Thursday, January 31, 2008

ಮದ್ಯಸಾರ

ಅನಿರೀಕ್ಷಿತ ಹೊಡೆತಕ್ಕೆ ಕಂಗೆಟ್ಟುಹೋಗಿರುವೆ
ಕಂಗಳಲ್ಲಿ ಕಂಗಳಿಟ್ಟು ನೋಡಬೇಡ
ಗೆಳೆಯನಾದರೆ ಹೇಗೋ ಈ ರಾತ್ರಿ ಕಳೆಸು
ವಿಸ್ಕಿಯಿದ್ದರೆ ಸಾಕು ಸೋಡ ಬೇಡ

Wednesday, January 30, 2008

ಮದ್ಯಸಾರ

ಹಗಲಿನ ಲೆಕ್ಕಕೆ ರಾತ್ರಿಯ ಲೆಕ್ಕ ಕೂಡಿಸಬೇಡಿ
ಕಾಕ್‌ಟೇಲ್‌ ಕೆಟ್ಟದು ಆಗುವುದೆಲ್ಲ ರಾಡಿರಾಡಿ
ಹಗಲು ನೀವು ಎಷ್ಟು ಬೇಕಾದರೂ ಹೋರಾಡಿ
ರಾತ್ರಿಯಿದು, ಸುಮ್ಮನೆ ಕುಡಿದು ತೂರಾಡಿ

Tuesday, January 29, 2008

ಮದ್ಯಸಾರ

ನಿಮಗೆ ಅದು ವಿಷ ವಿಷ ಅನಿಸಬಹುದು
ನಮ್ಮ ಪಾಲಿಗೆ ಎಲ್ಲ ಕಹಿ ಕಳೆವ ಸ್ವೀಟ್‌ ಸಿಕ್ಸ್‌ಟಿ
ವಾಸನೆ ಅಂತ ಮೂಗುಮುಚ್ಚುವಿರಿ ನೀವು
ನಮಗದು ದೂರದಿಂದೇ ಸೆಳೆವ ಹೆಂಡಸಂಪಿಗೆ

Monday, January 28, 2008

ಮದ್ಯಸಾರ

ಕುಡಿದರೆ ಮತ್ತಲಿ ಹಾರುವಂತಿರಬೇಕು
ಡೀಸೆಂಟಾಗಿ ಕುಡಿಯೋದೆಲ್ಲಾ ಸುಳ್ಳು
ಕುಡಿದಂತೆ ನೀನು ನಡೆಯದಿದ್ದರೆ

ದೋಸ್ತಾ, ಮೆಚ್ಚನಾ ಪರಮಾತ್ಮ ಕೇಳು

Sunday, January 27, 2008

ಕಾಮೆಂಟ್‌ರೀ

ಭಾರತರತ್ನ ಕೊಡಬೇಕು ಎಂದು ಸುದ್ದಿ ವಾಹಿನಿಯೊಂದು ಕ್ಯಾಂಪೇನ್ ಮಾಡಿತಾದರೂ ಸಚಿನ್‌ಗೆ ಪದ್ಮವಿಭೂಷಣ ಮಾತ್ರ ಸಿಕ್ಕಿದೆ. ಇದೇ ವೇಳೆ ಭಾರತಕ್ಕೆ ಬಂದ ಬ್ರಿಟನ್ ಪ್ರಧಾನಿ ಬ್ರೌನ್, ಸಚಿನ್‌ಗೆ ಸರ್ ಪದವಿ ನೀಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೆಲ್ಲದರ ಬೆನ್ನಲ್ಲೇ ಅತ್ತ ಅಡಿಲೇಡ್‌ನಲ್ಲಿ ಸಚಿನ್ ಸುಂದರ ಶತಕವೊಂದನ್ನು ಬಾರಿಸಿದ್ದಾರೆ. ಅವರ ಹೆಸರಿನ ಮುಂದಿರುವ ತೆಂಡೂಲ್ಕರ್ ಎಂಬ ‘ಸರ್’ನೇಮೇ ಭಾರತೀಯರ ಮೈಯಲ್ಲಿ ರೋಮಾಂಚನ ಹುಟ್ಟಿಸುತ್ತದೆ. ಅದಕ್ಕೆ ಹೋಲಿಸಿದರೆ ಆ ಹೆಸರಿನ ಹಿಂದೆ ಸೇರಿಸಬಹುದಾದ ಸರ್ ಎಂಬ ಪದವಿ ಅಂಥ ದೊಡ್ಡದು ಅಂತೇನೂ ಅನ್ನಿಸುವುದಿಲ್ಲ. ಇದೇ ವೇಳೆ ನೈಟ್ ಹುಡ್ ಅನ್ನು ನೈಟ್ ವಾಚ್‌ಮನ್‌ಗಳಿಗೆ ಕೊಡುವ ಯೋಚನೆಯೇನಾದ್ರೂ ಇದೆಯೇ ಎಂದು ಇತ್ತೀಚೆಗೆ ಚೆನ್ನಾಗಿ ಬ್ಯಾಟ್ ಮಾಡುತ್ತಿರುವ ಪಠಾಣ್ ಮತ್ತು ಭಜ್ಜಿ ವಿಚಾರಿಸುತ್ತಿದ್ದಾರೆ ಎಂಬುದು ಈ ಸೋಸಿಲಿ ಹರಡುತ್ತಿರುವ ಸುಳ್ಳು ಸುದ್ದಿ.
*
ಬಹುಮುಖ ಪ್ರತಿಭೆ (ಕವಿ, ಪರ್ತಕರ್ತೆ, ಇದೀಗ ‘ನಟಿ’?)ಪ್ರತಿಭಾ ನಂದಕುಮಾರ್ ಕುಟುಕು ಕಾರ್‍ಯಾಚರಣೆ ಮೂಲಕ ನಗರದಲ್ಲಿ ವ್ಯವಹರಿಸುತ್ತಿದ್ದ ಪುರುಷ ವೇಶ್ಯೆಯರ ಜಾಲವೊಂದನ್ನು ಬಯಲು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಟಿವಿ ಚಾನಲ್ಲೊಂದು ಪುರುಷ ವೇಶ್ಯಾವಾಟಿಕೆ ಬಗ್ಗೆ ನೀವೇನು ಹೇಳ್ತೀರಾ ಅಂತ ಬೀದೀಲಿ ಹೋಗೋ ದಾಸಯ್ಯನಿಗೂ ಕೇಳಿದರು. ಆಗೊಬ್ಬ ಹೇಳಿದ: ‘ಇದು ನೋಡಿ ಇವರೆ, ಒಂದನೇಯದಾಗಿ ಇದರಿಂದ ಹಣ ಸಿಗುತ್ತೆ... ಎರಡನೇದು ಎಂಜಾಯ್‌ಮೆಂಟೂ ಸಿಗುತ್ತೆ’. ಈ ಸಾರ್ವಜನಿಕನ ಅಭಿಪ್ರಾಯ ಯಾವ ಎಡಿಟಿಂಗ್ ಕೂಡ ಇಲ್ಲದೆ ಹಾಗೇ ಪ್ರಸಾರವಾಯಿತು. ಇನ್ನೂ ಒಂದೆರೆಡು ೨೪ ಗಂಟೆ ನ್ಯೂಸ್ ಚಾನೆಲ್‌ಗಳು ಬರುತ್ತಿವೆಯಂತೆ. ಇನ್ನೂ ಏನೇನು ನೋಡಬೇಕೊ!
*
‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಅಂತ ಅಣ್ಣಾವ್ರು ಅಷ್ಟು ಚಂದವಾಗಿ ಹೇಳಿ ಹೋದರೂ ಈ ದೇವೇಗೌಡರು ಇಲ್ಲಿ ಹುಟ್ಲೇಬಾರದಾಗಿತ್ತು ಅಂತ ಹೇಳಿ ಫಜೀತಿ ಮಾಡಿಕೊಂಡಿದ್ದಾರೆ. ಮೊದಲೇ ವೈರಿಗಳೆಲ್ಲ ಒಂದಾಗಿ ಗೌಡರ ಹುಟ್ಟಡಗಿಸಲು ಓಡಾಡುತ್ತಿರುವಾಗ ಇದು ಬೇಕಿತ್ತಾ?ಗೌಡರು ತಮ್ಮ ಹುಟ್ಟಿನ ಬಗ್ಗೆ ಮರುಚಿಂತನೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವೆ ಅಂತ ಹಿಂದೊಮ್ಮೆ ಅವರು ಹೇಳಿದ್ದು ಕೂಡ ವಿವಾದವಾಗಿತ್ತು. ಪದ್ಮಶ್ರೀ ಪ್ರಶಸ್ತಿ ಪಡೆದ ವೇಳೆ ಕವಿ ನಿಸಾರ್ ಅಹಮದ್ ‘ಕರ್ನಾಟಕದಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ’ ಎಂದು ಹೇಳಿರುವುದು ಗೌಡರನ್ನು ಕೆಣಕಲಿಕ್ಕೋ ಎಂಬುದು ಖಚಿತವಾಗಿಲ್ಲ!
*
ಕೆಲದಿನಗಳ ಹಿಂದೆ ಆಟೋ ಮುಷ್ಕರ, ಅದಾದ ಮೇಲೆ ಲಾರಿ ಮುಷ್ಕರ, ನಂತರ ಬ್ಯಾಂಕ್ ಮುಷ್ಕರ. ಒಂದಿಲ್ಲೊಂದು ನೆಪ ಹೂಡಿ ಆಗಾಗ ಮುಷ್ಕರ ಕರೆದು ಸಾರ್ವಜನಿಕರಿಗೆ ತೊಂದರೆ ನೀಡುವುದೂ ಒಂದು ರೀತಿಯ ಭಯೋತ್ಪಾದನೆ ಅಲ್ಲವೆ? ಇಂಥ ಸಂಘಟನೆಗಳನ್ನು ‘ಮುಷ್ಕರೆ ತಯ್ಬಾ’ ಎಂದು ಕರೆದರೆ ಹೇಗೆ?

Saturday, January 26, 2008

ಹೊಸ ಮುಖಪುಟ


ವಿಶ್ವೇಶ್ವರ ಭಟ್‌ ಬರೆದ ನಾಲ್ಕು ಪುಸ್ತಕಗಳು ಈ ಭಾನುವಾರ ಬಿಡುಗಡೆಯಾಗುತ್ತಿವೆ. ಅವುಗಳಲ್ಲಿ ಈ ಎರಡರ ಮುಖಪುಟ ವಿನ್ಯಾಸ ನನ್ನದು. "ಆಗಾಗ ಬಿದ್ದ ಮಳೆ " ಪುಸ್ತಕಕ್ಕೆ ಬಳಸಿರುವ ಫೋಟೊ ಮಳೆಗಾಲದ ಒಂದು ಸಂಜೆ ಕಾರಿನ ವಿಂಡೋ ಗಾಜಿನ ಮೇಲೆ ಬಿದ್ದ ಮಳೆ ಹನಿಗಳನ್ನು ಅದರೊಳಗಿನಿಂದ ಮೊಬೈಲ್‌ ಕ್ಯಾಮೆರಾದಲ್ಲಿ ತೆಗೆದದ್ದು. ಹಿನ್ನೆಲೆಗಿರುವ ನೀಲಿ ಹೊರಗಿದ್ದ ಸಿಟಿಬಸ್‌ನದು. ಕೆಳಗಿನ ಪುಸ್ತಕಕ್ಕೆ ಬಳಸಲಾಗಿರುವ ಚಿತ್ರ ದಿಲ್ಲಿಯ ಫುಟ್‌ಪಾತ್‌‌ನಲ್ಲಿ ಕಾಣಸಿಕ್ಕಿದ್ದು. ಗಡಿಯಾರಗಳು ವಾಟರ್‌ ಪ್ರೂಫ್‌ ಎಂದು ನಂಬಿಸಲು ರಸ್ತೆ ವ್ಯಾಪಾರಿಗಳು ಅವನ್ನು ನೀರಿನ ಟಬ್‌ನೊಳಗೆ ಹಾಕಿಯೇ ಮಾರುತ್ತಿದ್ದರು!
ನಿಮ್ಮ ಪ್ರತಿಕ್ರಿಯೆಗಾಗಿ ಕಾಯುವೆ.

Friday, January 25, 2008

ಮದ್ಯಸಾರ

ಇಲ್ಲದ್ದು ಮರೆಯೋಣ
ಇದ್ದದ್ದು ತೆರೆಯೋಣ
ಬೇಂದ್ರೇನೂ ಕರೆಯೋಣ
ಕುಡಿಯೋಣು ಬಾರಾ

Thursday, January 24, 2008

ಮದ್ಯಸಾರ

ಬಾರಿಗೂ ಬರುವನೇನು, ಬರಲಿ
ವಾಸ್ತವವೆಂಬ ಚಂಡವ್ಯಾಘ್ರ
ಇನ್ನೊಂದು ಗ್ಲಾಸ್‌ ತರಿಸಿ ಹೇಳುವೆ
ಹೆಂಡವಿದೆಕೊ ಮಾಂಸವಿದೆಕೊ!

Wednesday, January 23, 2008

ಮದ್ಯಸಾರ

ಮನದುಂಬಿ ಕುಡಿದಿರುವೆನು
ಈಗಲೇ ಹೇಳಿಬಿಡುವೆ ಗೆಳತಿ
ಬೆಳಗ್ಗೆ ಎಚ್ಚರದಲ್ಲಿ ಏನೇನೋ
ಮಾತನಾಡಿಬಿಡುವ ಭಯ ನನಗೆ

Tuesday, January 22, 2008

ಮದ್ಯಸಾರ

ಟೆರೇಸಿನ ಮೇಲೆ ಕುಡೀತಿದ್ದವನ ಕಣ್ಣಿಗೆ
ಬಾಟಲಿ ಅಂಚಿನಲಿ ಕೂತ ಚಿಟ್ಟೆ ಬಿತ್ತು
ಸಿಕ್ಕಿಬಿದ್ದ ಮುಜುಗರಕೆ ಮೇಲೆ ಹಾರಿದ್ದು
ಗಾಳಿಯಲೂ ಎರಡು ಬಾರಿ ಎಡವಿ ಬಿತ್ತು

Monday, January 21, 2008

ಮದ್ಯಸಾರ

ಕುಡಿದ ಮೇಲೆ ಕುಣಿಯಬೇಕು
ಮಡಿದ ಮೇಲೆ ಸಾಧ್ಯವೆ?
ಮರೆವಿನಲ್ಲೇ ಮೆರೆಯಬೇಕು
ಅರಿವಿನಲ್ಲಿ ಸಾಧ್ಯವೇ?

Sunday, January 20, 2008

ಮದ್ಯಸಾರ

ಸಕಲ ಕ್ಲೇಶ ಕಳೆವ ಮಹಾಮಹಿಮ ದೇವ
ಅತಿಯಾದ ಉತ್ಸಾಹ ತೋರದಿರು ಜೋಕೆ
ನೆನಪಿನಿಂದ ಉಳಿಸು ಒಂದಾದರೂ ನೋವ
ಇಲ್ಲದಿರೆ ನಾನು ಕುಡಿವುದಾದರೂ ಯಾಕೆ?

Saturday, January 19, 2008

ಕಾಮೆಂಟ್‌ರೀ

ಹದಿನಾರು ಪಂದ್ಯಗಳ ನಂತರ ಆಸ್ಟ್ರೇಲಿಯಾದ ಅಶ್ವಮೇಧದ ಕುದುರೆಯನ್ನು ಮತ್ತೆ ಭಾರತವೇ ಕಟ್ಟಿಹಾಕಿದೆ. ಬರೀ ಭಾರತವೇ ಏನು, ‘ರೆಸ್ಟ್ ಆಫ್ ದ ವರ್ಲ್ಡ್’ ಕೂಡ ಸಂಭ್ರಮಿಸುತ್ತಿದೆ.(ಆಸ್ಟ್ರೇಲಿಯಾ ಸೋಲು ಯಾರಿಗೆ ಇಷ್ಟವಿಲ್ಲ ಹೇಳಿ!) ಪ್ರತಿಯೊಬ್ಬ ಆಟಗಾರನೂ ಕಾಣಿಕೆ ನೀಡಿ ಸಾಧಿಸಿದ ವಿಜಯವೇ ಆದರೂ, ಪರ್ತ್ ಟೆಸ್ಟ್‌ನ ಗೆಲುವಿನ ಸಾರಥಿ(‘ಪರ್ಥ್’ಸಾರಥಿ ಎನ್ನೋಣವೇ?) ಮಾತ್ರ ಅನಿಲ್ ಕುಂಬ್ಳೆಯೇ. ಎದುರಾಳಿ ಕ್ಯಾಪ್ಟನ್ ಮೇಲೆ ಮಾನಸಿಕ ಆಟ ಹೂಡುವುದು ಆಸ್ಟ್ರೇಲಿಯನ್ನರ ಹಳೆಯ ಬ್ರಹ್ಮಾಸ್ತ್ರ. ಈ ಸರಣಿ ಆರಂಭವಾಗುತ್ತಿದ್ದಂತೆಯೇ ಕುಂಬ್ಳೆ ಕೈ ಚಳಕ ಇಲ್ಲಿ ನಡೆಯಲ್ಲ ಅಂತ ಅವರು ಹೇಳಿದ್ದರು ಕೂಡ. ಆದರೆ ಮೊದಲ ದಿನವೇ ಕುಂಬ್ಳೆ ಐದು ವಿಕೆಟ್ ಪಡೆದು ಉತ್ತರಿಸಿದರು. ಈಗ ಸರಣಿಯಲ್ಲಿ ಈವರೆಗೆ ಅತಿಹೆಚ್ಚು ವಿಕೆಟ್ ಪಡೆದಿರುವುದು ಕುಂಬ್ಳೆಯೇ. ಸಿಡ್ನಿ ಟೆಸ್ಟಿನಲ್ಲಿ ಆಸ್ಟ್ರೇಲಿಯಾದ ಬಂಡಾಟವನ್ನು ಕುಂಬ್ಳೆಯಷ್ಟು ಸಮರ್ಪಕ ಪದಗಳಲ್ಲಿ(ನೆಟ್ಟಗೆ ಆಡಿದ್ದು ಒಂದೇ ತಂಡ) ಬೇರೊಬ್ಬ ಕ್ಯಾಪ್ಟನ್ ಇಡೀ ಜಗತ್ತಿಗೆ ತಿಳಿಸಲು ಸಾಧ್ಯವಿತ್ತೆ? ಆ ಇಡೀ ಒಂದು ತಲ್ಲಣದ ವಾರವನ್ನು ಕುಂಬ್ಳೆ ಅದೆಷ್ಟು ಸಮರ್ಥವಾಗಿ ನಿಭಾಯಿಸಿದರು! ಅಲ್ಲಿಂದ ತಂಡವನ್ನು ಇಂಥದೊಂದು ಅನಿರೀಕ್ಷಿತ ಗೆಲುವಿಗೆ ಪ್ರೇರೇಪಿಸಿದ್ದು ಕಡಿಮೆ ಸಾಧನೆಯೆ? ಕುಂಬ್ಳೆ ಭಾರತ ತಂಡದ ಕ್ಯಾಪ್ಟನ್ ಆದದ್ದು ತೀರಾ ಆಕಸ್ಮಿಕ. ಆದರೂ ಭಾರತ ತಂಡಕ್ಕೆ ಈ ‘ವಿಶೇಷ’ಸರಣಿಯಲ್ಲಿ ಅವರ ನಾಯಕತ್ವದ ಅಗತ್ಯ ಬಹಳ ಇತ್ತು. ಇಂಥ ಸನ್ನಿವೇಶಗಳಲ್ಲಿ ಅಜರ್, ಕಪಿಲ್ ಥರದ ಆತಿ ಸಜ್ಜನಿಕೆಯ ಅಥವಾ ಗಂಗೂಲಿಯಂಥ ಅತಿ ಆವೇಶದ ಕ್ಯಾಪ್ಟನ್‌ನಿಂದ ಆಗಬಹುದಿದ್ದ ಎರಡೂ ರೀತಿಯ ಎಡವಟ್ಟುಗಳನ್ನು ತಪ್ಪಿಸಲು ಘನತೆ ಮತ್ತು ಛಲ ಎರಡೂ ಇದ್ದ ಕುಂಬ್ಳೆಯ ವ್ಯಕ್ತಿತ್ವವೇ ಬೇಕಿತ್ತು. ಹ್ಯಾಟ್ಸಾಫ್ ಕುಂಬ್ಳೆ...ನಾವೂ ಕನ್ನಡದವರೇ!
*
ಭಾರತ ರತ್ನ ಪ್ರಶಸ್ತಿ ಪ್ರಕಟಣೆಯ ಸಮಯ ಸಮೀಪಿಸುತ್ತಿರುವಂತೆ ಲಾಬಿ ಜೋರಾಗಿದೆ. ವಾಜಪೇಯಿಗೆ ಕೊಡಿ ಪರವಾಗಿಲ್ಲ ಅಂತ ಆಡ್ವಾಣಿ, ಜ್ಯೋತಿ ಬಸುಗೆ ಕೊಟ್ರೆ ತಪ್ಪೇನು ಅಂತ ಲೆಫ್ಟಿನವರು, ಕಾನ್ಶಿರಾಂಗೇ ಕೊಡಿ ಗಂಟೇನು ಹೋಗುತ್ತೆ ಅಂತ ಮಾಯಾವತಿಯೂ ಆಗ್ರಹಿಸಿದ್ದಾರೆ. ಜತೆಗೆ ಮಾತೆ ಅಮೃತಾನಂದಮಯಿ ಸೇರಿದಂತೆ ಇನ್ನೂ ನಾಲ್ಕೈದು ಹೆಸರುಗಳೂ ತೇಲಿಬಂದಿವೆ. ತಮಗೆ ಕೊಡಿ ಅಂತ ಕೇಳದೇ ಇದ್ದ ಗಣ್ಯರೆಂದರೆ ನಮ್ಮ ಗೌಡರು ಮತ್ತು ಜಯಲಲಿತಾ ಮಾತ್ರ. ಗೌಡರಿಗೆ ಸದಾ ಪುತ್ರ‘ರತ್ನ’ರ ಮೇಲೇ ಗಮನವಿರುವ ಕಾರಣ ಅವರಿಗೆ ಭಾರತರತ್ನ ಅಷ್ಟು ಮಹತ್ವದ್ದಾಗಿ ಕಂಡಿರಲಿಕ್ಕಿಲ್ಲ. ಜಯಲಲಿತಾಗೇನಾದರೂ ಈ ಸಮ್ಮಾನ ದೊರಕುವುದಾದರೆ ಅದನ್ನು ‘ಭಾರದ’ ರತ್ನ ಎಂದೆನ್ನಬೇಕಾಗುತ್ತದೆ ಅಂದರೆ ಜಯಾರ ತೂಕದ ಬಗ್ಗೆ ಕಮೆಂಟು ಎಂದುಕೊಂಡರೆ ನನ್ನ ತಪ್ಪಲ್ಲ. ತಮಿಳಿನಲ್ಲಿ ‘ತ’ ಅಕ್ಷರವನ್ನು ‘ದ’ ಎಂದೇ ಉಚ್ಚರಿಸುವುದರಿಂದ ತಮಿಳರ ಬಾಯಲ್ಲಿ ಅದು ‘ಭಾರದ’ ರತ್ನವೇ ಆಗುತ್ತಲ್ಲವೆ? ಅಕಸ್ಮಾತ್ ಜಯಾರಿಗೆ ಈ ಪ್ರಶಸ್ತಿ ಬಾರದಿದ್ದರೆ ಆಗಲೂ ಅದನ್ನು ‘ಬಾರದ’ ರತ್ನ ಅಂತ ಕರೆಯಬಹುದು ಅನ್ನೋದು ಮಿಸ್ ಸೋಸಿಲಿಯ ಅತಿ ಜಾಣ್ಮೆಯ ಕಮೆಂಟು.


*
ಉಡುಪಿಯ ಕೃಷ್ಣನಿಗೆ ಪೂಜೆ ಮಾಡಲು ಯಾರು ಅರ್ಹರು ಎಂಬ ಪರ್ಯಾಯ ವಿವಾದದ ಜತೆಗೇ ಇನ್ನೊಂದು ಪರ್ಯಾಯ ವಿವಾದವೂ ಕಳೆದ ವಾರವಿಡೀ ಪ್ರತಿ ದಿನ ಮುಖಪುಟದಲ್ಲಿ ಜಾಗ ತಿಂದಿತು. ಅದರ ಕೇಂದ್ರ ಬಿಂದುವೂ ಕೃಷ್ಣನೇ(ಬಾಂಬೆ ಕೃಷ್ಣ). ಚರಿಷ್ಮಾ ಉಳ್ಳ ನಾಯಕರೇ ಇಲ್ಲದೆ ತೊಳಲಾಡುತ್ತಿರುವ ರಾಜ್ಯ ಕಾಂಗ್ರೆಸ್, ಖರ್ಗೆಗೆ ‘ಪರ್ಯಾಯ’ವಾಗಿ ಮಹಾರಾಷ್ಟ್ರ ರಾಜ್ಯಪಾಲರಾಗಿರುವ ಕೃಷ್ಣರನ್ನು ಕರೆತರಲು ಮಾಡಿದ್ದ ಯೋಜನೆಯೇ ಅದು. ಕೃಷ್ಣಾ ನೀ ಬೇಗನೆ ಬಾರೋ ಎಂಬ ಬೆಂಬಲಿಗರ ಕರೆಗೆ ಓಗೊಟ್ಟು ಅವರೂ ಬರಲು ಸಿದ್ಧರಾಗಿ ಸೋನಿಯಾ ಹತ್ತಿರ ‘ರಾಜ್ಯಪಾಲರ ಕೆಲ್ಸ ಬೋರೋ ಬೋರು’ ಎಂದು ಹೇಳಿದ್ದರಾದರೂ ಕೃಷ್ಣಾವತಾರಕ್ಕೆ ಇನ್ನೂ ಕಾಲ ಕೂಡಿಬಂದಂತಿಲ್ಲ.

ಮದ್ಯಸಾರ

ಯಾವುದೂ ಶಾಶ್ವತವಲ್ಲ ದೋಸ್ತಾ
ಇನ್ನೆಷ್ಟು ಬಾಕಿ ಇದೆ ಹೇಳು ರಾತ್ರಿ
ಮತ್ತು ಇಳಿದ ಮೇಲೆ ಮತ್ತೆ
ಎಚ್ಚರದ ಹಗಲು ಬರುವುದು ಖಾತ್ರಿ

Friday, January 18, 2008

ಮೂರು ಮುಖಪುಟಗಳು
ಇವು ನನ್ನ ಇತ್ತೀಚಿನ ಮುಖಪುಟಗಳು. ಪುಸ್ತಕ ಮುದ್ರಣವಾಗಿ ಹೊರಬಂದಾಗ ಕಂಪ್ಯೂಟರಿನಲ್ಲಿ ನಾನು ಕೊಟ್ಟಿದ್ದ ಬಣ್ಣಗಳು ಒಂದಿಷ್ಟಾದರೂ ಬದಲಾಗಿರುವುದು ಮಾಮೂಲು. (ಬಹಳ ಸಲ ಬೇಸರವಾದರೆ, ಒಮ್ಮೊಮ್ಮೆ ಹೊಸಬಣ್ಣವೇ ಚೆನ್ನಾಗಿದೆ ಎಂದು ಅನಿಸುವುದೂ ಉಂಟು!) ಆದರೆ ಜೋಗಿಯವರ ಕಾದಂಬರಿಯ ವಿಷಯದಲ್ಲಿ ಆಗಿರುವಂತೆ ಎಲ್ಲೋ ಒಮ್ಮೊಮ್ಮೆ ಮಾತ್ರ ಬಣ್ಣಗಳು ಅಂದುಕೊಂಡಂತೆಯೇ ಪ್ರಿಂಟಾಗಿರುತ್ತವೆ.(ಹಾ ತುಮ್ ಬಿಲ್‌ಕುಲ್‌ ವೈಸೀ ಹೊ, ಜೈಸೆ ಮೈನೇ ಸೋಚಾ ಥಾ ಎಂಬ ಮುಕೇಶನ ಹಾಡಿನಂತೆ). ಖುಷಿಯೆನಿಸುತ್ತದೆ ಆಗ. ಹೆಚ್ಚಾಗಿ ಫೋಟೊಗಳನ್ನೇ ಬಳಸಿ ಮುಖಪುಟ ರಚಿಸುವ ನನಗೆ `ನದಿಯ ನೆನಪಿನ ಹಂಗು' ಪುಸ್ತಕದ ವಿನ್ಯಾಸದ ಬಗ್ಗೆ ನಿಮ್ಮ ಅನಿಸಿಕೆಗಳ ಬಗ್ಗೆ ಕುತೂಹಲವಿದೆ.

Thursday, January 17, 2008

ಮದ್ಯಸಾರ

ದುರದೃಷ್ಟದ ಕೂಪದಲ್ಲಿ ಮುಳುಗುತಿರುವ ನಾವು
ಕುಡಿದು ಬದುಕುವುದೇ ನಮಗೆ ಯೋಗ್ಯ
ಮುಂದಿನ ಜನ್ಮದಲ್ಲಾದರೂ ಸಿಗುವುದೇನು
ಕುಡಿಯದೇನೇ ತೇಲುವಂಥ ಭಾಗ್ಯ ?

Monday, January 14, 2008

ಮದ್ಯಸಾರ

ತಲ್ಲಣವಾಗುವುದು ನನ್ನ ಮನಸಿಗೆ
ಕಳ್ಳಬಟ್ಟಿ ಕುಡಿದವರು ಪ್ರಾಣ ಬಿಟ್ಟರೆ
ಊರಿಗೆ ಹೆದರಿ ಬಾರಿಗೆ ಬಂದೋರಿಗೆ
ಹೇಗೆ ಹೇಳಿ ಮದಿರೆಯೇ ಕೈ ಕೊಟ್ಟರೆ?

Sunday, January 13, 2008

ಕಾಮೆಂಟ್ ರೀ

ಇನ್ನೂ ನೀವು ಸಿಟಿಬಸ್ಸಿನಲ್ಲಿ ಓಡಾಡುತ್ತೀರೆಂದರೆ ನೀವು ಕಡುಬಡವರೇ ಇರಬೇಕು. ಟಾಟಾ ಒಂದು ಲಕ್ಷ ರೂಪಾಯಿಗೆ ಕಾರು ಬಿಟ್ಟ ಮೇಲೆ ಮಾಲೀಕರೇ ಅಲ್ಲ, ‘ಕಾರ್ ’ಮಿಕರೂ ಕಾರಿನಲ್ಲಿ ಓಡಾಡಬಹುದು. ಮಾರುತಿ ಕಾರು ಬಂದ ಹೊಸದರಲ್ಲಿ ‘ಸಾಜನ್’ ಸಿನಿಮಾದ ಹಾಡನ್ನು ಬದಲಾಯಿಸಿ ‘ದೇಖಾ ಹೈ ಪೆಹಲೀ ಬಾರ್, ಇಂಡಿಯಾ ಮೇ ಮಾರುತಿ ಕಾರ್, ಎಂಟಾಣೆಕೊಂದ್ ಎಂಟಾಣೆಕೊಂದ್ ’ ಎಂದು ಅಣಕಿಸಿ ಹಾಡಲಾಗುತ್ತಿತ್ತು. ಲಡಕಾಸಿ ಕಾರಿದ್ದವರನ್ನು ಗೆಳೆಯರು ‘ಇದನ್ನ ಮಾರಿ ಜತೆಗೊಂದಿಷ್ಟು ಹಣ ಹಾಕಿದರೆ ಒಂದು ಹೊಸ ಬೈಕೇ ಬರುತ್ತಲ್ಲೋ’ ಎಂದು ಅಣಕಿಸುತ್ತಿದ್ದ ಕಾಲವೂ ಇತ್ತು. ಈಗ ಅದೂ ನಿಜವೇ ಆಗುವಂತೆ ಕಾಣುತ್ತಿದೆ. ನ್ಯಾನೊ ಬಂದಿರುವ ಕಾರಣ ಇನ್ನು ಮುಂದೆ ನಾನೋ ನೀನೊ ಅವನೋ ಇವನೋ ಎನ್ನದೆ ಎಲ್ಲರೂ ಕಾರಿನಲ್ಲೇ ಪಯಣಿಸಬಹುದು. ಹಾಗಾಗಿ ಇನ್ನುಮುಂದೆ ಕಾರು ಅಂತಸ್ತಿನ ಸಂಕೇತ ಅಲ್ಲ, ಅದಿಲ್ಲದಿರುವುದು ಬಡತನದೇ ಸಂಕೇತ ಎನ್ನಬಹುದು!
*
ಸೈಮಂಡ್ಸ್ ಇಂಡಿಯಾಕ್ಕೆ ಬಂದಿದ್ದಾಗಲೇ ಹೇಳಿ ಹೋಗಿದ್ದ-‘ಆಸ್ಟ್ರೇಲಿಯಾಕ್ಕೆ ಬಂದಾಗ ನೋಡಿ‘ಕೋತಿ’ನಿ ’ ಅಂತ. ನಮ್ಮವರಿಗೆ ಅರ್ಥ ಆಗಿರಲಿಲ್ಲ ಅಷ್ಟೇ. ಯಾಕೆಂದರೆ ಇಂಡಿಯಾದಲ್ಲೇ ಅವರು ಸರಣಿ ಗೆದ್ದಿದ್ದರು. ಅಂದಮೇಲೆ ಆಸ್ಟ್ರೇಲಿಯಾಕ್ಕೆ ಬಂದಾಗ ನೋಡಿಕೊಳ್ಳುವುದು ಆಟಕ್ಕೆ ಸಂಬಂಸಿದ್ದಲ್ಲ ಎಂದು ಅರ್ಥ ತಾನೆ?! ಅದು ಹೋಗಲಿ ಎಂದರೆ ಕೋತಿ ಅಂತ ಬಯ್ಯುವುದು ರೇಸಿಯಲ್ ಬಯ್ಗುಳವಲ್ಲ, ನಮ್ಮಲ್ಲಿ ಅದು ಸೋಸಿಯಲ್ ಬೈಗುಳ ಅನ್ನೋದನ್ನ ವಿದೇಶಿಯರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನವನ್ನು ಬಿಸಿಸಿಐ ಮಾಡಿದೆಯೇ ಎಂಬುದು ಅನುಮಾನ. ಇನ್ನು ಕೆಲವರಂತೂ ಬಜ್ಜಿ ಹೇಳಿದ್ದು ಹಾಗಲ್ಲ, ಅವನು ‘ತೇರಿ ಮಾ ಕಿ...’ ಎಂದದನ್ನು ಸೈಮಂಡ್ಸ್ ‘ಮಂಕಿ’ ಎಂದು ಕೇಳಿಸಿಕೊಂಡರು ಅಂತ ಊಹಿಸುತ್ತಿದ್ದಾರೆ. ಹಾಗಾಗಿ ಅದು ಜನಾಂಗೀಯ ನಿಂದನೆ ಆಗುವುದಿಲ್ಲ. ಹೆಚ್ಚೆಂದರೆ ‘ಜನನಾಂಗೀಯ’ ನಿಂದನೆ ಆಗಬಹುದು ಅಷ್ಟೆ. ಅಂಥ ಬೈಗುಳಗಳಿಗೇನು ಯಾರದೂ ಅಡ್ಡಿ ಇಲ್ಲ, ಯಾಕೆಂದರೆ ‘ಸೂ.....ಮಕ್ಕಳಾ’ ಎಂದು ಕುಂಬ್ಳೆ ಹಾಗೂ ಧೋನಿಗೆ ಬೈದ ಆಸ್ಟ್ರೇಲಿಯಾದ ಬ್ರಾಡ್ ಹಾಗ್, ‘ಬೈದಿದ್ದು ನಿಜ, ನಮ್ಮ ಸಂಸ್ಕೃತಿಯಲ್ಲಿ ಅದು ಒಕೆ’ ಅಂತ ಹೇಳಿದ್ದಾರೆ. ಅಷ್ಟಕ್ಕೂ ಬಜ್ಜಿ ಏನೆಂದನೋ ಲಿಪ್ ರೀಡ್ ಮಾಡೋಣ ಅಂದರೆ ಟಿವಿ ರೀಪ್ಲೆಗಳಲ್ಲಿ ಅವನ ಹಿಪ್ ಮಾತ್ರ ಕಾಣುತ್ತದೆ!
*
ಚೀನಾ ತನ್ನ ಜನಸಂಖ್ಯೆ ಬೆಳವಣಿಗೆಗೆ ಕಡಿತ ಹಾಕುವಲ್ಲಿ ಯಶಸ್ಸು ಕಂಡಿದೆ. ಹಾಗಾದರೆ ಅದರ ಜನಸಂಖ್ಯಾ ನಿಯಂತ್ರಣ ಯೋಜನೆಯ ಹೆಸರು ಏನಿರಬಹುದು?
ಸೋಸಿಲಿಯ ಉತ್ತರ: ‘ಚೀನಿ ಕಮ್’!
-ರೀ

Saturday, January 12, 2008

ತೇಜಸ್ವಿ ಮಾತು(ಭಾಗ: ಎರಡು)


'ಧರ್ಮ'ಸೂಕ್ಷ್ಮಗಳು
ಪ್ರಶ್ನೆ: ಪ್ರತಿಯೊಬ್ಬರೂ ತಮ್ಮತಮ್ಮ ಜಾತಿ, ತಮ್ಮ ತಮ್ಮ ಧರ್ಮವೇ ವೈಜ್ಞಾನಿಕವಾಗಿದೆ ಎಂದು ಹೇಳುವ ಹೊಸ ರೋಗ ಶುರುವಾಗಿದೆಯಲ್ಲ? ಅದಕ್ಕೆ ಮದ್ದೇನಾದರೂ ಇದೆಯೆ?


-ಮದ್ದು ಗಿದ್ದು ಏನೂ ಇಲ್ಲ. ವಾಸ್ತವವಾಗಿ ಜಾಗತಿಕವಾಗಿ ಎಲ್ಲಾ ಧರ್ಮಗಳಿಗೂ ಬಹಳ ದೊಡ್ಡ ಚಾಲೆಂಜಾಗಿರೋದು ಮಾಡ್ರನ್‌ ಸಿವಿಲೈಜೇಷನ್. ದೆ ಆರ್ ಬಿಟ್ಟರ್ ಲಿ ಫೇಸಿಂಗ್‌ ದ ಚಾಲೆಂಜ್‌. ಯಾಕೆ ಅಂದ್ರೆ ಧರ್ಮಗಳಲ್ಲಿ ಎರಡು ಅಂಶಗಳಿರೋದನ್ನ ನೋಡ್ತಿವಿ ನಾವು. ಒಂದು ಅದರ ಆಧ್ಯಾತ್ಮಿಕ ಅಂಶ. ಇನ್ನೊಂದು ಅದರ ಆಚಾರದ ಅಂಶ. ಆಚಾರ ಅಂದ್ರೆ ಜನಿವಾರ ಕಟ್ಕೋಬೇಕು, ಗಂಡ ಸತ್ತೋಳ ತಲೆ ಬೋಳಿಸ್ ಬೇಕು, ಬುರ್ಖಾ ಹಾಕ್ಕೊಂಡ್‌ ಓಡಾಡ್ ಬೇಕು, ದನದ ಮಾಂಸ ತಿನ್ನಬಾರದು, ಅಲ್ಲಾಹು ಅಕ್ಬರ್ ಅಂತ ಆರು ಸಲ ಕೂಗ್ಬೇಕು- ಇವೆಲ್ಲಾ ಆಚಾರದ ಅಂಶಗಳು. ಆಚಾರದ ಅಂಶಗಳು ಯಾಕೆ ಬರ್ತವೆ ಅಂದ್ರೆ ಒಂದು ಕಾಲದಲ್ಲಿ ಧರ್ಮಗಳು ಆಯಾ ಕಾಲದ ರಾಜಕೀಯದ ಧರ್ಮವೂ ಆಗಿರುತ್ತಿತ್ತು. ಅವರಿಗೆ ಒಂದು ಸಾಮಾಜಿಕ ನೀತಿ ಸಂಹಿತೆ ಕೊಡೊ ಜವಾಬ್ದಾರಿನೂ -ನಮ್ಮ ಸಿವಿಲ್‌ ಕೋಡ್‌ ಕ್ರಿಮಿನಲ್‌ ಕೋಡ್‌ ಇದೆಯಲ್ಲಾ ಈ ರೆಸ್ಪಾನ್ಸಿಬಿಲಿಟಿನೂ- ಧರ್ಮಕ್ಕೆ ಬೀಳೋದು. ಆದ್ದರಿಂದಲೇ ಈ ಆಚಾರ ವಿಭಾಗ ಎಲ್ಲಾ ಧರ್ಮಗಳಲ್ಲೂ ಇದಾವೆ. ಯಾವ ಮಟ್ಟಿಗೆ ಇದಾವೆ ಅಂದ್ರೆ ಅದೇ ಧರ್ಮ ಇನ್ಯಾವುದೂ ಅಲ್ಲ ಅನ್ನೋ ಲೆವಲ್‌ಗೋಗಿದಾವೆ ಅವು. ಎಲ್ಲೆಲ್ಲೂ ಮಠಗಳು, ಮುಲ್ಲಾಗಳು, ಬುರ್ಖಾ ಹಾಕ್ಕೊಂಡ್ ಓಡಾಡ್ದಿರೋ ಹೆಂಗಸಿನ ಮುಖಕ್ಕೆ ಆಸಿಡ್ ಹಾಕಿ ಅಂತ ಹೇಳೋದು, ಕುಂಕುಮ ಹಾಕ್ಕಂಡ್‌ ಓಡಾಡ್ದಿರೋ ಹೆಂಗಸಿಗೆ ತೊಂದ್ರೆ ಕೊಡಿ ಅಂತ ಹೇಳೋದು. ಆದರೆ ಧರ್ಮದ ಆಧ್ಯಾತ್ಮಿಕ ಅಂಶಕ್ಕೂ ಆಚಾರದ ಅಂಶಕ್ಕೂ ಯಾವುದೇ ಸಂಬಂಧವಿಲ್ಲ ಅನ್ನೋದ್ನ ಆಧುನಿಕ ನಾಗರಿಕತೆ ನಿಧಾನವಾಗಿ ನಮಗೆ ತೋರಿಸಿಕೊಡ್ತಾ ಇದೆ. ನಾವು ಹಿಂದುತ್ವ, ರಾಮಜನ್ಮಭೂಮಿ ಎಲ್ಲಾದ್ರಲ್ಲೂ ಬಹಳ ಶ್ರದ್ದೆಯಿಂದ ನಟಿಸಿದರೂನೂ ಬಹಳ ಆಳದಲ್ಲಿ ಬೇರೆ ಬೇರೆ ತೀವ್ರತೆಯಲ್ಲಿ ನಮ್ಮೆಲ್ಲರಿಗೂನೂ ಆ ರೀತಿಯ ಧರ್ಮನಿಷ್ಠೆ ಕಡಿಮೆಯಾಗ್ತಾ ಇದೆ. ಇಟ್‌ ಈಸ್‌ ಎ ಫ್ಯಾಕ್ಟ್‌. ಎಷ್ಟೇ ಇವರು ಕರೇ ಪಂಚೆ ಉಟ್ಕೊಳ್ಳಲಿ, ಕೆಂಪು ಪಂಚೆ ಉಟ್ಕೊಳ್ಳಲಿ ಏನೇ ಮಾಡ್ಕೊಂಡು ಯಾವ್ಯಾವ ಅಯ್ಯಪ್ಪ ಅಥವಾ ತಿರುಪತಿ ಎಲ್ಲೆಲ್ಲಿಗೆ ಹೋಗಿ ತಿಪ್ಪರಲಾಗ ಹೊಡದು ಏನೇ ಮಾಡಿದ್ರೂ ಆಧುನಿಕ ನಾಗರಿಕತೆ ನಮ್ಮ ಧರ್ಮಶ್ರದ್ಧೆಯನ್ನ ಕಡಿಮೆ ಮಾಡ್ತಾ ಇದೆ.
ಬಿಕಾಸ್ ಇಟೀಸ್‌ ಆಫರಿಂಗ್‌ ಆಲ್ಟರ್ನೇಟಿವ್ಸ್. ಈ ಆಚಾರದ ಅಂಶಗಳಿಗೆ ಬದಲಾಗಿ ಕಾನ್ಸಿಟಿಟ್ಯೂಷನ್ನು, ಫಂಡಮೆಂಟಲ್‌ ರೈಟ್ಸ್ ಇವೆಲ್ಲಾ ಬರ್ತಾ ಇವೆ. ದೆ ಆರ್ ಪ್ಲೇಯಿಂಗ್ ಮೇಜರ್ ರೋಲ್‌ ದ್ಯಾನ್‌ ದ ಕೋಡ್‌ ಆಫ್ ಕಂಡಕ್ಟ್ ಪ್ರಿಸ್ಕ್ರೈಬ್ಡ್‌ ಬೈ ದೀಸ್ ರಿಲಿಜನ್ಸ್. ಏನಾಗುತ್ತೀಗ.... ನಮ್ಮ ಮಠಗಳು ಮುಲ್ಲಾಗಳು ಇವರಿಗೆಲ್ಲಾ ಎಲ್ಲಿವರೆಗೆ ಆಚಾರನಿಷ್ಠೆ ಇಟ್ಕೊಂಡಿರ್ತೀರೋ ಅಲ್ಲಿವರೆಗೇ ಊಟ. ನಂದೇನಿದ್ದರೂ ದೇವರ ಹತ್ರ ಡೈರೆಕ್ಟ್‌ ಸಂಬಂಧ ಕಣಯ್ಯಾ, ನಿಂಗೂ ನಂಗೂ ಸಂಬಂಧ ಇಲ್ಲ ಅಂತ ಅಂದು ಬಿಟ್ರೆ, ಇವರಿಗೆ ಊಟ ನಿಂತೋಗ್ತದೆ. ಇದು ಹಿಂದೂ ಧರ್ಮ ಮಾತ್ರ ಫೇಸ್‌ ಮಾಡ್ತಾ ಇರೋ ತೊಂದರೆಯಲ್ಲ, ಥ್ರೋ ಔಟ್ ದ ವರ್ಲ್ಡ್. ಯಾಕೆ ಅಂತ ಹೇಳಿದ್ರೆ ಕಾನ್ಸಿಟಿಟ್ಯೂಷನ್ನನ್ನ ನಮಗೆ ಬದಲಿಯಾಗಿ ಕೊಟ್ಟು ಆಚಾರ ಸಂಹಿತೆ ಬಗ್ಗೆ ನಮಗಿರೋ ಶ್ರದ್ದೆನಾ ಹಾಳು ಮಾಡದರ ಜತೆಗೇನೆ ಆಧುನಿಕ ನಾಗರಿಕತೆಯ ಹೊಸ ಹೊಸ ಆವಿಷ್ಕಾರಗಳಿದಾವ್‌ ನೋಡಿ - ಪ್ರೆಷರ್ ಕುಕರ್, ಲೂನಾ ಮೊಪೆಡ್‌, ಅವು ಇವು. ನ ಸ್ತ್ರೀ ಸ್ವಾತಂತ್ರ್ಯ ನರ್ಹತಿ ಅಂತ ಮನು ಹೇಳಿದ್ರೆ, ಅವಳ ಕೈಗೊಂದು ಪ್ರೆಷರ್ ಕುಕರ್, ಲೂನಾ ಕೊಟ್ರೆ ಪ್ರೆಷರ್ ಕುಕರಲ್ಲಿ ಐದು ನಿಮಿಷಕ್ಕೆ ಅನ್ನ ಮಾಡಿಟ್ಟು ಲೂನಾ ಸ್ಟಾರ್ಟ್‌ ಮಾಡ್ಕೊಂಡು ಹೋದಳು ಮನೆ ಬಿಟ್ಟು. ಸೀ... ತಮಾಷೆಯಾಗಿ ನಾನು ಹೇಳ್ತಾ ಇದ್ರೂನೂ ಈ ಆಧುನಿಕ ಆವಿಷ್ಕಾರಗಳು ಬಲವಾಗಿ ತೊಂದ್ರೆ ಕೊಡ್ತಾ ಇದಾವೆ- ಧರ್ಮಶ್ರದ್ಧೆಗೆ, ಆಚಾರಶ್ರದ್ಧೆಗೆ. ಪೂಜೆ ಮಾಡ್ಬೇಡಿ ಅಂತಾಗಲಿ, ಮನುಷ್ಯನಿಗೆ ಆತ್ಮ ಇದೆಯೋ ಇಲ್ವೋ ಅಂತಾನೇ ಆಗಲಿ, ದೇವರಿದಾನೊ ಇಲ್ವೋ ಅಂತಾನೆ ಆಗಲಿ, ಈ ಕ್ವೆಷ್ಟ್‌ ಫಾರ್ ಟ್ರೂಥ್‌ಗೂ ಇದಕ್ಕೂ ಏನೂ ಸಂಬಂಧಾ ಇಲ್ಲ. ಪಂಚಾಂಗದಲ್ಲಿ ಬರಕೊಂಡು ದಿವಸಾ ಬೆಳಗಾಗೆದ್ದು ಇಂಥಿಂಥದೆಲ್ಲಾ ಮಾಡು ಅಂತ ಹೇಳಿದಾರಲ್ಲ, ಅದರ ಬಗ್ಗೆ ನಮಗೆಲ್ಲಾ ಆಸ್ಥೆ, ಶ್ರದ್ಧೆ ಕಡಿಮೆಯಾಗ್ತಿವೆ.
ಸೊ ವೆನ್ ದೆ ಹ್ಯಾವ್ ನಥಿಂಗ್‌ ಟು ಆಫರ್, ಕಳ್ಳ ಜಗದ್ಗುರುಗಳಿಗೆ ಮುಲ್ಲಾಗಳಿಗೆ ನಮ್ಮನ್ನ ಇನ್‌ಸ್ಪೈರ್ ಮಾಡಲಿಕ್ ಸಾಧ್ಯನಾ ಯಾವಾತ್ತಾದ್ರೂ? ಏನ್ ಮಾಡ್ಬೇಕಾಗುತ್ತವರು? ದೆ ಹ್ಯಾವ್ ನೋ ಅದರ್ ಆಲ್ಟರ್ನೇಟಿವ್ ಬಟ್ ಟು ಇನ್ವೋಕ್ ಫಂಡಮೇಂಟಲಿಸಂ ಇನ್ ಯುವರ್ ಹಾರ್ಟ್. ಹೇಟ್‌ ದ ಅದರ್ ರಿಲಿಜನ್. ಬೇರೆ ಧರ್ಮವನ್ನು ದ್ವೇಷಿಸು ಮತ್ತು ನಿನ್ನಲ್ಲಿ ಮೂಲಭೂತವಾದವನ್ನ ಎಬ್ಬಿಸು. ಹಿಂದುತ್ವವಾದಿಗಳು, ಜಿಹಾದಿಗಳು ಒಂದೇ ರಾಕ್ಷಸರ ವಿವಿಧ ಮುಖಗಳಿವರೆಲ್ಲಾ. ಅವರನ್ನ ಹಾಳು ಮಾಡೋಕೆ ಇವರ ಸಹಾಯ ತಗತೀವಿ ಅಂದ್ರೆ ದ ಅಲ್ಟಿಮೇಟ್ ವಿಕ್ಟಿಮ್ ಈಸ್ ಡೆಮಾಕ್ರಸಿ, ಫ್ರೀಡಂ ಆಫ್ ಸ್ಪೀಚ್, ಈಕ್ವಾಲಿಟಿ ಆಫ್ ವಿಮೆನ್. ಈಗಲೇ ದನೀನ ಮಾಂಸ ತಿನ್ನೋರ್ ನಾಲಿಗೆ ಕಡಿತಿವಿ ಅಂತ ಹೇಳಿದಾರೆ. ಇವರು ಅಧಿಕಾರಕ್ಕೆ ಬಂದ್ರೆ ಏನಾಗಬಹುದು ಅನ್ನೋದ್ನ ನೀವೇ ಯೋಚ್ನೆ ಮಾಡಿ. ಇನ್ನಾ ಮಿಕ್ಕಿದ್ದು - ಸತಿಪದ್ಧತಿನೂ ಜಾರಿಗೆ ತಗಂಬನ್ನಿ, ಅಸ್ಪೃಶ್ಯತೆನೂ ಜಾರಿಗೆ ತಗಂಬನ್ನಿ, ಚಾತುರ್ವರ್ಣವನ್ನೂ ಜಾರಿಗೆ ತಗಂಬನ್ನಿ ಅಂತ ಹೇಳದಿಲ್ಲಾ ಅಂತ ಏನಾರಾ ಗ್ಯಾರಂಟಿ ಇದೆಯಾ? ದಿಸ್ ಈಸ್ ವೆರಿ ಬ್ಯಾಡ್. ನೀವು ಒಂದು ಫಂಡಮೆಂಟಲಿಸಂನ ಇನ್ನೊಂದು ಫಂಡಮೆಂಟಲಿಸಮ್‌ನಿಂದ ಡೆಸ್ಟ್ರಾಯ್ ಮಾಡ್ತಿವಿ ಅಂತ ಹೊರಟ್ರೆ ನೀವು ಡೆಸ್ಟ್ರಾಯ್ ಆಗ್ತೀರ, ನಿಮ್ಮ ಫ್ರೀಡಂ ಆಫ್ ಸ್ಪೀಚು, ಡೆಮಾಕ್ರಸಿ ಡೆಸ್ಟ್ರಾಯ್‌ ಆಗುತ್ತೆ. ತಾಲಿಬಾನಿಗಳು ಹೋಗಬಹುದು. ಇಂಡಿಯನ್‌ ತಾಲಿಬಾನ್‌ಗಳ ಕೈಗೆ ಸಿಗಾಕ್ಕೋತೀರ.

ಪ್ರಶ್ನೆ: ಬಾಬಾಬುಡನ್‌ ಗಿರಿಯನ್ನ ಮತ್ತೊಂದು ಅಯೋಧ್ಯೆ ಮಾಡ್ತಿವಿ, ಕರ್ನಾಟಕನಾ ಗುಜರಾಥ್ ಮಾಡ್ತಿವಿ ಅಂತ ನಮ್ಮ ರಾಜಕಾರಣಿಗಳು ಬಹಿರಂಗವಾಗಿ ಹೇಳಿಕೆ ಕೊಡ್ತಾ ಇದಾರೆ. ಸರಿಯಾದ ಕೆಲಸ, ಎಜುಕೇಷನ್ ಇಲ್ಲದ ನಮ್ಮ ಯುವಜನಾಂಗ ಇಂಥ ಒಂದು ಅಫೀಮಿಗಾಗಿ ಕಾಯ್ತಾ ಇರ್ತಾರೆ. ಅವರನ್ನ ಇಂಥಾ ಅಪಾಯಕಾರಿ ಸೆಳೆತಗಳಿಂದ ಯಾವ ರೀತಿ ಪಾರು ಮಾಡಬಹುದು?

- ಸದ್ಯಕ್ಕೆ ಪರಿಹಾರ ಇಲ್ಲ. ದೂರಗಾಮಿ ಪರಿಣಾಮಗಳಿರೊ ಪ್ರೋಗ್ರಾಮ್ಸ್ ಹಾಕಬಹುದು. ಆದರೆ ಸದ್ಯಕ್ಕೆ ಈ ಮೂಲಭೂತವಾದಿಗಳು, ದುರಾತ್ಮರನ್ನ ನಾಶ ಮಾಡೋದು ಬಹಳ ಕಷ್ಟ ಇದೆ. ಯಾಕೆ ಅಂತ ಹೇಳಿದ್ರೆ ನೀವು ಯಾವ ಧರ್ಮಚಿಂತನೆಯಿಂದ ಅವರ ಮನಸನ್ನ ಬದಲಾಯಿಸಬೇಕು ಅಂತ ಮಾಡ್ಕೊಂಡಿದೀರೊ, ಅದೇ ಧರ್ಮದಿಂದಾನೇ ಅವರು ಆ ಕೆಲಸ ಮಾಡ್ತಾ ಇದಾರೆ. ಇದು ಸರಿ ಅಲ್ರಯ್ಯಾ, ಧರ್ಮ ಹಿಂಗ್ ಹೇಳದಿಲ್ಲ ಅಂತ ಹೇಳಿದ್ರೆ ಏನೂ ಪ್ರಯೋಜನ ಆಗದಿಲ್ಲ. ಬೆನ್ನಿಗೆ ಬಾಂಬು ಕಟ್ಕೊಂಡು ಓಡಾಡ್ತಾ ಇರೋ ಮುಠ್ಠಾಳರಿಗೆ ಹ್ಯಾಗ್ ಬುದ್ಧೀ ಹೇಳೋಕೆ ಸಾಧ್ಯ ಆಗುತ್ತೆ ಅನ್ನೋದನ್ನ ಯೋಚ್ನೆ ಮಾಡಿ. 100 ರೂಪಾಯಿಗೊ ಇನ್ನೂರು ರೂಪಾಯಿಗೋ ಕೆಲಸ ಮಾಡೋಕೋಗೋನಿಗೆ ಬೇಡಾ ಕಣಯ್ಯ 300 ರೂಪಾಯಿ ಕೊಡ್ತೀನಿ ಅಂತ ಹೇಳಬಹುದು. ಸ್ವರ್ಗದಲ್ಲಿ 14 ಜನರೇಷನ್ನಿಗೂ ಸದ್ಗತಿ ಸಿಗುತ್ತಂತೆ, ಅದ್ಕೇ ಬಾಂಬಿಡೋಕ್ ಹೋಗ್ತಿದೀನಿ ಅಂತ ಹೇಳೋನಿಗೆ ಹ್ಯಾಗ್ ಬುದ್ಧಿ ಹೇಳ್ತೀರಾ ಹೇಳಿ. ಸದ್ಯಕ್ಕೆ ಅಂಥವರಿಗೆ ರಿಪೇರಿ ಮಾಡೋಕೆ ಇಟೀಸ್ ದ ಬಿಸಿನೆಸ್ ಆಫ್ ದ ಲಾ ಅಂಡ್ ಆರ್ಡರ್. ಅವರಿಗೆ ಧನಸಹಾಯ ಮಾಡ್ತಾ ಇರೋರು, ಜನಸಹಾಯ ಮಾಡ್ತಾ ಇರೋರನ್ನ ಪತ್ತೆ ಮಾಡಿ ಕಾನೂನಿನ ಪ್ರಕಾರ ಕ್ರಮ ತಗೊಳಬಹುದೇ ಹೊರತು ಅವರ ಮನಪರಿವರ್ತನೆ ಮಾಡೋದಿಕ್ಕೆ ಆಗದಿಲ್ಲ, ಯಾಕೆಂದ್ರೆ ಪರಿವರ್ತನೆ ನಮಗೆ ಮಾಡ್ಬೇಕು ಅಂತ ಉಪಾಯ ಮಾಡ್ಕೊಂಡು ಇದೆಲ್ಲಾ ಮಾಡ್ತಾ ಇದಾರೆ ಅವರು.
(ಇನ್ನೂ ಇದೆ)


Friday, January 11, 2008

ತೇಜಸ್ವಿ ಮಾತು(ಭಾಗ ಒಂದು)

ಕೆಲ ಕಾಲದ ಹಿಂದೆ ಚಿತ್ರಕಲಾ ಪರಿಷತ್‌ನಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಫೋಟೊ ಎಕ್ಸಿಬಿಷನ್‌ ನಡೆದಿತ್ತು. ''ಹಾರಾಡುವ ಹಾಡುಗಳು'' ಎಂಬುದು ಅದರ ಶೀರ್ಷಿಕೆ. ಜತೆಯಲ್ಲೇ ತೇಜಸ್ವಿಯವರೊಂದಿಗೆ ಒಂದು ಅಪೂರ್ವ ಸಂವಾದ ಕಾರ್ಯಕ್ರಮವೂ ನಡೆಯಿತು. ಜಯಂತ ಕಾಯ್ಕಿಣಿ ಅದನ್ನು ನಡೆಸಿಕೊಟ್ಟರು. ನಮ್ಮ ಕಾಲದ ಅನೇಕ ಪ್ರಶ್ನೆಗಳನ್ನು, 'ಧರ್ಮಸೂಕ್ಷ್ಮ'ಗಳನ್ನು ತೇಜಸ್ವಿ ಅಂದು ತಮ್ಮ ಎಂದಿನ ಉಡಾಫೆಯ ಸರಳ ಶೈಲಿಯಲ್ಲಿ ಬಿಡಿಸಿ ಹೇಳಿದರು. ಅಂದು ತೇಜಸ್ವಿ ಆಡಿದ ಮಾತುಗಳನ್ನು ಇಲ್ಲಿ ಯಥಾವತ್ತಾಗಿ (ಹೆಚ್ಚು ಕಡಿಮೆ) ಕೊಟ್ಟಿರುವೆ. ಅವರ ಎಲ್ಲಾ ತಮಾಷೆಗಳೊಂದಿಗೆ. ಈ ಅಮೂಲ್ಯ ಕ್ಷಣಗಳನ್ನು ವಿಡಿಯೋ ಕ್ಯಾಮೆರಾದಲ್ಲಿ ಸೆರೆಹಿಡಿದ ಗೆಳೆಯ ಡಿ ಜಿ ಮಲ್ಲಿಕಾರ್ಜುನ್ಗೆ ಧನ್ಯವಾದಗಳು. ಆ ವಿಡಿಯೋದಿಂದಾಗಿಯೇ ಇದು ಸಾಧ್ಯವಾಗಿದೆ.
ಪಕ್ಷಿಗಳೊಂದಿಗಿನ ನಂಟು


ಪ್ರಶ್ನೆ: ಪಕ್ಷಿ ಛಾಯಾಗ್ರಹಣ ಅಂತಂದ್ರೆ ಸಂಪೂರ್ಣವಾಗಿ ಪರಿಸರದಲ್ಲಿ ಕಳೆದುಹೋಗ್‌ಬೇಕು, ಕೈಲಿರೋ ಕೆಮೆರಾನೂ ಮರೆತುಹೋಗಬೇಕು ಅಂತ ನೀವೊಂದ್ಸಲ ಹೇಳಿದ್ರಿ. ಪಕ್ಷಿಗಳ ಜತೆಗಿನ ನಿಮ್ಮ ನಂಟು- ದಯವಿಟ್ಟು ಅದರ ಬಗ್ಗೆ ಸ್ಪಲ್ಪ ಹೇಳಿ?

ತೇಜಸ್ವಿ: ನೀವು ಪರಿಸರದಲ್ಲಿ ಲೀನ ಆಗೋದನ್ನ ಕಲಿತ್ರೆ ಅಂಥ ಛಾಯಾಚಿತ್ರಗಳನ್ನು ತೆಗೀಬಹುದು ಅಂತ ಹಿಂದೆ ಒಮ್ಮೆ ಹೇಳಿದ್ದೆ. ಆದರೆ ಈಗ ಮತ್ತೆ ನನ್ನ ನಿಲುವು ಬದಲಾಯಿಸ್ಕೊಂಡಿದೀನಿ. ಯಾಕೆ ಅಂದ್ರೆ ಲೀನವಾದ್ರೂ ಬರೋದಿಲ್ಲ ಕಣ್ರೀ...ಯು ನೀಡ್‌ ಸೂಪರ್ ಹ್ಯೂಮನ್‌ ಪೇಷನ್ಸ್. ಬೆಳಗ್ಗಿಂದ ಸಾಯಂಕಾಲದವರೆಗೆ ಕಷ್ಟಪಟ್ಟು, ಏನೂ ಸಾಧನೆ ಮಾಡದೆ ಮತ್ತೆ ಅದೇ ನೆಮ್ಮದಿಯಲ್ಲಿ ಮನೆಗೆ ಬಂದು ನಿದ್ದೆ ಮಾಡೋದಿಕ್ಕೆ ತಯಾರಿದ್ರೆ ಮಾತ್ರ ಆಗುತ್ತೆ.....ಪಕ್ಷಿಗಳ ಬಗ್ಗೆ ದ್ವೇಷ ಬರೋದಿಕ್ಕೆ ಶುರುವಾಗತ್ತೆ ಕಣ್ರೀ....ಅಷ್ಟು ತಲೆನೋವಿನ ಕೆಲಸ. ಹಿಂಗ್‌ ಹೋಗಿ ಛಕ್ಕಂತ ಹಕ್ಕಿ ಫೋಟೊ ತಕ್ಕೊಂಡು ಬಂದ್‌ಬಿಡಬಹುದು ಅಂತ ತಿಳ್ಕೊಂಡಿದ್ರೆ ತಪ್ಪು.
ನಮ್ಮಲ್ಲಿ ಏನಾಗುತ್ತೆ ಅಂದ್ರೆ ಒಂದು ಕಲಾಕೃತಿ ನಿರ್ಮಾಣ ಮಾಡೋದಿಕ್ಕೆ ಪ್ರತಿಭೆ, ಸ್ಫೂರ್ತಿ ಇವೆಲ್ಲಾ ಬೇಕಾಗತ್ತೆ ಅಂತ ತಿಳ್ಕೊಂಡಿದೀವಿ. ಈ ರೀತಿ ಸ್ಫೂರ್ತಿ, ಪ್ರತಿಭೆ ಇವುಗಳ ಮೇಲೆ ನಾವು ಅನಗತ್ಯವಾದ ಮತ್ತು ವಿಪರೀತವಾದ ತೂಕ ಹೇರ್ತಾ ಇದೀವಿ ಅಂತ ಅನಿಸುತ್ತೆ. ಯಾಕೆ ಅಂದ್ರೆ ನಾನು ತಿಳ್ದಂಗೆ ಪ್ರತಿಭೆ ಬೇಕು, ಸ್ಫೂರ್ತಿ ಬೇಕು ಎಲ್ಲಾ ಸರಿ, ಆದ್ರೆ ಇವೆಲ್ಲಾ ಒಂದು ಪಾಯಿಂಟ್‌ ಫೈವ್‌ ಪರಸೆಂಟ್‌ ಸೈತ ಇರೋದಿಲ್ಲ. ಒಂದು ಕಲಾಕೃತಿ ಹಿಂದೆ ಅತ್ಯಂತ ಕಷ್ಟಪಟ್ಟು ತಾಳ್ಮೆಯಿಂದ ಮಾಡಿರೋ ಕೆಲಸ 99.5 ಪರಸೆಂಟ್ ಇರುತ್ತೆ. ಇನ್ನೊಂದು ಪಾಯಿಂಟ್‌ಫೈವ್‌ ಪರಸೆಂಟ್‌ ಅವನಿಗೆ ಸ್ಫೂರ್ತಿನೊ ಅಥವಾ ಇನ್ನೊಂದೋ ಸಹಾಯ ಮಾಡಿರುತ್ತಷ್ಟೇ ಹೊರತು...
ಒಬ್ಬ ಮೇದರವನು ಹೇಗೆ ಕಷ್ಟಪಟ್ಟು ಬುಟ್ಟಿ ಹೆಣಿತಾನೊ, ಅಷ್ಟೇ ಕಷ್ಟಪಟ್ಟು ಕತೆ, ಕಾದಂಬರಿ, ಕವನ ಮತ್ತು ಹಕ್ಕಿಗಳ ಛಾಯಾಚಿತ್ರ ಎಲ್ಲವೂ. ಇವೆಲ್ಲಾ ಕಷ್ಟಪಟ್ಟು ಬಂದಿರತಕ್ಕಂಥವೇ ಹೊರತು, ಸ್ವಯಂಸ್ಫೂರ್ತಿಯಿಂದ ಇದ್ದಕ್ಕಿದ್ದಂತೆ ಒಂದಿವಸ ನಾವು ಸಾಧನೆ ಮಾಡಿಬಿಟ್ವು ಅಂತ ಹೇಳದು ಸುಳ್ಳು ಅಂತ ಅನಿಸುತ್ತದೆ ನಂಗೆ. ಯಾಕೆಂದ್ರೆ ನಾನಿಲ್ಲಿವರೆಗೂ ಬರೆದಿರೋ ಕಲಾಕೃತಿಗಳು, ಕ್ರಿಯೇಟಿವ್ ಆರ್ಟ್‌ ಎಲ್ಲಾ ಬಹುಶಃ ಆ ಮಾದರಿದೇನೆ. ಕಷ್ಟಪಟ್ಟು ಕೆಲಸ ಮಾಡಬೇಕು, ಚೆನ್ನಾಗಿಲ್ಲದಿದ್ರೆ ತೆಗೆದು ಕಸದ ಬುಟ್ಟಿಗೆ ಹಾಕಬೇಕು. ಶ್ರೇಷ್ಟ ಕಲಾಕೃತಿಗಳನ್ನ ನೋಡ್ದಾಗ ಯಾವ ಕಾರಣಕ್ಕಾಗಿ ಇವು ಶ್ರೇಷ್ಟ ಅಂತ ನನಗನ್ನಿಸುತ್ತಿದೆ ಅಂತ ಅನ್ನೋದ್ನ ಅರ್ಥಮಾಡಿಕೋಬೇಕು. ನಮ್ಮದನ್ನ ಅಷ್ಟು ಶ್ರೇಷ್ಟ ಮಾಡೋದು ಹೇಗೆ ಅಂತ ಕಷ್ಟಪಟ್ಟು ಯೋಚ್ನೆ ಮಾಡ್ಬೇಕು. ಮೂರು ನಾಲ್ಕು ಐದು ಮಾಡಲ್‌ ಮಾಡಿ ತುಂಬಾ ಕ್ರಿಟಿಕಲ್‌ ಆಗಿ ನೋಡಬೇಕು. ಕಸದ ಬುಟ್ಟಿ ರೆಡಿ ಇಟ್ಕಂಡು ಕುಂದು ಕೊರತೆ ಇದೆ ಅನ್ಸಿದ್ರೆ ಬಿಸಾಕಬೇಕು.
ಹೊಗಳುಭಟರನ್ನು ಕರ್ಕೊಂಡ್ಹೋಗಿ ಹೆಂಗಿದಿಯೋ ಅಂತ ಕೇಳೋದ್ರಿಂದ ಪ್ರಯೋಜನವಿಲ್ಲ. ಗ್ಲೋಬಲ್‌ ಸ್ಟಾಂಡರ್ಡ್‌ಗೆ ಕಂಪೇರ್ ಮಾಡಿ ನಮ್ಮದು ಸೆಕೆಂಡ್‌ ರೇಟ್‌ ಆದ್ರು ಪರ್ವಾಗಿಲ್ಲ. ಇಲ್ಲಿ ನಮ್ಮ ಚೇಲಾಗಳನ್ನು ಕರ್ಕೊಂಡ್ಹೋಗಿ ಫಸ್ಟ್‌ರೇಟ್ ಆಗೋದ್ರಿಂದ ಪ್ರಯೋಜನ ಇಲ್ಲ. ಪ್ರಯೋಜನ ಇಲ್ಲ ಅಂದ್ರೆ, ನೀವು ಜೀವಮಾನದಲ್ಲಿ ಒಂದು ಅದ್ಭುತ ಕಲಾಕೃತಿ ಎದುರು ನಿಂತಾಗ ಹೊಗಳಿದೋರ್ನೆಲ್ಲ ಹಿಡ್ಕಂಡು ಒದೀಬೇಕು ಅನ್ನಿಸುತ್ತೆ. ಎಂಥ ಕೆಲಸ ಮಾಡಿ ದಾರಿತಪ್ಪಿಸಿಬಿಟ್ರು ನೋಡು ಅಂತ. ಬಯ್ಯೋಕ್ಕಿಂತ ಸುಲಭವಾಗಿ ಹೊಗಳಿ ಒಬ್ಬನ್ನ ಹಾಳುಮಾಡಾಕಿ ಬಿಡಬಹುದು. ಯು ಹ್ಯಾವ್‌ ಟು ಬಿ ಎಕ್ಸ್‌ಟ್ರೀಮ್‌ಲಿ ಕ್ರಿಟಿಕಲ್‌.
ಸ್ಫೂರ್ತಿ, ಏಕಾಗ್ರತೆ, ತನ್ಮಯತೆ ಇವೆಲ್ಲಾ ಅಗತ್ಯ ಇದೆ. ಅವುಗಳಿಂದ ಪ್ರಯೋಜನಾನೇ ಇಲ್ಲ, ಇದು ಕತ್ತೆ ಕೆಲಸಾನೇ ಹೆಚ್ಚು ಅಂತ ಹೇಳ್ತಾ ಇರೋದಲ್ಲ. ಆದ್ರೆ ಅವುಗಳಿಗೆ ಅನಗತ್ಯ ಪ್ರಾಧಾನ್ಯತೆ ಕೊಟ್ರೆ... ನಮ್ಮ ಯಂಗ್‌ಸ್ಟರ್ ಗಳೆಲ್ಲಾ ಮೈಗಳ್ಳರು, ಎಲ್ಲೋ ಒಂದ್‌ ಒಳದಾರಿ ಇದೆ, ಅದ್ಭುತಗಳನ್ನ ಸಾಧಿಸೋಕೆ ಅಂತ ಕೆಲಸ ಮಾಡದನ್ನ ನಿಲ್ಲಿಸಿಬಿಟ್ಟು ಕಾಲ್ದಾರಿ ಹುಡುಕ್ತಾ ಓಡಾಡ್ತಾರೆ. ಅದ್ರಿಂದ ನಾನು ಈ ವಿಷಯ ಹೇಳ್ತಾ ಇರೋದು.
ಭಾಗ ಎರಡು( ಧರ್ಮಸೂಕ್ಷ್ಮಗಳು): ನಾಳೆ

Wednesday, January 9, 2008

ಮದ್ಯಸಾರ


ನೋವು ಸೋಲು ಅಪಮಾನ ವಂಚನೆ
ದೌರ್ಜನ್ಯಗಳ ಸಂಸಾರ ಸಾಗರವನ್ನು
ಕುಡಿಯಬಲ್ಲೆವು ಅಗಸ್ತ್ಯ ಮುನಿಯಂತೆ
ಸಾಮಾನ್ಯರಲ್ಲ ನಾವು ಕುಡುಕರು

Tuesday, January 8, 2008

ಮದ್ಯಸಾರ


ಹೊನ್ನಿನ ನಶೆ ಹೆಣ್ಣಿನ ನಶೆ
ಅಧಿಕಾರದ ನಶೆ ಕೀರ್ತಿಯ ನಶೆ
ತೇಲಿಸಬೇಡಿ ಹೋಲಿಸಿ ನೋಡಿ
ಮದಿರೆಯದೆಂಥ ಸಾತ್ವಿಕ ನಶೆ

Monday, January 7, 2008


ಜಿ ಎನ್‌ ಮೋಹನ್‌ ಅವರ ಕವಿತಾ ಸಂಕಲನಕ್ಕೆ ರಚಿಸಿದ ಕವರ್ ಇವು. ನೇರಳೆ ಬಣ್ಣದ ಮೊದಲ ಮುಖಪುಟ ಆಲ್‌ಮೋಸ್ಟ್‌ ಅಂತಿಮಗೊಂಡಿತ್ತು. ಆದರೆ ಕೊನೆ ಕ್ಷಣದಲ್ಲಿ ಕೆಳಗಿನ ಮುಖಪುಟವನ್ನು ಆರಿಸಿಕೊಳ್ಳಲಾಯಿತು. ನನಗೂ ಎರಡನೇದೇ ಇಷ್ಟ. ನಿಮಗೆ ಯಾವುದು ಚೆನ್ನಾಗಿದೆ?
ಮುಖಪುಟದಲ್ಲಿರುವ ಷೇಕ್ಸ್ ಪಿಯರನ ಜಕ್ಕಿಣಿಯ ಚಿತ್ರವನ್ನು ಬಿಡಿಸಿರುವುದು ಮೋಹನ್‌ ಮಗಳು ಕಿನ್ನರಿ.

Sunday, January 6, 2008

ಮದ್ಯಸಾರ


ಮರೆತಾನು ಒಮ್ಮೊಮ್ಮೆ ನಿನ್ನ ಗಂಡ
ದೊಡ್ಡ ಹುದ್ದೆ, ಜವಾಬ್ದಾರಿ ಪಾಪ
ನಾನೋ ಖಾಲಿಪೀಲಿ ಕುಡುಕ
ಸಂಜೆಯಾದರೆ ನಿನ್ನದೇ ಜಪ

Saturday, January 5, 2008

ಮದ್ಯಸಾರ


ಕುಡುಕರು ಅನ್ನಿ ಪರವಾಗಿಲ್ಲ
ಕೆಡುಕರು ಅನ್ನಿ ಪರವಾಗಿಲ್ಲ
ಯಾರು ಕೇಳುವರು ನಿಮ್ಮ ಕೊಂಕು
ಸಿಕ್ಕಿರುವಾಗ ಸ್ವರ್ಗದ ಲಿಂಕು!

Friday, January 4, 2008

ಇತ್ತೀಚಿನ ಮುಖಪುಟ

ಹೊಸ ಕತೆಗಾರ, ಮಂಗಳೂರಿನ ನರೇಂದ್ರ ಪೈ ಅವರ ಕಥಾಸಂಕಲನವಿದು. ಅಂಕೋಲದ ರಾಘವೇಂದ್ರ ಪ್ರಕಾಶನ ಪುಸ್ತಕವನ್ನು ಹೊರತಂದಿದೆ. ಮುಖಪುಟದ ಬಣ್ಣಬಣ್ಣದ ಸುಂದರಿಯರು ದಿಲ್ಲಿಯ ಕೆಂಪುಕೋಟೆಯೊಳಗಿನ ಅಂಗಡಿಯೊಂದರಲ್ಲಿ ತೂಗುತ್ತಿದ್ದವರು.

Thursday, January 3, 2008

ಮದ್ಯಸಾರ


ನಡುನೀರಲ್ಲಿ ಕೈ ಬಿಟ್ಟವಳೆ
ನಡುರಾತ್ರಿ ನೆನಪಾಗದಿರು
ಬದುಕಲು ಬಿಡು ಒಂಚೂರು
ಹನ್ನೊಂದಕ್ಕೇ ಮುಚ್ಚುವುದು ಬಾರು

Wednesday, January 2, 2008

ಶುರುವಾಗಿದ್ದು ಹೀಗೆ

ಇಲ್ಲಿವರೆಗೆ ಅರವತ್ತಕ್ಕೂ ಹೆಚ್ಚು ಪುಸ್ತಕಗಳಿಗೆ ಮುಖಪುಟ ವಿನ್ಯಾಸಗೊಳಿಸಿರಬಹುದು. ಆದರೆ ಈ ಮುಖಪುಟದೊಂದಿಗೆ ನನ್ನ ಭಾವನಾತ್ಮಕ ಸಂಬಂಧವಿದೆ. ಏಕೆಂದರೆ ಇದು ನಾನು ಮುಖಪುಟ ರಚಿಸಿದ ಮೊದಲ ಪುಸ್ತಕ. ಮೊದಲ ಅವಕಾಶ ಕೊಟ್ಟ 'ಸಂಚಯ'ದ ಪ್ರಹ್ಲಾದ್‌, ಕೊಡಿಸಿದ ಬೇಳೂರು ಸುದರ್ಶನ್‌ ಮತ್ತು ಈ ಪ್ರಯೋಗಕ್ಕೆ ಬಲಿಪಶುವಾದ ಪುಸ್ತಕದ ಲೇಖಕ, ಮಿತ್ರ ವಾಸುದೇವ್‌ ನಾಡಿಗ್‌ ಅವರನ್ನು ಸದಾ ನೆನೆಯುವೆ.

Tuesday, January 1, 2008

ಮದ್ಯಸಾರ

ಶುಭ ಕೋರುವಾ ವೇಳೆ
ಕೈಲಿರದಿದ್ದರೆ ಬಿಯರು
ಹ್ಯಾಪಿ ಹೇಗಾಗುತ್ತದೆ ಅದು
ಪಾಪಿ ನ್ಯೂ ಇಯರು!