಡ್‌ಗೂ ಇದೇ ಗತಿ ಆಗುತ್ತಿತ್ತೇನೊ. ನೋ ಕಂಟ್ರಿ ಫಾರ್ ಓಲ್ಡ್ ಮೆನ್ ಎನ್ನೋಣವೆ?
*
ಸಂಜಯ್ ದತ್ ಮತ್ತು ನಮ್ಮ ಗಣೇಶ ಒಂದೇ ದಿನ ಮದುವೆಯಾದರು. ಅದ್ಯಾವ ಲಗ್ನದಲ್ಲಿ ಆದರೋ ಗೊತ್ತಿಲ್ಲ, ಇಬ್ಬರಿಗೂ ವಿಧವಿಧದ ವಿಘ್ನಗಳು. ದತ್ ಮತ್ತು ಮಾನ್ಯತಾರ ಮದುವೆಗಂತೂ ಮಾನ್ಯತೆ ಸಿಗುವುದೇ ಕಷ್ಟವಾಗಿದೆ. ಕಾರಣ-ಮಾನ್ಯತಾ ಏನೋ ವಿಳಾಸ ತಪ್ಪು ಕೊಟ್ಟಿದ್ದಾಳಂತೆ. ವಿಲಾಸದ ಸಮಯದಲ್ಲಿ ಈ ವಿಳಾಸದ ಸಮಸ್ಯೆ ಕಾಡಬೇಕಿತ್ತೆ? ಸಕಾರಣಕ್ಕಾಗಿ ನಿದ್ದೆ ಕೆಡಿಸಿಕೊಳ್ಳಬೇಕಿದ್ದ ಜೋಡಿಗಳು ಹೀಗೆ ವಿನಾಕಾರಣ ನಿದ್ದೆಗೆಡುತ್ತಿರುವುದು ಸರಿಯೆ? ವಿಧಿ ವಿಲಾಸ!
*
ಕೆಲವರ್ಷಗಳ ಹಿಂದೆ ‘ಸತ್ಯ’ ಎಂಬ ಕಂಗೆಡಿಸುವಂಥ ಚಿತ್ರ ಬಂದಿತ್ತು. ಇದೀಗ ‘ಮಿಥ್ಯ’ ಎನ್ನುವ ಮನಸ್ಸು ಮುಟ್ಟುವ ಸಿನಿಮಾವೊಂದು ಬಂದಿದೆ(ನಿರ್ದೇಶನ ರಜತ್ ಕಪೂರ್). ಅವಕಾಶಕ್ಕಾಗಿ ಒದ್ದಾಡುತ್ತಿರುವ ನಟನೊಬ್ಬ ಭೂಗತ ಜಗತ್ತಿನ ಸಂಚೊಂದರಲ್ಲಿ ಸಿಕ್ಕಿಬಿದ್ದು ಜೀವಮಾನದ ‘ಪಾತ್ರ’ದಲ್ಲಿ ನಟಿಸಬೇಕಾಗುವ ಕಥಾಹಂದರ. ಮುಖ್ಯಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ರಣವೀರ್ ಶೋರೆಯನ್ನು ನೀವು ಮರೆಯಲಾಗುವುದೇ ಇಲ್ಲ. ಬಿಡಿ ದೃಶ್ಯಗಳನ್ನು ನೋಡುತ್ತಿದ್ದರೆ ಒಂದಾದ ನಂತರ ಒಂದು ನಗು ಉಕ್ಕಿಸುತ್ತಲೇ ಇರುತ್ತವೆ. ನಿಂತು ಅವಲೋಕಿಸಿದರೆ ಮಾತ್ರ ಕೆಳಗೆ ಹರಿಯುವ ದುರಂತ ನಿಚ್ಚಳವಾಗುತ್ತದೆ. ಹೀಗೆ ಕಾಮಿಡಿ ಟ್ರಾಜಿಡಿಗಳನ್ನು ಬೆರೆಸಿದ ಸಿನಿಮಾಗಳು ಯಾವಾಗಲೂ ಗಾಢವಾಗಿ ತಟ್ಟುತ್ತವೆ ಅಲ್ಲವೆ? ‘ಮಿಥ್ಯ’ವನ್ನು ನೋಡಲು ಮರೆಯದಿರಿ.
*
ದೇಶದ ಹುಲಿಗಳ ಸಂಖ್ಯೆ ಅರ್ಧಕ್ಕೆ ಅರ್ಧದಷ್ಟು ಕಡಿಮೆಯಾಗಿದೆ ಎಂದು ಇತ್ತೀಚಿನ ಗಣತಿ ಹೇಳಿದೆ. ಆದರೆ ಕನ್ನಡ ನಾಡಿನ ಹುಲಿಗಳು ಸುರಕ್ಷಿತವಾಗಿವೆ ಎಂದೂ ವರದಿ ಹೇಳಿದೆ. ತಮಿಳು ಹುಲಿಗಳ ಬಗ್ಗೆ ಅದೇ ಮಾತು ಹೇಳುವಂತಿಲ್ಲ. ಏಕೆಂದರೆ ಶ್ರೀಲಂಕಾದಲ್ಲಿ ಕೆಲವು ವಾರಗಳಿಂದ ಪ್ರತಿದಿನ ನೂರಾರು ತಮಿಳು ಹುಲಿ(ಎಲ್ಟಿಟಿಇ)ಗಳನ್ನು ಸೇನೆ ಕೊಂದುಹಾಕುತ್ತಿದೆ! ಅಲ್ಲಿನ ಸರಕಾರವನ್ನೇ ನಂಬುವುದಾದರೆ ತಮಿಳು ಹುಲಿ ಈಗ ಅಳಿವಿನಂಚಿನಲ್ಲಿರುವ ಪ್ರಭೇದ!

No comments: