Tuesday, February 5, 2008

ಕಾಮೆಂಟ್‌ರೀ

ಮಾಜಿ ಸಚಿವ ವಿಶ್ವನಾಥರ ಪುಸ್ತಕ ಮಹಾ ಕೋಲಾಹಲ ಎಬ್ಬಿಸಿದೆ. ಅವರ ಪುಸ್ತಕದ ಹೆಸರು ‘ಹಳ್ಳಿ ಹಕ್ಕಿಯ ಹಾಡು’ . ಕೆಲ ಸ್ಫೋಟಕ ಸಾಲುಗಳಿಂದಾಗಿ ಅದೀಗ ವಿವಾದದ ಜೇನು ಗೂಡು. ‘ಆನುದೇವ’, ‘ಆವರಣ’ಗಳ ನಂತರ ರಹಸ್ಯಗಳ ಅನಾವರಣದ ಪುಸ್ತಕವೊಂದು ವಿವಾದಕ್ಕೊಳಗಾಗಿದೆ . ಅದೇನೇ ಇದ್ದರೂ, ಆತ್ಮ ಚರಿತ್ರೆಯಲ್ಲಿ ಇನ್ನೊಬ್ಬರ ಚರಿತ್ರೆಯನ್ನು ಕೆದಕಬಹುದೆ ಎಂಬುದು ಚರ್ಚೆಯ ವಿಷಯ. ಬ್ಯಾನ್ ಮಾಡಬೇಕು , ಬೆಂಕಿ ಹಚ್ಚಬೇಕು ಎಂಬ ಕೂಗುಗಳು ಈಗಾಗಲೇ ಕೇಳುತ್ತಿವೆ. ಪುಸ್ತಕಗಳು ವಿವಾದಕ್ಕೊಳಗಾಗಿ ನಿಷೇಧಗೊಂಡರೆ ಪ್ರಕಾಶಕರಿಗೆ ಲಾಸಾಗುತ್ತದೆ ಎಂದು ನೀವು ತಿಳಕೊಂಡಿರಬಹುದು. ಪ್ರತಿಭಟನಕಾರರು ಬೆಂಕಿ ಹಚ್ಚಲೆಂದೇ ಸಾವಿರಾರು ಪ್ರತಿ ಕೊಂಡುಕೊಂಡು ಅವರಿಗೆ ಸಿಕ್ಕಾಪಟ್ಟೆ ಲಾಭವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ!
*
ಮಂಗಳ ಗ್ರಹದ ಮೇಲೆ ಮಹಿಳೆಯ ಪತ್ತೆಯಾಗಿದೆಯಂತೆ. ಅಲ್ಲಿಗೆ ಗ್ರಹ ಚೇಂಜ್ ಮಾಡಿದ್ರೂ ಗ್ರಹಚಾರ ತಪ್ಪಲ್ಲ ಅಂತಾಯಿತು ! ಲೇಡೀಸ್ ಫಸ್ಟ್ ಎನ್ನುವುದು ಭೂಮಿ ಮೇಲೆ ಮಾತ್ರ ಅಲ್ಲ ಅನ್ನೋ ಸತ್ಯವೂ ತಿಳಿಯಿತು. ಬರೀ ಮೈಯಲ್ಲಿ ಅರ್ಜೆಂಟಾಗಿ ಎಲ್ಲೋ ಗುಡ್ಡ ಹತ್ತಿ ಕೈ ಬೀಸುತ್ತಾ ಹೋಗುತ್ತಿರುವ ಹೆಂಗಸಿನಂಥ ಆಕೃತಿಯೊಂದು ಕಂಡಿದೆ ಎಂದು ನಾಸಾ ತಿಳಿಸಿದೆ. ನೀಟಾಗಿ ಸೀರೆ ಗೀರೆ ಉಟ್ಟುಕೊಂಡು ಸ್ಪಲ್ಪ ಗಂಭೀರವಾಗಾದರೂ ಹೊರಟಿದ್ದರೆ ಸು‘ಮಂಗಳೆ’ ಅನ್ನಬಹುದಿತ್ತೇನೋ!
*
ಹಕ್ಕಿ ಜ್ವರದ ಭಯದಿಂದ ದೇಶದಲ್ಲಿ ಲಕ್ಷಗಟ್ಟಲೆ ಕೋಳಿಗಳನ್ನು ಕೊಲ್ಲಲಾಗುತ್ತಿದೆ. ಪಶ್ಚಿಮಬಂಗಾಳದಲ್ಲಿ ೨೭ ಸಾವಿರ ಕೋಳಿಗಳನ್ನು ಕೊಂದಾಗಿದೆ. ಬಾಂಗ್ಲಾದಲ್ಲೂ ಅಷ್ಟೇ ಕೋಳಿ ಮತ್ತು ಬಾತುಕೋಳಿಗಳ ಮಾರಣ ಹೋಮ ನಡೆದಿದೆ. ಇದರಿಂದ ಕೋಳಿಗಳಿಗೇನೂ ವ್ಯತ್ಯಾಸವಾಗಿಲ್ಲ ಎನಿಸುತ್ತದೆ. ಯಾಕೆಂದರೆ ಜ್ವರ ಇಲ್ಲದಿದ್ದರೂ ನಾವು ಅವನ್ನು ಕೊಲ್ಲುತ್ತಿದ್ದೆವು. ಆದರೆ ಮನುಷ್ಯರಿಗೆ ವ್ಯತ್ಯಾಸವಾಗಿದೆ. ಮೊದಲಾದರೆ ಕೊಂದ ಪಾಪ ತಿಂದು ಪರಿಹಾರವಾಗುತ್ತಿತ್ತು. ಈಗ ಅದೂ ಇಲ್ಲ!
*
ಹೊಸ ರ್ಯಾಂಬೋ(ಓದಲು ಕೂಡ ಹಿಂಸೆಯಾಗುತ್ತಿದೆ ಅಲ್ಲವೆ) ಸಿನಿಮಾದಲ್ಲಿ ಪ್ರತಿ ಎರಡು ನಿಮಿಷಕ್ಕೊಂದು ಕೊಲೆಯಂತೆ. ಕನ್ನಡ ಸಿನಿಮಾದೋರು ಜಲಪಾತ ತೋರಿಸಿ ದುಡ್ಡು ಮಾಡುತ್ತಿದ್ದರೆ ಹಾಲಿವುಡ್‌ನವರು ರಕ್ತಪಾತ ತೋರಿಸಿ ದುಡ್ಡು ಮಾಡುತ್ತಿರುವಂತಿದೆ!
*
ಸದಾ ಆನಂದವಾಗಿರಬೇಕೆ? ಸದಾನಂದ ಗೌಡರನ್ನು ನೋಡಿ ಕಲಿಯಿರಿ. ಯಾವಾಗಲೇ ಅವರ ಬಿಂಬ ಟಿವಿಯಲ್ಲಿ ಕಾಣಲಿ, ಅದು ನಗುನಗುತ್ತಲೇ ಇರುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಸೀಟಿನಿಂದ ಇಳಿದ ದಿನವೂ ಅವರು ನಗುತ್ತಲೇ ಇದ್ದರು!
*
ದರೋಡೆಕೋರರಿಗೆ ಯಾವ ಫ್ಲೇವರ್‌ನ ಐಸ್‌ಕ್ರೀಂ ಇಷ್ಟ?
ಸೋಸಿಲಿ: ರಾಬರಿ ಐಸ್‌ಕ್ರೀಂ!

2 comments:

ತೇಜಸ್ವಿನಿ ಹೆಗಡೆ said...

ಅಪಾರ ಹಾಸ್ಯರಸದ ಹೊನಲನ್ನೇ ಹರಿಸಿರುವಿರಿ.. ಹೀಗೇ ಮತ್ತಷ್ಟೂ ಹರಿದು ಬರಲಿ. :-))

Supreeth.K.S said...

ವಿಶ್ವನಾಥರ ಹಾಡು ಕೆಲವರಿಗೆ ರಣ ಕಹಳೆಯಾಗಿ ಕೇಳಿರಲಿಕ್ಕೂ ಸಾಕು. ಈ ಟಿವಿ ಒಂಭತ್ತು ಎಂಬ ನವಗ್ರಹ ಕಾಟದಿಂದ ಭೂತ ಗಾಜು ಹಿಡಿದು ಹುಡುಕಿದರೂ ಕಾಣದ ಸಂಗತಿಗಳು ಹಿಮಾಲಯದ ಎತ್ತರವನ್ನು ಪಡೆಯುತ್ತಿವೆ. ವಿವಾದ ಪ್ರಿಯರು, ಕಲಹ ಪ್ರಿಯರೂ ಆದ ಇವರು ಎಂದು ‘ಸುದ್ದಿ’ಯನ್ನು ನೀಡುವ ಚಾನಲ್ ಆಗುವರೋ ಎಂಬ ನಿರೀಕ್ಷೆ ನಮ್ಮಂತಹ ಮಂದ ಮತಿಗಳದ್ದು!

http://uniquesupri.wordpress.com