Friday, February 13, 2009

ಪ್ರೇಮ ಹಳೆಯದಾದರೇನು ?

ಹೊಸ ಪ್ರೇಮಿಗಳ ದಿನ ಬಂದಿದೆ. ನನ್ನ ಬಳಿ ಹೊಸ ಪದ್ಯಗಳಿಲ್ಲ. ಅದಕ್ಕೇ ಇದೇ ಬ್ಲಾಗಿನಲ್ಲಿ ಯಾವ್ಯಾವಾಗಲೋ ಪ್ರಕಟವಾಗಿದ್ದ ಪದ್ಯಗಳಲ್ಲೇ ಕೆಲವನ್ನು ಆಯ್ದು ಮತ್ತೆ ಇಲ್ಲಿ ಜೋಡಿಸಿದ್ದೇನೆ. ಹಳೆಯ ನೆನಪುಗಳು ಮಧುರ ಎಂದಮೇಲೆ ಹಳೆಯ ಪದ್ಯಗಳು ಯಾಕಲ್ಲ? ಹಾಡು ಹಳೆಯದಾದರೇನು ಭಾವ ನವನವೀನ ಇತ್ಯಾದಿ ಎಲ್ಲ ಕೆಟ್ಟ ಲಾಜಿಕ್ಕುಗಳ ಸಹಾಯ ಪಡೆದು ಮತ್ತೊಮ್ಮೆ ಓದಲು ನಿಮ್ಮನ್ನು ಒತ್ತಾಯಿಸುತ್ತಿದ್ದೇನೆ.  ಕ್ಷಮಿಸಿಬಿಟ್ಟು ಓದಿ. ಅಥವಾ ಓದಿಬಿಟ್ಟು ಕ್ಷಮಿಸಿ!

 
*
ನಡುರಾತ್ರಿ ಜತೆಯಾಗಿ ಕೇಳಿದ
ಹಾಡಿನ ವಿಷಾದ ರಾಗ
ಎಲ್ಲಿಂದ ತೇಲಿ ಬಂದು
ನಡುಗಿಸಿತು ಮನವ ಈಗ?

*
ಎಷ್ಟೊಂದು ಸಲೀಸಾಗಿ
ಹೊಳೆದಿತ್ತು ಹೆಸರದು ಅಂದು
ಏನೆಂದು ಕರೆಯುತಿರುವೆಯೊ
ಪುಟ್ಟ ಮಗಳನು ಇಂದು

*
ಅವನ ಜತೆ ಬೆಚ್ಚಗೆ ನೀನು
ಮಲಗಿರುವೆ ಮನೆಯ ಒಳಗೆ
ಮಳೆಯ ರಾತ್ರಿ ನಡುಗುತ್ತಾ
ನಿಂತಿರುವೆ ನಾನು ಹೊರಗೆ
ಮಳೆ ಬರುತ್ತಲೇ ಇರಲಿ ಹೀಗೇ
ನನ್ನ ನಡುಕ ನಿನಗೆ ನಿನ್ನ
ನಡುಕ ನನಗೆ ಕೇಳಿಬರದಿರಲಿ

*
ಎಷ್ಟೋ ಹೊತ್ತು
ಬರೀ ಸೂರ್ಯಕಾಂತಿ ಹೂವನೇ
ನೋಡಿದ ಬಳಿಕ ಕಂಡ
ಹಳದಿ ಚಿಟ್ಟೆ
ಯಾತಕೋ ಸರಕ್ಕನೆ
ನೀನು ತಿರುಗಿದಾಗ
ಕಂಡ ನುಣುಪು ಬಿಳಿ ಹೊಟ್ಟೆ
*
ಮುಸ್ಸಂಜೆ ಹೊತ್ತಲ್ಲಿ
ಕಣ್ಣಿಂದ ಒಳತೂರಿದ
ಚಿಟ್ಟೆ ನೀನು
ಈ ನಡು
ರಾತ್ರಿ ವೇಳೆ ಮೈತುಂಬಿ
ಫಡಫಡಿಸುವೆ ಏನು?

*
ಮಾತು ಕತೆ ಒಂದೂ ಬೇಡ
ಸುಮ್ಮನೆ ಬಂದು ಕೂಡು
ಮಿಸುಕಾಡದೆ ಮಧುವ
ಹೀರೊ ಚಿಟ್ಟೆಯ
ಒಮ್ಮೆ ನೋಡು

*
ಮಧ್ಯಾಹ್ನವ ಕಳೆಯುತಿದ್ದ
ಉದ್ಯಾನದ ಬೆಂಚು
ಮಳೆಯ ರಾತ್ರಿ ಹೊಳೆಯುತಿದ್ದ
ಒದ್ದೆ ಮುಖದ ಮಿಂಚು

ಒಬ್ಬರಿಗೆ ಇನ್ನೊಬ್ಬರು
ಕಾದು ಕೆಂಪಾದ ತಿರುವು
ಕಾಡಿದರೂ ಇರಲಿ ನೆನಪು
ಬೇಡ ಜಾಣ ಮರೆವು

ನಿನ್ನ ನೆನಪಲೆ ಕೊರಗುತಿರುವೆ
ಎನುವರೆಲ್ಲ ಜನ
ನಿನ್ನ ನೆನೆದೇ ಬದುಕುತಿರುವೆ
ಅರಿಯರೆನ್ನ ಮನ

*
ಶುಭಾಶಯ ಕೋರುವ ಹೆಸರಲ್ಲಿ
ಮೃದು ಅಂಗೈಯ ಮುಟ್ಟಿದೆ
ಸುಣ್ಣ ಆಗಿದೆ ಎಂದು ಸುಳ್ಳು ಹೇಳಿ
ಬೆನ್ನನೊಮ್ಮೆ ಮುಟ್ಟಿದೆ
ರಸ್ತೆ ದಾಟುವಾಗ 'ಎಚ್ಚರ' ಎಂದು
ತೋಳು ಮುಟ್ಟಿ ಕಂಪಿಸಿದೆ

ಯಾವ ನೆಪವೂ ಇಲ್ಲದೆ ತಬ್ಬಿ
ಮನವ ಮುಟ್ಟುವ ಹಂಬಲ ಮಾತ್ರ
ಉಳಿದೇ ಹೋಯ್ತು

*
ನಿನ್ನ ಕರೆಗೆ ಹಾಡುತ್ತಿತ್ತು
ನಿನ್ನ ಕೋಪಕೆ ಕಂಪಿಸುತ್ತಿತ್ತು
ಮುದ್ದು ಮಾಡಿದರೆ ಬಿಸಿಯಾಗುತಿತ್ತು
ಈಗ ಕ್ರೆಡಿಟ್‌ ಕಾರ್ಡಿನವರ ಕಾಟಕ್ಕೆ
ಕಂಗೆಟ್ಟಿದೆ ನನ್ನ ಮೊಬೈಲು
ನಿನ್ನ ನಂಬರು ಚಾಲ್ತಿಯಲ್ಲಿಲ್ಲ

*
ನೀನು ತೊರೆದು ಹೋದ ಮೇಲೆ
ನಾನು ಗಡ್ಡ ಬಿಟ್ಟಿಲ್ಲ, ಕುಡಿವುದ ಕಲಿತಿಲ್ಲ
ಕೆಲಸಕ್ಕೆ ಹೋಗುವುದನ್ನೂ ಬಿಟ್ಟಿಲ್ಲ
ನಿನ್ನ ನೆನಪಲ್ಲಿ ಕಣ್ಣೀರು ಸುರಿಸುತಿಲ್ಲ
ಈ ಪದ್ಯ ಬರೆಯುವಾಗಲೂ ಕಂಪಿಸುತಿಲ್ಲ
ಹೇಳು, ನಿನಗೆ ಖುಷಿಯಾಯಿತೆ?

*
ನಿನ್ನ ಮುದ್ದಿಸಿ ಮರಳುತಿದ್ದೆ
ಜೋರುಮಳೆಗೆ ಸಿಕ್ಕಿಬಿದ್ದೆ
ಒಳಗೂ ಒದ್ದೆ ಹೊರಗೂ ಒದ್ದೆ
ಕಣ್ಣ ತುಂಬ ಸುಖದ ನಿದ್ದೆ

*
ಬಟನ್‌ಗೆ ಸಿಲುಕಿದ ಕೂದಲು ಇಲ್ಲ
ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ
ನಾವು ಕೂಡಿದ್ದಾದರೂ ನಿಜವೆ ತಿಳಿಯುತಿಲ್ಲ
ಒಂದೇ ಸಾಕ್ಷಿ, ಆಗಿನಿಂದ ನಿದ್ರೆ ಇಲ್ಲ

*
ಬೀಡಾ ಹಾಕಿಕೊಂಡು ತುಟಿ ಕೆಂಪ ಮರೆಸಿದೆ
ಸೆಂಟು ಪೂಸಿಕೊಂಡು ಮೈಕಂಪನಳಿಸಿದೆ
ಗೆಳತಿ, ನಿನ್ನ ಕೂಡಿ ಮನೆಗೆ ಮರಳಿದವನು
ಎಷ್ಟು ನಟಿಸಿದರೂ ಕಣ್ಣ ಹೊಳಪನಡಗಿಸದಾದೆ

*
ನಾವು ಅಷ್ಟೊಂದು ಮೈ ಮರೆಯಬಾರದಿತ್ತು
ಈಗ ನೋಡು ಮೆಲುಕುಹಾಕಲು ಕೂತರೆ
ಕೂಟದ ಒಂದು ವಿವರವೂ ನೆನಪಾಗುತಿಲ್ಲ
ಈ ತುಟಿಯ ಗಾಯವೂ ಏನೂ ಹೇಳುತಿಲ್ಲ

17 comments:

Anonymous said...

ನಿಜ.
ಹಾಡು ಹಳೆಯದಾದರೇನು, ಭಾವ ನವನವೀನ!!
ಹಿಂದೆ ಓದಿರಲಿಲ್ಲ. ಚೆನ್ನಾಗಿವೆ.

- ಚೇತನಾ

Anonymous said...

ಘೋರ 'apara'adha. ಆದರೂ ಕ್ಷಮಿಸಿದ್ದೇವೆ.ಹೊಸತನ್ನು ನೀರಿಕ್ಷಿಸುತ್ತಾ.....

ಅನಾಮಧೇಯ

VENU VINOD said...

last one is very nice ;)

Anonymous said...

ಪದ್ಯಕ್ಕಿಲ್ಲ expiry date

Keshav.Kulkarni said...

नजर नजर से मिलाकर शराब पीते हैं ।
हम उन को पास बिठाकर शराब पीते हैं ॥

ಜಗಜೀತ್ ಸಿಂಗನ ಗಜಲು ನೆನಪಾಯಿತು.

- ಕೇಶವ (www.kannada-nudi.blogspot.com)

sunanda said...

ರಘು, ಮಿನಿಗವನ ಸಾಕಪ್ಪ, ಒಳ್ಳೆಯ ಕತೆಗಾರ ನೀನು.. ಕತೆ ಬರಿ ಅಂತ ಏಸೊಂದು ಸಲ ಹೇಳಿದ್ದೇನೆ.. ನನ್ನ ಮಾತಿಗೆ ಮರ್ಯಾದೆಯೇ ಇಲ್ಲವೇ? -ಸುನಂದಾ

Anonymous said...

minigavana haleyadaadarenu ......

Anonymous said...

very good

Anonymous said...

male saddhinali naduka matra alla manasina alalu, doorada vedhane, virahada vyahe yawudu keladirali anta bayasodu sari alwa?

Praveen Rao said...

yaako..yeno.."Choolenedo..in hotonko kuch aur nahi hai jaam hai" Haadu nenapaythu...Hale haadu adru eglu ishta agatte..!!!

-
Praveen Rao, Bangalore.

Anonymous said...

neevu gadda bittilla,kudiyodu kaltilla, kelasa bittilla, adare avalannu kushiyagiroku bidtilvalla maarayre! nimma hanigavanagavalanna odi odi vyathe padtaleno!

Anonymous said...

ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟ

ಅನಿಕೇತನ ಸುನಿಲ್ said...

ಗೆಳೆಯ ಅಪಾರ,
ನಿಮ್ಮನ್ನ ಗೆಳೆಯ ಅಂತ ಕರೆಯಬಹುದೋ ಇಲ್ಲವೊ ಗೊತ್ತಿಲ್ಲ...ಆದರೆ ನಿಮ್ಮ ಪದ್ಯಗಳು ನನ್ನ ಹೃದಯದೊಡನೆ ಗೆಳೆತನ ಬೆಳೆಸುವ ಹುನ್ನಾರ ನಡೆಸಿವೆ.
ಅದಕ್ಕೆ ನಿಮ್ಮ ಬಳಿ ದೂರು ಕೊಡಲು ಬಂದಿದ್ದೀನಿ. :)
ಹೇಯ್ ಸಿಕ್ಕಾಬಟ್ಟೆ ಚೆನ್ನಾಗಿದ್ದಾವಪ್ಪ...
"ಶುಭಾಶಯ ಕೋರುವ ಹೆಸರಲ್ಲಿ" ತುಂಬಾ ಇಷ್ಟವಾಯ್ತು :)
ಇತರ ಪದ್ಯಗಳೂ ಚೆಂದ ಚೆಂದ........
ಶುಭಾಶಯಗಳೊಂದಿಗೆ,
ಅನಿಕೇತನ :)

nagathihalliramesh said...

ಅಕ್ಕರೆಯ ಕಗು ನೀನು ನಿನ್ನ ಬರವಣಿಗೆ, ನಿನ್ನೆಲ್ಲ ಬದುಕನ್ನು ಅವ್ವ ನೊಂದಿಗೆ ನೋಡುವ ಸೌಭಾಗ್ಯ ನನ್ನದು ನಿನ್ನದು. ಸದಾ ಕಾಡುವ ನಿನ್ನ ಮಗುವಂತ ಮನಸ್ಸು ನನ್ನಲ್ಲಿ ಸಾವಿರಾರು ಆನೆಬಲ ತಂದಿದೆ. ಕೂಡಿ ಕಟ್ಟುವ ಬಾಳಿಸುವ ಕಾಲವೇ ನಮ್ಮತ್ತ ಸರಿದು ಬಂದಿದೆ. ಮಾಮೂಲಿ ಗಾಂಧಿ ನಾಡಿನೆಲ್ಲೆಡೆ ಪಸರಿಸಲಿ. ಯುನಿವರ್ಸಿಟಿ, ಅಕಾಡೆಮಿ ಉಪನ್ಯಾಸ ಗಳೆಲ್ಲ ಕೆ.ಎಚ್.ರಂಗನಾಥ್, ಎಚ್.ಜಿ.ಗೋವಿಂದೇಗೌಡ, ಸ.ರಘುನಾಥ, ಕೊಟಗನಹಳ್ಳಿ ರಾಮಯ್ಯ, ಜೆನ್ನಿ, ಮಹಂತೇಶ ನವಕಲ್, ರಂಜಾನ್ ದರ್ಗಾ, ಜೆಸ್ಟಿಸ್. ನಾಗಮೋಹನ್ ದಾಸ್, ಬಾಲೆನಹಳ್ಳಿ ನರಸಿಂಹಮೂರ್ತಿ, ಎಂ,ಎಸ್,ಜಹಂಗೀರ್, ಸೂಫಿ ಸೈಂಟಿಸ್ಟ್. ವಿ.ಟಿ.ಪದ್ಮನಾಭ, ಎಸ್.ದಿವಾಕರ್, ವಸುಧೇಂದ್ರ, ವಿ.ಆರ್,ಕಾರ್ಪೆ೦ಟರ- ಇನ್ನೂ ಅನೇಕಾನೇಕ ಮಂದಿಯನ್ನು ಕಂಡು ಅ ನಿಜವಾದ ಕಲೆಯನ್ನು ಕಾಣಬೇಕಾಗಿದೆ. ಆಗ ಅವಕ್ಕೆ ವಸ್ತುಗಳ ಹಿಂಬಾಲಿಸುವ ಗುಣ ಕಾಣೆಯಾಗಿ ಘನ ಕಾಣುವುದು. ನಿನ್ನೆ ರಾತ್ರಿಯಿಂದ ಒಂದು ಜೀವ ಮತ್ತೆ ಮತ್ತೆ ಕಾಡುತ್ತಿದೆ, ಯಾಕೆ ಗೊತ್ತ ಬರೀ ಬಿಟ್ಟಿ ಉಪದೇಶಗಳನ್ನು ಕೊಡುವ ಬರೆಯುವ ಮಹಾನ್ ಕವಿಗಳು, ಕಥೆಗಾರರು, ನಾಟಕಕಾರರ ಬರಿದಾದ ಬೋಳಿಸುವ ಬದುಕ ಕಂಡು ನೊಂದ ಬೆಂದ ನನ್ನ ಮನಸ್ಸಿಗೆ ಸಾಂತ್ವನ ಸಿಕ್ಕಿದ್ದು, ಬದುಕ ಕಟ್ಟಿಕೊಳ್ಳಲು ಹೆಣಗುತ್ತಿದ್ದ, ಕೊರಗುತ್ತಿದ್ದ ಬೇಸತ್ತು ಅಳುತಿದ್ದ ಆ ಕೇರಿ ಹುಡುಗನಿಗೆ ಬದುಕ ಕಟ್ಟಿಕೊಡಲು ಮುಂದೆಬಂದ ತಾಯ್ತನದ ಅತುಕೊಳ್ಳುವ ಜೀವ ವಸುಧೇಂದ್ರನ ಪ್ರೀತಿ, ಕಾಳಜಿ, ನನಗೆ ನನ್ನವ್ವ ಸಿಕ್ಕಿದಂತಾಗಿದೆ. ಇಷ್ಟು ಸಾಕು. ಮುಂದೆ…
-ನಾಗತಿಹಳ್ಳಿ ರಮೇಶ.

Anonymous said...

deep sense of lost and longing is powerfully captured. I can read these 100 times. Thanks apara.

ashok

ಸಾಗರದಾಚೆಯ ಇಂಚರ said...

ಸೂಪರ್, ಕವನ ತುಂಬಾ ಇಷ್ಟವಾಯಿತು

Anonymous said...

thumba chennagide.
gazals kelidavrige adanne kannadisideera antha ansuthe.
kelavanthu bhavanuvada aagide.
haagantha helidre olledithu