Friday, February 13, 2009

ಪ್ರೇಮ ಹಳೆಯದಾದರೇನು ?

ಹೊಸ ಪ್ರೇಮಿಗಳ ದಿನ ಬಂದಿದೆ. ನನ್ನ ಬಳಿ ಹೊಸ ಪದ್ಯಗಳಿಲ್ಲ. ಅದಕ್ಕೇ ಇದೇ ಬ್ಲಾಗಿನಲ್ಲಿ ಯಾವ್ಯಾವಾಗಲೋ ಪ್ರಕಟವಾಗಿದ್ದ ಪದ್ಯಗಳಲ್ಲೇ ಕೆಲವನ್ನು ಆಯ್ದು ಮತ್ತೆ ಇಲ್ಲಿ ಜೋಡಿಸಿದ್ದೇನೆ. ಹಳೆಯ ನೆನಪುಗಳು ಮಧುರ ಎಂದಮೇಲೆ ಹಳೆಯ ಪದ್ಯಗಳು ಯಾಕಲ್ಲ? ಹಾಡು ಹಳೆಯದಾದರೇನು ಭಾವ ನವನವೀನ ಇತ್ಯಾದಿ ಎಲ್ಲ ಕೆಟ್ಟ ಲಾಜಿಕ್ಕುಗಳ ಸಹಾಯ ಪಡೆದು ಮತ್ತೊಮ್ಮೆ ಓದಲು ನಿಮ್ಮನ್ನು ಒತ್ತಾಯಿಸುತ್ತಿದ್ದೇನೆ.  ಕ್ಷಮಿಸಿಬಿಟ್ಟು ಓದಿ. ಅಥವಾ ಓದಿಬಿಟ್ಟು ಕ್ಷಮಿಸಿ!

 
*
ನಡುರಾತ್ರಿ ಜತೆಯಾಗಿ ಕೇಳಿದ
ಹಾಡಿನ ವಿಷಾದ ರಾಗ
ಎಲ್ಲಿಂದ ತೇಲಿ ಬಂದು
ನಡುಗಿಸಿತು ಮನವ ಈಗ?

*
ಎಷ್ಟೊಂದು ಸಲೀಸಾಗಿ
ಹೊಳೆದಿತ್ತು ಹೆಸರದು ಅಂದು
ಏನೆಂದು ಕರೆಯುತಿರುವೆಯೊ
ಪುಟ್ಟ ಮಗಳನು ಇಂದು

*
ಅವನ ಜತೆ ಬೆಚ್ಚಗೆ ನೀನು
ಮಲಗಿರುವೆ ಮನೆಯ ಒಳಗೆ
ಮಳೆಯ ರಾತ್ರಿ ನಡುಗುತ್ತಾ
ನಿಂತಿರುವೆ ನಾನು ಹೊರಗೆ
ಮಳೆ ಬರುತ್ತಲೇ ಇರಲಿ ಹೀಗೇ
ನನ್ನ ನಡುಕ ನಿನಗೆ ನಿನ್ನ
ನಡುಕ ನನಗೆ ಕೇಳಿಬರದಿರಲಿ

*
ಎಷ್ಟೋ ಹೊತ್ತು
ಬರೀ ಸೂರ್ಯಕಾಂತಿ ಹೂವನೇ
ನೋಡಿದ ಬಳಿಕ ಕಂಡ
ಹಳದಿ ಚಿಟ್ಟೆ
ಯಾತಕೋ ಸರಕ್ಕನೆ
ನೀನು ತಿರುಗಿದಾಗ
ಕಂಡ ನುಣುಪು ಬಿಳಿ ಹೊಟ್ಟೆ
*
ಮುಸ್ಸಂಜೆ ಹೊತ್ತಲ್ಲಿ
ಕಣ್ಣಿಂದ ಒಳತೂರಿದ
ಚಿಟ್ಟೆ ನೀನು
ಈ ನಡು
ರಾತ್ರಿ ವೇಳೆ ಮೈತುಂಬಿ
ಫಡಫಡಿಸುವೆ ಏನು?

*
ಮಾತು ಕತೆ ಒಂದೂ ಬೇಡ
ಸುಮ್ಮನೆ ಬಂದು ಕೂಡು
ಮಿಸುಕಾಡದೆ ಮಧುವ
ಹೀರೊ ಚಿಟ್ಟೆಯ
ಒಮ್ಮೆ ನೋಡು

*
ಮಧ್ಯಾಹ್ನವ ಕಳೆಯುತಿದ್ದ
ಉದ್ಯಾನದ ಬೆಂಚು
ಮಳೆಯ ರಾತ್ರಿ ಹೊಳೆಯುತಿದ್ದ
ಒದ್ದೆ ಮುಖದ ಮಿಂಚು

ಒಬ್ಬರಿಗೆ ಇನ್ನೊಬ್ಬರು
ಕಾದು ಕೆಂಪಾದ ತಿರುವು
ಕಾಡಿದರೂ ಇರಲಿ ನೆನಪು
ಬೇಡ ಜಾಣ ಮರೆವು

ನಿನ್ನ ನೆನಪಲೆ ಕೊರಗುತಿರುವೆ
ಎನುವರೆಲ್ಲ ಜನ
ನಿನ್ನ ನೆನೆದೇ ಬದುಕುತಿರುವೆ
ಅರಿಯರೆನ್ನ ಮನ

*
ಶುಭಾಶಯ ಕೋರುವ ಹೆಸರಲ್ಲಿ
ಮೃದು ಅಂಗೈಯ ಮುಟ್ಟಿದೆ
ಸುಣ್ಣ ಆಗಿದೆ ಎಂದು ಸುಳ್ಳು ಹೇಳಿ
ಬೆನ್ನನೊಮ್ಮೆ ಮುಟ್ಟಿದೆ
ರಸ್ತೆ ದಾಟುವಾಗ 'ಎಚ್ಚರ' ಎಂದು
ತೋಳು ಮುಟ್ಟಿ ಕಂಪಿಸಿದೆ

ಯಾವ ನೆಪವೂ ಇಲ್ಲದೆ ತಬ್ಬಿ
ಮನವ ಮುಟ್ಟುವ ಹಂಬಲ ಮಾತ್ರ
ಉಳಿದೇ ಹೋಯ್ತು

*
ನಿನ್ನ ಕರೆಗೆ ಹಾಡುತ್ತಿತ್ತು
ನಿನ್ನ ಕೋಪಕೆ ಕಂಪಿಸುತ್ತಿತ್ತು
ಮುದ್ದು ಮಾಡಿದರೆ ಬಿಸಿಯಾಗುತಿತ್ತು
ಈಗ ಕ್ರೆಡಿಟ್‌ ಕಾರ್ಡಿನವರ ಕಾಟಕ್ಕೆ
ಕಂಗೆಟ್ಟಿದೆ ನನ್ನ ಮೊಬೈಲು
ನಿನ್ನ ನಂಬರು ಚಾಲ್ತಿಯಲ್ಲಿಲ್ಲ

*
ನೀನು ತೊರೆದು ಹೋದ ಮೇಲೆ
ನಾನು ಗಡ್ಡ ಬಿಟ್ಟಿಲ್ಲ, ಕುಡಿವುದ ಕಲಿತಿಲ್ಲ
ಕೆಲಸಕ್ಕೆ ಹೋಗುವುದನ್ನೂ ಬಿಟ್ಟಿಲ್ಲ
ನಿನ್ನ ನೆನಪಲ್ಲಿ ಕಣ್ಣೀರು ಸುರಿಸುತಿಲ್ಲ
ಈ ಪದ್ಯ ಬರೆಯುವಾಗಲೂ ಕಂಪಿಸುತಿಲ್ಲ
ಹೇಳು, ನಿನಗೆ ಖುಷಿಯಾಯಿತೆ?

*
ನಿನ್ನ ಮುದ್ದಿಸಿ ಮರಳುತಿದ್ದೆ
ಜೋರುಮಳೆಗೆ ಸಿಕ್ಕಿಬಿದ್ದೆ
ಒಳಗೂ ಒದ್ದೆ ಹೊರಗೂ ಒದ್ದೆ
ಕಣ್ಣ ತುಂಬ ಸುಖದ ನಿದ್ದೆ

*
ಬಟನ್‌ಗೆ ಸಿಲುಕಿದ ಕೂದಲು ಇಲ್ಲ
ಅಂಗಿ ಮೇಲೆ ನಿನ್ನ ತುಟಿಮುದ್ರೆ ಇಲ್ಲ
ನಾವು ಕೂಡಿದ್ದಾದರೂ ನಿಜವೆ ತಿಳಿಯುತಿಲ್ಲ
ಒಂದೇ ಸಾಕ್ಷಿ, ಆಗಿನಿಂದ ನಿದ್ರೆ ಇಲ್ಲ

*
ಬೀಡಾ ಹಾಕಿಕೊಂಡು ತುಟಿ ಕೆಂಪ ಮರೆಸಿದೆ
ಸೆಂಟು ಪೂಸಿಕೊಂಡು ಮೈಕಂಪನಳಿಸಿದೆ
ಗೆಳತಿ, ನಿನ್ನ ಕೂಡಿ ಮನೆಗೆ ಮರಳಿದವನು
ಎಷ್ಟು ನಟಿಸಿದರೂ ಕಣ್ಣ ಹೊಳಪನಡಗಿಸದಾದೆ

*
ನಾವು ಅಷ್ಟೊಂದು ಮೈ ಮರೆಯಬಾರದಿತ್ತು
ಈಗ ನೋಡು ಮೆಲುಕುಹಾಕಲು ಕೂತರೆ
ಕೂಟದ ಒಂದು ವಿವರವೂ ನೆನಪಾಗುತಿಲ್ಲ
ಈ ತುಟಿಯ ಗಾಯವೂ ಏನೂ ಹೇಳುತಿಲ್ಲ