Sunday, April 20, 2008

ಕಾಮೆಂಟ್‌ ರೀ

ಇದು ಮುದುಕರ ಮದುವ ಸೀಸನ್ನು ಅನಿಸುತ್ತೆ. ನೀವೇ ನೋಡಿ. ಅತ್ತ ಫ್ರಾನ್ಸ್ ಅಧ್ಯಕ್ಷ ಸರ್ಕೋಜಿ, ಜರ್ಮನಿಯ ಮಾಜಿ ಛಾನ್ಸಲರ್ ಹೆಲ್ಮಟ್ ಕೋಹ್ಲ್, ಇತ್ತ ಸಲ್ಮಾನ್ ರಶ್ದಿ, ಮತ್ತೆ ರಷ್ಯಾದ ಅಧ್ಯಕ್ಷ ಪುಟಿನ್ ಎಲ್ಲಾ ಖ್ಯಾತನಾಮ ಮುದುಕರೂ(ಎಲ್ಲರೂ ಫಿಫ್ಟಿ ಪ್ಲಸ್) ಬಾಸಿಂಗ ಕಟ್ಟಿಕೊಂಡು ಕುಣಿಯುತ್ತಿದ್ದಾರೆ. ಎಲ್ಲರೂ ಹುಡುಕಿಕೊಂಡಿರುವ ಹುಡುಗಿಯರು ಮಾತ್ರ ಅವರ ಅರ್ಧದಷ್ಟು ವಯಸ್ಸಿನವರು ಎಂಬುದು ಮತ್ತೊಂದು ವಿಶೇಷ. ಸುಲಗ್ನ ಸಾವಧಾನ ಅಂತ ನಂಬಿಕೊಂಡು ಈಗಿನ ಹುಡುಗರು ವಯಸ್ಸು ಮೀರುತ್ತಿದ್ದರೂ ಸಾವಧಾನದಿಂದ ಬ್ಯಾಚಲರ್‌ಗಳಾಗೇ ಉಳಿಯುತ್ತಿದ್ದರೆ ಈ ಮುದುಕರು ಮದುವೆ ಮೇಲೆ ಮದುವೆ ಆಗಿ ಹೊಟ್ಟೆ ಉರಿಸುತ್ತಿದ್ದಾರೆ!
*
ಮುದುಕರ ಮದುವೆ ಸುದ್ದಿ ನಂತರ ಈಗ ರವಿಶಾಸ್ತ್ರಿಯ ಪುತ್ರೋತ್ಸವ ಸುದ್ದಿಯ ಕಡೆ ಬರೋಣ. ನಮ್ಮ ನಾಗದೇವತೆಯ ಅನುಗ್ರಹದಿಂದಾಗಿ ಕೊನೆಗೂ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ರವಿಶಾಸ್ತ್ರಿಗೆ ಈ ವಯಸ್ಸಿನಲ್ಲಿ ಮಗುವಾಗಿದೆ ಅಂತ ವಾರದ ಕೆಳಗೆ ಓದಿದೆವು. ಹೆರಿಗೆ ಕೋಣೆಯೊಳಕ್ಕೆ ನುಗ್ಗಿದ ಶಾಸ್ತ್ರಿ ಮಗುವನ್ನು ನೋಡುತ್ತಿದ್ದಂತೆ ಆನಂದದಿಂದ ಮಾಡಿದ ಕಾಮೆಂಟು ಏನಿರಬಹುದು?
-‘ವಾಟ್ ಎ ಬ್ಯೂಟಿಫುಲ್ ಡೆಲಿವರಿ!’
*
ಟ್ವೆಂಟಿ ಟ್ವೆಂಟಿ ಹಬ್ಬ ಶುರುವಾಗಿದೆ. ಕಿಂಗ್ ಖಾನ್, ಕಿಂಗ್‌ಫಿಶರ್‌ಗಳಂಥ ಬಿಗ್ ಶಾಟ್‌ಗಳು (ಮಲ್ಯರನ್ನು ಬೇಕಾದ್ರೆ ‘ಮಗ್’ ಶಾಟ್ ಅನ್ನಿ ತಪ್ಪಿಲ್ಲ)ಕಣಕ್ಕಿಳಿದ ಕಾರಣ ಆಟ ಬೊಂಬಾಟವಾಗಿದೆ. ಬೆಂಗಳೂರಲ್ಲಂತೂ ಕ್ರೀಡಾಂಗಣ ‘ವೈನಾ’ಗಿ ಸಿಂಗಾರಗೊಂಡಿತ್ತು ಅಂತ ಸುದ್ದಿ. ಬೌಂಡರಿ, ಸಿಕ್ಸು ಹೊಡೆದಾಗ ಕುಣಿಯುವ ಲಲನೆಯರ ಮೈಮೇಲಿನ ಬಟ್ಟೆಯೂ ಟ್ವೆಂಟಿ ಪರ್ಸೆಂಟ್ ಮೀರುವಂತಿಲ್ಲ ಎಂಬ ನಿಯಮ ಇದ್ದಂತಿದೆ. ಚೆಂಡಿಗಾದರೂ ಒಂದು ಬೌಂಡರಿ ಅಂತ ಇದೆ, ಇಂಥ ರೋಚಕತೆಗೆ ಯಾವ ಬೌಂಡರಿ ಎಂದು ಕೇಳುತ್ತಿದ್ದಾರೆ ಮಿಸ್ ಸೋಸಿಲಿ!
*
ನಾರಾಯಣ ಹೃದಯಾಲಯದವರು ಜೇಬಿನೊಳಗೇ ಇಟ್ಟುಕೊಂಡು ತಿರುಗಬಲ್ಲ ಹೃದಯ ಕಂಡುಹಿಡಿದಿದ್ದಾರಂತೆ. ಕಳಕೊಂಡು ‘ಚೋರಿಯಾಗಿದೆ ನನ್ನ ದಿಲ್’ ಅಂತ ಪೊಲೀಸರಿಗೆ ಕಂಪ್ಲೇಂಟ್ ಕೊಟ್ರೆ ಅವರು ಹುಡುಕೋದ್ ಬಿಟ್ಟು ‘ಮದ್ವೆ ಮಾಡಿಸ್ತಿವಿ ಬಿಡಿ’ ಅಂತ ಕುಂತರೆ ಮಾತ್ರ ಕಷ್ಟ!

Friday, April 18, 2008

ಸಫಾರಿ ಹಂತಕ

ನಾನೇನೂ ಹುಟ್ಟುತ್ತಲೇ ಹೀಗಿರಲಿಲ್ಲ
ಪರಿಸ್ಥಿತಿಯ ಒತ್ತಡಕೆ ಸಿಲುಕಿ ಹೀಗೆ
ಸಂಭಾವಿತನಾಗಿರುವೆ ಅಷ್ಟೆ

ತೀಟೆ ತಿನುವ ಕೈಗಳನು
ಅಡಗಿಸಿರುವೆ ಸಫಾರಿ ಜೇಬಿನಲಿ
ಬೇಟೆ ಹುಡುಕೋ ಕಣ್ಗಳನು
ಕಪ್ಪು ಕನ್ನಡಕದ ಮರೆಯಲಿ
ವಿಧಿ ಇಲ್ಲದೆ ಸುಮ್ಮನಿರುವೆ
ಕತ್ತಲಾಗಲೆಂದು ಕಾಯುತಿರುವೆ

ಹಣ್ಣು ಹಣ್ಣು ಮುದುಕನ ಕಣ್ಣು ಕೀಳಬಲ್ಲೆ
ಹಾಲು ಕುಡಿವ ಪಾಪುವ ರೇಪು ಮಾಡಬಲ್ಲೆ
ಎಂಥ ನಿರ್ಗತಿಕನನೂ ಮತ್ತೆ ದೋಚಬಲ್ಲೆ
ಜೀವದ ಗೆಳೆಯನ ಜೀವಕೂ ಕೈಯ ಚಾಚಬಲ್ಲೆ

ತಡೆಯುತಿರುವುದು ಸಿಕ್ಕಿ ಬೀಳುವ ಒಂದೇ ಭಯಕೆ
ಅದಕಾಗೇ ಧರಿಸಿರುವೆ ಸಂಭಾವಿತ ಹಗಲು ವೇಷ
ರಾತ್ರಿಯಾದರೆ ಹೆಡೆ ಎತ್ತುವವು ಹಾವಿನಂಥ ಬಯಕೆ
ಸುಪಾರಿ ಯಾಕೆ ಬೇಕು ನನ್ನ ಸ್ಥಾಯಿಭಾವ ದ್ವೇಷ

ಎಂಥ ನಿರ್ಜನ ರಾತ್ರಿ ತಾರೆಯೂ ಇಲ್ಲದ ಆಕಾಶ
ಒಬ್ಬಳೇ ನಿಂತಿರುವಳು ಸಿಕ್ಕೀತೆ ಇಂಥ ಅವಕಾಶ
ಎಲೆ ಹೆಣ್ಣೆ ಕಾಣುತಿರುವುದೆ ನನ್ನ ಕೈಯ ಚಾಕು
ಕೊಲೆಯೊ ರೇಪೊ ಹೇಳು ಮೊದಲು ಏನು ಬೇಕು?

ಓ ನಿನ್ನ ಕೈಲೂ ಉಂಟೆ ಗುಂಡು ತುಂಬಿದ ಗನ್ನು
ಹಾಗಾದರೆ ನಮ್ಮ ಪಾಡಿಗೆ ನಾವು ಹೋಗಬೇಕಿನ್ನು
ಮತ್ತೆ ಸಿಗೋಣ, ಒಬ್ಬರ ಬಳಿ ಮಾತ್ರ ಇದ್ದಾಗ ಬಾಕು
ಬರಲೆ? ಬೆಳಗ್ಗೆ ಬೇಗ ಎದ್ದು ಆಫೀಸಿಗೆ ಹೋಗಬೇಕು

Tuesday, April 15, 2008

ಮಗುವೇ ತಾಯಿಯ ಹಾಡು


ಮೊದಲ ದಿವಸ ಶಾಲೆಗೆ ಹೋಗಲು ಪುಟ್ಟ
ಬಹಳ ಕಷ್ಟ ಪಟ್ಟ ಬಹಳ ಕಷ್ಟ ಕೊಟ್ಟ
ಎಷ್ಟು ಪೌಡರ್ ಹಾಕಿ ಒರೆಸಿದ್ರೂ ಸರೆ
ಕೆನ್ನೆ ಮೇಲುಳಿದೇ ಇತ್ತು ಕಂಬನಿಯ ಗೆರೆ

ಮನೆಯಲ್ಲಿ ಹಿಡಿಯಲಾಗದಷ್ಟು ತಂಟೆಕೋರ
ಯೂನಿಫಾರ್ಮಿನಲ್ಲಿ ಮಾತ್ರ ಸಂಭಾವಿತ ಪೋರ
ಮಿಸ್‌ ಮುದ್ದಿನಿಂದ ಕರೆದೊಯ್ಯುವಾಗಲೂ ಕೋಪ
ಅಮ್ಮನನ್ನೇ ತಿರುತಿರುಗಿ ನೋಡುತ್ತಿದ್ದ ಪಾಪ

ಇಷ್ಟು ಹೊತ್ತಿಗೆ ಅಳು ನಿಲ್ಲಿಸಿರಬಹುದು
ಪಕ್ಕದ ಮಗು ಜತೆ ದೋಸ್ತಿ ಬೆಳೆದಿರಬಹುದು
ಹೊಸಲೋಕದ ಬೆರಗಲಿ ಮನೆ ಮರೆತಿರಬಹುದು
ವಾಟರ್ ಬಾಟಲಿಯಿಂದ ನೀರು ಕುಡಿದಿರಬಹುದು

ಈ ಪುಕ್ಕಲ ಹುಡುಗ ದೊಡ್ಡಕ್ಕೆ ಬೆಳೆದು
ಹಾಸ್ಟೆಲು ಸೇರಿ ಅಮ್ಮನಿಲ್ಲದೆ ಮಲಗುವನೆ
ದಾಡಿ ಮಾಡಿಕೊಂಡು ಆಫೀಸಿಗೆಲ್ಲಾ ಹೋಗಿ
ಇಂಗ್ಲಿಷಿನಲ್ಲಿ ಮಾತಾಡುತ್ತಾ ಕಾರೋಡಿಸುವನೆ

ದೊಡ್ಡಮ್ಮನ ಮಗನಂತೆ ಕುಡಿದು ಬಂದು
'ನನ್ನ ದುಡ್ಡು ನಾನು ಕುಡಿವೆ ನೀನ್ಯಾರು ಕೇಳಲು'
ಅಂತ ಅಮ್ಮನ ಮೇಲೆ ಉರಿದು ಬೀಳುವನೆ?
ಫೇಲಾಗಿ ಪೋಲಿಯಾಗಿ ಅಪ್ಪನ ಮೇಲೆ ರೇಗುವನೆ?

ಅಯ್ಯೋ ಶಾಲೆ ಬಿಡುವ ಹೊತ್ತಾಯಿತಲ್ಲವೆ
ಹೊರಬರುವ ಹೊತ್ತಿಗೆ ಅಮ್ಮನಿರಲೇಬೇಕು ಗೇಟಿನಲ್ಲಿ
ಆ ಧೈರ್ಯದಿಂದೇ ಒಳಗೆ ಕುಳಿತ ಮಗುವಲ್ಲವೆ
ಹಲ್ವ ಮಾಡಿದ್ದೇನೆಂದು ಹೇಳುವೆ ಮನೆಯ ದಾರಿಯಲ್ಲಿ

ಒಂದೇ ರೀತಿ ಕಾಣುವ ಬೊಂಬೆ ಸಮುದ್ರದೊಳಗಿಂದ
ನನ್ನ ಕಂಡೊಡನೆಯೇ ಹೇಗೆ ಅಳತೊಡಗಿತಲ್ಲ
ಈಗ ನನ್ನ ಸೆರಗಲ್ಲಿ ಅಡಗಿರುವ ಕೂಸಿಗಿಂತ ಬೇರೆ ಬೇಕೆ
ಬೆಳೆದು ಆಗುವ ದೊಡ್ಡ ಮನುಷ್ಯನ ಮಾತು ಈಗ ಯಾಕೆ

ದೇವರೆ, ಕಾಲ ಮೆಲ್ಲನೆ ಸಾಗಲಿ

Monday, April 14, 2008

ಕಾಮೆಂಟ್‌ ರೀ

ಬಿ ಫಾರಂ ಇನ್ನೂ ಕೈಗೆ ಬರದಿದ್ದರೂ ಈಗಾಗಲೇ ಅನೇಕರು ಚಿತ್ರವಿಚಿತ್ರ ವಿಧಾನಗಳಿಂದ ಜನರನ್ನು ಆಕರ್ಷಿಸಲು ಶುರುಮಾಡಿದ್ದಾರೆ. ಕ್ಷೇತ್ರದ ಜನರ ‘ಸಂತೋಷ’ಕ್ಕಾಗಿ ಚುನಾವಣೆಗೆ ಸಜ್ಜಾಗುತ್ತಿರುವ ಮಹನೀಯರೊಬ್ಬರು ಬರೋಬ್ಬರಿ ಹನ್ನೆರಡು ಬುಲ್ಡೋಜರ್ಗಳನ್ನು ತಂದು ನಿಲ್ಲಿಸಿಕೊಂಡಿದ್ದಾರಂತೆ. ಜನ ಬಂದು ನಮ್ಮ ಕಡೆಗೆ ರಸ್ತೆ ಸರಿ ಇಲ್ಲ ಎಂದರೆ ಸಾಕು, ರಸ್ತೆ ಮಾಡಿಕೊಡಲು ಅವರು ತಯಾರಂತೆ. ‘ರೋಡ್’ ಟು ಸಕ್ಸಸ್ ಎಂಬುದನ್ನು ಅಕ್ಷರಶ: ನಂಬಿದಂತಿರುವ ಇವರನ್ನು ದೇವರು ಕಾಪಾಡಲಿ. ಇಷ್ಟು ಮಾಡಿಯೂ ಜನ ವೋಟು ಹಾಕದೆ ಸೋಲಿಸಿದರೆ ಇದೇ ಬುಲ್ಡೋಜರ್‌ಗಳನ್ನು ಅವರು ವಿರೋಗಳ ನೆಲಸಮ ಕಾರ್‍ಯಕ್ಕೆ ಬಳಸದಿರಲಿ ಎಂದು ಅದೇ ದೇವರಲ್ಲಿ ಬೇಡಿಕೊಳ್ಳೋಣ!
*
ಇದೇ ವೇಳೆ ಜನರನ್ನು ತಮ್ಮ ಹಾಸ್ಯ‘ಸುಧೆ’ಯಿಂದ ನಗೆ ಸಾಗರದಲ್ಲಿ ಮುಳುಗಿಸುವ ಟಿವಿ ಶೋ ಖ್ಯಾತಿಯ ಮಹಿಳೆಯೊಬ್ಬರು ಸಾಗರ ಕ್ಷೇತ್ರದಿಂದ ಪ್ರಮುಖ ಪಕ್ಷವೊಂದರ ಟಿಕೆಟ್ ಬೇಕು ಅಂತ ಗಲಾಟೆ ಶುರುಮಾಡಿರುವರಂತೆ. ಪಕ್ಷದವರು ಮೇಡಂರ ಟಿಕೆಟ್ ಬೇಡಿಕೆಯನ್ನೂ ಒಂದು ಜೋಕ್ ಎಂದು ಪರಿಗಣಿಸದಿರಲಿ ಎಂಬುದು ನಮ್ಮ ಸೀರಿಯಸ್ ಕಾಳಜಿ!
*
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಹಸಿರು ಕಾರ್ಡ್ ಇದ್ದೋರಿಗೆಲ್ಲಾ ಕಲರ್ ಟಿವಿ ಕೊಡುತ್ತೇವೆ ಅಂತ ಅದು ಭರವಸೆ ಕೊಟ್ಟಿದೆ. ಸೋಸಿಲಿಗೆ ಈಗ ಬಂದಿರುವ ಅನುಮಾನವೆಂದರೆ ಆ ಕಲರ್ ಟಿವಿಯಲ್ಲಿ ಹಸಿರು ಬಣ್ಣ ಮಾತ್ರ ಬರುತ್ತೋ ಅಥ್ವಾ ಬೇರೆ ಬಣ್ಣಗಳೂ ಬರ್‍ತವೊ?!
*
ಈ ಜೋಕು ಅಂತರ್ಜಾಲದಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಪ್ರಥಮ ಬಹುಮಾನ ಗೆದ್ದಿತಂತೆ. ಕೇಳುವಂತವರಾಗಿ. ಸರ್ದಾರ್ಜಿಯೊಬ್ಬ ಪ್ರತಿದಿನ ಬಾರಿಗೆ ಹೋಗಿ ಮೂರು ಬಾಟಲಿ ಬೀರು ಕೊಂಡು , ಮೂರೂ ಬಾಟಲಿನಿಂದ ಒಂದೊಂದು ಸಿಪ್‌ನಂತೆ ಕುಡಿಯುತ್ತಾ ಕುಳಿತನಂತೆ. ಹಿಂಗ್ಯಾಕೆ ಅಂತ ಬಾರಿನವರು ಕೇಳಿದ್ದಕ್ಕೆ ‘ಏನಿಲ್ಲ , ನಾವು ಮೂರು ಜನ ಬ್ರದರ್‍ಸು. ಜತೆ ಇದ್ದಾಗ ಕೂಡಿ ಕುಡಿಯುತ್ತಿದ್ದೆವು. ಈಗವರು ಒಬ್ಬೊಬ್ಬರು ಒಂದೊಂದ್ ಊರಿನಲ್ಲಿ ಇದ್ದಾರೆ. ಅದಕ್ಕೇ ಅವರ ಪಾಲಿನ ಬಾಟಲನ್ನೂ ನಾನೇ ಕುಡೀತಿದೀನಿ’ ಅಂತ ವಿವರಿಸಿದ. ಬಾರಿನವನಿಗೆ ಬಹಳ ಖುಷಿಯಾಯ್ತು. ಮೂರು ತಿಂಗಳವರೆಗೆ ದಿನಾ ಹೀಗೆ ನಡೆಯುತ್ತಿತ್ತು. ಒಂದು ದಿನ ಸರದಾರ್ಜಿ ಎರಡೇ ಬಾಟಲು ತಗೊಂಡು ಕುಡಿದ. ಬಾರಿನವನು ಪಾಪ ಒಬ್ಬ ಸೋದರನಿಗೆ ಏನೋ ಆಗಿರಬಹುದು ಎಂದುಕೊಂಡು ಸರ್ದಾರ್ಜಿ ಬಳಿ ಬಂದು ಸಂತಾಪದ ದನಿಯಲ್ಲಿ ‘ಸಾರಿ ಹೀಗಾಗಬಾರದಿತ್ತು’ ಎಂದ. ಅದಕ್ಕೆ ಸರ್ದಾರ್ಜಿ ನಗುತ್ತಾ ‘ಅಂಥದ್ದೇನೂ ಆಗಿಲ್ಲ ಮಾರಾಯ, ನಾನು ಇವತ್ತಿಂದ ಕುಡಿಯೋದ್ ಬಿಟ್ಟಿದ್ದೀನಿ ಅಷ್ಟೆ’ ಅಂದ!

Monday, April 7, 2008

ಛಂದ ಪುಸ್ತಕ ಸ್ವಾಗತ

ಬಾಟಮ್ಸ್ ಅಪ್!

ಅಳತೆ ಮೀರಿದರೆ ಆಪತ್ತು ಅಂತ ತಿಳಿದು 'ಮದ್ಯಸಾರ'ವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಒಂದಷ್ಟು ಕತೆಗಳನ್ನು ಬರೆದು ನಂತರ ಏನೂ ಬರೆಯಲಾಗದೆ ಒದ್ದಾಡುತ್ತಿದ್ದ ನನಗೆ ಈ ಪುಟ್ಟ ಪದ್ಯಗಳ ಮೂಲಕ ಏನೇನೋ ಮರಳಿ ಸಿಕ್ಕಿದೆ; ಬರೆಯಬಹುದು ಎಂಬ ವಿಶ್ವಾಸವೂ ಸೇರಿದಂತೆ. ಬ್ಲಾಗಿಗೆ ನಿಯಮಿತವಾಗಿ ಓದುಗರನ್ನು ಸೆಳೆಯಲು ಸ್ವಾರಸ್ಯವಾದ ಮತ್ತು ಚುಟುಕಾದ ಏನಾದರೂ ಬೇಕು ಎಂಬ ಉದ್ದೇಶದಿಂದ ಶುರು ಮಾಡಿದ ಈ ಮದ್ಯದ ಕವಿತೆಗಳು ಇಷ್ಟೊಂದಾಗಬಹುದು ಎಂದು ನನಗೂ ಗೊತ್ತಿರಲಿಲ್ಲ. ಈಗ ನಿಲ್ಲಿಸಬೇಕು ಎಂದು ತೀರ್ಮಾನಿಸಿರುವಾಗ ಕುಡಿತವನ್ನು ಬಿಡುವಷ್ಟೇ ಕಷ್ಟವಾಗುತ್ತಿದೆ!

ಖುಷಿಯ ವಿಷಯವೆಂದರೆ ಈ ಪದ್ಯಗಳೆಲ್ಲಾ ಪುಟ್ಟ ಪುಸ್ತಕ ರೂಪದಲ್ಲಿ ಬರುತ್ತಿವೆ. ಪ್ರಕಟಿಸುತ್ತಿರುವುದು ಗೆಳೆಯ ವಸುಧೇಂದ್ರ. ಪ ಸ ಕುಮಾರ್ ಕವಿತೆಗಳಿಗೆ ಮತ್ತಷ್ಟು ನಶೆ ಏರಿಸುವಂಥ ಅದ್ಭುತ ರೇಖಾಚಿತ್ರಗಳನ್ನು ಕೊಟ್ಟಿದ್ದಾರೆ.(ಸೆರೆ ನನ್ನದು ಗೆರೆ ಅವರದು!) ಮುಖಪುಟಕ್ಕೆ ಬಳಸಿಕೊಂಡಿರುವ ಅವರದೊಂದು ಚಿತ್ರದಲ್ಲಿ ಕುಡುಕನೊಬ್ಬ ಬಾಟಲಿಗಳ ರಾಶಿಯ ಮೇಲೇ ಕಲ್ಪಿಸಲಾಗದ ಸುಖದಲ್ಲಿ ಮಲಗಿಕೊಂಡಿದ್ದಾನೆ! (ಗೆಳೆಯನೊಬ್ಬ ಅದನ್ನು 'ಸೆರೆ'ಶಯ್ಯೆ ಅಂದ. ಮತ್ತೊಬ್ಬರು 'ಶೀಷಶಾಯಿ' ಎಂದರು. ನೀವು 'ಶೀಷಾಸನ' ಅಂದರೂ ಹೊಂದುತ್ತೆ!).

ಇಷ್ಟು ದಿನ ಬ್ಲಾಗಿಗೆ ಬಂದು ಈ ಪದ್ಯಗಳನ್ನು ಓದಿದ ನಿಮಗೆಲ್ಲರಿಗೂ ವಂದನೆಗಳು. ಮುಂದಿನ ಭಾನುವಾರ 13ನೇ ತಾರೀಖು ಬೆಳಗ್ಗೆ 10.30ಕ್ಕೆ ಬಸವನಗುಡಿಯ ವರ್ಲ್ಡ್ ಕಲ್ಚರ್ ಇನ್ಸ್ಟಿಟ್ಯೂಟ್‌ನಲ್ಲಿ ಇತರ ಎರಡು ಪುಸ್ತಕಗಳೊಂದಿಗೆ ಮದ್ಯಸಾರವೂ ಬಿಡುಗಡೆಯಾಗಲಿದೆ. ಬಿಡುವು ಮಾಡಿಕೊಂಡು ಬನ್ನಿ.

ಯಾವ ಮಾಯದಲ್ಲೊ
ಮುಗಿದುಹೋಯ್ತಲ್ಲ
ಇಡೀ ಬಾಟಲ್ ವಿಸ್ಕಿ
ಅರೆ ಇಸ್ಕಿ!

Sunday, April 6, 2008

ಕಾಮೆಂಟ್‌ ರೀ

ಚುನಾವಣೆ ದಿನಾಂಕಗಳು ಪ್ರಕಟಗೊಂಡಿದ್ದು ಪ್ರಚಾರ ಕಾರ್ಯ ಬಿರುಸಿನಿಂದ ಆರಂಭವಾಗಿದೆ. ವಿನೂತನ ಪ್ರಚಾರ ವಿಧಾನಗಳೂ ನೋಡಸಿಗುತ್ತಿವೆ. ಬಸವನಗುಡಿ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಚಂದ್ರಶೇಖರ್ ಮತದಾರರಲ್ಲಿಗೆ ತೆರಳಿ ‘ನೀವು ಗೆಲ್ಲಿಸುವುದಾಗಿ ಭರವಸೆ ನೀಡಿದರೆ ಮಾತ್ರ ಕಣಕ್ಕಿಳಿಯುತ್ತೇನೆ’ ಅಂತ ಹೊಸ ತಂತ್ರ ಹೂಡಿದ್ದಾರಂತೆ. ‘ಯಾರು ನನಗೆ ಓಟು ಹಾಕುತ್ತೀರೋ ಅವರೆಲ್ಲಾ ಕೈಯೆತ್ತಿ’ ಅಂತ ಕೇಳಿ, ಕೈಗಳನ್ನು ಎಣಿಸಿಕೊಳ್ಳುತ್ತಿದ್ದಾರಂತೆ. ವಿಧಾನವೇನೋ ಚೆನ್ನಾಗಿದೆ. ಆದರೆ ಈಗ ಕೈಯೆತ್ತಿದವರು ಮತದಾನದ ದಿನವೂ ಕೈಯೆತ್ತಿದರೆ ಮಾತ್ರ ಕಷ್ಟ!
*
ಕಾವೇರಿ ವಿವಾದ ತಣ್ಣಗಾಗಿದ್ದು, ಹೊಗೆನಕಲ್ ವಿವಾದ ಕಾವೇರಿದೆ! ತಮಿಳು ಚಿತ್ರನಟರು ರಾಜ್ಯಕ್ಕೆ ತಮ್ಮ ಬೆಂಬಲ ಸೂಚಿಸಲು ಮೊನ್ನೆ ಶುಕ್ರವಾರ ಟೋಕನ್ ಫಾಸ್ಟ್ (ಸಾಂಕೇತಿಕ ಉಪವಾಸ) ಮಾಡಿದರು. ಮರುದಿನ ಪತ್ರಿಕೆಗಳಲ್ಲಿ ಈ ಸುದ್ದಿ ಓದಿ, ಅಲ್ಲಾ ಸ್ವಾಮಿ, ಊಟ ಮಾಡಲು ಟೋಕನ್ ತೆಗೆದುಕೊಳ್ಳೋದು ಸಹಜ. ಆದರೆ ಉಪವಾಸ ಮಾಡೋಕೂ ಟೋಕನ್ನೆ? ಅಂತ ಅಸಂಬದ್ಧ ಪ್ರಶ್ನೆ ಕೇಳಿದ್ದು ಮಿಸ್ ಸೋಸಿಲಿಯಲ್ಲದೆ ಇನ್ಯಾರು?!
ಮುತ್ತಪ್ಪ ರೈ ಕೂಡ ತಮ್ಮ ಸಂಘಟನೆ ರೈ ಕರ್ನಾಟಕ ಅಲ್ಲಲ್ಲ ಜೈ ಕರ್ನಾಟಕದ ವತಿಯಿಂದ ಹೊಗೆನಕಲ್ ಯೋಜನೆ ವಿರುದ್ಧ ಮೊನ್ನೆ ಪ್ರತಿಭಟನೆ ನಡೆಸಿದರು. ೫೦೦ ಕಾರುಗಳಲ್ಲಿ ಬಿಡದಿಯಿಂದ ಹೊಗೆನಕಲ್‌ಗೆ ರ್ಯಾಲಿಯಲ್ಲಿ ಹೊರಟ ಪ್ರತಿಭಟನಾಕಾರರನ್ನು ನೀವು ‘ಕಾರ್’ ಸೇವಕರು ಎಂದು ಧಾರಾಳವಾಗಿ ಕರೆಯಬಹುದು!
*
ಟಿಬೆಟ್ ಬಗೆಗಿನ ಡಿಬೇಟ್ ಜೋರಾಗಿದೆ. ಒಲಿಂಪಿಕ್ ಜ್ಯೋತಿಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಿಲ್ಲ ಅಂತ ಫುಟ್‌ಬಾಲ್ ಆಟಗಾರ ಬೈಚುಂಗ್ ಭುಟಿಯಾ ಹೇಳಿದ್ದು ಟಿಬೆಟ್ ಬೆಂಬಲಿಗರನ್ನು ಖುಷಿಗೊಳಿಸಿದೆ. ಒಂದು ವೇಳೆ ತಮಿಳುನಾಡಿನಲ್ಲಿ ದಲೈಲಾಮಾರ ಅಭಿಮಾನಿಗಳ ಸಂಘವೊಂದು ಶುರುವಾದರೆ ಅದಕ್ಕೆ ಏನು ಹೆಸರಿಡಬಹುದು?
ವಿಡುದಲೈ ಲಾಮಾ ಚಿರುತೆಗಳ್!
*
ಎರಡನೇ ಟೆಸ್ಟಿನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳು ಕೇವಲ ೨೦ ಓವರು ಆಡುವುದರಲ್ಲಿ ಎಲ್ಲರೂ ಔಟಾಗಿ ಹೋದರು. ಆದರೂ ಅದಕ್ಕೆ ಬೇಸರ ಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಎಷ್ಟೇ ಆದರೂ ನಾವು ೨೦-೨೦ ಚಾಂಪಿಯನ್ನರಲ್ಲವೆ?!

Tuesday, April 1, 2008

ಎರಡು ಹೊಸ ವಿನ್ಯಾಸಗಳುಇವು ನಾನು ಇತ್ತೀಚಿಗೆ ರಚಿಸಿದ ಪುಸ್ತಕ ಮುಖಪುಟಗಳು. ಹೇಗಿವೆ?