Sunday, September 28, 2008

ಶುರು ಮಾಡಿದ್ರಾ?

ಮೂರು ದಿನ ಆಯ್ತು. ಏನಾದ್ರೂ ಐಡಿಯಾ ಹೊಳೀತಾ?
ಕೆಲವರು ಕೇಳುತ್ತಿದ್ದಾರೆ, ಫೋಟೋಶಾಪಲ್ಲೇ ಮಾಡಬೇಕಾ ಅಂತ. ಹಾಗೇನಿಲ್ಲ. ನೀವು ಬಿಳಿಹಾಳೆಯ ಮೇಲೆ ನಿಮ್ಮ ವಿನ್ಯಾಸವನ್ನು ಪೂರ್ಣಗೊಳಿಸಿ ಅದನ್ನು ಸ್ಕ್ಯಾನ್ ಮಾಡಿ ಕಳಿಸಿದರೂ ನಡೆಯುತ್ತೆ.
ಬಳ್ಳಾರಿಯ ಹಾಗೂ ಬೆಂಗಳೂರಿನ ಪರಿಸರದಲ್ಲಿ ನಡೆಯಬಹುದಾದ ಸನ್ನಿವೇಶಗಳು ವಸುಧೇಂದ್ರರ ಕತೆಗಳಲ್ಲಿವೆ ಎಂದು ಈಗಾಗಲೆ ಹೇಳಿದ್ದೇವೆ. ಅವೆರಡೂ ಲೋಕಗಳನ್ನು ಬೆಸೆಯುವ ಕತೆಗಳಾದ್ದರಿಂದಲೇ ಪುಸ್ತಕಕ್ಕೆ ‘ಹಂಪಿ ಎಕ್ಸ್‌ಪ್ರೆಸ್’ ಎಂಬ ಹೆಸರು. ಆದರೂ ಪುಸ್ತಕದಲ್ಲಿರುವ ಒಂದು ಕತೆಯನ್ನಾದರೂ ಓದಿದರೆ ಒಂದಿಷ್ಟು ಐಡಿಯಾ ಬರಬಹುದಾಗಿತ್ತು ಎಂಬುದು ಕೆಲವರ ಅನಿಸಿಕೆ. ಅಂಥವರಿಗಾಗಿ ಸಂಕಲನದಲ್ಲಿ ಇರುವ ಸೀಳುಲೋಟ ಎಂಬ ಕತೆಯ ಲಿಂಕ್ ಇಲ್ಲಿದೆ. ಓದಿ.
ಬೆಸ್ಟ್ ಆಫ್ ಲಕ್.

Thursday, September 25, 2008

ನೀವು ಮುಖಪುಟ ರಚಿಸಬಲ್ಲಿರಾ?

ಪುಸ್ತಕ ಕೊಳ್ಳುವ ಉದ್ದೇಶವಿಲ್ಲದವರನ್ನೂ ಒಮ್ಮೆ ಪುಸ್ತಕ ಕೈಗೆತ್ತಿಕೊಳ್ಳುವಂತೆ ಮಾಡುವ ಶಕ್ತಿ ಮುದ್ದಾದ ಮುಖಪುಟಕ್ಕೆ ಇರುತ್ತದೆ. ಕೆಲವೊಮ್ಮೆ ಒಳಗಿನ ಬರಹದ ಬಗ್ಗೆ ಗೊತ್ತಿಲ್ಲದಿದ್ದರೂ ಇರಲಿ ತಗೊಂಬಿಡೋಣ ಎಂದು ಮರುಳು ಮಾಡುವಷ್ಟು ಅಂದವಾಗೂ ಇವು ಇರುತ್ತವೆ! ಕಂಪ್ಯೂಟರ್, ಫೋಟೋಶಾಪ್, ಡಿಜಿಟಲ್ ಕ್ಯಾಮರಾಗಳು ಎಲ್ಲರಿಗೂ ಸುಲಭವಾಗಿ ಎಟುಕುತ್ತಿರುವ ಈ ಕಾಲದಲ್ಲಿ ಅಂಥ ಚಂದದ ಮುಖಪುಟವೊಂದನ್ನು ರಚಿಸುವ ಆಸೆ ಬಹಳಷ್ಟು ಜನಕ್ಕೆ ಬಂದಿರಬಹುದು. ಆದರೆ ಅವಕಾಶ ? ಹಾಗಿದ್ದರೆ ನಿಮಗೊಂದು ಖುಷಿಯ ಸುದ್ದಿ.
ಹೊಸ ಕತೆಗಾರರ ಶೋಧ, ಕಡಿಮೆ ದರದಲ್ಲಿ ಪುಸ್ತಕ ಪ್ರಕಟಣೆ, ಸಿಡಿಯಲ್ಲಿ ಪುಸ್ತಕ, ಬ್ರೈಲ್‌ನಲ್ಲಿ ಪುಸ್ತಕ.... ಛಂದ ಪುಸ್ತಕದ ಹೊಸತುಗಳ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಹೊಸಬಗೆಯ ಪುಸ್ತಕ ಮುಖಪುಟಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಛಂದಪುಸ್ತಕವು ‘ಛಂದ ಮುಖಪುಟ ವಿನ್ಯಾಸ" ಸ್ಪರ್ಧೆ ಏರ್ಪಡಿಸಿದೆ.
ಇದೇ ಡಿಸೆಂಬರ್ ನಲ್ಲಿ ಅದು ಪ್ರಕಟಿಸಲಿರುವ ವಸುಧೇಂದ್ರರ ‘ಹಂಪಿ ಎಕ್ಸ್‌ಪ್ರೆಸ್" ಕಥಾಸಂಕಲನಕ್ಕೆ ನೀವು ಮುಖಪುಟ ರಚಿಸಬಹುದು. ಆಯ್ಕೆಗೊಂಡ ಒಂದು ವಿನ್ಯಾಸಕ್ಕೆ 5000 ರೂ ಬಹುಮಾನ ನೀಡಲಾಗುವುದು. ಪುಸ್ತಕದ ವಸ್ತು ಬಳ್ಳಾರಿ ಹಾಗೂ ಬೆಂಗಳೂರಿನ ಪರಿಸರದಲ್ಲಿ ನಡೆಯುವ ಜೀವನಪ್ರೀತಿಯ ಕತೆಗಳು.
ಮುಖಪುಟ ವಿನ್ಯಾಸದ ಅಳತೆ: ಎತ್ತರ 22.5 ಸೆಮೀ, ಅಗಲ 14.5 ಸೆಮೀ. ಒಬ್ಬರು ಎಷ್ಟು ಬೇಕಾದರೂ ವಿನ್ಯಾಸಗಳನ್ನು ಕಳಿಸಬಹುದು.
ನಿಮ್ಮ ವಿನ್ಯಾಸಗಳನ್ನು chandapustaka@yahoo.com ಗೆ ಇ ಮೇಲ್ ಮಾಡಿ. ವಿನ್ಯಾಸವನ್ನು 300 ರೆಸಲ್ಯೂಷನ್‌ನಲ್ಲಿ ಸಿದ್ಧಪಡಿಸಿ, ಇ ಮೇಲ್ ಮಾಡುವಾಗ ರೆಸಲ್ಯೂಷನ್ ಅನ್ನು 72ಕ್ಕೆ ಇಳಿಸಿ, ಜೆಪೆಗ್ ಫಾರ್ಮ್ಯಾಟ್‌ನಲ್ಲಿ ಕಳಿಸಿರಿ.
ಮುಂದೇನಾಯಿತು ಎಂಬುದಕ್ಕೆ ಈ ಬ್ಲಾಗನ್ನು ಆಗಾಗ ವೀಕ್ಷಿಸುತ್ತಿರಿ. ಕಡೆಯ ದಿನಾಂಕ: ಅಕ್ಟೋಬರ್ 20.
ವಿವರಗಳಿಗೆ ಸಂಪರ್ಕಿಸಿ: 98444 22782

ಕಾಡಹಾದಿಯ ಮುಖಪುಟ ಮೊದಲು ಹೀಗಿತ್ತು


ಜೋಗಿಯವರ ‘ಕಾಡಹಾದಿಯ ಕತೆಗಳು’ ಪುಸ್ತಕಕ್ಕೆ ಮೊದಲು ಮಾಡಿದ ಮುಖಪುಟವಿದು. ಆದರೆ ಈ ಚಿತ್ರ ಬೇರೆಲ್ಲೋ ಬಳಕೆಯಾಗಿದ್ದ ವಿಷಯ ತಿಳಿದ ನಂತರ ಫೋಟೋ ಬದಲಿಸಬೇಕಾಯಿತು. ಎರಡೂ ಫೋಟೋ ಮಲ್ಲಿಯದೆ. ನಿಮ್ಮ ಆಯ್ಕೆ ಯಾವುದು?

Thursday, September 18, 2008

ಕುಂವೀ ಕಾರ್ಯಕ್ರಮಕ್ಕೆ ಮಾಡಿದ ಬ್ಯಾಕ್‌ಡ್ರಾಪ್


ಕುಂವೀ ಫೋಟೊ ನೋಡಿದಿರಾ?!


ಗೆಳೆಯ ಡಿ ಜಿ ಮಲ್ಲಿಕಾರ್ಜುನ್ ಮೊನ್ನೆ ಛಂದಪುಸ್ತಕದ ಕುಂವೀ ಕಾರ್ಯಕ್ರಮದಲ್ಲಿ ತೆಗೆದ ನಿಮ್ಮ ಪ್ರೀತಿಯ ಕತೆಗಾರನ ಫೋಟೋಗಳಲ್ಲಿ ಕೆಲವನ್ನು ಇಲ್ಲಿ ಹಾಕಿದ್ದೇನೆ. ಎಷ್ಟೊಂದ್ ಚೆನ್ನಾಗಿವೆ ಅಲ್ವಾ?

Friday, September 12, 2008

ಫಾರ್ ಎ ಚೇಂಜ್!

ಮೊಗಳ್ಳಿ ಗಣೇಶ್ ಅವರ ಹೊಸ ಪುಸ್ತಕಗಳು ಪಲ್ಲವ ಪ್ರಕಾಶನದಿಂದ ಇದೇ ಭಾನುವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಬಿಡುಗಡೆಯಾಗುತ್ತಿವೆ. (ಸ್ಥಳ: ಅನಿಕೇತನ, ಮುರುಘರಾಜೇಂದ್ರ ಸಮುದಾಯ ಭವನ, ಮಹಾಬೋಧಿ ಸೊಸೈಟಿ ಪಕ್ಕ, ಗಾಂಧಿ ನಗರ, ಬೆಂಗಳೂರು) ತಕರಾರು ಎಂಬ ಹೆಸರಿನ ಅವರ ಅಂಕಣ ಬರಹಗಳ ಸಂಕಲನಕ್ಕೆ ರಚಿಸಿದ ಈ ಮುಖಪುಟ ನಿಮಗೇನನ್ನಿಸಿತು?

Monday, September 8, 2008

ರಾಯಲಸೀಮೆ ಎಂಬ ಕತೆಯೂ ಕುಂವೀ ಮಾಂತ್ರಿಕನ ಜತೆಯೂ

ನಮ್ಮೆಲ್ಲರ ಮೆಚ್ಚಿನ ಕತೆಗಾರ ಕುಂವೀ ಜತೆ ಒಂದು ಸಂಜೆ ಕಳೆಯುವ ಅವಕಾಶ ಮಾಡಿಕೊಡುತ್ತಿರುವುದು ಛಂದ ಪುಸ್ತಕ.
ಬರುವ ಭಾನುವಾರ ಜಯನಗರ ಮೂರನೇ ಬ್ಲಾಕಿನಲ್ಲಿರುವ ಎನ್ ಎಮ್ ಕೆ ಆರ್‌ ವಿ ಕಾಲೇಜಿನ ಶಾಶ್ವತಿ ಸಭಾಂಗಣಕ್ಕೆ ಬನ್ನಿ. ಉಳಿದಿದ್ದು ಆಮೇಲೆ!

Monday, September 1, 2008

ಭಾಮಿನಿಯ ಇನ್ನೊಂದು ಮುಖ

ಚೇತನಾರ ಪುಸ್ತಕಕ್ಕೆ ಮೊದಲು ಮಾಡಿದ್ದ ಮುಖಪುಟ ಇದು. ಸ್ನೇಹಿತ ಡಿ ಜಿ ಮಲ್ಲಿಕಾರ್ಜುನ್ ತೆಗೆದ ಫೋಟೊ. ಕಡೆಯ ಕ್ಷಣದಲ್ಲಿ ಇದು ಬದಲಾಯಿತು. ಹಾಗಾಗಿ ಈ ಫೋಟೋವನ್ನು ಕಾರ್ಯಕ್ರಮದ ವೇದಿಕೆಯ ಹಿನ್ನೆಲೆ ಚಿತ್ರವಾಗಿ ಬಳಸಿಕೊಳ್ಳಲಾಯಿತು(ಕೆಳಗಿನದು). ಎರಡೂ ಇಲ್ಲಿವೆ. ಬಿಂಬದ ಮೇಲೆ ಕ್ಲಿಕ್ ಮಾಡಿದರೆ ದೊಡ್ಡದಾಗಿ ಕಾಣುತ್ತವೆಂಬುದು ನಿಮಗೂ ಗೊತ್ತಿದೆ!