


ಆ ಹೂವು ನನಗೆ ಬೇಕಿರಲಿಲ್ಲ
ಎತ್ತಿ ಸ್ಟವ್‌ನ ಬೆಂಕಿಗೆಸೆದರೆ
ಜ್ವಾಲೆಯ ನೀಲಿ ಹೂಗಳ ನಡುವೆ
ಅಡಗಿಕೊಂಡಿತು
ತೆಗೆದು ಕೊಳದ ನೀರಿಗೆಸೆದರೆ
ಹೊಮ್ಮಿದ ಅಲೆಯ ಹೂಗಳ ನಡುವೆ
ಅರಳಿಕೊಂಡಿತು
ಬೆರಳುಗಳ ನಡುವೆ ಹಿಂಡಿ ಹಿಸುಕಿದರೆ
ಪುಡಿಯಾಗಿ ಕರಕಮಲದ ಪರಿಮಳವಾಗಿ
ಉಳಿದುಕೊಂಡಿತು
ಕೋಪದಿಂದ ಕಾಲಲ್ಲಿ ಹೊಸಕಿದರೆ
ಅಂಗಾಲಲ್ಲಿ ಬಣ್ಣದ ಬಸವನ ಪಾದವಾಗಿ
ರೂಪುಗೊಂಡಿತು
ಕಾರನ್ನೇ ಅದರ ಮೇಲೆ ಹತ್ತಿಸಿದರೂ
ಟಯರಿಗಂಟಿ ಮೋಹಕ ಹೂಚಕ್ರವಾಗಿ
ತಿರುತಿರುಗಿಕೊಂಡಿತು
ಹೋಗಲಿ ಬಿಡು ಎಂದು ಮುಡಿದುಕೊಂಡರೆ
ಸಂಜೆ ಹೊತ್ತಿಗೆಲ್ಲಾ ಬಾಡಿ ದಳದಳ
ಉದುರಿಹೋಯಿತು