Friday, November 30, 2007

ಪುಸ್ತಕ ಸೊಗಸು

ಜಯಂತ ಕಾಯ್ಕಿಣಿಯವರ `ಶಬ್ದತೀರ' ಅಂಕಣ ಬರಹ ಸಂಗ್ರಹಕ್ಕೆ ಪುಸ್ತಕ ಪ್ರಾಧಿಕಾರದ `ಪುಸ್ತಕ ಸೊಗಸು' ಬಹುಮಾನ(ಮೂರನೇ ಸ್ಥಾನ) ಬಂದಿದೆ. ಪುಸ್ತಕದ ಒಪ್ಪ ಓರಣಗಳನ್ನು (ಮುಖಪುಟ, ಒಳಪುಟ ವಿನ್ಯಾಸ, ಕಾಗದ ಗುಣಮಟ್ಟ ಇತ್ಯಾದಿ)ಪರಿಗಣಿಸಿ ನೀಡಲಾಗುವ ಬಹುಮಾನವಿದು. ಶಬ್ದತೀರದ ವಿನ್ಯಾಸ ನನ್ನದಾದರೂ ಕಾಯ್ಕಿಣಿಯವರ ಕಾಣಿಕೆಯೇ ಹೆಚ್ಚು. ರೇಖಾಚಿತ್ರ ನೀಡಿದ ಇಕ್ಬಾಲ್‌ ಅವರಿಗೆ ಥ್ಯಾಂಕ್ಸ್‌.
ಮೊದಲ ಸ್ಥಾನ ಗಳಿಸಿದ 'ಪಕ್ಷಿ ಪ್ರಪಂಚ' ಹಾಗೂ ಎರಡನೇ ಸ್ಥಾನ ಗಳಿಸಿದ `ಚಾಚಾ ನೆಹರೂ ಮತ್ತು...' ಪುಸ್ತಕಗಳ ಮುಖಪುಟಗಳನ್ನೂ ಇಲ್ಲಿ ಕೊಟ್ಟಿದ್ದೇನೆ. ನಾಲ್ಕನೇ ಬಹುಮಾನ ಗಳಿಸಿದ `ಗುಬ್ಬಿಯ ಸ್ವರ್ಗ' (ಭಾಗೀರಥಿ ಹೆಗಡೆ ಕವಿತಾ ಸಂಗ್ರಹ)ಪುಸ್ತಕದ ಮುಖಪುಟ ನಿಮಗೇನಾದರೂ ಸಿಕ್ಕರೆ ದಯವಿಟ್ಟು ನನಗೆ ಇ ಮೇಲ್‌ ಮಾಡಿ: raghuapara@gmail.com . ಇವುಗಳ ಜತೆ ಸೇರಿಸುತ್ತೇನೆ.

Monday, November 26, 2007

ಹರೀಶ್ ಕೇರನ ಎರಡು ಕವಿತೆ

-೧-
ಅಪಾರ ದುಃಖದ ಕಡಲನ್ನು
ದಾಟಿಸಬಹುದು ಅಂತ
ಕವಿತೆಯ ನಂಬಿಕೊಂಡೆ


ಅದು ನನ್ನ ನಡುನೀರಿನಲ್ಲಿ ಕೈಬಿಟ್ಟಿದೆ
ಅಲೆಗಳೋ ಲಯತಪ್ಪಿವೆ
ನಾದದ ಹಡಗೊಂದು
ದೂರದಲ್ಲಿ ಹಾದುಹೋಗಿದೆ


ನಾನೀಗ ಉಪ್ಪಿನ ಗೊಂಬೆ
ಅಬ್ಬರದ ಕಡಲು
ಅಪರಂಪಾರ


-೨-
ಕವಿತೆಯ ಬಗೆಗೆ ನನಗೆ
ಸಿಟ್ಟು ಮತ್ತು ಪ್ರೀತಿ


ಪ್ರೀತಿ ಯಾಕೆಂದರೆ ಅದು ನನ್ನಿಂದ
ಏನನ್ನೂ ಬೇಡುವುದಿಲ್ಲ
ಮುದ್ದು ಬೆಕ್ಕಿನಂತೆ ಬೆಚ್ಚಗೆ ಜತೆಗಿರುತ್ತದೆ


ಸಿಟ್ಟು ಯಾಕೆಂದರೆ ಅದು ನನ್ನ
ದುಃಖವ ದೂರ ಮಾಡುವುದಿಲ್ಲ
ಅತೃಪ್ತಿಯ ನೋವಿಗೆ
ಅರಿವಿನ ಉಪ್ಪು ಸೇರಿಸುತ್ತದೆ


ಮಾತು ಎಲ್ಲವ ಬಚ್ಚಿಡುತ್ತದೆ
ಕವಿತೆ ಹೇಳಿಯೂ ಉಳಿಸುತ್ತದೆ


~ಹರೀಶ್ ಕೇರ

Friday, November 23, 2007

ಮದ್ಯಸಾರ ~ ಏಳನೇ ರೌಂಡು

1
ಎಲ್ಲೋ ಒಮ್ಮೆ ಅಪರೂಪಕ್ಕೆ
ತೆರೆಯುತ್ತಣ್ಣ ಮನದ ರೆಕ್ಕೆ
ಕುಡಿದಾಗೆಲ್ಲ ತೇಲಾಡ್‌ಲಿಕ್ಕೆ
ಆಗಲ್ಲಣ್ಣ, ಅದೂ ಲಕ್ಕೇ


2
ಬೇಕಾಬಿಟ್ಟಿ ಕುಡಿತಾ ಹೋದ್ರೆ
ಬದುಕೇ ಸರ್ವನಾಶ
ಮನಸುಕೊಟ್ಟು ಕುಡಿದು ನೋಡಿ
ಶೀಷದಲ್ಲೂ ಈಶ

3
ಬೇಡ್ಕೊಂತೀನಿ ಬಾರಂಗಳದಲಿ
ನೆರೆದಿರುವ ಸಮಸ್ತ ಜನಕೆ
ಕುಡಿದು ಮಾಡದಿರಿ ಉಪದ್ರವ
ಕಳೆಯಬೇಡಿ ದ್ರವದ ಘನತೆ

4
ದೊಡ್ಡ ನೋವ ಹೀರಿಕೊಳುವ
`ದ್ರವ'ತಾರೆ ಹೆಂಡ
ಸಣ್ಣತನವ ಕಾರಿಕೊಳಲು
ಕುಡಿವನೆಂಥ ಭಂಡ?

5
ಬಿಟ್ಟು ಹೊರಟಾಗ ಮನ ಅರಚಿತ್ತು
ಎದೆಯ ತುಂಬೆಲ್ಲಾ ಕಾಟು ಚಿತ್ತು
ತಿರುಗಿ ಬಂದಾಗಾಕೆ ನಾ ಕುಡಿದು ಚಿತ್ತು
ಬಾಟಲೆದುರು ಪ್ರೇಮ ಯಕಃಶ್ಚಿತ್ತು

Tuesday, November 20, 2007

ಗೆಳೆಯ ಸುಧನ್ವನ ಒಂದು ಹೊಸ ಕವಿತೆ


~ಹೊ ರ ಟಾ ಗ~

ಮಿನುಗುತ್ತಿದ್ದ ಅಮ್ಮನ ಮುಖ
ಇದ್ದಕ್ಕಿದ್ದಂತೆ ಆರಿಸಿದ ದೀಪ.
ಕಣ್ಣುಗಳು ಬಾಡಿ, ಗಂಟಲ ಸೆರೆ ಉಬ್ಬಿ
‘ಛೆ, ಇವತ್ತು ಗಿಡಕ್ಕೇ ನೀರೇ ಹಾಕಿಲ್ಲ’
ಎಂಬ ವಿಷಯಾಂತರ ಯತ್ನದಲ್ಲಿ
ಅಪ್ಪ ಬಂದು ಅಮ್ಮನ ಸ್ವರದಲ್ಲಿ ಮಾತಾಡುತ್ತಾರೆ
ಕಂಪಿಸುತ್ತದೆ ಅವಳ ದನಿ.


ಕೊನೇಕ್ಷಣದಲ್ಲಿ ಮತ್ತೊಂದಷ್ಟು ಕೆಲಸಗಳ ನೆನಪಿಸಿಕೊಂಡು
‘ಹಾಗಿದ್ರೆ ಪೈಪ್ ಹಾಕೊ ಕೆಲ್ಸ, ಸ್ಕೂಟರ್ ರಿಪೇರಿ ಮಾಡಿಸ್ತೇವೆ,
ಹೊಸ ಡ್ರಮ್, ಒಂದು ಫೈಬರ್ ಚಯರ್ ತಗೊಳ್ತೇವೆ ’ ಕ್ಷಣ ತಡೆದು
‘ಮತ್ತೆ ಎಂತದ್ದಕ್ಕೂ ಮುಂದಿನ ತಿಂಗಳು ಬರ್‍ತೀಯಲ್ಲ’
ಎಂದು ಒಳನಡೆಯುತ್ತಾಳೆ, ಕತ್ತಲಲ್ಲಿ ಕೈಬೀಸುತ್ತೇನೆ.

ಅಂಗನವಾಡಿಗೆ, ಶಾಲೆಗೆ ಹೊರಟಾಗ- ಇದೇ ಅಮ್ಮ
ಉಲ್ಲಾಸದ ಮೂಟೆ; ದೂರದ ಕಾಲೇಜಿಗೆ ಹೊರಟಾಗ ಕೊಂಚ ಮಂಕು
ಅಪ್ಪನೇ ಹೊರಟುಹೋದಾಗ ನಾಲ್ಕು ದಿನಗಳ ಸಂಕಟ
ಮತ್ತೆ ಒಳಗೊಳಗೆ ಬೇಯುತ್ತ ಬಸಿವ ಬೆವರು, ದೇವರು ದಿಂಡರು.

ಅವಳು ಯಾವತ್ತೂ ಎಲ್ಲಿಗೂ ಹೊರಡುವುದಿಲ್ಲ
ಬಾ ಎಂದರೂ ಇಲ್ಲ, ಹೋಗೆಂದರೂ ಇಲ್ಲ
ಕಾರಣವಿಷ್ಟೆ-ಅವಳು ಹೊರಟಾಗ
ಕಳುಹಿಸಿಕೊಡಲು ಯಾರೂ ಇರುವುದಿಲ್ಲ.
~ಸುಧನ್ವಾ ದೇರಾಜೆ

Thursday, November 15, 2007

ಮದ್ಯಸಾರ- ಆರು


ಕುಡುಕನ ಮಾತಿವು ಏನು ಕೇಳುವಿರಿ
ವಚನದ ಸಾಲಲ್ಲ, ವಾಚನವೂ ಸರಿ ಇಲ್ಲ
ದಾಸರ ಪದವಲ್ಲ, ಉದಾಸರ ಪದವೆ ಎಲ್ಲ
ಭಜನೆ ತರಹದವಲ್ಲ, ವಿಭಜನೆ ವಿರಹದವು


*
ಹೆಂಡತಿಗೆ ಹೊಡೆಯುತ್ತೇವೆಂಬುದು ಹಸೀ ಸುಳ್ಳು
ದುಃಖವಾದಾಗ ಒಂದಿಷ್ಟು ಎಣ್ಣೆ ಹೊಡೆಯುವುದು ನಿಜ
ಪುಕಾರು ಮಾಡುವಿರೇಕೆ ನಡತೆ ಸರಿ ಇಲ್ಲೆಂದು
ಕುಡಿದಾಗ ಒಂದಿಷ್ಟು ಹೆಜ್ಜೆ ತಪ್ಪುವುದು ನಿಜ


*
ಮದ್ಯದ ಸೆಷನ್ನು ಯಾವತ್ತೂ ಅಪೂರ್ಣವೇ
ಮಧ್ಯದಲ್ಲೇ ಏಳಬೇಕು ತುಂಬಿದ್ದರೂ ಬಟ್ಟಲು
'ಕ್ವಾರ್ಟರ್' ಫೈನಲ್ಲೇ ಇಲ್ಲಿ ಕೊನೆಯ ರೌಂಡು
ಮುಗಿಸಲೇಬೇಕೀಗ ಸೇಫಾಗಿ ಮುಟ್ಟಲು


*
ಗುಂಡು ಹಾಕುವುದು ತಪ್ಪು
ಎಣ್ಣೆ ಹೊಡೆಯುವುದು ತಪ್ಪು
ಡ್ರಿಂಕ್ಸ್‌ ಮಾಡುವುದು ತಪ್ಪು
ನೈಂಟಿ ತಗಳುವುದು ತಪ್ಪು
ಮದ್ಯವನ್ನು ಕುಡಿಯುವುದೇ ಸರಿ!


*
ಒಂಟಿ ಬಾಳನೂ ಸವೆಸಿಬಿಡಬಹುದು
ತಪಿಸಲೊಂದು ಸಿಗದ ಪ್ರೇಮವಿದ್ದರೆ
ಇರಿಯುವ ದುಃಖವೂ ಹಿತವಾದ ನೋವು
ಎರಡೇ ಎರಡು ಪೆಗ್ಗು ಒಳಗೆ ಬಿದ್ದರೆ


(ಈ ಕುಡುಕನ ಪದಗಳನ್ನು ಮೆಚ್ಚಿ ಬರೆದ 'ಅವಧಿ' ಬ್ಲಾಗ್‌ಗೆ ಕೃತಜ್ಞತೆ)

Monday, November 12, 2007

ನನ್ನ ಕೆಲ ಮುಖಪುಟಗಳು'ಜನಗಳ ಮನ' ಪುಸ್ತಕದ ಜನರಾಶಿ ರಾವ್ ಬೈಲ್‌ ಅವರ ರಚನೆ. 'ಕಲ್ಪನೆಗೆ ಕನ್ನಡಿ'ಯ ಫೋಟೊ ಸುದ್ದಿಚಿತ್ರ. 'ಬೆತ್ತಲೆ ಜಗತ್ತಿ'ನ ಬರಿಮೈ ಮಗು ಇಂಟರ್ನೆಟ್‌ದು. ಶಾರದಾಪ್ರಸಾದ್‌ ಚಿತ್ರ ತೆಗೆದದ್ದು ವಿಶ್ವೇಶ್ವರ ಭಟ್. 'ಮತ್ತಷ್ಟು ವಕ್ರತುಂಡೋಕ್ತಿ'ಯ ಚಿತ್ರ ಬೆಂಗಳೂರಿನ ಚಿತ್ರಸಂತೆಯಲ್ಲಿ ಎರಡು ವರ್ಷದ ಹಿಂದೆ ನಾನು ತೆಗೆದದ್ದು -ಅಪಾರ

Thursday, November 8, 2007

ದುಃಖಿತರ ದೀಪಾವಳಿ

ಮನೆಯ ದಾರಿಯಲೇ ಕಾದು ನಿಂತಿದೆ ಹಾಳು ಸಿಗ್ನಲ್ಲು ದೀಪ
ಹೊಸಿಲಲ್ಲಿ ನಿಂತು ಒಳಬರಲು ಅನುಮಾನಿಸುತಿದೆ ಮಣ್ಣ ದೀಪ
ಸ್ಟವ್‌ನೆದುರು ಬಿಕ್ಕುತಿರುವವಳ ಕಣ್ಣಲಿ ಕರಗುತಿದೆ ನೀಲಿ ದೀಪ
ಕಾಮಾಟಿಪುರದಲ್ಲೋ ನಖಶಿಖಾಂತ ಉರಿಯುತಿದೆ ಕೆಂಪು ದೀಪ


ದೀಪಗಳೆಲ್ಲ ಆರಿದಮೇಲೂ ಗೋಡೆ ಮೇಲೆ ಹೊಳೆದಿದೆ ಕಾಲದೀಪ
ಇರುಳ ಸದ್ದೊಂದಕೆ ಬೆಚ್ಚಿ ಎದ್ದಿದೆ ಒಂಟಿ ಹೆಂಗಸಿನ ಬ್ಯಾಟರಿದೀಪ
ಅರಿಯದ ದುಗುಡದಲಿ ಹೊಯ್ದಾಡುತಿರುವಾಗ ಮನದ ದೀಪ
ದುಃಖಿತರ ಮನೆ ಮೇಲೇಕೆ ಬೆಳಗಿದೆ ಚಂದ್ರನೆಂಬ ಆಕಾಶದೀಪ


ಸರಿಹೊತ್ತಿನ ಸಂದೇಶಕೆ ಹೊತ್ತಿಕೊಂಡಿದೆ ಮೊಬೈಲು ದೀಪ:
ಕೋರಲು ದೀಪಾವಳಿ ಶುಭಾಶಯ, ತೊಡೆಯಲು ಎಲ್ಲ ಶಾಪ

Tuesday, November 6, 2007

ಮದ್ಯಸಾರ ಭಾಗ -ಐದು

*
ಮದ್ಯಸಾರ ದೀಪದ ಕೆಳಗೆ ಇರುವುದಿಲ್ಲ ಕತ್ತಲು
ಕತ್ತಲಂತೆ ಕಂಡರೂನೂ ಲೋಕವಲ್ಲಿ ಬೆತ್ತಲು
ಗೀತಸಾರ ವೇದಸಾರ ಗಾದೆಸಾರ ಬದುಕಲು
ಮದ್ಯಸಾರವೇನು ಕಡಿಮೆ ಗಮನ ಕೊಡಿ ಅತ್ತಲೂ

*
ಬಡವರ ಮನೆಗೂ
ಭಿಕ್ಷುಕರು ಬರುವರು
ಒಮ್ಮೊಮ್ಮೆ ಕುಡುಕನನ್ನೂ ಜನ
ದಾರಿ ಕೇಳುವರು

*
ಹುಟ್ಟಿದೊಡನೆ ಹಾಲು ಕಡೆಗೊಂದಿನ ವಿಷ
ನಡುವೆ ನಿತ್ಯವೂ ನೀರು ಕುಡಿಸೋ ಬದುಕು
ಕುಡಿತವೊಂದೇ ಇಷ್ಟು ದಿನ ಉಳಿಸಿದ್ದು ಕೇಳೇ
ಮರೆಯದೆ ನೆನೆಯುವೆನು ಸಂಜೆಯಾ ವೇಳೆ

*
ಖಾಲಿಯಾಗಿದೆ ಬದುಕು
ಖಾಲಿಯಾಗಿದೆ ಬಾಟಲಿ
ಉನ್ಮತ್ತ ಹೃದಯವನು ಹೊತ್ತು
ರಸ್ತೆಯನೀಗ ಹೇಗೆ ದಾಟಲಿ?

*
ಅರ್ಜೆಂಟ್‌ ಕೆಲಸವೇನು ಎಲ್ರಿಗೂ ಇರುತ್ತೆ
ನಿಧಾನ ಕುಡಿಯಬೇಕು ಮದ್ಯ
ಕುಡುಕನಿಗೇನು ಹಿಂದಿಲ್ಲ ಮುಂದಿಲ್ಲ
ಬಾರಿನಲ್ಲಿ ಇರೋದೊಂದೇ: ಅದು ಸದ್ಯ

*
ಕುಡಿದು ಮೈಮರೆತಾಗ ಎಲ್ಲರೂ ಒಂದೆನಾ
ಅದಕೇ ಅನ್ನೋದು ಬಾರೊಂದು ನಂದನ
ಸೆರೆ ಮಾಡಿದಾತನಿಗೆ ಇದೋ ನನ್ನ ವಂದನಾ
ಎದಕೆ ಬೇಕಿನ್ನು ಬೇರೊಂದು ಬಂಧನ?

*
ದುಃಖವನ್ನು ಬಿಯರಿನಂತೆ ಬಗ್ಗಿಸಿಕೊಂಡು
ಗಂಟಲಸೆರೆ ಉಬ್ಬುವಂತೆ
ಗಟಗಟ ಕುಡಿಯಬಲ್ಲ ನನಗೆ
ಸುಖದ ಹಂಬಲವಿಲ್ಲ

*
ಮದ್ಯ ಕರುಳನ್ನು ಸುಡುತ್ತದೆ
ಎಂಬುದು ಬೇರೆ ಮಾತು
ಮನದ ನೋವಿಗಂತೂ ಅದು ದಿವ್ಯೌಷಧಿ
ಸೈಡ್‌ ಎಫೆಕ್ಟಿಲ್ಲದ ಔಷಧಿಯುಂಟೆ ಹೇಳಿ?