Friday, February 15, 2008

ಏಳು ಸುತ್ತಿನ ಪೇಟೆ

ಪೇಟೆಯಲಿ ಎಂಥ ಹಾಡು
ಎಲ್ಲರದೂ ಇಲ್ಲಿ ನಾಯಿಪಾಡು

ಸಿಟಿಬಸ್‌ನ ಇಕ್ಕಟ್ಟಿನಲಿ
ಶುರುವಾಯಿತು ದಿನದ ಮೊದಲ ರಾಮಾಯಣ
ಟ್ರಾಫಿಕ್‌ನ 'ಚಕ್ರ'ವ್ಯೂಹ ಬೇಧಿಸಿ
ಆಫೀಸನು ಮುಟ್ಟೋದ್ರಲ್ಲಿ ಬಿತ್ತು ನನ್ನ ಹೆಣ
ಇದ್ದರೂ ನನ್ನ ಜಾಗದಲ್ಲಿ ಮಹಾಕವಿ ಪಂಪ
ಕಾವ್ಯವಾದೀತೆ ಹೇಳಿ ಈ ಹಾದಿ ರಂಪ

ಇಲ್ಲಿದೆ ನೋಡಿ ಇದು ನಿಮ್ಮ ಟಾರ್ಗೆಟ್ಟು
ತಲುಪಲಾಗದಿದ್ದರೆ ನೀವೇ ನಮ್ಮ ಟಾರ್ಗೆಟ್ಟು
ಮೇಲೊಂದು ಕೂದಲಿಲ್ಲ ಒಳಗೊಂದು ಅಕ್ಷರವಿಲ್ಲ
ಈ ಬಾಸ್‌ನ ಬುರುಡೆ ಯಾವುದಕ್ಕೆ ರೂಪಕ
ಬೆಂಗಳೂರಿನಲ್ಲಿ ಕವಿತೆ ಅಂದರೆ ಕೆಜಿಗೆಷ್ಟು ಅಂತಾರೆ
ಇಲ್ಲಿ ಹೊಳೆವ ಪ್ರತಿಮೆ- ಕೆಂಪೇಗೌಡನದೊಂದೇ!

ನೋಡಿ ಕಣ್ಣು ತಣಿಯದಲ್ಲ ಎಷ್ಟು ದೊಡ್ಡ ಮಾಲು
ವಿಂಡೋಶಾಪಿಂಗ್‌ ಮಾಡಿ ಮಾಡಿ ದಣಿಯಿತಲ್ಲ ಕಾಲು
ಪುಕ್ಕಟೆ ಏನಲ್ಲ ಅದೂ, ಅಂಟಿಸಿತಲ್ಲ ಕನಸಿಗೊಂದು ಪುಕ್ಕ
ಸಿಕ್ಕಲ್ಲಿ ಮಿಂಚದಿರು ಕವಿತೆ ಹೊಳಹೆ, ಮುಖ್ಯ ಈಗ ರೊಕ್ಕ
ಪದ್ಯವಾಗೋ ಪದಗಳೆಲ್ಲ ಮದ್ಯದಲ್ಲಿ ಕರಗಿವೆ
ಕವಿತೆ ಮನೆ ಹಾಳಾಯ್ತು ನನ್ನ ಮನೆಯೇ ಕಳೆದಿದೆ!

ಮನೆ ತಲುಪಿ mute ಮಾಡಿದ ಟಿವಿ ನೋಡುತ್ತಾ
ಉಂಡು ಮುಗಿಸೊ ಹೊತ್ತಿಗಾಗಲೇ ಅರ್ಧರಾತ್ರಿ
ದೆವ್ವಗಳು ಓಡಾಡೋ ಸಮಯ ಕವಿ ಸಮಯವಲ್ಲ
ಕಣ್ಣು ಎಳೀತಿವೆ ಕನಸು ಬೆಳೀತಿವೆ ಸಂಗಾತಿಗೋ ನೈಟ್‌ಶಿಫ್ಟು
ಕೆರಿಯರಿಗಾಗಿ ಬಸಿರ ತಡೆಹಿಡಿದಿರುವವರು ನಾವು
ಕವಿತೆಯ ಹೆಸರಲ್ಲಿ ಸಮಯ ಹಾಳು ಮಾಡಬಹುದೆ?

ಮುನ್ನೂರ ಅರವತ್ತೈದು ದಿನವೂ ಇಲ್ಲಿ ಇದೇ ರಗಳೆ
ಏಳು ಸುತ್ತಿನ ಪೇಟೆಯಲಿ ಕವಿತೆ ಎಲ್ಲ ಬೊಗಳೆ
ಹಠ ಹಿಡಿದು ಬರೆದರೂ ಆಗುವುದೆ ಅದು ಪದ್ಯ
ಕೇಳಬೇಕಾಗುತ್ತದೆ ಅದನೇ-
ಕವಿತೆ, ನೀನೇಕೆ ಪದಗಳಲಿ ಬೆವೆತೆ?

ಪೇಟೆಯಲಿ ಎಂಥ ಹಾಡು
ಎಲ್ಲರದೂ ಇಲ್ಲಿ ನಾಯಿಪಾಡು
ಎಂದುಕೊಳ್ಳುವ ಹೊತ್ತಿಗೇ-
ಎಂಜಿ ರೋಡಿನಲ್ಲಿ ಬೀಸಿದ ಜೋರುಗಾಳಿಗೆ
ಹುಡುಗಿಯರ ಬಟ್ಟೆ ರೋಚಕವಾಗಿ ಹಾರಿವೆ
ಮೋಡ ಕಪ್ಪಗಾಗಿವೆ, ಮಹಲು ತೆಪ್ಪಗಾಗಿವೆ
ಆಸರೆಗಾಗಿ ಓಡಿದವರ ಕೈಲಿ ಹೈಹೀಲ್ಡು ತೂಗಿವೆ
ಫುಟ್‌ಪಾತಲ್ಲಿ ಆಟಿಕೆ ಮಾರೋ ಹುಡುಗನ ನೆಲದಂಗಡಿ
ಪ್ಯಾಕಪ್‌ಗೆ ನೆರವಾಗಿದ್ದಾನೆ ನಗುತಾ ಬದಿಯ ಭಿಕ್ಷುಕ
ಕಣ್ಮುಚ್ಚಿ ಕೈ ಚಾಚಿ ಕಾದಿವೆ ಪುಟಾಣಿಗಳು
ಋತುವಿನ ಮೊದಲ ಮಳೆಯಲ್ಲಿ ತೋಯಲು
ಓ! ಬಿದ್ದೇಬಿಟ್ಟಿದೆ ಮೊದಲ ಹನಿ ಹನಿಗವನ?!
~ಅಪಾರ

* (ಉತ್ತಮ ಸಿಟೀಗೀತಗಳಿಗಾಗಿ ಭೇಟಿ ಕೊಡಿ- ಚಂಪಕಾವತಿ ಸಿಟಿ ಎಡಿಷನ್‌: ಪೇಟೆಯ ಪಾಡ್ದನ)

7 comments:

Unknown said...

ಅಪಾರ ರವರೇ,
ಸಿಕ್ಕಲ್ಲಿ ಮಿಂಚದಿರು ಕವಿತೆ ಹೊಳಹೇ, ಮುಖ್ಯ ಈಗ ರೊಕ್ಕ, ಎಂಬ ಸಾಲುಗಳು ತುಂಬಾ ಹಿಡಿಸಿದವು.
ಪೇಟೆಯ ಪಾಡ್ದನಕ್ಕೆ ನೀವು ವಿನ್ಯಾಸ ಮಾಡಿದ ಲೋಗೋ ಕೂಡಾ ಚೆನ್ನಾಗಿದೆ.

ವಿಕ್ರಮ ಹತ್ವಾರ said...

what to quote what not....beauty.

ವಿಕ್ರಮ ಹತ್ವಾರ said...

neevugalella enu city paadu anta heltiddira adanna optene. But I differ in attitude.

Unknown said...

ಅಪಾರ ಖುಷಿ ಕೊಡುವ ಪದ್ಯ ಓದಿಸಿದಿರಿ. ಇಲ್ಲೇನು ಇಲ್ಲ ಅನ್ನುವ ಹೊತ್ತಿಗೆ ನಮ್ಮನ್ನು ಆರ್ದ್ರತೆ ಆವರಿಸುವ ಕಡೆಯ ಸಾಲುಗಳು ಇಷ್ಟವಾದವು.
ನಿಮ್ಮ ಈ ಸಾಲುಗಳನ್ನು ಓದುವಾಗ ಲೋರ್ಕಾ, ಬ್ರೆಕ್ಟ್ ಬರೆದ ನಗರದ ಪದ್ಯಗಳು ನೆನಪಾಗುತ್ತಿದ್ದವು. ಲೋರ್ಕಾ, "ಸಿಟಿ ದಟ್ ಡಸ್ನಾಟ್ ಸ್ಲೀಪ್"ನಲ್ಲಿ ನಗರದ ರಾತ್ರಿಯನ್ನು ಚಿತ್ರಿಸಿಕೊಡುತ್ತಾನೆ. ಬ್ರೆಕ್ಟ್ ನಗರಗಳನ್ನು ಕುರಿತು...
ಅವುಗಳ ಕೆಳಗಿರುವುದು ಬಚ್ಚಲು ಹೊಲಸು
ಒಳಗೆಲ್ಲ ಬರಿದು, ಮೇಲೆಲ್ಲ ಹೊಗೆ (ಶಾ.ಬಾಲುರಾವ್) ಅಂತಾನೆ.
ಬೊಗಸೆಯಷ್ಟು ಬೇಸರ, ಹಿಡಿಯಷ್ಟು ಖುಷಿ.. ಪದ್ಯದಲ್ಲಿತ್ತು. ಓದಿ ಖುಷಿಯಾಯ್ತು.

Anonymous said...

ಕವಿತೆ, ನೀನೇಕೆ ಪದಗಳಲಿ ಬೆವೆತೆ?

Liked these lines.

Guru

Anonymous said...

ಕೆಲವು ಮಂಡನೆಗಳು-
* 'ಆಸರೆಗಾಗಿ ಓಡಿದವರ ಕೈಲಿ ಹೈಹೀಲ್ಡು ತೂಗಿವೆ’ - ಈ ಕವನದ ಅತ್ಯುತ್ತಮ ಸಾಲು.
* ’ಮ್ಯೂಟ್’ ಎಂಬುದನ್ನು ಇಂಗ್ಲಿಷ್ ಅಕ್ಷರಗಳಲ್ಲೇ ಬರೆದದ್ದಂತೂ ಅಧಿಕಪ್ರಸಂಗಿತನದ ಪರಮಾವಧಿ !
* ಪದ್ಯ ಅಷ್ಟೊಂದು ಚೆನ್ನಾಗಿಲ್ಲ ಎಂಬುದು ತನಗೆ ಗೊತ್ತಿದೆ ಎಂಬಂತೆ, ಉದ್ದ ಪದ್ಯ ಬರೆದು ಹನಿಗವನವೆಂದು ತನ್ನನ್ನೇ ಛೇಡಿಸಿಕೊಳ್ಳುವ ಕವಿಯ ಬುದ್ಧಿವಂತಿಕೆ ನಮಗೆ ಅರ್ಥವಾಗುತ್ತದೆ.
* ಬ್ಲಾಗ್‌ಗಳಲ್ಲಿ ಹೊಗಳುವವರು ಬೇಕಷ್ಟಿದ್ದಾರೆ. ಕಾರಣ ಸಹಿತ ಬಯ್ಯುವವರು ಬೇಕಾಗಿದ್ದಾರೆ !
- SD

Anonymous said...

ಮ್ಯೂಟ್‌ ಎಂಬುದನ್ನು ಕನ್ನಡದಲ್ಲಿ ಬರೆದರೆ ಮ್ಯೂಟ್‌ ಆಗದೆ ಇನ್ನೇನೋ ಆಗುತ್ತದೆ (ಅದನ್ನು ಹೇಳೋಕೂ ಬರಲ್ಲ)ಅಂತ ಹಾಗೆ ಮಾಡಿದ್ದಷ್ಟೆ.
ಕೊನೆಯ ಮಂಡನೆ ಚೆನ್ನಾಗಿದೆ! ಇದು ಬೈಗುಳವಲ್ಲ!
~ಅಪಾರ