Saturday, March 31, 2007

ನನ್ನ ವಿನ್ಯಾಸದ ಹತ್ತು ಮುಖ ಪುಟಗಳು


ಜತೆಗಿರುವನು ಚಂದಿರದ ಹುಡುಗಿ ಮತ್ತು ಪುಟ್ಟ ಪಾದದ ಗುರುತಿನ ಮೀನುಪಾತ್ರೆ ನನ್ನ ನೆಚ್ಚಿನ ಚಿತ್ರಕಾರ ರಾವ್‌ಬೈಲ್‌ ಅವರವು. ಈ ಕತೆಗಳ ಸಹವಾಸವೇ ಸಾಕುವಿನಲ್ಲಿ ಕೊಡೆ ಹಿಡಿದು ನಡೆಯುತ್ತಿರುವವರು ಗೆಳೆಯ ಸ್ರಜನ್ ಕುಂಚದಿಂದ ಹೊರಬಿದ್ದವರು. ನಾಯಕನಾಗುವುದು ಹೇಗೆಯ ಪೆಂಗ್ವಿನ್‌ಗಳನ್ನು ಹಿಡಿದಿದ್ದು ನೆಟ್‌ನಲ್ಲಿ. ಜಾನಕಿ ಕಾಲಂ ಮತ್ತು ಕಲರವ ಪುಸ್ತಕಗಳ ಛಾಯಾಚಿತ್ರಗಳೆರಡೂ ಬೆಂಗಳೂರಿನ ಟಿಪ್ಪು ಅರಮನೆಯವು. ತೆಗೆದದ್ದು ನಾನೆ.Monday, March 26, 2007

ಮೇಷ್ಟರ ಸೈಕಲ್ಲಿನ ಬೇಬಿ ಸೀಟು(ಕತೆ)

ನಿವಾರದ ಮಾರ‌‌‌ನಿಂಗ್ ಸ್ಕೂಲಿನ ಎರಡನೇ ಪೀರಿಯಡ್‌ನಲ್ಲಿ ಎಯ್ತ್ ಬಿ ವಿದ್ಯಾರ್ಥಿಗಳಿಗೆ `ಸರಳರೂಪಕ್ಕೆ ತನ್ನಿ' ಎಂಬ ಲೆಕ್ಕದ ಎರಡನೇ ಸ್ಟೆಪ್ಪನ್ನು ಬೋರ್ಡಿನ ಮೇಲೆ ಮಾಡಿ ಬಾಗಿಲ ಕಡೆ ತಿರುಗಿದ ಗೋಪಾಲಯ್ಯ ಮೇಷ್ಟ್ರು ಅಲ್ಲಿ ಎಷ್ಟೋ ಹೊತ್ತಿನಿಂದ ಎಂಬಂತೆ ನಿಂತಿದ್ದ ತಮ್ಮ ಧರ್ಮ ಪತ್ನಿಯನ್ನು ಕಂಡು ತುಸು ಅಚ್ಚರಿಗೊಂಡರು. ಮರುಕ್ಷಣವೇ ತಮ್ಮ ಇಪ್ಪತ್ತೆಂಟು ವರ್ಷಗಳ ಸರ್ವೀಸಿನಲ್ಲಿ ಶಾರದಮ್ಮ ಎಂದೂ ಯಾವ ಕಾರಣಕ್ಕೂ ತಮ್ಮನ್ನು ಹುಡುಕಿಕೊಂಡು ಶಾಲೆಯ ತನಕ ಬಂದಿರಲಿಲ್ಲವೆಂಬುದು ನೆನಪಾಗಿ ಸಣ್ಣ ಆತಂಕದಿಂದಲೇ ಲೆಕ್ಕವನ್ನು ಅಲ್ಲಿಗೇ ಕೈಬಿಟ್ಟು , ಗಲಾಟೆ ಮಾಡದೆ ಪ್ರಯತ್ನಿಸುತ್ತಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿ ಹೊರಬಂದರು.

ಮೇಷ್ಟ್ರು ಹೊರಗೆ ಬಂದ ತಕ್ಷಣ ಗಾಬರಿಗೊಂಡಿದ್ದ ಶಾರದಮ್ಮ ಮಗಳು ಪೃಥ್ವಿಕಾ ಬೆಳಗ್ಗಿನಿಂದ ಮನೆಯಲ್ಲಿಲ್ಲದ್ದನ್ನೂ ಎರಡು ದಿನದಿಂದ ಅವಳು ಒಂಥರಾ ಇದ್ದುದನ್ನೂ, ತಮಗೆ ತಿಳಿಸದೆ ಎಂದೂ ಹೀಗೆ ಹೊರಗೆ ಹೋದವಳಲ್ಲ ವೆಂಬುದನ್ನೂ ಕಡೆಗೆ ತಮಗೇಕೋ ಸಿಕ್ಕಾಪಟ್ಟೆ ಭಯವಾಗುತ್ತಿದೆಯೆಂಬುದನ್ನೂ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.

`ಗಾಬರಿ ಪಡಬೇಡ, ಪುಚ್ಚಿಯೇನು ಪುಟ್ಟ ಮಗುವೇ? ಕಾಲೇಜು ಓದೋ ಹುಡುಗಿ' ಎಂಬ ಸಮಾಧಾನದ ಮಾತಾಡಿದರೂ ಮೇಷ್ಟ್ರಿಗೂ ಎಂಥದೋ ಆತಂಕ ನಿಧಾನವಾಗಿ ತುಂಬಿಕೊಳ್ಳುತ್ತಿದ್ದುದು ಅವರು ತಕ್ಷಣ ಹೆಡ್ ಮಾಸ್ಟರ ಕೋಣೆಗೆ ಹೋಗಿ ಅರ್ಧ ದಿನದ ಸಿ ಎಲ್ ಹಾಕಿ ಬಂದದ್ದರಿಂದಲೇ ತಿಳಿಯುವಂತಿತ್ತು.ಮನೆಗೆ ಹೋಗುವ ದಾರಿಯಲ್ಲಿ ಶಾರದಮ್ಮ ಮಗಳು ಇಲ್ಲದಿರುವುದನ್ನು ತಾನು ಮೊದಲು ಹೇಗೆ ಕಂಡುಕೊಂಡೆ ಎಂಬುವದನ್ನ ಪದೇಪದೇ ಅಳುವ ದನಿಯಲ್ಲಿ ವಿವರಿಸುವಾಗ ಮೇಷ್ಟ್ರು ತಾಳ್ಮೆ ಕಳೆದುಕೊಂಡು `ಅಂದರೆ ನಿನ್ನ ಮಾತುಗಳ ಅರ್ಥವೇನು? ನಮ್ಮ ಪುಚ್ಚಿ ಯಾವನೋ ಜೊತೆಗೆ ಓಡಿಹೋಗಿದ್ದಾಳೆ ಅಂತಲಾ? ಎಂದು ಸಿಡಿಮಿಡಿ ಗೊಂಡರು. ಮೇಷ್ಟ್ರು ರೇಗಿದ್ದಕ್ಕೋ ತಮ್ಮ ಮನದಾಳದಲ್ಲಿದ್ದ ಅನುಮಾನವನ್ನು ಆಡಿ ತೋರಿಸಿದ್ದಕ್ಕೋ ಅಂತೂ ಮನೆ ತಲುಪುವ ತನಕ ಶಾರದಮ್ಮ ಮತ್ತೆ ಮಾತಾಡಲಿಲ್ಲ.

ಮನೆಗೆ ಬಂದ ಮೇಷ್ಟರು ಮಗಳ ಕೋಣೆಯಲ್ಲಿ ಏನು ಎಂಬುದು ಗೊತ್ತಿಲ್ಲದೆಯೂ ಏತಕ್ಕಾಗಿಯೋ ಹುಡುಕಾಡಿದರು. ಗೋಡೆಗೆ ನೇತುಹಾಕಿದ ಪೃಥ್ವಿಕಾಳ ಬಟ್ಟೆಗಳನ್ನೂ, ಮುಕ್ತಾಯದ ಹಂತದಲ್ಲಿದ್ದ ಅವಳ ಹೊಸ ಪೇಂಟಿಂಗನ್ನೂ, ಗೋಡೆಗೆ ಹಚ್ಚಿದ ಅವಳ ಇಷ್ಟದ ಸ್ಟೆಫಿಗ್ರಾಫ್‌ಳ ಪೋಸ್ಟರನ್ನೂ ನೋಡುತ್ತಾ ಮೇಷ್ಟ್ರಿಗೆ ಮಗಳು ಒಳಗೆಲ್ಲೋ ಸ್ನಾನ ಮಾಡುತ್ತಿರಬಹುದು ಅಷ್ಟೇ ಎಂದೆನಿಸಿಬಿಟ್ಟಿತು. ಆದರೆ ಸಂಜೆಯಾದರೂ ಪೃಥ್ವಿಕಳ ಸುಳಿವೇ ಇಲ್ಲದಿರಲು ಮನೆಯ ಉಷ್ಣತೆ ನಿಧಾನವಾಗಿಯೇ ಏರ ತೊಡಗಿತು. ಮನೆಯ ಹೊರಗೆ ಒಳಗೆ ಮತ್ತೆ ಗೇಟಿನವರೆಗೂ ಹೋಗಿ ಬಗ್ಗಿ ಬೀದಿಯ ಅಂಚಿನವರೆಗೂ ದೃಷ್ಟಿ ಹಾಯಿಸಿ ಮಾಡುತ್ತಿದ್ದ ಮೇಷ್ಟ್ರಿಗೆ ಇನ್ನೇನು ಅಳಲು ಸಿದ್ಧವಾಗಿ ನಿಂತಿರುವ ತಮ್ಮ ಹೆಂಡತಿಯತ್ತ ನೋಡುವ ಧೈರ್ಯವಾಗಲಿಲ್ಲ.


ಸ್ವಲ್ಪ ಹೊತ್ತಿನ ಬಳಿಕ ಒಳಗೆ ಹೋಗಿ ಪ್ಯಾಂಟು ಧರಿಸಿ ಚಪ್ಪಲಿ ಮೆಟ್ಟಿಕೊಂಡು ಪತ್ನಿಗೆ `ನೋಡು, ಪುಚ್ಚಿ ಅಂಥವಳಲ್ಲ , ನೀನು ಧೈರ್ಯವಾಗಿರು. ನಾನು ಅವಳ ಗೆಳತಿಯರ ಮನೆಗಳಲ್ಲಿ ವಿಚಾರಿಸುತ್ತೀನಿ' ಎಂದು ಹೇಳಿ ಮನೆಯಿಂದ ಹೊರ ಬಿದ್ದರು. ಟಿವಿಯಲ್ಲಿ ಮೆಗಾಸೀರಿಯಲ್ ನೋಡುತ್ತಾ ಕುಳಿತಿದ್ದ ದಪ್ಪನೆಯ ಹೆಂಗಸರ ಬೆಳಗ್ಗೆಯಿಂದಾ ಕಾಣ್ತಾಯಿಲ್ವಾ? ರಾತ್ರಿ ಇದ್ದಳಾ? ನಿಮಗೆ ಹೇಳದೇ ಹೋದಳಾ? ಎಂಬಂಥ ರಾಗದ ಪ್ರಶ್ನೆಗಳನ್ನು ಎದುರಿಸಲಾಗದೆ ಕಂಗಾಲಾಗಿ ಬೇಗನೆ ಮನೆಗೆ ತಿರುಗಿ ಬಂದ ಮೇಷ್ಟರು ತೀರ ನಿಶ್ಯಕ್ತರಾಗಿದ್ದರು. ಮಬ್ಬುಗತ್ತಲಲ್ಲಿ ಮನೆಯ ಬಾಗಿನಲ್ಲಿ ಎದುರುಬದುರು ಮೌನವಾಗಿ ಕುಳಿತ ದಂಪತಿಗಳಿಗೆ ತಾವು ಕಾಯುತ್ತಾ ಕುಳಿತಿರುವುದು ಮಗಳಿಗಾಗಿಯೋ ಅಥವಾ ಮಗಳ ಕುರಿತ ಸುದ್ದಿಗಾಗಿಯೋ ಎಂಬಂಥ ವಿಚಿತ್ರ ಅನುಮಾನವಾಯಿತು.

ಯಾವ ಕ್ಷಣವನ್ನು ಎದುರಿಸಲು ದಂಪತಿಗಳು ದೇವರಲ್ಲಿ ಧೈರ್ಯ ಬೇಡುತ್ತಾ ಕುಳಿತಿದ್ದರೋ ಆ ಕ್ಷಣ ಬಂದೇಬಿಟ್ಟಿತು. ರಾತ್ರಿ ಎಂಟು ಗಂಟೆಯ ಸಮಯದಲ್ಲಿ ಪೃಥ್ವಿಕಾಳ ಗೆಳತಿ ಎಂದು ಹೇಳಿಕೊಂಡು ಬಂದ ಆ ಹಸಿರು ಲಂಗದ ಹುಡುಗಿ ರೂಪದಲ್ಲಿ . ಅವಳು ಹೇಳಿದ್ದರ ಸಾರಾಂಶವಿಷ್ಟೇ: ಹಿಂದೀ ಮಧ್ಯಮಾ ಪರೀಕ್ಷೆಯ ತಯಾರಿಗೆ ಪದ್ಮನಾಭ ಎಂಬುವನ ಹತ್ತಿರ ಟ್ಯೂಷನ್‌ಗೆಂದು ಹೋಗುತ್ತಿದ್ದ ಪೃಥ್ವಿಕಾ ಕಳೆದೆರಡು ತಿಂಗಳಿನಿಂದ ಅವನನ್ನೇ ಪ್ರೀತಿಸತೊಡಗಿದ್ದಳು. ಮತ್ತು ಮನೆಯಲ್ಲಿ ಹೇಳುವ ಧೈರ್ಯವಾಗದೆ ಈ ದಿನ ಬೆಳಿಗ್ಗೆ ಅವನೊಡನೆ ಎಲ್ಲಿಗೋ ಓಡಿಹೋಗಿದ್ದಳು.


ಹಸಿರು ಲಂಗದ ಹುಡುಗಿ ಯಾವಾಗ ಹೋದಳೋ ತಿಳಿಯಲಿಲ್ಲ.ಮಾಸ್ತರು ಆಕಾಶವನ್ನೇ ದಿಟ್ಟಿಸುತ್ತಾ ಕುಳಿತುಬಿಟ್ಟರು. ಏನೊಂದೂ ಮಾತಾಡದೆ. ಹಿನ್ನೆಲೆಗೆ ಶಾರದಮ್ಮನ ಮುಸಿಮುಸಿ ಅಳು ಇತ್ತು. ಹಾಗೆ ಅದೆಷ್ಟು ಹೊತ್ತು ಕುಳಿತಿದ್ದರೋ ಮೇಷ್ಟರು ಒಮ್ಮೆಲೆ ಪತ್ನಿಯೆಡೆಗೆ ತಿರುಗಿ ಗಡುಸಾದ ದನಿಯಲ್ಲಿ , `ಹೀಗೇ ಅಳ್ತಾ ಕೂತಿರ್ತೀಯಾ ಇಲ್ಲಾ ಎದ್ದು ಅಡಿಗೆ ಮಾಡ್ತೀಯಾ' ಎಂದು ರೇಗಿದರು. ಆಕೆ ಕುಳಿತಲ್ಲಿಂದ ಏಳದೆ ಅಳುವುದನ್ನು ಮುಂದುವರೆಸಲು ಮೇಷ್ಟ್ರು ವಿಚಿತ್ರ ದನಿಯಲ್ಲಿ ಚೀರಿದರು, `ಯಾವ ಕತ್ತೆ ಮುಂಡೆ ಎಲ್ಲಿ ಹಾಳಾದರೆ ನಂಗೇನು?ನೀನೇನು ಎದ್ದು ಅಡಿಗೆ ಮಾಡ್ತೀಯೋ ಇಲ್ಲ ಗ್ರಹಚಾರ ಬಿಡಿಸ್ಬೇಕೋ?' ಶಾರದಮ್ಮ ಕಣ್ಣೊರೆಸಿಕೊಳ್ಳುತ್ತಾ ಎದ್ದು ನಡೆದ ಎಷ್ಟೋ ಹೊತ್ತಿನ ನಂತರವೂ ಮೇಷ್ಟ್ರು ಕಂಪಿಸುತ್ತಲೇ ಇದ್ದರು.

ಪೃಥ್ವಿಕಾ-ಪುಚ್ಚಿ-ಗೋಪಾಲಯ್ಯ ಮೇಷ್ಟ್ರ ಮುದ್ದಿನ ಒಬ್ಬಳೇ ಮಗಳು. ಅಮ್ಮನಿಗಿಂತ ಅಪ್ಪನನ್ನೇ ಹಚ್ಚಿಕೊಂಡು ಬೆಳೆದ ಹುಡುಗಿ. ಅವಳು ಚಿಕ್ಕವಳಿದ್ದಾಗ ಮೇಷ್ಟ್ರು ತಮ್ಮ ಮಿತ್ರ ವಿಜಯಾ ಬ್ಯಾಂಕ್ ಉದ್ಯೋಗಿ ಸುಬ್ರಮಣ್ಯಂ ಅವರು ಎಲ್ಲಿಂದಲೋ ತರಿಸುತ್ತಿದ್ದ ಸೋವಿಯಟ್ ರಷ್ಯಾದ ನುಣುಪು ಹಾಳೆಗಳ ಬಣ್ಣದ ಚಿತ್ರದ ಪುಸ್ತಕಗಳನ್ನು ಮಗಳಿಗೋಸ್ಕರ ಬೇಡಿ ತರುತ್ತಿದ್ದರು. ಅದರಲ್ಲಿನ ಚಿತ್ರಗಳನ್ನು ನೋಡುವುದು, ನುಣುಪು ಹಾಳೆಗಳನ್ನು ತನ್ನ ನುಣುಪು ಕೆನ್ನೆಗಳಿಗೆ ಒತ್ತಿಕೊಳ್ಳುವುದು ಎಂದರೆ ಪುಟ್ಟ ಪೃಥ್ವಿಕಾಗೆ ಎಲ್ಲಿಲ್ಲದ ಖುಷಿ. ಮಗಳಿಗೆ ಚಿತ್ರಕಲೆಯಲ್ಲಿನ ಆಸಕ್ತಿಯನ್ನು ಕಂಡ ಮಾಸ್ತರು ಅವಳು ನಾಲ್ಕನೇ ಕ್ಲಾಸಿನಲ್ಲಿರುವಾಗ ಒಂದು ದಿನ ಬಣ್ಣದ ಕ್ರೆಯಾನ್ಸ್ ತಂದುಕೊಟ್ಟಿದ್ದರು. ಪೃಥ್ವಿಕಾ ಅವನ್ನು ತೆಗೆದುಕೊಂಡು ಮೇಷ್ಟ್ರ ನೋಟ್ಸ್ ಆಫ್ ಲೆಸೆನ್ ಪುಸ್ತಕದಲ್ಲಿ ದೊಡ್ಡ ಹಸಿರು ಗಿಳಿಯ ಚಿತ್ರ ಮೂಡಿಸಿದ್ದಳು. ಅವತ್ತೇ ಇರಬೇಕು ಮೇಷ್ಟ್ರು ಮೊದಲ ಬಾರಿಗೆ ಮಗಳಿಗೆ ಹೊಡೆದದ್ದು.

ಅದೇ ಕಡೆಯ ಸಲವೂ ಅನಿಸುತ್ತೆ. ಪೃಥ್ವಿಕಾ ಬರೆಯುತ್ತಿದ್ದ ಈಶ್ವರನ ಚಿತ್ರಗಳಲ್ಲಿ ಶಿವ ಪ್ರಶಾಂತವಾಗಿ ನಗುತ್ತಾ ತನ್ನೆರಡೂ ಕಣ್ಣುಗಳನ್ನು ಅರ್ಧಂಬರ್ಧ ಮುಚ್ಚಿಕೊಂಡಿದ್ದರೂ ಅದೇಕೋ ಹಣೆಗಣ್ಣು ಮಾತ್ರ ಅಗಲವಾಗಿ ತೆರೆದಿರುತ್ತಿದ್ದ. ಮೇಷ್ಟ್ರು ಅದನ್ನು ಹೇಳಿ ಯಾವಾಗಲೂ ಛೇಡಿಸುತ್ತಿದ್ದರು.ಅವಳು ಆಗ ಕೋಪದಿಂದ ಮುಖ ಊದಿಸಿಕೊಂಡರೆ ಮೇಷ್ಟ್ರು `ಪುಚ್ಚಿ ನೀನು ಮಾತ್ರ ಕೋಪಮಾಡಿಕೊಂಡು ಉರಿಗಣ್ಣು ಬಿಡಬೇಡ ತಾಯಿ, ಶಿವ ಬಿಟ್ಟರೂ ಪರವಾಗಿಲ್ಲ' ಎನ್ನುತ್ತಾ ಮತ್ತೆ ನಗಿಸುತ್ತಿದ್ದರು.

ಒಮ್ಮೆ ಅವಳು ಏಳನೇ ಕ್ಲಾಸಿನಲ್ಲಿದ್ದಾಗ ಇರಬೇಕು, ಅವಳಿಗೆ ಅದೇನೋ ಈಜು ಕಲಿಯುವ ಉಮೇದಿ ಬಂದುಬಿಟ್ಟಾಗ ಶಾರದಮ್ಮ ಬೇಡವೇ ಬೇಡ ಎಂದು ಬಿಟ್ಟರು. ಮೇಷ್ಟ್ರು ಮಾತ್ರ ಕಲಿಯಲಿ ಬಿಡೇ ಯಾವತ್ತೋ ಒಂದುದಿನ ಉಪಯೋಗವಾಗುತ್ತೆ ಎಂದು ಮ ಉದ್ದಿನ ಮಗಳನ್ನು ತಾವೇ ಊರಹೊರಗಿದ್ದ ಚಾನಲ್‌ಗೆ ಕರೆದುಕೊಂಡು ಹೋಗಿ ಮುಂಜಾನೆಯ ತಣ್ಣೀರಿನಲ್ಲಿ ಈಜು ಕಲಿಸಿದ್ದರು . ನೀರು ಸೋಕಿದ ಕ್ಷಣ ಛಳಿಗೋ ಆನಂದಕ್ಕೋ ಭಯಕ್ಕೋ ಅವಳು ಹಾಕಿದ ಕೇಕೆ ಅದರ ರಾಗ ಸಮೇತವಾಗಿ ಮೇಷ್ಟ್ರ ಕಿವಿಯಲ್ಲೇ ಇದೆ ಇಂದಿಗೂ. ಮೇಷ್ಟ್ರು ಮೊನ್ನೆ ಹೋದ ವರ್ಷ ಎಸ್ಸೆಲ್ಸಿ ಮೌಲ್ಯಮಾಪನಕ್ಕೆಂದು ಬೆಂಗಳೂರಿಗೆ ಹೋಗಿದ್ದಾಗ ಅಮ್ಮ ಬರೆದ ಇನ್ ಲ್ಯಾಂಡ್ ಪತ್ರದಲ್ಲೇ ಪೃಥ್ವಿಕಾ ನನಗೆ ಒಂದು ಜೀನ್ಸ್ ಪ್ಯಾಂಟ್ ಬೇಕೇ ಬೇಕು- ನೀಲಿ ಬಣ್ಣದ್ದು ಎಂದು ಸೇರಿಸಿದ್ದಳು.ಅದೇ ಪತ್ರ್ರದ ಬುಡದಲ್ಲಿ. ಅಂಟು ಹಾಕುವ ಮುನ್ನ ಶಾರದಮ್ಮ `ಜೀನ್ಸ್ ಪ್ಯಾಂಟ್ ಖಡಾಖಂಡಿತವಾಗಿಯೂ ಬೇಡ. ಬೇಕಾದರೆ ಒಂದು ಸಲ್ವಾರ್ ಕಮೀಜ್ ತರುವುದು' ಎಂದು ಬರೆದಿದ್ದರು ಮಗಳಿಗೆ ತೋರಿಸದಂತೆ.ಆದರೆ ಮೇಷ್ಟ್ರು ಬೆಂಗಳೂರಿಂದ ಬರುವಾಗ ಒಂದು ನೀಲಿಬಣ್ಣದ ಜೀನ್ಸ್ ಪ್ಯಾಂಟ್ ತಂದು ಒಂದೇ ಒಂದು ಇರಲಿ ಬಿಡೇ ಆದರೆ ಸ್ಕೂಲಿಗೆ ಹಾಕಬಾರದು ಪುಚ್ಚೀ ಎಂದಿದ್ದರು. ಅದಕ್ಕೇ ಪೃಥ್ವಿಕಾಗೆ ಅಪ್ಪ ಎಂರೆ ಪ್ರಾಣ.

ಪೃಥ್ವಿಕಾಗೆ ಸ್ಟೆಫಿ ಎಂದರೂ ಅಷ್ಟೇಪ್ರಾಣ.ಅವತ್ತೊಂದು ದಿನ ಇಪ್ಪತ್ತೈದು ರೂಪಾಯಿ ಕೊಟ್ಟು ಸ್ಟೆಫಿಯ ದೊಡ್ಡ ಪೋಸ್ಟರೊಂದನ್ನು ತಂದು ತನ್ನ ಕೋಣೆಯ ಗೋಡೆಗೆ ಅಂಟಿಸಿದಳು. ಮತ್ತೆ ಹದಿನೈದು ದಿನದ ನಂತರ ಗೆಳತಿಯೊಬ್ಬಳಿಂದ ತಗೊಂಡು ಬಂದ ಬಿಳಿ ಸ್ಕಟ್ ತೊಟ್ಟುಕೊಂಡು ಕೈಯಲ್ಲಿ ಟೆನಿಸ್ ಬ್ಯಾಟ್ ಹಿಡಿದುಕೊಂಡು ಹಣೆಗೊಂದು ಪುಸ್ತಕಕ್ಕೆ ಹಾಕುವಂಥ ರಬ್ಬರ್ ಬ್ಯಾಂಡ್ ಹಾಕಿಕೊಂಡು ಸ್ಟುಡಿಯೋಗೆ ಹೋಗಿ ಥೇಟ್ ಸ್ಟೆಫಿಯ ಭಂಗಿಯಲ್ಲೇ ಫೋಟೋ ತೆಗೆಸಿಕೊಂಡಳು. ಸೈಡ್ ಆಂಗಲ್‌ನಿಂದ ಆ ಫೋಟೋದಲ್ಲಿ ನೀನು ಸ್ವಲ್ಪ ಸ್ಟೆಫಿಯ ಥರನೇ ಕಾಣುತ್ತೀಯ ಪುಚ್ಚಿ ಎಂದು ಮೇಷ್ಟ್ರು ಮಗಳನ್ನು ಉಬ್ಬಿಸುವರು. ತೀರಾ ಮೊನ್ನೆ ಸ್ಟೆಫಿ ರಿಟೈರಾದಾಗಲಂತೂ ಪೃಥ್ವಿಕಾ ಅತ್ತೇಬಿಟ್ಟಿದ್ದಳು.ಸ್ಟೆಫಿಯ ಬಾಯ್ ಫ್ರೆಂಡ್ ಎಂಬ ಕಾರಣಕ್ಕಾಗಿಯೇ ಅವಳು ಅಗಾಸ್ಸಿಯನ್ನೂ ಇಷ್ಟಪಡುತ್ತಿದ್ದಳು.


ಪೃಥ್ವಿಕಾಗೆ ಮೊದಲಿನಿಂದಲೂ ಡೈರಿಮಿಲ್ಕ್ ಚಾಕಲೇಟ್ ಎಂದರೆ ಬಹಳ ಇಷ್ಟ ಎಂದು ಮೇಷ್ಟ್ರು ಆಗಾಗಅವನ್ನು ತರುತ್ತಿದ್ದರು. ಪೃಥ್ವಿಕಾ ಅವನ್ನು ತಿಂದಾದ ಮೇಲೆ, ನೇರಳೇ ಬಣ್ಣದ ಕವರುಗಳನ್ನ ಜೋಪಾನವಾಗಿ ಪುಸ್ತಕದ ಹಾಳೆಗಳ ನಡುವೆ ಶೇಖರಿಸು ತ್ತಿದ್ದಳು. ಮೇಷ್ಟರು, ಪೃಥ್ವಿಕಾ ಚಿಕ್ಕವಳಾಗಿದ್ದಾಗ ಅವಳಿಗೆಂದು ತಮ್ಮ ಸೈಕಲ್ಲಿಗೆ ಒಂದು ಪುಟ್ಟ ಸೀಟನ್ನು ಹೆಚ್ಚುವರಿಯಗಿ ಹಾಕಿಸಿದ್ದರು. ಈಗ ಪೃಥ್ವಿಕಾ ದೊಡ್ಡವಳಾಗಿ, ಅದರ ಮೇಲೆ ಕುಳಿತುಕೊಳ್ಳುವುದನ್ನು ಬಿಟ್ಟು ಎಷ್ಟೋ ದಿನಗಳಾಗಿದ್ದರೂ, ತನಗೇ ಒಂದು ಸೈಕಲ್ ಬೇಕು-ಲೇಡಿಬರ್ಡ್ ಎನ್ನುತ್ತಿರುವಾಗಲೂ, ಮೇಷ್ಟ್ರಿಗೆ ಆ ಪುಟ್ಟ ಸೀಟನ್ನು ತೆಗೆಸಲು ಮನಸ್ಸಾಗದೆ ಹಾಗೇ ಬಿಟ್ಟಿದ್ದರು. ಯಾವಾಗಲಾದರೂ ಮನೆಗೆ ಬಂದ ಅತಿಥಿಗಳು ಆ ಪುಟ್ಟ ಸೀಟನ್ನು ನೋಡಿ, ಅರೇ, ನಿಮ್ಮ ಮನೆಯಲ್ಲಿ ಪುಟ್ಟ ಮಕ್ಕಳೇ ಇಲ್ಲವಲ್ಲ ಎಂದು ಉದ್ಗಾರ ತೆಗೆಯುತ್ತಿದ್ದರು.


ಎಸ್ಸೆಸೆಲ್ಸಿ ಪರೀಕ್ಷೆ ಹತ್ತಿರವಾದಂತೆ ಮೇಷ್ಟ್ರು ಮಗಳಿಗೆ ಚೆನ್ನಾಗಿ ಓದು ಅಂತ ಒತ್ತಾಯ ಮಾಡುತ್ತಿದ್ದರು. ಒಮ್ಮೊಮ್ಮೆ, ಗಣಿತ ಮೇಷ್ಟ್ರ ಮಗಳು ಮ್ಯಾಥ್ಸ್‌ನಲ್ಲಿ ನೈಂಟಿ ಮೇಲೆ ತೆಗೆಯಬೇಕು ಗೊತ್ತಾಯ್ತಾ? ಎಂದು ಆದೇಶ ಹೊರಡಿಸುತ್ತಿದ್ದರು. ಮರುಕ್ಷಣವೇ ನಾನೇಕೆ ಮಗುವಿನ ಮೇಲೆ ಅನಗತ್ಯ ಒತ್ತಡ ಹೇರುತ್ತಿರುವೆ ಎಂದೆನಿಸಿ, `ಗಣಿತ ಅಂತೇನಿಲ್ಲ . ಎಲ್ಲಾನು ಒಂದೇ ಥರ ಓದು. ಟೆನ್ಷನ್ ಮಾಡಿಕೊಳ್ಳೋದು ಬೇಡ' ಎಂದು ಮಗಳ ಬೆನ್ನು ತಟ್ಟುವರು. ಪೃಥ್ವಿಕಾ ಫಸ್ಟ್ ಕ್ಲಾಸಲ್ಲಿ ಪಾಸಾದಳು. ಗಣಿತದಲ್ಲಿ ಎಂಬತ್ತೈದು ಅಂಕ ಬಂದವು. , ಚೆನ್ನಾಗಿ ಮಾಡಿದ್ದಿ, ಚೆನ್ನಾಗಿ ಮಾಡಿದ್ದಿ ಎಂದು ಮೇಷ್ಟ್ರು ಅವಳ ಬೆನ್ನು ತಟ್ಟಿದರು. ಮತ್ತು ಅವಳಿಗೆ ಮೊದಲೇ ಪ್ರಾಮಿಸ್ ಮಾಡಿದ್ದಂತೆ, ಕೋಟೆ ತೋರಿಸಲು ಚಿತ್ರದುರ್ಗಕ್ಕೆ ಕರೆದೊಯ್ದರು.


ಕೋಟೆಯ ಒಳಗೆ ತಣ್ಣೀರುದೋಣಿಯ ಹತ್ತಿರ ಕೂತು, ತಾವು ತಂದಿದ್ದ ಉಪ್ಪಿಟ್ಟು ತಿಂದಾದ ಮೇಲೆ, ಸೊಂಟ ನೋವೆಂದು ಶಾರದಮ್ಮ ತುಪ್ಪದ ಕೊಳ ಏರಲು ಒಪ್ಪಲಿಲ್ಲ.ಮಗಳ ಉತ್ಸಾಹಕ್ಕೆ ಇಲ್ಲವೆನ್ನಲಾಗದೆ ಮೇಷ್ಟ್ರು ಪ್ರಯಾಸಪಟ್ಟು ಕುದುರೆ ಹೆಜ್ಜೆಗಳ ಮೇಲೆ ಕಾಲಿಡುತ್ತಾ ಏರುವಾಗ ಒಮ್ಮೆ ಕಾಲು ಜಾರಿದರು. ಹೇಗೋ ಸಾವರಿಸಿಕೊಂಡರಾದರೂ ಅವರ ಎಡಗಾಲಿನ ಚಪ್ಪಲಿ ಜಾರಿ ಉರುಳುತ್ತಾ ಕಂದಕದ ಆಳದಲ್ಲಿ ಮಾಯವಾಯಿತು. ಒಂದು ಕ್ಷಣ ಪೃಥ್ವಿಕಾ ನಡುಗಿದಳು. ಅಪ್ಪನತ್ತ ನೋಡುತ್ತಾ, ಕಣ್ಣು ತುಂಬಾ ನೀರು ತುಂಬಿಕೊಂಡು ಸಾರಿ ಅಪ್ಪ ಎಂದಳು. ಮೇಷ್ಟ್ರು , `ನೀನು ನಡಿ ಮರಿ ಈಗೇನಾಯ್ತು? ಬಿದ್ದಿದ್ದು ಚಪ್ಪಲಿ, ನಿಮ್ಮಪ್ಪ ಅಲ್ಲ ' ಎಂದು ನಗುತ್ತಾ ಇದನ್ನಿಟ್ಟುಕೊಂಡು ಏನು ಮಾಡಲಿ ಎಂದು ಉಳಿದ ಇನ್ನೊಂದು ಚಪ್ಪಲಿಯನ್ನೂ ಕಂದಕಕ್ಕೆ ಜಾರಿಬಿಟ್ಟರು. ಬೆಟ್ಟದ ಹತ್ತಿರವೇ ಇರುವ ರೂಪವಾಣಿ ಟಾಕೀಸಿನಲ್ಲಿ ಒಡಹುಟ್ಟಿದವರು ಸಿನಿಮಾ ನೋಡುವಾಗಲೂ ಮೇಷ್ಟ್ರು ಬರಿಗಾಲಲ್ಲೇ ಇದ್ದರು. ಕೊನೆಯ ದೃಶ್ಯದಲ್ಲಿ ರಾಜ್ ಕುಮಾರ್ ಮನೆ ಬಿಟ್ಟು ಹೋಗುವಾಗ, ಪುಚ್ಚಿ ಅಪ್ಪನ ತೋಳಿನಲ್ಲಿ ತಲೆಯಿಟ್ಟು ಅತ್ತಿದ್ದಳು. ಮೇಷ್ಟ್ರು ಸುಮ್ಮನೆ ಮಗಳ ತಲೆ ನೇವರಿಸಿದ್ದರು.

ಕಾಲೇಜಿಗೆ ಸೇರಿದ ಪೃಥ್ವಿಕಾ ಮೊನ್ನೆ ಮೂರು ತಿಂಗಳ ಹಿಂದೆ ಹಿಂದಿ ಮಧ್ಯಮಾ ಪರೀಕ್ಷೆ ಪಾಸು ಮಾಡಿಕೊಳ್ಳುವ ಬಯಸಿ ದಾಗಲೂ ಮೇಷ್ಟ್ರು ಸಂತೋಷದಿಂದಲೇ ಒಪ್ಪಿದ್ದರು. ತಮ್ಮ ಸಹೋದ್ಯೋಗಿ ಮಿತ್ರ ಹಿಂದೀ ಶಿಕ್ಷಕ ರಂಗಯ್ಯನವರನ್ನೇ ಮನೆ ಪಾಠಕ್ಕೆ ಗೊತ್ತು ಮಾಡಿದರಾಯ್ತು ಎಂದುಕೊಂಡರು. ರಂಗಯ್ಯ ಎಂದೊಡನೆ ಪೃಥ್ವಿಕಾ, ಅವರು ಪಾಠ ಮಾಡುವಾಗ ಪ್ರತೀ ಹೊಸ ಪದ ಬಂದಾಗಲೂ, ರಾಗವಾಗಿ ಇಸ್ ಕಾ ಮತಲಬ್ ಕ್ಯಾ ಹೈ ? ನೀವ್ ಹೇಳ್ತೀರ? ನೀವ್ ಹೇಳ್ತೀರ? ಎನ್ನುತ್ತಾ ಎಲ್ಲಾ ಕಡೆಗೂ ಬೆರಳು ತೋರಿಸಿ, ಯಾರಿಗೂ ಹೇಳಲು ಬಿಡದೆ, ತಾವೇ ಹೇಳುತ್ತಿದ್ದುದನ್ನು ಮಿಮಿಕ್ ಮಾಡಿ ತೋರಿಸಿದ್ದಳು. ಇದಲ್ಲದೆ ಪೃಥ್ವಿಕಾ ಬಳಿ ರಂಗಯ್ಯನವರ ಬಗ್ಗೆ ಇನ್ನೊಂದು ಜೋಕ್ ಇದೆ. ಅದೆಂದರೆ ಎಲ್ಲಾದರೂ ತಮ್ಮ ವಿದ್ಯಾರ್ಥಿಗಳು ನಮಸ್ಕಾರ ಎಂದು ಕೈಯೆತ್ತಿದರೆ ಸಾಕು, ರಂಗಯ್ಯನವರು ಅವರಿಗಿಂತ ವಿನಯದಿಂದ ಎರಡೂ ಕೈಯೆತ್ತಿ ನಮಸ್ಕರಿಸುತ್ತಿದ್ದರು. ಒಮ್ಮೆ ತರಲೆ ಹುಡುಗನೊಬ್ಬ ರಂಗಯ್ಯನವರಿಗೆ ನಮಸ್ಕಾರ ಮಾಡುವವನಂತೆ ಕೈಯೆತ್ತಿ ಸುಮ್ಮನೆ ಕೂದಲು ಸವರಿಕೊಂಡ. ಆದರೆ ಅಷ್ಟು ಹೊತ್ತಿಗಾಗಲೆ ರಂಗಯ್ಯ ಮೇಷ್ಟ್ರು, ಎರಡೂ ಕೈಯೆತ್ತಿ ವಿನೀತರಾಗಿ ನಮಸ್ಕರಿಸಿಯಾಗಿತ್ತು . ಪೃಥ್ವಿಕಾ ಇದನ್ನು ಹೇಳುವಾಗ ಮೇಷ್ಟ್ರು ಜೋರು ಶಬ್ದಮಾಡಿ ನಗುತ್ತಿದ್ದರು. ಆದರೆ ಪೃಥ್ವಿಕಾ, ತಾನು ಲೆಕ್ಕ ಹೇಳಿಕೊಡೋ ಶೈಲಿಯನ್ನೂ ಅವಳಮ್ಮನ ಮುಂದೆ ಅಭಿನಯಿಸಿ ತೋರಿಸುತ್ತಾಳೆಂಬುದು ಮೇಷ್ಟ್ರಿಗೆ ಗೊತ್ತಿರಲಿಲ್ಲ.

ಮೇಷ್ಟ್ರ ಗ್ರಹಚಾರವೋ ಏನೋ , ರಂಗಯ್ಯನವರು ತಮ್ಮ ತೋಟದ ಕೆಲಸವನ್ನು ಮುಂದಿಟ್ಟು ಪೃಥ್ವಿಕಾಗೆ ಮಧ್ಯಮಾ ಟ್ಯೂಷನ್ ಹೇಳಲು ಆಗುವುದಿಲ್ಲ ಎಂದುಬಿಟ್ಟರು. ಮೇಷ್ಟ್ರಿಗೆ ಚಿಂತೆಯಾಯಿತು. ಒಂದು ವಾರದ ನಂತರ ಪೃಥ್ವಿಕಾಳೇ ಅದನ್ನು ಪರಿಹರಿಸಿ ದಳು. ದುರ್ಗಮ್ಮನ ಗುಡಿ ರೋಡಿನಲ್ಲಿ ಯಾರೋ ಪದ್ಮನಾಭ್ ಆಂತ ಮಧ್ಯಮಾಕ್ಕೆ ಟ್ಯೂಷನ್ ಮಾಡ್ತಾರಂತೆ, ಹೋಗಲಾ? ಎಂದ ಮಗಳಿಗೆ ಮೇಷ್ಟ್ರು ಬೇಡವೆನ್ನಲಿಲ್ಲ.

ಯಾವ ಸರಕಾರಿ ಕೆಲಸವೂ ದೊರೆಯದೆ, ಸುತ್ತಮತ್ತಲಿನ ಕೆಲವೇ ವಿದ್ಯಾರ್ಥಿಗಳಿಗೆ ಪ್ರಥಮಾ, ಮಧ್ಯಮಾ, ರಾಷ್ಟ್ರಭಾಷಾ ಅಂತ ಹಿಂದಿ ಟ್ಯೂಷನ್ ಮಾಡಿಕೊಂಡಿದ್ದ ಇಪ್ಪತ್ಮೂರರ ಹರೆಯದ ಪದ್ಮನಾಭ, ಪೃಥ್ವಿಕಾಳಂಥ ಮುದ್ದು ಹುಡುಗಿಯತ್ತ ಆಕರ್ಷಿತ ನಾದದ್ದಕ್ಕೆ ಅಚ್ಚರಿ ಪಡಬೇಕಿರಲಿಲ್ಲವಾದರೂ, ಪೃಥ್ವಿಕಾ ಅವನಿಗೆ ಮನಸೋತದ್ದಕ್ಕೆ ಮಾತ್ರ ಕಾರಣ ಅವಳಿಗೇ ಗೊತ್ತು. ಅಂತೂ, ಮೂರೇ ತಿಂಗಳಲ್ಲಿ ಪ್ರೀತಿ ಮರವಾಗಿ, ಇಬ್ಬರಿಗೂ ಒಬ್ಬರೊನ್ನಬ್ಬರು ಬಿಟ್ಟಿರುವುದು ಅಸಾಧ್ಯವೆಂದಾಗಿ, ಹಾಗೇ ಮನೆಯಲ್ಲಿ ವಿಷಯ ತಿಳಿಸುವುದೂ ಅಸಾಧ್ಯವೆಂದಾದಾಗ, ಮಧ್ಯಮಾವನ್ನು ಮಧ್ಯದಲ್ಲೇ ಬಿಟ್ಟು ಓಡಿಹೋದರು.

ತಮ್ಮ ಪುಟ್ಟ ಮಗಳು ಪುಚ್ಚಿ-ಮೊನ್ನೆ ಮೊನ್ನೆ ಬಣ್ಣದ ಕೊಡೆ ಕೊಡಿಸಲಿಲ್ಲವೆಂದು ಊಟ ಬಿಟ್ಟವಳು, ವರ್ಷದ ಕೆಳಗೆ ತನ್ನ ಸ್ನೇಹಿತೆಯರಿಗೆಲ್ಲ ಅಣ್ಣ ತಮ್ಮಂದಿರಿದ್ದಾರೆ ತನಗಿಲ್ಲ ಎಂದು ಅಪ್ಪ ಅಮ್ಮನ ಮೇಲೆ ಗಂಭೀರ ಜಗಳ ತೆಗೆದು ತಬ್ಬಿಬ್ಬಾಗಿಸಿದವಳು, ತಿಂಗಳ ಕೆಳಗೆ ತಮಗೆ ಅಸ್ತಮಾ ಹೆಚ್ಚಾಗಿ ಏದುಸಿರು ಬಿಡುತ್ತಿದ್ದ ರಾತ್ರಿ, ನಿಂತಲ್ಲೇ ನಡುಗುತ್ತಾ ಅಳಲು ಆರಂಭಿಸಿದವಳು- ಹೀಗೆ ಯಾರೊಟ್ಟಿಗೋ ಓಡಿಹೋಗುವಷ್ಟು ದೊಡ್ಡವಳಾಗಿ ಬಿಟ್ಟಿರುವಳೆಂಬುದನ್ನು ಅರಗಿಸಿಕೊಳ್ಳಲು ಅಸಮರ್ಥರಾದ ಮೇಷ್ಟ್ರು, ಬಲವಾದ ಆಘಾತ ಕ್ಕೊಳಗಾದರು. ಸುಮ್ಮನೆ ಆಕಾಶ ನೋಡುತ್ತಾ ಕುಳಿತುಬಿಡುವರು. ಹೆಂಡತಿ ಮಾತಾಡಿಸಿದರೆ ಬುಸು ಗುಟ್ಟುವರು. ಮೊನ್ನೆ ಅನ್ನಕ್ಕೆ ಉಪ್ಪು ಸಾಲದೆಂದು ತಟ್ಟೆಯನ್ನು ಎತ್ತಿ ಎಸೆದು ಕೂಗಾಡಿಬಿಟ್ಟರು.


ಶಾರದಮ್ಮನಿಗೆ ಮೇಷ್ಟ್ರ ಪರಿಸ್ಥಿತಿ ಅರ್ಥವಾಗುತ್ತಿತ್ತು. ಹಾಗೆಂದೇ ಶೂನ್ಯ ಮನಸ್ಕರಾಗಿ ಕುಳಿತ ಗಂಡನ ಪಕ್ಕ ಹೋಗಿ ಕೂತು, `ಮನಸ್ಸಿಗೆ ಹಚ್ಚಿಕೊಬೇಡ್ರಿ, ಅವಳು ಬಂದೇ ಬರ್ತಾಳೆ' ಎಂದು ಸಮಾಧಾನ ಮಾಡ ಹೋಗಿ, ಫಟ್ಟೆಂದು ಕೆನ್ನೆ ಗೆ ಏಟು ತಿಂದರು. `ಬರ್ತಾಳಾ? ಅವಳಿಗೆ ಅಷ್ಟು ಧೈರ್ಯವಿದ್ದರೆ ಬರ್ಲಿ. ಕಾಲು ಮುರಿದು ಹಾಕಲಿಲ್ಲವೆಂದರೆ ನಾನು ಗೋಪಾಲಯ್ಯನೇ ಅಲ್ಲ. ಕಳ್ಳಮುಂಡೆಗೆ ಅಷ್ಟು ಧೈರ್ಯ ಎಲ್ಲಿ ಬರಬೇಕು?' ಎಂದವರು, ಧಡಧಡನೆ ಹಿತ್ತಲಿಗೆ ಹೋಗಿ, ಅಲ್ಲಿದ್ದ ಅರ್ಧಬಂರ್ಧ ಹರಿದು ಹೋಗಿದ್ದ ಹಳೆಯ ಚಪ್ಪಲಿಗಳನ್ನು ತಂದು ವರಾಂಡದಲ್ಲಿ ಬಿಟ್ಟು, `ಅವಳೇನಾದರೂ ಅಪ್ಪಿತಪ್ಪಿ ಈ ಬಾಗಿಲಿಗೆ ಬಂದರೆ ಇವು ಪೂರ್ತಿ ಹರೀತಾವೆ' ಎಂದು ವಿಕಾರವಾಗಿ ಕೂಗಿದರು. ಅವರ ರೌದ್ರಾವತಾರ ನೋಡಿ ಶಾರದಮ್ಮ ಕಂಗೆಟ್ಟರು. ದೆವ್ವ ಮೆಟ್ಟಿಕೊಂಡವರಂತೆ ಮೇಷ್ಟ್ರು , ಪುಚ್ಚಿಯ ಕೋಣೆಗೆ ನುಗ್ಗಿ,ಬಟ್ಟೆ ಪೇಂಟಿಂಗಗುಗಳನ್ನೆಲ್ಲ ಕಿತ್ತೆಸೆದರು. ಗೋಡೆಯ ಮೇಲಿದ್ದ ಸ್ಟೆಫಿಯ ಪೋಸ್ಟರು ನೋಡಿದವರೆ ಮತ್ತಷ್ಟು ಕೆರಳಿ, ಸ್ಟೂಲ್ ಹಾಕಿಕೊಂಡು ಹತ್ತಿ ಅದನ್ನು ಪರ್ ಎಂದು ಎರಡು ತುಂಡಾಗಿ ಸಿಗಿದು ಹಾಕಿದರು.


ಮುಂದಿನ ದಿನಗಳಲ್ಲಿ ಮೇಷ್ಟರನ್ನು ಕೇವಲ ಎರಡೇ ಸ್ಥಿತಿಗಳಲ್ಲಿ ನೋಡಬಹುದಿತ್ತು. ಒಂದು ಶೂನ್ಯಮನಸ್ಕರಾಗಿ ಆಕಾಶವನ್ನೇ ನಿರುಕಿಸುತ್ತಾ ಕೂತ ಮೇಷ್ಟ್ರು ಇಲ್ಲವೇ ಸಿಕ್ಕಿದವರ ಮೈ ಮೇಲೆ ಆವೇಶದಿಂದ ಹರಿಹಾಯುವ ಮೇಷ್ಟ್ರು. ಶಾಲೆಯಲ್ಲಾದರೂ ಅಷ್ಟೆ, ಸಹೋದ್ಯೋಗಿಗಳೊಡನೆಯೂ ಮುಖ ಕೊಟ್ಟು ಮಾತಾಡರು. ಮಗಳ ವಿಷಯ ಎತ್ತಿದರೋ ಗ್ರಹಚಾರ ಬಿಡಿಸುವರು. ಹೆಡ್ ಮಾಸ್ಟರೇ ಎದುರು ಹೋದರೂ ನಮಸ್ಕಾರ ಹೇಳುವಷ್ಟು ಅರಿವು ಅವರಲ್ಲಿ ಉಳಿದಿರಲಿಲ್ಲ. ಈಗ ಪರಿಚಯದವರೂ ಮೇಷ್ಟ್ರಿಗೆ ಸಮಾಧಾನ ಹೇಳುವ ಆಸೆಯನ್ನು ಬಿಟ್ಟುಕೊಟ್ಟು ದೂರದಿಂದಲೆ ಕರುಣೆಯಿಂದ ನೋಡತೊಡಗಿದರು. ಮಟಮಟ ಮಧ್ಯಾಹ್ನ ತೇರುಮಲ್ಲೇಶನ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು, ಸಂಜೆವರೆಗೂ ಗುಡಿಯ ಗೋಪುರವನ್ನೇ ನೋಡುತ್ತಾ ಕುಳಿತುಬಿಡುವರು ಮೇಷ್ಟ್ರು. ಕ್ಲಾಸಿನಲ್ಲಿ ಏರಿಳಿತವಿಲ್ಲದ ಒಂದೇ ದನಿಯಲ್ಲಿ , ಮಕ್ಕಳ ಕಡೆ ತಿರುಗಿಯೂ ನೋಡದೆ ಬೋರ್ಡಿನ ಮೇಲೆ ಲೆಕ್ಕ ಮಾಡಿಕೊಂಡು ಹೋಗುತ್ತಿದ್ದರು.ಅವರ ಮುಖ ಮತ್ತು ದನಿಗಳಲ್ಲಿ ಮಡುಗಟ್ಟಿದ್ದ ಕಠೋರತೆಯಿಂದಾಗಿ ಮಕ್ಕಳಿಗೆ ಅನುಮಾನಗಳನ್ನು ಬಗೆಹರಿಸಿಕೊಳ್ಳುವ ಧೈರ್ಯವೇ ಆಗುತ್ತಿರಲಿಲ್ಲ. ಪ್ರತೀ ಸ್ಟೆಪ್ಪನ್ನು ಎರಡೆರಡು ಸಲ ವಿವರಿಸಿ, `ಎಲ್ರಿಗೂ ಅರ್ಥ ಆಯ್ತಾ? ಒಂದಲ್ಲಾ ಅಂದ್ರೆ ಹತ್ತು ಸಾರಿ ಕೇಳಿ, ನಾನಿರೋದೇ ನಿಮಗೆ ತಿಳಿಸೋಕೆ' ಎಂದು ಪ್ರೀತಿಯಿಂದ ಕೇಳುತ್ತಿದ್ದ ಗೋಪಾಲಯ್ಯ ಮೇಷ್ಟ್ರು ಎಲ್ಲಿ ಎಂದು ಮಕ್ಕಳು ಹುಡುಕಿ ಹುಡುಕಿ ಸುಸ್ತಾದರು. ಮೊನ್ನೆ ಎಯ್ತ್ ಎ ಸೆಕ್ಷನ್ನಿನಲ್ಲಿ ಭಿನ್ನರಾಶಿ ಪಾಠ ಮಾಡುತ್ತಿರುವಾಗ ಕಿಟಕಿಯಿಂದ ಆಚೆ ನೋಡುತ್ತಿದ್ದ ದೀಪಳನ್ನು ಕಂಡು ಮೇಷ್ಟ್ರು ಉರಿದುಹೋದರು. ಸೀದಾ ಹೋದವರೆ ಬೆನ್ನಿನ ಮೇಲೆ ನಾಲ್ಕು ಭಾರಿಸಿಯೇ ಬಿಟ್ಟರು. ಎಂದೂ ಕಂಡಿರದ ಮೇಷ್ಟರ ಹೊಸ ಅವತಾರವನ್ನು ನೋಡಿ ಹುಡುಗರು ಅಪ್ರತಿಭರಾದರು.

ಮೊನ್ನೆ ಭಾನುವಾರ ತಮ್ಮ ಪರಿಚಯದ ವೆಂಕಟೇಶನ ಪ್ರಿಂಟಿಂಗ್ ಪ್ರೆಸ್ಸಿಗೆ ಹೋದ ಮೇಷ್ಟ್ರು,`ಐನೂರು ಕಾರ್ಡು ಮಾಡಿಸಬೇಕು, ವಿಷಯ ಬರ್ಕೊ' ಎಂದು ಅವಸರಿಸಿದರು. ಎಲ್ಲವನ್ನೂ ತಿಳಿದಿದ್ದ ವೆಂಕಟೇಶ, ಮೇಷ್ಟ್ರ ಕಂಪಿಸುತ್ತಿದ್ದ ಮೂಗನ್ನೆ ನೋಡಿ ಅನುಮಾನಿಸುತ್ತಾ `ವಿಷಯ ಹೇಳಿ' ಎಂದು ತೊದಲಿದ. `ನನ್ನ ಮಗಳ ಶ್ರಾದ್ಧ ಮುಂದಿನ ವಾರ, ಬರಕೊ...ಹೆಸರು ಪುಚ್ಚಿ...'ಎಂದು ಹೇಳುತ್ತಾ ಹೆಚ್ಚುತ್ತಿದ್ದ ಉದ್ವೇಗವನ್ನು ತಡೆಯಲಾಗದೆ ಎದ್ದು ನಿಂತವರು ತಲೆ ತಿರುಗಿದಂತಾಗಿ ಮತ್ತೆ ಕುಸಿದು ಕುಳಿತರು. ಸ್ವಲ್ಪ ಹೊತ್ತು ಇಬ್ಬರೂ ಮಾತಾಡಲಿಲ್ಲ. ಇನ್ನೂ ಸ್ವಲ್ಪ ಹೊತ್ತಿನ ಬಳಿಕ ವೆಂಕಟೇಶನೇ ಮೇಷ್ಟ್ರನ್ನು ಅವರ ಮನೆವರೆಗೆ ಕರೆದುಕೊಂಡು ಹೋಗಿ ಬಿಟ್ಟುಬಂದ.


ಈಗ ಶಾರದಮ್ಮನವರೂ ಮಾತಾಡಿಸಿದರೆ ಎಲ್ಲಿ ಹಾರಿಬೀಳುವರೋ ಎಂಬ ಆತಂಕದಿಂದ ಸುಮ್ಮನಿರುತ್ತಿದ್ದರು. ಹೀಗಾಗಿ ಮನೆಯಲ್ಲಿ ಭರಿಸಲಾಗದ ನಿಶ್ಶಬ್ದವೊಂದು ಸೇರಿಕೊಂಡು, ಮೇಷ್ಟ್ರು ಶ್ರಾದ್ಧ ಮಾಡದಿದ್ದರೂ ಸೂತಕದ ವಾಸನೆ ತುಂಬಿ ಕೊಂಡಂತಿತ್ತು.


ಮೂರು ದಿನಗಳ ಹಿಂದೆ ಹೀಗಾಯಿತು. ಎಯ್ತ್ ಎ ಸೆಕ್ಷನ್ನಿನ ಮುಂದೆ ಏನೋ ಜೋರು ಕೂಗಾಟ ಕೇಳಿ ಹೆಡ್ ಮಾಸ್ಟರು ಓಡಿ ಬಂದರು. ನೋಡಿದರೆ ದೀಪಳ ತಂದೆ ಗೋಪಾಲಯ್ಯನವರ ಮೇಲೆ ತಮ್ಮ ಮಗಳನ್ನು ಹೊಡೆದದ್ದಕ್ಕಾಗಿ ಗಲಾಟೆ ಮಾಡು ತ್ತಿದ್ದರು. ಮೇಷ್ಟ್ರು ಏನೂ ಹೇಳಲು ತಿಳಿಯದೆ ತಲೆ ತಗ್ಗಿಸಿ ನಿಂತಿದ್ದರು. ಹೆಡ್ ಮಾಸ್ಟರು ಮಧ್ಯಪ್ರವೇಶ ಮಾಡಿ `ನೋಡಿ, ನನ್ನ ಮಾತು ಕೇಳಿ, ಗೋಪಾಲಯ್ಯನವರು ಬಹಳ ಒಳ್ಳೆಯವರು, ನೀವು ನನ್ನ ಛೇಂಬರಿಗೆ ಬನ್ನಿ, ಎಲ್ಲಾ ಹೇಳ್ತೀನಿ' ಎಂದರು. ಅಲ್ಲಿಯವರೆಗೆ ಸುಮ್ಮನೆ ತಲೆ ತಗ್ಗಿಸಿ ನಿಂತಿದ್ದ ಮೇಷ್ಟ್ರು ಒಮ್ಮೆಗೆ ಕೆರಳಿ, `ಏನ್ರೀ ನೀವು ಅವರನ್ನು ಛೇಂಬರಿಗೆ ಕರ್ಕೊಂಡು ಹೋಗಿ ಹೇಳೋದು? ಇವನ ಮಗಳು ಯಾವನ ಹಿಂದೆಯೋ ಓಡಿ ಹೋದಳು. ಅದಕ್ಕೇ ಈವಯ್ಯನಿಗೆ ತಲೆ ಕೆಟ್ಟಿದೆ ಅಂತಲಾ?' ಎಂದು ಚೀರಿದರು. ಹೆಡ್ ಮಾಸ್ಟರು ಕಕ್ಕಾಬಿಕ್ಕಿಯಾಗಿ `ಹಾಗಲ್ಲ ಇವರೇ...' ಎಂದೇನೋ ತೊದಲಿದರು. ಅಲ್ಲಿಯೇ ಇದ್ದ ಹಿಂದಿ ಮೇಷ್ಟ್ರು ರಂಗಯ್ಯನವರು ಹೆಡ್ ಮಾಸ್ಟರ್ ನೆರವಿಗೆ ಧಾವಿಸಿ, `ಅಪಾರ್ಥ ಯಾಕ್ ಮಾಡ್ಕೋತೀಯೋ ಗೋಪಾಲಯ್ಯ... ' ಎಂದು ಶುರುಮಾಡುವಾಗ ಮೇಷ್ಟ್ರು, ` ನೀನು ಸುಮ್ಮನಿರಯ್ಯ ಸಾಕು. ಎಲ್ಲ ಆಗಿದ್ದು ನಿನ್ನಿಂದಲೇ. ಬಂದುಬಿಟ್ಟ ಇಲ್ಲಿ' ಎಂದು ರೇಗಿದರು. ಮುಂದೆ ಮಾತಾಡಲು ಯಾರಿಗೂ ಧೈರ್ಯವಾಗದೆ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿದರು. ದೀಪಾಳ ತಂದೆ ಏನು ಮಾಡುವುದೆಂದು ತಿಳಿಯದೆ ಪೆದ್ದು ಪೆದ್ದಾಗಿ ಮೇಷ್ಟ್ರನ್ನೇ ನೋಡುತ್ತಾ ನಿಂತುಬಿಟ್ಟರು.


ಪೃಥ್ವಿಕಾ ಹೋಗಿ ಮೂರು ತಿಂಗಳಾಗಿವೆ. ಮೇಷ್ಟರ ವರ್ತನೆಯಲ್ಲಿ ಕಿಂಚಿತ್ ಬದಲಾವಣೆಯೂ ಆಗಿಲ್ಲ. ಅವರನ್ನು ಮಾತಾಡಿಸಲು ಧೈರ್ಯ ಸಾಲದ ಶಾರದಮ್ಮ ಮಗಳ ನೆನಪಿನಲ್ಲಿ ಒಬ್ಬಳೇ ಅಳುವರು. ಮಗಳು ಮೂರು ವರ್ಷದವಳಾಗಿದ್ದ ಸಮಯದಲ್ಲಿ ಜಾಂಡಿಸ್ ಬಂದು, ದಾವಣಗೆರೆಯ ಚಿಲ್ಡ್ರನ್ ಸ್ಪೆಷಲಿಸ್ಟ್ ನಿರ್ಮಲಾ, ಪೃಥ್ವಿಕಾ ಉಳಿಯುವುದೇ ಇಲ್ಲ ಎಂದಿದ್ದನ್ನು ನೆನಪಿಸಿ ಕೊಳ್ಳುವರು. ಆಮೇಲೆ ತೇರುಮಲ್ಲೇಶನ ದಯೆಯಿಂದ ಪುಚ್ಚಿ ಚೇತರಿಸಿಕೊಂಡಿದ್ದಳು. ಶಾರದಮ್ಮನಿಗೆ ಮಗಳಿಗಿಂತ ಒಮ್ಮೊಮ್ಮೆ ಮೇಷ್ಟ್ರ ಚಿಂತೆಯೇ ಹೆಚ್ಚಾಗಿ ಕಾಡುವುದು.

ಅವತ್ತು ಭಾನುವಾರ. ಮಧ್ಯಾಹ್ನ ಮೂರು ಗಂಟೆ ಸಮಯ. ಬೆಳಗಿನಿಂದ ಉರಿದ ಸೂರ್ಯನನ್ನು ಈಗಷ್ಟೆ ಹೆಚ್ಚುತ್ತಿದ್ದ ಮೋಡಗಳು ಮರೆಮಾಡಲೆತ್ನಿಸುತ್ತಿದ್ದವು. ಕಿಟಕಿಯ ಬಳಿ ಆರಾಮಖುರ್ಚಿ ಮೇಲೆ ಕೂತ ಮೇಷ್ಟ್ರು ಆಗಸವನ್ನೆ ನಿರುಕಿಸುತ್ತಿದ್ದರು. ಗೇಟು ಕಿರ್ ಎಂದಿದ್ದಕ್ಕೆ ಮೇಷ್ಟ್ರು ಅತ್ತ ನೋಡಿದರೆ ಸುಮಾರು ನಾಲ್ಕು ವರ್ಷದ ಪುಟ್ಟ ಮಗುವೊಂದು ಗುಲಾಬಿ ಬಣ್ಣದ ಫ್ರಾಕಿನಲ್ಲಿ ಬೊಂಬೆಯಂತೆ ಗೇಟು ಸರಿಸಿ, ಇದು ತನ್ನದೇ ಮನೆ ಎಂಬಂತೆ ಪುಟಪುಟನೆ ನಡೆಯುತ್ತಾ ಒಳಬಂದಿತು. ಅಚ್ಚರಿಗೊಂಡ ಮೇಷ್ಟ್ರು ನೋಡುತ್ತಿರುವಂತೆಯೇ ಅದು ಸೋಫಾದ ಮೇಲೆ ಚಕ್ಕಲಮಕ್ಕಲ ಹಾಕಿ ಕುಳಿತು ಸುತ್ತಲೂ ನೋಡುತ್ತಾ ಕಣ್ಣರಳಿಸಿತು. ಮೇಷ್ಟರಿಗೆ ಆ ಮಗುವನ್ನು ಎಲ್ಲಿಯೋ ನೋಡಿರುವೆ ಎಂದೆನಿಸಿತಾದರೂ ಎಲ್ಲಿ ಎಂದು ಆ ಕ್ಷಣ ನೆನಪಾಗಲಿಲ್ಲ. ಮುದ್ದಾಗಿದ್ದ ಆ ಮಗುವಿನ ಕೆನ್ನೆಗಳ ಮೇಲೆ ಚಪಾತಿ ಹಿಟ್ಟಿನಂಥದೇನೋ ಮೆತ್ತಿಕೊಂಡು, ಇನ್ನೂ ಮುದ್ದು ಮುದ್ದಾಗಿ ಕಾಣುತ್ತಿತ್ತು. ತಮ್ಮನ್ನೇ ಪಿಳಿಪಿಳಿ ನೋಡುತ್ತಿದ್ದ ಆ ಪುಟ್ಟಯೆಡೆಗೆ ಮೇಷ್ಟ್ರು ನಗೆ ಬೀರಿದರು. ಅದೂ ನಕ್ಕಿತು.

ಇದು ಹೇಗೆ ಸಹಜವಾಗಿ ಒಳಬಂದಿತಲ್ಲಾ ಎಂದು ಮೇಷ್ಟ್ರು ಆಲೋಚಿಸುತ್ತಿರುವಾಗ ಎದ್ದು ನಿಂತ ಅವಳು ಗೋಡೆಯ ಮೇಲಿನ ಕ್ಯಾಲೆಂಡರಿನಲ್ಲಿದ್ದ ಪಾಪುವನ್ನು ತೋರಿಸುತ್ತಾ ಮೇಷ್ಟ್ರನ್ನು ಎತ್ತಿಕೊ ಎತ್ತಿಕೊ ಎಂದಿತು. ಎತ್ತಿಕೊಂಡ ನಂತರ ಗೋಡೆಯ ಪಾಪು ವನ್ನು ಮುಟ್ಟಿ ಮುಟ್ಟಿ ನೇವರಿಸುತ್ತಾ ` ಪಾಪು ಪಾಪು' ಎಂದು ಉತ್ಸಾಹದಿಂದ ಕೂಗಿತು.

ಒಳಗಿನಿಂದ ಬಂದ ಶಾರದಮ್ಮ ಮಗುವನ್ನು ಎತ್ತಿಕೊಂಡು ಆಡಿಸುತ್ತಿರುವ ಗಂಡನನ್ನು ನೋಡಿ ಅಚ್ಚರಿಗೊಂಡರು. ಮೇಷ್ಟರ ಸೊಂಟದಿಂದ ಇಳಿದ ಮಗು ಪೃಥ್ವಿಕಾಳ ಕೋಣೆಗೆ ನುಗ್ಗಿ ಪೆನ್ಸಿಲ್ ಮತ್ತು ರಬ್ಬರ್ ತೆಗೆದುಕೊಂಡು ಹೊರಬಂದದ್ದೇ, ಟೇಬಲ್ ಮೇಲಿದ್ದ ಪುಸ್ತಕ ತೆಗೆದುಕೊಂಡು ಗೋಲಗೋಲ ಗೀಚತೊಡಗಿದಳು. ಅದು ತಮ್ಮ ನೋಟ್ಸ್ ಆಫ್ ಲೆಸನ್ ಎಂಬುದನ್ನು ಗಮನಿಸಿಯೂ ಮೇಷ್ಟ್ರು ಅವಳನ್ನು ತಡೆಯಲಿಲ್ಲ. ಬರೆದ ಚಿತ್ರವನ್ನು ರಬ್ಬರಿನಿಂದ ಅಳಿಸಿ `ಹೋಯ್ತು, ಹೋಯ್ತು' ಎಂದು ಮೇಷ್ಟರಿಗೆ ಕಣ್ಣರಳಿಸಿಕೊಂಡು ಹೇಳಿದ ಅವಳು ನಂತರ ಮೇಷ್ಟರ ಜೇಬಿಗೆ ಕೈ ಹಾಕಿ ಪೆನ್ನು ತೊಗೊಂಡು ಅದರಿಂದಲೂ ಚಿತ್ರ ಬರೆದಳು. ರಬ್ಬರಿನಿಂದ ಅಳಿಸಲು ಯತ್ನಿಸಿ `ಹೋಗಲ್ಲ' ಎಂದು ತಲೆಯೆತ್ತಿದಳು.

ಅಷ್ಟರಲ್ಲಿ ಶಾರದಮ್ಮ ಅವಳಿಗಾಗಿ ಹಾಲು ತಂದುಕೊಟ್ಟರು. ಲೋಟವನ್ನು ಬಾಯಲ್ಲಿ ಕಚ್ಚಿ ಹಿಡಿದು , ಒಮ್ಮೆ ಮೇಷ್ಟರನ್ನೂ ಮತ್ತೊಮ್ಮೆ ಶಾರದಮ್ಮನನ್ನೂ ನೋಡಿಕೊಂಡು ಬಹಳ ಹೊತ್ತಿನವರೆಗೂ ಹಾಲು ಕುಡಿದಳು. ಅದಾದ ಸ್ವಲ್ಪ ಹೊತ್ತಿಗೇ ಸೋಫಾದ ಮೇಲೇ ನಿದ್ದೆಹೋದಳು. ಅವಳ ತುಟಿಯ ಸುತ್ತ ಮೂಡಿದ್ದ ಹಾಲಿನ ನೊರೆಯನ್ನು ಒರೆಸಲೆಂದು ಪಂಚೆಯ ಅಂಚನ್ನು ಕೈಗೆ ತೆಗೆದುಕೊಂಡ ಮೇಷ್ಟ್ರು ಮತ್ಯಾಕೋ ಸುಮ್ಮನಾದರು. ಶಾರದಮ್ಮ ಒಳಗೆಲ್ಲೋ ಅಡಿಗೆ ಮನೆಯಲ್ಲಿರುವಾಗ, ನಿಧಾನವಾಗಿ ಬಾಗಿ ಮಲಗಿದ ಮಗುವಿನ ಕೆನ್ನೆಗೆ ಮೃದುವಾಗಿ ಮುತ್ತಿಟ್ಟರು.

ಹೊರಗೆ ಮೋಡಗಳು ದಟ್ಟವಾಗಿ, ಯಾವ ಕ್ಷಣದಲ್ಲೂ ಮೊದಲ ಹನಿ ಬೀಳುವಂತಾಗಿತ್ತು. ಎದ್ದು ಬಟ್ಟೆ ತೊಟ್ಟುಕೊಂಡ ಮೇಷ್ಟ್ರು, ಸೈಕಲ್ ಹೊರತೆಗೆಯುತ್ತಾ ಶಾರದಮ್ಮನಿಗೆ, `ನಾನವಳನ್ನು ಅವಳ ಮನೆಗೆ ಬಿಟ್ಟು ಬರುತ್ತೇನೆ, ಹಿಂದಿನ ಓಣಿಯಲ್ಲೆಲ್ಲೋ ನೋಡಿದ ನೆನಪು. ಮಳೆ ಬೇರೆ ಬರುವಂತಾಗಿದೆ, ಅವಳಪ್ಪ ಅಮ್ಮ ಗಾಭರಿಯಾಗಬಹುದು' ಎಂದರು. ಪೃಥ್ವಿಕಾಳ ಪುಟ್ಟ ಸೀಟಿನ ಮೇಲೆ ಕೂತ ಬೊಂಬೆಯಂಥಾ ಮಗು ಮೇಷ್ಟ್ರ ಜೊತೆ ಬೀದಿಯಂಚಿನಲ್ಲಿ ಮಾಯವಾಗುವುದನ್ನು ನೋಡಿದ ಶಾರದಮ್ಮ ಗೆಲುವಿನಿಂದ ಒಳ ನಡೆದರು. ಮನೆ ತಲುಪಿಸುವ ಮುನ್ನ ಮೂಲೆ ಅಂಗಡಿಯಲ್ಲಿ ಮೇಷ್ಟ್ರು ಕೊಡಿಸಿದ ಡೈರಿ ಮಿಲ್ಕ್ ಚಾಕಲೇಟನ್ನು ತನ್ನ ಪುಟ್ಟ ಕೈಗಳಲ್ಲಿ ಗಟ್ಟಿ ಹಿಡಿದ ಮುದ್ದು ಮಗು ಮತ್ತೊಮ್ಮೆ ಸಂತಸದಿಂದ ಕಣ್ಣರಳಿಸಿ, ಅವರ ಕೆನ್ನೆಗೊಂದು ಮುತ್ತಿಟ್ಟಿತ್ತು.


ಸಣ್ಣ ಸಣ್ಣ ಹನಿಗಳಲ್ಲಿ ನೆನೆದುಕೊಂಡೇ ಮರಳಿಬಂದ ಮೇಷ್ಟ್ರು , ತಮ್ಮ ಆವೇಶವನ್ನು ಯಾರೋ ಕಸಿದುಕೊಂಡಂತೆ ಓಡಾಡಿದರು. ಕಾಫಿ ಲೋಟ ಹಿಡಿದು ಪತಿಗಾಗಿ ಮನೆಯಲ್ಲೆಲ್ಲಾ ಹುಡುಕುತ್ತಾ ಮಗಳ ಕೋಣೆಗೆ ಬಂದ ಶಾರದಮ್ಮ , ಅಲ್ಲಿ ಮೇಷ್ಟ್ರು ತಾವೇ ಹರಿದುಹಾಕಿದ್ದ ಸ್ಟೆಫಿಗ್ರಾಫಳ ಚಿತ್ರದ ಎರಡು ತುಂಡುಗಳನ್ನು ಅಂಟಿಸುವ ಕಾರ್ಯದಲ್ಲಿ ಮೈಮರೆತಿರುವುದನ್ನು ಕಂಡರು. ಅವರಿಗೆ ಏನನ್ನಿಸಿತೋ ಸದ್ದು ಮಾಡದೆ ಹಿಂತಿರುಗಿ ಬಂದು ಹಜಾರದ ಸೋಫಾ ಮೇಲೆ ಕೂತರು. ಹೊರಗೆ ಮಳೆ ಜೋರಾಗಿತ್ತು. ಸ್ವಲ್ಪ ಹೊತ್ತಿನ ಬಳಿಕ ಮಗಳ ಕೋಣೆಯಿಂದ ಅವಸರವಸರವಾಗಿ ಹೊರಬಂದ ಮೇಷ್ಟ್ರು, ತಲೆನೋವಿಗೆಂದು ಮಗಳಿಗೆ ತಾವು ಕೊಡಿಸಿದ್ದ ಕನ್ನಡಕವನ್ನು ಕೈಲಿ ಹಿಡಿದುಕೊಂಡು, `ಪುಚ್ಚಿ ಇದನ್ನು ಮರೆತುಹೋಗಿದ್ದಾಳಲ್ಲಾ' ಎಂದರು. ಸಂಜೆ ಮಾಯೆಯಂತೆ ಬಂದು ಹೋದ ಪುಟ್ಟ ಮಗು ಬಿಟ್ಟುಹೋದ ತಂಗಾಳಿ ಆ ಮನೆಯಲ್ಲೆಲ್ಲಾ ಹರಡಿಕೊಂಡಿತ್ತು.

-ಅಪಾರ (ಭಾವನಾದಲ್ಲಿ ಪ್ರಕಟಗೊಂಡಿದ್ದ ಕತೆ)