Monday, November 24, 2008

ನೀವು ‘ಮ್ಯಾಕ್ಸಿಮಮ್ ಸಿಟಿ’ ಓದಬೇಕು...

-ಗುರುಪ್ರಸಾದ್ ಕಾಗಿನೆಲೆ

‘ಸದ್ಯದಲ್ಲಿಯೇ ಆಸ್ಟ್ರೇಲಿಯಾಖಂಡಕ್ಕಿಂತಾ ಹೆಚ್ಚುಜನ ಬಾಂಬೆಯಲ್ಲಿ ವಾಸಿಸಿರುತ್ತಾರೆ. ‘Urbs Prima in Indis’ ಅನ್ನುತ್ತದೆ, ಗೇಟ್‌ವೇ ಆಫ್ ಇಂಡಿಯಾ ಮುಂದಿರುವ ಒಂದು ಫಲಕ. ಅದರ ಜನಸಂಖ್ಯೆ ಒಂದು ಅರ್ಥದಲ್ಲಿ ಶಹರದ ಓಜಸ್ಸಿಗೆ ಹಿಡಿದ ಪರೀಕ್ಷೆಯೂ ಆಗಿದೆ,. ಹದಿನಾಲ್ಕು ಮಿಲಿಯ ಜನಸಂಖ್ಯೆಯುಳ್ಳ ಬಾಂಬೆ ಈ ಜಗತ್ತಿನ ನಗರವಾಸಿಗಳ ಪಂದ್ಯದ ಅತೀ ದೊಡ್ಡ ಓಟವಾಗಿದೆ. ಬಾಂಬೆ, ಜಗತ್ತಿನ ನಗರ ನಾಗರೀಕತೆಯ ಭವಿಷ್ಯ. God help us.
ನಾನು ಬಾಂಬೆ ಬಿಟ್ಟದ್ದು ೧೯೭೭ರಲ್ಲಿ, ಮತ್ತೆ ವಾಪಸ್ ಬಂದದ್ದು ಇಪ್ಪತ್ತೊಂದು ವರ್ಷದ ಬಳಿಕ, ಅದು ‘ಮುಂಬೈ’ ಆಗಿ ಬೆಳೆದಾದಮೇಲೆ. ಇಪ್ಪತ್ತೊಂದು ವರ್ಷ: ಒಬ್ಬ ಮನುಷ್ಯನಿಗೆ ಹುಟ್ಟಲಿಕ್ಕೆ, ವಿದ್ಯಾಭ್ಯಾಸ ಪೂರೈಸಲಿಕ್ಕೆ, ಮದುವೆಯಾಗಲಿಕ್ಕೆ, ಡ್ರೈವ್ ಮಾಡುವುದಕ್ಕೆ, ವೋಟ್ ಮಾಡುವುದಕ್ಕೆ, ಯುದ್ಧಕ್ಕೆ ಹೋಗಲಿಕ್ಕೆ, ಮತ್ತು ಯಾರನ್ನಾದರೂ ಕೊಲುವುದಕ್ಕೂ... ಸಾಕಾಗುವಷ್ಟು ವಯಸ್ಸು. ಬಾಂಬೆ ಬಿಟ್ಟು ಇಷ್ಟೆಲ್ಲಾ ವರ್ಷಗಳಾಗಿದ್ದರೂ ನಾನು ನನ್ನ ಉಚ್ಚಾರವನ್ನು ಕಳೆದುಕೊಂಡಿರಲಿಲ್ಲ. ನಾನು ಈಗಲೂ ಬಾಂಬೆಯ ಹುಡುಗನಂತೆಯೇ ಮಾತಾಡೋದು: ಹಾಗೆಯೇ ನನ್ನನ್ನು ಕಾನ್‌ಪುರದಿಂದ ಕಾನ್ಸಾಸ್ ಸಿಟಿಯವರೆಗೆ ಎಲ್ಲರೂ ಗುರುತಿಸೋದು. ‘ನೀನು ಯಾವೂರಿನವನು?’ ನನ್ನ ಕೇಳಿದರೆ, ಪ್ಯಾರಿಸ್, ಲಂಡನ್, ಮನ್ಹಾಟನ್ ಮುಂತಾದ ಪದಗಳಲ್ಲಿ ಉತ್ತರ ಹುಡುಕುತ್ತಾ ಕೊನೆಗೆ ಪ್ರತಿಯೊಂದು ಬಾರಿಯೂ ‘ಬಾಂಬೆ’ ಅನ್ನುವ ಪದಕ್ಕೇ ಸೆಟಲ್ ಆಗುತ್ತೇನೆ. ಭಗ್ನಗೊಂಡ ಸದ್ಯದ ಅದರ ಪ್ರಸ್ತುತ ಅವಘಡದ ಆಳದಲ್ಲಿ ಎಲ್ಲೋ ನನ್ನ ಹೃದಯವನ್ನು ಭದ್ರವಾಗಿ ಹಿಡಿದಿರುವ ಆ ಶಹರಿದೆ, ಕಡಲ ಬದಿಯ ಆ ಸುಂದರ ಶಹರ, ಪುರಾತನ ರಾಷ್ಟ್ರದ ಭರವಸೆಗಳ ದ್ವೀಪ. ಒಂದು ಸರಳವಾದ ಪ್ರಶ್ನೆಗೆ ಉತ್ತರ ಅರಸುತ್ತಾ ನಾನು ಆ ನಗರಕ್ಕೆ ಹೋದೆ: ನಾನು ಮತ್ತೆ ತಾಯಿನಾಡಿಗೆ ವಾಪಸ್ಸು ಹೋಗಬಲ್ಲೆನೇ? ಹುಡುಕುತ್ತಾ ನನ್ನಲ್ಲೇ ಇರುವ ಅನೇಕ ಶಹರಗಳನ್ನು ಕಂಡೆ.’
ಹೀಗೆ ಆರಂಭವಾಗುತ್ತದೆ, ಸುಕೇತು ಮೆಹತಾರ ‘ಮ್ಯಾಕ್ಸಿಮಮ್ ಸಿಟಿ’ ಹದಿನಾಲ್ಕನೆಯ ವಯಸ್ಸಿನಲ್ಲಿ ಬಾಂಬೆಯನ್ನು ಬಿಟ್ಟು ನ್ಯೂಯಾರ್ಕಿನಲ್ಲಿ ನೆಲಸಿದ ಸುಕೇತು ಮೆಹತಾ ಈ ಮಹಾನಗರದ ಒಳನೋಟವನ್ನು ಅತ್ಯಂತ ನಿಕಟವಾಗಿ, ವಿವರವಾಗಿ ಪ್ರೀತಿಯಿಂದ ಚಿತ್ರಿಸುತ್ತಾನೆ. ಆತ ಮತ್ತೆ ಬಾಂಬೆ ( ಈ ಮಹಾನಗರವನ್ನು ಮುಂಬೈ ಎಂದು ಕರೆಯಲು ಆತ ಒಪ್ಪುವುದಿಲ್ಲ) ಗೆ ವಾಪಸ್ಸು ಬಂದು ಅಲ್ಲಿರಬೇಕೆಂದು ಯೋಚಿಸಿದಾಗ ಬಾಂಬೆಯನ್ನು ಅವರು ನೋಡುವುದು ಬೇರೆಬೇರೆ ಕೋನಗಳಿಂದ- ಅಂಡರ್‍ವರ್ಲ್ಡ್ ಡಾನ್‌ಗಳ ಕಣ್ಣಿನಿಂದ, ಬಿಯರ್ ಬಾರ್‍ಗಳ ಹುಡುಗಿಯರ ಬೆವರಿನಿಂದ, ಎನ್‌ಕೌಂಟರ್ ಪೋಲಿಸ್ ಅಕಾರಿಗಳ ಬಂದೂಕಿನ ನಳಿಕೆಗಳ ಹೊಗೆಯ ಮಬ್ಬಿನಿಂದ.
ಈ ಪುಸ್ತಕವನ್ನು ‘ಇನ್‌ಸೈಡರ್’ ಆಗಿ ಸುಕೇತು ನೋಡಿದ್ದಾನೆ ಎಂದು ಪಶ್ಚಿಮದ ಮಾಧ್ಯಮಗಳು ವರ್ಣಿಸಿವೆ. ಬಾಂಬೆಯನ್ನು ಮುಂಬೈಯನ್ನಲ್ಲೊಪ್ಪದ, ಭೌಗೋಳಿಕ ಸರಹದ್ದುಗಳಿಂದ ರಾಷ್ಟ್ರೀಯತೆಯನ್ನು ಮಿತಿಗೊಳಿಸುವುದನ್ನೊಪ್ಪದ, ಶಬ್ದ ಮಾಲಿನ್ಯ, ಧೂಳು, ಭರಪೂರ ಗಾಳಿಗೆ ತನ್ನ ದುಬಾರಿ ಅಪಾರ್ಟ್‌ಮೆಂಟಿನೊಳಗೆ ನುಗ್ಗುವ ಪಕ್ಕದ ಪಾರ್ಕಿನ ಮಕ್ಕಳ ಹೊಲಸಾದ ಡಯಾಪರ್‍ಗಳು, ಬಾಂಬೆಯ ಗಾಳಿಯನ್ನು ಉಸಿರಾಡಿದ ಮಾತ್ರ ಹುಷಾರು ತಪ್ಪಿ ಮಲಗುವ ತನ್ನ ಮಕ್ಕಳನ್ನು ನೋಡಿ ತಡೆಯಲಾಗದೇ ಬಾಂಬೆಯನ್ನು ಮನಃಪೂರ್ತಿ ಬಯ್ಯುವ ಈತ ‘ಇನ್ಸೈಡರ್’ ಎಂದು ನಾವು ಒಪ್ಪಲಾರವೇನೋ? ತನ್ನ ಈ ಎನ್ನಾರೈ ಗುಣವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಪರಿ ಯಾವ ಭಾರತೀಯನಿಗೂ ಅಸಹಜ ಅನ್ನಿಸುವುದಿಲ್ಲ. ಈ ಕಾರಣಕ್ಕಾಗಿಯೇ ಆತ ಪ್ರತಿಪಾದಿಸುವ ರಾಷ್ಟ್ರೀಯತೆ ಇಷ್ಟವಾಗುತ್ತದೆ.
ಒಂದಕ್ಕೊಂದು ಹೆಣೆದುಕೊಂಡಿರುವ ರಾಜಕೀಯ ಮತ್ತು ಪಾತಕಿಗಳ ಲೋಕ, ಒಬ್ಬರನ್ನೊಬ್ಬರು ನಾಶಮಾಡುವ ಮತ್ತು ಪರಸ್ಪರ ರಕ್ಷಿಸುವ, ಶರಾ ಹಾಕುವ ‘ಪವರ್ ಆಫ್ ಅಟಾರ್ನಿ’ (ಮುಂಬಯ್ಯಾ ಭಾಷೆಯಲ್ಲಿ ಇದು ‘ಪವರ್ಟನಿ’) ಗಳಾಗುವ ರಾಜಕಾರಣಿ ಶಿವಸೇನಿಕರು, ತಮ್ಮನ್ನು ತಾವೇ ‘ಸ್ಕಾಟ್‌ಲೆಂಡ್ ಯಾರ್ಡು ಬಿಟ್ಟರೆ ನೆಕ್ಸ್ಟು’ ಎಂದು ಕರಕೊಳ್ಳುವ ಎನ್‌ಕೌಂಟರ್ ಪೋಲೀಸರು, ಸುಕೇತು ‘ಬ್ಲಾಕ್ ಕಾಲರ್’ ಕೆಲಸಗಾರರೆನ್ನುವ ಡಿ-ಕಂಪೆನಿಯ ಭೂಗತರು, ಛೋಟಾ ರಾಜನ್, ಬಾಳಾ ಥಾಕ್ರೆ, ಬಿಯರ್ ಬಾರ್‌ಗಳ ರಾತ್ರಿರಾಣಿಯರು, ಬಾಲಿವುಡ್, ಹೀಗೇ ಬಾಂಬೆಯ ಅನೇಕ ಮುಖಗಳನ್ನು ಪರಿಚಯಿಸುತ್ತಾ ಹೋಗುತ್ತನೆ. ಬಾಲಿವುಡ್ಡನ್ನು ಕುರಿತು ಈತ ಹೇಳುವುದು ನೋಡಿ. ‘ಈ ಚಲನ ಚಿತ್ರ ಅನ್ನುವ ಪ್ರಾಡಕ್ಟ್ ನ್ನು ನೋಡಿದರೆ, ಅದರ ಸೃಷ್ಟಿಕರ್ತರುಗಳು ಇಷ್ಟು ಬುದ್ಧಿವಂತರು ಎಂದು ಹೇಳಲಾಗುವುದೇ ಇಲ್ಲವಲ್ಲ.’ (ವಿದೂ ವಿನೋದ್ ಚೋಪ್ರಾನ ಜತೆ ಮಿಶನ್ ಕಶ್ಮೀರ್ ಚಿತ್ರಕ್ಕೆ ಚಿತ್ರಕತೆ ತಯಾರು ಮಾಡುತ್ತಿರುವಾಗ ಈತನಿಗೆ ಅನ್ನಿಸಿದ್ದು) ಬಾಲಿವುಡ್‌ನ ಕುರಿತ ಒಳನೋಟ ಯಾವ ನುರಿತ ಇನ್‌ಸೈಡರ್’ ಗೂ ದಕ್ಕದ್ದು ಸುಕೇತುವಿಗೆ ದಕ್ಕಿದೆ.
ಪ್ರತಿಯೊಂದು ಕತೆಯ ಮೂಲಕವೂ ಸುಕೇತು ತನ್ನ ಕತೆ ಹೇಳುತ್ತಾನೆ-ಪ್ರೀತಿ, ಹತಾಶೆ, ತನ್ನ ಬಾಂಬೆಯನ್ನು ‘ಮುಂಬೈ’ ಮಾಡಿದ ರಾಜಕೀಯ ಕುರಿತು ಸಿಟ್ಟು, ಹುಡುಕಿ ಸಿಗದ ಕೊನೆಗೆ ಬದಲಾಯಿಸಿಕೊಳ್ಳಬೇಕಾದ ನಾಸ್ಟಾಲ್ಜಿಯ-ಪ್ರತಿಯೊಂದರಲ್ಲಿಯೂ ಇಪ್ಪತ್ತು ವರ್ಷದ ನಂತರ ತನ್ನನ್ನು ತಾನು ಮತ್ತೆ ತಾನು ಹುಟ್ಟಿದ ಮಹಾನಗರಿಯಲ್ಲಿ ಹುಡುಕಿಕೊಳ್ಳಬೇಕಾದ, ಆ ಮೂಲಕ ಮಹಾನಗರಿಯನ್ನು ಮತ್ತದರ ವಿವಿಧ ಮುಖಗಳನ್ನು ವಿವರಿಸುವ ಮತ್ತು ಭವಿಷ್ಯದ ಮುಖ್ಯ ಮೆಟ್ರೊಪೊಲಿಸ್ ಆದ ‘ಬಾಂಬೆ’ಯನ್ನು ಆತ ತನಗಾಗಿ, ಆ ನಗರದ ಮೇಲಿನ ಪ್ರೀತಿಗಾಗಿ ಪುನರ್‌ನಿರ್ಮಿಸಿಕೊಳ್ಳುವ ಪರಿಯೇ ‘ಮ್ಯಾಕ್ಸಿಮಮ್ ಸಿಟಿ’
ಮಸ್ಟ್ ರೀಡ್.

Wednesday, November 19, 2008

ಬಹುಮಾನ ಬಂತು!

ಛಂದ ಪುಸ್ತಕ ಆಯೋಜಿಸಿದ್ದ ಮುಖಪುಟ ವಿನ್ಯಾಸ ಸ್ಪರ್ಧೆಯ ಫಲಿತಾಂಶ ಇಲ್ಲಿದೆ. ಮೈಸೂರಿನ ಕಾವಾದ ಅಂತಿಮವರ್ಷದ ಕಲಾವಿದ್ಯಾರ್ಥಿ ಪ್ರವೀಣ್ ಹೆಗಡೆ ರಚಿಸಿದ ವಿನ್ಯಾಸ ಬಹುಮಾನಕ್ಕೆ ಆಯ್ಕೆಗೊಂಡಿದೆ. ಸ್ಪರ್ಧೆಯ ವಸ್ತುವಾಗಿದ್ದ ‘ಬಳ್ಳಾರಿ ಮತ್ತು ಬೆಂಗಳೂರಿನ ಬದುಕಿನ ಜೀವನಪ್ರೀತಿ’ಯನ್ನು ಈ ಮುಖಪುಟ ಸಮರ್ಥವಾಗಿ ಬಿಂಬಿಸುತ್ತಿದೆ. ಹೊಸತನ ಮತ್ತು ಕಣ್ಣಿಗೆ ಹಿತವಾಗುವ ದೃಷ್ಟಿಯಿಂದಲೂ ಇದು ಸಾಕಷ್ಟು ಅಂಕ ಗಳಿಸುತ್ತದೆ. ಬಣ್ಣಗಳ ಬಳಕೆಯಲ್ಲೂ ಗಮನ ಸೆಳೆಯುತ್ತದೆ ಎಂದು ಭಾವಿಸಿದ್ದೇವೆ.
ಈ ಸ್ಪರ್ಧೆಗೆ ಬಂದ ಪ್ರವೇಶಗಳ ಸಂಖ್ಯೆ ನಮಗೂ ಅಚ್ಚರಿ ತಂತು ಎಂದು ಈ ಮೊದಲೇ ಹೇಳಿದ್ದೇವೆ. ಗುಣಮಟ್ಟದ ದೃಷ್ಟಿಯಿಂದಲೂ ಇಲ್ಲಿನ ಮುಖಪುಟಗಳು ಒಂದಕ್ಕಿಂತ ಒಂದು ಬೆರಗು ಹುಟ್ಟಿಸುವಂತಿರುವುದನ್ನು ನೀವೂ ಹೇಳಿದ್ದೀರಿ. ಇವುಗಳಲ್ಲಿ ಒಂದನ್ನು ಆರಿಸುವುದು ನಿಜಕ್ಕೂ ಕಷ್ಟಕರವಾಗಿತ್ತು. ಆಕರ್ಷಕ ಮುಖಪುಟಗಳನ್ನು ಹುಡುಕಿದ್ದರೆ ಒಂದನ್ನು ಆರಿಸುವುದು ಅಸಾಧ್ಯವೇ ಆಗುತ್ತಿತ್ತೇನೊ. ಆದರೆ ವಸ್ತುವಿಗೆ ಹೊಂದುವ, ಹೊಸತನ ಹೊಂದಿರುವ ಅಂಶಗಳಿಗಾಗಿ ನೋಡತೊಡಗಿದಾಗ ಹತ್ತು ಹನ್ನೆರಡು ಮುಖಪುಟಗಳು ಮಾತ್ರ ಬಹುಮಾನ ಪಡೆಯಲು ಪೈಪೋಟಿ ನೀಡಿದವು ಎನ್ನಬಹುದು. ನೋಡಲು ಅದ್ಭುತವಾಗಿದ್ದ ಕೆಲ ವಿನ್ಯಾಸಗಳು ನಾವು ಸೂಚಿಸಿದ್ದ ಪುಸ್ತಕಕ್ಕೆ ಅಷ್ಟೊಂದು ಹೊಂದದ ಕಾರಣ ಕಡೆಯ ಸುತ್ತಿನಿಂದ ಹೊರಗುಳಿದವು.
ಈ ಸ್ಪರ್ಧೆಯ ಅತ್ಯಂತ ಸಂತೋಷದ ಸಂಗತಿಯೆಂದರೆ ವಿವಿಧ ಹಿನ್ನೆಲೆಯ, ವಿವಿಧ ವಯೋಮಾನದ, ವಿವಿಧ ಊರುಗಳ ಉತ್ಸಾಹಿಗಳು ಪಾಲ್ಗೊಂಡಿದ್ದು.(ಸುಮಾರು ೨೫೦ ಮುಖಪುಟಗಳು ಬಂದಿದ್ದವು) ಬಹುಮಾನ ಗಳಿಸಿದ ಮುಖಪುಟದ ಜತೆ ಕಡೆಯ ಕ್ಷಣದವರೆಗೆ ತೀವ್ರ ಸ್ಪರ್ಧೆಯಲ್ಲಿದ್ದ ಮುಖಪುಟವನ್ನು ರಚಿಸಿದ್ದು ೬ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ವಿನೀಶಾ(ಕೆಂಪು ಬಟ್ಟೆ ಹಿಡಿದು ಓಡುತ್ತಿರುವ ಮಕ್ಕಳ ರೈಲು)! ಹಾಗೇ ಕೊನೆಯ ಕ್ಷಣದವರೆಗೆ ಬಹುಮಾನಕ್ಕೆ ಪರಿಗಣಿಸಲ್ಪಟ್ಟ ಇನ್ನೊಂದು ಮುಖಪುಟ ವಿ ಎಂ ಮಂಜುನಾಥ್ ರಚಿಸಿದ ರೈಲು ನೋಡುತ್ತಿರುವ ಹುಡುಗಿಯದ್ದು.
ಬಹುಮಾನಿತ ಮುಖಪುಟವನ್ನು ಆಯ್ಕೆ ಮಾಡಿದ್ದು ಗಾರ್ಗಿ ಭುಯಾ(‘ಜಾನಕಿ ಕಾಲಂ’ ಮತ್ತು ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿದ್ದ ಗಾರ್ಗಿ, ಜೆನಿಸಿಸ್ ಸಾಫ್ಟ್‌ವೇರ್‌ನಲ್ಲಿ ಡಿಸೈನ್ ಡೈರೆಕ್ಟರ್) ಮತ್ತು ಅಪಾರ. ಪುಸ್ತಕಗಳಿಗೆ ಮುಖಪುಟ ರಚಿಸುವುದು ಒಂದು ರೀತಿಯಲ್ಲಿ ಯಾರೂ ಗಮನಿಸದ ಕಲೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರತಿ ವರ್ಷ ‘ಪುಸ್ತಕ ಸೊಗಸು’ ಎಂಬ ಬಹುಮಾನ ನೀಡುತ್ತದೆಯಾದರೂ ಅದು ಕಲಾವಿದನನ್ನು ಪರಿಗಣಿಸುವುದಿಲ್ಲ. ಆ ಬಹುಮಾನ ಮತ್ತು ಅದರ ಮೊತ್ತ ಪ್ರಕಾಶಕರಿಗೆ ದೊರೆಯುತ್ತದೆ. ಹೀಗಿರುವಾಗ ಇಂಥ ಒಂದು ವಿಶಿಷ್ಟ ಸ್ಪರ್ಧೆ ನಡೆಸಿದ ಖುಷಿ ಛಂದ ಪುಸ್ತಕಕ್ಕಿದೆ. ಇಷ್ಟೂ ದಿನ ನಮ್ಮೊಂದಿಗಿದ್ದು, ಮತ್ತೆ ಮತ್ತೆ ಈ ಬ್ಲಾಗಿಗೆ ಭೇಟಿ ನೀಡಿ, ಅಭಿಪ್ರಾಯ ತಿಳಿಸಿ, ಬೆನ್ನು ತಟ್ಟಿದ ನಿಮ್ಮೆಲ್ಲರಿಗೂ ಇದರಲ್ಲಿ ಪಾಲಿದೆ.
ಕಡೆಯ ಸುತ್ತಿನವರೆಗೂ ಸ್ಪರ್ಧೆಯಲ್ಲಿದ್ದ ಇತರ ಹನ್ನೊಂದು ವಿನ್ಯಾಸಕಾರರಿಗೆ ಪುಸ್ತಕ ಬಿಡುಗಡೆಯ ದಿನ ಒಂದು ಪುಟ್ಟ ನೆನಪಿನ ಕಾಣಿಕೆ ನೀಡಲಿದ್ದೇವೆ(ಆ ಮುಖಪುಟಗಳು ಕೆಳಗಿವೆ). ಬಹುಮಾನ ಪಡೆಯುವ ಮುಖಪುಟವನ್ನು ಮೊದಲೇ ಊಹಿಸಿದ ಜಿತೇಂದ್ರ ಅವರಿಗೂ ಅಭಿನಂದನೆಗಳು. ಗಮನ ಸೆಳೆದ ಎಲ್ಲಾ ಸ್ಪರ್ಧಿಗಳಿಗೆ ಛಂದ ಪುಸ್ತಕದ ಮುಂಬರುವ ಪುಸ್ತಕಗಳ ಮುಖಪುಟ ವಿನ್ಯಾಸ ಮಾಡುವ ಅವಕಾಶ ನೀಡುತ್ತೇವೆ. ಹಾಗೆಯೇ ಸ್ಪರ್ಧೆಗೆ ಬಂದ ಯಾವುದೇ ವಿನ್ಯಾಸವನ್ನು ಯಾರಾದರೂ ತಮ್ಮ ಪುಸ್ತಕವೊಂದಕ್ಕೆ ಬಳಸಲು ಬಯಸಿದರೆ ಕಲಾವಿದರ ಸಂಪರ್ಕ ವಿವರವನ್ನು ಸಂತೋಷದಿಂದ ಕೊಡುತ್ತೇವೆ. ಈ ಸ್ಪರ್ಧೆಯನ್ನು ಪ್ರತಿವರ್ಷ ನಡೆಸುವ ಉದ್ದೇಶ ಛಂದಪುಸ್ತಕಕ್ಕಿದೆ ಎಂಬ ಸಿಹಿ ಸುದ್ದಿ ತಿಳಿಸುತ್ತಾ, ಡಿಸೆಂಬರ್ ಕೊನೆಯಲ್ಲಿ ನಡೆಯುವ ಪುಸ್ತಕದ ಬಿಡುಗಡೆಗೆ ತಪ್ಪದೆ ಬನ್ನಿ ಎಂದು ಕರೆಯುತ್ತಾ ಈ ಒಡನಾಟವನ್ನು ಮುಗಿಸುತ್ತಿದ್ದೇವೆ. ನಮಸ್ಕಾರ.
-ವಸುಧೇಂದ್ರ


ವಿನೀಶಾ
ವಿ ಎಂ ಮಂಜುನಾಥ್

ಭಕ್ತವತ್ಸಲ


ಸೌಮ್ಯ ಕಲ್ಯಾಣ್‌ಕರ್

ರಾಮಕೃಷ್ಣ ಸಿದ್ರಪಾಲ


ದತ್ತಾತ್ರಿ ಎಂ ಎನ್


ರೇವಣ ಕುಮಾರ್


ಲಕ್ಷ್ಮೀಕಾಂತ


ಪ್ರದೀಪ್ ಅಣ್ಣಿಗೇರಿ


ಸುರೇಶ್ ಕೋಟ
ಶ್ರೀನಿಧಿ ಟಿ ಜಿ

Tuesday, November 11, 2008

ಅಂತಿಮ ಮೂವತ್ತು

ಛಂದ ಮುಖಪುಟ ಸ್ಪರ್ಧೆಗೆ ಬಂದ ಪ್ರವೇಶಗಳಲ್ಲಿ ತೀರ್ಪುಗಾರರು ಶಾರ್ಟ್ ಲಿಸ್ಟ್ ಮಾಡಿದ ಮೇಲೆ ಉಳಿದ ೩೦ ಇಲ್ಲಿವೆ. ಅಂತಿಮವಾಗಿ ಇವುಗಳಲ್ಲಿ ಒಂದನ್ನು ಆರಿಸಿ ೫೦೦೦ ರೂ ಬಹುಮಾನ ನೀಡಲಾಗುವುದು. ಈ ಮೂವತ್ತರೊಳಗೆ ನಿಮ್ಮ ಪ್ರಕಾರ ಬಹುಮಾನ ಯಾವುದಕ್ಕೆ? ಕಾಮೆಂಟ್ ಮಾಡಿ ತಿಳಿಸಿ. ನಿಮ್ಮ ಆಯ್ಕೆ ತೀರ್ಪುಗಾರರ ಆಯ್ಕೆಯೊಂದಿಗೆ ಸರಿಹೊಂದಿದರೆ ಛಂದದ ವತಿಯಿಂದ ಪುಟ್ಟ ಉಡುಗೊರೆ ಉಂಟು. ಗಮನಿಸಿ: ಕಾಮೆಂಟ್ ಹಾಕುವಾಗ ನಿಮ್ಮ ಬ್ಲಾಗ್ ಐಡಿ ಬಳಸಬೇಕು. ಬ್ಲಾಗ್ ಇಲ್ಲದವರು ಇಮೇಲ್ ವಿಳಾಸವನ್ನು ಕೊಡಿ. ಬೆಸ್ಟ್ ಆಫ್ ಲಕ್!
1

2

3

4
5
6
7
8
9
10
11
12
13
14
15
16
17
18
19
20
21
22
23 24
25
26
27
28
29
30

Saturday, November 8, 2008

ಗೆಳೆಯರೆ

ಸ್ಪರ್ಧೆಯ ಅಂತಿಮದಿನ ಮುಗಿದು ಏಳು ದಿನಗಳು ಕಳೆದರೂ ಮುಂದೇನು ಎಂದು ತಿಳಿಸದೆ ಇದ್ದುದ್ದಕ್ಕಾಗಿ ಕ್ಷಮಿಸಿ. ಇಂದು ಸೇರಿಸಿರುವ ೧೪ ಮುಖಪುಟಗಳು ಕಡೆಯ ಕ್ಷಣದಲ್ಲಿ ನಮ್ಮನ್ನು ತಲುಪಿದ ಪ್ರವೇಶಗಳು. ಛಂದ ಪುಸ್ತಕದ ಈ ಮುಖಪುಟ ಸ್ಪರ್ಧೆಗೆ ಒಟ್ಟು ೬೫ ಕಲಾವಿದರು ೨೪೫ ಮುಖಪುಟಗಳನ್ನು ಕಳಿಸಿದ್ದಾರೆ! ಇಂಥ ಅಮೋಘ ಪ್ರತಿಕ್ರಿಯೆಯನ್ನು ನಾವಂತೂ ನಿರೀಕ್ಷಿಸಿರಲಿಲ್ಲ. ತೀರ್ಪುಗಾರರು ಇವುಗಳಲ್ಲಿ ಮೂವತ್ತನ್ನು ಶಾರ್ಟ್‌ಲಿಸ್ಟ್ ಮಾಡಿಕೊಡಲಿದ್ದಾರೆ. ಈ ಪಟ್ಟಿಯು ಇದೇ ಬ್ಲಾಗ್‌ನಲ್ಲಿ ಬರುವ ಮಂಗಳವಾರ (ನ.೧೧)ಪ್ರಕಟಗೊಳ್ಳುವುದು. ಕೆಲವು ದಿನ ನಿಮ್ಮ ಆಯ್ಕೆಗಾಗಿ ಅವಕಾಶ ನೀಡಿ, ನಂತರ ತೀರ್ಪುಗಾರರ ಆಂತಿಮ ಆಯ್ಕೆಯನ್ನು ಪ್ರಕಟಿಸೋಣ ಎಂದುಕೊಂಡಿದ್ದೇವೆ.