Sunday, January 13, 2008

ಕಾಮೆಂಟ್ ರೀ

ಇನ್ನೂ ನೀವು ಸಿಟಿಬಸ್ಸಿನಲ್ಲಿ ಓಡಾಡುತ್ತೀರೆಂದರೆ ನೀವು ಕಡುಬಡವರೇ ಇರಬೇಕು. ಟಾಟಾ ಒಂದು ಲಕ್ಷ ರೂಪಾಯಿಗೆ ಕಾರು ಬಿಟ್ಟ ಮೇಲೆ ಮಾಲೀಕರೇ ಅಲ್ಲ, ‘ಕಾರ್ ’ಮಿಕರೂ ಕಾರಿನಲ್ಲಿ ಓಡಾಡಬಹುದು. ಮಾರುತಿ ಕಾರು ಬಂದ ಹೊಸದರಲ್ಲಿ ‘ಸಾಜನ್’ ಸಿನಿಮಾದ ಹಾಡನ್ನು ಬದಲಾಯಿಸಿ ‘ದೇಖಾ ಹೈ ಪೆಹಲೀ ಬಾರ್, ಇಂಡಿಯಾ ಮೇ ಮಾರುತಿ ಕಾರ್, ಎಂಟಾಣೆಕೊಂದ್ ಎಂಟಾಣೆಕೊಂದ್ ’ ಎಂದು ಅಣಕಿಸಿ ಹಾಡಲಾಗುತ್ತಿತ್ತು. ಲಡಕಾಸಿ ಕಾರಿದ್ದವರನ್ನು ಗೆಳೆಯರು ‘ಇದನ್ನ ಮಾರಿ ಜತೆಗೊಂದಿಷ್ಟು ಹಣ ಹಾಕಿದರೆ ಒಂದು ಹೊಸ ಬೈಕೇ ಬರುತ್ತಲ್ಲೋ’ ಎಂದು ಅಣಕಿಸುತ್ತಿದ್ದ ಕಾಲವೂ ಇತ್ತು. ಈಗ ಅದೂ ನಿಜವೇ ಆಗುವಂತೆ ಕಾಣುತ್ತಿದೆ. ನ್ಯಾನೊ ಬಂದಿರುವ ಕಾರಣ ಇನ್ನು ಮುಂದೆ ನಾನೋ ನೀನೊ ಅವನೋ ಇವನೋ ಎನ್ನದೆ ಎಲ್ಲರೂ ಕಾರಿನಲ್ಲೇ ಪಯಣಿಸಬಹುದು. ಹಾಗಾಗಿ ಇನ್ನುಮುಂದೆ ಕಾರು ಅಂತಸ್ತಿನ ಸಂಕೇತ ಅಲ್ಲ, ಅದಿಲ್ಲದಿರುವುದು ಬಡತನದೇ ಸಂಕೇತ ಎನ್ನಬಹುದು!
*
ಸೈಮಂಡ್ಸ್ ಇಂಡಿಯಾಕ್ಕೆ ಬಂದಿದ್ದಾಗಲೇ ಹೇಳಿ ಹೋಗಿದ್ದ-‘ಆಸ್ಟ್ರೇಲಿಯಾಕ್ಕೆ ಬಂದಾಗ ನೋಡಿ‘ಕೋತಿ’ನಿ ’ ಅಂತ. ನಮ್ಮವರಿಗೆ ಅರ್ಥ ಆಗಿರಲಿಲ್ಲ ಅಷ್ಟೇ. ಯಾಕೆಂದರೆ ಇಂಡಿಯಾದಲ್ಲೇ ಅವರು ಸರಣಿ ಗೆದ್ದಿದ್ದರು. ಅಂದಮೇಲೆ ಆಸ್ಟ್ರೇಲಿಯಾಕ್ಕೆ ಬಂದಾಗ ನೋಡಿಕೊಳ್ಳುವುದು ಆಟಕ್ಕೆ ಸಂಬಂಸಿದ್ದಲ್ಲ ಎಂದು ಅರ್ಥ ತಾನೆ?! ಅದು ಹೋಗಲಿ ಎಂದರೆ ಕೋತಿ ಅಂತ ಬಯ್ಯುವುದು ರೇಸಿಯಲ್ ಬಯ್ಗುಳವಲ್ಲ, ನಮ್ಮಲ್ಲಿ ಅದು ಸೋಸಿಯಲ್ ಬೈಗುಳ ಅನ್ನೋದನ್ನ ವಿದೇಶಿಯರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನವನ್ನು ಬಿಸಿಸಿಐ ಮಾಡಿದೆಯೇ ಎಂಬುದು ಅನುಮಾನ. ಇನ್ನು ಕೆಲವರಂತೂ ಬಜ್ಜಿ ಹೇಳಿದ್ದು ಹಾಗಲ್ಲ, ಅವನು ‘ತೇರಿ ಮಾ ಕಿ...’ ಎಂದದನ್ನು ಸೈಮಂಡ್ಸ್ ‘ಮಂಕಿ’ ಎಂದು ಕೇಳಿಸಿಕೊಂಡರು ಅಂತ ಊಹಿಸುತ್ತಿದ್ದಾರೆ. ಹಾಗಾಗಿ ಅದು ಜನಾಂಗೀಯ ನಿಂದನೆ ಆಗುವುದಿಲ್ಲ. ಹೆಚ್ಚೆಂದರೆ ‘ಜನನಾಂಗೀಯ’ ನಿಂದನೆ ಆಗಬಹುದು ಅಷ್ಟೆ. ಅಂಥ ಬೈಗುಳಗಳಿಗೇನು ಯಾರದೂ ಅಡ್ಡಿ ಇಲ್ಲ, ಯಾಕೆಂದರೆ ‘ಸೂ.....ಮಕ್ಕಳಾ’ ಎಂದು ಕುಂಬ್ಳೆ ಹಾಗೂ ಧೋನಿಗೆ ಬೈದ ಆಸ್ಟ್ರೇಲಿಯಾದ ಬ್ರಾಡ್ ಹಾಗ್, ‘ಬೈದಿದ್ದು ನಿಜ, ನಮ್ಮ ಸಂಸ್ಕೃತಿಯಲ್ಲಿ ಅದು ಒಕೆ’ ಅಂತ ಹೇಳಿದ್ದಾರೆ. ಅಷ್ಟಕ್ಕೂ ಬಜ್ಜಿ ಏನೆಂದನೋ ಲಿಪ್ ರೀಡ್ ಮಾಡೋಣ ಅಂದರೆ ಟಿವಿ ರೀಪ್ಲೆಗಳಲ್ಲಿ ಅವನ ಹಿಪ್ ಮಾತ್ರ ಕಾಣುತ್ತದೆ!
*
ಚೀನಾ ತನ್ನ ಜನಸಂಖ್ಯೆ ಬೆಳವಣಿಗೆಗೆ ಕಡಿತ ಹಾಕುವಲ್ಲಿ ಯಶಸ್ಸು ಕಂಡಿದೆ. ಹಾಗಾದರೆ ಅದರ ಜನಸಂಖ್ಯಾ ನಿಯಂತ್ರಣ ಯೋಜನೆಯ ಹೆಸರು ಏನಿರಬಹುದು?
ಸೋಸಿಲಿಯ ಉತ್ತರ: ‘ಚೀನಿ ಕಮ್’!
-ರೀ

4 comments:

Sushrutha Dodderi said...

ಸಖತ್!!

Anonymous said...

hahahaha. nice
MS

Anonymous said...

ಬೊಂಬಾಟ್...ಕಾಮೆಂಟ್ ಹೆಚ್ಚಾಗಲಿ...ರೀ

ನಾವಡ

ವಿನಾಯಕ ಭಟ್ಟ said...

ಕಾಮೆಂಟ್ರಿ ಬಂಬಾಟು...