Wednesday, October 24, 2007

ಅರೆ ರೇ!

ಅನನ್ಯ ದಿಗ್ದರ್ಶಕ ಸತ್ಯಜಿತ್‌ ರೇ ತಮ್ಮ ಚಿತ್ರಕತೆ ಪುಸ್ತಕದಲ್ಲಿ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದರು ಎಂಬುದು ಗೊತ್ತಿತ್ತು. ಆದರೆ ರೇ ಮುಖಪುಟ ವಿನ್ಯಾಸವನ್ನೂ ಮಾಡಿದ್ದರು ಎಂಬ ವಿಷಯ ಮೊನ್ನೆಯಷ್ಟೇ ತಿಳಿದು ಅರೆರೇ ಅನ್ನಿಸಿತು. ಮೊದಲ ಪುಸ್ತಕಕ್ಕೆ ರಕ್ಷಾಪುಟ ರಚಿಸಿದಾಗ ಸತ್ಯಜಿತ್‌ ರೇ ಅವರಿಗೆ ಬರೀ 24 ವರ್ಷ. ಪಶ್ಚಿಮದ ವಿನ್ಯಾಸಗಳಿಂದ ತೀರಾ ಭಿನ್ನವಾದ ಅವರ ವಿನ್ಯಾಸಗಳು ಜನಮೆಚ್ಚುಗೆಗೆ ಪಾತ್ರವಾದವು. ಪಥೇರ್ ಪಾಂಚಾಲಿ(ಸಂಗ್ರಹ ರೂಪ) ಪುಸ್ತಕಕ್ಕೆ ಮುಖಪುಟ ರಚಿಸಿದ ನಂತರವೇ ಅವರು ಅದನ್ನು ಬೆಳ್ಳಿತೆರೆಗೆ ತಂದಿದ್ದು. ಆದರೆ ಸಿನಿಮಾಕ್ಕೆ ಬಂದ ನಂತರ ರೇ ಹೊದಿಕೆ ವಿನ್ಯಾಸವನ್ನು ಬಿಟ್ಟರು. ಮತ್ತೆ ಎಪ್ಪತ್ತರ ದಶಕದಲ್ಲಿ ಅವರು ಮತ್ತೆ ಪುಸ್ತಕ ಮುಖಪುಟ ರೂಪಿಸತೊಡಗಿದರಾದರೂ ಮೊದಲಿದ್ದ ಕಾವ್ಯಾತ್ಮಕತೆ ಮಾಯವಾಗಿತ್ತು ಎನ್ನುತ್ತಾರೆ ವಿಮರ್ಶಕರು. www.satyajitrayworld.comನಲ್ಲಿ ಕಂಡ ಸತ್ಯಜಿತ್‌ ರೇ ರೂಪಿಸಿದ ಕೆಲವು ಪುಸ್ತಕ ಮುಖಪುಟಗಳನ್ನು ಇಲ್ಲಿ ಕಾಣಬಹುದು(ಏನನಿಸಿತೆಂದು ಹೇಳಲೂಬಹುದು.)

Wednesday, October 17, 2007

ಮತ್ತೆ ಹತ್ತು ಮುಖಪುಟಗಳು(ಮೂರನೇ ಕಂತು)
ಅತಿಸಣ್ಣ ಕತೆಗಳು ಪುಸ್ತಕದ ಮಕ್ಕಳ ಫೋಟೊ ತೆಗೆದದ್ದು ಗಮನಾರ್ಹ ತರುಣ ಛಾಯಾಗ್ರಾಹಕ ಡಿ ಜಿ ಮಲ್ಲಿಕಾರ್ಜುನ್‌. ಶಬ್ದತೀರಕ್ಕೆ ಬಳಸಿರುವ ರೇಖಾಚಿತ್ರಗಳು ಹೆಸರಾಂತ ಕಲಾವಿದ ಇಕ್ಬಾಲ್‌ ಅವರವು. ಹಕ್ಕಿಗೂಡು, ಹಟ್ಟಿಯೆಂಬ ಭೂಮಿಯ ತುಂಡು ಮುಖಪುಟಗಳಲ್ಲಿ ಕಾಣುವ ಚಿತ್ರಗಳು ಗೆಳೆಯ ಸೃಜನ್‌ ಕೊಟ್ಟದ್ದು. ಇವಿಷ್ಟು ಇಲ್ಲಿನ ಋಣ.

Monday, October 15, 2007

ಮದ್ಯಸಾರ:ಭಾಗ ನಾಲ್ಕು

*
ಯಾವ ಸಂಪತ್ತಿಗೆ ಕುಡಿಯಬೇಕೊ
ಕುಡಿದರೂ ಅವಳ ನೆನಪಾಗುವುದಾದರೆ.
ಆಗ ಅವಳನ್ನು ಕ್ಷಮಿಸುವುದು ಸುಲಭ
ಎಂಬುದು ಬೇರೆ ಮಾತು

*
ಕರಗುತಿವೆ ಕೊರಗು ಬಾಟಲಿನಲ್ಲಿ
ಕಡೆಗೊಂದೇ ಉಳಿದಿದೆ ಚಿಂತೆ
ಕುಡಿಯಲಾರದ ಅವಳು ಹೇಗೆ
ನಿಭಾಯಿಸುತಿರುವಳೋ ಈ ಕ್ಷಣವ?

*
ಮೋರೆ ನೋಡದೆ ಅಪ್ಪಿ
ಚಿಂತೆ ಕಳೆವಳು ಮದಿರೆ
ಮೋರಿಯಾದರೆ ಏನು
ಬಾರದಿರುವುದೆ ನಿದಿರೆ

*
ತಂತಿ ಹರಿದ ವೀಣೆ ನಾನು
ನುಡಿಸಲಾಗದು
ಕುಡಿತ ನನ್ನ ಎದೆಯ ಬಡಿತ
ಬಿಡಿಸಲಾಗದು

*
ಯುಗಗಳ ಬಳಿಕ ಸಿಕ್ಕಿರುವೆ ಗೆಳೆಯ ಹೀಗೆ
ಮೆಚ್ಚನಾ ಪರಮಾತ್ಮ ಕುಡಿಸದೆ ಕಳಿಸಿದರೆ ಹಾಗೇ
ಮುಗಿಯುವುದೆ ತಬ್ಬಿದರೆ, ಮಾತಾಡಿದರೆ ನಕ್ಕು
ಹೇಳಲಾಗದ್ದನ್ನೂ ಹೇಳಲು ಏರಲೇಬೇಕು ಕಿಕ್ಕು

Thursday, October 11, 2007

ಮದ್ಯಸಾರ: ಭಾಗ ಮೂರು


*
ಕುಡಿದ ವಿಸ್ಕಿಯ ವಾಸನೆ ನಿಮಗೆ ಮಾತ್ರ
ನನಗದರ ಅರಿವೇ ಇಲ್ಲ
ನನ್ನ ಹಿಂಡುವ ದುಃಖ ನನಗೆ ಮಾತ್ರ
ನಿಮಗದರ ಪರಿವೆ ಇಲ್ಲ

*
ಎಲ್ಲರೂ ಮಹಾತ್ಮರಾದರೇನು ಚಂದ
ಹಾಳಾಗಿ ಹೋಗಬೇಕಿದೆ ನಮಗೆ
ಕುಡಿಸಲಾಗದ ಜಾಣರೆ ನಿಮಗೆ
ಬಿಡಿಸುವ ಹಟವೇಕೆ?

*
ಮದಿರೆಯ ಕೃಪೆ
ಇದು ಮದಿರೆಯ ಕೃಪೆ
ಪ್ರತಿಯೊಂದೂ ಹೋಗಿದೆ ಮರೆತು
ಅವಳ ಹೆಸರೊಂದರ ಹೊರತು

*
ಹೆಂಡ ಕುಡೀಬಾರದು, ಕುಡಿದರೆ
ಲೆಕ್ಕ ಇಡಬಾರದು
ಎತ್ತಿದ ಗ್ಲಾಸನು ಏನೇ ಆದರೂ
ಪಕ್ಕ ಇಡಬಾರದು

*
ಅಪಘಾತ ಆಗುವುದೇ ಹಣೆಯಲ್ಲಿದ್ದರೆ
ಆಸ್ಪತ್ರೆ ಮುಂದೆಯೇ ಆಗಲಿ
ಪ್ರೇಮ ಭಗ್ನವಾಗುವುದೇ ಬರೆದಿದ್ದರೆ
ಬಾರಿನ ಬಳಿಯೇ ಆಗಲಿ

*
ಇದೇ ಕೊನೆ ಭೇಟಿ ಅಂತ ಅವಳ ಒದ್ದಾಟ
ತಡವಾದರೆ ಬಾರು ಮುಚ್ಚುತ್ತೆ ಅಂತ ನನ್ನದು
ಶಾಲೆಯಾಗಲಿ ಮಧುಶಾಲೆಯಾಗಲಿ
ಮೊದಲ ದಿನವೇ ತಡ ಸರಿಯೆ ಹೇಳಿ?

Tuesday, October 9, 2007

ಮದ್ಯ ಸಾರ: ಭಾಗ ಎರಡು

*
ಶೇಂಗಾ, ಪಾಪಡ್, ಚಿಪ್ಸ್, ಎಗ್ ಪಕೋಡ
ಯಾವುದು ಗುಂಡಿಗೆ ಸರಿಯಾದ ಜೋಡಿ?
ತಿಳಿಯದು ಏನೊ ಎಂತೋ ನಿಮ್ಮ ರೀತಿ
ನನ್ನ ಆಯ್ಕೆ ಇದು: ಮುಗಿದುಹೋದ ಪ್ರೀತಿ

*
ಕುಡಿದ್ರೂ ಲಿಮಿಟ್ಟಲ್ಲಿರಬೇಕು ಎನುವ
ಜಾಣರು ತಿಳಿಯುವುದೆಂದು
ಎಲ್ಲ ಲಿಮಿಟ್ಟುಗಳ ಮೀರಬೇಕೆಂದೇ
ನಾವು ಕುಡಿಯುವುದೆಂದು

*
ಬಹಳ ದಿನಗಳ ನಂತರ ಗೆಳೆಯ ಸಿಕ್ಕ
ತೆರೆಯಬೇಕಿದೆ ಜತೆಗೆ ಹಳೆಯ ಲೋಕ
ವರುಷಗಳ ಅಂತರವ ಸಲೀಸಾಗಿ ದಾಟಲು
ಬೇಕೊಂದು ಓಪನರ್, ಎರಡಾದರೂ ಬಾಟಲು

*
ನನ್ನ ಮಾತನ್ನು ನಂಬಿ ಸ್ವಾಮಿ
ನಾನು ಕುಡಿದಿದ್ದೇನೆ
ಹಾಗೆಂದೇ
ನನ್ನ ಮಾತನ್ನು ನಂಬಿ!

Sunday, October 7, 2007

ಮದ್ಯಸಾರ: ಭಾಗ ಒಂದು

ಇಲ್ಲಿನ ಸಾಲುಗಳಲ್ಲಿ ಮದ್ಯವಂತೂ ಇದೆ. ಪದ್ಯ ಇದೆಯಾ ನೀವು ಹೇಳಿ...

Friday, October 5, 2007

ಕಾಮೆಂಟ್ರಿ-2

ಟಿವಿಯಲ್ಲಿ ನೂರಾ ಎಂಟನೇ ಸಲ ತೋರಿಸುತ್ತಿರುವ ರೀಪ್ಲೆಯಲ್ಲೂ ಮಿಸ್ಬಾ ಉಲ್ ಹಕ್‌ನ ಆ ಕೊನೆ ಹೊಡೆತ ಸಿಕ್ಸರ್‌ಗೆ ಹೋಗುತ್ತೇನೊ ಎಂಬ ಆತಂಕದಿಂದಲೇ ನೋಡುತ್ತಿದ್ದೇವೆ. ಟ್ವೆಂಟಿ ಟ್ವೆಂಟಿ ವಿಶ್ವಕಪ್‌ನ ಆ ರೋಚಕ ಅಂತ್ಯವನ್ನು ಕುರಿತ ಜೋಕೊಂದು ಎಸ್ಸೆಮ್ಮಿಸ್ಸಿನಲ್ಲಿ ಹಂಚಿಕೊಂಡು ಹಳೆಯದಾಗಿದೆ. ಆದರೇನು? ಅದನ್ನೂ ರೀಪ್ಲೆ ಮಾಡೋಣ: ಹಿಂದೆ ಯಾರೂ ಇರಲ್ಲ ಅಂದ್ಕೊಂಡು ಮಿಸ್ಬಾ ಸಿಕ್ಸ್ ಹೊಡೆಯೋಕ್ ಹೋದ, ಪಾಪ, ಮಲೆಯಾಳಿಗಳು ಪ್ರಪಂಚದ ಮೂಲೆ ಮೂಲೆಯಲ್ಲೂ ಇರ್‍ತಾರೆ ಅನ್ನೋದು ಅವನಿಗೆ ಗೊತ್ತಿಲ್ಲ!
*
ಕೇರಳದ ಡಿಸ್ಕೋ ಡ್ಯಾನ್ಸರ್, ಬರೋಡಾದ ಅಣ್ಣ-ತಮ್ಮ, ಲಕ್ನೋದ ರುದ್ರ, ನಮ್ಮೂರಿನ ಉತ್ತಪ್ಪ, ಹರಿಯಾಣದ ಜೋಗಿ,ಪಂಜಾಬಿನ ಸಿಖ್ಖರು, ಇನ್ನೂ ಯಾವ್ಯಾವುದೋ ಸಣ್ಣ ಊರುಗಳಲ್ಲಿ ಸಿಕ್ಕವರು -ಇವರೆಲ್ಲ ಜಾರ್ಖಂಡ್‌ನ ‘ದೋಣಿ’ಯಲ್ಲಿ ಕೂತು ಜಗತ್ತನ್ನೇ ಗೆದ್ದಿದ್ದು ಸಣ್ಣ ವಿಷಯವಲ್ಲ. ಸರಿಯಾಗಿ ಇಂಗ್ಲಿಷ್ ಬಾರದ, ಮಾಧ್ಯಮದ ಮುಂದೆ ಏನು ಮಾತನಾಡಬಾರದು ಎಂಬುದೂ ತಿಳಿಯದ ಈ ಹುಡುಗರು ಯಾರೂ ನಿರೀಕ್ಷಿಸಿರದ ವೇಳೆಯಲ್ಲಿ ಥೇಟ್ ಲಗಾನ್ ತಂಡದ ರೀತಿಯಲ್ಲಿ ವಿಶ್ವಕಪ್ ಗೆದ್ದು ತಂದದ್ದು ವಿಶೇಷ. ಈ ಸಣ್ಣ ಊರಿನವರ ಸಾಮರ್ಥ್ಯದ ಬಗ್ಗೆ ಧೋನಿ ಮಾತನಾಡಿದ್ದು ಇನ್ನೂ ವಿಶೇಷ. ಚೆಂದ ಆಡುವ ಈ ಧೋನಿ ಎಂಬ ಹುಡುಗನ ಮಾತೂ ಚೆಂದ. ಆತನ ಇನ್ನೊಂದು ಡೈಲಾಗ್ ಹೀಗಿದೆ: ‘ಚರಿತ್ರೆಯ ಬಗ್ಗೆ ನಾನು ತಲೆಕಡಿಸಿಕೊಳ್ಳುವುದಿಲ್ಲ, ಚರಿತ್ರೆ ಆದಾಗ ಅದೂ ಮೊದಲ ಬಾರಿಗೇ ಸಂಭವಿಸಿರುತ್ತದೆ.’
*
ಕೆಲವೇ ತಿಂಗಳ ಹಿಂದೆ ಆಭಿಮಾನಿಯೊಬ್ಬಳು ತಬ್ಬಿ ಮುತ್ತಿಟ್ಟಾಗ ಧೋನಿ ನಾಚಿ ಕೆಂಪಾಗಿದ್ದರು. ಇದೀಗ ಬೆಂಗಳೂರಿನಲ್ಲಿ ರಿಕಿ ಪಾಂಟಿಂಗ್‌ಗೆ ಅದ್ಯಾರೋ ರೆಡ್ಡಿ ತಬ್ಬಿ ಮುತ್ತಿಡಲು ಹೋಗಿದ್ದಾನೆ. ಮೊದಲೇ ಟೊಮೆಟೋ ಥರ ಇರುವ ಪಾಂಟಿಂಗ್ ಕೂಡ ಕೆಂಪಾಗಿದ್ದಾರೆ. ನಾಚಿಕೆಯಿಂದಲ್ಲ, ಕುದಿಯುವ ಕೋಪದಿಂದ. ಕ್ರಿಕೆಟ್ ಮೈದಾನದಲ್ಲಿ ಏಕಾಗ್ರತೆ ಹಾಳು ಮಾಡಲು ಸ್ಲೆಡ್ಜಿಂಗ್ ಒಂದೇ ತಂತ್ರವೆಂದು ತಿಳಿದಿರುವ ಆಸ್ಟ್ರೇಲಿಯನ್ನರಿಗೆ ರೆಡ್ಡಿಯ ಈ ಪರಿ ಹೊಚ್ಚ ಹೊಸದು.
*
ಬೆಂಗಳೂರಿಗರಿಗೆ ಅತ್ಯಂತ ಖುಷಿ ಆಗೋದು ಯಾವಾಗ?
ಹೊಸ ಡಿಜಿಟಲ್ ಮೀಟರ್ ಅಳವಡಿಸಿದ ಆಟೋ ಸಿಕ್ಕಾಗ(ಡಿಜಿಟಲ್ ಮೀಟರ್ ಜಂಪಾಗುವುದಿಲ್ಲ ಎಂಬುದು ಸೋಸಿಲಿಯ ಶೋಧ)
*
ಪತ್ರಿಕೆಗಳಲ್ಲಿ ಬರುತ್ತಿರುವ ರೋಡ್ ರೇಜ್(ಹಾದಿ ರಂಪ?!) ಪ್ರಕರಣಗಳ ಸಂಖ್ಯೆ ಕಂಗೆಡಿಸುವಂತಿದೆ. ಮಗುವನ್ನು ಶಾಲೆಗೆ ಬಿಟ್ಟು ಗಂಡನೊಂದಿಗೆ ಕಾರಿನಲ್ಲಿ ಮರಳುತ್ತಿದ್ದ ದಿಲ್ಲಿಯ ಮಹಿಳೆಯೊಬ್ಬಳ ಕಾರು ಮತ್ತೊಂದು ವಾಹನಕ್ಕೆ ಬಡಿದದ್ದೇ, ಅದರಲ್ಲಿದ್ದವನು ಕಬ್ಬಿಣದ ಸರಳಿನಿಂದ ಆಕೆಯ ತಲೆಗೇ ಅಪ್ಪಳಿಸಿದ್ದಾನೆ. ಆಸ್ಪತ್ರೆಯಲ್ಲಿರುವ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ. ವಾಹನದಲ್ಲಿ ಕಬ್ಬಿಣದ ಸರಳನ್ನು ಸಿದ್ಧವಾಗಿ ಇಟ್ಟುಕೊಂಡೇ ರಸ್ತೆಗಿಳಿಯುವ ಇಂಥ ರಸ್ತೆ ರಾಕ್ಷಸರು ಇಲ್ಲೂ ಇದ್ದಾರೆ. ತನ್ನ ಕಾರಿನ ಡಿಕ್ಕಿಯಿಂದ ಕಬ್ಬಿಣದ ಸರಳೆತ್ತಿಕೊಂಡು ಸಿಟಿಬಸ್ ಚಾಲಕನನ್ನು ಪ್ರಾಣಭೀತಿಯಿಂದ ಕೈಮುಗಿಯುವಂತೆ ಹೆದರಿಸಿದ ಮಹಾತ್ಮನೊಬ್ಬನನ್ನು ಕಣ್ಣಾರೆ ನೋಡಿದ್ದೇನೆ. ಅವಾಚ್ಯ ಬೈಗುಳಗಳಿಗೆ ಹೆದರಿಯೇ ವಾಹನ ಕೊಳ್ಳಲು ಹಿಂದೆಗೆಯುವವರನ್ನು ನೀವೂ ಕಂಡಿರುತ್ತೀರಿ. ಕ್ಷಣಾರ್ಧದಲ್ಲಿ ಜೀವಕ್ಕೇ ಎರವಾಗುವ ಇಂಥ ಘಟನೆಗಳನ್ನು ತಪ್ಪಿಸಲು ಸದಕ್ಕಿರುವ ದಾರಿಗಳು ಮೂರು: ಎಚ್ಚರಿಕೆಯಿಂದ ಡ್ರೈವ್ ಮಾಡಿ. ತಪ್ಪು ನಿಮ್ಮದಾಗಿದ್ದರೆ ಕ್ಷಮಿಸಿ ಎನ್ನಿ. ತಪ್ಪು ಅವರದಾದರೆ ಕ್ಷಮಿಸಿಬಿಡಿ.
*
ಊಟ ಅರ್ಧಕ್ಕೆ ಬಿಟ್ಟು ಎದ್ದವರನ್ನು ನೋಡಿದ್ದೇವೆ. ಉಪವಾಸ ಅರ್ಧಕ್ಕೆ ಬಿಟ್ಟು ಎದ್ದವರನ್ನು ಮೊನ್ನೆ ನೋಡಿದೆವು. ಬಂದ್ ಮಾಡ್ರಿ ನಿಮ್ಮ ಬಂದ್‌ನಾ ಅಂತ ಸುಪ್ರಿಂ ಕೋರ್ಟ್ ಹೇಳಿತು ಅಂತ ಕರುಣಾನಿಧಿ ಉಪವಾಸ ನಿಲ್ಲಿಸಬೇಕಾಯಿತು. ಬಂದ್‌ನಿಂದ ಜನಕ್ಕೆ ತೊಂದರೆ ಎಂಬುದನ್ನು ಎಲ್ಲರೂ ಒಪ್ಪುತ್ತಾರಾದರೂ, ದೇಶದಲ್ಲಿ ಏನೇನೋ ಆದಾಗ ಮಾತನಾಡದ ಸುಪ್ರೀಂ ಕೋರ್ಟಿಗೆ ಈಗ ಮಾತ್ರ ರಾಷ್ಟ್ರಪತಿ ಆಳ್ವಿಕೆ ಹೇರುವಷ್ಟು ಸಿಟ್ಟು ಬಂದದ್ದು ನ್ಯಾಯವೇ ಎಂಬುದು ಕೆಲವರ ಪ್ರಶ್ನೆ. ಆದರೆ ಮಿಸ್ ಸೋಸಿಲಿ ಹೇಳೋದೇ ಬೇರೆ: ವಯಸ್ಸಾದ ಕರುಣಾ ಊಟ ಬಿಡುವುದನ್ನು ನೋಡಲಾಗದೆ ಕಾನೂನು ಕರುಣೆ ತೋರಿತಷ್ಟೇ ಅನ್ನೋದು ಆಕೆಯ ವಾದ!