Sunday, January 27, 2008

ಕಾಮೆಂಟ್‌ರೀ

ಭಾರತರತ್ನ ಕೊಡಬೇಕು ಎಂದು ಸುದ್ದಿ ವಾಹಿನಿಯೊಂದು ಕ್ಯಾಂಪೇನ್ ಮಾಡಿತಾದರೂ ಸಚಿನ್‌ಗೆ ಪದ್ಮವಿಭೂಷಣ ಮಾತ್ರ ಸಿಕ್ಕಿದೆ. ಇದೇ ವೇಳೆ ಭಾರತಕ್ಕೆ ಬಂದ ಬ್ರಿಟನ್ ಪ್ರಧಾನಿ ಬ್ರೌನ್, ಸಚಿನ್‌ಗೆ ಸರ್ ಪದವಿ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೆಲ್ಲದರ ಬೆನ್ನಲ್ಲೇ ಅತ್ತ ಅಡಿಲೇಡ್‌ನಲ್ಲಿ ಸಚಿನ್ ಸುಂದರ ಶತಕವೊಂದನ್ನು ಬಾರಿಸಿದ್ದಾರೆ. ಅವರ ಹೆಸರಿನ ಮುಂದಿರುವ ತೆಂಡೂಲ್ಕರ್ ಎಂಬ ‘ಸರ್’ನೇಮೇ ಭಾರತೀಯರ ಮೈಯಲ್ಲಿ ರೋಮಾಂಚನ ಹುಟ್ಟಿಸುತ್ತದೆ. ಅದಕ್ಕೆ ಹೋಲಿಸಿದರೆ ಆ ಹೆಸರಿನ ಹಿಂದೆ ಸೇರಿಸಬಹುದಾದ ಸರ್ ಎಂಬ ಪದವಿ ಅಂಥ ದೊಡ್ಡದು ಅಂತೇನೂ ಅನ್ನಿಸುವುದಿಲ್ಲ. ಇದೇ ವೇಳೆ ನೈಟ್ ಹುಡ್ ಅನ್ನು ನೈಟ್ ವಾಚ್‌ಮನ್‌ಗಳಿಗೆ ಕೊಡುವ ಯೋಚನೆಯೇನಾದ್ರೂ ಇದೆಯೇ ಎಂದು ಇತ್ತೀಚೆಗೆ ಚೆನ್ನಾಗಿ ಬ್ಯಾಟ್ ಮಾಡುತ್ತಿರುವ ಪಠಾಣ್ ಮತ್ತು ಭಜ್ಜಿ ವಿಚಾರಿಸುತ್ತಿದ್ದಾರೆ ಎಂಬುದು ಈ ಸೋಸಿಲಿ ಹರಡುತ್ತಿರುವ ಸುಳ್ಳು ಸುದ್ದಿ.
*
ಬಹುಮುಖ ಪ್ರತಿಭೆ (ಕವಿ, ಪರ್ತಕರ್ತೆ, ಇದೀಗ ‘ನಟಿ’?)ಪ್ರತಿಭಾ ನಂದಕುಮಾರ್ ಕುಟುಕು ಕಾರ್‍ಯಾಚರಣೆ ಮೂಲಕ ನಗರದಲ್ಲಿ ವ್ಯವಹರಿಸುತ್ತಿದ್ದ ಪುರುಷ ವೇಶ್ಯೆಯರ ಜಾಲವೊಂದನ್ನು ಬಯಲು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಟಿವಿ ಚಾನಲ್ಲೊಂದು ಪುರುಷ ವೇಶ್ಯಾವಾಟಿಕೆ ಬಗ್ಗೆ ನೀವೇನು ಹೇಳ್ತೀರಾ ಅಂತ ಬೀದೀಲಿ ಹೋಗೋ ದಾಸಯ್ಯನಿಗೂ ಕೇಳಿದರು. ಆಗೊಬ್ಬ ಹೇಳಿದ: ‘ಇದು ನೋಡಿ ಇವರೆ, ಒಂದನೇಯದಾಗಿ ಇದರಿಂದ ಹಣ ಸಿಗುತ್ತೆ... ಎರಡನೇದು ಎಂಜಾಯ್‌ಮೆಂಟೂ ಸಿಗುತ್ತೆ’. ಈ ಸಾರ್ವಜನಿಕನ ಅಭಿಪ್ರಾಯ ಯಾವ ಎಡಿಟಿಂಗ್ ಕೂಡ ಇಲ್ಲದೆ ಹಾಗೇ ಪ್ರಸಾರವಾಯಿತು. ಇನ್ನೂ ಒಂದೆರೆಡು ೨೪ ಗಂಟೆ ನ್ಯೂಸ್ ಚಾನೆಲ್‌ಗಳು ಬರುತ್ತಿವೆಯಂತೆ. ಇನ್ನೂ ಏನೇನು ನೋಡಬೇಕೊ!
*
‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಅಂತ ಅಣ್ಣಾವ್ರು ಅಷ್ಟು ಚಂದವಾಗಿ ಹೇಳಿ ಹೋದರೂ ಈ ದೇವೇಗೌಡರು ಇಲ್ಲಿ ಹುಟ್ಲೇಬಾರದಾಗಿತ್ತು ಅಂತ ಹೇಳಿ ಫಜೀತಿ ಮಾಡಿಕೊಂಡಿದ್ದಾರೆ. ಮೊದಲೇ ವೈರಿಗಳೆಲ್ಲ ಒಂದಾಗಿ ಗೌಡರ ಹುಟ್ಟಡಗಿಸಲು ಓಡಾಡುತ್ತಿರುವಾಗ ಇದು ಬೇಕಿತ್ತಾ?ಗೌಡರು ತಮ್ಮ ಹುಟ್ಟಿನ ಬಗ್ಗೆ ಮರುಚಿಂತನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವೆ ಅಂತ ಹಿಂದೊಮ್ಮೆ ಅವರು ಹೇಳಿದ್ದು ಕೂಡ ವಿವಾದವಾಗಿತ್ತು. ಪದ್ಮಶ್ರೀ ಪ್ರಶಸ್ತಿ ಪಡೆದ ವೇಳೆ ಕವಿ ನಿಸಾರ್ ಅಹಮದ್ ‘ಕರ್ನಾಟಕದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ಹೇಳಿರುವುದು ಗೌಡರನ್ನು ಕೆಣಕಲಿಕ್ಕೋ ಎಂಬುದು ಖಚಿತವಾಗಿಲ್ಲ!
*
ಕೆಲದಿನಗಳ ಹಿಂದೆ ಆಟೋ ಮುಷ್ಕರ, ಅದಾದ ಮೇಲೆ ಲಾರಿ ಮುಷ್ಕರ, ನಂತರ ಬ್ಯಾಂಕ್ ಮುಷ್ಕರ. ಒಂದಿಲ್ಲೊಂದು ನೆಪ ಹೂಡಿ ಆಗಾಗ ಮುಷ್ಕರ ಕರೆದು ಸಾರ್ವಜನಿಕರಿಗೆ ತೊಂದರೆ ನೀಡುವುದೂ ಒಂದು ರೀತಿಯ ಭಯೋತ್ಪಾದನೆ ಅಲ್ಲವೆ? ಇಂಥ ಸಂಘಟನೆಗಳನ್ನು ‘ಮುಷ್ಕರೆ ತಯ್ಬಾ’ ಎಂದು ಕರೆದರೆ ಹೇಗೆ?

3 comments:

ವಿಕ್ರಮ ಹತ್ವಾರ said...

Thanks for the visit.

'mushkare toybaa'... gud one.

a lighter note on male prostitution- ellivarege imataha kaama pipaasu hengasaru irutaaro allivarege gandasara melina daurjanya/shOShane nillodilla ;)

Anonymous said...

ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
ವಿಳಾಸ: http://nagenagaaridotcom.wordpress.com/

ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

ನಗೆ ಸಾಮ್ರಾಟ್

Anonymous said...

ನಗೆ ಸಾಮ್ರಾಟರೆ
ನಿಮ್ಮ ಬ್ಲಾಗಿನ ಜಾಹೀರಾತನ್ನು ನನ್ನ ಬ್ಲಾಗಿನ ಕಮೆಂಟ್‌ ವಿಭಾಗದಲ್ಲಿ ಹಾಕುವ ಮೊದಲು ನನ್ನನ್ನೊಮ್ಮೆ ಕೇಳಬೇಕಿತ್ತಲ್ಲವೆ? ದಯವಿಟ್ಟು ಮತ್ತೊಮ್ಮೆ ಹೀಗೆ ಮಾಡಬೇಡಿ.
~ಅಪಾರ

~~~~~~ಮೀ ನ ಹೆ ಜ್ಜೆ