Wednesday, February 27, 2008

ಕಮಾಲ್‌!

ಮಾಲ್‌ ಒಂದರ ಎಸ್ಕಲೇಟರ್ ಮೇಲೆ
ಮನಸು ಕೋರೈಸುವಂತೆ ಕಂಡಳು
ನಿಂತಲ್ಲೆ ಗಾಳಿಯಲ್ಲಿ ತೇಲಿಹೋದೆ

ಕಾಫಿ ಡೇಯಲ್ಲಿ ಕೂತಾಗ ಇನ್ನೊಬ್ಬಳು
ಬಿಸಿಹಬೆಯಂತೆ ಹಾದು ಹೋದಳು
ಬೆರೆಸಿದಷ್ಟೂ ಸಕ್ಕರೆ ಸಾಲದಾಯ್ತು

ಶೋಕೇಸಿನ ಗೊಂಬೆಗೆ ಜೀವಬಂದಂತೆ
ಹಿಂದಿಂದ ಪಕ್ಕ ಸರಿದಳೊಬ್ಬ ಚೆಲುವೆ
ಕಣ್ಣು ಮಿಟುಕಿಸಲಾಗದೆ ಗೊಂಬೆಯಾದೆ

ಐನಾಕ್ಸ್‌ ಸಿನಿಮಾದಲ್ಲಿ ಪಕ್ಕದಲ್ಲೇ ಕೂತ ಬೆಡಗಿ
ಪರಿಮಳದಲ್ಲೇ ಪರವಶಗೊಳಿಸಿದಳು
ಇತ್ತ ಲಕ್ಷ್ಯ ಕೊಡೆಂದು ಹಿರೋಯಿನ್ ಬಯ್ದಳು

ಲಿಫ್ಟಿನಲ್ಲಿ ಕಪ್ಪೆಮುಖದವನೊಬ್ಬನ ತುಟಿಗೆ
ನನ್ನ ಲೆಕ್ಕಿಸದೆ ಮುತ್ತಿಟ್ಟಳೊಬ್ಬ ರಾಜಕುಮಾರಿ
ಶಪಿತನಂತೆ ಧರೆಗಿಳಿದುಹೋದೆ

Monday, February 25, 2008

ಮದ್ಯಸಾರ

ಪಾರು ಮಾಡೀತೆಂದು ನಂಬಿ

ಮೂರು ಬಾಟಲಿ ಕುಡಿದು ಬಂದೆ

ಸಕಲ ಸಂಕಟಗಳ ಶೋಕೇಸಂತೆ ಕಂಡಿತು ಮನೆ

ದೀಪ ಆರಿಸಿ ಮಲಗಿಕೊಂಡೆ

Sunday, February 24, 2008

ಮದ್ಯಸಾರ

ಎಷ್ಟೇ ಕುಡಿದರೂ ಈ ರಾತ್ರಿಗಷ್ಟೇ ನಶೆ
ಬೆಳಗಾದರೆ ಮತ್ತೆ ಪರದೇಶಿ ಇಲ್ಲ ದಿಕ್ಕು ದೆಸೆ
ಕೆಳಗಿಳಿಯಲೇ ಬಾರದು ಮೇಲೇರಿದ ರಾಕೆಟ್ಟು
ಕಂಡುಹಿಡಿಯಿರೊ ಅಂಥದೊಂದು ಪ್ಯಾಕೆಟ್ಟು

ಕಾಮೆಂಟ್‌ ರೀ

ಕಳೆದ ವರ್ಷ ನಮ್ಮ ಕ್ರಿಕೆಟ್ ಆಟಗಾರರು ವಿಶ್ವಕಪ್‌ನ ಮೊದಲ ಸುತ್ತಿನಲ್ಲೇ ಸೋತು ಮರಳುವ ಮೂಲಕ ದೇಶದ ಮಾನವನ್ನು ಹರಾಜು ಹಾಕಿದ್ದರು. ಈಗ ಅವರನ್ನೇ ಹರಾಜು ಹಾಕುವ ಮೂಲಕ ಸೇಡು ತೀರಿಸಿಕೊಂಡಂತಾಗಿದೆ. ಇನ್ನುಮುಂದೆ ಆಟಗಾರರು ಕ್ರೀಸಿಗೆ ಬಂದಾಗ ಟಿವಿಯಲ್ಲಿ ಬ್ಯಾಟಿಂಗ್ ಬೌಲಿಂಗ್ ಅಂಕಿ ಅಂಶಗಳ ಜತೆ ಅವರ ರೇಟನ್ನೂ ತೋರಿಸಬಹುದು. ಈಗ ನಡೆಯುತ್ತಿರುವ ಆಸ್ಟ್ರೇಲಿಯಾ ಪ್ರವಾಸದಲ್ಲೇ ಹುಟ್ಟಿ ಬೆಳೆದ ಇಶಾಂತ್ ಶರ್ಮ ಎಂಬ ೧೯ ವರ್ಷದ ಹುಡುಗನಿಗೆ ೩.೮ ಕೋಟಿ ರೂ ರೇಟು ಸಿಕ್ಕಿದೆ. ನಾಲ್ಕು ಅರ್ಧಶತಕಗಳನ್ನೂ ಹೊಡೆದಿರದ ಉತ್ತಪ್ಪ, ರೋಹಿತ್ ಶರ್ಮಗಳಿಗೂ ಹತ್ತಿರಹತ್ತಿರ ಮೂರು ಕೋಟಿ ರೂ ಸಿಕ್ಕಿದೆ. ಆದರೆ ಹೈದರಾಬಾದ್‌ನ ಕಲಾತ್ಮಕ ಆಟಗಾರ ಲಕ್ಷ್ಮಣ್‌ಗೆ ಕೇವಲ ಒಂದೂವರೆ ಕೋಟಿ, ನಮ್ಮ ಕುಂಬ್ಳೆಗೆ ಬರೀ ೨ ಕೋಟಿ ಬೆಲೆ ಬಂದಿದೆ. ಐಕಾನ್ ಪ್ಲೇಯರ್ ಅಂತ ಹಣೆಪಟ್ಟಿ ಹಚ್ಚಿ ಬಚಾವು ಮಾಡದಿದ್ದರೆ ಸಚಿನ್, ಗಂಗೂಲಿ, ದ್ರಾವಿಡ್‌ಗೂ ಇದೇ ಗತಿ ಆಗುತ್ತಿತ್ತೇನೊ. ನೋ ಕಂಟ್ರಿ ಫಾರ್ ಓಲ್ಡ್ ಮೆನ್ ಎನ್ನೋಣವೆ?
*
ಸಂಜಯ್ ದತ್ ಮತ್ತು ನಮ್ಮ ಗಣೇಶ ಒಂದೇ ದಿನ ಮದುವೆಯಾದರು. ಅದ್ಯಾವ ಲಗ್ನದಲ್ಲಿ ಆದರೋ ಗೊತ್ತಿಲ್ಲ, ಇಬ್ಬರಿಗೂ ವಿಧವಿಧದ ವಿಘ್ನಗಳು. ದತ್ ಮತ್ತು ಮಾನ್ಯತಾರ ಮದುವೆಗಂತೂ ಮಾನ್ಯತೆ ಸಿಗುವುದೇ ಕಷ್ಟವಾಗಿದೆ. ಕಾರಣ-ಮಾನ್ಯತಾ ಏನೋ ವಿಳಾಸ ತಪ್ಪು ಕೊಟ್ಟಿದ್ದಾಳಂತೆ. ವಿಲಾಸದ ಸಮಯದಲ್ಲಿ ಈ ವಿಳಾಸದ ಸಮಸ್ಯೆ ಕಾಡಬೇಕಿತ್ತೆ? ಸಕಾರಣಕ್ಕಾಗಿ ನಿದ್ದೆ ಕೆಡಿಸಿಕೊಳ್ಳಬೇಕಿದ್ದ ಜೋಡಿಗಳು ಹೀಗೆ ವಿನಾಕಾರಣ ನಿದ್ದೆಗೆಡುತ್ತಿರುವುದು ಸರಿಯೆ? ವಿಧಿ ವಿಲಾಸ!
*
ಕೆಲವರ್ಷಗಳ ಹಿಂದೆ ‘ಸತ್ಯ’ ಎಂಬ ಕಂಗೆಡಿಸುವಂಥ ಚಿತ್ರ ಬಂದಿತ್ತು. ಇದೀಗ ‘ಮಿಥ್ಯ’ ಎನ್ನುವ ಮನಸ್ಸು ಮುಟ್ಟುವ ಸಿನಿಮಾವೊಂದು ಬಂದಿದೆ(ನಿರ್ದೇಶನ ರಜತ್ ಕಪೂರ್). ಅವಕಾಶಕ್ಕಾಗಿ ಒದ್ದಾಡುತ್ತಿರುವ ನಟನೊಬ್ಬ ಭೂಗತ ಜಗತ್ತಿನ ಸಂಚೊಂದರಲ್ಲಿ ಸಿಕ್ಕಿಬಿದ್ದು ಜೀವಮಾನದ ‘ಪಾತ್ರ’ದಲ್ಲಿ ನಟಿಸಬೇಕಾಗುವ ಕಥಾಹಂದರ. ಮುಖ್ಯಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ರಣವೀರ್ ಶೋರೆಯನ್ನು ನೀವು ಮರೆಯಲಾಗುವುದೇ ಇಲ್ಲ. ಬಿಡಿ ದೃಶ್ಯಗಳನ್ನು ನೋಡುತ್ತಿದ್ದರೆ ಒಂದಾದ ನಂತರ ಒಂದು ನಗು ಉಕ್ಕಿಸುತ್ತಲೇ ಇರುತ್ತವೆ. ನಿಂತು ಅವಲೋಕಿಸಿದರೆ ಮಾತ್ರ ಕೆಳಗೆ ಹರಿಯುವ ದುರಂತ ನಿಚ್ಚಳವಾಗುತ್ತದೆ. ಹೀಗೆ ಕಾಮಿಡಿ ಟ್ರಾಜಿಡಿಗಳನ್ನು ಬೆರೆಸಿದ ಸಿನಿಮಾಗಳು ಯಾವಾಗಲೂ ಗಾಢವಾಗಿ ತಟ್ಟುತ್ತವೆ ಅಲ್ಲವೆ? ‘ಮಿಥ್ಯ’ವನ್ನು ನೋಡಲು ಮರೆಯದಿರಿ.
*
ದೇಶದ ಹುಲಿಗಳ ಸಂಖ್ಯೆ ಅರ್ಧಕ್ಕೆ ಅರ್ಧದಷ್ಟು ಕಡಿಮೆಯಾಗಿದೆ ಎಂದು ಇತ್ತೀಚಿನ ಗಣತಿ ಹೇಳಿದೆ. ಆದರೆ ಕನ್ನಡ ನಾಡಿನ ಹುಲಿಗಳು ಸುರಕ್ಷಿತವಾಗಿವೆ ಎಂದೂ ವರದಿ ಹೇಳಿದೆ. ತಮಿಳು ಹುಲಿಗಳ ಬಗ್ಗೆ ಅದೇ ಮಾತು ಹೇಳುವಂತಿಲ್ಲ. ಏಕೆಂದರೆ ಶ್ರೀಲಂಕಾದಲ್ಲಿ ಕೆಲವು ವಾರಗಳಿಂದ ಪ್ರತಿದಿನ ನೂರಾರು ತಮಿಳು ಹುಲಿ(ಎಲ್ಟಿಟಿಇ)ಗಳನ್ನು ಸೇನೆ ಕೊಂದುಹಾಕುತ್ತಿದೆ! ಅಲ್ಲಿನ ಸರಕಾರವನ್ನೇ ನಂಬುವುದಾದರೆ ತಮಿಳು ಹುಲಿ ಈಗ ಅಳಿವಿನಂಚಿನಲ್ಲಿರುವ ಪ್ರಭೇದ!

Thursday, February 21, 2008

ಕವಿತೆ (ಜಸ್ಟಿಫೈಡ್ ಅಲೈನ್‌ಮೆಂಟ್‌ನಲ್ಲಿ)

ಭವಂತಿ ಮನೆ. ನಡುವೆ ಪುಟ್ಟ ಜಲಪಾತದಂತೆ ಸುರಿವ ಮಾಯದ ಮಳೆ. ನೋಡುತ್ತಾ ಕೂತ ನಮ್ಮಿಬ್ಬರ ಕಣ್ಣಲ್ಲಿ ಜೋಗದ ಸಿರಿ ಬೆಳಕು. ಗಾಳಿಗೆ ದಿಕ್ಕು ತಪ್ಪುವ‌ ಹನಿಗಳು ಮನವನ್ನು ಪನ್ನೀರಿನಂತೆ ಸೋಕುತ್ತಿದೆ. ತೊಟ್ಟ ಅರಿವೆ ನೆನೆಯುತ್ತಿರುವದರ ಪರಿವೆಯೂ ಇಲ್ಲದ ಆ ಸ್ಥಿತಿಯನ್ನು ನಿನ್ನ ಪದಗಳಲ್ಲಿ ಧ್ಯಾನ ಎನ್ನುವುದೇ ಸರಿ.

ನಾನು ಮರಳಿ ಬಂದ ಮರುದಿನ ನೀನು ಹೇಳಿದ್ದ ಪದವದು. ನೀನು ಹೋಗಿದ್ದಕ್ಕೆ ಬೇಸರವಾಗುತ್ತಿಲ್ಲ, ಏನೋ ಸಂತೃಪ್ತಿಯಿದೆ ಎಂದಿದ್ದೆ. ಇದು ಪ್ರೀತಿಯಲ್ಲ, ಧ್ಯಾನ ಎಂದಿದ್ದೆ. ಈಗ ಅನ್ನಿಸುತ್ತಿದೆ-ನಾನು ಅಲ್ಲಿಗೆ ಬಂದಿದ್ದಾದರೂ ನಿಜವೇ ಅಂತ.ನಡುಗುತ್ತಿದ್ದ ನಸುಕಿನಲ್ಲಿ ಯಾರಿರಿಸಿಹರೋ ಮುಗಿಲಿನ ಮೇಲಿಂದ ಇಲ್ಲಿಗೆ ಇದ ತಂದು ಎನ್ನಿಸಿದ ಕೆರೆಯನ್ನು ಹಾದು, ಸಣ್ಣ ಹಾದಿಗಳನ್ನು ದಾಟಿ, ಬೇಲಿಯ ಗೇಟನ್ನು ಸರಿಸಿಕೊಂಡು ಮೊದಲು ಕಂಡ ಕೆಂಪು ಮನೆಯನ್ನು ಸುತ್ತು ಹಾಕಿ ತಲೆಯೆತ್ತಿದರೆ ನೀನು ದೂರದಲ್ಲಿ ನಿಂತಿದ್ದೆ. ಹತ್ತಿರ ಬಂದರೆ ಎರಡೂ ಕೈ ಹಿಡಿದುಕೊಂಡು ನಕ್ಕೆ.

ಆಮೇಲೆ ತೆರೆಯಿತು ನಿನ್ನ ಅಪೂರ್ವ ಲೋಕ. ಬಿಥೋವೆನ್‌ನ ಸಿಂಫೋನಿ ನಡುವೆಯೇ ತಮ್ಮ ಹಾಡು ತೂರಿಸುವ ಹಕ್ಕಿಗಳು. ಪುಟ್ಟ ಮನೆಯನ್ನು ಸದಾ ಬೆಚ್ಚಗಿಡುವ ಚೆಂದದ ಒಲೆ. ಆಗಷ್ಟೆ ಸ್ನಾನ ಮಾಡಿ ಬಂದಾಗ ಕರೆಂಟ್ ಹೋದ ರಾತ್ರಿಯನ್ನೇ ಕರಗಿಸುವಂತೆ ಕೇಳಿಸಿದ ಇಳಿದು ಬಾ ತಾಯಿ. ಕೇಳುತ್ತಲೆ ಹಳೆಯ ಹಾಲಿನಲ್ಲಿ ನೀನು ಮಾಡಿದ ಹೊಸರುಚಿ. ಕಿಟಕಿಯಿಂದ ನಕ್ಷತ್ರಗಳನ್ನು ನೋಡುತ್ತಾ ತಬ್ಬಿ ಮಲಗಿದರೆ ಅದು ಬೇರೆಯದೇ ಕನಸು.ಎಷ್ಟು ಮುಟ್ಟಿದರೂ ಮುಗಿಯದಂಥ ಕನಸು. ................ ...... ....... ....... .... ........ ..... ಲಾಲ್ ಪಹಾಡಿ ಹಾಡಿಗೆ ನೀನು ಹೇಳಿದ ಅರ್ಥ, ನಿನ್ನ ಕಂಠದಲ್ಲಿ ಹೊಮ್ಮುವ ಕುಮಾರ ಗಂಧರ್ವನ ಹಾಡಿಗೆ ತಲೆದೂಗುವ ಅಂಗಳದ ೧೪ ಬಗೆಯ ಹೂವುಗಳು(ನಾವು ಎಣಿಸಿದೆವಲ್ಲ?) ಎಲ್ಲ ಕಣ್ಣ ಮುಂದೇ ಇವೆ.

ಬಿಕ್ಕೆ ಮರದ ಮೇಲೆ ಹತ್ತಿ ಹಣ್ಣು ಉದುರಿಸುತ್ತಿರುವ ನೀನು. ಕೆಳಗೆ ಬಿದ್ದವನ್ನು ಆರಿಸುತ್ತಿರುವ ನಾನು. ನನ್ನ ಮನೆ ಕಾಯ್ತಿಯೇನೋ ಎಂದು ನೀನು ಮುದ್ದಿನಿಂದ ಕಾಲಿನಲ್ಲೇ ಮಾತಾಡಿಸಿದ ನಾಯಿ, ಎಂದೂ ಮರೆಯಲಾಗದ ಸ್ನಾನದ ತಡಿಕೆ ಎಲ್ಲವೂ ಸ್ಪಷ್ಟವಾಗಿ ಕೂತಿವೆ ಮನದಲ್ಲಿ. ಯಾವುದೋ ಜಾತ್ರೆಯಲ್ಲಿ ನಿನ್ನನ್ನು ಬರ್ತೀಯಾ ಎಂದು ಕರೆದ ಮಧ್ಯವಯಸ್ಕ,ಗೆಳತಿಯರ ಜತೆ ನೀನೆಂದೋ ಮಾಡಿರಬಹುದಾದ ಗುಜರಾತಿ ನೃತ್ಯ, ಹೂದೋಟದಲ್ಲಿ ಒಬ್ಬೊಬ್ಬಳೆ ತಿರುಗಾಡುತ್ತಿರುವ ನೀನು, ಅಣ್ಣ ಕಡಿಸಿ ಹಾಕಿದ ಆ ನಿನ್ನ ಪ್ರೀತಿಯ ಮರ, ನಿನ್ನ ಆಲ್ಬಂನಲ್ಲಿ ಸುಮ್ಮನೆ ಕೂತ ಹಳದಿ ಉಡುಪಿನ ಹುಡುಗ ಎಲ್ಲವನ್ನೂ ಕಾಣುತ್ತಿದ್ದೇನೆ.

ಮುಂದೆ ತೆರೆದುಕೊಂಡಿರುವ ಲಡಾಖ್‌ನ ಹಿಮಾವೃತ ಹಾದಿ ನಮ್ಮಿಬ್ಬರನ್ನೂ ನಲುಮೆಯಿಂದ ಕರೆಯುವಂತಿದೆ.

Wednesday, February 20, 2008

ಮದ್ಯಸಾರ

ಮಿತಿಯಲ್ಲಿ ಕುಡಿದರೆ ರುಚಿಸದಿರಬಹುದು
ಅತಿಯಾದರೇ ಅಮೃತವಾಗೋ ವಿಷವಿದು
ಬಾಟಲನೆ ಎತ್ತಿ ಕುಡಿದು ನೋಡಿರಿ ಗಟಗಟ
ಕೇಳಿಸದೆ ಸ್ವರ್ಗಲೋಕದ ಕುದುರೆ ಖುರಪುಟ

ಮದ್ಯಸಾರ

ಚರಿತ್ರೆಯ ಬಗ್ಗೆ ಕೆದಕಬೇಡಿ ನೀವು
ತಿಳಿಯೆನು ಹರ್ಷವರ್ಧನ ಪಾಟಲಿಪುತ್ರ
ಗತಕಾಲ ಮರೆಯಲೆಂದಲ್ಲವೆ ಈ ಒದ್ದಾಟ
ಕುಡುಕನು ಚರಿತ್ರಹೀನ, ಬಾಟಲಿಪುತ್ರ

Tuesday, February 19, 2008

ಮದ್ಯಸಾರ

ಇಚ್ಛೆಯ ಮನೆ ಬೆಚ್ಚನೆ ಸತಿ ವೆಚ್ಚಕ್ಕೆ ಹೊನ್ನು
ಇದ್ದುಬಿಟ್ಟರೆ ಏನು ಬಂತು ಮಣ್ಣು?
ನನ್ನ ಸ್ವರ್ಗಕ್ಕೆ ಕಿಚ್ಚೇಕೆ ಹಚ್ಚುವೆ ತಂದೆ
ಕುಡಿಯಲೊಂದು ನೆಪ ಕರುಣಿಸು ಇಂದೇ

Monday, February 18, 2008

ಕಾಮೆಂಟ್ ರೀ

ಸದಾ ಬಾಯಿ ತುಂಬಾ ಎಲೆ ಅಡಿಕೆ ತುಂಬಿಕೊಂಡು ಎಲ್ಲೆಂದರಲ್ಲಿ ಪಿಚಕ್ಕಂತ ಉಗುಳಿ ಗಬ್ಬೆಬ್ಬಿಸುವ ಲಾಲು ಪ್ರಸಾದ್ ಯಾದವ್ ಕನ್ನಡಿಗರನ್ನು ಡರ್ಟಿ ಫೆಲೋಸ್ ಎಂದಿದ್ದಾರೆ. ‘ಸಗಣಿ’ಯವನೊಡನೆ ಸರಸವೇಕೆ ಅಂತಲೋ ಅಥವಾ ಇದು ಕೂಡ ಲಾಲು ಅವರ ಮತ್ತೊಂದು ಜೋಕು ಅಂತಲೋ ನಾವು ಇದನ್ನು ಸೀರಿಯಸ್ಸಾಗಿ ತಗೊಳ್ಳದೆ ನಕ್ಕು ಸುಮ್ಮನಾಗಿದ್ದೇವೆ. ‘ನಾನು ಹಾಗೆಂದೇ ಇಲ್ಲ, ದೇವೇಗೌಡರನ್ನು ಪ್ರಧಾನಿ ಮಾಡಿದೋನು ನಾನು, ಕನ್ನಡದವರನ್ನು ಕೊಳಕರು ಅಂದೇನೆಯೇ’ ಅಂತ ಲಾ ಪಾಯಿಂಟ್ ಹಾಕಿದ್ದಾರೆ ಲಾಲು . ಆದರೆ ದೇವೇಗೌಡರು ತಾವು ಕರ್ನಾಟಕದಲ್ಲಿ ಹುಟ್ಟಬಾರದಿತ್ತು ಅಂತ ಹೇಳಿಕೆ ನೀಡಿರುವುದರಿಂದ ಲಾಲು ವಾದದಲ್ಲಿ ಲಾಜಿಕ್ ಇದೆಯೋ ಇಲ್ವೊ ಅನ್ನೋದು ಬಹಳ ಸೂಕ್ಷ್ಮ ಪ್ರಶ್ನೆಯಾಗಿಬಿಟ್ಟಿದೆ.
*
ದೇವರೇ ಕಾಪಾಡಬೇಕು ಎಂಬುದು ಲೋಕಾಭಿರಾಮದ ಮಾತು. ಈಗ ನೋಡಿದರೆ ಆ ದೇವರನ್ನೇ ಯಾರಾದರೂ ಕಾಪಾಡಬೇಕಾಗಿದೆ. ಯಾಕೆಂದರೆ ಸೆಕ್ಸಿ ನಟಿ ಮಲ್ಲಿಕಾ ಶೆರಾವತ್ ಜೀಸಸ್ ಕ್ರೈಸ್ಟ್ ಕುರಿತ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರಂತೆ. ಆ ಸಿನಿಮಾದಲ್ಲಿ ‘ಎನ್ನ ಕಾಲೇ ಕಂಬ, ದೇಹವೇ ದೇಗುಲ’ ಎಂಬ ಐಟಂ ಸಾಂಗಿದೆಯೆ ಎಂಬುದು ಇನ್ನೂ ಗೊತ್ತಾಗಿಲ್ಲ. ಜೀಸಸ್ ಕ್ರೈಸ್ಟ್ ! ಪಡ್ಡೆಗಳ ನಿಘಂಟಿನಲ್ಲೇನೋ ಸೆಕ್ಸ್ ಸಿನಿಮಾಗಳಿಗೆ ‘ದೇವರ ಸಿನಿಮಾ’ ಎಂಬುದು ಕೋಡ್ ವರ್ಡ್. ಆದರೆ ಮಲ್ಲಿಕಾ ಸರಿಯಾದ ಅರ್ಥದಲ್ಲಿ ದೇವರ ಸಿನಿಮಾ ಮಾಡಲಿಳಿದಿದ್ದಾರೆ. ನಿದ್ರಾಭಂಗ ಮಾಡುತ್ತಿದ್ದಾಕೆ ಹೀಗೆ ರಸಭಂಗ ಮಾಡಬಹುದೆ ನೀವೇ ಹೇಳಿ!
*
ರಾಜಕಾರಣಿಗಳಿಗೇನೊ ಆತ್ಮಕಥನ ಬರೆಯುವ ಹುಕಿ ಬಂದಂತಿದೆ. ಮೊನ್ನೆ ಮೊನ್ನೆ ವಿಶ್ವನಾಥರ ‘ಹಳ್ಳಿ ಹಕ್ಕಿಯ ಹಾಡು’ ವಿವಾದ ಎಬ್ಬಿಸಿತ್ತು. ಇದೀಗ ಚುನಾವಣೆಗಳು ಮುಗಿದ ನಂತರ ಆತ್ಮಕಥನ ಪ್ರಕಟಿಸುವುದಾಗಿ ದೇವೇಗೌಡರು ಬೆದರಿಕೆ ಒಡ್ಡಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿದ್ದಕ್ಕೆ ಬೇಸರಪಟ್ಟುಕೊಂಡಿರುವ ಗೌಡರು ಅದನ್ನು ಕನ್ನಡದಲ್ಲಿ ಬರೆಯುತ್ತಾರೆಯೇ ಎಂಬುದು ಒಂದು ಅನುಮಾನವಾದರೆ ಅದಕ್ಕೆ ಏನು ಹೆಸರಿಡಬಹುದು ಎಂಬುದು ಮತ್ತೊಂದು ಕುತೂಹಲಕರ ವಿಷಯ. ವಿಶ್ವನಾಥರನ್ನೇ ಅನುಸರಿಸಿದರೆ ಅದಕ್ಕೆ ಗೌಡರು ‘ಮಣ್ಣು ಹುಳದ ಪಾಡು’ ಅಂತ ಹೆಸರಿಡಬಹುದು ಎಂಬುದು ಅವರ ಕಟ್ಟಾ ವಿರೋಗಳ ಊಹೆ. ‘ಮಣ್ಣಿನ ಮಗ’ ಅಂತಿಡೋಣ ಎಂದರೆ ರಾಜ್‌ಕುಮಾರ್ ಸಿನಿಮಾದ ಹೆಸರಿನ ನಕಲಾಗುತ್ತೆ(ಅವರು ಬೇರೆ ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಎಂದವರು!). ‘ಮಕ್ಕಳಿಗೆ ತಕ್ಕ ತಂದೆ’, ‘ಮಾಜಿ ಪ್ರಧಾನಿ’ ಅಥವಾ ‘ಧೂಳ್’ ಎಂಬ ಟೈಟಲ್ಲುಗಳೂ ಪರಿಶೀಲನೆಯಲ್ಲಿವೆ ಅಂತ ಸುದ್ದಿ ಇದೆ!
*
ಕೆಲವು ಸುರಕ್ಷಿತ ಪದಗಳಿವೆ. ಕಸಿನ್ ಥರದವು. ಅದೇ ರೀತಿ ಫ್ರೆಂಡ್, ಅಭಿಮಾನಿ ಎಂಬ ಪದಗಳೂ ಅಷ್ಟೇ-ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಅಭಿಮಾನಿ ಗಂಡೋ ಹೆಣ್ಣೋ ಅಂತ ತಿಳಿಯುವುದು ಹೇಗೆ ? ಹೆಣ್ಣು ಅಭಿಮಾನಿಯನ್ನು ಅಭಿ‘ಮಾನಿನಿ’ ಎನ್ನಬಹುದು ಎಂಬುದು ಮಿಸ್ ಸೋಸಿಲಿಯ ಸಲಹೆ!
-ರೀ

Sunday, February 17, 2008

ಮದ್ಯಸಾರ

ಕುಡಿದು ಗುಂಡಿಗೆ ಬೀಳುವುದು ಬೇರೆ
ಗುಂಡಿಗೆ ಬಿದ್ದದ್ದಕ್ಕೇ ಕುಡಿಯುತಿರುವೆ ನಾನು
ಹೆಂಡವಾದರೂ ಒಮ್ಮೆ ತೇಲಿಸಲಿ ನನ್ನ
ಏಳಿಸಲಿ- ವಿಧಿಯೆನ್ನ ಸೋಲಿಸುವ ಮುನ್ನ

Friday, February 15, 2008

ಏಳು ಸುತ್ತಿನ ಪೇಟೆ

ಪೇಟೆಯಲಿ ಎಂಥ ಹಾಡು
ಎಲ್ಲರದೂ ಇಲ್ಲಿ ನಾಯಿಪಾಡು

ಸಿಟಿಬಸ್‌ನ ಇಕ್ಕಟ್ಟಿನಲಿ
ಶುರುವಾಯಿತು ದಿನದ ಮೊದಲ ರಾಮಾಯಣ
ಟ್ರಾಫಿಕ್‌ನ 'ಚಕ್ರ'ವ್ಯೂಹ ಬೇಧಿಸಿ
ಆಫೀಸನು ಮುಟ್ಟೋದ್ರಲ್ಲಿ ಬಿತ್ತು ನನ್ನ ಹೆಣ
ಇದ್ದರೂ ನನ್ನ ಜಾಗದಲ್ಲಿ ಮಹಾಕವಿ ಪಂಪ
ಕಾವ್ಯವಾದೀತೆ ಹೇಳಿ ಈ ಹಾದಿ ರಂಪ

ಇಲ್ಲಿದೆ ನೋಡಿ ಇದು ನಿಮ್ಮ ಟಾರ್ಗೆಟ್ಟು
ತಲುಪಲಾಗದಿದ್ದರೆ ನೀವೇ ನಮ್ಮ ಟಾರ್ಗೆಟ್ಟು
ಮೇಲೊಂದು ಕೂದಲಿಲ್ಲ ಒಳಗೊಂದು ಅಕ್ಷರವಿಲ್ಲ
ಈ ಬಾಸ್‌ನ ಬುರುಡೆ ಯಾವುದಕ್ಕೆ ರೂಪಕ
ಬೆಂಗಳೂರಿನಲ್ಲಿ ಕವಿತೆ ಅಂದರೆ ಕೆಜಿಗೆಷ್ಟು ಅಂತಾರೆ
ಇಲ್ಲಿ ಹೊಳೆವ ಪ್ರತಿಮೆ- ಕೆಂಪೇಗೌಡನದೊಂದೇ!

ನೋಡಿ ಕಣ್ಣು ತಣಿಯದಲ್ಲ ಎಷ್ಟು ದೊಡ್ಡ ಮಾಲು
ವಿಂಡೋಶಾಪಿಂಗ್‌ ಮಾಡಿ ಮಾಡಿ ದಣಿಯಿತಲ್ಲ ಕಾಲು
ಪುಕ್ಕಟೆ ಏನಲ್ಲ ಅದೂ, ಅಂಟಿಸಿತಲ್ಲ ಕನಸಿಗೊಂದು ಪುಕ್ಕ
ಸಿಕ್ಕಲ್ಲಿ ಮಿಂಚದಿರು ಕವಿತೆ ಹೊಳಹೆ, ಮುಖ್ಯ ಈಗ ರೊಕ್ಕ
ಪದ್ಯವಾಗೋ ಪದಗಳೆಲ್ಲ ಮದ್ಯದಲ್ಲಿ ಕರಗಿವೆ
ಕವಿತೆ ಮನೆ ಹಾಳಾಯ್ತು ನನ್ನ ಮನೆಯೇ ಕಳೆದಿದೆ!

ಮನೆ ತಲುಪಿ mute ಮಾಡಿದ ಟಿವಿ ನೋಡುತ್ತಾ
ಉಂಡು ಮುಗಿಸೊ ಹೊತ್ತಿಗಾಗಲೇ ಅರ್ಧರಾತ್ರಿ
ದೆವ್ವಗಳು ಓಡಾಡೋ ಸಮಯ ಕವಿ ಸಮಯವಲ್ಲ
ಕಣ್ಣು ಎಳೀತಿವೆ ಕನಸು ಬೆಳೀತಿವೆ ಸಂಗಾತಿಗೋ ನೈಟ್‌ಶಿಫ್ಟು
ಕೆರಿಯರಿಗಾಗಿ ಬಸಿರ ತಡೆಹಿಡಿದಿರುವವರು ನಾವು
ಕವಿತೆಯ ಹೆಸರಲ್ಲಿ ಸಮಯ ಹಾಳು ಮಾಡಬಹುದೆ?

ಮುನ್ನೂರ ಅರವತ್ತೈದು ದಿನವೂ ಇಲ್ಲಿ ಇದೇ ರಗಳೆ
ಏಳು ಸುತ್ತಿನ ಪೇಟೆಯಲಿ ಕವಿತೆ ಎಲ್ಲ ಬೊಗಳೆ
ಹಠ ಹಿಡಿದು ಬರೆದರೂ ಆಗುವುದೆ ಅದು ಪದ್ಯ
ಕೇಳಬೇಕಾಗುತ್ತದೆ ಅದನೇ-
ಕವಿತೆ, ನೀನೇಕೆ ಪದಗಳಲಿ ಬೆವೆತೆ?

ಪೇಟೆಯಲಿ ಎಂಥ ಹಾಡು
ಎಲ್ಲರದೂ ಇಲ್ಲಿ ನಾಯಿಪಾಡು
ಎಂದುಕೊಳ್ಳುವ ಹೊತ್ತಿಗೇ-
ಎಂಜಿ ರೋಡಿನಲ್ಲಿ ಬೀಸಿದ ಜೋರುಗಾಳಿಗೆ
ಹುಡುಗಿಯರ ಬಟ್ಟೆ ರೋಚಕವಾಗಿ ಹಾರಿವೆ
ಮೋಡ ಕಪ್ಪಗಾಗಿವೆ, ಮಹಲು ತೆಪ್ಪಗಾಗಿವೆ
ಆಸರೆಗಾಗಿ ಓಡಿದವರ ಕೈಲಿ ಹೈಹೀಲ್ಡು ತೂಗಿವೆ
ಫುಟ್‌ಪಾತಲ್ಲಿ ಆಟಿಕೆ ಮಾರೋ ಹುಡುಗನ ನೆಲದಂಗಡಿ
ಪ್ಯಾಕಪ್‌ಗೆ ನೆರವಾಗಿದ್ದಾನೆ ನಗುತಾ ಬದಿಯ ಭಿಕ್ಷುಕ
ಕಣ್ಮುಚ್ಚಿ ಕೈ ಚಾಚಿ ಕಾದಿವೆ ಪುಟಾಣಿಗಳು
ಋತುವಿನ ಮೊದಲ ಮಳೆಯಲ್ಲಿ ತೋಯಲು
ಓ! ಬಿದ್ದೇಬಿಟ್ಟಿದೆ ಮೊದಲ ಹನಿ ಹನಿಗವನ?!
~ಅಪಾರ

* (ಉತ್ತಮ ಸಿಟೀಗೀತಗಳಿಗಾಗಿ ಭೇಟಿ ಕೊಡಿ- ಚಂಪಕಾವತಿ ಸಿಟಿ ಎಡಿಷನ್‌: ಪೇಟೆಯ ಪಾಡ್ದನ)

Wednesday, February 13, 2008

ಹೋಗೇ ಸುಮ್ಮನೆ!

1
ಮಧ್ಯಾಹ್ನವ ಕಳೆಯುತಿದ್ದ
ಉದ್ಯಾನದ ಬೆಂಚು
ಮಳೆಯ ರಾತ್ರಿ ಹೊಳೆಯುತಿದ್ದ
ಒದ್ದೆ ಮುಖದ ಮಿಂಚು


ಒಬ್ಬರಿಗೆ ಇನ್ನೊಬ್ಬರು
ಕಾದು ಕೆಂಪಾದ ತಿರುವು
ಕಾಡಿದರೂ ಇರಲಿ ನೆನಪು
ಬೇಡ ಜಾಣ ಮರೆವು


ನಿನ್ನ ನೆನಪಲೆ ಕೊರಗುತಿರುವೆ
ಎನುವರೆಲ್ಲ ಜನ
ನಿನ್ನ ನೆನೆದೇ ಬದುಕುತಿರುವೆ
ಅರಿಯರೆನ್ನ ಮನ


2
ಶುಭಾಶಯ ಕೋರುವ ಹೆಸರಲ್ಲಿ
ಮೃದು ಅಂಗೈಯ ಮುಟ್ಟಿದೆ
ಸುಣ್ಣ ಆಗಿದೆ ಎಂದು ಸುಳ್ಳು ಹೇಳಿ
ಬೆನ್ನನೊಮ್ಮೆ ಮುಟ್ಟಿದೆ
ರಸ್ತೆ ದಾಟುವಾಗ 'ಎಚ್ಚರ' ಎಂದು
ತೋಳು ಮುಟ್ಟಿ ಕಂಪಿಸಿದೆ


ಯಾವ ನೆಪವೂ ಇಲ್ಲದೆ ತಬ್ಬಿ
ಮನವ ಮುಟ್ಟುವ ಹಂಬಲ ಮಾತ್ರ
ಉಳಿದೇ ಹೋಯ್ತು

3
ನಿನ್ನ ಕರೆಗೆ ಹಾಡುತ್ತಿತ್ತು
ನಿನ್ನ ಕೋಪಕೆ ಕಂಪಿಸುತ್ತಿತ್ತು
ಮುದ್ದು ಮಾಡಿದರೆ ಬಿಸಿಯಾಗುತಿತ್ತು
ಈಗ ಕ್ರೆಡಿಟ್‌ ಕಾರ್ಡಿನವರ ಕಾಟಕ್ಕೆ
ಕಂಗೆಟ್ಟಿದೆ ನನ್ನ ಮೊಬೈಲು
ನಿನ್ನ ನಂಬರು ಚಾಲ್ತಿಯಲ್ಲಿಲ್ಲ


4
ನೀನು ತೊರೆದು ಹೋದ ಮೇಲೆ
ನಾನು ಗಡ್ಡ ಬಿಟ್ಟಿಲ್ಲ, ಕುಡಿವುದ ಕಲಿತಿಲ್ಲ
ಕೆಲಸಕ್ಕೆ ಹೋಗುವುದನ್ನೂ ಬಿಟ್ಟಿಲ್ಲ
ನಿನ್ನ ನೆನಪಲ್ಲಿ ಕಣ್ಣೀರು ಸುರಿಸುತಿಲ್ಲ
ಈ ಪದ್ಯ ಬರೆಯುವಾಗಲೂ ಕಂಪಿಸುತಿಲ್ಲ
ಹೇಳು, ನಿನಗೆ ಖುಷಿಯಾಯಿತೆ?

Tuesday, February 12, 2008

ಮದ್ಯಸಾರ

ಇಷ್ಟಾಗಿಯೂ ಕುಡಿಯದ ಹಠಮಾರಿಯ ಕಂಡರೆ
ನನಗೆ ಬಹಳ ಹೆಮ್ಮೆ
ಎಚ್ಚರದಲೇ ಲೋಕದೊಡನೆ ಗುದ್ದಾಡುವ ಧೀರಗೆ
ಕೈಯ ಮುಗಿವೆ ಒಮ್ಮೆ

Sunday, February 10, 2008

ಕಾಮೆಂಟ್‌ರೀ

ವಿವಾಹವಾಗಲು ವರನಿಗೆ ಹದಿನೆಂಟಾದರೆ ಸಾಕು ಎಂದು ಕಾನೂನು ಆಯೋಗ ಹೇಳಿದೆ. ವೋಟು ಹಾಕಬಲ್ಲ ಹುಡುಗ ಕಾಟು ಹತ್ತಲಾರನೆ ಎಂಬುದು ಆಯೋಗದ ಲಾಜಿಕ್ಕು. ಹಾಗಾಗಿ ಇನ್ನು ಮುಂದೆ ಮೀಸೆ ಮೂಡಿರದ ಪೋರರೆಲ್ಲಾ ಬಾಸಿಂಗ ಕಟ್ಟಿಕೊಂಡು ಹಸೆಮಣೆ ಮೇಲೆ ಕೂತುಬಿಡಬಹುದು. ಮಾಂಗಲ್ಯಂ ತಂತು ನಾನೇನಾ ಎಂದು ಮಂತ್ರ ಹೇಳಿಕೊಡುವ ಮೊದಲು ಪುರೋಹಿತರು ‘ಮದುವೆ ಗಂಡು ನೀನೇನಾ’ ಅಂತಲೂ ಕೇಳಿ ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಠಾಣೆಯಲ್ಲಿ ಅನೇಕ ಮದುವೆಗಳಿಗೆ ಪೌರೋಹಿತ್ಯ ನೀಡಿದ ಹಿರಿಮೆಯ ಸುಭಾಷ್ ಭರಣಿಯಂಥ ಪೊಲೀಸರಿಗೆ ಇನ್ನು ಕರ್ತವ್ಯದ ಹೊರೆ ಹೆಚ್ಚಲಿದೆ. ಅಂಥವರ ಸಾಧನೆ ಮೆಚ್ಚಿ ‘ಶಭಾಷ್’ ಭರಣಿ ಅಂದರೆ ಅದರಲ್ಲೇನು ತಪ್ಪು?!
*
ಚಳಿಗಾಲ ನಿರೀಕ್ಷೆಗಿಂತ ಬೇಗನೇ ಜಾಗ ಖಾಲಿ ಮಾಡಿದೆ. ಶಿವರಾತ್ರಿ ಬಂದ ನಂತರ ಶಿವಶಿವಾ ಅಂತ ಓಡಬೇಕಾದ ಚಳಿಗಾಲ ಒಂದು ತಿಂಗಳ ಮೊದಲೇ ನಾಪತ್ತೆ. ಕಾಶ್ಮೀರದಲ್ಲೇನೋ ೧೦ ಅಡಿ ಎತ್ತರದವರೆಗೆ ಹಿಮ ಆವರಿಸಿ ಜನರಿಗೆ ‘ಹಿಮಯಾತನೆ’ ಆಗುತ್ತಿದ್ದರೂ ಬೆಂಗಳೂರಿನಲ್ಲಿ ಮಾತ್ರ ಆಗಲೇ ಸೆಖೆಯ ಶೆಖೆ ಆರಂಭವಾಗಿದೆ. ಪ್ರತಿ ವರ್ಷ ಬೇಸಗೆ ಆರಂಭವನ್ನು ನಾವು ಸ್ವತಃ(ಮೈಯಾರ ಅನ್ನಬಹುದೆ?!)ಅನುಭವಿಸಿದರೂ, ಅದು ಮನದಟ್ಟಾಗುವುದು ಪತ್ರಿಕೆಗಳಲ್ಲಿ ಚಂದದ ತೆಳು ಹಸಿರು ಬಣ್ಣದ ಕಲ್ಲಂಗಡಿ ಹಣ್ಣಿನ ಸೌಂದರ್ಯ ರಾಶಿಯ ನಾಲ್ಕು ಕಾಲಂ ಫೋಟೋವನ್ನು ನೋಡಿದ ಮೇಲೇ ಅಲ್ಲವೆ? ಅದನ್ನೇ ಸೋಸಿಲಿಯ ಪ್ರಾಸದ ಮಾತಲ್ಲಿ ಹೇಳುವುದಾದರೆ ಹೀಗೆ:
ವಸಂತ ಋತುವಿನ ಸ್ವಾಗತಕೆ ಕೋಗಿಲೆಯ ಹಾಡು
ಬೇಸಗೆ ಆಗಮನ ಸಾರಲು ಕಲ್ಲಂಗಡಿಯ ಲೋಡು !
ಈ ಬೇಸಗೆ ನಿಮ್ಮನ್ನು ತಣ್ಣಗಿಟ್ಟಿರಲಿ.
*
ಕಳೆದ ವಾರವಿಡೀ ಪತ್ರಿಕೆಗಳಲ್ಲಿ ಪದೇಪದೇ ಎದ್ದು ಕಂಡದ್ದು ಎರಡು ಸುದ್ದಿಗಳು. ಒಂದು ಸ್ಪೀಡ್ ಗವರ್ನರ್ , ಮತ್ತೊಂದು ಗವರ್ನರ್ ಸ್ಪೀಡ್! ಒಂದಾದ ಮೇಲೊಂದರಂತೆ ಎರಡು ವಿವಾದಿತ ನಿರ್ಣಯಗಳನ್ನು ತೆಗೆದುಕೊಂಡ ರಾಜ್ಯಪಾಲ ಠಾಕೂರ್ ಮೂರು ದಿನ ಸತತವಾಗಿ ಮುಖಪುಟದಲ್ಲಿ ಮಿಂಚಿದರು. ರಾಷ್ಟ್ರಪತಿ ಆಳ್ವಿಕೆ ಅಂದರೆ ರಾಜಕೀಯಕ್ಕೆ ರಂಗು ಇರದು ಎಂಬ ಕಲ್ಪನೆಗಳೆಲ್ಲಾ ಈಗ ಹಳೆಯವಾದವಲ್ಲವೆ?
*
ಹರ್ಭಜನ್ ಸಿಂಗ್ ವಿರುದ್ಧ ಜನಾಂಗೀಯ ನಿಂದನೆ ಆರೋಪ ಬಂತಲ್ಲ, ಆ ಶಾಕ್ ಅನ್ನು ತಡೆದುಕೊಳ್ಳಲು ಬೇಕಾದ ಮಾನಸಿಕ ಶಕ್ತಿಗಾಗಿ ನಮ್ಮ ಕ್ರಿಕೆಟ್ ಆಟಗಾರರು (ಹರಿ?)ಭಜನ್‌ಗಳನ್ನು ಕೇಳುತ್ತಿದ್ದಾರೆಂಬ ಸುದ್ದಿ ಬಂದಿದೆ. ಅದರಿಂದ ಪ್ರಯೋಜನವೂ ಆಗಿದೆಯಂತೆ. ವಯಸ್ಸಾಯ್ತು ಅಂತ ಕುಂಬ್ಳೆ, ಲಕ್ಷ್ಣಣ್ ದ್ರಾವಿಡ್, ಗಂಗೂಲಿಯರನ್ನು ಮನೆಗೆ ಕಳಿಸಿದರೆ , ಈ ಯುವ ಪಡೆ ಭಜನೆಗಿಳಿದಿರುವುದು ಒಂಥರಾ ಕಾಮಿಡಿಯಾಗಿದೆ ಅಲ್ಲವೆ?

Saturday, February 9, 2008

ಮದ್ಯಸಾರ

ಪೆಗ್ಗೋ ಮಗ್ಗೋ, ಪಿಂಟೋ ಲಾರ್ಜೊ
ಹಾರ್ಟು ಎನ್‌ಲಾರ್ಜ್ ಆಗೋದೆ ಸೈ
ಅದಕೇ ಕುಡುಕ ಬಹಳ ಉದಾರಿ
ಹೃದಯ ವೈಶಾಲ್ಯಕೆ ಅನ್ನೋಣ ಜೈ

Thursday, February 7, 2008

ಮದ್ಯಸಾರ

ಕುಡಿದವನ ಹೃದಯ ಭಯಂಕರ ಮೆದು
ಶಾಸನ ವಿಧಿಸದ ಎಚ್ಚರಿಕೆ ಇದು

ತೀರ್ಥ ತಗೊಂಡಾಗ ಮನಸೊಂದು ಗುಡಿ
ಮತ್ತೊಂದು ದ್ರೋಹಕೂ ಅದು ಈಗ ರೆಡಿ

Wednesday, February 6, 2008

ಅತಿಥಿ

ಯಾರೋ ಬರುತ್ತಿರುವಂತಿದೆ ಪರಿಚಿತರೆ?
ನಡೆವ ಭಂಗಿ ಎಲ್ಲೋ ಕಂಡಂತಿದೆಯಲ್ಲಾ
ಎಂದು ಕಣ್ಣ ಮೇಲೆ ಕೈ ಹಿಡಿದು ಊಹಿಸದಿರು
ಖಂಡಿತಾ ಆತ ಬರುತ್ತಿರುವುದು ನಮ್ಮ ಮನೆಗಲ್ಲ


ಪ್ರತಿಯೊಬ್ಬರಿಗೂ ಇಲ್ಲಿ ಹೊತ್ತು ಗೊತ್ತಿದೆ
ಹಾಗೆಲ್ಲ ಬಡಿದು ನಮ್ಮ ಕೋಟೆಯ ಕದ
ತಪೋಭಂಗ ಮಾಡುವುದಿಲ್ಲ ಈ ಪೇಟೆಯ ಜನ
ಚಪ್ಪಾಳೆನೂ ಸದ್ದಾಗದಂತೆ ಹೊಡೆವ ನಾಜೂಕು ಮನ

ಬನ್ನಿ ಯಾವಾಗಾದರೂ ಒಮ್ಮೆ ಮನೆಗೆ
ಹಾ! ಹೊರಡುವ ಮುನ್ನ ಒಂದು ಫೋನ್‌ ಮಾಡಿ
ನಾಳೆ ಬೇಡ ಈ ವಾರ ನಾನು ಸ್ವಲ್ಪ ಬಿಸಿ
ಬನ್ನಿ ಯಾವಾಗಾದರೂ- ಫೋನ್‌ ಮಾಡಿಕೊಂಡು

ತೆರೆದಿದೆ ಮನೆ ಓ ಅಂತ ಅತಿಥಿ ಸೀದಾ ನುಗ್ಗುವಂತಿಲ್ಲ
ಕರೆಗಂಟೆಯೂ ಅನುಮತಿ ಇಲ್ಲದೆ ಕಿರುಚುವಂತಿಲ್ಲ
ಬಾಗಿಲು ತೆರೆದು ವಾಟ್‌ ಎ ಸರ್ ಪ್ರೈಜ್‌ ಎನ್ನುವಂತಿಲ್ಲ
ಬಂದವರನ್ನು ಊಹಿಸಿದವರಿಗೆ ಯಾವ ಪ್ರೈಜೂ ಇಲ್ಲ

ಬಂದಿದ್ದೀರಾ? ಎಲ್ಲಿದ್ದೀರಿ? ಹಾಗೇ ನೇರ ಬನ್ನಿ
ಇಲ್ಲ ಹೆದರಬೇಡಿ ನಾಯಿ ಇಲ್ಲ ಬನ್ನಿ
ಅಂಗಳಕೆ ಬಂದಮೇಲೆ ಮತ್ತೊಂದು ರಿಂಗ್‌ ಮಾಡಿ
ಬಾಗಿಲು ತೆರೆದಾಯ್ತು ಇಳಿಸೋಣ ಕಿವಿಯಿಂದ ಮೊಬೈಲು

**
ರಾತ್ರಿ ಎಂಟರ ಈ ಅಪವೇಳೆಯಲ್ಲಿ
ಬೆಚ್ಚಿ ಬೀಳಿಸುವಂತೆ ಬಾಗಿಲೇಕೆ ಬಡಿಯುತಿದೆ
ಅಯ್ಯೋ! ನಮಗೆ ಯಾರ ನಿರೀಕ್ಷೆಯೂ ಇರಲಿಲ್ಲವಲ್ಲ
ಯಾರಾಗಿರಬಹುದು ದೇವರೆ?!


ಬೆವರುವ ಬೆರಳುಗಳಲ್ಲಿ ಬೋಲ್ಟ್‌ ತೆಗೆದರೆ
ಹಸಿರು ರೇಷ್ಮೆ ಲಂಗದಲ್ಲೊಂದು ಮುದ್ದು ಪುಟ್ಟಿ
ಹುಟ್ಟುಹಬ್ಬವೋ ಏನೋ ಚಾಚಿದ ಕೈಲಿ ಚಾಕ್ಲೇಟ್‌ ಬುಟ್ಟಿ
ಮಂಡಿಯೂರಿ ಕೂತು ಆ ಅಪರಿಚಿತಳನ್ನು ಬರಸೆಳೆದೆ
~ಅಪಾರ

Tuesday, February 5, 2008

ಮದ್ಯಸಾರ

ನೀನಂದಂತೆ ಕುಡಿವುದ ಬಿಡಬಹುದಿತ್ತು
ನಿಜ, ಈಗುಳಿದಿಲ್ಲ ನೋವಿನ ಕಾರಣ
ಆದ್ರೂ ಕೆಲಸವಾದೊಡನೆ ಕೈ ಬಿಟ್ಟರೆ
ಆಗೋದಿಲ್ಲವೆ ಅದು ರಾಜಕಾರಣ?

ಕಾಮೆಂಟ್‌ರೀ

ಮಾಜಿ ಸಚಿವ ವಿಶ್ವನಾಥರ ಪುಸ್ತಕ ಮಹಾ ಕೋಲಾಹಲ ಎಬ್ಬಿಸಿದೆ. ಅವರ ಪುಸ್ತಕದ ಹೆಸರು ‘ಹಳ್ಳಿ ಹಕ್ಕಿಯ ಹಾಡು’ . ಕೆಲ ಸ್ಫೋಟಕ ಸಾಲುಗಳಿಂದಾಗಿ ಅದೀಗ ವಿವಾದದ ಜೇನು ಗೂಡು. ‘ಆನುದೇವ’, ‘ಆವರಣ’ಗಳ ನಂತರ ರಹಸ್ಯಗಳ ಅನಾವರಣದ ಪುಸ್ತಕವೊಂದು ವಿವಾದಕ್ಕೊಳಗಾಗಿದೆ . ಅದೇನೇ ಇದ್ದರೂ, ಆತ್ಮ ಚರಿತ್ರೆಯಲ್ಲಿ ಇನ್ನೊಬ್ಬರ ಚರಿತ್ರೆಯನ್ನು ಕೆದಕಬಹುದೆ ಎಂಬುದು ಚರ್ಚೆಯ ವಿಷಯ. ಬ್ಯಾನ್ ಮಾಡಬೇಕು , ಬೆಂಕಿ ಹಚ್ಚಬೇಕು ಎಂಬ ಕೂಗುಗಳು ಈಗಾಗಲೇ ಕೇಳುತ್ತಿವೆ. ಪುಸ್ತಕಗಳು ವಿವಾದಕ್ಕೊಳಗಾಗಿ ನಿಷೇಧಗೊಂಡರೆ ಪ್ರಕಾಶಕರಿಗೆ ಲಾಸಾಗುತ್ತದೆ ಎಂದು ನೀವು ತಿಳಕೊಂಡಿರಬಹುದು. ಪ್ರತಿಭಟನಕಾರರು ಬೆಂಕಿ ಹಚ್ಚಲೆಂದೇ ಸಾವಿರಾರು ಪ್ರತಿ ಕೊಂಡುಕೊಂಡು ಅವರಿಗೆ ಸಿಕ್ಕಾಪಟ್ಟೆ ಲಾಭವಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ!
*
ಮಂಗಳ ಗ್ರಹದ ಮೇಲೆ ಮಹಿಳೆಯ ಪತ್ತೆಯಾಗಿದೆಯಂತೆ. ಅಲ್ಲಿಗೆ ಗ್ರಹ ಚೇಂಜ್ ಮಾಡಿದ್ರೂ ಗ್ರಹಚಾರ ತಪ್ಪಲ್ಲ ಅಂತಾಯಿತು ! ಲೇಡೀಸ್ ಫಸ್ಟ್ ಎನ್ನುವುದು ಭೂಮಿ ಮೇಲೆ ಮಾತ್ರ ಅಲ್ಲ ಅನ್ನೋ ಸತ್ಯವೂ ತಿಳಿಯಿತು. ಬರೀ ಮೈಯಲ್ಲಿ ಅರ್ಜೆಂಟಾಗಿ ಎಲ್ಲೋ ಗುಡ್ಡ ಹತ್ತಿ ಕೈ ಬೀಸುತ್ತಾ ಹೋಗುತ್ತಿರುವ ಹೆಂಗಸಿನಂಥ ಆಕೃತಿಯೊಂದು ಕಂಡಿದೆ ಎಂದು ನಾಸಾ ತಿಳಿಸಿದೆ. ನೀಟಾಗಿ ಸೀರೆ ಗೀರೆ ಉಟ್ಟುಕೊಂಡು ಸ್ಪಲ್ಪ ಗಂಭೀರವಾಗಾದರೂ ಹೊರಟಿದ್ದರೆ ಸು‘ಮಂಗಳೆ’ ಅನ್ನಬಹುದಿತ್ತೇನೋ!
*
ಹಕ್ಕಿ ಜ್ವರದ ಭಯದಿಂದ ದೇಶದಲ್ಲಿ ಲಕ್ಷಗಟ್ಟಲೆ ಕೋಳಿಗಳನ್ನು ಕೊಲ್ಲಲಾಗುತ್ತಿದೆ. ಪಶ್ಚಿಮಬಂಗಾಳದಲ್ಲಿ ೨೭ ಸಾವಿರ ಕೋಳಿಗಳನ್ನು ಕೊಂದಾಗಿದೆ. ಬಾಂಗ್ಲಾದಲ್ಲೂ ಅಷ್ಟೇ ಕೋಳಿ ಮತ್ತು ಬಾತುಕೋಳಿಗಳ ಮಾರಣ ಹೋಮ ನಡೆದಿದೆ. ಇದರಿಂದ ಕೋಳಿಗಳಿಗೇನೂ ವ್ಯತ್ಯಾಸವಾಗಿಲ್ಲ ಎನಿಸುತ್ತದೆ. ಯಾಕೆಂದರೆ ಜ್ವರ ಇಲ್ಲದಿದ್ದರೂ ನಾವು ಅವನ್ನು ಕೊಲ್ಲುತ್ತಿದ್ದೆವು. ಆದರೆ ಮನುಷ್ಯರಿಗೆ ವ್ಯತ್ಯಾಸವಾಗಿದೆ. ಮೊದಲಾದರೆ ಕೊಂದ ಪಾಪ ತಿಂದು ಪರಿಹಾರವಾಗುತ್ತಿತ್ತು. ಈಗ ಅದೂ ಇಲ್ಲ!
*
ಹೊಸ ರ್ಯಾಂಬೋ(ಓದಲು ಕೂಡ ಹಿಂಸೆಯಾಗುತ್ತಿದೆ ಅಲ್ಲವೆ) ಸಿನಿಮಾದಲ್ಲಿ ಪ್ರತಿ ಎರಡು ನಿಮಿಷಕ್ಕೊಂದು ಕೊಲೆಯಂತೆ. ಕನ್ನಡ ಸಿನಿಮಾದೋರು ಜಲಪಾತ ತೋರಿಸಿ ದುಡ್ಡು ಮಾಡುತ್ತಿದ್ದರೆ ಹಾಲಿವುಡ್‌ನವರು ರಕ್ತಪಾತ ತೋರಿಸಿ ದುಡ್ಡು ಮಾಡುತ್ತಿರುವಂತಿದೆ!
*
ಸದಾ ಆನಂದವಾಗಿರಬೇಕೆ? ಸದಾನಂದ ಗೌಡರನ್ನು ನೋಡಿ ಕಲಿಯಿರಿ. ಯಾವಾಗಲೇ ಅವರ ಬಿಂಬ ಟಿವಿಯಲ್ಲಿ ಕಾಣಲಿ, ಅದು ನಗುನಗುತ್ತಲೇ ಇರುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿ ಸೀಟಿನಿಂದ ಇಳಿದ ದಿನವೂ ಅವರು ನಗುತ್ತಲೇ ಇದ್ದರು!
*
ದರೋಡೆಕೋರರಿಗೆ ಯಾವ ಫ್ಲೇವರ್‌ನ ಐಸ್‌ಕ್ರೀಂ ಇಷ್ಟ?
ಸೋಸಿಲಿ: ರಾಬರಿ ಐಸ್‌ಕ್ರೀಂ!

Friday, February 1, 2008

ಮದ್ಯಸಾರ

ಅಷ್ಟಿಷ್ಟಲ್ಲವೋ ಸಖತ್ತು
ವಿವರಿಸಲಾಗದು ನನ್ನ ಹಿಗ್ಗು
ಮಾತಿಗೆಲ್ಲುಂಟು ತಾಕತ್ತು
ಕುಡಿಸುವೆ ನಡಿ ಒಂದ್‌ ಪೆಗ್ಗು