Thursday, January 29, 2009

ದುಂಡಾದ ಅಕ್ಷರಕ್ಕೆ ಐದು ಅಂಕ

ದುಂಡಾದ ಅಕ್ಷರಗಳಿಗೆ ಐದು ಅಂಕ ಅಂತ ಪ್ರಶ್ನೆ ಪತ್ರಿಕೆಯಲ್ಲಿ ಇರುತ್ತಿದ್ದುದು ನೆನಪಿದೆಯೆ? ಸುದ್ದಿ ಪತ್ರಿಕೆಗೂ ಅದು ಅನ್ವಯಿಸುತ್ತೆ. ಅದೇ ಸುದ್ದಿ, ಅದೇ ವಿವರ, ಅದೇ ಫೋಟೊ ಇರುವ ಎರಡು ಪತ್ರಿಕೆಗಳನ್ನು ಓದುಗ ಅವುಗಳ ನೋಟದಿಂದ ಅಳೆಯುತ್ತಾನೆ. ಆಹಾ ಎಂಥ ಚಂದದ ವಿನ್ಯಾಸ ಅಂತ ಅವನು ಹೇಳದಿದ್ದಾಗಲೂ ಒಳ್ಳೆಯ ವಿನ್ಯಾಸ ತನ್ನ ಪರಿಣಾಮವನ್ನು ಸದ್ದಿಲ್ಲದೆ ಮಾಡಿಯೇ ಇರುತ್ತದೆ. ಯಾಕೆಂದರೆ ಪುಟವಿನ್ಯಾಸ ಬರಿಯ ಸೌಂದರ್ಯಪ್ರಜ್ಞೆಗೆ ಸಂಬಂಧಿಸಿದ್ದಲ್ಲ. ಸುದ್ದಿಯನ್ನು ಸಲೀಸಾಗಿ ಅರ್ಥ ಮಾಡಿಕೊಳ್ಳಲು ನೆರವಾಗುವುದು ಅದರ ಮುಖ್ಯ ಪಾತ್ರ. ಹಾಗಾಗಿ ಜನಸಾಮಾನ್ಯರಿಗೆ ವಿನ್ಯಾಸವೆಲ್ಲ ಎಲ್ಲಿ ಅರ್ಥವಾಗುತ್ತೆ ಹೇಳಿ, ಅವರಿಗೆ ಸುದ್ದಿ ಮಾತ್ರ ಮುಖ್ಯ ಅಷ್ಟೆ ಎಂದು ವಾದಿಸುವವರು ಮತ್ತೊಮ್ಮೆ ಯೋಚಿಸಬೇಕು.
ಸೆನ್ಸೆಕ್ಸ್ ಪ್ರಪಾತಕ್ಕೆ ಕುಸಿದ ದೊಡ್ಡ ಸುದ್ದಿಯ ನಡುವೆ "ಗಾಬರಿ ಬೇಡ" ಎಂಬ ವಿತ್ತ ಸಚಿವರ ಅಭಯದ ಪುಟ್ಟ ಬಾಕ್ಸು, ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂಬ ಅರ್ಧ ಪುಟದ ಸುದ್ದಿಯ ನಡುವೆ ಮುಖ್ಯಮಂತ್ರಿಯದೊಂದು ತಮಾಷೆಯ ಕೋಟು, ನಾಳೆಯಿಂದ ಪವರ್‌ಕಟ್ ಎಂಬ ಸುದ್ದಿಯ ನಡುವೆ ಉರಿಯುತ್ತಿರುವ ಸಣ್ಣ ಮೇಣದಬತ್ತಿ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾದ ಸುದ್ದಿಯ ಮಧ್ಯೆ ಕೆಂಪಗೆ ಎದ್ದು ಕಾಣುತ್ತಿರುವ ಅಂಕಿಗಳು, ಕಪ್ಪು ಪಟ್ಟಿಯ ಮೇಲೆ ಬೆಳ್ಳಗೆ ಮಿನುಗುವ "ನಮ್ಮಲ್ಲಿ ಮಾತ್ರ" ಎಂಬ ಫಲಕ- ಇವೆಲ್ಲಾ ನಾವು ಸುದ್ದಿ ಗ್ರಹಿಸುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತವೆ. ಮುಖ್ಯವಾದ ವಿವರವೊಂದು ಕಣ್ತಪ್ಪಿ ಹೋಗದಂತೆ ನೋಡಿಕೊಳ್ಳುತ್ತವೆ. ಅಕ್ಷರ ಸಮುದ್ರದ ನಡುವೆ ನಮ್ಮನ್ನು ದಿಕ್ಕು ತಪ್ಪದಂತೆ ಪಾರುಮಾಡುತ್ತವೆ. ಕಣ್ಣಿಗೂ ಹಿತ ನೀಡುತ್ತವೆ.
ಅದನ್ನು ಹೀಗೂ ವಿವರಿಸಬಹುದು: ಸುದ್ದಿ ಎನ್ನುವುದು ಪತ್ರಿಕೆಯ ಹೂರಣವಾದರೆ, ವಿನ್ಯಾಸ ಅದರ ಓರಣ. ಬೇಕಾದರೆ ತೋರಣ ಎನ್ನಿ. ತೋರಣ ಹಸಿರಾಗಿ ನಳನಳಿಸುತ್ತಾ ಮನಕ್ಕೆ ಮುದ ನೀಡುವುದರ ಜತೆಗೇ ಬಾಗಿಲು ಎಲ್ಲಿದೆ ಅಂತ ಹೇಳುವುದಿಲ್ಲವೆ? ಹಾಗೆಯೇ ಪುಟವಿನ್ಯಾಸದ ತೋರಣವೂ ಪತ್ರಿಕೆಯನ್ನು ಚಂದಗಾಣಿಸುತ್ತಲೇ ಓದುಗನ ಕಣ್ಣನ್ನು, ಅವನು ಓದುವ ಕ್ರಮವನ್ನು ನಿರ್ದೇಶಿಸುವಂತಿರಬೇಕು. ಸುದ್ದಿಯನ್ನು ಪ್ರವೇಶಿಸುವ ಬಾಗಿಲನ್ನು ಅದು ತೋರಬೇಕು. ಈ ತೋರಣವಿಲ್ಲದಿದ್ದರೆ ಓದು ಕಷ್ಟಕರ ಚಾರಣದಂತಾಗುತ್ತದೆ; ಗೊಂದಲಗಳಿಗೆ ಕಾರಣವಾಗುತ್ತದೆ. ಹಾಗಾಗಿ ಸುದ್ದಿಯನ್ನು ಓದ ಬನ್ನಿ ಎಂದು ನಮ್ಮನ್ನು ಆಹ್ವಾನಿಸುವಂತೆ ಪುಟಗಳನ್ನು ರೂಪಿಸುವುದು ವಿನ್ಯಾಸಕಾರನ ಆದ್ಯತೆಯಾಗಬೇಕು.
ವಿನ್ಯಾಸಕಾರನ ಕೆಲಸ ಸುಲಭವಾಗಲು ಇತರರೂ ಸಹಕರಿಸಬೇಕಾಗುತ್ತದೆ. ಅವನಿಗೆ ಉಸಿರಾಡಲೊಂದಿಷ್ಟು ಜಾಗವಿರುವಂತೆ ವರದಿಗಾರರು ಸುದ್ದಿಗಳನ್ನು ಕೊಂಚ ಸಂಕ್ಷಿಪ್ತವಾಗಿ ಬರೆಯಬೇಕು. ಅದೂ ಬರಲಿ, ಇದೂ ಇಂಪಾರ್ಟೆಂಟು ಅಂತ ಮುಖಪುಟದಲ್ಲಿ ನಾಲ್ಕಕ್ಕಿಂತ ಹೆಚ್ಚು ಸುದ್ದಿಗಳನ್ನು ತುಂಬದಂತೆ ಸಂಪಾದಕರು ಎಚ್ಚರ ವಹಿಸಬೇಕಾಗುತ್ತದೆ. ಮುಖ್ಯಮಂತ್ರಿ ಯಾವುದೋ ಕಾಮಗಾರಿ ಉದ್ಘಾಟಿಸುತ್ತಿರುವ ವೇದಿಕೆ ಮೇಲಿನ ಗ್ರೂಪ್ ಫೋಟೊವನ್ನು ಸಾಧ್ಯವಾದಷ್ಟು ಒಳಪುಟಕ್ಕೆ ಕಳಿಸಬೇಕು. (ಅದೇ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಗಹನವಾಗಿ ಯೋಚಿಸುತ್ತಿರುವ ಒಂದು ಕ್ಲೋಸಪ್ ಆದರೆ ಪರವಾಗಿಲ್ಲ.) ಮುಖಪುಟದಂತೆಯೇ ಒಳಪುಟಗಳ ವಿನ್ಯಾಸದ ಬಗ್ಗೆಯೂ ಕಾಳಜಿ ಇರಬೇಕು. ಮುಖಪುಟಕ್ಕೂ ಒಳಗಿನ ಪುಟಗಳ ವಿನ್ಯಾಸಕ್ಕೂ ತಾಳೆಯೇ ಆಗದಂತಿದ್ದರೆ ಆಭಾಸ ಎನಿಸದೆ ಇರದು. ಹೀಗೆ ಸಂಬಂಧಪಟ್ಟ ಎಲ್ಲರೂ ಗಮನ ಕೊಟ್ಟಲ್ಲಿ ಮರುದಿನ ಪತ್ರಿಕೆ ಒದುಗನ ಗಮನ ಸೆಳೆಯುವುದರಲ್ಲಿ ಅನುಮಾನವಿಲ್ಲ.
ಇದೇವೇಳೆ, ಡೆಸ್ಕ್ ಟಾಪ್ ಪಬ್ಲಿಷಿಂಗ್‌ನ ಅನಂತ ಅವಕಾಶಗಳಿಗೆ ಮರುಳಾಗಿ ನಾವು ಕೊಂಚ ಅತಿ ಮಾಡುವುದೂ ಉಂಟು. ಢಾಳಾದ ಬಣ್ಣ ಬಣ್ಣದ ಬಾಕ್ಸುಗಳು, ಓದಲಾಗದಷ್ಟು ಸಣ್ಣ ಬಿಳಿ ಅಕ್ಷರಗಳು, ಶೀರ್ಷಿಕೆಗೊಂದು ಬಣ್ಣ, ಕಿಕರ್‌ಗೆ ಇನ್ನೊಂದು ಬಣ್ಣ, ಬಾಕ್ಸ್‌ಗೆ ಮತ್ತೊಂದು ಬಣ್ಣ ಹಾಕುತ್ತಾ ಹೋದರೆ ಕಣ್ಣಿಗೆ ಕಿರಿಕಿರಿ ಎನಿಸುತ್ತದೆ. ಫೋಟೋಗಳನ್ನು ಹಾಕುವಾಗಲೂ ಅಷ್ಟೆ. ಮೂರು ಕಾಲಂ ಫೋಟೋದ ಎತ್ತರ ಮೂರು ಸೆಮೀ ಕೂಡ ಇರದಂತೆ ಕ್ರಾಪ್ ಮಾಡುವುದು, ಅದಕ್ಕೆ ಐದು ಸಾಲಿನ ಅಡಿಬರಹ ಕೊಡುವುದು ಇವೆಲ್ಲಾ ಪದೇಪದೇ ಕಾಣುವ ವಿನ್ಯಾಸದ ತಪ್ಪುಗಳು. ಇಂಗ್ಲಿಷಿನಲ್ಲಿರುವಂತೆ ನಮಗೆ ಹಲವು ಒಳ್ಳೆಯ ಫಾಂಟ್‌ಗಳ ಆಯ್ಕೆ ಇಲ್ಲದ್ದು ಇನ್ನೊಂದು ಕೊರತೆ. ನೂರಾರು ಕನ್ನಡ ಫಾಂಟ್‌ಗಳಿದ್ದರೂ ಬಳಸಬಹುದಾದದ್ದು ಮೂರೋ ನಾಲ್ಕೋ ಅಷ್ಟೆ. ಅದನ್ನು ಅರಿತುಕೊಳ್ಳದೆ ವಿಚಿತ್ರ ಫಾಂಟ್‌ಗಳನ್ನು ಬಳಸಿದರೆ ಅಂದಗೆಡದೆ ಬೇರೆ ವಿಧಿ ಇಲ್ಲ. ಒಂದೇ ಪುಟದಲ್ಲಿ ಎರಡಕ್ಕಿಂತ ಹೆಚ್ಚು ವಿಧದ ಅಕ್ಷರಗಳನ್ನು ಬಳಸುವುದರಿಂದಲೂ ಪುಟದ ವ್ಯಕ್ತಿತ್ವ ಹಾಳಾಗುತ್ತದೆ. ಹಾಗೇ ಒಂದೇ ಪುಟದಲ್ಲಿ ಮೂರಕ್ಕಿಂತ ಹೆಚ್ಚು ಬಣ್ಣಗಳೂ ಒಳ್ಳೆಯದಲ್ಲ ಎಂಬ ಎಚ್ಚರ ಇರಬೇಕು.
ಆದರೆ ಪುಟವಿನ್ಯಾಸಕ್ಕೆ ಇಂಗ್ಲಿಷ್ ದಿನಪತ್ರಿಕೆಗಳು ಕೊಟ್ಟಷ್ಟು ಪ್ರಾಮುಖ್ಯವನ್ನು ಕನ್ನಡ ಪತ್ರಿಕೆಗಳು ಕೊಟ್ಟಿಲ್ಲ ಅನಿಸುತ್ತದೆ. ಇಂಗ್ಲಿಷ್ ಪತ್ರಿಕೆಗಳು ಲಕ್ಷಗಟ್ಟಲೆ ಹಣ ಕೊಟ್ಟು ಪರಿಣತ ವಿನ್ಯಾಸಕಾರರಿಂದ ಹೊಸ ಹೊಸ ವಿನ್ಯಾಸ ಮಾಡಿಸುತ್ತಿದ್ದರೆ ನಾವು ಅಂಥ ಸಾಹಸಗಳ ಬಗ್ಗೆ ಯೋಚಿಸುತ್ತಲೂ ಇಲ್ಲ. ನೋಡಲು ಹಿತವಾಗಿರುತ್ತೆಂದು ಒಂದಿಷ್ಟು ಬಿಳಿ ಜಾಗ ಬಿಟ್ಟರೆ, ಅಲ್ಲೊಂದು ಸ್ಪಾಟ್ ಆಡ್ ಹಾಕಿದ್ದರೆ ಎಷ್ಟು ಹಣ ಬರ್‍ತಿತ್ತು ಗೊತ್ತೆ ಅಂತ ಮಾಲೀಕರು ರೇಗುತ್ತಾರೆ. ಮೊದಲ ಪುಟದಲ್ಲಿ ಎರಡು ಮೂರು ಜಾಹೀರಾತುಗಳನ್ನು ನಾವು ಎಗ್ಗಿಲ್ಲದೆ ತುಂಬಿಸುತ್ತೇವೆ. ಪತ್ರಿಕೆ ಹೆಸರಿನ ಆಚೀಚೆ ಇರುವ ಇಯರ್ ಪ್ಯಾನಲ್‌ಗಳಲ್ಲೂ ಜಾಹೀರಾತು ತುರುಕುತ್ತೇವೆ. ಕಾರಣ ಕನ್ನಡ ಪತ್ರಿಕೆ ಓದುವವನಿಗೆ ಅಂಥ ಅಭಿರುಚಿ ಎಲ್ಲಿರುತ್ತೆ ಎಂಬ ಉಡಾಫೆ ನಮ್ಮದು. ಇದು ಬೇಗ ಬದಲಾದರೆ ಒಳಿತು.
ಇಪ್ಪತ್ನಾಲ್ಕು ಗಂಟೆಗಳ ಸುದ್ದಿ ಚಾನೆಲ್‌ಗಳು ಬಂದು ಈ ಕ್ಷಣದ ಸುದ್ದಿ ಮರುಕ್ಷಣವೇ ರದ್ದಿಯಾಗುತ್ತಿರುವ ಕಾಲದಲ್ಲಿ ಮರುದಿನ ಬೆಳಗ್ಗೆ ಸೈಕಲ್ ಏರಿ ಆಕಳಿಸುತ್ತಾ ಬರುವ ದಿನಪತ್ರಿಕೆಯಲ್ಲಿ ಯಾವ ಸುದ್ದಿ ಇರುತ್ತದೆ ಎಂಬ ಕುತೂಹಲ ಯಾರಿಗೂ ಇಲ್ಲ. ಕುತೂಹಲ ಇದ್ದರೆ ಅದು ಹೇಗಿರುತ್ತದೆ ಎಂಬುದು ಮಾತ್ರ. ಹಾಗಾಗಿ ಇಂದಿನ ಓದುಗನಿಗೆ ಒಪ್ಪ ಓರಣ ಮುಖ್ಯವೆನಿಸುತ್ತದೆ. ಪ್ರಸಾರ ಸಂಖ್ಯೆಯ ಪೈಪೋಟಿ ದಿನೇದಿನೇ ಹೆಚ್ಚುತ್ತಿರುವ ಸನ್ನಿವೇಶದಲ್ಲಿ ದುಂಡಾದ ಅಕ್ಷರಗಳಿಗಿರುವ ಐದು ಅಂಕಗಳನ್ನು ಯಾರೂ ಕಡೆಗಣಿಸಲಾಗದು.

ಮೋಹನ ಪುತಿನ

ಜಿ ಎನ್‌ ಮೋಹನ್‌ರ ‘ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ’ ಪುಸ್ತಕಕ್ಕೆ ಈ ಸಲದ ಪುತಿನ ಕಾವ್ಯಪ್ರಶಸ್ತಿ ಬಂದಿದ್ದು ನಿಮಗೆ ಗೊತ್ತು. ನಿನ್ನೆ(ಬುಧವಾರ) ಸಂಜೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಿತ್ತು. ಬೆಂಗಳೂರಿನ ವರ್ಲ್ಡ್‌ಕಲ್ಚರ್‌ ಇನ್ಸಿಟ್ಯೂಟ್‌ನಲ್ಲಿ ಸನ್ಮಾನದ ಜತೆಗೆ ಪುಸ್ತಕದ ಎರಡನೇ ಆವೃತ್ತಿಯ ಬಿಡುಗಡೆಯೂ ಆಯಿತು. ಪದ್ಯದ ಪುಸ್ತಕ ಎರಡನೇ ಆವೃತ್ತಿ ಕಂಡ ಸಡಗರದಲ್ಲಿ ಮುಖಪುಟವನ್ನು ಕೊಂಚ ಹೊಸದಾಗಿಸಲಾಗಿದೆ. ಹೊಸ ಹಳೆಯ ಎರಡೂ ವಿನ್ಯಾಸ ಇಲ್ಲಿವೆ. ನಿಮಗೇನನ್ನಿಸಿತು ಹೇಳಿ. ಅದೇ ಹೊತ್ತಿನಲ್ಲಿ ಮೇಫ್ಲವರ್ ಅಲ್ಲಿ ಬಂದಿದ್ದ ಎಲ್ಲರಿಗೂ ಪುತಿನರ ನೆನಪಿನ ಶುಭಾಶಯಪತ್ರವನ್ನು ಉಚಿತವಾಗಿ ವಿತರಿಸಿತು. ಆ ಚಿತ್ರವೂ ಕೆಳಗಿದೆ.
ಮೋಹನ್‌ಗೆ ಅಭಿನಂದನೆಗಳು.

Tuesday, January 27, 2009

ಮತ್ತೆ ಮೂರು ಮುಖಪುಟ


ವಿಶೇಷವೇನೆಂದರೆ ಈ ಮೂರು ಪುಸ್ತಕಗಳು ಕತೆ ಕವಿತೆ ಕಾದಂಬರಿ ಪುಸ್ತಕಗಳಲ್ಲ. ಕೆ ಆರ್ ಸ್ವಾಮಿ ಅವರ ವ್ಯಂಗ್ಯಚಿತ್ರಗಳ ಎರಡು ಸಂಕಲನ ಮತ್ತು ಎ ಎನ್ ಪ್ರಸನ್ನ ಅವರ ಜಗತ್ತಿನ ಸಿನಿಮಾಗಳನ್ನು ಕುರಿತ ಬರಹಗಳ ‘ಚಿತ್ರ-ಕತೆ’ ಪುಸ್ತಕದ ಮುಖಪುಟಗಳು ಇಲ್ಲಿವೆ. ಎಂದಿನಂತೆ ನಿಮ್ಮ ಸೂಕ್ಷ್ಮ ಗ್ರಹಿಕೆಗಳಿಗಾಗಿ ಕಾಯುತ್ತಿದ್ದೇನೆ...

Saturday, January 17, 2009

ಈ ಮೂರು ಹೊಸ ಮುಖಪುಟಗಳು ಹೇಗಿವೆ?ಧರೆಹತ್ತಿ ಉರಿದೊಡೆ ಪುಸ್ತಕದ ಫೋಟೊ ಡಿ ಜಿ ಮಲ್ಲಿಕಾರ್ಜುನ್‌ದು. ದಿವಾಕರ್ ಅವರ ಕ‍ಥಾಜಗತ್ತು ಪುಸ್ತಕಕ್ಕೆ ಬಳಸಿರುವ ಫೋಟೊ ಇಂಟರ್ನೆಟ್‌ದು.