Saturday, January 19, 2008

ಕಾಮೆಂಟ್‌ರೀ

ಹದಿನಾರು ಪಂದ್ಯಗಳ ನಂತರ ಆಸ್ಟ್ರೇಲಿಯಾದ ಅಶ್ವಮೇಧದ ಕುದುರೆಯನ್ನು ಮತ್ತೆ ಭಾರತವೇ ಕಟ್ಟಿಹಾಕಿದೆ. ಬರೀ ಭಾರತವೇ ಏನು, ‘ರೆಸ್ಟ್ ಆಫ್ ದ ವರ್ಲ್ಡ್’ ಕೂಡ ಸಂಭ್ರಮಿಸುತ್ತಿದೆ.(ಆಸ್ಟ್ರೇಲಿಯಾ ಸೋಲು ಯಾರಿಗೆ ಇಷ್ಟವಿಲ್ಲ ಹೇಳಿ!) ಪ್ರತಿಯೊಬ್ಬ ಆಟಗಾರನೂ ಕಾಣಿಕೆ ನೀಡಿ ಸಾಧಿಸಿದ ವಿಜಯವೇ ಆದರೂ, ಪರ್ತ್ ಟೆಸ್ಟ್‌ನ ಗೆಲುವಿನ ಸಾರಥಿ(‘ಪರ್ಥ್’ಸಾರಥಿ ಎನ್ನೋಣವೇ?) ಮಾತ್ರ ಅನಿಲ್ ಕುಂಬ್ಳೆಯೇ. ಎದುರಾಳಿ ಕ್ಯಾಪ್ಟನ್ ಮೇಲೆ ಮಾನಸಿಕ ಆಟ ಹೂಡುವುದು ಆಸ್ಟ್ರೇಲಿಯನ್ನರ ಹಳೆಯ ಬ್ರಹ್ಮಾಸ್ತ್ರ. ಈ ಸರಣಿ ಆರಂಭವಾಗುತ್ತಿದ್ದಂತೆಯೇ ಕುಂಬ್ಳೆ ಕೈ ಚಳಕ ಇಲ್ಲಿ ನಡೆಯಲ್ಲ ಅಂತ ಅವರು ಹೇಳಿದ್ದರು ಕೂಡ. ಆದರೆ ಮೊದಲ ದಿನವೇ ಕುಂಬ್ಳೆ ಐದು ವಿಕೆಟ್ ಪಡೆದು ಉತ್ತರಿಸಿದರು. ಈಗ ಸರಣಿಯಲ್ಲಿ ಈವರೆಗೆ ಅತಿಹೆಚ್ಚು ವಿಕೆಟ್ ಪಡೆದಿರುವುದು ಕುಂಬ್ಳೆಯೇ. ಸಿಡ್ನಿ ಟೆಸ್ಟಿನಲ್ಲಿ ಆಸ್ಟ್ರೇಲಿಯಾದ ಬಂಡಾಟವನ್ನು ಕುಂಬ್ಳೆಯಷ್ಟು ಸಮರ್ಪಕ ಪದಗಳಲ್ಲಿ(ನೆಟ್ಟಗೆ ಆಡಿದ್ದು ಒಂದೇ ತಂಡ) ಬೇರೊಬ್ಬ ಕ್ಯಾಪ್ಟನ್ ಇಡೀ ಜಗತ್ತಿಗೆ ತಿಳಿಸಲು ಸಾಧ್ಯವಿತ್ತೆ? ಆ ಇಡೀ ಒಂದು ತಲ್ಲಣದ ವಾರವನ್ನು ಕುಂಬ್ಳೆ ಅದೆಷ್ಟು ಸಮರ್ಥವಾಗಿ ನಿಭಾಯಿಸಿದರು! ಅಲ್ಲಿಂದ ತಂಡವನ್ನು ಇಂಥದೊಂದು ಅನಿರೀಕ್ಷಿತ ಗೆಲುವಿಗೆ ಪ್ರೇರೇಪಿಸಿದ್ದು ಕಡಿಮೆ ಸಾಧನೆಯೆ? ಕುಂಬ್ಳೆ ಭಾರತ ತಂಡದ ಕ್ಯಾಪ್ಟನ್ ಆದದ್ದು ತೀರಾ ಆಕಸ್ಮಿಕ. ಆದರೂ ಭಾರತ ತಂಡಕ್ಕೆ ಈ ‘ವಿಶೇಷ’ಸರಣಿಯಲ್ಲಿ ಅವರ ನಾಯಕತ್ವದ ಅಗತ್ಯ ಬಹಳ ಇತ್ತು. ಇಂಥ ಸನ್ನಿವೇಶಗಳಲ್ಲಿ ಅಜರ್, ಕಪಿಲ್ ಥರದ ಆತಿ ಸಜ್ಜನಿಕೆಯ ಅಥವಾ ಗಂಗೂಲಿಯಂಥ ಅತಿ ಆವೇಶದ ಕ್ಯಾಪ್ಟನ್‌ನಿಂದ ಆಗಬಹುದಿದ್ದ ಎರಡೂ ರೀತಿಯ ಎಡವಟ್ಟುಗಳನ್ನು ತಪ್ಪಿಸಲು ಘನತೆ ಮತ್ತು ಛಲ ಎರಡೂ ಇದ್ದ ಕುಂಬ್ಳೆಯ ವ್ಯಕ್ತಿತ್ವವೇ ಬೇಕಿತ್ತು. ಹ್ಯಾಟ್ಸಾಫ್ ಕುಂಬ್ಳೆ...ನಾವೂ ಕನ್ನಡದವರೇ!
*
ಭಾರತ ರತ್ನ ಪ್ರಶಸ್ತಿ ಪ್ರಕಟಣೆಯ ಸಮಯ ಸಮೀಪಿಸುತ್ತಿರುವಂತೆ ಲಾಬಿ ಜೋರಾಗಿದೆ. ವಾಜಪೇಯಿಗೆ ಕೊಡಿ ಪರವಾಗಿಲ್ಲ ಅಂತ ಆಡ್ವಾಣಿ, ಜ್ಯೋತಿ ಬಸುಗೆ ಕೊಟ್ರೆ ತಪ್ಪೇನು ಅಂತ ಲೆಫ್ಟಿನವರು, ಕಾನ್ಶಿರಾಂಗೇ ಕೊಡಿ ಗಂಟೇನು ಹೋಗುತ್ತೆ ಅಂತ ಮಾಯಾವತಿಯೂ ಆಗ್ರಹಿಸಿದ್ದಾರೆ. ಜತೆಗೆ ಮಾತೆ ಅಮೃತಾನಂದಮಯಿ ಸೇರಿದಂತೆ ಇನ್ನೂ ನಾಲ್ಕೈದು ಹೆಸರುಗಳೂ ತೇಲಿಬಂದಿವೆ. ತಮಗೆ ಕೊಡಿ ಅಂತ ಕೇಳದೇ ಇದ್ದ ಗಣ್ಯರೆಂದರೆ ನಮ್ಮ ಗೌಡರು ಮತ್ತು ಜಯಲಲಿತಾ ಮಾತ್ರ. ಗೌಡರಿಗೆ ಸದಾ ಪುತ್ರ‘ರತ್ನ’ರ ಮೇಲೇ ಗಮನವಿರುವ ಕಾರಣ ಅವರಿಗೆ ಭಾರತರತ್ನ ಅಷ್ಟು ಮಹತ್ವದ್ದಾಗಿ ಕಂಡಿರಲಿಕ್ಕಿಲ್ಲ. ಜಯಲಲಿತಾಗೇನಾದರೂ ಈ ಸಮ್ಮಾನ ದೊರಕುವುದಾದರೆ ಅದನ್ನು ‘ಭಾರದ’ ರತ್ನ ಎಂದೆನ್ನಬೇಕಾಗುತ್ತದೆ ಅಂದರೆ ಜಯಾರ ತೂಕದ ಬಗ್ಗೆ ಕಮೆಂಟು ಎಂದುಕೊಂಡರೆ ನನ್ನ ತಪ್ಪಲ್ಲ. ತಮಿಳಿನಲ್ಲಿ ‘ತ’ ಅಕ್ಷರವನ್ನು ‘ದ’ ಎಂದೇ ಉಚ್ಚರಿಸುವುದರಿಂದ ತಮಿಳರ ಬಾಯಲ್ಲಿ ಅದು ‘ಭಾರದ’ ರತ್ನವೇ ಆಗುತ್ತಲ್ಲವೆ? ಅಕಸ್ಮಾತ್ ಜಯಾರಿಗೆ ಈ ಪ್ರಶಸ್ತಿ ಬಾರದಿದ್ದರೆ ಆಗಲೂ ಅದನ್ನು ‘ಬಾರದ’ ರತ್ನ ಅಂತ ಕರೆಯಬಹುದು ಅನ್ನೋದು ಮಿಸ್ ಸೋಸಿಲಿಯ ಅತಿ ಜಾಣ್ಮೆಯ ಕಮೆಂಟು.


*
ಉಡುಪಿಯ ಕೃಷ್ಣನಿಗೆ ಪೂಜೆ ಮಾಡಲು ಯಾರು ಅರ್ಹರು ಎಂಬ ಪರ್ಯಾಯ ವಿವಾದದ ಜತೆಗೇ ಇನ್ನೊಂದು ಪರ್ಯಾಯ ವಿವಾದವೂ ಕಳೆದ ವಾರವಿಡೀ ಪ್ರತಿ ದಿನ ಮುಖಪುಟದಲ್ಲಿ ಜಾಗ ತಿಂದಿತು. ಅದರ ಕೇಂದ್ರ ಬಿಂದುವೂ ಕೃಷ್ಣನೇ(ಬಾಂಬೆ ಕೃಷ್ಣ). ಚರಿಷ್ಮಾ ಉಳ್ಳ ನಾಯಕರೇ ಇಲ್ಲದೆ ತೊಳಲಾಡುತ್ತಿರುವ ರಾಜ್ಯ ಕಾಂಗ್ರೆಸ್, ಖರ್ಗೆಗೆ ‘ಪರ್ಯಾಯ’ವಾಗಿ ಮಹಾರಾಷ್ಟ್ರ ರಾಜ್ಯಪಾಲರಾಗಿರುವ ಕೃಷ್ಣರನ್ನು ಕರೆತರಲು ಮಾಡಿದ್ದ ಯೋಜನೆಯೇ ಅದು. ಕೃಷ್ಣಾ ನೀ ಬೇಗನೆ ಬಾರೋ ಎಂಬ ಬೆಂಬಲಿಗರ ಕರೆಗೆ ಓಗೊಟ್ಟು ಅವರೂ ಬರಲು ಸಿದ್ಧರಾಗಿ ಸೋನಿಯಾ ಹತ್ತಿರ ‘ರಾಜ್ಯಪಾಲರ ಕೆಲ್ಸ ಬೋರೋ ಬೋರು’ ಎಂದು ಹೇಳಿದ್ದರಾದರೂ ಕೃಷ್ಣಾವತಾರಕ್ಕೆ ಇನ್ನೂ ಕಾಲ ಕೂಡಿಬಂದಂತಿಲ್ಲ.

2 comments:

ಸುಧನ್ವಾ said...

೧. ನದಿಯ ನೆನಪಿನ ಹಂಗು ಮುಖಪುಟ ಅಷ್ಟೊಂದು ಇಷ್ಟವಾಗಿಲ್ಲ. ಅಕ್ಷರ ಹೆಚ್ಚಾಯಿತು, ಜತೆಗೆ ದೊಡ್ಡದಾಯಿತು ಅನಿಸುತ್ತಿದೆ. 'ಮಳೆ ತೊಳೆದ ಕಲ್ಲುಗಳು’ ಮುಖಪುಟಕ್ಕೇ ಫುಲ್‌ಮಾರ್ಕ್ಸ್.

೨. 'ಇನ್ನೆಷ್ಟು ಬಾಕಿ ಇದೆ ಹೇಳು ರಾತ್ರಿ’ ಎಂಬ ಒಂದು ಸಾಲು, ಯಾರೋ ಮಧುರವಾಗಿ ಹಾಡುತ್ತಿರುವ ರಸಕಾವ್ಯ ಉದ್ದೀಪಿಸುವ ಭಾವದಂತೆ ಅನೂಹ್ಯ ಸುಖ ನೀಡುತ್ತಿದೆ.

೩.'ಕಾಮೆಂಟ್ ರೀ’- ಸುಖಾಸುಮ್ಮನೆ ಕಮೆಂಟ್ ಮಾಡೋಕೂ ಭಯವಾಗುವಷ್ಟು ಚೆನ್ನಾಗಿದೆ !

Anonymous said...

wah kyaa kaamenTree hai
:-)
MS

~~~~~~ಮೀ ನ ಹೆ ಜ್ಜೆ