*
ಕೊನೆಯ ಬಸ್ಸು ನಮಗೆಂದೇ ಇರೋದು
ನೆಟ್ಟಗೆ ನಿಲ್ಲಿ ಎಂದು ಗದರದಿರಿ
ಮನೆಯ ಸ್ಟಾಪಿನಲ್ಲಿ ಇಳಿದು ಹೋಗುವೆವು
ಕುಡುಕರ ಸಹವಾಸ ಎಂದು ಹೆದರದಿರಿ
*
ಬಾರಿನ ದೀಪವೇಕೆ ಸದಾ ಮಂಕು
ಪಬ್ಬು ಯಾಕಿರುತ್ತೆ ಹಾಗೆ ಮಬ್ಬು
ಬಂದೋರೆಲ್ಲ ಚಿಯರ್ಸ್ ಎಂದು ಚೀರಿದರೂ
ಗೆಲುವಾಗದಂಥ ನೋವೇನು ಅವಕ್ಕೆ!
*
ಪ್ರೇಮದಲಿ ಸೋತಿಲ್ಲ, ದುಃಖದ ಮಾತಿಲ್ಲ
ನಾನು ಕುಡಿಯುವುದು ಹೀಗೇ ಸುಮ್ಮನೆ
ತೀರದ ದಾಹ ನನಗೆ, ಕುಡಿತವೊಂದು ಚಟ
ನಿಮಗೇಕೆ ಕಾರಣ ಬೇಕೇಬೇಕೆಂಬ ಹಟ?
*
ಕುಂಟು ನೆಪ ಹೇಳಬೇಡ
ಮನೆಗೆ ಹೋಗಲಿನ್ನೂ ಹೊತ್ತಿದೆ
ಬರಲ್ಲ ಅಂದ್ರೆ ಬರಲ್ಲ ಅನ್ನು
ಬಾರಿನ ದಾರಿ ನನಗೂ ಗೊತ್ತಿದೆ
*
ನನ್ನ ನಶೆಗೆ ನಾನು ಬರೆವೆ
ಬೇಡ ಹಾರ ತುರಾಯಿ
ನಿಮ್ಮ ಖುಷಿಗೆ ಕುಡಿಸೆ ಕುಡಿವೆ
ಬಾಟಲಿ ಪೂರ ಸಾರಾಯಿ
Wednesday, December 26, 2007
Tuesday, December 25, 2007
ನೆಲದ ನಕ್ಷತ್ರಗಳು
‘ಪ್ರತಿ ಮಗುವೂ ವಿಶೇಷವೇ’ ಎನ್ನುತ್ತದೆ ಚಿತ್ರದ ಉಪಶೀರ್ಷಿಕೆ. ಇದನ್ನು ಅಮೀರ್ ಖಾನ್‌ಗೂ ಅನ್ವಯಿಸಬಹುದು. ಇತ್ತೀಚೆಗೆ ಆತ ಮಾಡುತ್ತಿರುವ ಪ್ರತಿಯೊಂದೂ ವಿಶೇಷವೇ.
9 X 3 = ?
ಪ್ರಶ್ನೆಪತ್ರಿಕೆಯಲ್ಲಿ ಈ ಪ್ರಶ್ನೆ ನೋಡಿದ ಮೂರನೇ ತರಗತಿ ಬಾಲಕನ ತಲೆಯಲ್ಲಿ ತಾರಾಮಂಡಲವೇ ತೆರೆಯುತ್ತದೆ. ಒಂಭತ್ತು ಅಂದರೆ ನವಗ್ರಹಗಳು, ಮೂರು ಅಂದರೆ ಮೂರನೇ ಗ್ರಹ ಭೂಮಿ...ಭೂಮಿ ಹಾಗೇ ಟೂರ್ ಹೊರಟು ದಾರಿಯಲ್ಲಿ ಗುರುವಿಗೆ ಹಾಯ್ ಹೇಳಿ, ಶನಿಗೆ ಕಣ್ಣುಮಿಟುಕಿಸಿ ಫ್ಲುಟೊಗೆ ಡ್ಯಾಶ್ ಹೊಡೆದರೆ ಅದು ಪೂರ್ತಿ ಪುಡಿಪುಡಿ... ಹೀಗೆಲ್ಲಾ ಕಲ್ಪನಾವಿಲಾಸ ಸಾಗಿ ಇದ್ದಕ್ಕಿದ್ದಂತೆ ಏನೋ ಹೊಳೆದಂತಾಗಿ ಎಚ್ಚರಗೊಂಡು ‘ಎಸ್’ ಎಂದು ಸಂಭ್ರಮಿಸುತ್ತಾ 9 X 3= 3 ಅಂತ ಉತ್ತರ ಬರೆಯುತ್ತಾನೆ ಅವನು !
ಅಮೀರ್ ಖಾನ್‌ನ ಹೊಸ ಸಿನಿಮಾ ‘ತಾರೆ ಜಮೀನ್ ಪರ್’ನ ಮುಖ್ಯ ಪಾತ್ರವಾದ ಇಶಾನ್ ನಿಜಕ್ಕೂ ವಿಶೇಷ ಹುಡುಗನೇ. ಶಾಲೆಗೆ ಹೊರಡೆಂದು ಅಮ್ಮ ಬಾತ್‌ರೂಮಿಗೆ ನೂಕಿದರೆ ಶವರಿನೊಂದಿಗೂ ಅವನ ವಾಗ್ವಾದ. ಥಟ್ಟನೆ ಮೈಮೇಲೆ ಬಿದ್ದ ನೀರಿಗೆ ಅರೆಕ್ಷಣ ನಡುಗಿದರೂ, ಸಾವರಿಸಿಕೊಂಡು ‘ಬಾ ಬಾ ಬರ್‍ತೀಯಾ’ ಎಂದು ಅದಕ್ಕೂ ರೋಪ್ ಹಾಕುವ ಚಿಣ್ಣ. ಅವನು ಬಿಡಿಸುವ ಚಿತ್ರಗಳಲ್ಲೋ ಬೇರೆಯದೇ ಲೋಕದ ಬಣ್ಣ. ತರಗತಿಯ ಪಾಠಗಳಿಗಿಂತ ಕಿಟಕಿಯ ನೋಟಗಳೇ ಅವನಿಗೆ ಸೊಗಸು. ‘೬೭ನೇ ಪುಟ ತೆಗೆದು ಪಾಠ ಓದೊ ’ ಎಂದು ಟೀಚರ್ ಅಬ್ಬರಿಸುತ್ತಿದ್ದರೆ ಇವನಿಗೆ ಓದಲು ಆಗುತ್ತಲೇ ಇಲ್ಲ. ಯಾಕೊ ಎಂದರೆ ‘ಅಕ್ಷರಗಳು ಡ್ಯಾನ್ಸ್ ಮಾಡ್ತಾ ಇವೆ’ ಎಂದು ಹೇಳುವ ಈ ಮುದ್ದು ಹಲ್ಲುಬ್ಬಿನ ತಂಟೆಕೋರನಿಗೆ ಶಾಲೆಯಲ್ಲಿ ಸದಾ ಶಿಕ್ಷೆ. ಬಾಗಿಲ ಹೊರಗೆ ಮಂಡಿಯೂರಿ ಅವನು ನಿಂತಿರುವ ದೃಶ್ಯ ನಿತ್ಯ ಕಾಣುವಂಥದ್ದು. ಸ್ಪೆಲ್ಲಿಂಗ್ ಬರೆವ ಪುಸ್ತಕದ ತುಂಬಾ ಪದಗಳ ಕನ್ನಡಿ ಬಿಂಬಗಳನ್ನೇ ಮೂಡಿಸಿರುವ ಈ ಪುಟ್ಟನ ವಿದ್ಯಾಭ್ಯಾಸ ಕುರಿತು ಅಪ್ಪ ಅಮ್ಮನಿಗೆ ಇನ್ನಿಲ್ಲದ ಕಳವಳ.
ನಿಜಕ್ಕೂ ಅವನಿಗೇನು ಸಮಸ್ಯೆ? ಅದಕ್ಕೇನು ಪರಿಹಾರ ಎಂದು ಆಲೋಚಿಸಬಲ್ಲ ಹೃದಯವಂತ ಶಿಕ್ಷಕನ ಪಾತ್ರದಲ್ಲಿ ಅಮೀರ್‌ಖಾನ್ ಪ್ರವೇಶವಾಗುವುದು ಅರ್ಧ ಸಿನಿಮಾ ಮುಗಿದ ಬಳಿಕ. ಆದರೂ ಈ ಉಜ್ವಲ ಸಿನಿಮಾದ ಮೊದರ್ಧವೇ ಹೆಚ್ಚು ಚೈತನ್ಯಶಾಲಿಯಾಗಿದೆ ಎಂದು ಹೇಳಿದರೆ ಒಮ್ಮೆಗೇ ಅಮೀರ್‌ಖಾನ್‌ನ ಕಾಲೆಳೆದಂತೆಯೂ, ಕೈ ಕುಲುಕಿದಂತೆಯೂ ಆಗುತ್ತದೆ. ಯಾಕೆಂದರೆ ಈ ಚಿತ್ರದ ನಿರ್ದೇಶಕನೂ ಆತನೇ.
ಪ್ರತಿಯೊಂದು ಮಗುವಿನಲ್ಲೂ ಇರುವ ಬೇರೆಬೇರೆ ವಿಶೇಷತೆಗಳನ್ನು ಗುರುತಿಸದೆ ಬರೀ ಪರೀಕ್ಷೆಯಲ್ಲಿ ಮಾರ್ಕ್ಸ್ ತೆಗೆದುಕೊಳ್ಳುವಂತೆ ಒತ್ತಡ ಹೇರುವ ಪೋಷಕರನ್ನು ಹಾಗೂ ಹೊರಗಿನ ವೇಗದ ಓಟಕ್ಕೆ ತಯಾರುಮಾಡುವ ಭರದಲ್ಲಿ ಮಕ್ಕಳ ಸೂಕ್ಷ್ಮ ಮನಸ್ಸನ್ನು ಲಕ್ಷಿಸದ ಶಿಕ್ಷಕರನ್ನು ಆಲೋಚಿಸಲು ಹಚ್ಚುವುದು ಚಿತ್ರದ ಗುರಿ. ಕತೆ ತೀರಾ ಹೊಸದೇನೂ ಅಲ್ಲ. ಆದರೆ ಇಂಥ ಕತೆಯನ್ನು ಚಿತ್ರ ಮಾಡಲು ಸೂಪರ್ ಸ್ಟಾರೊಬ್ಬ ಹೊರಡುವುದು ಮಾತ್ರ ಭಾರತೀಯ ಸಿನಿಮಾಕ್ಕೆ ಹೊಸದು. ಕ್ಲೀಷೆಗಳಿಂದಲೇ ತುಂಬಿಹೋಗಬಹುದಿದ್ದ ಇಂಥ ಕತೆಯನ್ನು ಅಷ್ಟೊಂದು ನವಿರಾಗಿ ಹೇಳಿದ್ದಾರಲ್ಲ ಎಂಬುದು ಹೊಸತು. ಎಲ್ಲಕ್ಕಿಂತ ಬೆಚ್ಚನೆ ಅಚ್ಚರಿ ಎಂದರೆ ಇದು ನಿರ್ದೇಶಕನ ಮೊದಲ ಸಿನಿಮಾ ಎನ್ನುವುದಕ್ಕೆ ಚಿತ್ರದಲ್ಲೆಲ್ಲೂ ಸಾಕ್ಷಿ ಇಲ್ಲ ಎಂಬುದು.
ಮೊದಲರ್ಧದಲ್ಲಿರುವ ದೃಶ್ಯಗಳ ನಿರ್ವಹಣೆಯಂತೂ ನಮ್ಮ ಸಿನಿಮಾಗಳಲ್ಲಿ ಕಂಡರಿಯದಂತ ನವಿರಿನಿಂದ ಕೂಡಿದೆ. ಶಾಲೆಯನ್ನು ಬಂಕ್ ಮಾಡಿ ಮುಂಬಯಿಯ ಓಣಿಗಳಲ್ಲಿ ತಿರುಗುವ ಇಶಾನ್‌ನ ಕುತೂಹಲದ ಕಣ್ಣುಗಳನ್ನು ಹಿಂಬಾಲಿಸಿ ಹೊರಡುವ ಸನ್ನಿವೇಶವಂತೂ ಮರೆಯಲಾಗುವುದೇ ಇಲ್ಲ. ಸಾಹುಕಾರರ ಮಕ್ಕಳು ಐಸ್‌ಕ್ರೀಂ ತಿನ್ನುವುದನ್ನು ಬಡವರ ಮಕ್ಕಳು ಆಸೆಯಿಂದ ನೋಡುವ ದೃಶ್ಯಗಳನ್ನು ಎಷ್ಟೋ ನೋಡಿದ್ದೇವೆ. ಇಲ್ಲಿ ಸ್ಥಿತಿವಂತರ ಮನೆಯ ಹುಡುಗ ಇಶಾನ್, ಬಡವನೊಬ್ಬ ತನ್ನ ಮಗುವಿಗೆ ಐಸ್ ಕ್ಯಾಂಡಿ ಕೊಡಿಸುವುದನ್ನು ಬೆರಗಿನಿಂದ ನೋಡುತ್ತಾನೆ. ತಿಂದಾದ ನಂತರ ಮಗುವನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿರುವ ಆ ಅಪ್ಪನ ಗಟ್ಟಿಮುಟ್ಟಾದ ಕಪ್ಪು ಬೆನ್ನಿನ ಚಿತ್ರಿಕೆಯೂ ಮನವನ್ನು ಸ್ಪರ್ಶಿಸುತ್ತದೆ.
ಈ ಚಂದದ ಸಿನಿಮಾದಲ್ಲಿ ಕೊರತೆ ಅಂತ ಪಟ್ಟಿ ಮಾಡಲೇಬೇಕು ಎಂದು ಹೊರಟರೆ ಹೊಳೆಯುವುದು ಒಂದು ಅಂಶ. ಸಮಸ್ಯೆಯ ಮಕ್ಕಳು ಎಂದು ತೋರಿಸುವುದಕ್ಕಿಂತ ಓದಿನಲ್ಲಿ ಸಾಧಾರಣವಾಗಿರುವ ಆದರೆ ಬೇರೆಬೇರೆ ರೀತಿಯಲ್ಲಿ ಸೃಜನಶೀಲವಾಗಿರುವ ಮಕ್ಕಳೆಲ್ಲರಿಗೂ ಅನ್ವಯಿಸುವಂತೆ ಕತೆಯನ್ನು ನಿರೂಪಿಸಿದ್ದರೆ ಚೆನ್ನಾಗಿರುತ್ತಿತ್ತೇನೊ ಎಂಬುದು. ಈಗ ಅದನ್ನು ಬಿಡಿ.
ಐದೂ ಬೆರಳನ್ನು ಒಂದೇ ಸಮ ಮಾಡಲು ಹೊರಟರೆ ಬೆರಳು ಮುರಿದುಹೋಗುತ್ತೆ, ಪೋಷಕರ ಈ ಹಠ ಬಾಲಕಾರ್ಮಿಕತೆಗಿಂತ ಕೆಟ್ಟದು ಎಂದು ಅಮೀರ್ ಹೇಳುವಾಗ ಒಪ್ಪಿಕೊಳ್ಳಬೇಕು ಅನಿಸುತ್ತದೆ. ‘ಮೇನ್‌ಸ್ಟ್ರೀಮ್’ ಜತೆಗೆ ರ್ಸ್ಪಸಲಾಗದ ‘ವಿಶೇಷ’ ಮಕ್ಕಳ ಬಗ್ಗೆ ಪ್ರೀತಿ, ಸಹಾನುಭೂತಿ ಅನಿಸುತ್ತದೆ. ಇಶಾನ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಬಾಲಕನ ಬಗ್ಗೆ ಖುಷಿ ಅನಿಸುತ್ತದೆ. ಕಾಸರವಳ್ಳಿ ಕೈಗೆ ಸಿಲುಕಿದ್ದರೆ ಬಿಡುಗಡೆಯ ಭಾಗ್ಯ ಸಿಗುವುದೂ ಅನುಮಾನವಿದ್ದ ಕತೆಯನ್ನು ಇಷ್ಟು ಸುಂದರವಾಗಿ ಮಾಡಿ, ಅದ್ದೂರಿಯಾಗಿ ಬಿಡುಗಡೆ ಮಾಡಿರುವ ಅಮೀರ್‌ಖಾನ್ ಸಾಹಸಕ್ಕೆ ಹ್ಯಾಟ್ಸಾಫ್ ಹೇಳಬೇಕು ಅನಿಸುತ್ತದೆ. ಅವೆಲ್ಲಕ್ಕೂ ಮೊದಲು ಸಿನಿಮಾವನ್ನು ಇನ್ನೊಮ್ಮೆ ನೋಡಬೇಕು ಅನಿಸುತ್ತದೆ!
ಈ ‘ವಿಶೇಷ’ ಸಿನಿಮಾ ‘ಮೇನ್‌ಸ್ಟ್ರೀಮ್’ ಸಿನಿಮಾಗಳನ್ನು ಮೀರಿ ಹಿಟ್ ಆಗಲಿ
~ಅಪಾರ
9 X 3 = ?
ಪ್ರಶ್ನೆಪತ್ರಿಕೆಯಲ್ಲಿ ಈ ಪ್ರಶ್ನೆ ನೋಡಿದ ಮೂರನೇ ತರಗತಿ ಬಾಲಕನ ತಲೆಯಲ್ಲಿ ತಾರಾಮಂಡಲವೇ ತೆರೆಯುತ್ತದೆ. ಒಂಭತ್ತು ಅಂದರೆ ನವಗ್ರಹಗಳು, ಮೂರು ಅಂದರೆ ಮೂರನೇ ಗ್ರಹ ಭೂಮಿ...ಭೂಮಿ ಹಾಗೇ ಟೂರ್ ಹೊರಟು ದಾರಿಯಲ್ಲಿ ಗುರುವಿಗೆ ಹಾಯ್ ಹೇಳಿ, ಶನಿಗೆ ಕಣ್ಣುಮಿಟುಕಿಸಿ ಫ್ಲುಟೊಗೆ ಡ್ಯಾಶ್ ಹೊಡೆದರೆ ಅದು ಪೂರ್ತಿ ಪುಡಿಪುಡಿ... ಹೀಗೆಲ್ಲಾ ಕಲ್ಪನಾವಿಲಾಸ ಸಾಗಿ ಇದ್ದಕ್ಕಿದ್ದಂತೆ ಏನೋ ಹೊಳೆದಂತಾಗಿ ಎಚ್ಚರಗೊಂಡು ‘ಎಸ್’ ಎಂದು ಸಂಭ್ರಮಿಸುತ್ತಾ 9 X 3= 3 ಅಂತ ಉತ್ತರ ಬರೆಯುತ್ತಾನೆ ಅವನು !
ಅಮೀರ್ ಖಾನ್‌ನ ಹೊಸ ಸಿನಿಮಾ ‘ತಾರೆ ಜಮೀನ್ ಪರ್’ನ ಮುಖ್ಯ ಪಾತ್ರವಾದ ಇಶಾನ್ ನಿಜಕ್ಕೂ ವಿಶೇಷ ಹುಡುಗನೇ. ಶಾಲೆಗೆ ಹೊರಡೆಂದು ಅಮ್ಮ ಬಾತ್‌ರೂಮಿಗೆ ನೂಕಿದರೆ ಶವರಿನೊಂದಿಗೂ ಅವನ ವಾಗ್ವಾದ. ಥಟ್ಟನೆ ಮೈಮೇಲೆ ಬಿದ್ದ ನೀರಿಗೆ ಅರೆಕ್ಷಣ ನಡುಗಿದರೂ, ಸಾವರಿಸಿಕೊಂಡು ‘ಬಾ ಬಾ ಬರ್‍ತೀಯಾ’ ಎಂದು ಅದಕ್ಕೂ ರೋಪ್ ಹಾಕುವ ಚಿಣ್ಣ. ಅವನು ಬಿಡಿಸುವ ಚಿತ್ರಗಳಲ್ಲೋ ಬೇರೆಯದೇ ಲೋಕದ ಬಣ್ಣ. ತರಗತಿಯ ಪಾಠಗಳಿಗಿಂತ ಕಿಟಕಿಯ ನೋಟಗಳೇ ಅವನಿಗೆ ಸೊಗಸು. ‘೬೭ನೇ ಪುಟ ತೆಗೆದು ಪಾಠ ಓದೊ ’ ಎಂದು ಟೀಚರ್ ಅಬ್ಬರಿಸುತ್ತಿದ್ದರೆ ಇವನಿಗೆ ಓದಲು ಆಗುತ್ತಲೇ ಇಲ್ಲ. ಯಾಕೊ ಎಂದರೆ ‘ಅಕ್ಷರಗಳು ಡ್ಯಾನ್ಸ್ ಮಾಡ್ತಾ ಇವೆ’ ಎಂದು ಹೇಳುವ ಈ ಮುದ್ದು ಹಲ್ಲುಬ್ಬಿನ ತಂಟೆಕೋರನಿಗೆ ಶಾಲೆಯಲ್ಲಿ ಸದಾ ಶಿಕ್ಷೆ. ಬಾಗಿಲ ಹೊರಗೆ ಮಂಡಿಯೂರಿ ಅವನು ನಿಂತಿರುವ ದೃಶ್ಯ ನಿತ್ಯ ಕಾಣುವಂಥದ್ದು. ಸ್ಪೆಲ್ಲಿಂಗ್ ಬರೆವ ಪುಸ್ತಕದ ತುಂಬಾ ಪದಗಳ ಕನ್ನಡಿ ಬಿಂಬಗಳನ್ನೇ ಮೂಡಿಸಿರುವ ಈ ಪುಟ್ಟನ ವಿದ್ಯಾಭ್ಯಾಸ ಕುರಿತು ಅಪ್ಪ ಅಮ್ಮನಿಗೆ ಇನ್ನಿಲ್ಲದ ಕಳವಳ.
ನಿಜಕ್ಕೂ ಅವನಿಗೇನು ಸಮಸ್ಯೆ? ಅದಕ್ಕೇನು ಪರಿಹಾರ ಎಂದು ಆಲೋಚಿಸಬಲ್ಲ ಹೃದಯವಂತ ಶಿಕ್ಷಕನ ಪಾತ್ರದಲ್ಲಿ ಅಮೀರ್‌ಖಾನ್ ಪ್ರವೇಶವಾಗುವುದು ಅರ್ಧ ಸಿನಿಮಾ ಮುಗಿದ ಬಳಿಕ. ಆದರೂ ಈ ಉಜ್ವಲ ಸಿನಿಮಾದ ಮೊದರ್ಧವೇ ಹೆಚ್ಚು ಚೈತನ್ಯಶಾಲಿಯಾಗಿದೆ ಎಂದು ಹೇಳಿದರೆ ಒಮ್ಮೆಗೇ ಅಮೀರ್‌ಖಾನ್‌ನ ಕಾಲೆಳೆದಂತೆಯೂ, ಕೈ ಕುಲುಕಿದಂತೆಯೂ ಆಗುತ್ತದೆ. ಯಾಕೆಂದರೆ ಈ ಚಿತ್ರದ ನಿರ್ದೇಶಕನೂ ಆತನೇ.
ಪ್ರತಿಯೊಂದು ಮಗುವಿನಲ್ಲೂ ಇರುವ ಬೇರೆಬೇರೆ ವಿಶೇಷತೆಗಳನ್ನು ಗುರುತಿಸದೆ ಬರೀ ಪರೀಕ್ಷೆಯಲ್ಲಿ ಮಾರ್ಕ್ಸ್ ತೆಗೆದುಕೊಳ್ಳುವಂತೆ ಒತ್ತಡ ಹೇರುವ ಪೋಷಕರನ್ನು ಹಾಗೂ ಹೊರಗಿನ ವೇಗದ ಓಟಕ್ಕೆ ತಯಾರುಮಾಡುವ ಭರದಲ್ಲಿ ಮಕ್ಕಳ ಸೂಕ್ಷ್ಮ ಮನಸ್ಸನ್ನು ಲಕ್ಷಿಸದ ಶಿಕ್ಷಕರನ್ನು ಆಲೋಚಿಸಲು ಹಚ್ಚುವುದು ಚಿತ್ರದ ಗುರಿ. ಕತೆ ತೀರಾ ಹೊಸದೇನೂ ಅಲ್ಲ. ಆದರೆ ಇಂಥ ಕತೆಯನ್ನು ಚಿತ್ರ ಮಾಡಲು ಸೂಪರ್ ಸ್ಟಾರೊಬ್ಬ ಹೊರಡುವುದು ಮಾತ್ರ ಭಾರತೀಯ ಸಿನಿಮಾಕ್ಕೆ ಹೊಸದು. ಕ್ಲೀಷೆಗಳಿಂದಲೇ ತುಂಬಿಹೋಗಬಹುದಿದ್ದ ಇಂಥ ಕತೆಯನ್ನು ಅಷ್ಟೊಂದು ನವಿರಾಗಿ ಹೇಳಿದ್ದಾರಲ್ಲ ಎಂಬುದು ಹೊಸತು. ಎಲ್ಲಕ್ಕಿಂತ ಬೆಚ್ಚನೆ ಅಚ್ಚರಿ ಎಂದರೆ ಇದು ನಿರ್ದೇಶಕನ ಮೊದಲ ಸಿನಿಮಾ ಎನ್ನುವುದಕ್ಕೆ ಚಿತ್ರದಲ್ಲೆಲ್ಲೂ ಸಾಕ್ಷಿ ಇಲ್ಲ ಎಂಬುದು.
ಮೊದಲರ್ಧದಲ್ಲಿರುವ ದೃಶ್ಯಗಳ ನಿರ್ವಹಣೆಯಂತೂ ನಮ್ಮ ಸಿನಿಮಾಗಳಲ್ಲಿ ಕಂಡರಿಯದಂತ ನವಿರಿನಿಂದ ಕೂಡಿದೆ. ಶಾಲೆಯನ್ನು ಬಂಕ್ ಮಾಡಿ ಮುಂಬಯಿಯ ಓಣಿಗಳಲ್ಲಿ ತಿರುಗುವ ಇಶಾನ್‌ನ ಕುತೂಹಲದ ಕಣ್ಣುಗಳನ್ನು ಹಿಂಬಾಲಿಸಿ ಹೊರಡುವ ಸನ್ನಿವೇಶವಂತೂ ಮರೆಯಲಾಗುವುದೇ ಇಲ್ಲ. ಸಾಹುಕಾರರ ಮಕ್ಕಳು ಐಸ್‌ಕ್ರೀಂ ತಿನ್ನುವುದನ್ನು ಬಡವರ ಮಕ್ಕಳು ಆಸೆಯಿಂದ ನೋಡುವ ದೃಶ್ಯಗಳನ್ನು ಎಷ್ಟೋ ನೋಡಿದ್ದೇವೆ. ಇಲ್ಲಿ ಸ್ಥಿತಿವಂತರ ಮನೆಯ ಹುಡುಗ ಇಶಾನ್, ಬಡವನೊಬ್ಬ ತನ್ನ ಮಗುವಿಗೆ ಐಸ್ ಕ್ಯಾಂಡಿ ಕೊಡಿಸುವುದನ್ನು ಬೆರಗಿನಿಂದ ನೋಡುತ್ತಾನೆ. ತಿಂದಾದ ನಂತರ ಮಗುವನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿರುವ ಆ ಅಪ್ಪನ ಗಟ್ಟಿಮುಟ್ಟಾದ ಕಪ್ಪು ಬೆನ್ನಿನ ಚಿತ್ರಿಕೆಯೂ ಮನವನ್ನು ಸ್ಪರ್ಶಿಸುತ್ತದೆ.
ಈ ಚಂದದ ಸಿನಿಮಾದಲ್ಲಿ ಕೊರತೆ ಅಂತ ಪಟ್ಟಿ ಮಾಡಲೇಬೇಕು ಎಂದು ಹೊರಟರೆ ಹೊಳೆಯುವುದು ಒಂದು ಅಂಶ. ಸಮಸ್ಯೆಯ ಮಕ್ಕಳು ಎಂದು ತೋರಿಸುವುದಕ್ಕಿಂತ ಓದಿನಲ್ಲಿ ಸಾಧಾರಣವಾಗಿರುವ ಆದರೆ ಬೇರೆಬೇರೆ ರೀತಿಯಲ್ಲಿ ಸೃಜನಶೀಲವಾಗಿರುವ ಮಕ್ಕಳೆಲ್ಲರಿಗೂ ಅನ್ವಯಿಸುವಂತೆ ಕತೆಯನ್ನು ನಿರೂಪಿಸಿದ್ದರೆ ಚೆನ್ನಾಗಿರುತ್ತಿತ್ತೇನೊ ಎಂಬುದು. ಈಗ ಅದನ್ನು ಬಿಡಿ.
ಐದೂ ಬೆರಳನ್ನು ಒಂದೇ ಸಮ ಮಾಡಲು ಹೊರಟರೆ ಬೆರಳು ಮುರಿದುಹೋಗುತ್ತೆ, ಪೋಷಕರ ಈ ಹಠ ಬಾಲಕಾರ್ಮಿಕತೆಗಿಂತ ಕೆಟ್ಟದು ಎಂದು ಅಮೀರ್ ಹೇಳುವಾಗ ಒಪ್ಪಿಕೊಳ್ಳಬೇಕು ಅನಿಸುತ್ತದೆ. ‘ಮೇನ್‌ಸ್ಟ್ರೀಮ್’ ಜತೆಗೆ ರ್ಸ್ಪಸಲಾಗದ ‘ವಿಶೇಷ’ ಮಕ್ಕಳ ಬಗ್ಗೆ ಪ್ರೀತಿ, ಸಹಾನುಭೂತಿ ಅನಿಸುತ್ತದೆ. ಇಶಾನ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಬಾಲಕನ ಬಗ್ಗೆ ಖುಷಿ ಅನಿಸುತ್ತದೆ. ಕಾಸರವಳ್ಳಿ ಕೈಗೆ ಸಿಲುಕಿದ್ದರೆ ಬಿಡುಗಡೆಯ ಭಾಗ್ಯ ಸಿಗುವುದೂ ಅನುಮಾನವಿದ್ದ ಕತೆಯನ್ನು ಇಷ್ಟು ಸುಂದರವಾಗಿ ಮಾಡಿ, ಅದ್ದೂರಿಯಾಗಿ ಬಿಡುಗಡೆ ಮಾಡಿರುವ ಅಮೀರ್‌ಖಾನ್ ಸಾಹಸಕ್ಕೆ ಹ್ಯಾಟ್ಸಾಫ್ ಹೇಳಬೇಕು ಅನಿಸುತ್ತದೆ. ಅವೆಲ್ಲಕ್ಕೂ ಮೊದಲು ಸಿನಿಮಾವನ್ನು ಇನ್ನೊಮ್ಮೆ ನೋಡಬೇಕು ಅನಿಸುತ್ತದೆ!
ಈ ‘ವಿಶೇಷ’ ಸಿನಿಮಾ ‘ಮೇನ್‌ಸ್ಟ್ರೀಮ್’ ಸಿನಿಮಾಗಳನ್ನು ಮೀರಿ ಹಿಟ್ ಆಗಲಿ
~ಅಪಾರ
Tuesday, December 18, 2007
ಬ್ಲಾಗಿಲನು ತೆರೆದು...
ಯಾವ ಬ್ಲಾಗು ಅಪ್‌ಡೇಟಾಗಿದೆ? ಯಾವುದಾಗಿಲ್ಲ ಎಂದು ತಿಳಿಯದೆ ಎಲ್ಲಾ ಬ್ಲಾಗುಗಳನ್ನೂ ತೆರೆದು ನೋಡುವುದು ಪ್ರಯಾಸವೇ? ಇಲ್ಲೊಂದು ಉಪಾಯವಿದೆ. http://planetkannada.com/planet-kannada/subscriptions ಎಂಬ ತಾಣದಲ್ಲಿ ಕನ್ನಡದ ಬ್ಲಾಗುಗಳು ಅವು ಅಪ್‌ಡೇಟ್ ಆದ ಸಮಯಕ್ಕೆ ಅನುಗುಣವಾಗಿ ಪಟ್ಟಿಗೊಂಡಿರುತ್ತವೆ. ಈಗಷ್ಟೆ ಅಪ್‌ಡೇಟಾದ ಬ್ಲಾಗು ಎಲ್ಲಕ್ಕಿಂತ ಮೇಲೆ ಕಾಣುತ್ತದೆ. ಹೊಸ ಪೋಸ್ಟ್‌ನ ಶೀರ್ಷಿಕೆಯನ್ನೂ ಅಲ್ಲೇ ಓದಬಹುದು. ಅದನ್ನು ಕ್ಲಿಕ್ಕಿಸಿದರೆ ನೇರ ಆ ತಾಣಕ್ಕೇ ಹೋಗುವಿರಿ. ಚೆನ್ನಾಗಿಲ್ಲವೆ? ಹೇಳಿ. ನಾನಂತೂ ಈ ಲಿಂಕನ್ನು ನನ್ನ ಕಂಪ್ಯೂಟರಿನ ಫೇವರಿಟ್ಸ್ ಮೆನುನಲ್ಲಿ ಹಾಕಿಕೊಂಡಿದ್ದೇನೆ.
ಅಕಸ್ಮಾತ್ ನಿಮ್ಮ ಬ್ಲಾಗು ಅಲ್ಲಿ ಕಾಣುತ್ತಿಲ್ಲವೆ? ಅಲ್ಲೆ ಗೆಟ್ ಲಿಸ್ಟೆಡ್ ಅಂತಿರುವುದನ್ನು ಕ್ಲಿಕ್ ಮಾಡಿ ಪಟ್ಟಿಗೆ ಸೇರಿಕೊಳ್ಳಿ.
ಅಕಸ್ಮಾತ್ ನಿಮ್ಮ ಬ್ಲಾಗು ಅಲ್ಲಿ ಕಾಣುತ್ತಿಲ್ಲವೆ? ಅಲ್ಲೆ ಗೆಟ್ ಲಿಸ್ಟೆಡ್ ಅಂತಿರುವುದನ್ನು ಕ್ಲಿಕ್ ಮಾಡಿ ಪಟ್ಟಿಗೆ ಸೇರಿಕೊಳ್ಳಿ.
Sunday, December 16, 2007
ಮದ್ಯಸಾರ~ಒಂಬತ್ತನೇ ರೌಂಡು
ಆ ಲೋಕದ ಮಾತನ್ನು ಹಿಡಿದು
ಈ ಲೋಕದಲ್ಲಿ ಜಗಳ ತೆಗೆವುದು ತರವೆ?
ಮದ್ಯರಾತ್ರಿ ಮತ್ತಿನಲ್ಲಿ ಹೇಳಿದ ಹೆಸರು
ಈ ಸುಡು ಮಧ್ಯಾಹ್ನ ನನಗೂ ನೆನಪಾಗ್ತಿಲ್ಲ ನಂಬು
~
ಎಷ್ಟು ಕುಡಿದು ಬಂದಿದ್ದೆ ನಿನ್ನೆ ರಾತ್ರಿ
ಕಂಡೇ ಇರಲಿಲ್ಲ ನಿನ್ನ ಅಷ್ಟೊಂದು ನಗು
ನನಗೂ ನಗಬೇಕಿದೆ ಅಷ್ಟು ಚಂದವಾಗಿ
ಹೇಳು ಏನು ಕುಡಿದು ಬಂದಿದ್ದೆ ನಿನ್ನೆ ರಾತ್ರಿ
~
ಮುಟ್ಟುವುದಿಲ್ಲ ಇಂದಿನ ನಂತರ
ಅಂತ ಕುಡಿದದ್ದು ಎಷ್ಟು ಸಲ
ಈ ಮದಿರೆಯ ಸೆಳೆತವೇ ಒಂಥರ
ಅಂತ್ಯವೆಂಬುದು ಭ್ರಮೆ, ಇಲ್ಲಿ ಬರೀ ಮದ್ಯಂತರ
~
ಬೆಟ್ಟವನ್ನೆ ಕಡಿಸಿರಿ
ಮೈಯ ಮುರಿಯೆ ದುಡಿಸಿರಿ
ಸಂಜೆಗಿಷ್ಟು ಕುಡಿಸಿರಿ
ಮನದ ದಣಿವ ಮರೆಸಿರಿ
~
ಮುಗಿವ ಮೊದಲು ಬಟ್ಟಲು ತುಂಬಿಸುವ
ನಿಮ್ಮ ತೊದಲು ನುಡಿಗಳನು ಲಾಲಿಸುವ
ಮಾಣಿಯನ್ನು ಅಮ್ಮನಂತೆ ಕಾಣಿ
ಸುಲ್ತಾನನಂತೆ ಟಿಪ್ಪು ಕೊಟ್ಟೇ ಹೊರಡಿ
ಈ ಲೋಕದಲ್ಲಿ ಜಗಳ ತೆಗೆವುದು ತರವೆ?
ಮದ್ಯರಾತ್ರಿ ಮತ್ತಿನಲ್ಲಿ ಹೇಳಿದ ಹೆಸರು
ಈ ಸುಡು ಮಧ್ಯಾಹ್ನ ನನಗೂ ನೆನಪಾಗ್ತಿಲ್ಲ ನಂಬು
~
ಎಷ್ಟು ಕುಡಿದು ಬಂದಿದ್ದೆ ನಿನ್ನೆ ರಾತ್ರಿ
ಕಂಡೇ ಇರಲಿಲ್ಲ ನಿನ್ನ ಅಷ್ಟೊಂದು ನಗು
ನನಗೂ ನಗಬೇಕಿದೆ ಅಷ್ಟು ಚಂದವಾಗಿ
ಹೇಳು ಏನು ಕುಡಿದು ಬಂದಿದ್ದೆ ನಿನ್ನೆ ರಾತ್ರಿ
~
ಮುಟ್ಟುವುದಿಲ್ಲ ಇಂದಿನ ನಂತರ
ಅಂತ ಕುಡಿದದ್ದು ಎಷ್ಟು ಸಲ
ಈ ಮದಿರೆಯ ಸೆಳೆತವೇ ಒಂಥರ
ಅಂತ್ಯವೆಂಬುದು ಭ್ರಮೆ, ಇಲ್ಲಿ ಬರೀ ಮದ್ಯಂತರ
~
ಬೆಟ್ಟವನ್ನೆ ಕಡಿಸಿರಿ
ಮೈಯ ಮುರಿಯೆ ದುಡಿಸಿರಿ
ಸಂಜೆಗಿಷ್ಟು ಕುಡಿಸಿರಿ
ಮನದ ದಣಿವ ಮರೆಸಿರಿ
~
ಮುಗಿವ ಮೊದಲು ಬಟ್ಟಲು ತುಂಬಿಸುವ
ನಿಮ್ಮ ತೊದಲು ನುಡಿಗಳನು ಲಾಲಿಸುವ
ಮಾಣಿಯನ್ನು ಅಮ್ಮನಂತೆ ಕಾಣಿ
ಸುಲ್ತಾನನಂತೆ ಟಿಪ್ಪು ಕೊಟ್ಟೇ ಹೊರಡಿ
Friday, December 14, 2007
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ...
ಫ್ರಾನ್ಸ್‌ನಲ್ಲಿರೋ ಕನ್ನಡಿಗ ರಮೇ ತಮ್ಮ ಬ್ಲಾಗಿನಲ್ಲಿ ಬರೆದ ಮದ್ಯದ ಪದ್ಯವಿದು. ಚೆನ್ನಾಗಿದೆ ಅಂತ ಇಲ್ಲಿ ಹಾಕಿರುವೆ. ಅವರ ಇತರ ಪದ್ಯಗಳನ್ನು ಓದಲು ಅವರ ಬ್ಲಾಗಿಗೇ ಹೋಗಿ: http://kaavyasudhe.blogspot.com/
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ...
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಸೇಂದಿ ಅಂಗ್ಡಿ ಮುಂಗಟಿನ್ ಸಾಲಾಗ್ ನಿಂತೆ ನಾ;
ಬಿರಟೆ ತಿರಗ್ಸಿ ಮುನಿಯ ತುಂಬ್ದ ಒಂದು ಬುಂಡೆ ನಾ;
ಎತ್ತಿ ಎತ್ತಿ ಕುಡ್ತಿದ್ದಂಗೆ ಒಂದೊಂದ್ ಗುಟ್ಕು ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಪಕ್ದಲ್ ನಿಂತಿದ್ ವೈದನ್ ಮ್ಯಾಗೆ ಕೈಯ್ಯ ಮಡಗ್ದೆ ನಾ;
ಏಟೊ ವರ್ಸದ್ ನೆಂಟನ್ ಥರ ಮಾತೀಗ್ ಕುಂತೆ ನಾ;
ಬುಂಡೆ ಖಾಲಿ ಮಾಡಿ ತರಸ್ದೆ ಮತ್ತೊಂದ್ ಬುಂಡೆ ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಖಾರ್ವಾದ್ ಚಟ್ನಿ, ಉಪ್ಪಿನ ಕಾಯಿ ಮದ್ಯೆ ಮಡಗ್ಸ್ದೆ ನಾ;
ಕುಡಿತ ಕುಡಿತ ಖಾರನ್ ಕೂಡ ನೆಕ್ತ ಇದ್ದೆ ನಾ;
ಎರಡು ಸೇರಿ, ನೆತ್ತಿಗ್ ಏರಿ, ತಿರುಗ್ಸ್ತು ತಲೇ ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಅರ್ದ ತುಂಬಿದ್ ಐದ್ನೆ ಬುಂಡೆ ಕೈನಾಗ್ ಮಡ್ಕೊಂಡ್ ನಾ;
ಗೀರನ್ ತಿರ್ಗಿ ಎದ್ದು ನಿಂತೆ ಮನ್ಕಡ್ ಓಗೋಕ್ ನಾ,
ತೂಲಾಡ್ತಿತ್ತು ಬೀದಿ ಮಾತ್ರ, ನೇರ್ವಾಗ್ ನಡ್ ದೆ ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
~ರಮೇ
France.
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ...
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಸೇಂದಿ ಅಂಗ್ಡಿ ಮುಂಗಟಿನ್ ಸಾಲಾಗ್ ನಿಂತೆ ನಾ;
ಬಿರಟೆ ತಿರಗ್ಸಿ ಮುನಿಯ ತುಂಬ್ದ ಒಂದು ಬುಂಡೆ ನಾ;
ಎತ್ತಿ ಎತ್ತಿ ಕುಡ್ತಿದ್ದಂಗೆ ಒಂದೊಂದ್ ಗುಟ್ಕು ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಪಕ್ದಲ್ ನಿಂತಿದ್ ವೈದನ್ ಮ್ಯಾಗೆ ಕೈಯ್ಯ ಮಡಗ್ದೆ ನಾ;
ಏಟೊ ವರ್ಸದ್ ನೆಂಟನ್ ಥರ ಮಾತೀಗ್ ಕುಂತೆ ನಾ;
ಬುಂಡೆ ಖಾಲಿ ಮಾಡಿ ತರಸ್ದೆ ಮತ್ತೊಂದ್ ಬುಂಡೆ ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಖಾರ್ವಾದ್ ಚಟ್ನಿ, ಉಪ್ಪಿನ ಕಾಯಿ ಮದ್ಯೆ ಮಡಗ್ಸ್ದೆ ನಾ;
ಕುಡಿತ ಕುಡಿತ ಖಾರನ್ ಕೂಡ ನೆಕ್ತ ಇದ್ದೆ ನಾ;
ಎರಡು ಸೇರಿ, ನೆತ್ತಿಗ್ ಏರಿ, ತಿರುಗ್ಸ್ತು ತಲೇ ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಅರ್ದ ತುಂಬಿದ್ ಐದ್ನೆ ಬುಂಡೆ ಕೈನಾಗ್ ಮಡ್ಕೊಂಡ್ ನಾ;
ಗೀರನ್ ತಿರ್ಗಿ ಎದ್ದು ನಿಂತೆ ಮನ್ಕಡ್ ಓಗೋಕ್ ನಾ,
ತೂಲಾಡ್ತಿತ್ತು ಬೀದಿ ಮಾತ್ರ, ನೇರ್ವಾಗ್ ನಡ್ ದೆ ನಾ!
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
ಕುಡ್ಬುಟ್ ತೂಲಾಡ್ಲಿಲ್ಲ ಅಂದ್ರೆ ಅವನೊಬ್ ಕುಡ್ಕಾ ನಾ?
~ರಮೇ
France.
Thursday, December 6, 2007
ಸೀಳು ಲೋಟ~ವಸುಧೇಂದ್ರ (ಕತೆ)
ಕೋಳಿ ಕೂಗುವದಕ್ಕೂ ಪುರುಸೊತ್ತು ಕೊಡದಂತೆ ರಮಾಬಾಯಿ ಬೆಳಿಗ್ಗೆ ಬೆಳಿಗ್ಗೆ ಎದ್ದು ಬಿಡುತ್ತಾಳೆ. ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಒಂದೇ ಸವನೆ ವಟವಟ ಮಾಡುತ್ತಳೇ ಇರುತ್ತಾಳೆ. "ಏಳೋ ಏಬ್ರಾಸಿ, ಎದ್ದೋರ ಪೀಡೆ ಬಿದ್ದೋರ ಮೇಲಂತೆ" ಎಂದು ಮಗರಾಯ ಗುರುರಾಜನನ್ನು ಬೈಯ್ದು, ಅವನ ಹೊದಿಕೆಯನ್ನು ಎಳೆಯುತ್ತಾಳೆ. ಮುಖ ತೊಳೆದು ಬಂದಿದ್ದೇ "ಕಾಲಿಗೆ ನಮಸ್ಕಾರ ಮಾಡಬೇಕು, ಎದ್ದೇಳ್ರಿ" ಎಂದು ಗಂಡ ಹುಲಿಕುಂಟಿಯನ್ನು ಜಬರಿಸುತ್ತಾಳೆ. ಹುಲಿಕುಂಟಿ ಕಣ್ಣು ಹೊಸಕಿಕೊಳ್ಳುತ್ತಲೇ ಏಳುತ್ತಾನೆ. ಅವನ ಕಾಲಿಗೆ ನಮಸ್ಕರಿಸಿದ್ದಕ್ಕೆ, ಆಕಳಿಸುತ್ತಲೇ ಆಶೀರ್ವಾದ ಮಾಡಿದಂತೆ ಕೈ ಎತ್ತುತ್ತಾನೆ. ಹಾಗೆಯೇ ಮುಸುಕೆಳೆದು ಮಲಗುತ್ತಾನೆ.
ರಪರಪನೆ ಕಸ ಬಳಿದು, ಅಂಗಳಕ್ಕೆ ನೀರನ್ನು ಜಡಿದು, ಆಕಾಶಕ್ಕೆ ಒಂದು ತಂಬಿಗೆ ನೀರು ಉಗ್ಗಿ "ಏಬ್ರಾಸಿ ಮುಂಡೇದೆ, ಎದ್ದೇಳು" ಎಂದು ಸೂರ್ಯನಿಗೆ ಉಗಿಯುತ್ತಾಳೆ. ಅವಳ ಬಾಯಿ ಬಡುಕತನಕ್ಕೆ ಹೆದರಿದ ಸೂರ್ಯ ಚೂರು ಚೂರೇ ಧೈರ್ಯ ತೆಗೆದುಕೊಳ್ಳುತ್ತಾ ಮೇಲೇರುತ್ತಾನೆ. ಅಂಗಳಕ್ಕೆ ರಂಗೋಲಿ ಹಾಕುವಾಗ ಮುಲ್ಲಾ ಕೂಗಲು ಶುರುವಿಡುತ್ತಾನೆ. "ವಾರ ಆದ್ರೂ ಇನ್ನೂ ಯಾಕೋ ಮುಲ್ಲಾಗೆ ನೆಗಡಿ ಕಡಿಮಿ ಆಗಲಿಲ್ಲ" ಎಂದು ಕಳವಳ ಪಡುತ್ತಾ ರಂಗೋಲಿ ಮುಗಿಸುತ್ತಾಳೆ. ಒಳಗೆ ಬಂದ ರಮಾಬಾಯಿ ನಿನ್ನೆಯ ಪಾತ್ರೆಗಳನ್ನು ತೊಳೆಯುತ್ತಾ ಕೂಡುತ್ತಾಳೆ. ಆ ಪಾತ್ರೆಗಳ ಕಟಕಟ ಸದ್ದಿಗೆ ನಿದ್ರೆ ಮುಂದುವರೆಸಲು ಸಾಧ್ಯವಾಗದೆ ಹುಲಿಕುಂಟಿ ಹಗೂರಕ್ಕೆ ಎದ್ದು ಹೊರಗೆ ಕಟ್ಟೆಯ ಮೇಲೆ ಕುಕ್ಕುರುಗಾಲಿನಲ್ಲಿ ಕುಳಿತು ಗಣೇಶ ಬೀಡಿ ಸೇದಲಾರಂಭಿಸುತ್ತಾನೆ. ರಮಾಬಾಯಿ ಪಾತ್ರೆಗಳನ್ನು ಉದಯಿಸಿದ ಸೂರ್ಯ ನಾಚುವಂತೆ ಫಳಫಳನೆ ತಿಕ್ಕಿ, ಚಹಾಕ್ಕೆ ಇಡುತ್ತಾಳೆ. ತಾನೊಂದು ಕಪ್ಪು ಚಹ ಕುಡಿದು, ಹೊರಗೆ ಕುಳಿತ ಹುಲಿಕುಂಟಿಯ ಮುಂದೊಂದು ಕಪ್ಪು ಚಹವನ್ನು ಇಟ್ಟು "ಈ ಬೀಡಿ ಸೇದಿ ಸೇದೀನೇ ಒಂದು ದಿನ ನನ್ನ ಮುಂಡೆ ಮಾಡಿ ಬಿಡ್ತಿ ನೀನು" ಎಂದು ಅಪಶಕುನ ನುಡಿಯುತ್ತಾಳೆ. ಹುಲಿಕುಂಟಿ ಒಂದು ಗುಟುಕು ಚಹವನ್ನು ಹೀರಿ, ಮೀಸೆಗೆ ಒಂಚೂರು ಚಹ ಅಂಟಿಕೊಂಡಿದ್ದಂತೆಯೇ ತುಟಿಯಂಚಿನಲ್ಲಿ ನಗುತ್ತಾನೆ. ಇನ್ನೂ ಮಗ ಗುರುರಾಜ ಮಲಗಿದ್ದು ನೋಡಿದ್ದೇ ಸಿಟ್ಟು ನೆತ್ತಿಗೇರಿದಂತಾಗಿ ಅವನನ್ನು ಬಲವಂತದಿಂದ ಎಬ್ಬಿಸಿ ಕೂಡಿಸಿ, ಹಾಸಿಗೆ ಬಟ್ಟೆಗಳನ್ನು ಮಡಿಸಿಟ್ಟು ಬಿಡುತ್ತಾಳೆ. ಗುರುರಾಜ "ಚಹ..." ಎಂದು ರಾಗವೆಳೆಯುತ್ತಾನೆ. "ನಿಮ್ಮಪ್ಪನ ತರಹ ಹೊಲಸು ಬಾಯಿಂದ ಚಹ ಕುಡೀಯೋದೊಂದು ಬಾಕಿ ನೋಡಪ್ಪ... ಹೋಗಿ ಬಾಯಿ ಮುಕ್ಕಳಿಸಿ ಬಾ" ಎಂದು ಕೂಗಿದ್ದಕ್ಕೆ, ಗುರುರಾಜ ಎದುರು ಮಾತನಾಡದೆ ಬಚ್ಚಲಿಗೆ ಓಡುತ್ತಾನೆ. ನಿನ್ನೆ ಸಂಜೆಯೇ ರಾಯರ ಮಠದ ಪದ್ದಕ್ಕ ಕಳುಹಿಸಿಕೊಟ್ಟಿದ್ದ ನಿತ್ಯ ಮಲ್ಲಿಗೆ ಹೂಗಳನ್ನು ಒದ್ದೆ ಬಟ್ಟೆಯಿಂದ ತೆಗೆದು ಮಾಲೆ ಕಟ್ಟುತ್ತಾ ಕೂಡುತ್ತಾಳೆ. ಒಂದಿಷ್ಟು ಮಾಲೆ ಕಟ್ಟಿ ಕೈ ಸೋತಾಗ "ಈ ಸನ್ಯಾಸಿ ಗಂಡಸಿಗೆ ಅದೇನು ಹೂ ಮುಡುಕೊಳ್ಳೋ ಹುಚ್ಚೋ ನಂಗೊತ್ತಿಲ್ಲ ನೋಡಪ್ಪ" ಎಂದು ಸಾಕ್ಷಾತ್ ರಾಘವೇಂದ್ರ ಸ್ವಾಮಿಗಳಿಗೂ ಚುರುಕು ಮುಟ್ಟಿಸುತ್ತಾಳೆ. ಅಷ್ಟು ಹೊತ್ತಿಗೆ ಗುರುರಾಜ ಉಪ್ಪಿನಿಂದ ಹಲ್ಲುಜ್ಜಿ, ಬಚ್ಚಲಿಗೆ ಒಂದು ನಾಲ್ಕು ತಂಬಿಗೆ ನೀರು ಚೆಲ್ಲಿ ಹೊರಬಂದು ಅವರಮ್ಮನ ಮುಂದೆ "ಈ..." ಎಂದು ಹಲ್ಲುಗಳನ್ನು ತೋರಿಸುತ್ತಾನೆ. ಎಲ್ಲಾ ಮೂವತ್ತೆರಡು ಹಲ್ಲುಗಳು ತಮ್ಮ ಸ್ವಸ್ಥಾನದಲ್ಲಿದೆಯೋ ಇಲ್ಲವೋ ಎಂದು ರಮಾಬಾಯಿ ಪರೀಕ್ಷಿಸುತ್ತಾಳೆ.
ಕಾಳಮ್ಮ ಬೀದಿಯ, ಮೂವತ್ತು ರೂಪಾಯಿ ಬಾಡಿಗೆಯ, ಎರಡು ಕೋಣೆಗಳ, ಕಿಟಿಕಿ ಇಲ್ಲದ, ಹೊಗೆಚಟ್ಟ ಮತ್ತು ಗವಾಕ್ಷಿಗಳ ಆ ಮನೆಯಲ್ಲಿ ಈ ರೀತಿಯಲ್ಲಿ ಬೆಳಗು ಹೊಳೆಯಲಾರಂಭಿಸುತ್ತೆ.
* * * * * *
ಪ್ರತಿದಿನಕ್ಕಿಂತಲೂ ಈವತ್ತು ರಮಾಬಾಯಿ ಹೆಚ್ಚು ಆತಂಕದಲ್ಲಿರುವದಕ್ಕೆ ಕಾರಣ, ನಿನ್ನೆ ಅವರ ಮನೆಗೆ ಬಂದ ಹದಿನೈದು ಪೈಸೆಯ ಅಂಚೆಯ ಕಾರ್ಡ್ ಆಗಿತ್ತು. ರಮಾಬಾಯಿಯ ಅಣ್ಣ ವರದಣ್ಣನ ಪತ್ರವದು. ದೂರದ ವಿಶಾಖ ಪಟ್ಟಣದಿಂದ ಬಂದಿತ್ತು. ನಾಲ್ಕೂ ತುದಿಗೆ ಕುಂಕುಮವನ್ನು ಹಚ್ಚಿಕೊಂಡು, ಪತ್ರದ ಮಧ್ಯೆ ಎರಡು ಸಾಲುಗಳ ನಡುವೆ ಐದನೆಯ ಕುಂಕುಮ ಬಟ್ಟು ಹಚ್ಚಿಕೊಂಡ ಅದರ ಸಾರಾಂಶ ವರದಣ್ಣನ ಮಗಳ ಮದುವೆಯ ಶುಭ ಸಮಾಚಾರವಾಗಿತ್ತು. ಆಂಧ್ರ ಮನೆತನಕ್ಕೇ ಮಗಳನ್ನು ಕೊಟ್ಟಿದ್ದ. ಮದುವೆ ಇನ್ನೊಂದು ವಾರದಲ್ಲಿ, ತಿರುಪತಿಯಲ್ಲಿತ್ತು.
ರಮಾಬಾಯಿ ವರದಣ್ಣನ ಆರೈಕೆಯಲ್ಲಿಯೇ ಬೆಳೆದವಳು. ಅವಳು ತುಂಬಾ ಚಿಕ್ಕವಳಿದ್ದಾಗಲೇ ಅಮ್ಮ ತೀರಿಕೊಂಡಿದ್ದಳಂತೆ. ಅಪ್ಪನ ನೆನಪು ಇಬ್ಬರಿಗೂ ಇರಲಿಲ್ಲ. ಹಿಂದಿನಿಂದಲೂ ಬಂದ ಒಂದೆರಡು ಎಕರೆ ಗದ್ದೆಗಳಿದ್ದವು. ಕಂಪ್ಲಿಯ ಹತ್ತಿರದಲ್ಲಿ ತುಂಗಭದ್ರಾ ನದಿಯ ದಡದ ಮೇಲಿದ್ದ ಆ ಗದ್ದೆಗಳು ಇವರ ಊಟ-ಬಟ್ಟೆಗೆ ಕೊರತೆಯಾಗದಂತೆ ನೋಡಿಕೊಂಡಿದ್ದವು. ವರದಣ್ಣ ವಯಸ್ಸಿನಲ್ಲಿ ಹತ್ತು ವರ್ಷಕ್ಕೆ ದೊಡ್ಡವನು. ತಂಗಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದ. ಈಗಲೂ ರಮಾಬಾಯಿ ದುಃಖವಾದಾಗ "ವರದಣ್ಣಾ..." ಎಂದು ಅಳುತ್ತಾಳೆಯೆ ಹೊರತು, "ಅಮ್ಮಾ..." ಎಂದು ಅಳುವದಿಲ್ಲ.
ವರದಣ್ಣ ಮದುವೆಯಾಗಿದ್ದು ಆಂಧ್ರದ ಹುಡುಗಿಯನ್ನು. ಬಳ್ಳಾರಿಗೆ ಯಾವುದೋ ಕೆಲಸದ ಮೇಲೆ ಬಂದಿದ್ದ ಸುಬ್ರಹ್ಮಣ್ಯಗಾರು ಹುಡುಗನಿಗೆ ಸರಕಾರಿ ಉದ್ಯೋಗವೊಂದನ್ನು ಕೊಡಿಸಿದ್ದಲ್ಲದೆ, ಮಗಳನ್ನು ಮದುವೆ ಮಾಡಿಕೊಳ್ಳುವ ಒಪ್ಪಂದವನ್ನೂ ಮಾಡಿಸಿಕೊಂಡಿದ್ದರು. ವರದಣ್ಣ ಮದುವೆಯಾದ ಮೇಲೆ ಒಂದೆರಡು ವರ್ಷ ಮಾತ್ರ ಬಳ್ಳಾರಿಯಲ್ಲಿದ್ದ. ಆಮೇಲೆ ವೈನಿ ಹಠ ಹಿಡಿದು ಅವನನ್ನು ಆಂಧ್ರದ ಊರುಗಳಿಗೆ ವರ್ಗಾವಣೆ ಮಾಡಿಸಿದಳು. ಹುಲಿಕುಂಟಿಯ ಜೊತೆ ಮದುವೆಯಾಗುವ ತನಕ ರಮಾಬಾಯಿಯೂ ಅವನು ಹೋದಲ್ಲೆಲ್ಲಾ ಜೊತೆಯಲ್ಲಿಯೇ ಇದ್ದಳು. ಕರ್ನೂಲು, ಅನಂತಪುರ, ಆದೋನಿ ಅಂತೆಲ್ಲಾ ವರದಣ್ಣ ಊರುಗಳನ್ನು ಬದಲಾಯಿಸುತ್ತಿದ್ದ.
ರಮಾಬಾಯಿಗೆ ಮದುವೆ ಅಷ್ಟೊಂದು ಸುಸೂತ್ರ ಆಗಲಿಲ್ಲ. ಬಣ್ಣದಲ್ಲಿ ಸ್ವಲ್ಪ ಕಪ್ಪು. ಜೊತೆಗೆ ಹಲ್ಲು ಉಬ್ಬು. ಮಡಿಕೋಲಿನಂತೆ ತೆಳ್ಳಗೆ ಎತ್ತರಕ್ಕಿರುವ ರಮಾಬಾಯಿಯನ್ನೂ ಯಾರೂ ಒಪ್ಪುತ್ತಿರಲಿಲ್ಲ. ವರದಣ್ಣ ಬಳ್ಳಾರಿಯ ಕಡೆಗೆ ಹೋಗಿ ಹೋಗಿ ಅವರಿವರ ಬಳಿ ತಂಗಿಯ ಮದುವೆಯ ಪ್ರಸ್ತಾಪ ಮಾಡುತ್ತಿದ್ದ. ವೈನಿ ಮಾತ್ರ "ನಮ್ಮ ಕಡೆಯವರು ಈಕಿನ್ನ ಒಪ್ಪಂಗಿಲ್ಲ..." ಅಂತ ಏನೋ ಆಂಧ್ರದ ಧಿಮಾಕನ್ನು ತೋರಿಸಿ ಯಾವುದೇ ಸಂಬಂಧವನ್ನು ಸೂಚಿಸುವದಕ್ಕೆ ಹೋಗಿರಲಿಲ್ಲ. ಬಂದ ಗಂಡುಗಳೆಲ್ಲಾ ನಿರಾಕರಿಸುವದಕ್ಕೆ ಶುರು ಮಾಡಿದ ಮೇಲೆ ವರದಣ್ಣಗೂ ತನ್ನ ತಂಗಿ ಕುರೂಪಿ ಅನ್ನಿಸಲು ಶುರುವಾಗಿ ತುಂಬಾ ಅಧೀರನಾಗುತ್ತಿದ್ದ.
ಇಂತಹ ದಿನಗಳಲ್ಲಿಯೇ ಒಮ್ಮೆ ವರದಣ್ಣ ತಮ್ಮ ಮನೆ ದೇವರಾದ ಗಂಡಿ ನರಸಿಂಹಸ್ವಾಮಿಯ ಜಾತ್ರೆಗೆ ಹೋದಾಗ ಯಾರೋ ಹುಲಿಕುಂಟಿಯ ಪ್ರಸ್ತಾಪವನ್ನು ಮಾಡಿದ್ದರು. ಒಂದು ಕಾಲಕ್ಕೆ ಹುಲಿಕುಂಟಿಯ ಮನೆತನ ಇಡೀ ಪ್ರಾಂತ್ಯಕ್ಕೇ ಶ್ರೀಮಂತ ಕುಟುಂಬವಾಗಿತ್ತಂತೆ. ಆದರೆ ಹೆಂಡತಿಯನ್ನು ಕಳೆದುಕೊಂಡಿದ್ದ ಹುಲಿಕುಂಟಿಯ ಅಪ್ಪಗೆ ಕೂಡ್ಲಿಗಿ ಸೂಳೆಯರ ಚಟ ಹತ್ತಿಕೊಂಡಿದ್ದೇ ಎಲ್ಲಾ ಆಸ್ತಿಯೂ ಕರ್ಪೂರದಂತೆ ಕರಗಿ ಹೋಗಿತ್ತು. ಕೊನೆಗೆ ಹೇಳಿಕೊಳ್ಳಲೂ ಸಂಕೋಚವಾಗುವಂತಹ ಗುಹ್ಯರೋಗಕ್ಕೆ ಬಲಿಯಾಗಿ ಅವರಪ್ಪ ಸತ್ತಿದ್ದ. ಇದ್ದ ಅಲ್ಪಸ್ವಲ್ಪ ಆಸ್ತಿಯೂ ಸಾಲಗಾರರು ಹಂಚಿಕೊಂಡಿದ್ದರು. ಹುಲಿಕುಂಟಿ ಬೀದಿಯಲ್ಲಿ ನಿಂತಿದ್ದ. ಅಂತಹ ಹೊತ್ತಿನಲ್ಲಿಯೇ ಯಾರೋ ಪುಣ್ಯಾತ್ಮರು ಅವನನ್ನು ಕೊಮ್ಮಣ್ಣನ "ಶ್ರೀ ವೆಂಕಟೇಶ ಮುದ್ರಣಾಲಯ"ಕ್ಕೆ ಸೇರಿಸಿದ್ದ. ಓದಿಗೆ ಮಂಗಳ ಹಾಡಿದ ಹುಲಿಕುಂಟಿ ಪೂರ್ತಿಯಾಗಿ ಕೊಮ್ಮಣ್ಣನ ಅಂಗಡಿಯವನಾಗಿ ಬಿಟ್ಟ.
ಹುಲಿಕುಂಟಿಯೂ ತೆಳ್ಳಗೆ, ಕಪ್ಪಗೆ ಇದ್ದನಾದರೂ ರಮಾಬಾಯಿಗಿಂತಲೂ ಕುಳ್ಳ. ತನ್ನ ಪರಿಸ್ಥಿತಿಯ ಸ್ಪಷ್ಟ ಅರಿವಿದ್ದ ಹುಲಿಕುಂಟಿ ತಕ್ಷಣ ರಮಾಬಾಯಿಯನ್ನು ಒಪ್ಪಿಕೊಂಡು ಬಿಟ್ಟಿದ್ದ. ವೈನಿ ಕೂಡಾ ಮೈಮೇಲೆ ಬಂದವರಂತೆ ಮದುವೆಗೆ ಅವಸರ ಮಾಡಲಾರಂಭಿಸಿದ್ದಳು. "ಒಪ್ಪಿಗೊಂಡ್ಯಾ... ಒಪ್ಪಿಗೊಂಡ್ಯಾ..." ಎಂದು ನಾಲ್ಕಾರು ಬಾರಿ ವೈನಿ ಕೇಳಲಾರಂಭಿಸಿದ್ದಕ್ಕೆ ರಮಾಬಾಯಿ ಮೌನವಾಗಿ ಗೋಣು ಹಾಕಿ ಬಿಟ್ಟಿದ್ದಳು. ವರದಣ್ಣಗೆ ಈ ಸಂಬಂಧ ಒಪ್ಪಿಗೆಯಾಗಿರಲಿಲ್ಲ. ಆದರೆ ನಿರಾಕರಿಸಿದರೆ ಮತ್ತಿನ್ನೇನು ಕಾದಿದೆಯೋ ಎಂಬ ಭಯ. ಒಂದು ದಿನ ಬೆಳಿಗ್ಗೆ ರಮಾಬಾಯಿ ಬಾವಿಯಿಂದ ನೀರು ಸೇದಿ ನಿತ್ಯ ಮಲ್ಲಿಗೆಯ ಗಿಡಕ್ಕೆ ಹಾಕುತ್ತಿರುವಾಗ ಅವಳ ಬಳಿ ಹೋದ. "ನಿನಗಿಂತಾ ಸ್ವಲ್ಪ ಗಿಡ್ಡಕ್ಕಿದ್ದಾನಲ್ಲಮ್ಮಾ..." ಎಂದು ರಾಗವೆಳೆದ. ಕೊಡದ ನೀರನ್ನು ಪೂರ್ತಿಯಾಗಿ ಬಳ್ಳಿಗೆ ಸುರಿದ ರಮಾಬಾಯಿ "ಗಂಡಂತೂ ಹೌದಲ್ಲಣ್ಣ... ಅಷ್ಟು ಸಾಕು... ವಾಮನ ರೂಪದಾಗೆ ಬಂದಿರೋ ದೇವರು ಅಂದು ಕೊಳ್ತೀನಿ" ಎಂದು ನಿರ್ಭಾವುಕವಾಗಿ ಹೇಳಿಬಿಟ್ಟಳು. ವರದಣ್ಣ ಪೆಚ್ಚಾಗಿ ನಿಂತ. "ನನ್ನ ಹಂಗೆ ಹಲ್ಲು ಉಬ್ಬು ಇಲ್ಲ ಬಿಡು ವರದಣ್ಣ" ಎಂದು ನಕ್ಕಳು. ವರದಣ್ಣನೂ ನಕ್ಕ.
ಗಂಡಿ ನರಸಿಂಹಸ್ವಾಮಿಯ ಸಾಕ್ಷಿಯಲ್ಲಿಯೇ ಮದುವೆ ಜರುಗಿತು. ರಮಾಬಾಯಿಯ ಕನ್ಯಾದಾನವನ್ನು ಮಾಡಲು ವರದಣ್ಣ ಮತ್ತು ವೈನಿ ಮಣೆಯ ಮೇಲೆ ಕುಳಿತರು. ಆದರೆ ಹುಲಿಕುಂಟಿಯ ಪರವಾಗಿ ಮಣೆಯ ಮೇಲೆ ಕೂಡಲು ಯಾರೂ ಇರಲಿಲ್ಲ. ಕೊಮ್ಮಣ್ಣ ಮದುವೆಗಾಗಿ ಎರಡು ಜೊತೆ ಪಂಚೆ, ಒಂದು ಅಂಗಿ, ಹುಡುಗಿಗೊಂದು ಸೀರೆ ಕೊಟ್ಟನಾದರೂ ಬೇರೆ ಜಾತಿಯವನಾದ್ದರಿಂದ ಮಣೆಯ ಮೇಲೆ ಕೂಡಲು ಸಾಧ್ಯವಿರಲಿಲ್ಲ. ಮಣೆಯ ಮೇಲೆ ಕೂತು ಮದುವೆ ಮಾಡಿ ಕೊಡುವವರಿಲ್ಲದೆ ಹೇಗೆ? ಎಂದು ಪುರೋಹಿತರು ಹಠ ಹಿಡಿದರು. ಹುಲಿಕುಂಟಿ ಮದುವೆಗಾಗಿ ಬಂದ ದಂಪತಿಗಳನ್ನೇ "ನೀವು ಮಣೆ ಮೇಲೆ ಕೂಡ್ತೀರ, ನೀವು ಮಣೆ ಮೇಲೆ ಕೂಡ್ತೀರ..." ಎಂದು ಬೇಡಿಕೊಂಡ. ಮದುವೆಗೆ ಅಕ್ಷತೆ ಹಾಕಿ ಊಟ ಮಾಡಿ ಹೋಗಲೆಂದು ಬಂದ ದಂಪತಿಗಳು ಈ ಬೇಡಿಕೆಗೆ ಕಂಗಾಲಾಗಿ ನಿರಾಕರಿಸಿಬಿಟ್ಟರು. ಕೊನೆಗೆ ರಾಯರ ಮಠದ ಅರ್ಚಕರಾದ ಎಡವಟ್ಟು ವೆಂಕಣ್ಣಾಚಾರಿ ಮತ್ತು ಪದ್ದಕ್ಕ ಮಣೆಯ ಮೇಲೆ ಕುಳಿತು ಕೊಂಡರು. "ಊರಿನ ಪುರೋಹಿತರು ನಾವು. ಎಲ್ಲಾರೂ ನಮ್ಮ ಮಕ್ಕಳಿದ್ದ ಹಾಗೆ" ಎಂದು ಪದ್ದಕ್ಕ ಹೇಳಿ ಬಿಟ್ಟಳು. ಇಬ್ಬರ ಪರವಾಗಿ ಕಳಸಗಿತ್ತಿಯಾಗಿ ವರದಣ್ಣನ ಮಗಳು ರೋಹಿಣಿಯೇ ಕುಳಿತುಕೊಂಡಳು.
ರಮಾಬಾಯಿ ಮತ್ತು ಹುಲಿಕುಂಟಿ ರಾಗಿ ದೋಸೆಯ ಜೊತೆ ಜೇನು ತುಪ್ಪ ಸೇರಿದಂತೆ ಹೊಂದಿಕೊಂಡರು. ತನ್ನವರ್‍ಯಾರೂ ಇಲ್ಲದೆ ತಬ್ಬಲಿಯಂತೆ ಬಾಳುತ್ತಿದ್ದ ಹುಲಿಕುಂಟಿಗೆ ಹೀಗೆ ಪ್ರೀತಿಸುವ ಒಂದು ಜೀವ ಸಿಕ್ಕಿದ್ದೇ ಕರಗಿ ಹೋದ. ತನ್ನನ್ನು ಪೂರ್ತಿಯಾಗಿ ರಮಾಬಾಯಿಗೆ ಒಪ್ಪಿಸಿಕೊಂಡು ಬಿಟ್ಟ. ರಮಾಬಾಯಿ ಕೂಡಾ ರೆಕ್ಕೆ ಬಿಚ್ಚಿದ ಹಕ್ಕಿಯಂತಾದಳು. ಅತ್ತಿಗೆಯ ನೆರಳಲ್ಲಿ ಮೈಯನ್ನು ಹಿಡಿಯಾಗಿ ಮಾಡಿಕೊಂಡು ಬದುಕಿದ್ದ ರಮಾಬಾಯಿಗೆ ಇಲ್ಲಿ ಸಿಕ್ಕ ಹೇರಳವಾದ ಸ್ವಾತಂತ್ರ್ಯ ಅವಳ ಅಸಲಿ ಗುಣವಾದ ಗಯ್ಯಾಳಿತನವನ್ನು ಹೊರಹಾಕಿತು. ಮೂರು ದಿನಕ್ಕೆ ಮನೆಗೆ ಹಾಲು ಹಾಕುತ್ತಿದ್ದ ಗೌರಕ್ಕಗೆ "ನೀನು ಹಿಂಗೆ ಹಾಲಿಗೆ ನೀರು ಹಾಕಿದ್ರೆ, ನಾನು ಕೊಡೋ ರೊಕ್ಕಕ್ಕೆ ನೀರು ಹಾಕ್ತೀನಿ..." ಎಂದು ದಬಾಯಿಸಿದಳು. ಗೌರಕ್ಕ ಆಕೆಯ ಬಾಯಿಗೆ ಹೆದರಿ ಮರುದಿನದಿಂದ ಗಟ್ಟಿ ಹಾಲು ಹಾಕಲಾರಂಭಿಸಿದಳು. ರಮಾಬಾಯಿ ಇಡೀ ಮನೆಯ ಜವಾಬ್ದಾರಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಳು. ಮನೆಯ ಮುಂದೆ ದೊಡ್ಡ ದೊಡ್ಡ ರಂಗೋಲಿಗಳು ಕಂಗೊಳಿಸಲಾರಂಭಿಸಿದವು. ಯಾವಾಗಲೂ ಬರಿಯ ಬಿಳಿಯ ಪೈಜಾಮ-ಜುಬ್ಬ ಧರಿಸುತ್ತಿದ್ದ ಹುಲಿಕುಂಟಿಗೆ ಒಂದು ಬಣ್ಣದ ಅಂಗಿಯನ್ನು ಹೊಲಿಸಿದಳು. "ನಾಚಿಕಿ ಆಗ್ತದೇ..." ಎಂದು ಹುಲಿಕುಂಟಿ ಗೋಗರೆದರೂ ಬಿಡದೆ ಅವನು ಆ ಅಂಗಿ ಹಾಕಿಕೊಂಡು ಕೆಲಸಕ್ಕೆ ಕಳುಹಿಸುವದರಲ್ಲಿ ಯಶಸ್ವಿಯಾದಳು.
ಮದುವೆಯಾಗಿದ್ದೇ ವರದಣ್ಣನ ಸಂಪರ್ಕವೂ ಕಡಿಮೆಯಾಯ್ತು. ದೂರದ ಊರುಗಳಾದ ಬೆಜವಾಡ, ಗುಂಟೂರು, ರಾಜಮಂಡ್ರಿಯ ಕಡೆಗೆ ಅವನು ವರ್ಗಾವಣೆಯಾಗಿ ಹೋಗಿಬಿಟ್ಟ. ರಾಜಮಂಡ್ರಿಯಲ್ಲಿದ್ದಾಗ ಅವರ ಮಾವ ಅವನಿಗೊಂದು ಬಸ್ಸನ್ನು ಕೊಳ್ಳಲು ಸಹಾಯ ಮಾಡಿದರು. ರಾಜಮಂಡ್ರಿಯಿಂದ ವಿಶಾಖಪಟ್ಟಣಕ್ಕೆ ದಿನಕ್ಕೆರಡು ಬಾರಿ ಬಸ್ಸು ಓಡಾಡಲಾರಂಭಿಸಿತು. ಲಕ್ಷ್ಮೀದೇವಿ ಕಣ್ಣು ತೆರೆದಳು. ವರ್ಷ ಮುಗಿಯುವದರಲ್ಲಿ ಇನ್ನೊಂದು ಬಸ್ಸು ಕೊಂಡು, ತನ್ನ ಸರಕಾರಿ ಕೆಲಸಕ್ಕೆ ರಾಜಿನಾಮೆ ಕೊಟ್ಟ. ಈಗ ಹತ್ತು ಬಸ್ಸುಗಳಿಟ್ಟುಕೊಂಡಿದ್ದಾನೆ. ಮಾವನೂ ಸತ್ತು ಅವನ ಆಸ್ತಿಯೂ ಸೇರಿಕೊಂಡಿದೆ. ಬಂಧು-ಬಳಗದಲ್ಲಿ ವರದರಾವ್‌ಗಾರು ಆಗಿದ್ದಾನೆ. ಕುಂಡಿ ತುರಿಸಿಕೊಳ್ಳಲೂ ಪುರುಸೊತ್ತಿಲ್ಲದಂತೆ ಬಿಜಿಯಾಗಿರುತ್ತಾನಾದ್ದರಿಂದ ಬಳ್ಳಾರಿಗೆ ಹೋಗಲಾಗುತ್ತಿರಲಿಲ್ಲ. "ನಿನಗೆ ಯಾವಾಗ ನೋಡಬೇಕು ಅಂತ ಅನ್ನಿಸುತ್ತೋ, ತಕ್ಷಣ ಹೊರಟು ಬಂದು ಬಿಡು" ಎಂದು ರಮಾಬಾಯಿಗೆ ಪತ್ರ ಬರೆದು ಕೈ ತೊಳೆದುಕೊಂಡ. ರಮಾಬಾಯಿಗೆ ಯಾಕೋ ಹೋಗಬೇಕು ಎಂದು ಬಲವಾಗಿ ಅನ್ನಿಸಲೇ ಇಲ್ಲ. ಮಗ ಗುರುರಾಜನ ಹಡವಣಿಗೆಗೂ ಹೋಗಲಿಲ್ಲ. ಅವರಿವರ ಸಹಾಯವನ್ನು ಒಂದು ಹತ್ತು ದಿನ ತೆಗೆದುಕೊಂಡಂತೆ ಮಾಡಿ ಮತ್ತೆ ದಿನದ ಗಾಣದ ಕೆಲಸಕ್ಕೆ ಎದ್ದು ನಿಂತಿದ್ದಳು.
ರೋಹಿಣಿ ಮೈನೆರೆತಾಗ ಬರಲೇಬೇಕೆಂದು ವರದಣ್ಣ ಪತ್ರ ಬರೆದಿದ್ದ. ಮೂವರೂ ಹೋಗಿದ್ದರು. ವರದಣ್ಣ ಶ್ರೀಮಂತನಾಗಿದ್ದಾನೆಂದು ರಮಾಬಾಯಿಗೆ ಗೊತ್ತಿತ್ತಾದರೂ ಆ ಮಟ್ಟದಲ್ಲಿ ಅವನು ಬೆಳೆದಿದ್ದಾನೆಂದು ಅವಳು ಊಹಿಸಿರಲಿಲ್ಲ. ಸುಮ್ಮನೆ ಅಪರಿಚಿತರಂತೆ ಮನೆಯಲ್ಲಿ ಉಂಡು-ತಿಂದು-ಮಲಗಿ ಎರಡು ದಿನ ಕಳೆಯಬೇಕಾಯ್ತು. ಪ್ರತಿ ಕೆಲಸಕ್ಕೂ ಆಳು ಕಾಳುಗಳಿದ್ದರು. ಹುಲಿಕುಂಟಿಗಂತೂ ತೆಲುಗು ಭಾಷೆಯೂ ಬಾರದು. ಸುಮ್ಮನೆ ಅವರಿವರ ಮುಖ ನೋಡುತ್ತಾ ಕುಳಿತುಕೊಂಡು ಬಿಟ್ಟಿದ್ದ. ಹಿತ್ತಲಿಗೆ ಹೋಗಿ ಕುಕ್ಕರುಗಾಲಿನಲ್ಲಿ ಕುಳಿತು ಬೀಡಿ ಸೇದುತ್ತಾ ಇರುವಾಗ, ಯಾರೋ ವರದಣ್ಣನ ಬಳಗದವರು ಬಂದು ಸಿಗರೇಟೊಂದನ್ನು ಕೊಟ್ಟು ಹೋಗಿದ್ದರು.
ವರದಣ್ಣ ಇನ್ನೊಂದೆರಡು ದಿನ ಇದ್ದು ಹೋಗು ಅಂತ ತಂಗಿಗೆ ಬಲವಂತ ಮಾಡಿದನಾದರೂ, ಮರುದಿನ ಬೆಳಿಗ್ಗೆ ನಡೆದ ಒಂದು ಘಟನೆಯಿಂದಾಗಿ ರಮಾಬಾಯಿ ಸಂಸಾರ ಅವತ್ತೇ ಹೊರಟು ನಿಂತು ಬಿಟ್ಟಿತು. ಅಣ್ಣ-ವೈನಿಗೆ ಕೊಡಲೆಂದು ಧೋತ್ರ-ಸೀರೆಯನ್ನು ಊರಿಂದಲೇ ರಮಾಬಾಯಿ ಒಯ್ದಿದ್ದಳು. ಅದನ್ನು ನಿರಿಗೆ ಮುರಿದ ವೈನಿ ಒಗೆಯಲು ಹಾಕಿದ್ದಳು. ಕೆಲಸದವಳು ಉಳಿದ ಎಲ್ಲಾ ಬಟ್ಟೆಗಳ ಜೊತೆಗೆ ಅದನ್ನೂ ನೆನೆಸಿಟ್ಟು ಬಿಟ್ಟಿದ್ದಳು. ಕೆಂಪು ಸೀರೆ ಪೂರ್ತಿ ಬಣ್ಣ ಬಿಟ್ಟಿತ್ತು. ಸಮಾರಂಭಕ್ಕೆ ಬಂದ ಎಲ್ಲರ ಬಟ್ಟೆಗಳೂ ಕೆಂಪು ಬಣ್ಣವನ್ನು ಮೆತ್ತಿಕೊಂಡು ಬಿಟ್ಟವು. ಎಲ್ಲರೂ ಗುಸುಗುಸು ಮಾತನಾಡುವುದು ನೋಡಿ ರಮಾಬಾಯಿಗೆ ಜೀವ ಬಾಯಿಗೆ ಬಂದಂತಾಗಿ ಹಿತ್ತಲಿಗೆ ಬಂದಿದ್ದಳು. ಅಲ್ಲಿ ಹಗ್ಗಕ್ಕೆ ಒಣಗಿ ಹಾಕಿದ್ದ ಎಲ್ಲಾ ಬಟ್ಟೆಗಳು ಅವಳ ಅಗ್ಗದ ಕೆಂಪು ಸೀರೆಯ ಬಣ್ಣ ಬಳಿದುಕೊಂಡು ಹಾರಾಡುತ್ತಿದ್ದವು. ಅವುಗಳ ಮಧ್ಯೆ ನಿಂತಾಗ ತುಂಬಾ ಅಪಮಾನವಾದಂತಾಗಿ ಕುಸಿದು ಕುಳಿತಳು. ಅವತ್ತೇ ಬಳ್ಳಾರಿಗೆ ಗಂಟು ಮೂಟೆ ಕಟ್ಟಿ ಬಿಟ್ಟಳು. ವರದಣ್ಣನೂ ತಡೆಯಲಿಲ್ಲ.
ಈಗ ರೋಹಿಣಿಯ ಮದುವೆ. ಬೇರೆ ಯಾವುದೋ ಊರಲ್ಲಿ ಮದುವೆ ಎಂದಾಗಿದ್ದರೆ ರಮಾಬಾಯಿ ಹೋಗುವ ಮನಸ್ಸು ಮಾಡುತ್ತಿರಲಿಲ್ಲವೇನೋ. ಆದರೆ ಸಾಕ್ಷಾತ್ ವೆಂಕಟೇಶ್ವರನ ದರ್ಶನ ಮಾಡುವ ಸದವಕಾಶ. ತಾವಾಗಿಯೇ ತಿರುಪತಿಗೆ ಹೋಗುವುದು ಕನಸಿನ ಮಾತು. ಈಗ ಅನಾಯಾಸವಾಗಿ ಅಂತಹ ಪರಿಸ್ಥಿತಿ ಬಂದಿದೆ. ಹೇಗಾದರೂ ಸರಿ. ಹೋಗಲೇ ಬೇಕು.
ಬೆಳಿಗ್ಗೆ ಒಂಬತ್ತಕ್ಕೆ ತಿಂಡಿ ತಿಂದು ಕೆಲಸಕ್ಕೆ ಹೊರಟನೆಂದರೆ, ಹುಲಿಕುಂಟಿ ರಾತ್ರಿ ಒಂಬತ್ತರ ತನಕ ದುಡಿಯಬೇಕು. ಮಧ್ಯಾಹ್ನ ಧಾರವಾಡ ನಿಲಯದಿಂದ ಚಿತ್ರಗೀತೆಗಳು ಶುರುವಾಗುವ ಹೊತ್ತಿಗೆ ಒಮ್ಮೆ ಮನೆಗೆ ಊಟಕ್ಕೆ ಬಂದು, ಊಟ ಮಾಡಿ ಹಾಗೆ ಸಣ್ಣಗೆ ನಿದ್ದೆ ಮಾಡಿ, ಶ್ರೀಲಂಕಾ ನಿಲಯದಿಂದ ಮೀನಾಕ್ಷಿ ಪೊನ್ನದೊರೆ ತೆಲುಗು ಹಾಡುಗಳನ್ನು ಶುರು ಮಾಡುವ ಹೊತ್ತಿಗೆ ಮತ್ತೆ ವಾಪಾಸು ಹೊರಡುತ್ತಿದ್ದ. ದಿನವೆಲ್ಲಾ ನಿಂತು ಮೊಳೆ ಜೋಡಿಸುವುದೋ, ಮಷಿನ್ನನ್ನು ಕಾಲಲ್ಲಿ ಒತ್ತುವುದೋ ಮಾಡುತ್ತಾನಾದ್ದರಿಂದ ಯಾವಾಗಲೂ ಅವನಿಗೆ ಮೊಣಕಾಲು ನೋವು. ಮನೆಗೆ ಬಂದರೆ ಸಾಕು, ಕಟ್ಟೆಯ ಮೇಲೆ ಕುಳಿತು ಬೀಡಿ ಸೇದುತ್ತಾನೆ. ಯಾವುದೇ ಪುಟ್ಟ ಕೆಲಸವನ್ನೂ ಮಾಡುವದಿಲ್ಲ. ರಮಾಬಾಯಿ ವಟವಟ ಅನ್ನುತ್ತಿದ್ದರೆ ಅದಕ್ಕೆ ಎದುರು ಹೇಳದೆ ತೆಪ್ಪಗೆ ಕೇಳಿಸಿಕೊಳ್ಳುತ್ತಿರುತ್ತಾನೆ. ಯಾವಾಗಲೋ ಅಪರೂಪಕ್ಕೆ ಅವಳ ವಟಗುಟ್ಟುವಿಕೆ ನಿಂತಾಗ, ಎಲ್ಲಿ ಹೋದಳೋ ಎಂದು ಕಳವಳದಿಂದ ಮನೆಯೊಳಗೆ ಇಣುಕಿ ಹಾಕಿ ನೋಡುತ್ತಾನೆ.
ಈ ದಿನ ರಮಾಬಾಯಿ ಅವನಿಗೆ ದೊಡ್ಡ ಜವಾಬ್ದಾರಿಯನ್ನೇ ಹೊರಸಿದ್ದಳು. ಮದುವೆಗೆ ಹೋಗಲು ಮೂರು ದಿನ ರಜೆ, ಜೊತೆಗೆ ಖರ್ಚಿಗೆ ಒಂದಿಷ್ಟು ಹಣವನ್ನು ಅವನು ಕೊಮ್ಮಣ್ಣನ ಬಳಿ ಕೇಳಬೇಕಿತ್ತು. ಯುಗಾದಿ ಹಬ್ಬದ ದಿನವೂ ಬಿಡದೆ ಕೆಲಸ ಮಾಡಿಸುವ ಕೊಮ್ಮಣ್ಣ ಹೀಗೆ ಮೂರು ದಿನ ರಜೆ ಕೊಡುವುದು ಕಷ್ಟ. ತಿಂಗಳ ಸಂಬಳ ಕೊಡುವದಕ್ಕೂ ಎರಡು ಮೂರು ದಿನ ಕಾಯಿಸುವ ಕೊಮ್ಮಣ್ಣನ ಬಳಿ ಮುಂಗಡ ಕೇಳುವದಾದರೂ ಹೇಗೆ?
ಬಸ್ ಸ್ಟಾಂಡಲ್ಲಿ ಒಂದಿಷ್ಟು ಹೂವು, ತೆಂಗಿನ ಕಾಯಿ, ಎರಡು ನಿಂಬೆ ಹಣ್ಣು, ಊದಿನ ಕಡ್ಡಿಯನ್ನು ತೆಗೆದುಕೊಂಡೇ ಹುಲಿಕುಂಟಿ ಕೆಲಸಕ್ಕೆ ಹೋಗುತ್ತಾನೆ. ಮಷಿನ್ನನ್ನು ಚಾಲೂ ಮಾಡುವದಕ್ಕೆ ಮುಂಚೆ ಕೊಮ್ಮಣ್ಣ ಅದಕ್ಕೆ ದಿನವೂ ಪೂಜೆ ಮಾಡುತ್ತಾನೆ. ನಿನ್ನೆಯ ಬಾಡಿದ ಹೂ, ಒಣಗಿದ ನಿಂಬೆಯ ಹೋಳುಗಳನ್ನು ಹುಲಿಕುಂಟಿ ಮೊದಲೇ ತೆಗೆದು ಸ್ವಚ್ಛ ಮಾಡಿಟ್ಟುರುತ್ತಾನೆ. ಸ್ನಾನ ಮಾಡಿ ಬಂದ ಕೊಮ್ಮಣ್ಣ ಹೂ ಏರಿಸಿ, ನಿಂಬೆಹಣ್ಣನ್ನು ಎರಡು ಹೋಳು ಮಾಡಿ ಆ ಕಡೆಗೊಂದು ಈ ಕಡೆಗೊಂದು ಇಟ್ಟು, ಊದಿನ ಕಡ್ಡಿ ಬೆಳಗಿ, ಕಾಯಿ ಒಡೆದು, ಅದರ ಒಂದು ಚೂರನ್ನು ಹುಲಿಕುಂಟಿಗೆ ಮೊದಲು ಕೊಡುತ್ತಾನೆ. ನಂತರ ಉಳಿದ ಒಂದಿಬ್ಬರು ಕೆಲಸದ ಹುಡುಗರಿಗೆ ಪ್ರಸಾದ ಸಮರ್ಪಣೆಯಾಗುತ್ತದೆ.
ಪೂಜೆ ಮುಗಿದ ಮೇಲೆ ಹುಲಿಕುಂಟಿ ಮೆತ್ತಗೆ "ಕೊಮ್ಮಣ್ಣ, ಮದುವೆಗೆ ಊರಿಗೆ ಹೋಗಬೇಕಿತ್ತು..." ಅಂತಂದ.
"ಯಾರ ಮದುವಿ?"
"ಈಕಿ ಅಣ್ಣನ ಮಗಳದು. ಅಣ್ಣ ಅಂದರೆ ಭಾಳ ಜೀವ"
"ಎಷ್ಟು ದಿನ?"
"ಮೂರು ದಿನ... ಹಂಗೇ ಕೈ ಖರ್ಚಿಗೆ ಸ್ವಲ್ಪ ಮುಂಗಡ ಬೇಕಿತ್ತು"
ಕೊಮ್ಮಣ್ಣ ಮತ್ತೆ ಮಾತನಾಡಲಿಲ್ಲ. ಹುಲಿಕುಂಟಿ ಬೇರೆ ಏನು ಹೇಳಬೇಕೋ ತೋಚದೆ ಕೆಲಸದಲ್ಲಿ ಮಗ್ನನಾದ. ಮಧ್ಯದಲ್ಲಿ ಯಾವುದೋ ಲಗ್ನಪತ್ರಿಕೆಯ ಕರಡು ಪ್ರತಿಯನ್ನು ತೋರಿಸಿದಾಗ ಅದರಲ್ಲಿ ಒಂದು ತಪ್ಪಾಗಿತ್ತು. ವರನ ಹೆಸರು "ಮಂಜುನಾಥ" ಎಂಬುದು "ಮಂಜುನಾತ" ಎಂದಾಗಿತ್ತು. "ವರನ ನಾತ ಹೊಡೆಸ್ತಿದಿಯಲಲೇ..." ಎಂದು ಕೊಮ್ಮಣ್ಣ ಸಿಟ್ಟಾಗಿದ್ದ.
ಮಧ್ಯಹ್ನ ಊಟಕ್ಕೆ ಹೋಗುವಾಗ ಮತ್ತೊಮ್ಮೆ ಹಿಂಜರಿಯುತ್ತಲೇ ಜ್ಞಾಪಿಸಿದ. ಕೊಮ್ಮಣ್ಣ "ಆಕಿ ಅಣ್ಣನ ಮಗಳ ಮದುವೆ ಅಂದ್ರೆ ಆಕಿನೇ ಹೋಗಿ ಬರಲಿ. ನೀನು ಇಲ್ಲಿ ಕೆಲಸ ಮಾಡು... ಮದುವೆ ದಿನಗಳವೆ... ಲಗ್ನ ಪತ್ರಿಕೆ ಮುದ್ರಣ ಮಾಡೋದು ಯಾರು ನೋಡಿಕೊಳ್ತಾರೆ" ಎಂದು ನಿರಾಕರಿಸಿ ಬಿಟ್ಟ. ಯಾಕೋ ಹುಲಿಕುಂಟಿಗೆ ತುಂಬಾ ಬೇಸರವಾಯ್ತು. ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ಹೊರಟ.
"ಯಾವ ಊರಾಗೆ ಮದುವಿ?" ಎಂದು ಕೊಮ್ಮಣ್ಣ ಕೇಳಿದ. "ತಿರುಪತಿ..." ಎಂದು ಹುಲಿಕುಂಟಿ ಹೇಳಿದ್ದೇ ತಡ, "ಏಡುಕೊಂಡಲವಾಡಾ...." ಎಂದು ಕೊಮ್ಮಣ್ಣ ಎದ್ದು ನಿಂತು ಕೈ ಮುಗಿದು ಬಿಟ್ಟ. "ಮುಂಚೇನೇ ಹೇಳಲಿಕ್ಕೆ ನಿಂಗೇನು ಕಷ್ಟ ಬಂದಿತ್ತು? ತಿರುಪತಿಗೆ ಹೋಗ್ತೀನಿ ಅಂದವರಿಗೆ ಬೇಡ ಅನ್ನೋ ಹಂಗೆ ಮಾಡಿಬಿಟ್ಟಿ. ವೆಂಕಟರಮಣ... ತಪ್ಪಾಯ್ತು... ತಪ್ಪಾಯ್ತು" ಎಂದು ಗಲ್ಲಗಲ್ಲ ಬಡಿದುಕೊಂಡ. ಮೂರು ದಿನ ರಜೆ ಕೊಟ್ಟಿದ್ದಲ್ಲದೆ ಐದು ನೂರು ರೂಪಾಯಿಗಳನ್ನು ಕೊಟ್ಟು "ಮುಂಗಡ ಅಂತ ಅಂದುಕೋಬೇಡ... ದಾರಿ ಖರ್ಚಿಗೆ... ಹಣ ಉಳಿದರೆ ಹುಂಡಿನಾಗೆ ಹಾಕು. ಎರಡು ಲಾಡು, ಎರಡು ವಡೆ, ಕಾಶಿದಾರ, ಒಂದು ಫೋಟೋ ತೊಗೊಂಡು ಬಾ" ಎಂದು ಹೇಳಿದ. ಮದುವೆಗೆ ಹೋಗಬೇಕಾದ ಸಂಗತಿ ಇಷ್ಟು ಸುಲಭವಾಗಿ ಬಗೆ ಹರಿದದ್ದಕ್ಕೆ ಹುಲಿಕುಂಟಿ ತುಂಬಾ ಖುಷಿಯಾದ.
ಹುಲಿಕುಂಟಿಯ ಆದಾಯವೊಂದೇ ಮೂರೂ ಜನರ ಸಂಸಾರ ನಿರ್ವಹಣೆಗೆ ಸಾಕಾಗುವದಿಲ್ಲವಾದ ಕಾರಣ ರಮಾಬಾಯಿ ಚಕ್ಕುಲಿ, ಕೋಡುಬಳಿ, ನಿಪ್ಪಟ್ಟುಗಳನ್ನು ಮಾಡಿ ಮಾರುತ್ತಾಳೆ. ತೂಕ ಮಾಡುವಾಗ ಚಕ್ಕುಲಿ ಮುರಿದು ಕರಾರುವಕ್ಕಾಗಿ ಸರಿತೂಗುವದಿಲ್ಲವಾದ ಕಾರಣ, ಸಾಕಷ್ಟು ಜನರು ಅವಳ ಬಳಿ ಖರೀದಿಸುತ್ತಾರೆ. ಎಂತಹದೋ ವಿಶೇಷ ರುಚಿ ಆ ಚಕ್ಕುಲಿಗಳಿಗಿರುತ್ತವೆಂಬುದೂ ಸತ್ಯ.
ಕೊಮ್ಮಣ್ಣ ತಿರುಪತಿಗೆ ಹೋಗಲಿಕ್ಕೆ ರಜೆ ಕೊಟ್ಟಿದ್ದಲ್ಲದೆ, ಐದು ನೂರು ರೂಪಾಯಿಗಳನ್ನು ಕೊಟ್ಟಿರುವ ಸಂಗತಿ ಅಂದು ರಮಾಬಾಯಿಯನ್ನು ಖುಷಿಯಾಗಿಸಿತ್ತು. ಆ ಕಾರಣಕ್ಕಾಗಿಯೇ ಏನೋ, ಚಕ್ಕುಲಿ ಹಿಟ್ಟನ್ನು ಸ್ವಲ್ಪ ಜಾಸ್ತಿಯೇ ನಾದಿದಳು. ಯಾರಿಗಾದರೂ ವಿಷಯವನ್ನು ಹೇಳಿಕೊಳ್ಳಬೇಕೆಂಬ ತುಡಿತ, ಆದರೆ ಹೇಳಿ ಬಿಟ್ಟ ಮೇಲೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಪ್ರಯಾಣ ರದ್ದಾದರೆ ಎಲ್ಲರ ಮುಂದೂ ಅವಮಾನಗೊಳ್ಳಬೇಕಾಗಬಹುದೆಂಬ ಭಯ. ಆದ್ದರಿಂದ ತಾನಾಗಿಯೇ ಯಾರಿಗೂ ಹೇಳಲು ಹೋಗಿರಲಿಲ್ಲ.
ನಾಲ್ಕು ಕೋಡುಬಳೆಗಳನ್ನು ಎಣ್ಣೆಯಲ್ಲಿ ಇಳಿಬಿಟ್ಟಿದ್ದಳೊ ಇಲ್ಲವೋ, ಹತ್ತಿಯ ಬುಟ್ಟಿಯನ್ನು ಹಿಡಿದು ಕಾಶವ್ವ ಬಂದಳು. ಕೊಮ್ಮಣ್ಣ ಮುದ್ರಣಾಲಯಕ್ಕೆ ಹೋಗಿದ್ದನ್ನು ಕಂಡು ಕೊಂಡ ಮೇಲೆ ಕಾಶವ್ವ ರಮಾಬಾಯಿಯ ಜೊತೆ ಒಂದರ್ಧ ಗಂಟೆ ಹರಟೆ ಹೊಡೆಯಲು ಬರುತ್ತಾಳೆ.
ಅದೂ ಇದೂ ಮಾತಾಡುತ್ತಾ "ನಿನ್ನೆ ಏನೋ ಪತ್ರ ಬಂದಂಗಿತ್ತಲ್ಲ?" ಎಂದು ಕಾಶವ್ವನೇ ವಿಷಯಕ್ಕೆ ನಾಂದಿ ಹಾಡಿದಳು. "ಹೂಂ. ಅಣ್ಣನ ಮಗಳ ಮದುವಿ. ಇವರೇನೋ ಹೋಗೋಣ ಅಂತ ಕುಣೀತಿದಾರೆ. ಕೊಮ್ಮಣ್ಣ ಕೂಡಾ ಧಾರಾಳವಾಗಿ ಹೋಗ್ರಿ ಅಂದಾನೆ. ಯಾಕೋ ನಂಗೇ ಅಷ್ಟೊಂದು ಮನಸ್ಸಿಲ್ಲ" ಎಂದು ನಿರಾಸಕ್ತಿಯಿಂದ ಉತ್ತರಿಸಿದಳು.
"ಯವೂರಾಗಂತೆ ಮದುವಿ?"
"ತಿರುಪತಿ"
ಕಾಶವ್ವ ಈಗ ಎಚ್ಚೆತ್ತುಕೊಂಡಳು. "ಲೇ ರಮಾ, ನಿಮ್ಮದು ’ಕಳ್ಳಕಾಣಿಕೆ’ ಮನೆತನ. ಗೊತ್ತದಲ್ಲೇನು? ಏನಾದರೂ ಕಳ್ಳತನ ಮಾಡಿಯೇ ನೀವು ತಿರುಪತಿಗೆ ಹೋಗಬೇಕು. ಇಲ್ಲಾ ಅಂತಂದ್ರೆ ಮನೆ ಯಜಮಾನ ರಕ್ತಕಾರಿ ಸಾಯ್ತಾನೆ" ಎಂದು ಹೇಳಿ ಹೆದರಿಸಿ ಬಿಟ್ಟಳು. ರಮಾಬಾಯಿಗೆ ಇದೊಂದೂ ಗೊತ್ತಿರಲಿಲ್ಲ.
"ಅದಕ್ಕೇನವ್ವ ನಾನು ಹೇಳಿದ್ದು. ಹಿರೇರು ಅನ್ನೋರು ಯಾರೂ ನಿಮ್ಮನಿಯೊಳಗೆ ಉಳಕೊಂಡಿಲ್ಲ. ನಿಂಗಾದ್ರೂ ಹೆಂಗೆ ಗೊತ್ತಾಗಬೇಕು ಹೇಳು?" ಎಂದು ಹೇಳಿ ಹುಲಿಕುಂಟಿಯ ಕಳ್ಳ ವಕ್ಕಲಿನ ವಂಶದ ನಿಯಮಗಳನ್ನೂ, ಅದಕ್ಕೆ ಸಂಬಂಧಿಸಿದ ಕತೆಯನ್ನೂ ಹೇಳತೊಡಗಿದಳು. ರಮಾಬಾಯಿ ಒಲೆ ಉರಿಯನ್ನು ಸಣ್ಣ ಮಾಡಿ, ಕತೆ ಕೇಳಿಸಿಕೊಳ್ಳ ತೊಡಗಿದಳು.
"ಹುಲಿಕುಂಟಿ ಮುತ್ತಾತನ ಮುತ್ತಾತನ ಹೆಸರು ಭೀಮಸೇನ ಅಂತ. ಛಲೋ ಮೈಕಟ್ಟು ಬೆಳಿಸಿದ್ದ ಗರಡಿ ಮನಿ ಆಳು. ಆತ ಒಬ್ಬಾತನೇ ರಾಮನವಮಿ ತೇರು ಎಳೆಯೋಷ್ಟು ತಾಕತ್ತಿನವ. ಅಂಥಾ ಘನಂದಾರಿ ಗಂಡಸಿಗೆ ಮದುವಿ ಆಯ್ತು. ಛಲೋ ಮಲ್ಲಿಗಿ ಹೂವಿನಂಥ ಹುಡುಗಿ ಸಿಕ್ಕಿದಳು. ಈ ಭೀಮ್ಯಾನ್ನ ಖುಷಿನ್ನ ಕೇಳಬೇಕಾ? ಎಲ್ಲೆಂದರಲ್ಲಿ ಹೆಂಡತಿನ್ನ ಕಟ್ಟಿಕೊಂಡು ತಿರುಗಾಡಿದ. ಒಮ್ಮೆ ಗಂಡಿ ನರಸಿಂಹಸ್ವಾಮಿ ಜಾತ್ರೆಗೆ ಹೆಂಡತಿಯನ್ನ ಮೈತುಂಬ ಸಿಂಗಾರ ಮಾಡಿಸಿಕೊಂಡು ಕರಕೊಂಡು ಹೋಗಿದ್ದ. ಗರುಡಗಂಭಕ್ಕೆ ಎಣ್ಣೆ ಬಳಿದು, ಅದನ್ನು ಹತ್ತಿ ದೀಪ ಹಚ್ಚೋ ಸ್ಪರ್ಧೆ ಇಟ್ಟಿದ್ದರು. ವಯಸ್ಸಿನ ಹುಡುಗರೆಲ್ಲಾ ಅರ್ಧ ಕಂಬ ಹತ್ತೋದರೊಳಗೆ ಜಾರಿ ಜಾರಿ ಬೀಳ್ತಿದ್ದರು. ತನ್ನ ಹೆಂಡತಿಯ ಮುಂದೆ ತನ್ನ ಪೌರುಷ ತೋರಿಸಬೇಕು ಅಂತ ಭೀಮಸೇನ ಅಂಗಿ-ಧೋತ್ರ ಕಳಚಿ, ಲಂಗೋಟಿ ಬಿಗಿ ಮಾಡಿಕೊಂಡು ಕಂಬ ಹತ್ತಲಿಕ್ಕೆ ಶುರು ಮಾಡಿದ. ಜನ ಗುಂಪು ಗೂಡಿತ್ತು.
ಸ್ವಲ್ಪ ಹತ್ತೋದು, ಒಂಚೂರು ಜಾರೋದು, ಮತ್ತೆ ಹತ್ತೋದು, ಹೆಂಡತಿ ಕಡಿಗೊಮ್ಮೆ ನೋಡೋದು, ಅವಳು ಒಂಥರಾ ನಗೋದು, ಇವನಿಗೆ ಆ ನಗು ಮತ್ತೊಂದಿಷ್ಟು ಹುರುಪು ಕೊಡೋದು, ಮತ್ತೆ ಹತ್ತೋದು... ಹಿಂಗೇ ಮಾಡಿ ಕಂಬ ಹತ್ತಿಬಿಟ್ಟು ದೀಪ ಹಚ್ಚಿ ಬಿಟ್ಟು, ದೀಪಕ್ಕೆ ಹಾಕಿದ್ದ ಚಂಡು ಹೂವಿನ ಜಯಮಾಲೆಯನ್ನು ತನ್ನ ಕೊರಳಿಗೆ ಹಾಕಿಕೊಂಡ. ಜನರೆಲ್ಲಾ ಜಯಘೋಷ ಕೂಗಿದರು. ಹೆಮ್ಮೆಯಿಂದ ತನ್ನ ಹೆಂಡತಿಯ ಕಡೆಗೆ ನೋಡಿದ. ಅವಳು ಮೈಮರೆತು ಚಪ್ಪಾಳೆ ತಟ್ಟುತ್ತಿದ್ದಳು. ಆದರೆ ಅಷ್ಟು ಎತ್ತರದಲ್ಲಿ ನಿಂತಿದ್ದ ಭೀಮಸೇನನಿಗೆ ತನ್ನ ಹೆಂಡತಿಯ ಹೆರಳನ್ನು ಯಾರೋ ಕತ್ತರಿಸಿ, ಹೆರಳ ಬಂಗಾರವನ್ನು ಕದಿಯುತ್ತಿರುವುದು ಕಂಡು ಬಿಟ್ಟಿತು. ತಕ್ಷಣ ಸುಯ್ ಅಂತ ಗರುಡಗಂಬವನ್ನು ಜಾರಿದ್ದೇ ಹೆಂಡತಿಯ ಕಡೆ ಕೂಗುತ್ತಾ ಓಡಿ ಹೋದ. ಆದರೆ ಅವನು ಹೆಂಡತಿಯನ್ನು ತಲುಪುವದರಲ್ಲಿ ಅನಾಹುತ ನಡೆದು ಹೋಯ್ತು. ಕಳ್ಳ ಹೆರಳನ್ನು ಕತ್ತರಿಸಿ, ಅದರ ಬಂಗಾರವನ್ನು ಕಿತ್ತುಕೊಂಡು, ಹೆರಳನ್ನು ಅಲ್ಲಿಯೇ ಒಗೆದು ಓಡಿ ಹೋಗಲಾರಂಭಿಸಿದ. ತಲೆ ಹಗುರವಾದಂತಾಗಿ ಅವನ ಹೆಂಡತಿ ತಲೆ ಅಲ್ಲಾಡಿಸಿದ್ದೇ ಗಿಡ್ಡ ಕೂದಲೆಲ್ಲಾ ಅವಳ ತಲೆಯ ಸುತ್ತ ಹರಡಿಕೊಂಡು ಅವಳು ವಿಕಾರವಾಗಿ ಕಂಡಳು. ನಡೆದ ಘಟನೆ ಅರ್ಥವಾಗಿದ್ದೇ ಅವಳು ಕೂಗಿ ಕೊಳ್ಳಲಾರಂಭಿಸಿದಳು.
ಭೀಮಸೇನ ಚಿಗರೆಯಂತೆ ಓಡಲಾರಂಭಿಸಿದ. ಕಳ್ಳ ಸಣಕಲಿನವನಾದ್ದರಿಂದ ಅವನಿಗಿಂತಲೂ ಜೋರಾಗಿ ಓಡಲಾರಂಭಿಸಿದ. ಆದರೆ ಕಣ್ಣ ಮುಂದೆಯೇ ಹೆಂಡತಿಗಾದ ಅವಮಾನ ಭೀಮಸೇನನನ್ನು ಕೆರಳಿಸಿತ್ತು. ಅವನೂ ಓಡಿದ. ಹಳ್ಳದ ದಾರಿಗುಂಟ ಓಡಲಾರಂಭಿಸಿದರು. ಹಳ್ಳದ ದಂಡೆಯಲ್ಲಿ ಗರಿ ಬಿಚ್ಚಿಕೊಂಡು ಆಡಿಕೊಂಡಿದ್ದ ಒಂದಿಷ್ಟು ನವಿಲುಗಳು ಈ ರೀತಿಯ ಧಿಡೀರ್ ಮಾನವ ಪ್ರವೇಶದಿಂದ ಗಾಬರಿಯಾಗಿ ಕೆಟ್ಟ ಸದ್ದನ್ನು ಮಾಡುತ್ತಾ ಹಾರಿ ಹೋದವು. ಕಣಿವೆಳ್ಳಿ ತಲುಪಿದರೂ ಭೀಮಸೇನ ಬಿಡಲಿಲ್ಲ. ಇನ್ನಷ್ಟು ಓಡುವ ಶಕ್ತಿ ಕಳ್ಳನಿಗಿರಲಿಲ್ಲ. ಕೊನೆಗೆ ಸಿಕ್ಕಿ ಬಿದ್ದ. ಅವನಿಗೆ ನಾಲ್ಕೇಟು ಬಿಗಿದು, ಅವನ ಧೋತರದಿಂದಲೇ ಅವನನ್ನು ಕಟ್ಟಿ, ಹೆಗಲ ಮೇಲೆ ಗದೆಯಂತೆ ಹೊತ್ತು ಕೊಂಡು ಬಂದ.
ಜಾತ್ರೆಯಲ್ಲಿ ಅಳುತ್ತಾ ಕುಳಿತಿದ್ದ ತನ್ನ ಹೆಂಡತಿಯ ಮುಂದೆ ಆ ಕಳ್ಳನನ್ನು ಒಗೆದ ಭೀಮಸೇನ, ಬಾರುಕೋಲಿನಿಂದ ಅವನ ಮೈಮೇಲೆ ರಕ್ತ ಬರುವಂತೆ ಹೊಡೆದ. ಅವನ ಆರ್ಭಟವನ್ನು ಕಂಡು ಹೆದರಿದ ಅವನ ಹೆಂಡತಿ "ಸಾಕು, ಸಾಕು" ಎಂದು ಭೀಮಸೇನನನ್ನು ತಡೆದಳು. ಆದರೆ ಕಳ್ಳನೊಬ್ಬ ಸಿಕ್ಕಿ ಬಿದ್ದಿದ್ದಾನೆಂದು ತಿಳಿದಿದ್ದೇ ಜನ ಗುಂಪು ಗೂಡಿತು. ಪ್ರತಿಯೊಬ್ಬರೂ ಒಂದಿಲ್ಲೊಂದು ಬಾರಿ ಕಳ್ಳತನದಲ್ಲಿ ಏನಾದರೂ ಕಳೆದುಕೊಂಡವರೇ ಆದ್ದರಿಂದ ನೆರೆದ ಜನರೆಲ್ಲಾ ತಲೆಗೊಂದೇಟು ಅವನಿಗೆ ಕೊಟ್ಟರು. ಕೆಲವರಂತೂ ತಮ್ಮ ಯಾವುದೋ ವೈಯುಕ್ತಿಕ ಆಕ್ರೋಶವನ್ನು ತೀರಿಸಿಕೊಳ್ಳುವವರಂತೆ ಕಳ್ಳನನ್ನು ಉರುಳಾಡಿಸಿ ಹೊಡೆದರು. ಕೊನೆ ಕೊನೆಗೆ ಭೀಮಸೇನನ ನಿಯಂತ್ರಣ ತಪ್ಪಿ ಆ ಕಳ್ಳ ಜನರ ಕೈಗೆ ಸಿಕ್ಕಿ ಬಿದ್ದ. ಜಾತ್ರೆಗೆ ಕುಣಿಯಲೆಂದು ಗಂಡಸರು ಕುಡಿದಿದ್ದರು. ಅವರ ಆವೇಶವೆಲ್ಲಾ ಮುಗಿಯುವದರಲ್ಲಿ ಕಳ್ಳ ಕೊನೆಯುಸಿರು ಎಳೆದಿದ್ದ.
ಈ ಕಳ್ಳನ ಹೆಸರು ಶ್ರೀರಾಮುಲು ಎಂದು. ದೂರದ ಗುಂತಕಲ್ಲಿನವನು. ಬಳ್ಳಾರಿಯ ಸುತ್ತ ಮುತ್ತ ಎಲ್ಲೇ ಜಾತ್ರೆ, ಉರುಸುಗಳಾದರೂ ಅಲ್ಲಿಗೆ ಹೋಗಿ ಕಳ್ಳತನ ಮಾಡುತ್ತಿದ್ದ. ಆದರೆ ಶ್ರೀರಾಮುಲುವಿಗೆ ಒಂದು ವಿಶೇಷ ಗುಣವಿತ್ತು. ಅವನು ತಿರುಪತಿ ತಿಮ್ಮಪ್ಪನ ಪರಮಭಕ್ತ. ಏನೇ ಕಳ್ಳತನ ಮಾಡಿದರೂ ಅದರ ಅರ್ಧ ಭಾಗವನ್ನು ತಿರುಪತಿಯ ಹುಂಡಿಯಲ್ಲಿ ಹಾಕುತ್ತಿದ್ದ. ಬಂಗಾರದ ಸರ ಕದ್ದರೂ ಸರೆ, ರೇಷ್ಮೆ ಸೀರೆ ಕದ್ದರೂ ಸರೆ. ತಿಮ್ಮಪ್ಪನ ಕೃಪಾ ಕಟಾಕ್ಷದಿಂದಲೇ ತಾನೆಂದೂ ಕಳ್ಳತನದಲ್ಲಿ ಸಿಕ್ಕಿ ಬಿದ್ದಿಲ್ಲವೆಂಬುದು ಅವನ ನಂಬಿಕೆಯಾಗಿತ್ತು. ತಿಮ್ಮಪ್ಪನಿಗೂ ತನ್ನ ಭಕ್ತನ ಮೇಲೆ ಸಾಕಷ್ಟು ಅಭಿಮಾನವಿತ್ತು. ಆದರೆ ಕೊನೆಯಲ್ಲಿ ತನ್ನ ಪ್ರೀತಿಯ ಭಕ್ತ ಹೀಗೆ ಸತ್ತಿದ್ದು ತಿಮ್ಮಪ್ಪನಿಗೆ ಅತ್ಯಂತ ದುಃಖವನ್ನು ತಂದಿತ್ತು. ಭೀಮಸೇನನಿಗೆ ತನ್ನ ಸಿಟ್ಟಿನ ರುಚಿಯನ್ನು ತೋರಿಸಲು ಸಮಯ ಕಾಯಲಾರಂಭಿಸಿದ.
ಭೀಮಸೇನನಿಗೆ ಒಬ್ಬ ಮುದ್ದಾದ ಮಗು ಹುಟ್ಟಿದ. ಹಡವಣಿಗೆಯ ಸಮಯದಲ್ಲಿ ಏನೋ ತೊಂದರೆಯಾಗಿ "ಗಂಡು ಮಗು ಹುಟ್ಟಿದರೆ ಅವನ ಜಾವಳ ನಿನ್ನ ಸನ್ನಿಧಿಂiiಲ್ಲಿ ಮಾಡ್ತೀನಿ. ಹೆಣ್ಣು ಹುಟ್ಟಿದರೆ ನಿನಗೆ ಕಲ್ಯಾಣೋತ್ಸವ ಮಾಡಿಸ್ತೀನಿ" ಅಂತ ಭೀಮಸೇನ ಹರಕೆ ಹೊತ್ತುಕೊಂಡ. ದೇವರ ದಯೆಯಿಂದ ತಾಯಿ-ಮಗರಿಬ್ಬರೂ ಬದುಕಿ ಉಳಿದರು. ಮಗ ಹುಣ್ಣಿಮೆಯ ಚಂದ್ರನಂತೆ ಬೆಳೆಯಲಾರಂಭಿಸಿದ.
ವರ್ಷ ಮೂರಾಗುವದರಲ್ಲಿ ಹುಡುಗನ ಕೂದಲು ಕಣ್ಣ ಮೇಲೆ ಬೀಳಲಾರಂಭಿಸಿದವು. "ಗಂಡು ಹುಡುಗನಿಗೆ ಎಷ್ಟು ದಿನ ಅಂತ ಹೆರಳು ಹಾಕ್ಲಿ" ಅಂತ ಅವನಮ್ಮ ಗೊಣಗಾಡಲಾರಂಭಿಸಿದಳು. ಕೊನೆಗೊಂದು ದಿನ ಭೀಮಸೇನ ತಿರುಪತಿಗೆ ಕುಟುಂಬ ಸಮೇತ ಹರಕೆ ತೀರಿಸಲು ಹೊರಟ. ತಿರುಪತಿ ತಿಮ್ಮಪ್ಪ ಎಚ್ಚರಗೊಂಡ. ತಾನು ಬಹುದಿನದಿಂದ ಕಾಯುತ್ತಿದ್ದ ಗಳಿಗೆಗೆ ಕಾತುರದಿಂದ ಎದುರು ನೋಡಲಾರಂಭಿಸಿದ.
ಭೀಮಸೇನ ತಿರುಪತಿಯ ಮೆಟ್ಟಿಲುಗಳನ್ನು ಏರಲು ಹೆಜ್ಜೆ ಎತ್ತಿದ. ಅಷ್ಟೇ! ಆ ಮೆಟ್ಟಿಲು ಪೂರ್ತಿಯಾಗಿ ಅನ್ನವಾಗಿ ಕಂಡು ಬಿಟ್ಟಿತು. ಇದೇನಿದು ಕಣ್ಕಟ್ಟು ಅಂತ ಕಣ್ಣು ಹೊಸಕಿಕೊಂಡ. ಹೆಂಡತಿ ಆರಾಮಾಗಿ ನಾಲ್ಕು ಮೆಟ್ಟಿಲು ಹತ್ತಿ ಬಿಟ್ಟಿದ್ದಳು. ಭೀಮಸೇನ ಮತ್ತೊಮ್ಮೆ ಕಾಲೆತ್ತಿದ. ಊಹೂ, ಮೆಟ್ಟಿಲೆಲ್ಲಾ ಅನ್ನ. ಮೊದಲನೆಯ ಮೆಟ್ಟಿಲನ್ನು ಬಿಟ್ಟು ಎರಡನೆಯ ಮೆಟ್ಟಿಲ ಮೇಲೆ ಕಾಲಿಡಲು ನೋಡಿದ. ಊಹೂ, ಅದೂ ಬರೀ ಅನ್ನ. ಹೆಂಡತಿ ಮೇಲಿನಿಂದ "ಬರ್ರೀ, ಅಲ್ಲೇ ಯಾಕೆ ನಿಂತು ಬಿಟ್ಟಿರಿ" ಎಂದು ಕೂಗು ಹಾಕಿದಳು. ಭೀಮಸೇನ ಕಣ್ಣೆತ್ತಿ ನೋಡಿದ. ಏನಿದೆ ಅಲ್ಲಿ! ಇಡೀ ತಿರುಪತಿ ಬೆಟ್ಟವೇ ಅನ್ನದಿಂದ ಕೂಡಿತ್ತು. ಕಲ್ಲು, ಗಿಡ, ಮರ, ಗೋಪುರ - ಎಲ್ಲೆಲ್ಲೂ ಅನ್ನ. ಆ ಅನ್ನಪೂರ್ಣೆಯನ್ನು ತುಳಿದು ಬೆಟ್ಟ ಹತ್ತುವ ಧೈರ್ಯ ಅವನಿಗೆ ಸಾಧ್ಯವಾಗಲಿಲ್ಲ. ಬೆಟ್ಟದ ಬುಡದಲ್ಲಿಯೇ ಕುಸಿದು ಕುಳಿತ. ಹೆಂಡತಿ ಕೆಳಗಿಳಿದು ಬಂದಳು.
ಮೂರು ಹಗಲು, ಮೂರು ರಾತ್ರಿ ಭೀಮಸೇನ ಬೆಟ್ಟ ಹತ್ತಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬೆಟ್ಟ ಹತ್ತದೆ ಹರಕೆ ತೀರಿಸುವುದು ಹೇಗೆ? ಹರಕೆ ತೀರಿಸದೆ ವಾಪಾಸು ಬಳ್ಳಾರಿಗೆ ಹೋಗುವದಾದರೂ ಹೇಗೆ? ಭೀಮಸೇನ ಕಂಗಾಲಾಗಿ ಹೋದ. ಕೊನೆಗೆ ಗೋವಿಂದರಾಜ ಪಟ್ಟಣದ ಬಳಿ ಕುಳಿತಿದ್ದ ಒಬ್ಬ ಸನ್ಯಾಸಿಯ ಬಳಿ ಹೋಗಿ ತನ್ನ ಸಂಕಟವನ್ನು ಹೇಳಿಕೊಂಡ. ಕಣ್ಣು ಮುಚ್ಚಿ ಧ್ಯಾನಿಸಿದ ಸನ್ಯಾಸಿ ಎಲ್ಲವನ್ನೂ ಅರ್ಥ ಮಾಡಿಕೊಂಡ. ಕಣ್ಣು ಮುಚ್ಚಿದ್ದಂತೆಯೇ "ಅವನು ಕನಕಹರಣ ಮಾಡಿದ್ರೆ, ನೀನು ಪ್ರಾಣಹರಣ ಮಾಡಿದಿ. ನಿನ್ನ ಪಾಪ ದೊಡ್ಡದು. ಪ್ರಾಯಶ್ಚಿತ್ತ ಮಾಡಲೇಬೇಕು" ಎಂದು ಹೇಳಿದ. "ಅದೇನು ಪ್ರಾಯಶ್ಚಿತ್ತ ಅಂತ ತಾವೇ ಹೇಳಬೇಕು" ಎಂದು ಭೀಮಸೇನ ಬೇಡಿಕೊಂಡ. "ದೇವರಿಗೆ ಕಳ್ಳಕಾಣಿಕೆ ಒಪ್ಪಿಸಬೇಕು. ಒಂದು ಪುಟ್ಟ ಕಳ್ಳತನ ಮಾಡಿ ಅದನ್ನ ದೇವರ ಹುಂಡಿನಾಗಿ ಹಾಕಬೇಕು. ಹಾಗೆ ಕಳ್ಳತನ ಮಾಡುವಾಗ ನಿಂಗೆ ಅವನ ನೆನಪಾಗಬೇಕು" ಎಂದು ಹೇಳಿ ಸನ್ಯಾಸಿ ಹೊರಟು ಹೋದ.
ಅತ್ಯಂತ ಶ್ರೀಮಂತ ಜೀವನ ನಡೆಸಿದ ಭೀಮಸೇನ ಕಳ್ಳತನ ಮಾಡುವದಾದರೂ ಹೇಗೆ? ಆದರೆ ಬೇರೆ ದಾರಿಯಿರಲಿಲ್ಲ. ದೇವರ ಶಾಪದಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ?
ಮರುದಿನ ದೇವರ ಸಾಮಾನುಗಳನು ಮಾರಾಟ ಮಾಡುವ ಅಂಗಡಿಯಲ್ಲಿ ನೂರಾರು ರೂಪಾಯಿಗಳ ಪೂಜಾ ಸಾಮಾಗ್ರಿಗಳನ್ನು ಕೊಂಡು, ಹಗೂರಕ್ಕೆ ಒಂದು ಪುಟ್ಟ ಗಂಟೆಯನ್ನು ಕಳ್ಳತನ ಮಾಡಿದ. ಮೈ ಕೈಯೆಲ್ಲಾ ಬೆವತು ಹೋಗಿತ್ತು. ಗಳಿಗೆ ಗಳಿಗೆಗೂ ಶ್ರೀರಾಮುಲುವಿನ ನೆನಪಾಗಿತ್ತು.
ಕೈಯಲ್ಲಿ ಗಂಟೆ ಬಾರಿಸುತ್ತಾ ವೆಂಕಟೇಶ್ವರನ ಸ್ಮರಣೆ ಮಾಡುತ್ತಾ ಹೋದಂತೆಲ್ಲಾ ತಿರುಪತಿ ತಿಮ್ಮಪ್ಪ ದಾರಿ ಬಿಟ್ಟು ಕೊಟ್ಟ. ಹುಂಡಿಯಲ್ಲಿ ಆ ಗಂಟೆ ಹಾಕಿದ್ದೇ ಗರ್ಭಗುಡಿಯಲ್ಲಿ ಅವನ ಮುಖದಲ್ಲಿ ಕಿರುನಗೆಯೊಂದು ಮೂಡಿತು"
"ಇದೇ ನೋಡವ್ವಾ ನಿಮ್ಮ ವಂಶದ ಕಥಿ. ಆವತ್ತಿನಿಂದ ನಿಮ್ಮ ವಂಶದವರು ಯಾರೇ ತಿರುಪತಿಗೆ ಹೋಗಲಿ, ಒಂದು ಸಣ್ಣ ಕಳ್ಳತನ ಮಾಡಿ, ಅದನ್ನ ದೇವರ ಹುಂಡಿನಾಗೆ ಹಾಕಬೇಕು. ಹಂಗೇ ಹೋದರೆ ತಿಮ್ಮಪ್ಪ ದಾರಿ ಬಿಟ್ಟು ಕೊಡಂಗಿಲ್ಲ" ಎಂದು ಕಾಶವ್ವ ಕತೆ ಹೇಳಿ ಮುಗಿಸಿದಳು. ನೂರು ಹೂಬತ್ತಿಗಳನ್ನು ಹೊಸೆದಿದ್ದಳು.
ರಮಾಬಾಯಿಗೆ ಯಾಕೋ ಇದು ಚಿಂತೆಗಿಟ್ಟುಕೊಂಡಿತು. "ನಾನೆಲ್ಲಂತ ಕಳ್ಳತನ ಮಾಡಲಿಕ್ಕೆ ಹೋಗಲೆ ಕಾಶವ್ವಾ?" ಎಂದು ಕಳವಳಪಟ್ಟಳು. "ಅಯ್ಯಯ್ಯಮ್ಮ, ನೀನ್ಯಾಕೆ ಕಳ್ಳತನ ಮಾಡ್ಲಿಕ್ಕೆ ಹೋಗ್ತಿ. ಸಾಕ್ಷಾತ್ ಲಕ್ಷ್ಮಿದೇವಿ ಇದ್ದಂಗೆ ನೀನು. ಅಂಥಾ ಸುಡುಗಾಡು ಕೆಲಸಗಳೇನಿದ್ರೂ ಮನೆ ಗಂಡಸರು ಮಾಡಬೇಕು. ಕಾಮನ ಹಬ್ಬಕ್ಕೆ ಕಳ್ಳತನ ಮಾಡ್ತಾರಲ್ಲಾ, ಹಂಗೇ ಇದೂನೂ" ಎಂದು ಮುತ್ತೈದೆತನದ ಮಹಾತ್ಮೆಯನ್ನು ವಿವರಿಸಿದಳು.
ಅಷ್ಟು ಹೊತ್ತಿಗೆ ಗುರುರಾಜ "ಬುರ್..." ಎಂದು ಬಸ್ಸು ಬಿಡುತ್ತಾ ಶಾಲೆಯಿಂದ ಬಂದ. ಅಮ್ಮ ಕೋಡುಬಳೆ ಮಾಡುತ್ತಿದ್ದುದನ್ನು ನೋಡಿದ್ದೇ ಬಾಯಿಯಲ್ಲಿ ನೀರೂರಿತು. ಪಾಟಿ ಚೀಲವನ್ನು "ಸುಯ್..." ಎಂದು ಒಗೆದರೆ, ಅದು ಸೀದಾ ಮೂಲೆಯಲ್ಲಿ ಪೇರಿಸಿಟ್ಟಿದ್ದ ಹಾಸಿಗೆಗಳ ಮೇಲೆ ಹೋಗಿ ಬಿತ್ತು. "ಬಾ ಬಾ ಗಿಣಿಯೆ, ಕೋಡುಬಳೆ ಕೊಡುವೆ..." ಎಂದು ರಾಗವಾಗಿ ಹೇಳುತ್ತಾ, ಇನ್ನೂ ಸುಡುತ್ತಿರುವ ಎರಡು ಕೋಡುಬಳೆಗಳನ್ನು ಜೇಬಿಗಿಳಿಸಿ, ಒಂದನ್ನು ಬಾಯಿಗೆ ಹಾಕಿಕೊಂಡು, "ಹಾ... ಹಾ..." ಎನ್ನುತ್ತಾ ತಿನ್ನಲಾರಂಭಿಸಿದ. "ತೂಕಕ್ಕೆ ಕಮ್ಮಿ ಬರ್ತದೋ..." ಎಂದು ರಮಾಬಾಯಿ ಪ್ರೀತಿಯಿಂದ ಒಂದೇಟು ಬಿಟ್ಟಳು. ಇನ್ನೊಂದು ಕೋಡುಬಳೆ ತೆಗೆದುಕೊಂಡು ನಿಕ್ಕರಿನ ಜೇಬಿಗೆ ಇಳೆ ಬಿಟ್ಟ. ಕೈ ಕಾಲು ತೊಳೆಯದೆ ಸೀದಾ ಕೋಡುಬಳೆಗೆ ಕೈಹಾಕಿದ್ದನ್ನು ನೋಡಿದ ಕಾಶವ್ವ "ಕೊಳಕು ಮುಂಡೇದೆ..." ಎಂದು ಬೈಯ್ದಳು. ಗುರುರಾಜ ಕಾಶವ್ವನ ಮುಂದೆ ಕುಕ್ಕುರುಗಾಲಲ್ಲಿ ಕುಳಿತು, ಕುರುಕುರು ಎಂದು ಸದ್ದು ಮಾಡುತ್ತಾ ಇಡೀ ಕೋಡುಬಳೆಯನ್ನು ತಿಂದು, "ಕಿಲಾಡಿ ಜೋಡಿ... ಜೋಡಿ..., ನಮ್ಮಜ್ಜಿ ಬೋಡಿ... ಬೋಡಿ..." ಎಂದು ರಾಗವಾಗಿ ಹಾಡಿ ಆಕೆಯ ಕೈಗೆ ಸಿಗದಂತೆ ಚಂಗನೆ ಜಿಗಿದು ಓಡಿ ಹೋದ.
ಬೆಳಿಗ್ಗೆ ಮಂಡಾಳು ಒಗ್ಗರಣೆ ತಿಂದಿದ್ದೇ ಅಪ್ಪ-ಮಗ ಜೊತೆಯಾಗಿ ಕಳ್ಳತನಕ್ಕೆ ಹೊರಟರು. "ಏನೂ ಹೆದರಿಕೋ ಬ್ಯಾಡ್ರಿ. ನಾನೆಲ್ಲಾ ಪದ್ದಕ್ಕಗೆ ಹೇಳೀನಿ" ಎಂದು ರಮಾಬಾಯಿ ಹೇಳಿದರೂ, ಹುಲಿಕುಂಟಿ ವಟವಟ ಮಾಡಿದ. ಈ ತಿರುಪತಿ ಸಹವಾಸವೇ ಬೇಡ ಅನ್ನಿಸಿಬಿಟ್ಟಿತ್ತು.
ಎಡವಟ್ಟು ಎಂಕಣ್ಣಾಚಾರ್ಯರು ತಮ್ಮ ಜಾಗಂಟೆ ಯಂತ್ರವನ್ನು ಹರಡಿಕೊಂಡು ಪಡಸಾಲೆಯಲ್ಲಿ ಕುಳಿತಿದ್ದರು. ಪದ್ದಕ್ಕ ಒಳಗೆ ಹುಳುಪಲ್ಯವನ್ನು ಮಾಡುತ್ತಿದ್ದಳಾದ್ದರಿಂದ ಮೆಂತೆಪಲ್ಯ, ಬೇಳೆ ಹಿತವಾಗಿ ಬೇಯುತ್ತಿರುವ ಘಮಘಮ ವಾಸನೆ ಮನೆಯೆಲ್ಲಾ ಹರಡಿತ್ತು. ಅಪ್ಪ-ಮಗ ಇಬ್ಬರೂ ಒಳ ಬರುತ್ತಲೇ "ಏನು ಬಂದ್ರಿ?" ಎಂದು ವೆಂಕಣ್ಣಾಚಾರ್ಯರು ಕೇಳಿದರು. "ಪದ್ದಕ್ಕ ಇದ್ದಾಳಾ?" ಎಂದು ಹುಲಿಕುಂಟಿ ಕೇಳಿದ. ಒಳಗಿದ್ದ ಪದ್ದಕ್ಕ ಹುಲಿಕುಂಟಿಯ ಮಾತನ್ನು ಕೇಳಿದ್ದೇ ಹೊರಬಂದಳು.
"ಬರ್ರಿ, ಬರ್ರಿ. ಕಳ್ಳತನಕ್ಕೆ ಬರ್ತೀರಿ ಅಂತ ರಮಾಬಾಯಿ ಬೆಳಿಗ್ಗೆನೇ ಹೇಳಿದ್ಲು" ಎಂದು ನಗುನಗುತ್ತಾ ಹೇಳಿದಳು. ವೆಂಕಣ್ಙಾಚಾರ್ಯರು ತಬ್ಬಿಬ್ಬಾದರು. "ಅದ್ಯಾಕೆ ಕಳ್ಳತನ ಮಾಡ್ತಾರೆ?" ಎಂದು ಬೆಬ್ಬೆಬ್ಬೆ ಅಂದರು. "ಅದೆಲ್ಲಾ ಆಮೇಲಕ್ಕೆ ಹೇಳ್ತೀನಿ. ಮೊದಲು ಆ ಸುಡುಗಾಡು ಜಾಗಂಟಿ ಯಂತ್ರ ಬಿಟ್ಟು ಹೊರಗೆ ಹೋಗ್ರಿ" ಎಂದು ಗಂಡನನ್ನು ಹೊರಗೆ ದಬ್ಬಿದಳು.
"ಹುಲಿಕುಂಟಿ, ನಿಮಗೆ ಏನು ಇಷ್ಟ ಆಗ್ತದೋ ಅದನ್ನ ತೊಗೊಂಡು ಹೋಗ್ರಿ. ಸಂಕೋಚ ಬೇಡ. ಆದರೆ ಆ ಬೆಳ್ಳಿ ದೇವರ ವಿಗ್ರಹಗಳು ಮಡೀಲವೆ. ಮುಟ್ಟಿ ಮೈಲಿಗಿ ಮಾಡಬೇಡ" ಎಂದು ಉದಾರತೆಯನ್ನೂ, ಎಚ್ಚರಿಕೆಯನ್ನೂ ಪದ್ದಕ್ಕ ಕೊಟ್ಟು, ಹೊರಗೆ ಹೋದಳು. ಮನೆಯಲ್ಲಿ ಬರೀ ಅಪ್ಪ-ಮಗ ಉಳಿದರು.
ಹುಲಿಕುಂಟಿಗೆ ಸಣ್ಣಗೆ ನಡುಕ ಶುರುವಾಗಿತ್ತು. ಏನು ತೆಗೆದುಕೊಳ್ಳಬೇಕೆಂದು ಸುತ್ತಲೂ ಕಣ್ಣಾಡಿಸಿದ. ಗೋಡೆಗೆ ಆತು ಹಾಕಿದ ಜಾಗಂಟೆ, ಮೂಲೆಯಲ್ಲಿಟ್ಟ ರುಬ್ಬು ಗುಂಡು, ಕೋಲಿನ ಮೇಲೆ ಹರಡಿದ ಮಡಿ ಬಟ್ಟೆಗಳು, ಜೋಡಿಸಿಟ್ಟ ಫಳಫಳನೆ ಹೊಳೆಯುವ ತಾಮ್ರ-ಹಿತ್ತಾಳೆ ಪಾತ್ರೆಗಳು, ಶಾವಿಗೆ ನೇತುಹಾಕಿದ ಕಡ್ಡಿ, ಪಾತ್ರೆಯಲ್ಲಿ ಕುದಿಯುತ್ತಿರು ಹುಳುಪಲ್ಯ, ದೇವರ ಕಟ್ಟೆಯ ಮೇಲೆ ಸಣ್ಣನೆಯ ಎಳೆಯಲ್ಲಿ ಹಾಕಿದ ಶ್ರೀಚಕ್ರ, ಕಲ್ಪವೃಕ್ಷ, ಕಾಮಧೇನುವಿನ ರಂಗೋಲಿ. ಏನನ್ನು ತೆಗೆದುಕೊಳ್ಳಬೇಕೋ ಹುಲಿಕುಂಟಿಗೆ ಅರ್ಥವಾಗಲಿಲ್ಲ. ಮಾಡದಲ್ಲಿ ವೆಂಕಣ್ಣಾಚಾರ್ಯರ ಮಗ ವಿಷ್ಣು ಸೇದಲೆಂದು ಇಟ್ಟಿದ್ದ ಒಂದು ಸಿಗರೇಟು ಪ್ಯಾಕೇ ಅವನಿಗೆ ಹೆಚ್ಚು ಆಕರ್ಷಕವಾಗಿ ಕಾಣಲಾರಂಭಿಸಿತು.
ಗುರುರಾಜನಿಗೆ ತಮ್ಮ ಮನೆಯಲ್ಲಿ ಏನಿಲ್ಲವೋ ಅದೆಲ್ಲಾ ಇಲ್ಲಿಂದ ತೆಗೆದುಕೊಳ್ಳಬೇಕೆನ್ನಿಸಿತ್ತು. ಮೂಲೆಯಲ್ಲಿ ಕುಳಿತ ರೇಡಿಯೋ, ಠಣ್ ಎಂದು ಬಾರಿಸುವ ಗಡಿಯಾರ, ಗೂಡಿನಲ್ಲಿಟ್ಟ ಗೋಲಿಗಳ ಚೀಲ, ಮಾಡದಲ್ಲಿ ಮುದ್ದಾಗಿ ಕುಳಿತ ಬಣ್ಣದ ಗಣೇಶ, ತಾರಸಿಯಿಂದ ನೇತು ಹಾಕಿದ ಬಣ್ಣದ ಗಿಣಿಗಳ ಕಟ್ಟು, ಪಡಸಾಲೆಯಲ್ಲಿದ್ದ ತೂಗು ಮಂಚ, ಎಲ್ಲಕ್ಕೂ ಹೆಚ್ಚಾಗಿ ಬಚ್ಚಲು ಮನೆಯಲ್ಲಿದ್ದ ಅವನಪ್ಪ ಕೊಡಿಸದ ಟೂತ್‌ಪೇಸ್ಟು, ಬ್ರಷ್ಷು!
ಹುಲಿಕುಂಟಿ ಅತ್ಯಂತ ಕಡಿಮೆ ಬೆಲೆಯ, ತುಂಬಾ ಕ್ಷುಲ್ಲಕವಾದ ವಸ್ತುವಿಗಾಗಿ ಹುಡುಕಾಡಿದ. ಕೊನೆಗೆ ದೇವರ ಕಟ್ಟೆಯ ಮೇಲೆ ನುಣ್ಣನೆಯ ರಂಗೋಲಿ ತುಂಬಿಟ್ಟಿದ್ದ ಒಂದು ಪುಟ್ಟ ಸ್ಟೀಲಿನ ಲೋಟ ಅವನ ಕಣ್ಣಿಗೆ ಬಿತ್ತು. ಅದು ಮಧ್ಯದಲ್ಲಿ ಸಣ್ಣಗೆ ಸೀಳಿತ್ತು. ಅದೇ ಕಳ್ಳತನಕ್ಕೆ ಅತ್ಯಂತ ಯೋಗ್ಯವಾದ ವಸ್ತುವೆಂದು ಅವನಿಗನ್ನಿಸಿತು. ಅದರಲ್ಲಿದ್ದ ರಂಗೋಲಿಯನ್ನು ಅಲ್ಲೇ ಮೂಲೆಗೆ ಚೆಲ್ಲಿ ಆ ಪುಟ್ಟ ಲೋಟವನ್ನು ಪೈಜಾಮದ ಜೇಬಿಗೆ ಇಳೆ ಬಿಟ್ಟ. ಗುರುರಾಜ ಮೇಜಿನ ಮೇಲಿಟ್ಟಿದ್ದ ಕೂಲಿಂಗ್ಲಾಸನ್ನು ತೋರಿಸಿ "ಅದು ತೊಗೊಳ್ಳೋಣ ಅಪ್ಪ" ಎಂದು ಆಸೆ ತೋರಿದ. "ತಿರುಪತಿ ತಿಮ್ಮಪ್ಪಗೆ ಕಣ್ಣು ಕಾಣಿಸದಂಗೆ ನಾಮ ಹಚ್ಚಿರ್ತಾರೆ ರಾಜ. ಆತ ಕೂಲಿಂಗ್ಲಾಸ್ ತೊಗೊಂಡು ಏನು ಮಾಡ್ತಾನೆ ಬಿಡು" ಎಂದು ಹೇಳಿ, ಅವನ ಕೈ ಹಿಡಿದು ಹೊರ ಬಂದ.
ಪದ್ದಕ್ಕ-ಎಂಕಣ್ಣರ ಕಣ್ಣುಗಳು ಇವರ ಮೈಮೇಲೆಲ್ಲಾ ಹರಿದಾಡಿದವು. "ಹೋಗಿ ಬರ್ತೀವಿ" ಅಂತ ಹುಲಿಕುಂಟಿ ಕೈ ಮುಗಿದು ಮನೆಯ ದಾರಿ ಹಿಡಿದ. ಪದ್ದಕ್ಕ ಒಳಗೆ ಓಡಿ ಹೋಗಿದ್ದೆ ಇಡೀ ಮನೆಯನ್ನು ಶೋಧಿಸಿದಳು. ಚೆಲ್ಲಿದ ರಂಗೋಲಿಯನ್ನು ನೋಡಿದ ಮೇಲೇ ಅವನು ಒಯ್ದ ವಸ್ತುವೇನೆಂದು ಗೊತ್ತಾಗಿದ್ದು. "ಖೋಡಿ ಮುಂಡೆಗಂಡ... ಬಾಯಿ ಸತ್ತ ರಂಡೆಗಂಡ..." ಎಂದು ಹುಲಿಕುಂಟಿಯ ಮುಗ್ಧತೆಯನ್ನು ಬಾಯಿತುಂಬ ಹೊಗಳಿದಳು.
ಹುಲಿಕುಂಟಿ ಮನೆಗೆ ಹೋಗಿದ್ದೇ ಆ ಸೀಳು ಲೋಟವನ್ನು ರಮಾಬಾಯಿಯ ಉಡಿಯಲ್ಲಿ ಹಾಕಿ, ಹೊರಗೆ ಕಟ್ಟೆಯ ಮೇಲೆ ಕುಳಿತು ಬೀಡಿ ಸೇದಲಾರಂಭಿಸಿದ. ತನ್ನ ಗಂಡ ಕಳ್ಳತನ ಮಾಡಿ ತಂದ ಆ ಅಪರೂಪದ ವಸ್ತುವನ್ನು ನೋಡಿ ರಮಾಬಾಯಿ ಹಣೆ ಹಣೆ ಜಜ್ಜಿಕೊಂಡಳು.
"ಕಳ್ಳತನ ಮಾಡುವಾಗ ಯಾರಾದರೂ ನೆನಪಾದರೇನ್ರಿ?"
"ಹೂಂ... ಬರೀ ಪೋಲೀಸರೇ ಕಣ್ಣ ಮುಂದೆ ಬರ್ತಾ ಇದ್ರು"
"ಅಯ್ಯೋ ದೇವರೆ... ಕಳ್ಳತನ ಮಾಡ್ತಾ ಶ್ರೀರಾಮುಲುನ್ನ ನೆನಸ್ಕೋಬೇಕು ಅಂತ ನಿಮಗೆ ಹೇಳೋದೇ ಮರ್ತು ಹೋಯ್ತು ನೋಡ್ರಿ" ಎಂದು ರಮಾಬಾಯಿ ಕೈ ಕೈ ಹಿಸುಕಿಕೊಂಡಳು.
ಸಂಜೆ ಎಲ್ಲಾ ಕೆಲಸ ಮುಗಿದ ಮೇಲೆ ರಮಾಬಾಯಿ ಒಂದಿಷ್ಟು ಕೋಡುಬಳೆಗಳನ್ನು ಕಟ್ಟಿದ ಪೊಟ್ಟಣವನ್ನು ಒಂದು ಕೈಯಲ್ಲಿಯೂ, ಬೆಳಿಗ್ಗೆಯಿಂದ ಕಟ್ಟಿದ್ದ ನಿತ್ಯ ಮಲ್ಲಿಗೆಯ ಮಾಲೆಯ ಪೊಟ್ಟಣವನ್ನು ಮತ್ತೊಂದು ಕೈಯಲ್ಲಿಯೂ ಹಿಡದು, ಕೋಡುಬಳೆ ಪೊಟ್ಟಣ ಕೋತಿಗಳ ಕಣ್ಣಿಗೆ ಬೀಳದಂತೆ ಸೆರಗನ್ನು ಹೊದೆಸಿ, ಪದ್ದಕ್ಕನ ಮನೆಗೆ ಬಂದಳು. ಹೂವಿನ ಪೊಟ್ಟಣವನ್ನು ದೇವರ ಕಟ್ಟೆಯ ಮೇಲಿಟ್ಟು, ಕೋಡುಬಳೆ ಪೊಟ್ಟಣವನ್ನು ಅಡಿಗೆ ಮನೆಯ ಮೂಲೆಯಲ್ಲಿ ಇಟ್ಟು, ಕೈ ಬಚ್ಚಲಿನಲ್ಲಿ ನೀರು ಚುಮುಕಿಸಿಕೊಂಡು ಕೈ ತೊಳೆದುಕೊಂಡು ಹಿತ್ತಲಿಗೆ ಬಂದಳು.
ಕೆಲಸದ ನರಸಕ್ಕ ಅಂದು ಕೈ ಕೊಟ್ಟಿದ್ದರಿಂದ ಪದ್ದಕ್ಕ ಎಲ್ಲಾ ಮುಸುರೆ ಪಾತ್ರೆಗಳನ್ನು ಹರಡಿಕೊಂಡು ಕುಳಿತಿದ್ದಳು. "ಎದ್ದೇಳ್ರಿ ಪದ್ದಕ್ಕ, ನೀವೇನು ತೊಳಿತೀರಿ ಬಿಡ್ರಿ... ಏಳ್ರಿ, ಏಳ್ರಿ..." ಎಂದು ಪದ್ದಕ್ಕನನ್ನು ಎಬ್ಬಿಸಿದಳು. ಹುಣಸೆಹಣ್ಣು, ರಂಗೋಲಿ ಹಾಕಿ ಎಲ್ಲಾ ಪಾತ್ರೆಗಳನ್ನು ಝಳ-ಝಳ ತೊಳೆಯುವಾಗ, ತುಳಸಿ ಕಟ್ಟೆಗೆ ಆತು ಕುಳಿತುಕೊಂಡ ಪದ್ದಕ್ಕ "ದೇವರು ವರ ಕೊಡ್ತೀನಿ ಅಂತ ಪ್ರತ್ಯಕ್ಷ ಆದರೆ, ಒಂದು ಕಟ್ಟು ಬೀಡಿ ಕೇಳಿ ತೃಪ್ತಿ ಆಗಿ ಬಿಡ್ತಾನೆ ನೋಡು" ಎಂದು ಹುಲಿಕುಂಟಿಯ ಭೋಳೆ ಸ್ವಭಾವವನ್ನು ವರ್ಣಿಸಿದಳು. ರಮಾಬಾಯಿ ಬಾವಿಯಿಂದ ಎರಡು ಕೊಡ ನೀರು ಸೇದಿ, ಎಲ್ಲಾ ಪಾತ್ರೆಗಳನ್ನು ತೊಳೆದು, ಸಣ್ಣಂಗ ವಸ್ತ್ರದಿಂದ ಪಾತ್ರೆಗಳ ನೀರನ್ನು ಒರೆಸಿ, ತನ್ನದೇ ಮನೆಯೇನೋ ಎಂಬಂತೆ ಸಹಜವಾಗಿ ಪಾತ್ರೆಗಳನ್ನು ಅವುಗಳ ಸ್ವಸ್ಥಾನದಲ್ಲಿ ಇಟ್ಟಳು.
ಒಂದು ಅರ್ಧ ಗಂಟೆ ಅದೂ ಇದೂ ಇಬ್ಬರೂ ಮಾತನಾಡಿದರು. ಪದ್ದಕ್ಕ ಕುಡಿಯಲು ಒಂದು ಲೋಟ ಪಂಚಾಮೃತವನ್ನು ಕೊಟ್ಟಳು. ಸಂಜೆಯಾದ್ದರಿಂದ ಪಂಚಾಮೃತ ಸ್ವಲ್ಪ ಹುಳಿಯಾಗಿತ್ತು. ಆದರೂ ರುಚಿಯಾಗಿತ್ತು. ಅದನ್ನು ಕುಡಿದ ಮೇಲೆ, ಲೋಟವನ್ನು ಗಲವರಿಸಿದ ರಮಾಬಾಯಿ ಕೇಳಲೋ ಬೇಡವೋ ಎಂಬ ಸಂಕೋಚದಿಂದ "ಪದ್ದಕ್ಕ, ಒಂದು ಕೇಳ್ತೀನಿ. ಆದರೆ ಕೊಡು... ಇಲ್ಲಾ ಅಂದರೆ ಇಲ್ಲಾ ಅನ್ನು..." ಎಂದು ಪೀಠಿಕೆ ಹಾಕಿದಳು. "ಅದೇನೋ ಕೇಳು... ಯಾಕೆ ಅಷ್ಟು ಸಂಕೋಚ ಮಾಡ್ತಿ..." ಎಂದು ಎರಡೆರಡು ಬಾರಿ ಪದ್ದಕ್ಕ ಧೈರ್ಯ ತುಂಬಿದ ಮೇಲೆ ರಮಾಬಾಯಿ ಬಾಯಿ ಬಿಟ್ಟಳು. "ನಮ್ಮ ವರದಣ್ಣ ಶ್ರೀಮಂತ ಅಂತ ನಿಂಗೆ ಗೊತ್ತೇ ಅದೆ. ಈಗ ಮದುವಿ ಆಗೋ ಹುಡುಗನ ಕಡೆಯವರೂ ಅಗರ್ಭ ಶ್ರೀಮಂತರಂತೆ. ದೊಡ್ಡೋರ ಮನಿ ಮದುವಿ, ಜೋರಾಗಿ ಇರ್ತದೆ. ನನ್ನ ಮೈಮೇಲೆ ಈ ಕರಿ ಮಣಿ ಮಂಗಳಸೂತ್ರ ಬಿಟ್ಟರೆ ಇನ್ನೊಂದು ಒಡವಿ ಇಲ್ಲ. ಬಂಧು ಬಳಗದ ಮಧ್ಯೆದಾಗೆ ಎಲ್ಲಿ ಸಸಾರ ಆಗಿ ಬಿಡ್ತೀನೋ ಅಂತ ಭಯ ಆಗ್ತಾ ಅದೆ. ಅದಕ್ಕೇ... ನಿಂದು ಬಂಗಾರದ ಬಳಿ ಕೊಟ್ಟರೆ, ಮದುವಿ ಮನಿಯಾಗೆ ಎರಡು ದಿನ ಹಾಕಿಕೊಂಡು ವಾಪಾಸು ತಂದು ಕೊಡ್ತೀನಿ. ನಿಂಗೆ ಬ್ಯಾಡ ಅನ್ನಿಸಿದರೆ ಬ್ಯಾಡ ನೋಡು. ಬಲವಂತ ಇಲ್ಲ..." ಎಂದು ಸೂರ್ಯನನ್ನೇ ತರಾಟೆಗೆ ತೆಗೆದುಕೊಳ್ಳುವ ರಮಾಬಾಯಿ ಮೈಯೆಲ್ಲಾ ಹಿಡಿಯಾಗಿಸಿಕೊಂಡು ಕೇಳಿದಳು. ಪದ್ದಕ್ಕ ಹಿಂದು-ಮುಂದು ಯೋಚಿಸದೆ ತನ್ನ ಎgಡೂ ಕೈಯಲ್ಲಿರುವ ಎರಡೆರಡು ಬಳೆಗಳನ್ನು ತೆಗೆದು ಅವಳ ಕೈಗಿಟ್ಟು "ಅದಕ್ಯಾಕೆ ಇಷ್ಟು ಸಂಕೋಚ ಪಡ್ತಿ. ಲಕ್ಷಣವಾಗಿ ಹಾಕಿಕೊಂಡು ಮದುವಿ ಮನಿಯಾಗೆ ತಿರುಗಾಡು" ಎಂದು ಹೇಳಿದಳು. ಪದ್ದಕ್ಕ ಕೊಡಲಿಕ್ಕಿಲ್ಲ ಎಂದೇ ನಿರ್ಧರಿಸಿಕೊಂಡು ಬಂದಿದ್ದ ರಮಾಬಾಯಿಗೆ ಹೀಗೆ ನಿರಾಯಾಸವಾಗಿ ಕೈಯಲ್ಲಿ ಬಂಗಾರದ ಬಳೆಗಳು ಬಂದಿದ್ದು ನೋಡಿ ಮೈಯಲ್ಲಿ ವಿಚಿತ್ರ ಕಂಪನವಾಗಿ, ಪದ್ದಕ್ಕನ ಒಳ್ಳೆತನಕ್ಕೆ, ತನ್ನ ಅಸಹಾಯಕತೆಗೆ, ಬಳೆ ಸಿಕ್ಕ ಸಂತೋಷಕ್ಕೆ ಕಣ್ಣಲ್ಲಿ ನೀರು ಬಂದು ಬಿಟ್ಟಿತು. "ಕೊಡಲ್ಲ ಅಂದುಕೊಂಡಿದ್ದೆ ನೋಡು ಪದ್ದಕ್ಕ" ಎಂದು ಗದ್ಗದಿತಳಾಗಿ ಹೇಳಿದಳು. ಪದ್ದಕ್ಕ ಅವಳ ಬೆನ್ನನ್ನು ಸವರಿ "ಸಂಜಿ ಹೊತ್ತು ಮುತ್ತೈದಿ ಸಾವಿತ್ರಿ ಕಣ್ಣೀರು ಹಾಕಬೇಡ ಬಿಡು" ಎಂದು ಸಮಾಧಾನ ಮಾಡಿದಳು.
ಪೇರಿಸಿಟ್ಟ ಹಾಸಿಗೆಗಳ ಕೆಳಗಿದ್ದ ಟ್ರಂಕು ಬೆಳಕು ಕಂಡಿತು. ಹಳೆಯ ಸಾಮಾನುಗಳನ್ನೆಲ್ಲಾ ಹೊರ ತೆಗೆದು, ಧೂಳನ್ನೆಲ್ಲಾ ಜಾಡಿಸಿ, ಒದ್ದೆ ಬಟ್ಟೆಯಲ್ಲಿ ಒರೆಸಿ, ಬಿಸಿಲಿಗಿಟ್ಟು ಒಣಗಿಸಿ, ಚಿಲಕದ ಬೆಂಡು ತೆಗೆಯಲಾಯಿತು. ಮನೆಯವರೆಲ್ಲರ ಬಟ್ಟೆಗಳನ್ನು ಒಗೆದು ಅದನ್ನು ತುಂಬಿದಳು. ತನ್ನ ಮದುವೆಯ ಸೀರೆಗಳನ್ನು ನವಿರಾಗಿ ಸವರಿ ಇಟ್ಟಳು. ಒಂದಿಷ್ಟು ಕೋಡುಬಳೆ, ರವೆ ಲಾಡು, ಚಟ್ಣಿಪುಡಿ-ಮೆಂತೆದಿಟ್ಟುಗಳು ಪ್ಯಾಕ್ ಆದವು. ತಿರುಪತಿಯಲ್ಲಿ ತುಂಬಾ ಚಳಿ ಎಂದು ಯಾರೋ ಹೇಳಿದ್ದು ಕೇಳಿ ಗುರುರಾಜನ ಸ್ವೆಟರ್ ಕೂಡಾ ಟ್ರಂಕ್ ಸೇರಿತು. ಎರಡು ನುಸಿ ಗುಳಿಗೆ, ಎಣ್ಣೆ, ಬಾಚಣಿಕೆ, ಒಂದು ಜನಿವಾರ, ಪುಟ್ಟ ದೇವರ ಪಟ, ನಿಂಬೆ ಹಣ್ಣು, ಎರಡು ಕನ್ನಡ ಕಾದಂಬರಿಗಳು ಟ್ರಂಕನ್ನು ಸೇರಿದವು.
ಕಾಶವ್ವ, ಗೋಪಣ್ಣ, ರಾಧಕ್ಕ, ವೆಂಕಣ್ಣಾಚಾರ್ಯರು, ಪದ್ದಕ್ಕ - ಎಲ್ಲರೂ ರಮಾಬಾಯಿ ಸಂಸಾರವನ್ನು ಯಾತ್ರೆಗೆ ಕಳುಹಿಸಿ ಕೊಡಲು ಬಸ್ ನಿಲ್ದಾಣದವರೆಗೆ ಬಂದರು. ಗೋಪಣ್ಣ ಮಾಸ್ತರರು ಈ ಹಿಂದೊಮ್ಮೆ ತಿರುಪತಿ ಪ್ರವಾಸ ಮಾಡಿ ಬಂದವರಾದ ಕಾರಣ ಹೇಗೆ ರೈಲನ್ನು ಬದಲಾಯಿಸಬೇಕು, ಯಾರನ್ನು ನಂಬಬೇಕು, ಯಾರನ್ನು ನಂಬಬಾರದು, ಏನೆಲ್ಲಾ ನೋಡಬೇಕು ಅಂತೆಲ್ಲಾ ತಿಳಿಸಿ "ರೊಕ್ಕದ ವಿಷಯದಾಗೆ ಮಾತ್ರ ಭಾಳ ಹುಷಾರಾಗಿರು ಹುಲಿಕುಂಟಿ. ಆ ಊರಾಗೆ ಬರೀ ಮನುಷ್ಯರೊಂದೇ ಅಲ್ಲ, ಆ ದೇವರಿಗೂ ರೊಕ್ಕ ಕಂಡರೆ ಭಾಳ ಆಸೆ" ಎಂದು ಅಧಿಕೃತ ವಾಣಿಯಲ್ಲಿ ಎಲ್ಲರಿಗೂ ಕೇಳುವಂತೆ ಹೇಳಿದರು. ಬಸ್ಸು ಹತ್ತುವದಕ್ಕೆ ಮುಂಚೆ ಪದ್ದಕ್ಕ ತನ್ನ ಸೆರಗಿನಲ್ಲಿ ಕಟ್ಟಿಕೊಂಡಿದ್ದ ರಾಯರ ಫಲಮಂತ್ರಾಕ್ಷತೆಯನ್ನು ತೆಗೆದು ಮೂವರ ತಲೆಯಲ್ಲಿಯೂ ಎರಡೆರಡು ಕಾಳನ್ನು ಇಟ್ಟು "ಕ್ಷೇಮವಾಗಿ ಹೋಗಿ ಲಾಭವಾಗಿ ಹಿಂತಿರುಗಿ ಬರ್ರಿ" ಎಂದು ಹರಸಿದಳು.
ರಮಾಬಾಯಿಯನ್ನು ಬಸ್ಸಿನ ಮೂಲೆಗೆ ಕರೆದುಕೊಂಡು ಹೋದ ಕಾಶವ್ವ, ಅವಳ ಕೈಗೆ ಒಂದು ಕರಿಮಣಿಯ ಮಂಗಳಸೂತ್ರವನ್ನು ಕೊಟ್ಟು "ಇದನ್ನ ಹುಂಡಿನಾಗೆ ಹಾಕು. ಆ ಸಾಲಗಾರ ವೆಂಕಟಗೆ ಮುಂದಿನ ಜನ್ಮದಲ್ಲಾದರೂ ನನ್ನ ಗಂಡ ಅನ್ನಿಸಿಕೊಳ್ಳೋ ಭಂಡ ಸೂಳೆ ಮಗಂಗೆ ಒಂದು ನಾಲ್ಕು ವರ್ಷ ಆಯುಷ್ಯ ಜಾಸ್ತಿ ಹಾಕು ಅಂತ ಹೇಳು" ಎಂದಳು.
ಬಸ್ಸು ಮರೆಯಾಗುವವರೆಗೂ ಎಲ್ಲರೂ ಕೈ ಬೀಸುತ್ತಿದ್ದರು. ನಾರಿಹಳ್ಳದ ಬಳಿ ಬರುವಷ್ಟರಲ್ಲಿ ಗುರುರಾಜ ಅವರಮ್ಮನ ತೊಡೆಯ ಮೇಲೆ ಮಲಗಿಕೊಂಡ. ಹಳ್ಳದ ದಡದ ಮೇಲಿದ್ದ ಕಣವಿ ಹನುಮಂತರಾಯನಿಗೆ ಕೈ ಮುಗಿದ ರಮಾಬಾಯಿ, ನಿದ್ದೆಯಲ್ಲಿದ್ದ ಮಗನ ಎರಡು ಕೈಗಳನ್ನು ಜೋಡಿಸಿ ಅವನಿಂದಲೂ ಕೈ ಮುಗಿಸಿದಳು.
ರೈಲು ಬರುವದಕ್ಕೆ ಇನ್ನೂ ಮೂರು ಗಂಟೆ ಇದೆ ಎನ್ನುವಾಗಲೇ ಹುಲಿಕುಂಟಿಯ ಪರಿವಾರ ಬಳ್ಳಾರಿ ರೈಲ್ವೇ ಸ್ಟೇಷನ್ ಸೇರಿತ್ತು. ಅಪ್ಪ-ಮಗರಿಬ್ಬರಿಗೂ ಇದು ಮೊದಲನೆಯ ರೈಲು ಪ್ರಯಾಣವಾಗಿತ್ತು. ರಮಾಬಾಯಿ ಅವರಣ್ಣನ ಜೊತೆ ಒಂದೆರಡು ಬಾರಿ ರೈಲಲ್ಲಿ ಪ್ರಯಾಣ ಮಾಡಿದ್ದಳು. ಆದರೂ ಅವಳಿಗೂ ಒಂದು ರೀತಿಯ ಅಧೈರ್ಯ ಮೂಡಿತ್ತು. ಒಂದಿಬ್ಬರ ಬಳಿ ಯಾವಾಗ ರೈಲು ಬರುತ್ತೆ ಎಂದು ವಿಚಾರಿಸಿದಳು. ಬಸ್ಸಿನಂತೆ ರೈಲಿನ ಮೂತಿಗೆ ಯಾವೂರಿಂದ ಯಾವೂರಿಗೆ ಹೋಗುತ್ತೆ ಎಂಬ ಬೋರ್ಡು ಯಾಕಿಲ್ಲ ಎಂದು ಗುರುರಾಜ ಕೇಳುತ್ತಿದ್ದ. ರೈಲ್ವೇ ನೋಟೀಸು ಬೋರ್ಡಿನಲ್ಲಿ ಹಚ್ಚಿದ್ದ ಒಂದು ನೋಟೀಸು ತಮ್ಮ ಮುದ್ರಣಾಲಯದಲ್ಲಿ ಮುದ್ರಣಗೊಂಡಿದ್ದು ಎಂದು ಪತ್ತೆ ಹಚ್ಚಿದ ಹುಲಿಕುಂಟಿ ಒಂದು ವಿಚಿತ್ರ ರೋಮಾಂಚನಕ್ಕೊಳಗಾಗಿದ್ದ.
ಅಲ್ಲಿದ್ದ ಅಂಗಡಿಯೊಂದರಲ್ಲಿ ನೇರಳೆ ಬಣ್ಣದ ಪೇಪರಿನಲ್ಲಿ ಸುತ್ತಿದ, ಚಪ್ಪಟೆಯ ಹೊಸ ಬಗೆಯ ಚಾಕಲೇಟನ್ನು ನೋಡಿದ್ದೇ ಗುರುರಾಜ ಬೇಕೆಂದು ಹಠ ಹಿಡಿದ. ರಮಾಬಾಯಿ ಒಂದೆರಡು ಬಾರಿ ಗದರಿದಳು. ಕೇಳಲಿಲ್ಲ. ಕೊನೆಗೆ ಬೇಸತ್ತು ಅದನ್ನು ಕೊಡಿಸಲು ಮುಂದಾದಳು. ಆದರೆ ಅಂಗಡಿಯವನು ಒಂದು ಚಾಕಲೇಟಿಗೆ ಒಂದು ರೂಪಾಯಿ ಎಂದು ಹೇಳಿದ್ದನ್ನು ಕೇಳಿ ಹೌಹಾರಿದಳು. "ಒಂದು ರೂಪಾಯಿಗೆ ಎರಡು ಲೀಟರು ಹಾಲು ಬರ್ತದಲ್ಲಪ್ಪ. ಇದಕ್ಯಾಕೆ ಇಷ್ಟು ರೊಕ್ಕ? ಹತ್ತು ಪೈಸೆಗೆ ಒಂದು ಮಾಡಿ ಕೊಡು" ಎಂದು ಅಂಗಡಿಯವನನ್ನು ದಬಾಯಿಸಿದಳು. "ಅದು ಫಾರಿನ್ ಚಾಕಲೇಟಮ್ಮೋ... ಜಾಸ್ತಿ ರೊಕ್ಕ" ಎಂದು ಅಂಗಡಿಯವನು ವಿವರಿಸಿದ. "ಗುರ್ರಾಜ, ನಿಂಬೆ ಹಣ್ಣಿನ ಪಪ್ಪರಮೆಂಟು ತೊಗೋ... ಕಂಬರದಟ್ಟು ತೊಗೋ... ಶುಂಠಿ ಪಪ್ಪರಮೆಂಟು ತೊಗೋ..." ಎಂದು ಏನೇ ಪರ್ಯಾಯಗಳನ್ನು ಸೂಚಿಸಿದರೂ ಗುರುರಾಜ ಒಪ್ಪಲಿಲ್ಲ. ರಮಾಬಾಯಿ ಅವನ ಬೆನ್ನಿಗೆ ಎರಡು ಬಿಟ್ಟಳು. ಈಗ ಅಳು ತಾರಕಕ್ಕೇರಿ, ನೆಲದ ಮೇಲೆ ಬಿದ್ದು ಹೊರಳಾಡಲಾರಂಭಿಸಿದ. ಸುತ್ತಮುತ್ತಲಿದ್ದ ಜನರೆಲ್ಲಾ ಇವರನ್ನೇ ನೋಡಲಾರಂಭಿಸಿದರು. ಕೊನೆಗೆ ಬೇರೆ ದಾರಿ ಕಾಣದೆ ಒಂದು ರೂಪಾಯಿ ಕೊಟ್ಟು ಅಂಗೈ ಅಗಲದ ಆ ಚಪ್ಪಟೆ ಚಾಕೊಲೇಟನ್ನು ರಮಾಬಾಯಿ ಖರೀದಿಸಿದಳು.
ಪೇಪರನ್ನು ಹಗೂರಕ್ಕೆ ತೆಗೆದು, ಒಳಗಿನ ಒಂದು ಬಿಲ್ಲೆಯನ್ನು ಗುರ್ರಾಜನಿಗೆ ಕೊಟ್ಟಳು. ಫಕ್ಕನೆ ಬಾಯಿಗೆ ಹಾಕಿಕೊಂಡ. ಒಂದು ನಿಮಿಷ ಅದನ್ನು ನಮಿಲಿದ. ಆ ಹೊಸ ರುಚಿ ಅವನಿಗೆ ಹೊಂದಿಕೆಯಾಗಲಿಲ್ಲ. ಪ್ಲಾಟ್‌ಫಾರ್ಮಿನ ತುದಿಗೆ ಹೋಗಿ, ರೈಲಿನ ಹಳಿಗಳ ಮೇಲೆ "ಥೂ..." ಎಂದು ಉಗಿದು, ಬಾಯಿಗೆ ನೀರು ಹಾಕಿಕೊಂಡು ಮುಕ್ಕಳಿಸಿ, ಬೆರಳಿಂದ ನಾಲಿಗೆ ಹಲ್ಲುಗಳನ್ನು ತಿಕ್ಕಿ ಬಾಯನ್ನು ಸ್ವಚ್ಛ ಮಾಡಿಕೊಂಡ. "ಭೇಷಿಲ್ಲೇನೋ..." ಎಂದು ರಮಾಬಾಯಿ ಕೇಳಿದಳು. "ಊಹೂಂ... ಒಂಥರಾ ಅದೆ..." ಎಂದು ಮತ್ತೊಂದು ಬಿಲ್ಲೆಯನ್ನು ತಿನ್ನಲು ನಿರಾಕರಿಸಿಬಿಟ್ಟ. "ಒಂದು ರೂಪಾಯಿ ಕೊಟ್ಟನಲ್ಲೋ..." ಎಂದು ರಮಾಬಾಯಿ ಪೇಚಾಡಿದಳು. "ನೀವನ್ನ ಒಂದು ಬಿಲ್ಲೆ ತಿಂದು ನೋಡ್ರಿ" ಎಂದು ಹುಲಿಕುಂಟಿಗೆ ಹೇಳಿದಳು. ಆಗಲೇ ಬೀಡಿಯೊಂದನ್ನು ಹಚ್ಚಿ ದಮ್ಮೆಳೆಯುತ್ತಿದ್ದ ಹುಲಿಕುಂಟಿ ಚಾಕಲೇಟಿನಂತಹ ಮಕ್ಕಳ ತಿನಿಸನ್ನು ತಿನ್ನುವುದು ತನ್ನ ಗಂಡಸ್ತನಕ್ಕೆ ಕಡಿಮೆಯೆನ್ನುವಂತೆ "ಯೇ... ಹೋಗೇ..." ಎಂದು ನಿರಾಕರಿಸಿದ. ಕೊನೆಗೆ ರಮಾಬಾಯಿಯೇ ಒಂದು ಬಿಲ್ಲೆಯನ್ನು ಬಾಯಿಗೆ ಹಾಕಿಕೊಂಡಳು. ಇನ್ನೇನು ಉಗಿದು ಬಿಡುತ್ತಾಳೆ ಎಂದು ಗುರುರಾಜ ಅವರಮ್ಮನನ್ನು ನೋಡಲಾರಂಭಿಸಿದ. ಹುಲಿಕುಂಟಿಯೂ ಏನು ಮಾಡುತ್ತಾಳೋ ಎಂದು ಕಾದ. ನಿಧಾನಕ್ಕೆ ಆ ಬಿಲ್ಲೆಯನ್ನು ನಾಲಿಗೆಯಿಂದ ಕರಗಿಸುತ್ತಾ, ರಸವನ್ನು ನುಂಗುತ್ತಾ, ವಿಚಿತ್ರ ಮುಖಭಾವವನ್ನು ತೋರಿಸುತ್ತಾ ರಮಾಬಾಯಿ ಇಡೀ ಬಿಲ್ಲೆಯನ್ನು ತಿಂದು, ಎರಡನೆ ಬಿಲ್ಲೆಯನ್ನು ಮುರಿದು ಬಾಯಿಗೆ ಹಾಕಿಕೊಂಡಳು. ಗುರುರಾಜ "ಭೇಷದೇನಮ್ಮ..." ಎಂದು ಕೇಳಿದ. "ನುಣ್ಣಗದೆ... ಒಂಥರಾ ಅದೆ..." ಎಂದಳು. ಮೂರನೆಯ ಬಿಲ್ಲೆಯನ್ನೂ ಮುರಿದು ಬಾಯಿಗೆ ಹಾಕಿಕೊಂಡಳು. "ಇಷ್ಟ ಆಯ್ತೇನೆ?" ಎಂದು ಈ ಬಾರಿ ಹುಲಿಕುಂಟಿ ಕೇಳಿದ. "ಮೊದಲನೆ ಬಿಲ್ಲೆಗಿಂತ ಮೂರನೇದು ಭೇಷದೆ" ಎಂದಳು.
ನಿಧಾನಕ್ಕೆ ಒಂದೊಂದೇ ಬಿಲ್ಲೆಗಳನ್ನು ತಿನ್ನುತ್ತ, ಕೊನೆಯ ಮೂರು ಬಿಲ್ಲೆಗಳನ್ನು ಒಟ್ಟಿಗೇ ಬಾಯಿಗೆ ಹಾಕಿಕೊಂಡಳು. ತನಗೂ ಒಂದು ಕೊಡು ಅಂತ ಕೇಳಬೇಕೆಂದು ಹುಲಿಕುಂಟಿಗೆ ಅನ್ನಿಸಿದರೂ, ಮೊದಲು ನಿರಾಕರಿಸಿದ್ದರಿಂದ ಈಗ ಕೇಳಲು ಸಂಕೋಚಗೊಂಡ. ತನಗಂತ ಕೊಂಡಿದ್ದನ್ನು ತನ್ನಮ್ಮ ಗುಳುಂ ಮಾಡಿದ್ದು ನೋಡಿ ಗುರುರಾಜನಿಗೆ ಸಿಟ್ಟು ಬಂತು. "ನಂಗೆ ಶುಂಠಿ ಪಪ್ಪರಮೆಂಟು ಬೇಕು..." ಎಂದು ಹಠ ಮಾಡಲಾರಂಭಿಸಿದ. ಅವನ ಅಳುವಿಗೆ ಸೊಪ್ಪು ಹಾಕದೆ ರಮಾಬಾಯಿ ಚಾಕಲೇಟಿನ ರುಚಿಯನ್ನು ಚಪ್ಪರಿಸುತ್ತಿದ್ದಳು.
ಅಷ್ಟರಲ್ಲಿ ನೆಲದಲ್ಲಿ ಸಣ್ಣಗೆ ಕಂಪನವಾಯ್ತು. ಕೂಲಿಗಳು ಅಲ್ಲಿಂದಿಲ್ಲಿ, ಇಲ್ಲಿಂದಲ್ಲಿ ಓಡಾಡಲಾರಂಭಿಸಿದರು. ಮೂರನೆಯ ಬೆಲ್ಲು ಢಣ್ ಢಣ್ ಅಂತ ಬಡಿದರು. ದೂರದಲ್ಲೆಲ್ಲೋ ರೈಲಿನ ಕೂಗು. ಕುಳಿತ ಜನರೆಲ್ಲಾ ಎದ್ದು ನಿಂತರು. ತಾರಕದಲ್ಲಿ ಅಳುತ್ತಿದ್ದ ಗುರುರಾಜ ಗಪ್‌ಚುಪ್ ಆಗಿ ಸದ್ದಿಲ್ಲದೆ ಅವರಮ್ಮನ ಬಳಿ ಓಡಿ ಬಂದು ಅವಳ ಕೈ ಹಿಡಿದುಕೊಂಡು ದೂರದಲ್ಲಿ ಕಾಣುತ್ತಿರುವ ಚಲಿಸುವ ದೀಪವನ್ನು ಬೆರಗುಗಣ್ಣಿಂದ ನೋಡಲಾರಂಭಿಸಿದ. ಸೇದುತ್ತಿದ್ದ ಬೀಡಿಯನ್ನು ಅರ್ಧಕ್ಕೇ ಒಗೆದ ಹುಲಿಕುಂಟಿ ಹೆಂಡತಿಯ ಪಕ್ಕ ಬಂದು, ಟ್ರಂಕನ್ನು ತಲೆಯ ಮೇಲೆ ಹೊತ್ತುಕೊಂಡ.
ರೈಲು "ಕೂ..." ಎಂದು ಕೂಗಿದ್ದಕ್ಕೆ ಮೈಯಲ್ಲೆಲ್ಲಾ ಕಂಪನವಾಯ್ತು. ಮೂವರೂ ಮತ್ತಷ್ಟು ಹತ್ತಿರವಾದರು.
"ಚುಕ್ ಬುಕ್... ಚುಕ್ ಬುಕ್..." ರೈಲು ಹತ್ತಿರ ಬಂತು. "ಡಬ್ ಡಬ್... ಡಬ್ ಡಬ್..." ಎದೆಯ ಸದ್ದು ಜೋರಾಯಿತು. "ದೋಸೆ... ವಡೆ... ಮೊಸರನ್ನ... ಟೀ... ಕಾಫಿ..." ವ್ಯಾಪಾರಿಗಳು ಆವೇಶದಿಂದ ಕೂಗಲಾರಂಭಿಸಿದರು.
ಜೆನರಲ್ ಕಂಪಾರ್ಟಮೆಂಟಿಗಾಗಿ ಆ ತುದಿಯಿಂದ ಈ ತುದಿಗೆ, ಈ ತುದಿಯಿಂದ ಆ ತುದಿಗೆ ಅಡ್ಡಾಡಿದರು. ಅವರಿವರನ್ನು ಕೇಳಿದರು. ಕೊನೆಗೂ ಸಿಕ್ಕಿತು. ಬಾಗಿಲ ಬಳಿ ಗುಂಪೋ ಗುಂಪು. ಆ ಗುಂಪಿನೊಳಗೆ ಹೇಗೆ ನುಗ್ಗಬೇಕೆಂದು ತಿಳಿಯದೆ ಸ್ವಲ್ಪ ದೂರ ನಿಂತರು. ಗುರುರಾಜನ ಕೈಯನ್ನು ರಮಾಬಾಯಿ ಗಟ್ಟಿಯಾಗಿ ಹಿಡಿದುಕೊಂಡಳು. ಟ್ರಂಕನ್ನು ಹೊತ್ತುಕೊಂಡಂತೆಯೇ ಹುಲಿಕುಂಟಿ ರಮಾಬಾಯಿಯ ಕೈಯನ್ನು ಹಿಡಿದುಕೊಂಡ.
ನಿಧಾನಕ್ಕೆ ಮೂವರು ಗುಂಪಿನೊಳಗೆ ಒಬ್ಬರಾದರು.
ಬೆಟ್ಟದ ಬುಡಕ್ಕೆ ಬಂದಾಗ ಮಧ್ಯಾಹ್ನವಾಗಿತ್ತು. ನೆತ್ತಿ ಸುಡುವಷ್ಟು ಬಿಸಿಲಿತ್ತು. "ಓಂ ನಮೋ ವೆಂಕಟೇಶ... ಓಂ ನಮೋ ತಿರುಮಲೇಶ..." ಅಂತ ಘಂಟಸಾಲ ರಾಗವಾಗಿ ಹಾಡುತ್ತಲೇ ಇದ್ದ.
ಬೆಟ್ಟ ಹತ್ತುವದಕ್ಕೆ ನಾಲ್ಕು ತಾಸು ಬೇಕೆಂದರು. ಟ್ರಂಕನ್ನು ಅಲ್ಲಿಯೇ ಕೊಟ್ಟರೆ ಅದನ್ನು ಮೇಕ್ಕೆ ತಲುಪಿಸುವ ವ್ಯವಸ್ಥೆಯಿದೆ ಎಂದು ಹೇಳಿದರು. ಆದರೆ ಹಾಗೆ ಟ್ರಂಕು ಕೊಡುವದಕ್ಕೆ ಮುಂಚೆ ಅದಕ್ಕೆ ಒಳ್ಳೆಯ ಬೀಗ ಹಾಕಬೇಕೆಂದು ಹೇಳಿದರು. ಇವರ ಬಳಿಯಲ್ಲಿ ಬೀಗವಿರಲಿಲ್ಲ. ಒಂದು ಚಿಕ್ಕ ಹಗ್ಗದಿಂದಲೇ ಟ್ರಂಕನ್ನು ಕಟ್ಟಿದ್ದರು. ಅಲ್ಲೇ ಹತ್ತಿರದ ಅಂಗಡಿಯಲ್ಲಿ ಬೀಗಕ್ಕಾಗಿ ವಿಚಾರಿಸಿದರು. ಮೂರು ರೂಪಾಯಿ. ಅಷ್ಟೊಂದು ಹಣವನ್ನು ಕೊಡುವುದು ಬೇಡವೆಂದು ನಿರ್ಧರಿಸಿ ಟ್ರಂಕನ್ನು ತಲೆಯ ಮೇಲಿಟ್ಟುಕೊಂಡು ಹುಲಿಕುಂಟಿ, ಬಟ್ಟೆಯ ಗಂಟೊಂದನ್ನು ಬಗಲಲ್ಲಿಟ್ಟುಕೊಂಡ ರಮಾಬಾಯಿ, ಅವಳ ಕೈ ಹಿಡಿದುಕೊಂಡ ಗುರುರಾಜ ಪರ್ವತಾರೋಹಣದ ಮೊದಲ ಮೆಟ್ಟಿಲನ್ನು ತುಳಿದರು. ಯಾಕೋ ಅನುಮಾನ ಬಂದ ರಮಾಬಾಯಿ "ಮೆಟ್ಟಿಲುಗಳು ಛಂದಾಗಿ ಕಾಣಿಸ್ತಾ ಅವೇನ್ರಿ?" ಎಂದು ಹುಲಿಕುಂಟಿಯನ್ನು ಕೇಳಿದಳು. "ಯಾಕೆ? ಭೇಷೇ ಕಾಣಿಸ್ತಾ ಅವಲ್ಲಾ..." ಎಂದು ಅವನುತ್ತರಿಸಿದ ಮೇಲೆ ಸಮಾಧಾನವಾಯ್ತು.
ಗುರುರಾಜ ಪುಟಪುಟನೆ ಹತ್ತಾರು ಮೆಟ್ಟಿಲುಗಳನ್ನು ಏರಿ "ನಾನೇ ಫಷ್ಟು" ಎಂದು ಕೂಗುತ್ತಿದ್ದ. ಮೆಟ್ಟಿಲುಗಳ ಮೇಲೆ ಬರೆದ ಅಂಕೆಗಳನ್ನು ಒಂದೊಂದಾಗಿಯೇ ಎಣಿಸುತ್ತಿದ್ದ. ಹುಲಿಕುಂಟಿ, ರಮಾಬಾಯಿ ನಿಧಾನಕ್ಕೆ ಒಂದೊಂದೇ ಮೆಟ್ಟಿಲನ್ನು ಹತ್ತಲಾರಂಭಿಸಿದರು. ಒಂದಿಷ್ಟು ದೂರ ರಮಾಬಾಯಿ ಟ್ರಂಕನ್ನು ತಲೆಯ ಮೇಲಿಟ್ಟುಕೊಂಡಳು.
ಗಾಳಿಗೋಪುರದ ಬಳಿ ಬರುವಷ್ಟರಲ್ಲಿ ಮೂವರೂ ಸುಸ್ತಾಗಿ ಹೋದರು. ಸೂರ್ಯ ಸ್ವಲ್ಪ ತಣ್ಣಗಾಗುತ್ತಿದ್ದ. ಅಲ್ಲಿಯೇ ಮಂಟಪದಲ್ಲಿ ಕುಳಿತುಕೊಂಡರು. ಮಂಟಪದಲ್ಲಿ ಯಾರೋ ಸನ್ಯಾಸಿಯೊಬ್ಬರು ಶ್ರೀನಿವಾಸ ಕಲ್ಯಾಣದ ಕತೆಯನ್ನು ತೆಲುಗಿನಲ್ಲಿ ಹೇಳುತ್ತಿದ್ದರು. ಹತ್ತಾರು ಜನ ಭಕ್ತಾದಿಗಳು ಅವರ ಸುತ್ತ ಕುಳಿತು ಕತೆ ಕೇಳುತ್ತಿದ್ದರು. ವೆಂಕಟೇಶ ಕಾಡಿನಲ್ಲಿ ಭೇಟೆಗೆ ಹೋದಾಗ ಪದ್ಮಾವತಿಯನ್ನು ಭೇಟಿಯಾಗುವ ಪ್ರಸಂಗವದು. ಹುಲಿಕುಂಟಿಗೆ ತೆಲುಗು ಬರುವದಿಲ್ಲವಾದ ಕಾರಣ "ಏನಂತೆ... ಏನಂತೆ..." ಎಂದು ರಮಾಬಾಯಿಯನ್ನು ಪೀಡಿಸಿ ಕತೆಯನ್ನು ಕನ್ನಡಕ್ಕೆ ಅನುವಾದ ಮಾಡಿಸಿಕೊಂಡ.
ಶ್ರೀನಿವಾಸ ಭೇಟೆಗಾಗಿ ಕಾಡಿಗೆ ಕುದುರೆಯೇರಿ ಬಂದಿದ್ದಾನೆ. ಒಂದು ಮದಿಸಿದ ಆನೆಯು ಎದುರಾಗಿದೆ. ಅದನ್ನು ಓಡಿಸಿಕೊಂಡು ಹೋಗಿದ್ದಾನೆ. ಅದೇ ಸಮಯದಲ್ಲಿ ಪದ್ಮಾವತಿ ತನ್ನ ಸಖಿಯರೊಂದಿಗೆ ಜಲಕ್ರೀಡೆಯಲ್ಲಿ ತೊಡಗಿದ್ದಾಳೆ. ಈ ಮದ್ದಾನೆ ಅವರಿದ್ದಲ್ಲಿಗೇ ಓಡಿ ಬಂದು ಅವರನ್ನು ಹೆದರಿಸಿಬಿಟ್ಟು ಕಾಡಿನಲ್ಲಿ ಮರೆಯಾಗಿದೆ. ಅನಂತರ ಶ್ರೀನಿವಾಸ ಅಲ್ಲಿಗೆ ಬಂದಿದ್ದಾನೆ. ಅವನು ಬೇಕೆಂದೇ ತಮ್ಮನ್ನು ಚುಡಾಯಿಸಲು ಹಾಗೆ ಆನೆಯನ್ನು ತಮ್ಮ ಕಡೆ ಓಡಿಸಿದ್ದಾನೆ ಎಂದು ತಪ್ಪಾರ್ಥ ಮಾಡಿಕೊಂಡ ಪದ್ಮಾವತಿ ಮತ್ತವಳ ಸಖಿಯರು ಸಿಟ್ಟಿನಿಂದ ಕಲ್ಲುಗಳನ್ನು ಬೀಸಿ ಶ್ರೀನಿವಾಸನ ಕುದುರೆಯನ್ನು ಕೊಂದಿದ್ದಾರೆ. ಪದ್ಮಾವತಿ ಬೀಸಿದ ಒಂದು ಕಲ್ಲು ಸೀದಾ ಶ್ರೀನಿವಾಸನ ಹಣೆಗೆ ಬಡೆದು ಬಿಟ್ಟಿದೆ. ನೋವಿನಿಂದ ಮನೆಗೆ ಬಂದ ಮಗನನ್ನು ಬಕುಳಾವತಿ ಆರೈಕೆ ಮಾಡುತ್ತಾಳೆ.
ಅಲ್ಲಿಗೆ ಅಂದಿನ ಅಧ್ಯಾಯವನ್ನು ಆ ಸನ್ಯಾಸಿ ಮುಕ್ತಾಯ ಮಾಡಿದರು. ಮಂಗಳಾರತಿ ಮಾಡಿ, ಎಲ್ಲರಿಗೂ ತಿನ್ನಲು ಪ್ರಸಾದವನ್ನು ಕೊಟ್ಟರು. ಕುಡಿಯಲು ಪಾನಕವನ್ನು ಬಾಳೆಯ ದೊನ್ನೆಯಲ್ಲಿ ಕೊಟ್ಟರು. ದೊನ್ನೆ ಬೇಡವೆಂದೂ, ಲೋಟ ಬೇಕೇ ಬೇಕೆಂದು ಗುರುರಾಜ ಹಠ ಮಾಡಿದ. ರಮಾಬಾಯಿ ಸಿಡಿಮಿಡಿ ಗುಟ್ಟುತ್ತಲೇ ಗಂಟನ್ನು ಬಿಚ್ಚಿ ಸೀಳು ಲೋಟವನ್ನು ಕೊಟ್ಟಳು. ಅದರಲ್ಲಿ ಪಾನಕ ಹಾಕಿಸಿಕೊಂಡು ಕುಡಿಯುವಾಗ ಒಂದಿಷ್ಟು ಪಾನಕ ಆ ಸೀಳಿನ ಮೂಲಕ ಅವನ ಅಂಗಿಯ ಮೇಲೆಲ್ಲಾ ಚೆಲ್ಲಿತು. ಅವನನ್ನು ದೂರಕ್ಕೆ ಕರೆದುಕೊಂಡು ಹೋಗಿ, ನೀರಿನಿಂದ ಅವನ ಅಂಗಿ-ಮೈಯನ್ನೆಲ್ಲಾ ಒರೆಸಿ "ಬೇಡ ಅಂದದ್ದು ಮಾಡಿ ನನ್ನ ಗೋಳು ಹೊಯ್ಕೊಳ್ತಿ ನೋಡು" ಎಂದು ಅವನನ್ನು ಗದರಿಸಿದಳು.
ಮತ್ತೆ ಪರ್ವತಾರೋಹಣ ಮುಂದುವರೆಯಿತು. ಏಳು ಪರ್ವತಗಳನ್ನು ದಾಟುವುದು ಸುಲಭದ ಮಾತೆ? ದಾರಿ ಸವೆಯಲು ರಮಾಬಾಯಿ, ಗಂಡ-ಮಗನಿಗೆ ಮತ್ತೊಮ್ಮೆ ಸನ್ಯಾಸಿ ಹೇಳಿದ ಶ್ರೀನಿವಾಸ ಕಲ್ಯಾಣದ ಕಥಾಭಾಗವನ್ನು ಹೇಳಿದಳು. ಆ ಕಥಾಭಾಗ ಯಾಕೋ ಅವಳಿಗೆ ಇಷ್ಟವಾಗಲಿಲ್ಲ. "ನೀವು ಏನೇ ಹೇಳ್ರಿ. ಸಾಕ್ಷಾತ್ ದೇವರಿಗೆ ಹಾಗೆ ಪದ್ಮಾವತಿ ಕಲ್ಲು ಹೊಡಿಬಾರದಾಗಿತ್ತು" ಎಂದು ಅಭಿಪ್ರಾಯ ಮಂಡಿಸಿದಳು. "ಏನೋ ಬಿಡೆ, ಪ್ರೀತಿಗೆ ಹಂಗೆ ಹೊಡೆದಿರ್ತಾಳೆ" ಎಂದು ಹುಲಿಕುಂಟಿ ಸಮಜಾಯಿಷಿ ಕೊಟ್ಟ. ರಮಾಬಾಯಿ ಅದನ್ನು ಒಪ್ಪಲೇ ಇಲ್ಲ. "ದೇವರು ಅಂದ್ರೆ ದೇವರೇ... ಆತನಾದ್ರೂ ಆ ಬೀಸಿದ ಕಲ್ಲನ್ನು ಹೂ ಮಾಡಬೇಕಿತ್ತು" ಎಂದು ಕಸಿವಿಸಿ ವ್ಯಕ್ತ ಪಡಿಸಿದಳು.
ಸುಮಾರು ಒಂದು ಗಂಟೆ ಮೆಟ್ಟಿಲುಗಳನ್ನೇರಿದ ಮೇಲೆ ಸ್ವಲ್ಪ ಆರಾಮ ತೆಗೆದುಕೊಳ್ಳಲು ಮೂವರೂ ಒಂದೆಡೆ ಕುಳಿತರು. ಹುಲಿಕುಂಟಿಗೆ ಮೊಣಕಾಲು ನೋವಿರುವದರಿಂದ ಅವನ ಕೈಲೆ ಒಮ್ಮೆಲೆ ಸಾಕಷ್ಟು ಮೆಟ್ಟಿಲುಗಳನ್ನು ಹತ್ತಲಾಗುತ್ತಿರಲಿಲ್ಲ. ಗುರುರಾಜ ನೀರು ಬೇಕು ಅಂದ. ಆಗ ಲೋಟಕ್ಕಾಗಿ ಹುಡುಕುತ್ತಾಳೆ - ಊಹೂಂ - ಸೀಳು ಲೋಟವಿರಲಿಲ್ಲ. ರಮಾಬಾಯಿ ಹೌಹಾರಿ ಹೋದಳು. ಮತ್ತೆ ಗಂಟನ್ನೂ, ಟ್ರಂಕನ್ನು ಕೆದಕಿದಳು. ಅವಳ ದುರಾದೃಷ್ಟಕ್ಕೆ ಲೋಟವಿರಲಿಲ್ಲ. ಪಾನಕ ಕುಡಿದು ಅದನ್ನು ಗಾಳಿಗೋಪುರದ ಬಳಿಯೇ ಗುರುರಾಜ ಇಟ್ಟಿದ್ದ.
ಮತ್ತದನ್ನು ತರಲು ರಮಾಬಾಯಿಯೇ ಹೊರಟಳು. ಹುಲಿಕುಂಟಿಗೆ ಮೊಣಕಾಲು ನೋವು, ಗುರುರಾಜನನ್ನು ಒಬ್ಬನೇ ಕಳುಹಿಸಲು ಭಯ. ದೇವರ ಹುಂಡಿಗೆ ಹಾಕುವ ಲೋಟವನ್ನು ಹಾಗೆ ಎಲ್ಲೆಲ್ಲಿಯೋ ಬಿಟ್ಟು ಬಿಡಲು ಸಾಧ್ಯವೆ? ತಾನೇ ಹೊರಟಳು. ಈಗಾಗಲೇ ಹತ್ತಿದ ನೂರಾರು ಮೆಟ್ಟಿಲುಗಳನ್ನು ಮತ್ತೆ ಇಳಿದು ಹತ್ತಬೇಕೆಂಬ ವಿಚಾರವೇ ದುಃಖ ತರಿಸುವಂತಿತ್ತು.
ಗಾಳಿಗೋಪುರದ ಮಂಟಪ ನಿರ್ಜನವಾಗಿತ್ತು. ಪಾನಕ ಕುಡಿದು ಬಿಸಾಕಿದ ದೊಣ್ಣೆಗಳು ಅಲ್ಲೇ ಬಿದ್ದಿದ್ದವು. ಒಂದಿಷ್ಟು ನೊಣಗಳು ಅವುಗಳ ಮೇಲೆ ಕುಳಿತಿದ್ದವು. ಸೀಳು ಲೋಟಕ್ಕಾಗಿ ಅಲ್ಲೆಲ್ಲಾ ಕಣ್ಣಾಡಿಸಿದಳು. ಕಾಣಲಿಲ್ಲ. ಯಾರೋ ಒಂದಿಷ್ಟು ಜನ ಯಾತ್ರಿಗಳು ಮೇಲಕ್ಕೆ ಹತ್ತಿ ಬಂದರು. ಏನು ಹುಡುಕುತ್ತಿರುವೆಯೆಂದು ವಿಚಾರಿಸಿ, "ಏನೂ ಬೇಸರ ಮಾಡಿಕೊಳ್ಳೋದು ಬೇಡ. ತನಗೆ ಅಂತ ತರಿಸಿಕೊಂಡಿದ್ದನ್ನು ದೇವರು ಹೇಗೋ ತೊಗೊಂಡಿರ್ತಾನೆ" ಎಂದು ಸಮಾಧಾನ ಹೇಳಿ ಮುಂದಕ್ಕೆ ಹೊರಟರು.
ಮಂಟಪಕ್ಕೆ ಹೊಂದಿಕೊಂಡಂತೆಯೇ ಒಂದು ಪುಟ್ಟ ಗುಡಿಯಿತ್ತು. ಮಂಟಪದ ಒಂದು ಕಂಬಕ್ಕೆ ಯಾರೋ ವೆಂಕಟೇಶನ ಚಿತ್ರವನ್ನು ಕೆತ್ತಿದ್ದರಿಂದ, ಅದಕ್ಕೇ ಸ್ವಲ್ಪ ಮರೆ ಮಾಡಿ ಗುಡಿಯಂತೆ ಮಾಡಿದ್ದರು. ರಮಾಬಾಯಿ ದೇವರ ಮುಂದೆ ಹೋಗಿ ಕುಳಿತಳು. ದೇವರ ಮುಂದೆ ದೀಪ ಸಣ್ಣಗೆ ಉರಿಯುತ್ತಿತ್ತು. ಕಣ್ಣು ಮುಚ್ಚಿ ಎರಡು ನಿಮಿಷ ಮೌನವಾಗಿ ಕುಳಿತಳು. ಕಣ್ಣು ಬಿಟ್ಟಾಗ ಲೋಟ ಕಣ್ಣಿಗೆ ಬಿತ್ತು! ಯಾರೋ ಲೋಟದ ಮೇಲೆ ತುಪ್ಪದ ದೀಪವನ್ನು ಹಚ್ಚಿಟ್ಟಿದ್ದರು. ಗುಡಿಯಲ್ಲಿನ ಕತ್ತಲಿನಿಂದಾಗಿ ತಕ್ಷಣ ಕಣ್ಣಿಗೆ ಬಿದ್ದಿರಲಿಲ್ಲ.
ದೀಪ ಶಾಂತವಾಗುವವರೆಗೆ ಕಾದಿದ್ದು, ನಂತರ ಲೋಟವನ್ನು ನೀರಿನಿಂದ ತೊಳೆದು, ಸೆರಗಿನಿಂದ ಒರೆಸಿಕೊಂಡು ಮೇಲಕ್ಕೆ ಬಂದಳು. ಗುರುರಾಜ ಕಾಲು ನೋವು ಎಂದು ಹಠ ಮಾಡುತ್ತಿದ್ದನಾದ ಕಾರಣ ಅವನ ಪುಟ್ಟ ಕಾಲುಗಳನ್ನು ತೊಡೆಯ ಮೇಲಿಟ್ಟುಕೊಂಡು ಹುಲಿಕುಂಟಿ ಒತ್ತುತ್ತಾ, ಅವನಿಗೊಂದು ಕತೆ ಹೇಳುತ್ತಿದ್ದ. ಇವಳನ್ನು ನೋಡಿದ ತಕ್ಷಣ ಇಬ್ಬರಿಗೂ ಖುಷಿ ಆಯ್ತು. "ಸಿಕ್ತೇನೆ?" ಎಂದು ಹುಲಿಕುಂಟಿ ತವಕದಿಂದ ಕೇಳಿದ. ಒಂದೆರಡು ಗಳಿಗೆ ಕುಳಿತು ವಿಶ್ರಮಿಸಿಕೊಂಡ ರಮಾಬಾಯಿ ಎಲ್ಲಾ ಘಟನೆಗಳನ್ನು ವಿವರವಾಗಿ ಹೇಳಿದಳು.
ಮತ್ತೆ ಒಂದೆರಡು ತಾಸು ಬೆಟ್ಟ ಹತ್ತಿದರು. ಕೆಳಗಿಳಿಯುತ್ತಿದ್ದ ಯಾತ್ರಿಗಳನ್ನು "ಇನ್ನೆಷ್ಟು ದೂರ?" ಎಂದು ಕೇಳಿದರು. "ಇನ್ನೇನು ಬಂತು... ಸ್ವಲ್ಪೇ ದೂರ..." ಎಂದು ಅವರು ಸಮಾಧಾನ ಹೇಳಿದರು. ಗುರುರಾಜ ಇನ್ನು ಹತ್ತುವುದು ತನ್ನ ಕೈಯಲ್ಲಿ ಆಗುವದಿಲ್ಲ ಎಂದು ಹಠ ಮಾಡಿದ್ದಕ್ಕೆ, ಒಂದಷ್ಟು ದೂರ ರಮಾಬಾಯಿ ಅವನನ್ನು ಎತ್ತಿಕೊಂಡಿದ್ದಳು.
ಸಂಜೆಯಾಗುತ್ತಿತ್ತು. ಬೆಳಕು ಮರೆಯಾಗಿ, ಚಂದ್ರ ಮೂಡಿದ. ಬೆಳದಿಂಗಳು ಢಾಳಾಗಿ ಪಸರಿಸಿತ್ತು. ವಾತಾವರಣ ತಂಪಾಗುತ್ತಿತ್ತು. ಆ ತಂಪಿನಲ್ಲೂ ದಣಿವಿನಿಂದ ಬೆವರಿಳಿಯಲಾರಂಭಿಸಿದ್ದಕ್ಕೆ ರಮಾಬಾಯಿ ಸೆರೆಗಿನಿಂದ ಮುಖ ಒರೆಸಿಕೊಂಡು ತಲೆ ಎತ್ತಿದರೆ "ಫಳ್..." ಎಂದು ದೂರದಲ್ಲಿ ಏನೋ ಹೊಳೆದಂತೆ ಕಂಡಿತು. ಕಣ್ಣುಜ್ಜಿ ಕೊಂಡು ನೋಡಿದಳು. ಅನುಮಾನವೇ ಇಲ್ಲ - ವೆಂಕಪ್ಪನ ಬಂಗಾರದ ಗೋಪುರ ಕಣ್ಣಿಗೆ ಬಿದ್ದಿತ್ತು. ಹುಲಿಕುಂಟಿ, ಗುರುರಾಜನಿಗೆ ತೋರಿಸಿದಳು. ಯಾರೋ ಯಾತ್ರಾರ್ಥಿಗಳು ಹತ್ತಿರ ಬಂದಾಗ ವಿಚಾರಿಸಿದರೆ "ಹೌದು, ಇದೇ ತಿರುಮಲ. ಅದೇ ಗೋಪುರ" ಎಂದು ಹೇಳಿದರು. ಮೂವರಿಗೂ ತುಂಬಾ ಖುಷಿಯಾಯಿತು. ಕಣ್ಣು ತುಂಬಿಕೊಂಡ ರಮಾಬಾಯಿ "ವೆಂಕಪ್ಪ, ಅಂತೂ ಕರೆಸಿಗೊಂಡು ಬಿಟ್ಟಿ" ಎಂದು ಗಟ್ಟಿಯಾಗಿ ಹೇಳಿ ಅಲ್ಲೇ ರಸ್ತೆಯ ಮೇಲೆ ನಮಸ್ಕಾರ ಮಾಡಿದಳು. ಹುಲಿಕುಂಟಿ, ಗುರುರಾಜ ಸಾಷ್ಟಾಂಗ ನಮಸ್ಕಾರ ಮಾಡಿದರು.
ವರದಣ್ಣ ಹಂದರಕ್ಕೆ ನಾಂದಿ ಪೂಜೆ ಮಾಡಿದ ಕಾಯಿಯನ್ನು ಕಟ್ಟಿಸುತ್ತಿದ್ದ. "ವರದಣ್ಣಾ..." ಎನ್ನುವ ಧ್ವನಿ ಕೇಳಿದ್ದೇ ತಂಗಿ ಬಂದಿದ್ದು ಗೊತ್ತಾಗಿ ಹೋಯಿತು. ಅವಳ ಹತ್ತಿರ ಹೋಗಿ, ಮೈದಡವಿ, ಗುರುರಾಜನನ್ನು ಎತ್ತಿಕೊಂಡು "ಎಷ್ಟು ಹೊತ್ತು ಮಾಡಿ ಬಿಟ್ಟಿಯಲ್ಲೇ... ಬೆಳಿಗ್ಗೆಯಿಂದ ನಿನ್ನ ದಾರಿ ಕಾಯ್ತಾ ಇದ್ದೆ" ಎಂದು ಹೇಳುವಷ್ಟರಲ್ಲಿ ಸಂತೋಷಕ್ಕೆ ಅವನ ಕಣ್ಣುಗಳು ತುಂಬಿದ್ದವು. "ಬೆಟ್ಟ ಹತ್ತಿ ಬಂದಿವಿ... ಅದಕ್ಕೇ ತಡ ಆಯ್ತು" ಎಂದು ರಮಾಬಾಯಿ ನಗುತ್ತಾ ಹೇಳಿದಳು. ಹುಲಿಕುಂಟಿಯ ತಲೆಯಿಂದ ಟ್ರಂಕನ್ನು ಕೆಳಗಿಳಿಸಿ, "ಭೇಷಿದಿರೇನ್ರಿ?" ಎಂದು ವಿಚಾರಿಸಿದ. ಹುಲಿಕುಂಟಿ ಗೋಣು ಹಾಕಿ ನಕ್ಕ. "ಬಡಾನ ಸ್ನಾನ ಮಾಡಿ ರೆಡಿಯಾಗ್ರಿ. ಬೀಗರು ಬರೋ ಹೊತ್ತಾಯ್ತು. ಫಳಾರಕ್ಕೆ ಪೆಸರಟ್ಟು ಮಾಡಿಸೀನಿ" ಎಂದು ಅವಸರ ಮಾಡಿದ.
ಬೀಗರು ಸ್ವಲ್ಪ ತಡವಾಗಿಯೇ ಬಂದರು. ಚಿತ್ತೂರಿನ ಬಳಿ ಬಸ್ಸು ಕೆಟ್ಟು ನಿಂತಿತ್ತಂತೆ. ಅವರು ಬಂದು ಸ್ನಾನ ಮಾಡಿ ತಯಾರಾಗುವ ಹೊತ್ತಿಗೆ ಸಂಜೆ ಎಂಟಾಯಿತು. ಷೋಡಷೋಪಚಾರಕ್ಕೆ ಸಾಕಷ್ಟು ಸಾಮಾನುಗಳನ್ನು ತಂದಿದ್ದರು. ವರದಣ್ಣ ಕೂಡಾ ವರೋಪಚಾರಕ್ಕೆ ಸಾಕಷ್ಟು ತಯಾರಿ ಮಾಡಿದ್ದ. ಹುಡಗನಿಗೆ ಪಂಚೆ, ಅಂಗಿ, ವಾಚು, ಒಂದು ಟೇಪ್‌ರಿಕಾರ್ಡರ್ ಮತ್ತು ವಿಶೇಷವಾಗಿ ಒಂದು ಬಜಾಜ್ ಸ್ಕೂಟರ್. ಬೀಗರಿಗೆ ಗೌರವ ತೋರಿಸಲು ಸಕ್ಕರೆ ಅಚ್ಚುಗಳು, ಕೊಬ್ಬರಿ ಸಾಮಾನುಗಳು, ಬಣ್ಣದ ಬೀಸಣಿಕೆ, ವೆಲ್ವಟ್ ಬಟ್ಟೆ ಹೊದಿಸಿ ತಯಾರಿಸಿದ ತೆಂಗಿನಕಾಯಿ. ರಮಾಬಾಯಿ ವಿಶೇಷವಾಗಿ ಗಿಟಕದ ಕೊಬ್ಬರಿಯಿಂದ ಹಂಪಿಯ ಕಲ್ಲಿನ ತೇರನ್ನು ಮಾಡಿ ತಂದಿದ್ದಳು. ಆ ತೇರಿನ ಗಾಲಿಗಳಿಗೆ ವಧು-ವರರ ಹೆಸರನ್ನು ಬರೆದಿದ್ದಳು.
ಆದರೆ ಬೀಗರು ಎದುರುಗೊಳ್ಳುವದು ಮತ್ತಷ್ಟು ತಡವಾಯ್ತು. ಬೀಗರು ತಮ್ಮ ಜೊತೆ ಒಬ್ಬ ಸ್ವಾಮಿಗಳನ್ನು ಕರೆತಂದಿದ್ದರು. ಸುಖಾನಂದ ಸ್ವಾಮಿಗಳು ಅಂತ ಅವರ ಹೆಸರು. ಬೀಗನಿಗೆ ಅವರ ಮಾತೆಂದರೆ ವೇದವಾಕ್ಯವಂತೆ. ಅವರ ಅಪ್ಪಣೆಯಿಲ್ಲದೆ ಯಾವ ಕಾರ್ಯವನ್ನೂ ಮಾಡುವುದಿಲ್ಲವಂತೆ.
ವಧು-ವರ ಕೂಡಬೇಕಾದ ಮಂಟಪದಲ್ಲಿ ಕೃಷ್ಣಾಜಿನವನ್ನು ಹಾಸಿ ಸ್ವಾಮಿಗಳನ್ನು ಕೂಡಿಸಿಬಿಟ್ಟರು. ಆತನಿಗೆ ಪಾದಪೂಜೆ ಸಾಂಗೋಪಾಂಗವಾಗಿ ನಡೆಯಿತು. ಎಲ್ಲರೂ ಸಾಲಲ್ಲಿ ನಿಂತು ಆತನಿಗೆ ನಮಸ್ಕಾರ ಮಾಡಿ, ಫಲ ಪುಷ್ಪ ಪಡೆದರು. ಎಷ್ಟಾದರೂ ಸ್ವಾಮಿಗಳು ಗಂಡಿನ ಕಡೆಯರಲ್ಲವೆ? ಮರ್ಯಾದೆ ಕೊಡಲೇಬೇಕು. ಹೆಣ್ಣಿನವರೂ ಆತನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು. ಹುಡುಗ-ಹುಡುಗಿ ವೇದಿಕೆಗೆ ಬರುವಷ್ಟರಲ್ಲಿ ರಾತ್ರಿ ಹನ್ನೆರಡಾಯ್ತು. ಮಕ್ಕಳೆಲ್ಲಾ ಆಗಲೇ ಹಾಸಿದ ಜಮಖಾನದ ಮೇಲೆ ಮಲಗಿ ಬಿಟ್ಟಿದ್ದರು.
ಬೀಗ-ಬೀಗರು ಪರಿಚಯ ಮಾಡಿಕೊಳ್ಳುವುದು ಶುರುವಾಯ್ತು. ತನ್ನನ್ನು ಯಾವಾಗ ಕರೆಯುತ್ತಾರೋ ಎಂದು ರಮಾಬಾಯಿ ಆತಂಕದಿಂದ ಕಾದಳು. ಹುಡುಗನ ಅತ್ತೆ-ಮಾವರನ್ನು ಎದುರುಗೊಳ್ಳುವದಕ್ಕೆ ರಮಾಬಾಯಿ-ಹುಲಿಕುಂಟಿಯನ್ನು ಕರೆದರು. "ಈಕಿ ಒಬ್ಬಾಕಿನೇ ನನ್ನ ಕಡೆಯವಳು. ಇನ್ನ ಉಳಿದವರೆಲ್ಲಾ ನಮ್ಮನೆಯಾಕಿಯ ಬಳಗ" ಎಂದು ವರದಣ್ಣ ಅವರಿಗೆ ತಂಗಿಯ ಕುಟುಂಬವನ್ನು ಪರಿಚಯ ಮಾಡಿಕೊಟ್ಟ. ಹುಡುಗನ ಅತ್ತೆ ಕುಳ್ಳಗೆ ದಪ್ಪಗೆ ಇದ್ದಳು. ಮೈತುಂಬಾ ಬಂಗಾರ ಹೇರಿಕೊಂಡಿದ್ದಳು. ಪುಷ್ಯರಾಗದ ವಜ್ರದ ನೆಕ್ಲೇಸೊಂದು ಆಕೆಯ ಎದೆಯ ಮೇಲೆ ಫಳಫಳನೆ ಹೊಳೆಯುತ್ತಿತ್ತು. ಆಕೆಯ ಆಭರಣಗಳ ಹೊಳಪಿನಲ್ಲಿ ರಮಾಬಾಯಿಯ ಬಳೆಗಳು ಹೊಳಪು ಕಳೆದುಕೊಂಡವು. ಒಬ್ಬರ ಮೇಲೊಬ್ಬರು ಬುಕ್ಕಿಟ್ಟು ಹಾಕಿ, ಹಣೆಗೆ ಕುಂಕುಮ ಹಚ್ಚಿ, ಸಕ್ಕರೆ-ಕೊಬ್ಬರಿಯನ್ನು ಅವರ ಬಾಯಲ್ಲಿ ಇವರು, ಇವರ ಬಾಯಲ್ಲಿ ಅವರು ಹಾಕಿಕೊಂಡು ಪರಿಚಯವನ್ನು ಸಿಹಿಯಿಂದ ಶುರು ಮಾಡಿಕೊಂಡರು. ಪರಿಚಯ ಮುಗಿದ ಮೇಲೆ ಹುಲಿಕುಂಟಿ "ಆತನೂ ಬೀಡಿ ಸೇದ್ತಾನೆ. ನಾವಿಬ್ಬರು ಬಾಯಾಗೆ ಸಕ್ಕರಿ ಹಾಕೋದರ ಬದಲು ಬೀಡಿ ಹಾಕಿಕೊಂಡು ಪರಿಚಯ ಮಾಡಿಕೋಬೋದಿತ್ತು" ಎಂದು ರಮಾಬಾಯಿಗೆ ಹೇಳಿ ಬೈಯಿಸಿಕೊಂಡ. ಸಮಯ ಹೊಂದಿಸಿಕೊಂಡು ರಮಾಬಾಯಿ ಆ ಅತ್ತೆಯ ಹತ್ತಿರ ಕುಳಿತು ವಜ್ರದ ನೆಕ್ಲೆಸನ್ನು ಕೈಯಲ್ಲಿ ತೆಗೆದುಕೊಂಡು ನೋಡಿ ಬೆಲೆಯೆಷ್ಟು, ಎಷ್ಟು ಕ್ಯಾರೆಟ್ಟು ಅಂತೆಲ್ಲಾ ವಿಚಾರಿಸಿ, ಆ ನೆಕ್ಲೆಸನ್ನು ಕೈಯಿಂದ ಮೃದುವಾಗಿ ಸವರಿ ಪುಳಕಗೊಂಡಳು.
ರಾತ್ರಿ ಊಟಕ್ಕೆ ಲಾಡು ಮಾಡಿಸಿದ್ದರು. "ಇದೇನಣ್ಣ, ಮಂಡಿಗಿ ಮಾಡಿಸೋದರ ಬದಲು ಲಾಡು ಮಾಡಿಸಿದೀಯ" ಎಂದು ರಮಾಬಾಯಿ ಆಕ್ಷೇಪ ಎತ್ತಿದಳು. "ಮಂಡಿಗಿ ರುಚಿ ನಮ್ಮ ಬಳ್ಳಾರಿಯೋರಿಗಷ್ಟೇ ಗೊತ್ತಮ್ಮ. ಇವರಿಗೆ ಗೊತ್ತಿಲ್ಲ" ಎಂದು ವರದಣ್ಣ ವಿವರಣೆ ಕೊಟ್ಟ. ಗುರುರಾಜ ಮಲಗಿ ಬಿಟ್ಟಿದ್ದನಾದ್ದರಿಂದ ಅವನಿಗಾಗಿ ಎರಡು ಲಾಡುಗಳನ್ನು ತೆಗೆದಿಟ್ಟುಕೊಂಡಳು.
ಗಂಡ ಮಗನನ್ನು ಆದಷ್ಟು ಬೇಗ ಎಬ್ಬಿಸಿ, ಸಂಡಾಸು-ಬಚ್ಚಲುಗಳ ಮುಂದೆ ದೊಡ್ಡ ಸರದಿ ಸೃಷ್ಟಿಯಾಗುವದಕ್ಕೆ ಮುಂಚೆ ಸ್ನಾನ ಮಾಡಿಸಿ, ತಾನು ಶುಚಿಯಾಗಿ ಮದುವೆಯ ದಿನಕ್ಕೆ ತನ್ನ ಸಂಸಾರವನ್ನು ಸಿದ್ಧ ಮಾಡಿಬಿಟ್ಟಳು. ಆದರೆ ಬೆಳಿಗ್ಗಿನ ಕಾಫಿಯೂ ಬರಲಿಲ್ಲ, ತಿಂಡಿಯ ಹೊತ್ತಾದರೂ ಅದರ ಸುದ್ದಿಯಿಲ್ಲ. ಅದಕ್ಕೆ ಬದಲು ಯಾರೋ ಚಿಕ್ಕ ಹುಡುಗಿ ಮೂವರಿಗೂ ಎಂತಹದೋ ಪ್ರಸಾದವನ್ನು ಕೊಟ್ಟು "ಸ್ವಾಮಿಗಳು ಕೊಟ್ಟಾರೆ. ಎಲ್ಲಾರೂ ತಿನ್ನಲೇ ಬೇಕಂತೆ" ಎಂದು ಹೇಳಿದಳು. ಹುಲಿಕುಂಟಿ ಏನೂ ತಿನ್ನುವ ಮನಸ್ಸಿಲ್ಲದೆ ಬೇಡ ಅಂದ. "ಇಲ್ಲ ತಿನ್ನಲೇ ಬೇಕಂತೆ" ಎಂದು ಆ ಹುಡುಗಿ ಆಗ್ರಹ ಪಡಿಸಿದಳು. ಬೇರೆ ದಾರಿಯಿಲ್ಲದೆ ಬಾಯಿಗೆ ಹಾಕಿಕೊಂಡ.
ಹುಲಿಕುಂಟಿ ಯಾಕೋ ರಾತ್ರಿಯಿಂದ ಹೊಟ್ಟೆ ನೋವು ಅನ್ನಲಾರಂಭಿಸಿದ್ದ. "ಈ ಸುಡುಗಾಡು ಮದುವಿ ಮನಿ ಊಟನೇ ಹಿಂಗೆ. ನಿಶ ರಾತ್ರಿನಾಗೆ ಉಂಡರೆ ಎಲ್ಲಿ ತಡೀತದೆ. ಬೆಳಿಗ್ಗೆ ದೊಡ್ಡಿಗೆ ಹೋಗಿ ಬಂದ ಮೇಲೆ ಸರಿ ಆಗ್ತದೇಳ್ರಿ" ಎಂದು ವಟಗುಟ್ಟಿ, ಮತ್ತೆ ಅವನಿಗೆ ಮದ್ದು ಮಾಡಿ ಕೊಡುವ ಉತ್ಸಾಹವಿಲ್ಲದೆ ಆ ರಾತ್ರಿ ಹಾಗೆಯೇ ಮಲಗಿದ್ದಳು. ಆದರೆ ಈಗ ಮುಂಜಾನೆ ಕೂಡಾ ಹುಲಿಕುಂಟಿ ಹೊಟ್ಟೆನೋವೆಂದು ಹೇಳಿದ. ಜೊತೆಗೆ ಅವನ ಮುಖವೂ ಬಾಡಿರುವುದು ರಮಾಬಾಯಿಗೆ ತಿಳಿಯಿತು. ಒಂದಿಷ್ಟು ಮೆಂತ್ಯ-ಮೊಸರು ಮುಕ್ಕಿದರೆ ಸರಿ ಹೋಗಬಹುದೆಂದು ಭಾವಿಸಿ ಉಗ್ರಾಣದ ಬಳಿ ಹೋದಳು. ಯಾಕೋ ಮದುವೆ ಮನೆಯಲ್ಲಿ ಏನೋ ಗುಸುಗುಸು ಶುರುವಾಗಿದೆಯೆಂದನ್ನಿಸಿ ಬಿಟ್ಟಿತು.
ಉಗ್ರಾಣದ ಜವಾಬ್ದಾರಿಯನ್ನು ವೈನಿಯ ತಮ್ಮ ಹೊತ್ತಿದ್ದ. ಯಾರನ್ನೂ ಒಳಗೆ ಬಿಟ್ಟುಕೊಳ್ಳದೆ ದಿನಸಿಯನ್ನು ಕಾಯುತ್ತಿದ್ದ. ಇವಳು ಬಾಗಿಲ ಬಳಿ ನಿಂತು ಮೊಸರು-ಮೆಂತ್ಯ ಕೇಳಿ ಪಡೆದಳು. ತನ್ನ ಗಂಡಗೆ ತುಂಬಾ ಹೊಟ್ಟೆ ನೋವು ಬಂದಿರುವ ವಿಚಾರ ತಿಳಿಸಿದಳು. ಅವನು ಆ ಮಾತನ್ನೇ ಕಾಯುತ್ತಿರುವವನಂತೆ ಯಾರಿಗೋ ಕೂಗಿ "ಇವರ ಯಜಮಾನರಿಗೆ ಹೊಟ್ಟೆ ನೋವಂತೆ" ಎಂದು ಸಾರಿದ. ತನ್ನ ಗಂಡನ ಹೊಟ್ಟೆ ನೋವನ್ನು ಕೂಗಿ ಮತ್ತೊಬ್ಬರಿಗೆ ತಿಳಿಸುವಂತಹ ವಿಷಯವಲ್ಲವಾದ್ದರಿಂದ ರಮಾಬಾಯಿಗೆ ಸಿಟ್ಟು ಬಂತು. "ನಿನ್ನ ಹೆಂಡತಿ ನಿನ್ನೆ ಊಟಕ್ಕೆ ಕೂತಾಗ ಹೂಸು ಬಿಟ್ಟಳು. ಅದನ್ನೂ ಕೂಗಿ ಹೇಳು" ಎಂದು ಅವನಿಗೆ ಬಿಸಿ ತಾಕಿಸಿ ಬಂದಳು. ಆದರೆ ಅವಳು ವಾಪಾಸು ತನ್ನ ರೂಮಿಗೆ ಹೋಗುವದರೊಳಗೆ ಇನ್ನೂ ನಾಲ್ಕು ಜನ ಅವಳ ಬಳಿ ಬಂದು "ಗಂಡಗೆ ಹೊಟ್ಟೆ ನೋವಂತೆ, ಹೌದಾ?" ಎಂದು ವಿಚಾರಿಸಿದರು. ಹೊಟ್ಟೆನೋವು ಯಾಕಿಂತಹ ದೊಡ್ಡ ವಿಷಯವಾಗಬೇಕೆಂದು ಅವಳಿಗೆ ತಿಳಿಯಲಿಲ್ಲ.
ಹುಲಿಕುಂಟಿ ಬಾಯಲ್ಲಿ ಒಂದಿಷ್ಟು ಮೆಂತ್ಯ ಹಾಕಿಕೊಂಡು, ಮೊಸರಿನ ಜೊತೆ ಅದನ್ನು ನುಂಗಿದ. ಅದೆಲ್ಲಿ ಹೊರ ಬಂದು ಬಿಡುತ್ತದೋ ಎಂಬ ಆತಂಕದಲ್ಲಿ ಒಂದಿಷ್ಟು ನೀರನ್ನು ಗಟಗಟನೆ ಕುಡಿದ. ಆ ಅವಸರದಲ್ಲಿ ಚೂರು ನೀರು ಅಂಗಿಯ ಮೇಲೆ ಚೆಲ್ಲಿತು. ಹೊಟ್ಟೆನೋವು ಮತ್ತಷ್ಟು ಜಾಸ್ತಿಯಾದಂತಾಗಿ ಹಾಗೇ ನೆಲದ ಮೇಲೆ ಅಡ್ಡಾದ.
ಅವರ ಕೋಣೆಗೆ ನಾಲ್ಕು ಜನ ಗಂಡಸರು, ವರನ ಅತ್ತೆ ಒಳ ಬಂದರು. ವರನ ಅತ್ತೆ ತುಂಬಾ ದುಃಖದಲ್ಲಿದ್ದಂತೆ ಕಂಡಿತು. ಅವರ ಕಣ್ಣುಗಳು ಕೆಂಪಗಾಗಿದ್ದವು. ಅಡ್ಡಾಗಿದ್ದ ಹುಲಿಕುಂಟಿ ಎದ್ದು ಕುಳಿತ. ರಮಾಬಾಯಿ ಅವರೆಲ್ಲರೂ ಹೀಗೆ ಒಟ್ಟಾಗಿ ಬಂದಿದ್ದು ನೋಡಿ ವಿಷಯ ಏನೋ ಗಹನವಾದದ್ದೇ ಇರಬೇಕೆಂದು ಚಿಂತೆಗೆ ಬಿದ್ದಳು.
ಅದರಲ್ಲಿದ್ದ ಒಬ್ಬ ಗಂಡಸು "ನಮ್ಮ ಅತ್ತಿಗೆ ವಜ್ರದ ನೆಕ್ಲೆಸ್ ಕಳುವಾಗಿದೆ" ಎಂದು ವಿಷಯದ ಮೂಲವನ್ನು ಬಿಚ್ಚಿಟ್ಟ. ಅಷ್ಟು ಹೇಳಿದ್ದೇ ತಡ ವರನ ಅತ್ತೆ ಬಿಕ್ಕಿಸಿ ಅಳಲಾರಂಭಿಸಿದಳು. "ನಿನ್ನೆ ನೀವು ಮುಟ್ಟಿ ಮುಟ್ಟಿ ನೋಡಿದ್ರಲ್ಲಾ, ಅದೇ ನೆಕ್ಲೇಸು" ಎಂದು ಅಳುತ್ತಲೇ ಹೇಳಿದಳು. "ನೀನು ಸ್ವಲ್ಪ ಬಾಯಿ ಮುಚ್ಚಿಕೊಂಡು ಸುಮ್ಮನಿರು" ಎಂದು ಆಕೆಯ ಗಂಡ ಬೈಯ್ದ. "ರಾತ್ರಿಯಿಂದ ಹುಡುಕ್ತಿದೀವಿ ಸಿಕ್ಕಿಲ್ಲ. ನಮ್ಮ ಸ್ವಾಮಿಗಳನ್ನು ಕೇಳಿದ್ರೆ, ಇಲ್ಲಿಯೇ ಯಾರೋ ಸಂಬಂಧಿಕರು ಕಳ್ಳತನ ಮಾಡಿದಾರೆ. ಈ ಕಲ್ಯಾಣ ಮಂಟಪದಲ್ಲಿಯೇ ಬಚ್ಚಿಟ್ಟಿದ್ದಾರೆ ಅಂತ ಹೇಳಿ ಪ್ರಸಾದವನ್ನ ಮಂತ್ರಿಸಿ ಕೊಟ್ಟರು. ಯಾರು ಕಳ್ಳತನ ಮಾಡಿದ್ದಾರೋ ಅವರು ಆ ಪ್ರಸಾದ ತಿಂದ ಕೂಡಲೆ ಹೊಟ್ಟೆ ನೋವು ಶುರುವಾಗುತ್ತೆ" ಎಂದು ವಿಷಯವನ್ನು ಪೂರ್ತಿಯಾಗಿ ಬಿಚ್ಚಿಟ್ಟ. ಇವರು ತಮ್ಮ ಕೋಣೆಗೆ ಬಂದಿರುವ ಉದ್ದೇಶ ತಿಳಿದು ರಮಾಬಾಯಿಗೆ ಜೀವ ಬಾಯಿಗೆ ಬಂತು. "ನಮ್ಮ ಮನೆಯವರೇನೂ ಕಳ್ಳರಲ್ಲ. ನಿನ್ನೆ ರಾತ್ರಿಯಿಂದ ಹೊಟ್ಟೆ ನೋವು ಅಂತಿದಾರೆ. ಅವರಿಗೆ ಆಗಾಗ ಹಾಗೆ ಹೊಟ್ಟೆ ನೋವು ಬರ್ತಿರ್ತದೆ" ಎಂದು ಧೈರ್ಯವಾಗಿ ಹೇಳಿದಳು. ಆದರೆ ಅವರು ಕೇಳಲಿಲ್ಲ. ಅವರ ಟ್ರಂಕನ್ನು ಶೋಧಿಸಲೇ ಬೇಕೆಂದು ಹಠ ಹಿಡಿದರು. "ನಮ್ಮ ವರದಣ್ಣಗೆ ಹೇಳ್ತೀನಿ. ನೀವು ಹಿಂಗೆಲ್ಲಾ ಮದುವೆಗೆ ಬಂದವರನ್ನು ಅವಮಾನ ಮಾಡುವಂತಿಲ್ಲ" ಎಂದು ಆವಾಜ್ ಹಾಕಿದಳು. "ಹೋಗಿ ಹೇಳಿ. ಯಾರು ಬೇಡ ಅಂತಾರೆ. ಅವರೇ ಎಲ್ಲಾರ ಸಾಮಾನು ಶೋಧಿಸೋಕೆ ಹೇಳಿದಾರೆ. ನೆಕ್ಲೆಸ್ ಸಿಗೋ ತನಕ ಹುಡುಗ ಮಣೆ ಮೇಲೆ ಕೂಡಲ್ಲ ಅಂತ ಮಾತಾಗಿದೆ" ಎಂದರು.
ಬಿಟ್ಟು ಕೊಡುವದಿಲ್ಲ ಎಂಬ ಹಠದಲ್ಲಿ ತನ್ನ ಟ್ರಂಕಿನ ಮೇಲೆ ಕುಳಿತುಕೊಂಡಳು. ಅರು ಇನ್ನಷ್ಟು ಅನುಮಾನ ಪಡಲಾರಂಭಿಸಿದರು. ಅಷ್ಟರಲ್ಲಿ ಹುಲಿಕುಂಟಿಯ ಹೊಟ್ಟೆನೋವು ಇನ್ನಷ್ಟು ಜಾಸ್ತಿಯಾಯ್ತು. ಒಂದೇ ಸಮನೆ ನೆಲದಲ್ಲಿ ಹೊರಳಾಡಲಾರಂಭಿಸಿದ. ಹೊಟ್ಟೆಯ ಒಂದೆ ಭಾಗದಲ್ಲಿ ಮುಟ್ಟಿದರೆ ಪ್ರಾಣ ಹೋಗುವಷ್ಟು ನೋಯುತ್ತಿತ್ತು. ತೆಲುಗಿನಲ್ಲಿ ತನ್ನ ಹೆಂಡತಿ ಮಾಡುತ್ತಿರುವ ಜಗಳವೂ ಅರ್ಥವಾಗುತ್ತಿರಲಿಲ್ಲ. "ನಮ್ಮ ಸ್ವಾಮಿಗಳ ಮಂತ್ರ ಶಕ್ತಿ ಸಾಮಾನ್ಯದ್ದಲ್ಲ. ನೀವು ಕದ್ದಿದ್ದು ಕೊಡದಿದ್ರೆ ಅವನು ರಕ್ತ ಕಾರಿ ಸಾಯ್ತಾನೆ" ಎಂದು ಹೆದರಿಸಿದರು. ರಮಾಬಾಯಿ ಟ್ರಂಕನ್ನು ಬಿಟ್ಟುಕೊಟ್ಟು ಹುಲಿಕುಂಟಿಯ ಶುಶ್ರೂಷೆಗೆ ಹೋದಳು.
ಟ್ರಂಕಿನ ಚಿಲಕಕ್ಕೆ ಕಟ್ಟಿದ ಹಗ್ಗವನ್ನು ಬಿಚ್ಚುವಷ್ಟು ಸಹನೆ ಅವರಿಗಿರಲಿಲ್ಲವಾದ್ದರಿಂದ ಆ ಹಗ್ಗವನ್ನು ಜಗ್ಗಿ ಹರಿದರು. ಒಳಗಿನ ಒಂದೊಂದೇ ಬಟ್ಟೆ ಸಾಮಾನುಗಳನ್ನು ತೆಗೆದು ಜಾಡಿಸಲಾರಂಭಿಸಿದರು. ಯಾವುದೋ ಬಟ್ಟೆಯ ಮಧ್ಯದಲ್ಲಿ ರಮಾಬಾಯಿ ಮಗನಿಗೆಂದು ಇಟ್ಟಿದ್ದ ಎರಡು ಲಾಡುಗಳು ನೆಲಕ್ಕೆ ಬಿದ್ದು, ಬಿಡಿ ಬಿಡಿ ಕಾಳುಗಳು ಇಡೀ ಕೋಣೆಯ ತುಂಬ ಹರಡಿಕೊಂಡವು. ಸೀಳು ಲೋಟ ಉರುಳಿ ಹೋಗಿ ಮೂಲೆ ಸೇರಿತು. ಘಟನೆಯನ್ನು ಹೆದರಿದ ಕಣ್ಣಲ್ಲಿ ನೋಡುತ್ತಿದ್ದ ಗುರುರಾಜ ಓಡಿ ಹೋಗಿ ಆ ಲೋಟವನ್ನು ಎತ್ತಿಕೊಂಡು ಅವರಮ್ಮನ ಕೈಗೆ ಕೊಟ್ಟ. ವರನ ಅತ್ತೆ ರಮಾಬಾಯಿಯ ಬಟ್ಟೆಯ ಗಂಟನ್ನು ಕೆದುಕಲಾರಂಭಿಸಿದಳು. ಇಡೀ ಕೋಣೆ ಬಟ್ಟೆಗಳಿಂದ ತುಂಬಿ ಹೋಯ್ತು.
ಅದ್ಯಾರು ಪೋಲೀಸರಿಗೆ ಸುದ್ದಿ ಮುಟ್ಟಿಸಿದ್ದರೋ ಗೊತ್ತಿಲ್ಲ, ಜೀಪು ಕಲ್ಯಾಣ ಮಂಟಪದ ಮುಂದೆ ಬಂದು ನಿಂತಿತು. ಖಾಕಿಧಾರಿ ಇನ್ಸ್‌ಪೆಕ್ಟರ್ ಒಬ್ಬರು ಒಳಗೆ ಬಂದರು. ಅವರ ಮುಂದೆ ಗಂಡಿನ ಕಡೆಯವರು ಸವಿವರವಾಗಿ ನೆಕ್ಲೆಸ್ ಕಳ್ಳತನದ ಘಟನೆಯನ್ನು ವಿವರಿಸಿ, ಸ್ವಾಮಿಗಳ ಪ್ರಸಾದದ ಮಹಾತ್ಮೆಯನ್ನು ತಿಳಿಸಿದರು. ಹುಲಿಕುಂಟಿಯ ಹತ್ತಿರ ಕುಳಿತ ಇನ್ಸ್‌ಪೆಕ್ಟರ್ "ಕಳ್ಳತನ ಮಾಡಿದಿಯೇನೋ?" ಎಂದು ಪ್ರಶ್ನಿಸಿದರು. ಹುಲಿಕುಂಟಿಗೆ ನೋವು ಅದೆಷ್ಟಿತ್ತೋ ಗೊತ್ತಿಲ್ಲ, ಲೊಳಲೊಳನೆ ವಾಂತಿ ಮಾಡಿಕೊಂಡು ಬಿಟ್ಟ. ಮಜ್ಜಿಗೆಯಂತಹ ದ್ರವ ಪದಾರ್ಥದಲ್ಲಿ ಮೆಂತ್ಯದ ಕಾಳುಗಳು ಹೊರಬಿದ್ದವು. ಅವನು ಮತ್ತೊಮ್ಮೆ ಕಕ್ಕಿದಾಗ ಒಂದಿಷ್ಟು ರಕ್ತವೂ ಹೊರ ಬಂತು. ಇನ್ಸ್‌ಪೆಕ್ಟರನ ಬಟ್ಟೆಯೆಲ್ಲವೂ ಕೊಳೆಯಾಯಿತು.
"ಇವನನ್ನ ಎತ್ತಿ ನನ್ನ ಜೀಪಿನಲ್ಲಿ ಕೂಡಿಸಿ" ಎಂದು ಅಲ್ಲಿದ್ದ ಗಂಡಸರಿಗೆ ಇನ್ಸ್‌ಪೆಕ್ಟರ್ ಅಪ್ಪಣೆ ಕೊಟ್ಟರು. ಒಂದಿಬ್ಬರು ಅವನನ್ನು ಎತ್ತಿಕೊಂಡರು. ರಮಾಬಾಯಿ ಬಾಯಿ ಬಾಯಿ ಬಡಿದುಕೊಂಡು ಅಳಲಾರಂಭಿಸಿದಳು. ಕಂಗಾಲಾದ ಗುರುರಾಜನೂ ಜೋರಾಗಿ ಅಳಲಾರಂಭಿಸಿದ. ಇನ್ಸ್‌ಪೆಕ್ಟರ್ ರಮಾಬಾಯಿಯ ಬಳಿ ಹೋಗಿ "ದಯವಿಟ್ಟು ಅಳಬೇಡಿ ತಾಯಿ. ನಾನೇನೂ ಮಾಡಲ್ಲ. ನೀವೂ ಜೊತೆಯಲ್ಲಿ ಬನ್ನಿ" ಎಂದು ಸಮಾಧಾನದಿಂದ ಹೇಳಿ ಆಕೆಯನ್ನೂ, ಗುರುರಾಜನನ್ನೂ ಜೀಪಿನಲ್ಲಿ ಕೂಡಿಸಿಕೊಂಡು ಹೊರಟುಹೋದ.
ಜೀಪು ಸಪ್ತಗಿರಿ ಆಸ್ಪತ್ರೆಯ ಬಳಿ ಬಂದು ನಿಂತಿತು. ಹುಲಿಕುಂಟಿ ನೋವಿಗೆ ಅಳಲಾರಂಭಿಸಿದ್ದ. ಇನ್ಸ್‌ಪೆಕ್ಟರ್ ಕೆಳಗಿಳಿದು, ಆಸ್ಪತ್ರೆಯೊಳಗೆ ಹೋಗಿ ಮಾತನಾಡಿ ಬಂದ. ಒಂದಿಬ್ಬರು ನರ್ಸುಗಳು ಸ್ಟ್ರಚರ್ ಜೊತೆಯಲ್ಲಿ ಹೊರಬಂದು ಹುಲಿಕುಂಟಿಯನ್ನು ಮಲಗಿಸಿಕೊಂಡು ಹೋದರು. ಇನ್ಸ್‌ಪೆಕ್ಟರ್‌ರವರು "ಡಾಕ್ಟರರ ಜೊತೆ ಮಾತನಾಡಿದ್ದೇನೆ. ಹೆದರಿಕೊಳ್ಳ ಬೇಡಿ. ಏನಾದರೂ ಸಹಾಯ ಬೇಕಿದ್ದರೆ ಕೇಳಿ" ಎಂದು ಸಮಾಧಾನವನ್ನು ಹೇಳಿ ಹೊರಟು ಹೋದರು.
ಗೋವಿಂದರಾಜ ಪಟ್ಟಣದ ಬೀದಿಯಲ್ಲಿ ರಮಾಬಾಯಿ, ಅವಳ ಸೆರಗನ್ನು ಹಿಡಿದ ಗುರುರಾಜ ಗಿರವಿ ಅಂಗಡಿಯನ್ನು ಹುಡುಕಿ ಹೊರಟಿದ್ದರು. ಆಪರೇಷನ್ನಿಗೆ ಸುಮಾರು ಒಂದು ಸಾವಿರ ರೂಪಾಯಿಯಾಗುತ್ತದೆಂದು ಡಾಕ್ಟರರು ಹೇಳಿದ್ದರು. ಐದು ನೂರು ರೂಪಾಯಿಗಳನ್ನು ಮುಂಗಡವಾಗಿ ಕಟ್ಟಿದ ನಂತರವೇ ಆಪರೇಷನ್ ಎಂದು ಖಡಾಖಂಡಿತವಾಗಿ ನರ್ಸಿನ ಮೂಲಕ ಹೇಳಿಸಿದ್ದರು. ಅಪೆಂಡಿಕ್ಸ್ ಎನ್ನುವ ಒಂದು ದುರ್ಮಾಂಸ ಒಡೆದರೆ ಅಪಾಯವೆಂದೂ ತಿಳಿಸಿದ್ದರು. "ಜೀವಕ್ಕೆ ಅಪಾಯ ಇದೆಯಾ?" ಎಂದು ರಮಾಬಾಯಿ ಕೇಳಿದ್ದಕ್ಕೆ, "ಹೇಳೋಕಾಗಲ್ಲ" ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದರು.
ರಮಾಬಾಯಿ ಎಂದೂ ಗಿರವಿ ಅಂಗಡಿಯನ್ನು ಕಂಡವಳಲ್ಲ. ಹೆದರಿಕೆಯಿಂದಲೇ ಒಳಗೆ ಅಡಿಯಿಟ್ಟಳು. ಬಿಳಿಯ ಧೋತರ, ಕರಿ ಕೋಟು, ಟೊಪ್ಪಿಗೆಯನ್ನು ಹಾಕಿಕೊಂಡ ಸೇಠ್‌ಜಿ, ತನ್ನ ಪುಟ್ಟ ಮೇಜಿನ ಮೇಲೆ ಎಂತಹದೋ ಲೆಕ್ಕವನ್ನು ಬರೆಯುತ್ತಿದ್ದ. ದುಂಡು ಚಾಳೀಸು ಮೂಗಿನ ಮಧ್ಯಕ್ಕಿಳಿದು ಎಲ್ಲಿ ಬಿದ್ದು ಬಿಡುವುದೋ ಎನ್ನಿಸುತ್ತಿತ್ತು. ಕಿವಿಗಳಲ್ಲಿ ಅವನಿಟ್ಟುಕೊಂಡಿದ್ದ ವಜ್ರದ ಬೆಂಡೋಲೆಗಳು ಫಳ್ ಫಳ್ ಹೊಳೆಯುತ್ತಿದ್ದವು. ಲೆಕ್ಕದ ಪುಸ್ತಕದ ಮೇಲೆ ನೆರಳು ಬಿದ್ದಿದ್ದರಿಂದ ತಲೆ ಎತ್ತಿದ.
ರಮಾಬಾಯಿ ತನ್ನ ಕೈಯಿಂದ ಬಂಗಾರದ ಬಳೆಗಳನ್ನು ಬಿಚ್ಚಿ, ಆ ಪುಟ್ಟ ಟೇಬಲಿನ ಮೇಲಿಟ್ಟು, ತಲೆ ತಗ್ಗಿಸಿ ಕುಳಿತಳು. ಸೇಠ್‌ಜಿಗೆ ವ್ಯಾಪಾರ ಅರ್ಥವಾಯ್ತು. ಹಗೂರಕ್ಕೆ ಆ ಬಳೆಗಳನ್ನು ತೆಗೆದುಕೊಂಡು, ಒಂದು ಬಳೆಯನ್ನು ಕಲ್ಲಿಗೆ ತಿಕ್ಕಿದ. ಒಳ್ಳೆಯ ಬಂಗಾರವೆಂದು ಗೊತ್ತಾಯ್ತು. ಉಳಿದ ನಾಲ್ಕನ್ನೂ ಕಲ್ಲಿಗೆ ತಿಕ್ಕಿದ. ಮಕ್ಕಳ ಆಟಿಕೆಯಂತಹ ಪುಟ್ಟ ನಾಜೂಕಾದ ತಕ್ಕಡಿಯಲ್ಲಿ ಬಳೆಗಳನ್ನು ತೂಗಲಾರಂಭಿಸಿದ. ಗುರುರಾಜ ಎವೆಯಿಕ್ಕದೆ ಪುಟ್ಟ ಪುಟ್ಟ ಗುಲಗಂಜಿಗಳ ಕಪ್ಪು-ಕೆಂಪನ್ನು ಕುತೂಹಲದಿಂದ ನೋಡುತ್ತಿದ್ದ.
ಒಂದು ಸಾವಿರದ ಇನ್ನೂರ ಮೂವತ್ತೆರಡು ರೂಪಾಯಿಗಳಿಗೆ ಸೇಠ್‌ಜಿ ಅದನ್ನು ಒತ್ತೆ ಇಟ್ಟುಕೊಳ್ಳಲು ಒಪ್ಪಿಕೊಂಡ. ಬಿಳಿಯ ಕಾಗದದಲ್ಲಿ ವಿವರಗಳನ್ನು ರಮಾಬಾಯಿಯಿಂದ ಕೇಳಿ ಬರೆದು, ಅವಳಿಗೆ ಸಹಿ ಮಾಡಲು ಕೊಟ್ಟ. ರಮಾಬಾಯಿ ಸಹಿ ಮಾಡುವಾಗ ಕೈ ನಡುಗುತ್ತಿತ್ತು. ಯಾವಾಗಲೋ ಚಿಕ್ಕಂದಿನಲ್ಲಿ ಸಹಿ ಮಾಡಿದ್ದು ಬಿಟ್ಟರೆ, ಮತ್ತೆ ಸಹಿ ಮಾಡಿದ್ದು ಅವಳಿಗೆ ನೆನಪೇ ಇರಲಿಲ್ಲ. ಸೊಟ್ಟಂಬಟ್ಟ ಸಹಿ ಮಾಡಿ ಮುಗಿಸುವದರಲ್ಲಿ ಕಣ್ಣಿಂದ ನೀರು ತುಳುಕಿ, ಸಹಿಯ ಮೇಲೆ ಬಿತ್ತು. ಅಕ್ಷರವೆಲ್ಲಾ ಕಲಿಸಿ ಹೋದವು. ಸೇಠ್‌ಜಿ ಆ ಸಹಿಯನ್ನು ಗೀಟು ಹಾಕಿ ಹೊಡೆದು, "ಕಣ್ಣು ಒರೆಸಿಕೊಂಡು ಮತ್ತೊಂದು ಸಹಿ ಮಾಡಬೇಕಮ್ಮ" ಎಂದು ಕೇಳಿಕೊಂಡ. ಸೆರಗಿನಿಂದ ಕಣ್ಣೊರಸಿಕೊಂಡು ಮೊದಲ ಸಹಿಯ ಕೆಳಗೆ ಮತ್ತೊಂದು ಸಹಿ ಮಾಡಿದಳು. ಸೇಠ್‌ಜಿ ಹಣ ಕೊಟ್ಟ. ನಮಸ್ಕಾರ ಮಾಡಿ ಹೊರಡಲು ಅಣಿಯಾದಳು. ಸೇಠ್‌ಜಿ ಒಪ್ಪಲಿಲ್ಲ. ಅವನ ಕಣ್ಣೆದುರಿಗೇ ಹಣವನ್ನು ಎಣಿಸಲು ಹೇಳಿದ. ಮೂರು ಬಾರಿ ತಪ್ಪು ಎಣಿಸಿ, ನಾಲ್ಕನೆಯ ಬಾರಿ ಸರಿಯಾಗಿ ಎಣಿಸಿದಳು. ಒಂದು ಪ್ರತಿ ಪತ್ರವನ್ನು ಅವಳಿಗೆ ಕೊಟ್ಟು "ಮತ್ತೆ ಬಳೆ ಬಿಡಿಸಿಕೊಳ್ಳಲಿಕ್ಕೆ ಈ ಪತ್ರ ತರಬೇಕಮ್ಮ" ಎಂದು ಹೇಳಿ ಸೇಠ್‌ಜಿ ಬೀಳ್ಕೊಟ್ಟ.
ದಾರಿಯಲ್ಲಿ ಬರುವಾಗ ಒಂದು ಪುಟ್ಟ ದೇವಸ್ಥಾನದ ಮುಂದೆ ಗುರುರಾಜನನ್ನು ನಿಲ್ಲಿಸಿ ಅವನ ಪುಟ್ಟ ಕೈಯನ್ನು ತನ್ನ ತಲೆಯ ಮೇಲಿರಿಸಿಕೊಂಡಳು. "ನಾನು, ನಿಮ್ಮಪ್ಪ ಈ ಜೀವಮಾನ ದುಡಿದರೂ ಪದ್ದಕ್ಕಗೆ ಬಳಿ ಕೊಡಸಲಿಕ್ಕೆ ಆಗಲಿಕ್ಕಿಲ್ಲ. ಒಂದು ವೇಳೆ ಆಕೆಯ ಋಣದಲ್ಲಿಯೇ ಸತ್ತರೆ, ಮುಂದೆ ನೀನು ಆಕೆಗೆ ಈ ಬಳೆಗಳನ್ನು ಕೊಡಿಸಬೇಕು. ನಮ್ಮಿಬ್ಬರ ಶ್ರಾದ್ಧ ಮಾಡದಿದ್ದರೂ ಪರವಾಯಿಲ್ಲ, ಆಕೆಗೆ ಬಳೆ ಕೊಡಿಸಬೇಕು" ಎಂದು ಬೇಡಿಕೊಂಡಳು. ಗುರುರಾಜನಿಗೆ ಅವಳ ಮಾತು ಅದೆಷ್ಟು ಅರ್ಥವಾಯ್ತೋ ಗೊತ್ತಿಲ್ಲ. ಪಿಳಿ ಪಿಳಿ ಕಣ್ಣು ಬಿಟ್ಟ. ಸೇಠ್‌ಜಿ ಕೊಟ್ಟ ಪತ್ರವನ್ನು ಮಡಿಸಿ ಅವನ ಜೇಬಿನಲ್ಲಿಟ್ಟಳು.
ಹಸಿರು ನಿಲುವಂಗಿಗಳನ್ನು ಹಾಕಿ, ಸ್ಟ್ರಚರ್ ಮೇಲೆ ಹುಲಿಕುಂಟಿಯನ್ನು ಮಲಗಿಸಿ, ಆಪರೇಷನ್ ಥೇಟರಿನೊಳಗೆ ಒಯ್ದು ಬಿಟ್ಟರು. ಆ ನೋವಿನಲ್ಲಿಯೂ ಹುಲಿಕುಂಟಿ ಅಸಹಾಯಕ ದೃಷ್ಟಿಯನ್ನು ಹೆಂಡತಿಯತ್ತ ಬೀರಿದ. ರಮಾಬಾಯಿ ಮತ್ತು ಗುರುರಾಜ ಹೊರಗೇ ಉಳಿದರು. ಕೊನೆಯಲ್ಲಿ ನರ್ಸೊಬ್ಬಳು ಒಂದು ಬಿಳಿಯ ಬೋಗಣಿಯಲ್ಲಿ ಫಳಫಳನೆ ಹೊಳೆಯುವ ಕತ್ತರಿ, ಸೂಜಿ, ಚಾಕು, ಇಕ್ಕಳಗಳ ರಾಶಿಗಳನ್ನು ಒಯ್ಯುವದನ್ನು ನೋಡಿ ರಮಾಬಾಯಿಗೆ ಜೀವ ಬಾಯಿಗೆ ಬಂತು. "ಈ ರಂಡೆಗಂಡರು ನನ್ನ ಗಂಡನ್ನ ಏನೆಲ್ಲಾ ಗೋಳಾಡಿಸ್ತಾರೋ..." ಎಂದು ದುಃಖವಾಯ್ತು. ಆ ನರ್ಸನ್ನು ನಿಲ್ಲಿಸಿ "ನಮ್ಮನಿಯವರಿಗೆ ತೆಲುಗು ಬರಂಗಿಲ್ಲ. ಏನಾದ್ರೂ ಬೇಕು ಅಂದರೆ ಕನ್ನಡದಾಗೆ ಕೇಳ್ತಾರೆ. ಆವಾಗ ನನ್ನ ಕರೀರಿ" ಎಂದು ಬೇಡಿಕೊಂಡಳು. ಅದಕ್ಕೆ ಆ ನರ್ಸು "ಆಪರೇಷನ್ ಥೇಟರಿನಾಗೆ ಕ್ಲೋರೋಫಾಂ ಕೊಟ್ಟು ಎಚ್ಚರ ತಪ್ಪಿಸ್ತಾರೆ. ಅಲ್ಲಿ ಕನ್ನಡ ಬರೋರು, ತೆಲುಗು ಬರೋರು, ಮೂಕರು, ಕುರುಡರು ಎಲ್ಲಾ ಒಂದೆ" ಎಂದು ಹೇಳಿ ನಕ್ಕಳು.
ಹಾಲಿನಲ್ಲಿ ರಮಾಬಾಯಿ, ಗುರುರಾಜ - ಇಬ್ಬರೇ ಉಳಿದರು. ಹಾಲಿನ ಮಧ್ಯದಲ್ಲಿ ಒಂದು ದೊಡ್ಡ ವೆಂಕಟೇಶ್ವರ ಮೂರ್ತಿಯನ್ನಿಟ್ಟು, ಬಣ್ಣ ಬಣ್ಣದ ಹೂವಿನ ಹಾರಗಳನ್ನು ಹಾಕಿ, ಊದು ಬತ್ತಿಯನ್ನು ಹಚ್ಚಿಟ್ಟಿದ್ದರು. ರಮಾಬಾಯಿಗೆ ಅನಾಥ ಭಾವ ಮೂಡಿದಂತಾಗಿ ಆ ಮೂರ್ತಿಯ ಮುಂದೆ ಬಂದು ನಿಂತಳು.
"ಲೋ ವೆಂಕಟೇಶ, ನಿನ್ನ ನಂಬಿಕೊಂಡು ಬಂದೀವಿ. ನೀ ಕೇಳದಿ ಅಂತ ನನ್ನ ಗಂಡ ಲೋಟ ಕಳ್ಳತನ ಮಾಡಿಕೊಂಡು ಬಂದಾನೆ. ನನ್ನ ಗಂಡಗೆ ಏನಾದ್ರೂ ಆಯ್ತೋ, ನಾನು ಸುಮ್ಮನೆ ಇರೋ ಹೆಂಗಸಲ್ಲ - ತಿಳ್ಕೋ. ಆ ಲೋಟ ಊರಿಗೆ ವಾಪಸ್ಸು ಒಯ್ದು ನಿನ್ನ ಮಹಾತ್ಮೆ ಅನ್ನೋದು ಏನೂ ಇಲ್ಲ ಅಂತ ಡಂಗುರ ಸಾರ್ತೀನಿ. ಬರೀ ಅಷ್ಟೇ ಅಲ್ಲ. ಆ ಪದ್ಮಾವತಿ ನಿಂಗೆ ಕಲ್ಲು ತೊಗೊಂಡು ಹೊಡೆದಳಂತೆ. ನಾನು ನಿನ್ನ ತಲೆ ಮೇಲೆ ಚಪ್ಪಡಿ ಕಲ್ಲು ಎತ್ತಿ ಹಾಕದಿದ್ದರೆ ನಾನು ರಮಾಬಾಯಿಯೇ ಅಲ್ಲ, ತಿಳ್ಕೋ..." ಎಂದು ವಾರ್ನಿಂಗ್ ಕೊಟ್ಟಳು.
ಗರ್ಭಗುಡಿಯಲ್ಲಿ ನಿಂತ ವೆಂಕಟೇಶ್ವರ ಸಣ್ಣಗೆ ಬೆವರಿದ.
ವರದಣ್ಣ ಆಸ್ಪತ್ರೆಯೊಳಗೆ ಬಂದಾಗ ಹುಲಿಕುಂಟಿ ಇನ್ನೂ ಹೊರಬಂದಿರಲಿಲ್ಲ. ಸೀದಾ ತಂಗಿಯ ಪಕ್ಕ ಹೋಗಿ ಕುಳಿತ. ಅವಳ ಕೈಯನ್ನು ತೆಗೆದುಕೊಂಡು, ಸಣ್ಣಗೆ ಸವರಿದ. "ಹೇಗಿದಾನೆ?" ಎಂದು ಕೇಳಿದ. ರಮಾಬಾಯಿಗೆ ದುಃಖ ತಡೆಯಲಾಗಲಿಲ್ಲ. ಅಣ್ಣನ ಎದೆಯಲ್ಲಿ ತಲೆಯಿಟ್ಟು ಅತ್ತಳು. ಅವಳ ತಲೆಯನ್ನು ಸವರುತ್ತಾ "ದುಷ್ಟ ಮುಂಡೆ ಮಕ್ಕಳು. ಯಾಕೆ ಅಂಥಾ ದುಬಾರಿ ಒಡವಿ ಹಾಕ್ಕೊಂಡು ಬರಬೇಕು? ಅದನ್ನು ನೋಡಿಕೊಳ್ಳೋ ಯೋಗ್ಯತೆ ಇಲ್ಲ ಅಂದ ಮೇಲೆ ಮನಿಯಾಗೆ ಬಿಟ್ಟು ಬರಬೇಕು. ನಿನ್ನ ಅವಮಾನ ಮಾಡಿಬಿಟ್ಟರು. ಹೆಣ್ಣು ಹೆತ್ತೋನು ನಾನು, ಮದುವಿ ಮುರುದು ಬೀಳ್ತದೆ ಅಂತ ಸುಮ್ಮನೆ ಇದ್ದೆ. ಆ ಸುಡುಗಾಡು ಸ್ವಾಮಿ ಒಬ್ಬ... ಅವನೇ ಕದ್ದಾನೋ ಅಂತ ನಂಗೆ ಅನುಮಾನ..." ಎಂದು ಒಂದೇ ಸವನೆ ತನ್ನ ಅಸಹನೆಯನ್ನೆಲ್ಲಾ ಕಾರಿಕೊಳ್ಳಲಾರಂಭಿಸಿದ. ಒಂದಿಷ್ಟು ಅತ್ತು, ಅವನ ಅಂಗಿಯನ್ನು ತೊಯ್ಯಿಸಿದ ಮೇಲೆ ರಮಾಬಾಯಿ ಸಮಾಧಾನ ಮಾಡಿಕೊಂಡಳು. "ಹೋಗಲಿ ಬಿಡು ವರದಣ್ಣ. ಬಡತನ ಕೆಟ್ಟದ್ದು" ಎಂದು ಹೇಳಿ ಸುಮ್ಮನಾದಳು.
ನರ್ಸೊಬ್ಬಳು ಪುಟ್ಟ ಬಿಳಿಯ ಬೋಗಣಿಯನ್ನು ಹಿಡಿದು ಹೊರಬಂದಳು. ಅದರಲ್ಲಿ ಕಿರುಬೆರಳಿನಂತಹ ರಕ್ತಸಿಕ್ತ ಮಾಂಸದ ತುಂಡೊಂದಿತ್ತು. ಅದನ್ನು ರಮಾಬಾಯಿಯ ಮುಂದೊಡ್ಡಿ "ಇದೇ ನೋಡಮ್ಮ ನಿನ್ನ ಗಂಡನ ಹೊಟ್ಟೆನಾಗೆ ಇದ್ದಿದ್ದು. ಅದಕ್ಕೇ ಆ ಪರಿ ಹೊಟ್ಟೆ ನೋವು" ಎಂದಳು. ರಮಾಬಾಯಿಗೆ ಅದೇನು ಸಂಕಟವಾಯ್ತೋ ಗೊತ್ತಿಲ್ಲ. ಆ ಮಾಂಸದ ತುಂಡಿಗೆ "ಥೂ..." ಎಂದು ಉಗಿದಳು. ಎರಡೂ ಕೈಯಿಂದ ನೆಟಿಗೆ ಮುರಿದು ಲಟಲಟನೆ ಸದ್ದು ಮಾಡಿ "ನನ್ನ ಗಂಡನ್ನ ಕಳ್ಳ ಅನ್ನಿಸಿದ ನಿನ್ನ ವಂಶ ನಿರ್ವಂಶ ಆಗ... ನೀನು ಸರ್ವ ನಾಶವಾಗಿ ಹೋಗ..." ಎಂದು ಶಾಪ ಹಾಕಿದಳು. ಅವಳಿಂದ ಅಂತಹ ವರ್ತನೆಯನ್ನು ನಿರೀಕ್ಷಿಸದ ನರ್ಸು "ಇದೇನಮ್ಮ ನೀನು ಹಿಂಗೆ ಆಡ್ತಿ..." ಎಂದು ಗದರಿಸಿ ಆ ಬೋಗಣಿಯನ್ನು ಹೊರಗೆ ಒಯ್ದಳು. ವರದಣ್ಣ ತಂಗಿಯ ಮಾತುಗಳನ್ನು ಕೇಳಿ ದಂಗು ಬಡಿದು ಹೋದ.
ಡಾಕ್ಟರರು ಕೈಯನ್ನು ಒರೆಸಿಕೊಳ್ಳುತ್ತಾ ಹೊರಬಂದರು. "ಆರಾಮಾಗಿದ್ದಾನೆ. ನೀವು ಮಾತನಾಡಿಸಬಹುದು" ಎಂದು ಹೇಳಿದರು. ವರದಣ್ಣ ತನ್ನ ಭಾವನನ್ನು ಮಾತನಾಡಿಸಲು ಎದ್ದ. ರಮಾಬಾಯಿ ತಕ್ಷಣ ಎದ್ದು ಓಡಿ ಆಪರೇಷನ್ ಥಿಯೇಟರಿನ ಬಾಗಿಲಿಗೆ ಅಡ್ಡ ನಿಂತಳು. "ವರದಣ್ಣ, ನೀನು ಒಳಗೆ ಬರಬೇಡ" ಎಂದು ಖಡಾಖಂಡಿತವಾಗಿ ಹೇಳಿದಳು. "ಹಂಗ್ಯಾಕೆ ಹೇಳ್ತಿ ರಮಾ" ಎಂದು ವರದಣ್ಣ ಅವಳನ್ನು ಸರಿಸಿ ಒಳ ಹೋಗಲು ಪ್ರಯತ್ನಿಸಿದ. ವರದಣ್ಣನ ಎದೆಗೆ ಕೈಯಿಟ್ಟು ದೂರ ದಬ್ಬಿದಳು. "ನಿಂಗೆ ಕೈ ಮುಗೀತೀನಿ ವರದಣ್ಣ. ನಮ್ಮನ್ನ ನಮ್ಮ ಪಾಡಿಗೆ ಬಿಟ್ಟು ಬಿಡು" ಎಂದು ಕೈ ಮುಗಿದು ಬಿಟ್ಟಳು. ವರದಣ್ಣ ಪೆಚ್ಚಾಗಿ ಹಿಂದಕ್ಕೆ ಹೆಜ್ಜೆ ಇಟ್ಟ. ರಮಾಬಾಯಿ ತಾನೊಬ್ಬಳೆ ಹುಲಿಕುಂಟಿಯನ್ನು ಮಾತನಾಡಿಸಲು ಒಳಗೆ ಹೋದಳು.
ವರದಣ್ಣಗೆ ಏನು ಮಾಡಬೇಕೆಂದು ತೋಚಲಿಲ್ಲ. ಅಮ್ಮ-ಮಾವನ ಜಗಳವನ್ನು ನೋಡುತ್ತಾ ನಿಂತಿದ್ದ ಗುರುರಾಜನ ಬಳಿ ಹೋದ. ಸಮಾಧಾನದ ನಗೆಯನ್ನು ನಕ್ಕು, ಅವನ ಗಲ್ಲವನ್ನು ಸವರಿ "ಆಪರೇಷನ್ ಮಾಡಿಸೋಕೆ ರೊಕ್ಕ ಎಲ್ಲಿಂದ ಬಂತು ಗುರುರಾಜ" ಎಂದು ಕೇಳಿದ. ಗುರುರಾಜ ತನ್ನ ಅಂಗಿಯ ಜೇಬಿನಿಂದ ಬಳೆಗಳನ್ನು ಒತ್ತೆ ಇಟ್ಟ ಪತ್ರವನ್ನು ತೆಗೆದು ತೋರಿಸಿದ.
ವರದಣ್ಣ, ಗುರುರಾಜ ಇಬ್ಬರೂ ಗಿರವಿ ಅಂಗಡಿಯನ್ನು ಹುಡುಕಿಕೊಂಡು ಹೋದರು. ವರದಣ್ಣ ಸೇಠಿನ ಜೊತೆ ಮಾತನಾಡಿ, ಹಣವನ್ನು ತುಂಬಿ ಬಳೆಗಳನ್ನು ಬಿಡಿಸಿಕೊಂಡ. ಆ ಬಳೆಗಳನ್ನು ಗುರುರಾಜನ ಜೇಬಿನಲ್ಲಿಟ್ಟು "ಅಮ್ಮಗೆ ಕೊಡು. ಆಕೆಗೆ ಯಾವತ್ತೂ ಕಷ್ಟ ಬರದಂಗೆ ನೋಡ್ಕೋ ಬೇಕು ನೀನು. ನನ್ನ ತಂಗಿ ಅಂದರೆ ನಂಗೆ ತುಂಬಾ ಇಷ್ಟ" ಎಂದು ಹೇಳಿ, ಅವನನ್ನು ಆಸ್ಪತ್ರೆಯ ಬಾಗಿಲ ಬಳಿ ಬಿಟ್ಟು ಕಲ್ಯಾಣ ಮಂಟಪಕ್ಕೆ ಹೊರಟು ಹೋದ.
"ಏಡುಕೊಂಡಲವಾಡಾ ಗೋವಿಂದಾ..." "ಗೋ...ವಿಂದ"
"ವೆಂಕಟರಮಣ ಗೋವಿಂದಾ..." "ಗೋ...ವಿಂದ"
ನಾಲ್ಕು ತಾಸು ಧರ್ಮದರ್ಶನದ ಸರದಿಯಲ್ಲಿ ನಿಂತ ಮೇಲೆ ದೇವರ ದರ್ಶನವಾಯ್ತು. ಗದ್ದಲದೊಳಗೆ ಮಗನಿಗೆ ದೇವರು ಕಾಣಿಸದೇ ಹೋಗಿಬಿಟ್ಟಾನೋ ಎಂದು ಅತ್ಯಂತ ಆತಂಕದಲ್ಲಿದ್ದ ರಮಾಬಾಯಿ "ಛಂದಾಗಿ ನೋಡು... ವಜ್ರದ ಕಿರೀಟ ನೋಡು... ಹೂವಿನ ಅಲಂಕಾರ ನೋಡು... ಎದೆ ಮೇಲಿರೋ ಕಂಠೀಹಾರ ನೋಡು... ಹಣೆಗೆ ಹಚ್ಚಿರೋ ನಾಮ ನೋಡು..." ಎಂದು ಹೇಳುತ್ತಲೇ ಇದ್ದಳು. ಹುಲಿಕುಂಟಿ ಮಗನ ಬೋಡು ತಲೆಯನ್ನು ಸವರಿ "ಸಜ್ಜಿಗಿ ಉಂಡಿ" ಎಂದು ತಮಾಷೆ ಮಾಡುತ್ತಲೇ ಇದ್ದ. ಗಂಡನ ಬೋಡು ತಲೆಯಲ್ಲಿ ಅಪರಿಚಿತ ಉಬ್ಬು-ತಗ್ಗುಗಳನ್ನು ಕಂಡು ರಮಾಬಾಯಿ ಅಚ್ಚರಿ ಹೊಂದುತ್ತಿದ್ದಳು.
"ಪೋವಂಡಿ... ಪೋವಂಡಿ..." ಎನ್ನುವ ದಬ್ಬುವಿಕೆಯಲ್ಲಿಯೇ ದೇವರ ದರ್ಶನವಾಯ್ತು. ಹೊರಗೆ ಬರುವಷ್ಟರಲ್ಲಿ ಮೈಯಿಂದ ಬೆವರು ಇಳಿದು ಹೋಗಿತ್ತು. ಮಗ ಸರಿಯಾಗಿ ನೋಡಿದನಾ ಇಲ್ಲವಾ ಎಂದು ಬೇರೆ ಬೇರೆ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿ ರಮಾಬಾಯಿ ಸಮಾಧಾನ ಹೊಂದಿದಳು.
ಹುಂಡಿಯ ಬಳಿಯೂ ಚಿಕ್ಕ ಸರದಿಯಿತ್ತು. ಭಕ್ತಾದಿಗಳು ತಮ್ಮ ತಮ್ಮ ಶಕ್ತಾನುಸಾರ ಕಾಣಿಕೆಯನ್ನು ಅರ್ಪಿಸುತ್ತಿದ್ದರು. ರಮಾಬಾಯಿ ಮಗನನ್ನು ಎತ್ತಿ ಹೆಗಲ ಮೇಲೆ ಕೂಡಿಸಿಕೊಂಡಳು. ಗುರುರಾಜನ ಕೈಯಲ್ಲಿ ಸೀಳು ಲೋಟವಿತ್ತು. "ಹಾಕು..." ಎಂದು ಹುಲಿಕುಂಟಿ ಮಗನಿಗೆ ಅಪ್ಪಣೆ ಕೊಟ್ಟ. ಗುರುರಾಜ ಹಾಕಿದ. ದುಡ್ಡು, ಬಂಗಾರ, ಬೆಳ್ಳಿಯ ನಾಲಿಗೆ, ಕಣ್ಣು, ಮಗುವಿನ ಗೆಜ್ಜೆ, ಸೋಡಾಚೀಟಿಯ ಪತ್ರ, ಆಸ್ತಿಯ ಪತ್ರ, ಸತ್ತವರ ಬೂದಿಯ ಗಂಟು... ಹೀಗೆ ನೂರೆಂಟು ವಸ್ತುಗಳಿಂದ ತುಂಬಿ ತುಳುಕುತ್ತಿದ್ದ ಹುಂಡಿಯಲ್ಲಿ ಸೀಳು ಲೋಟ ಸದ್ದಿಲ್ಲದೆ ಸೇರಿಕೊಂಡಿತು.
"ಏಡುಕೊಂಡಲವಾಡ ಗೋವಿಂದ..." ಭಕ್ತಾದಿಗಳು ಕೂಗಿದರು. "ಗೋ...ವಿಂದ" ಎಂದು ಗುರುರಾಜನೂ ಜಯಕಾರ ಹಾಕಿದ.
ಮಗನನ್ನು ಇಳಿಸಿದ ರಮಾಬಾಯಿ ತನ್ನ ಸೆರಗಿನ ತುದಿಯ ಗಂಟನ್ನು ಬಿಚ್ಚಿದಳು. ಕಾಶವ್ವನ ಮಂಗಲಸೂತ್ರವಿತ್ತು. ಅದನ್ನು ಕಣ್ಣಿಗೆ ಒತ್ತಿಕೊಂಡು ಹುಂಡಿಯಲ್ಲಿ ಹಾಕಿ "ಕೃಷ್ಣಾರ್ಪಣ..." ಎಂದು ಕೈ ಮುಗಿದಳು.
"ವೆಂಕಟರಮಣ ಗೋವಿಂದ..." ಭಕ್ತಾದಿಗಳು ಕೂಗಿದರು. "ಗೋ...ವಿಂದ" ಎಂದು ಈ ಬಾರಿ ಮೂವರೂ ಧ್ವನಿಗೂಡಿಸಿದರು.
ತನ್ನ ವಸ್ತು ತನಗೆ ಸಿಕ್ಕಿದ್ದಕ್ಕೆ ಗರ್ಭಗುಡಿಯಲ್ಲಿ ವೆಂಕಟೇಶ ಸಮಾಧಾನದ ನಿಟ್ಟುಸಿರು ಬಿಟ್ಟ.
ಹೀಗೊಂದು ಪ್ರಶಸ್ತಿ 'ಪತ್ರ'
ಕಳೆದ ವಾರ ವಸುಧೇಂದ್ರ ಒಟ್ಟೊಟ್ಟಿಗೆ ಮೂರು ಪ್ರಶಸ್ತಿ ಪಡೆದು(ರಾಜ್ಯ ಅಕಾಡೆಮಿ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಮತ್ತು ಅಮ್ಮ ಪ್ರಶಸ್ತಿ) ಹ್ಯಾಟ್ರಿಕ್ ಸಾಧಿಸಿದ್ದು ಸುದ್ದಿಯಾಯಿತು. ಆದರೆ ಅವರಿಗೆ ನಾಲ್ಕನೆಯ ಪ್ರಶಸ್ತಿಯೊಂದು ಬಂದಿರುವುದು ನಿಮಗೆ ಗೊತ್ತೆ? ಉದಯವಾಣಿ ವಿಶೇಷಾಂಕದಲ್ಲಿ ಪ್ರಕಟಗೊಂಡಿರುವ ಅವರ 'ಸೀಳು ಲೋಟ' ಎಂಬ ಅದ್ಭುತ ನೀಳ್ಗತೆಯನ್ನು ಮೆಚ್ಚಿ ಹಿರಿಯ ಸಾಹಿತಿ ಯು ಆರ್ ಅನಂತಮೂರ್ತಿ ಒಂದು ಉದ್ದದ ಪತ್ರ ಬರೆದಿದ್ದಾರೆ. ಅನಂತಮೂರ್ತಿ ಮೆಚ್ಚಿ ಪತ್ರ ಬರೆದಿದ್ದಾರೆ ಎಂದಮೇಲೆ ಅದು ಪ್ರಶಸ್ತಿ 'ಪತ್ರ'ವಲ್ಲದೆ ಮತ್ತೇನು?
~ಪತ್ರ~
~ಪತ್ರ~
ಅನು, ವಿವೇಕ್ ಹೇಳಿದರೆಂದು ಉದಯವಾಣಿ ವಿಶೇಷಾಂಕದ ನಿಮ್ಮ ಕಥೆ ಓದಿದೆ. ಚೆನ್ನಾಗಿದೆಯೆಂದು ಹೇಳಿದರೆ ಸಾಲದು. ಗಹನವಾಗಿದೆ. ಹಾಗೆ ಶೈಲಿಯ ಬಡಿವಾರದಲ್ಲಿ ತೋರಿಕೊಳ್ಳದಂತೆ ಗಹನವಾಗಿದೆ. ನಾನು ತಿಳಿಯಲು ಯತ್ನಿಸುತ್ತ ಇರುವ ಭಾರತದ ಧರ್ಮದ ವಿಶಿಷ್ಟತೆಯನ್ನು ನಾನು ತಿಳಿದಿರುವುದಕ್ಕಿಂತ ಗಹನವಾಗಿ ನಿಮ್ಮ ಕಥೆಯ 'ತಿಮ್ಮಪ್ಪನೂ' ಆದ ವೆಂಕಟೇಶ್ವರ ಅನುಭವಕ್ಕೆ ತಂದಿದ್ದಾನೆ.
ಇಡೀ ಪ್ರಪಂಚದಲ್ಲಿ ಸೆಮಿಟಿಕ್ ಮತಗಳಿಗಿಂತ ಭಿನ್ನವಾಗಿ ಉಳಿದಿರುವ ಪೇಗನ್ ಧರ್ಮವೆಂದರೆ ಭಾರತದ ಹಿಂದೂಗಳದು. ಗ್ರೀಕರಲ್ಲಿ ಹೋಮರ್ ನಂತರ ಇದು ಅವಸಾನವಾಯಿತು. ಪೇಗನ್ ದೇವತೆಗಳು ಯೂರೋಪಿನ ಕವಿಗಳಲ್ಲಿ ಮಾತ್ರ ಉಳಿದರು. ಆದರೆ ನಿಮ್ಮ ಕಥೆಯ ಬಡ ದಂಪತಿಗಳಲ್ಲಿ ಅವನು ಕಳ್ಳರ ದೇವರಾಗಿ ಕಾಣಿಸಿಕೊಂಡಿದ್ದಾನೆ. ಕಳ್ಳರದೇವರಾಗದೆ ಅವನು ಬಡವರಿಗೆ ದಕ್ಕುವುದು ಸಾಧ್ಯವೆ? ದೇವರು ಸಾಮಾನ್ಯನಾಗಿ ದಕ್ಕುವುದು; ದಕ್ಕಿ ಬಡವರ ಹೃದಯದಲ್ಲಿ ಮಿಕ್ಕುವುದು. ಬೀಡಿ ಸೇದುವ ಗಂಡನಿಗೆ; ಬಾಯಾಳಿ ಹೆಂಡತಿಗೆ. ಅವನಿಗೂ ಹೆಂಡತಿಯಿದ್ದಾಳೆ; ಬಾಯಾಳಿ ಹೆಂಗಸು ಈ ದೇವ ತನ್ನ ಹೆಂಡತಿಯನ್ನು ಪಡೆದ ಕ್ರಮವನ್ನು ಟೀಕಿಸುವವಳೇ. ಬದುಕಿನಲ್ಲಿ ಒದಗಿ ಬರುವ ಈ ದೇವದೇವಿಯರ ಕಲ್ಪನೆ ಅಪ್ಪಟ ದೇಸಿ. ಭಕ್ತಿಯ ಉಗಮ ಇಲ್ಲಿದೆ. ಈ ದೇವನೇ ಅತೀತನೂ ಆಗುವುದು ಸೋಜಿಗವೇ. ಕಳ್ಳರ ದೇವನಾಗಿ ಉಳಿದಿದ್ದೇ ಅತೀತನೂ ಹೌದು. ಬಾಯಾಳಿ ತನ್ನ ಮಗನ ಕಣ್ಣಿನಲ್ಲಿ ಅವನನ್ನು ತುಂಬಿಸುತ್ತಾಳೆ. ದಂಪತಿಗಳು ಟ್ರಂಕು ಹೊತ್ತು ಮೆಟ್ಟಲು ಹತ್ತಿ ರೈಲ್ ಪ್ರಯಾಣ ಸುಖಿಸಿ ಹೊಟ್ಟೆನೋವಿನಲ್ಲೂ ಅಪಮಾನದಲ್ಲೂ ನರಳಿ ಅವನ್ನು ಕ್ಷಣಕಂಡು ಮರಳುತ್ತಾರೆ. ಪ್ರೆಸ್ಸು, ಕೋಡುಬಳೆ ಕಾಯಕಕ್ಕೆ.
'ನಂಬಿಕೆ' ಎನ್ನುವುದು ಸೆಮಿಟಿಕ್ ಧರ್ಮಗಳಿಗೆ ಮುಖ್ಯವಾದಂತೆ ನಮಗೆ ಮುಖ್ಯವಲ್ಲ. ಆಚರಣೆಯಲ್ಲಿ, ಉಸಿರಾಟದಷ್ಟೇ ಸಹಜವಾದ ಆಚರಣೆಯಲ್ಲಿ, ನಮ್ಮ ದೇವತೆಗಳು ಜೀವಂತರಾಗಿ ಉಳಿದಿದ್ದಾರೆ. ಗಾಂಧಿಯ ರಾಮ ನೋಡಿ. ಅವನು ಸೀತೆಯ ಪತಿಯಾದ ಮನುಷ್ಯ. ಅವನು ರಾಜ. ಅವನು ಸಗುಣ, ಸಾಕಾರ. ಹಾಗೆಯೇ ಅಲ್ಲಾ ಕೂಡ ಅವನು. ಅಂದರೆ ಬೇಕಾದ ಆಕಾರ ಪಡೆಯಬಲ್ಲ ನಿರಾಕಾರ. ಗಾಂಧಿಗೆ ಇದು ಸಾಧ್ಯವಾದ್ದು ಹಿಂದೂ ಮನಸ್ಸಿನಿಂದಾಗಿ. 'ಹಿಂದೂ’ ಎನ್ನುವ ಪದ ಕೂಡ ಈಗಿನ ಕಾಲಕ್ಕಾಗಿ ನಾವು ಬಳಸೋದು. ನಿಮ್ಮ ಕಥೆಯ ಯಾವ ಪಾತ್ರವೂ ತಮ್ಮನ್ನು ಹಿಂದೂ ಎಂದು ಗುರುತಿಸಿಕೊಳ್ಳುವ ಅಗತ್ಯ ಕಂಡವರಲ್ಲ. ಪ್ರೆಸ್ ಮಾಲೀಕನಂತಹ ಜುಗ್ಗನೂ ತಿರುಪತಿಗೆ ಹೋಗಲೆಂದು ಸೇವಕನಿಗೆ ಕೂಡಲೇ ಐದುನೂರು ರೂಪಾಯಿ ಕೊಟ್ಟು ಬಿಡುತ್ತಾನೆ.
ನಿಮ್ಮ ಕಥೆಯ ಬಾಯಾಳಿ ಹೆಂಗಸು ಬೈದಾಡುತ್ತಲೇ ಗಂಡನ ಕಾಲಿಗೆ ನಮಸ್ಕರಿಸುತ್ತಾಳೆ. ಬೈಯುತ್ತಲೇ ರಾಘವೇಂದ್ರ ಸ್ವಾಮಿಗೆ ಹೂವನ್ನು ಪೋಣಿಸುತ್ತಾಳೆ. ವಿಧವೆ ತನ್ನ ತಾಳಿಯನ್ನು ಹಂಗಿಸಿ ದೇವರಿಗೆ ಕೊಡುತ್ತಾಳೆ. ಈ ದೇವರೂ ಒಲಿಯುವುದು ಕಳ್ಳತನ ಮಾಡಿದವರಿಗೆ. ಕದಿಯುವುದನ್ನೂ ಒಂದು ಆಚರಣೆಯಂತೆ, ಅಂಜುತ್ತಂಜುತ್ತ, ಬೀಡಿಸೇದುವ ಗಂಡ ಮಾಡುತ್ತಾನೆ. ಆದರೂ ಇವರೆಲ್ಲರೂ ಎಷ್ಟು ಸ್ವಾಭಿಮಾನಿಗಳು. ಬಾಯಾಳಿ ತನ್ನ ಶ್ರೀಮಂತ ಅಣ್ಣನನ್ನು ಈಗಲೂ ಪ್ರೀತಿಸಬಲ್ಲಳು. ಅವನೂ ಪ್ರೀತಿಸಬಲ್ಲ.
ಆದರೂ ಅಣ್ಣ ಶ್ರೀಮಂತನೇ; ತಂಗಿ ಬಡವಳೇ. ಅವಳು ಕೊಡುವ ಬಳುವಳಿ ಸೀರೆ ಬಣ್ಣ ಬಿಟ್ಟು ಎಲ್ಲರ ಬಟ್ಟೆಗೆ ಅಂಟಿಕೊಂಡಾಗ ಅವಳಿಗಾಗುವ ಅವಮಾನವೂ ಸಹಜವೇ. ಇವರೆಲ್ಲರನ್ನೂ ಆಳುವ ತಿಮ್ಮಪ್ಪ ಈ ಎಲ್ಲ ಕಳ್ಳರ ದೇವರು. ಕದಿಯುವುದೂ ಅವನ ಸೇವೆಯೇ. ಬೀಗತಿಯ ಸರ ಕಳೆದದ್ದನ್ನು ಹೊಟ್ಟೆನೋವಿಗೆ ಆರೋಪಿಸುವ ಶ್ರೀಮಂತಿಕೆಯ ಅಹಂಕಾರದ ಈ ಬೀಗರ ಗುರುವನ್ನ್ನು ಹಾಸ್ಯಮಾಡಲು ಕೂಡ ತಿರುಪತಿಯ ದೇವರೂ ಸಹಾಯಕನಾಗುತ್ತಾನೆ ಬಡವರ ಪಾಲಿಗೆ.
ಸಿಂಗರ್ ನಂತಹ ಕಥೆಗಾರನ ಗುಣ ನಿಮ್ಮ ಕಥನಗಳಲ್ಲಿ ಬೆಳೆಯಲಿ ಎಂದು ಹಾರೈಸುತ್ತೇನೆ. ಅವಸರದಲ್ಲಿ ಇದನ್ನು ಬರೆದಿದ್ದೇನೆ. ಕಥೆಗಳ ಪಾತ್ರಗಳ ಹಸರು ಹೇಳಲೂ ಸಮಯವಿಲ್ಲದವನಂತೆ ಬರೆದಿದ್ದೇನೆ. ನನ್ನ
ಖುಷಿ ಹಂಚಿಕೊಳ್ಳಬೇಕಿತ್ತು. ಕೆಲವು ಈಜಿಪ್ಟಿನ ಮುಸ್ಲಿಂ ಕಥೆಗಾರರು ಇಸ್ಲಾಮನ್ನೂ ಇಷ್ಟೇ ಪ್ರೀತಿಯಿಂದ, ವಿನೋದದ ಕಾರುಣ್ಯದಿಂದ, ಒಳಬಾಳಿನ ಹೊಳಪನ್ನು, ಹೊಳಹುಗಳನ್ನು ತೋರಿಕೆಯಿಲ್ಲದಂತೆ, ಗುಣದೋಷಗಳ ಅಭಿನ್ನತೆಯಲ್ಲಿ ಕಾಣಬಲ್ಲಂತೆ, ಬರೆಯುತ್ತಾರೆ.
ಖುಷಿ ಹಂಚಿಕೊಳ್ಳಬೇಕಿತ್ತು. ಕೆಲವು ಈಜಿಪ್ಟಿನ ಮುಸ್ಲಿಂ ಕಥೆಗಾರರು ಇಸ್ಲಾಮನ್ನೂ ಇಷ್ಟೇ ಪ್ರೀತಿಯಿಂದ, ವಿನೋದದ ಕಾರುಣ್ಯದಿಂದ, ಒಳಬಾಳಿನ ಹೊಳಪನ್ನು, ಹೊಳಹುಗಳನ್ನು ತೋರಿಕೆಯಿಲ್ಲದಂತೆ, ಗುಣದೋಷಗಳ ಅಭಿನ್ನತೆಯಲ್ಲಿ ಕಾಣಬಲ್ಲಂತೆ, ಬರೆಯುತ್ತಾರೆ.
~ಅನಂತಮೂರ್ತಿ
ನವೆಂಬರ್ ೧೪, ೦೭
~ಇನ್ನಷ್ಟು ಮಾತು~
ಸಮಾಜದಲ್ಲಿ ಸತ್ಯವಂತನೆಂದು ಸಲ್ಲಲು ಕದಿಯಬಾರದು; ಆದರೆ ತಿರುಪತಿಯ ದೇವರು ಒಲಿಯಲು ಕದಿಯಬೇಕು. ರಿಚುಯಲ್ಲಿಗಾಗಿ ಕದಿಯುವ ಆಟದಲ್ಲೂ ಗಂಡ ಆಸೆಹುಟ್ಟಿದ್ದನ್ನು ಕದಿಯುವುದಿಲ್ಲ. ಅವನ ಹೆಂಡತಿಗೆ ಬೀಗತಿಯ ಹಾರ ಆಸೆಯಾಗುತ್ತದೆ; ಅದನ್ನು ಕದ್ದು ತಿಮ್ಮಪ್ಪನಿಗೆ ಕೊಟ್ಟಿದ್ದರೆ ಕದಿಯುವ ರಿಚುಯಲ್ ನೈಜವಾಗಬಹುದಿತ್ತು. ಬೀಗರ ಕಳ್ಳಗುರು ಇದನ್ನು ಒಪ್ಪಲಾರ. ಗಂಡನ ಮೇಲಿನ ಕಳ್ಳತನದ ಅಪಾದನೆಯಲ್ಲಿ ವರ್ಚುಯಲ್ ಸತ್ಯವಿದೆ; ಸಂಭಾವ್ಯ ಸತ್ಯ. ಈ ಬಗೆಯ ಒಳ ಪಠ್ಯಗಳನ್ನು ನಿಮ್ಮ ಕಥೆ ಗರ್ಭದಲ್ಲಿಟ್ಟುಕೊಂಡಿದೆ.
ಈ ಒಳ ಸತ್ಯಗಳನ್ನು ರಿಚುಯಲ್ ನಲ್ಲಿ ಬಳಸುವ ದೇವ ಕಲ್ಪನೆಯೇ ಈ ಕಥೆಯ ಅಪ್ಪಟ ದೇಸಿ ಭಾರತೀಯತೆಗೆ ಕಾರಣ. ವಾಸ್ತವದ ಸತ್ಯ ಮರೆಮಾಚದಂತೆ ಈ ಇನ್ನೊಂದು ಮಾನವತ್ವದ ನಿಜದ ಪಾಡಿನ ಸತ್ಯ ಇಣುಕುತ್ತದೆ. ಆಸೆಯ ನಿಜಸ್ವರೂಪದ ದರ್ಶನವಾಗುವುದು, ನಮ್ಮೆಲ್ಲರಲ್ಲೂ ಅಡಗಿರುವ, ಬಾಲ್ಯದಲ್ಲಿ ಪ್ರಾಯಶಃ ಎಲ್ಲರಲ್ಲೂ ವ್ಯಕ್ತವಾಗುವ, ಕದಿಯಬೇಕೆಂಬ ಅಪೇಕ್ಷೆಯಲ್ಲಿ. ಕದಿಯುವಾಗಿನ ಗೌಪ್ಯ ಸಾಹಸದಲ್ಲಿ. ಆಸೆಯೆಂಬುದರ ಈ ಪೂರ್ಣ ಅವಿಷ್ಕಾರದ ಮುಖೇನ ತಿಮ್ಮಪ್ಪನಿಗೆ ನಾವು ಪ್ರಿಯರಾಗುವುದೆಂದರೆ ದೈವಕ್ಕೂ ನಮಗೂ ಇರುವ ನಂಟಿನ ಹೊಸ ವ್ಯಾಖ್ಯೆಯನ್ನು ಮಾಡಿಕೊಂಡಂತೆ. ಹೀಗೆ ಕದ್ದಿದ್ದನ್ನು ದೇವನೆಂಬ ಮಹಾಕಳ್ಳನಿಗೆ ಒಪ್ಪಿಸಬೇಕೆಂಬ ರಿಚುಯಲ್ಲೆ ಅರ್ಥಪೂರ್ಣವಾದ್ದು. ಈ ತಿಮ್ಮಪ್ಪನಿಗೆ ಇಂದಿಗೂ ಸಲ್ಲುವ ಕಾಣಿಕೆಯಲ್ಲಿ ಹೆಚ್ಚನವು ಬ್ಲಾಕ್ ಮನಿಯೇ.
ನನಗೆ ಉಪನಯನವಾದ್ದು ತಿರುಪತಿಯಲ್ಲಿ. ನನಗಾಗ ಹತ್ತೊ ಹನ್ನೆರಡೊ ವಯಸ್ಸು. ಮೊದಲ ರೈಲ್ ಪ್ರಯಾಣ. ಪಾಪನಾಶಿನಿಯಲ್ಲಿ ಮುಳುಗಿ ಎದ್ದು, ಅಪ್ಪ ಅಮ್ಮನ ಜೊತೆ ತಿಮ್ಮಪ್ಪನ ದರ್ಶನಕ್ಕೆ ಸಾಲಿನಲ್ಲಿ ನಿಂತು ಕಾದಿದ್ದು ಆ ಸರ್ವಾಲಂಕೃತನಿಗೆ ಎದುರಾದೆ. ಈಗಲೂ ಆ ಕ್ಷಣ ನೆನಪಾಗುತ್ತದೆ. ಇವನು ದೇವರಲ್ಲ ಎನ್ನಿಸಿತು. ಆ ಕ್ಷಣದಿಂದ ನನ್ನ ಸ್ವಂತದ ಹುಡುಕಾಟವೇ ಬೇರೆಯಾಗಿದೆ . ಈ ದೃಷ್ಟಿಯಲ್ಲಿ ನಿಮ್ಮ ಕಥಾಲೋಕಕ್ಕೆ ಅನ್ಯ ನಾನು. ಆದರೆ ನಿಮ್ಮಿಂದ ನಾನು ಬಾಲ್ಯದಲ್ಲಿ ಒಪ್ಪದ ತಿಮ್ಮಪ್ಪನ ದರ್ಶನ ಈಗ ನಿಮ್ಮಿಂದ ಆಯಿತು. ಅನುಮಾನಿಸುತ್ತ ಮೆಚ್ಚುತ್ತ ಅವನನ್ನು ನೋಡುತ್ತ ಇದ್ದೇನೆ. ಪಾಪ ತಿಮ್ಮಪ್ಪನಿಗೆ ಈಗ ನಿದ್ದೆಯೇ ಇಲ್ಲವಂತೆ. ಅವನು ನಿದ್ದೆ ಮಾಡುತ್ತ ಇದ್ದ ನನ್ನ ಉಪನಯನದ ಕಾಲಕ್ಕಿಂತ ಹೆಚ್ಚು ಕಾಲ ಕಣ್ಣು ಕಾಣಿಸದಷ್ಟು ದೊಡ್ಡ ನಾಮಧರಿಸಿ ಅವನು ಟೂರಿಸ್ಟರು ಹೆಚ್ಚಾಗಿರುವದರಿಂದ ಎಚ್ಚರವಾಗಿರಬೇಕಾಗಿ ಬಂದಿದೆಯಂತೆ.
~ಅನಂತಮೂರ್ತಿ
Tuesday, December 4, 2007
ದಾ ರು ಬೇಂದ್ರೆ?!!
ನನ್ನ ನಾನು ಮರೆಯುವಂತೆ
ಮದ್ಯವನ್ನು ಕುಡಿದೆನು
ತನ್ನ ತಾನು ಅರಿಯುವಂಥ
ವಿದ್ಯೆಯನು ಹಿಡಿದೆನು
~ ದ ರಾ ಬೇಂದ್ರೆ
ನನ್ನ ಇಷ್ಟದ ಕವಿ ದ ರಾ ಬೇಂದ್ರೆ ಕೂಡ ಮದ್ಯದ ಕುರಿತು ಪದ್ಯ ಬರೆದಿದ್ದಾರೆಂಬ ವಿಷಯ ತಿಳಿದು ಒಂದು ಫುಲ್ ಬಾಟಲು ಕುಡಿದಷ್ಟೇ ಖುಷಿಯಾಯಿತು. ಮದ್ಯದ ಪದ್ಯಗಳನ್ನು ಕೆಲಸವಿಲ್ಲದ ಕುಡುಕರು ಮಾತ್ರ ಬರೆಯುತ್ತಾರೆ ಎಂಬ ಕೀಳರಿಮೆಯನ್ನು ತೊಡೆದ ಈ 'ಮದ್ಯ' ಎಂಬ ಕವಿತೆಯನ್ನು ಹುಡುಕಿ ಕೊಟ್ಟಿದ್ದು ಸುಧನ್ವಾ. ಮೇಲಿರುವುದು ಪದ್ಯದ ಕೊನೆಯ ನಾಲ್ಕು ಸಾಲುಗಳು.
ಮದ್ಯವನ್ನು ಕುಡಿದೆನು
ತನ್ನ ತಾನು ಅರಿಯುವಂಥ
ವಿದ್ಯೆಯನು ಹಿಡಿದೆನು
~ ದ ರಾ ಬೇಂದ್ರೆ
ನನ್ನ ಇಷ್ಟದ ಕವಿ ದ ರಾ ಬೇಂದ್ರೆ ಕೂಡ ಮದ್ಯದ ಕುರಿತು ಪದ್ಯ ಬರೆದಿದ್ದಾರೆಂಬ ವಿಷಯ ತಿಳಿದು ಒಂದು ಫುಲ್ ಬಾಟಲು ಕುಡಿದಷ್ಟೇ ಖುಷಿಯಾಯಿತು. ಮದ್ಯದ ಪದ್ಯಗಳನ್ನು ಕೆಲಸವಿಲ್ಲದ ಕುಡುಕರು ಮಾತ್ರ ಬರೆಯುತ್ತಾರೆ ಎಂಬ ಕೀಳರಿಮೆಯನ್ನು ತೊಡೆದ ಈ 'ಮದ್ಯ' ಎಂಬ ಕವಿತೆಯನ್ನು ಹುಡುಕಿ ಕೊಟ್ಟಿದ್ದು ಸುಧನ್ವಾ. ಮೇಲಿರುವುದು ಪದ್ಯದ ಕೊನೆಯ ನಾಲ್ಕು ಸಾಲುಗಳು.
Sunday, December 2, 2007
ಮದ್ಯಸಾರ~ಎಂಟನೇ ರೌಂಡು
ಬೀರು ವಿಸ್ಕಿ ಜಿನ್ನು ವೈನು
ಪರಮಾತ್ಮ ಒಬ್ನೆ ಹೆಸರು ಬೇರೆ
ಹೆಂಡ ಅಂದ್ರೆ ಇನ್ನೂ ವೈನು
ಕನ್ನಡ ಪದಗಳ ಅಮಲೇ ಬೇರೆ
*
ಅನುಭವದಿಂದಲೇ ಬರುವುದು ಎಲ್ಲ
ಸುರಿದ ಬೀರು ನೊರೆ ಉಕ್ಕದಿರುವುದು
ನೆನಪುಗಳ ಬಿರುಮಳೆಗೆ ಸಿಕ್ಕದಿರುವುದು
ಇತರರಿಗೆ ಕಾಣುವಂತೆ ಬಿಕ್ಕದಿರುವುದು
*
ಗುಂಡು ಎಣ್ಣೆ ತೀರ್ಥ
ಅಂದೋರೆಲ್ಲಾ ನಮ್ಮಂಥೋರೆ
ಪರ್ಮಾತ್ಮ ಅಂತ ಕರೆದೋನ್ ಮಾತ್ರ
ದೇವರಂಥಾ ಕುಡುಕ ಖರೇ
*
ಖುಷಿಗಾಗಿ ಇಲ್ಲಿಗೆ ಬಂದರೆ
ಪರವಾಗಿಲ್ಲ, ನಿನ್ನಷ್ಟಕ್ಕೆ ಕುಡಿ
ಕೇಕೆ, ಚೀರಾಟ ಬೇಡ, ನೆನಪಿರಲಿ
ನಿನದಲ್ಲ, ಬಾರು ದುಃಖಿತರ ಗುಡಿ
*
ಮದ್ಯಪಾನ ಒಂದು ಧ್ಯಾನ
ಕುಡಿಯಬೇಕು ಒಬ್ಬರೇ
ಸ್ವಗತವೈಭವದಲಿ ಮೈಮರೆತಿರೆ
ಗೆಳೆಯರು ತಾನೆ ಬಂದು ತಬ್ಬರೆ?
ಪರಮಾತ್ಮ ಒಬ್ನೆ ಹೆಸರು ಬೇರೆ
ಹೆಂಡ ಅಂದ್ರೆ ಇನ್ನೂ ವೈನು
ಕನ್ನಡ ಪದಗಳ ಅಮಲೇ ಬೇರೆ
*
ಅನುಭವದಿಂದಲೇ ಬರುವುದು ಎಲ್ಲ
ಸುರಿದ ಬೀರು ನೊರೆ ಉಕ್ಕದಿರುವುದು
ನೆನಪುಗಳ ಬಿರುಮಳೆಗೆ ಸಿಕ್ಕದಿರುವುದು
ಇತರರಿಗೆ ಕಾಣುವಂತೆ ಬಿಕ್ಕದಿರುವುದು
*
ಗುಂಡು ಎಣ್ಣೆ ತೀರ್ಥ
ಅಂದೋರೆಲ್ಲಾ ನಮ್ಮಂಥೋರೆ
ಪರ್ಮಾತ್ಮ ಅಂತ ಕರೆದೋನ್ ಮಾತ್ರ
ದೇವರಂಥಾ ಕುಡುಕ ಖರೇ
*
ಖುಷಿಗಾಗಿ ಇಲ್ಲಿಗೆ ಬಂದರೆ
ಪರವಾಗಿಲ್ಲ, ನಿನ್ನಷ್ಟಕ್ಕೆ ಕುಡಿ
ಕೇಕೆ, ಚೀರಾಟ ಬೇಡ, ನೆನಪಿರಲಿ
ನಿನದಲ್ಲ, ಬಾರು ದುಃಖಿತರ ಗುಡಿ
*
ಮದ್ಯಪಾನ ಒಂದು ಧ್ಯಾನ
ಕುಡಿಯಬೇಕು ಒಬ್ಬರೇ
ಸ್ವಗತವೈಭವದಲಿ ಮೈಮರೆತಿರೆ
ಗೆಳೆಯರು ತಾನೆ ಬಂದು ತಬ್ಬರೆ?
Friday, November 30, 2007
ಪುಸ್ತಕ ಸೊಗಸು
ಜಯಂತ ಕಾಯ್ಕಿಣಿಯವರ `ಶಬ್ದತೀರ' ಅಂಕಣ ಬರಹ ಸಂಗ್ರಹಕ್ಕೆ ಪುಸ್ತಕ ಪ್ರಾಧಿಕಾರದ `ಪುಸ್ತಕ ಸೊಗಸು' ಬಹುಮಾನ(ಮೂರನೇ ಸ್ಥಾನ) ಬಂದಿದೆ. ಪುಸ್ತಕದ ಒಪ್ಪ ಓರಣಗಳನ್ನು (ಮುಖಪುಟ, ಒಳಪುಟ ವಿನ್ಯಾಸ, ಕಾಗದ ಗುಣಮಟ್ಟ ಇತ್ಯಾದಿ)ಪರಿಗಣಿಸಿ ನೀಡಲಾಗುವ ಬಹುಮಾನವಿದು. ಶಬ್ದತೀರದ ವಿನ್ಯಾಸ ನನ್ನದಾದರೂ ಕಾಯ್ಕಿಣಿಯವರ ಕಾಣಿಕೆಯೇ ಹೆಚ್ಚು. ರೇಖಾಚಿತ್ರ ನೀಡಿದ ಇಕ್ಬಾಲ್ ಅವರಿಗೆ ಥ್ಯಾಂಕ್ಸ್.
ಮೊದಲ ಸ್ಥಾನ ಗಳಿಸಿದ 'ಪಕ್ಷಿ ಪ್ರಪಂಚ' ಹಾಗೂ ಎರಡನೇ ಸ್ಥಾನ ಗಳಿಸಿದ `ಚಾಚಾ ನೆಹರೂ ಮತ್ತು...' ಪುಸ್ತಕಗಳ ಮುಖಪುಟಗಳನ್ನೂ ಇಲ್ಲಿ ಕೊಟ್ಟಿದ್ದೇನೆ. ನಾಲ್ಕನೇ ಬಹುಮಾನ ಗಳಿಸಿದ `ಗುಬ್ಬಿಯ ಸ್ವರ್ಗ' (ಭಾಗೀರಥಿ ಹೆಗಡೆ ಕವಿತಾ ಸಂಗ್ರಹ)ಪುಸ್ತಕದ ಮುಖಪುಟ ನಿಮಗೇನಾದರೂ ಸಿಕ್ಕರೆ ದಯವಿಟ್ಟು ನನಗೆ ಇ ಮೇಲ್ ಮಾಡಿ: raghuapara@gmail.com . ಇವುಗಳ ಜತೆ ಸೇರಿಸುತ್ತೇನೆ.
Monday, November 26, 2007
ಹರೀಶ್ ಕೇರನ ಎರಡು ಕವಿತೆ
-೧-
ಅಪಾರ ದುಃಖದ ಕಡಲನ್ನು
ದಾಟಿಸಬಹುದು ಅಂತ
ಕವಿತೆಯ ನಂಬಿಕೊಂಡೆ
ಅದು ನನ್ನ ನಡುನೀರಿನಲ್ಲಿ ಕೈಬಿಟ್ಟಿದೆ
ಅಲೆಗಳೋ ಲಯತಪ್ಪಿವೆ
ನಾದದ ಹಡಗೊಂದು
ದೂರದಲ್ಲಿ ಹಾದುಹೋಗಿದೆ
ನಾನೀಗ ಉಪ್ಪಿನ ಗೊಂಬೆ
ಅಬ್ಬರದ ಕಡಲು
ಅಪರಂಪಾರ
-೨-
ಕವಿತೆಯ ಬಗೆಗೆ ನನಗೆ
ಸಿಟ್ಟು ಮತ್ತು ಪ್ರೀತಿ
ಪ್ರೀತಿ ಯಾಕೆಂದರೆ ಅದು ನನ್ನಿಂದ
ಏನನ್ನೂ ಬೇಡುವುದಿಲ್ಲ
ಮುದ್ದು ಬೆಕ್ಕಿನಂತೆ ಬೆಚ್ಚಗೆ ಜತೆಗಿರುತ್ತದೆ
ಸಿಟ್ಟು ಯಾಕೆಂದರೆ ಅದು ನನ್ನ
ದುಃಖವ ದೂರ ಮಾಡುವುದಿಲ್ಲ
ಅತೃಪ್ತಿಯ ನೋವಿಗೆ
ಅರಿವಿನ ಉಪ್ಪು ಸೇರಿಸುತ್ತದೆ
ಮಾತು ಎಲ್ಲವ ಬಚ್ಚಿಡುತ್ತದೆ
ಕವಿತೆ ಹೇಳಿಯೂ ಉಳಿಸುತ್ತದೆ
~ಹರೀಶ್ ಕೇರ
ಅಪಾರ ದುಃಖದ ಕಡಲನ್ನು
ದಾಟಿಸಬಹುದು ಅಂತ
ಕವಿತೆಯ ನಂಬಿಕೊಂಡೆ
ಅದು ನನ್ನ ನಡುನೀರಿನಲ್ಲಿ ಕೈಬಿಟ್ಟಿದೆ
ಅಲೆಗಳೋ ಲಯತಪ್ಪಿವೆ
ನಾದದ ಹಡಗೊಂದು
ದೂರದಲ್ಲಿ ಹಾದುಹೋಗಿದೆ
ನಾನೀಗ ಉಪ್ಪಿನ ಗೊಂಬೆ
ಅಬ್ಬರದ ಕಡಲು
ಅಪರಂಪಾರ
-೨-
ಕವಿತೆಯ ಬಗೆಗೆ ನನಗೆ
ಸಿಟ್ಟು ಮತ್ತು ಪ್ರೀತಿ
ಪ್ರೀತಿ ಯಾಕೆಂದರೆ ಅದು ನನ್ನಿಂದ
ಏನನ್ನೂ ಬೇಡುವುದಿಲ್ಲ
ಮುದ್ದು ಬೆಕ್ಕಿನಂತೆ ಬೆಚ್ಚಗೆ ಜತೆಗಿರುತ್ತದೆ
ಸಿಟ್ಟು ಯಾಕೆಂದರೆ ಅದು ನನ್ನ
ದುಃಖವ ದೂರ ಮಾಡುವುದಿಲ್ಲ
ಅತೃಪ್ತಿಯ ನೋವಿಗೆ
ಅರಿವಿನ ಉಪ್ಪು ಸೇರಿಸುತ್ತದೆ
ಮಾತು ಎಲ್ಲವ ಬಚ್ಚಿಡುತ್ತದೆ
ಕವಿತೆ ಹೇಳಿಯೂ ಉಳಿಸುತ್ತದೆ
~ಹರೀಶ್ ಕೇರ
Friday, November 23, 2007
ಮದ್ಯಸಾರ ~ ಏಳನೇ ರೌಂಡು
1
ಎಲ್ಲೋ ಒಮ್ಮೆ ಅಪರೂಪಕ್ಕೆ
ತೆರೆಯುತ್ತಣ್ಣ ಮನದ ರೆಕ್ಕೆ
ಕುಡಿದಾಗೆಲ್ಲ ತೇಲಾಡ್‌ಲಿಕ್ಕೆ
ಆಗಲ್ಲಣ್ಣ, ಅದೂ ಲಕ್ಕೇ
2
ಬೇಕಾಬಿಟ್ಟಿ ಕುಡಿತಾ ಹೋದ್ರೆ
ಬದುಕೇ ಸರ್ವನಾಶ
ಮನಸುಕೊಟ್ಟು ಕುಡಿದು ನೋಡಿ
ಶೀಷದಲ್ಲೂ ಈಶ
3
ಬೇಡ್ಕೊಂತೀನಿ ಬಾರಂಗಳದಲಿ
ನೆರೆದಿರುವ ಸಮಸ್ತ ಜನಕೆ
ಕುಡಿದು ಮಾಡದಿರಿ ಉಪದ್ರವ
ಕಳೆಯಬೇಡಿ ದ್ರವದ ಘನತೆ
4
ದೊಡ್ಡ ನೋವ ಹೀರಿಕೊಳುವ
`ದ್ರವ'ತಾರೆ ಹೆಂಡ
ಸಣ್ಣತನವ ಕಾರಿಕೊಳಲು
ಕುಡಿವನೆಂಥ ಭಂಡ?
5
ಬಿಟ್ಟು ಹೊರಟಾಗ ಮನ ಅರಚಿತ್ತು
ಎದೆಯ ತುಂಬೆಲ್ಲಾ ಕಾಟು ಚಿತ್ತು
ತಿರುಗಿ ಬಂದಾಗಾಕೆ ನಾ ಕುಡಿದು ಚಿತ್ತು
ಬಾಟಲೆದುರು ಪ್ರೇಮ ಯಕಃಶ್ಚಿತ್ತು
ಎಲ್ಲೋ ಒಮ್ಮೆ ಅಪರೂಪಕ್ಕೆ
ತೆರೆಯುತ್ತಣ್ಣ ಮನದ ರೆಕ್ಕೆ
ಕುಡಿದಾಗೆಲ್ಲ ತೇಲಾಡ್‌ಲಿಕ್ಕೆ
ಆಗಲ್ಲಣ್ಣ, ಅದೂ ಲಕ್ಕೇ
2
ಬೇಕಾಬಿಟ್ಟಿ ಕುಡಿತಾ ಹೋದ್ರೆ
ಬದುಕೇ ಸರ್ವನಾಶ
ಮನಸುಕೊಟ್ಟು ಕುಡಿದು ನೋಡಿ
ಶೀಷದಲ್ಲೂ ಈಶ
3
ಬೇಡ್ಕೊಂತೀನಿ ಬಾರಂಗಳದಲಿ
ನೆರೆದಿರುವ ಸಮಸ್ತ ಜನಕೆ
ಕುಡಿದು ಮಾಡದಿರಿ ಉಪದ್ರವ
ಕಳೆಯಬೇಡಿ ದ್ರವದ ಘನತೆ
4
ದೊಡ್ಡ ನೋವ ಹೀರಿಕೊಳುವ
`ದ್ರವ'ತಾರೆ ಹೆಂಡ
ಸಣ್ಣತನವ ಕಾರಿಕೊಳಲು
ಕುಡಿವನೆಂಥ ಭಂಡ?
5
ಬಿಟ್ಟು ಹೊರಟಾಗ ಮನ ಅರಚಿತ್ತು
ಎದೆಯ ತುಂಬೆಲ್ಲಾ ಕಾಟು ಚಿತ್ತು
ತಿರುಗಿ ಬಂದಾಗಾಕೆ ನಾ ಕುಡಿದು ಚಿತ್ತು
ಬಾಟಲೆದುರು ಪ್ರೇಮ ಯಕಃಶ್ಚಿತ್ತು
Tuesday, November 20, 2007
ಗೆಳೆಯ ಸುಧನ್ವನ ಒಂದು ಹೊಸ ಕವಿತೆ
~ಹೊ ರ ಟಾ ಗ~
ಮಿನುಗುತ್ತಿದ್ದ ಅಮ್ಮನ ಮುಖ
ಇದ್ದಕ್ಕಿದ್ದಂತೆ ಆರಿಸಿದ ದೀಪ.
ಕಣ್ಣುಗಳು ಬಾಡಿ, ಗಂಟಲ ಸೆರೆ ಉಬ್ಬಿ
‘ಛೆ, ಇವತ್ತು ಗಿಡಕ್ಕೇ ನೀರೇ ಹಾಕಿಲ್ಲ’
ಎಂಬ ವಿಷಯಾಂತರ ಯತ್ನದಲ್ಲಿ
ಅಪ್ಪ ಬಂದು ಅಮ್ಮನ ಸ್ವರದಲ್ಲಿ ಮಾತಾಡುತ್ತಾರೆ
ಕಂಪಿಸುತ್ತದೆ ಅವಳ ದನಿ.
ಕೊನೇಕ್ಷಣದಲ್ಲಿ ಮತ್ತೊಂದಷ್ಟು ಕೆಲಸಗಳ ನೆನಪಿಸಿಕೊಂಡು
‘ಹಾಗಿದ್ರೆ ಪೈಪ್ ಹಾಕೊ ಕೆಲ್ಸ, ಸ್ಕೂಟರ್ ರಿಪೇರಿ ಮಾಡಿಸ್ತೇವೆ,
ಹೊಸ ಡ್ರಮ್, ಒಂದು ಫೈಬರ್ ಚಯರ್ ತಗೊಳ್ತೇವೆ ’ ಕ್ಷಣ ತಡೆದು
‘ಮತ್ತೆ ಎಂತದ್ದಕ್ಕೂ ಮುಂದಿನ ತಿಂಗಳು ಬರ್‍ತೀಯಲ್ಲ’
ಎಂದು ಒಳನಡೆಯುತ್ತಾಳೆ, ಕತ್ತಲಲ್ಲಿ ಕೈಬೀಸುತ್ತೇನೆ.
ಅಂಗನವಾಡಿಗೆ, ಶಾಲೆಗೆ ಹೊರಟಾಗ- ಇದೇ ಅಮ್ಮ
ಉಲ್ಲಾಸದ ಮೂಟೆ; ದೂರದ ಕಾಲೇಜಿಗೆ ಹೊರಟಾಗ ಕೊಂಚ ಮಂಕು
ಅಪ್ಪನೇ ಹೊರಟುಹೋದಾಗ ನಾಲ್ಕು ದಿನಗಳ ಸಂಕಟ
ಮತ್ತೆ ಒಳಗೊಳಗೆ ಬೇಯುತ್ತ ಬಸಿವ ಬೆವರು, ದೇವರು ದಿಂಡರು.
ಅವಳು ಯಾವತ್ತೂ ಎಲ್ಲಿಗೂ ಹೊರಡುವುದಿಲ್ಲ
ಬಾ ಎಂದರೂ ಇಲ್ಲ, ಹೋಗೆಂದರೂ ಇಲ್ಲ
ಕಾರಣವಿಷ್ಟೆ-ಅವಳು ಹೊರಟಾಗ
ಕಳುಹಿಸಿಕೊಡಲು ಯಾರೂ ಇರುವುದಿಲ್ಲ.
~ಸುಧನ್ವಾ ದೇರಾಜೆ
Thursday, November 15, 2007
ಮದ್ಯಸಾರ- ಆರು
ಕುಡುಕನ ಮಾತಿವು ಏನು ಕೇಳುವಿರಿ
ವಚನದ ಸಾಲಲ್ಲ, ವಾಚನವೂ ಸರಿ ಇಲ್ಲ
ದಾಸರ ಪದವಲ್ಲ, ಉದಾಸರ ಪದವೆ ಎಲ್ಲ
ಭಜನೆ ತರಹದವಲ್ಲ, ವಿಭಜನೆ ವಿರಹದವು
*
ಹೆಂಡತಿಗೆ ಹೊಡೆಯುತ್ತೇವೆಂಬುದು ಹಸೀ ಸುಳ್ಳು
ದುಃಖವಾದಾಗ ಒಂದಿಷ್ಟು ಎಣ್ಣೆ ಹೊಡೆಯುವುದು ನಿಜ
ಪುಕಾರು ಮಾಡುವಿರೇಕೆ ನಡತೆ ಸರಿ ಇಲ್ಲೆಂದು
ಕುಡಿದಾಗ ಒಂದಿಷ್ಟು ಹೆಜ್ಜೆ ತಪ್ಪುವುದು ನಿಜ
*
ಮದ್ಯದ ಸೆಷನ್ನು ಯಾವತ್ತೂ ಅಪೂರ್ಣವೇ
ಮಧ್ಯದಲ್ಲೇ ಏಳಬೇಕು ತುಂಬಿದ್ದರೂ ಬಟ್ಟಲು
'ಕ್ವಾರ್ಟರ್' ಫೈನಲ್ಲೇ ಇಲ್ಲಿ ಕೊನೆಯ ರೌಂಡು
ಮುಗಿಸಲೇಬೇಕೀಗ ಸೇಫಾಗಿ ಮುಟ್ಟಲು
*
ಗುಂಡು ಹಾಕುವುದು ತಪ್ಪು
ಎಣ್ಣೆ ಹೊಡೆಯುವುದು ತಪ್ಪು
ಡ್ರಿಂಕ್ಸ್ ಮಾಡುವುದು ತಪ್ಪು
ನೈಂಟಿ ತಗಳುವುದು ತಪ್ಪು
ಮದ್ಯವನ್ನು ಕುಡಿಯುವುದೇ ಸರಿ!
*
ಒಂಟಿ ಬಾಳನೂ ಸವೆಸಿಬಿಡಬಹುದು
ತಪಿಸಲೊಂದು ಸಿಗದ ಪ್ರೇಮವಿದ್ದರೆ
ಇರಿಯುವ ದುಃಖವೂ ಹಿತವಾದ ನೋವು
ಎರಡೇ ಎರಡು ಪೆಗ್ಗು ಒಳಗೆ ಬಿದ್ದರೆ
(ಈ ಕುಡುಕನ ಪದಗಳನ್ನು ಮೆಚ್ಚಿ ಬರೆದ 'ಅವಧಿ' ಬ್ಲಾಗ್‌ಗೆ ಕೃತಜ್ಞತೆ)
Monday, November 12, 2007
ನನ್ನ ಕೆಲ ಮುಖಪುಟಗಳು
Thursday, November 8, 2007
ದುಃಖಿತರ ದೀಪಾವಳಿ
ಮನೆಯ ದಾರಿಯಲೇ ಕಾದು ನಿಂತಿದೆ ಹಾಳು ಸಿಗ್ನಲ್ಲು ದೀಪ
ಹೊಸಿಲಲ್ಲಿ ನಿಂತು ಒಳಬರಲು ಅನುಮಾನಿಸುತಿದೆ ಮಣ್ಣ ದೀಪ
ಸ್ಟವ್‌ನೆದುರು ಬಿಕ್ಕುತಿರುವವಳ ಕಣ್ಣಲಿ ಕರಗುತಿದೆ ನೀಲಿ ದೀಪ
ಕಾಮಾಟಿಪುರದಲ್ಲೋ ನಖಶಿಖಾಂತ ಉರಿಯುತಿದೆ ಕೆಂಪು ದೀಪ
ದೀಪಗಳೆಲ್ಲ ಆರಿದಮೇಲೂ ಗೋಡೆ ಮೇಲೆ ಹೊಳೆದಿದೆ ಕಾಲದೀಪ
ಇರುಳ ಸದ್ದೊಂದಕೆ ಬೆಚ್ಚಿ ಎದ್ದಿದೆ ಒಂಟಿ ಹೆಂಗಸಿನ ಬ್ಯಾಟರಿದೀಪ
ಅರಿಯದ ದುಗುಡದಲಿ ಹೊಯ್ದಾಡುತಿರುವಾಗ ಮನದ ದೀಪ
ದುಃಖಿತರ ಮನೆ ಮೇಲೇಕೆ ಬೆಳಗಿದೆ ಚಂದ್ರನೆಂಬ ಆಕಾಶದೀಪ
ಸರಿಹೊತ್ತಿನ ಸಂದೇಶಕೆ ಹೊತ್ತಿಕೊಂಡಿದೆ ಮೊಬೈಲು ದೀಪ:
ಕೋರಲು ದೀಪಾವಳಿ ಶುಭಾಶಯ, ತೊಡೆಯಲು ಎಲ್ಲ ಶಾಪ
ಹೊಸಿಲಲ್ಲಿ ನಿಂತು ಒಳಬರಲು ಅನುಮಾನಿಸುತಿದೆ ಮಣ್ಣ ದೀಪ
ಸ್ಟವ್‌ನೆದುರು ಬಿಕ್ಕುತಿರುವವಳ ಕಣ್ಣಲಿ ಕರಗುತಿದೆ ನೀಲಿ ದೀಪ
ಕಾಮಾಟಿಪುರದಲ್ಲೋ ನಖಶಿಖಾಂತ ಉರಿಯುತಿದೆ ಕೆಂಪು ದೀಪ
ದೀಪಗಳೆಲ್ಲ ಆರಿದಮೇಲೂ ಗೋಡೆ ಮೇಲೆ ಹೊಳೆದಿದೆ ಕಾಲದೀಪ
ಇರುಳ ಸದ್ದೊಂದಕೆ ಬೆಚ್ಚಿ ಎದ್ದಿದೆ ಒಂಟಿ ಹೆಂಗಸಿನ ಬ್ಯಾಟರಿದೀಪ
ಅರಿಯದ ದುಗುಡದಲಿ ಹೊಯ್ದಾಡುತಿರುವಾಗ ಮನದ ದೀಪ
ದುಃಖಿತರ ಮನೆ ಮೇಲೇಕೆ ಬೆಳಗಿದೆ ಚಂದ್ರನೆಂಬ ಆಕಾಶದೀಪ
ಸರಿಹೊತ್ತಿನ ಸಂದೇಶಕೆ ಹೊತ್ತಿಕೊಂಡಿದೆ ಮೊಬೈಲು ದೀಪ:
ಕೋರಲು ದೀಪಾವಳಿ ಶುಭಾಶಯ, ತೊಡೆಯಲು ಎಲ್ಲ ಶಾಪ
Tuesday, November 6, 2007
ಮದ್ಯಸಾರ ಭಾಗ -ಐದು
*
ಮದ್ಯಸಾರ ದೀಪದ ಕೆಳಗೆ ಇರುವುದಿಲ್ಲ ಕತ್ತಲು
ಕತ್ತಲಂತೆ ಕಂಡರೂನೂ ಲೋಕವಲ್ಲಿ ಬೆತ್ತಲು
ಗೀತಸಾರ ವೇದಸಾರ ಗಾದೆಸಾರ ಬದುಕಲು
ಮದ್ಯಸಾರವೇನು ಕಡಿಮೆ ಗಮನ ಕೊಡಿ ಅತ್ತಲೂ
*
ಬಡವರ ಮನೆಗೂ
ಭಿಕ್ಷುಕರು ಬರುವರು
ಒಮ್ಮೊಮ್ಮೆ ಕುಡುಕನನ್ನೂ ಜನ
ದಾರಿ ಕೇಳುವರು
*
ಹುಟ್ಟಿದೊಡನೆ ಹಾಲು ಕಡೆಗೊಂದಿನ ವಿಷ
ನಡುವೆ ನಿತ್ಯವೂ ನೀರು ಕುಡಿಸೋ ಬದುಕು
ಕುಡಿತವೊಂದೇ ಇಷ್ಟು ದಿನ ಉಳಿಸಿದ್ದು ಕೇಳೇ
ಮರೆಯದೆ ನೆನೆಯುವೆನು ಸಂಜೆಯಾ ವೇಳೆ
*
ಖಾಲಿಯಾಗಿದೆ ಬದುಕು
ಖಾಲಿಯಾಗಿದೆ ಬಾಟಲಿ
ಉನ್ಮತ್ತ ಹೃದಯವನು ಹೊತ್ತು
ರಸ್ತೆಯನೀಗ ಹೇಗೆ ದಾಟಲಿ?
*
ಅರ್ಜೆಂಟ್ ಕೆಲಸವೇನು ಎಲ್ರಿಗೂ ಇರುತ್ತೆ
ನಿಧಾನ ಕುಡಿಯಬೇಕು ಮದ್ಯ
ಕುಡುಕನಿಗೇನು ಹಿಂದಿಲ್ಲ ಮುಂದಿಲ್ಲ
ಬಾರಿನಲ್ಲಿ ಇರೋದೊಂದೇ: ಅದು ಸದ್ಯ
*
ಕುಡಿದು ಮೈಮರೆತಾಗ ಎಲ್ಲರೂ ಒಂದೆನಾ
ಅದಕೇ ಅನ್ನೋದು ಬಾರೊಂದು ನಂದನ
ಸೆರೆ ಮಾಡಿದಾತನಿಗೆ ಇದೋ ನನ್ನ ವಂದನಾ
ಎದಕೆ ಬೇಕಿನ್ನು ಬೇರೊಂದು ಬಂಧನ?
*
ದುಃಖವನ್ನು ಬಿಯರಿನಂತೆ ಬಗ್ಗಿಸಿಕೊಂಡು
ಗಂಟಲಸೆರೆ ಉಬ್ಬುವಂತೆ
ಗಟಗಟ ಕುಡಿಯಬಲ್ಲ ನನಗೆ
ಸುಖದ ಹಂಬಲವಿಲ್ಲ
*
ಮದ್ಯ ಕರುಳನ್ನು ಸುಡುತ್ತದೆ
ಎಂಬುದು ಬೇರೆ ಮಾತು
ಮನದ ನೋವಿಗಂತೂ ಅದು ದಿವ್ಯೌಷಧಿ
ಸೈಡ್ ಎಫೆಕ್ಟಿಲ್ಲದ ಔಷಧಿಯುಂಟೆ ಹೇಳಿ?
ಮದ್ಯಸಾರ ದೀಪದ ಕೆಳಗೆ ಇರುವುದಿಲ್ಲ ಕತ್ತಲು
ಕತ್ತಲಂತೆ ಕಂಡರೂನೂ ಲೋಕವಲ್ಲಿ ಬೆತ್ತಲು
ಗೀತಸಾರ ವೇದಸಾರ ಗಾದೆಸಾರ ಬದುಕಲು
ಮದ್ಯಸಾರವೇನು ಕಡಿಮೆ ಗಮನ ಕೊಡಿ ಅತ್ತಲೂ
*
ಬಡವರ ಮನೆಗೂ
ಭಿಕ್ಷುಕರು ಬರುವರು
ಒಮ್ಮೊಮ್ಮೆ ಕುಡುಕನನ್ನೂ ಜನ
ದಾರಿ ಕೇಳುವರು
*
ಹುಟ್ಟಿದೊಡನೆ ಹಾಲು ಕಡೆಗೊಂದಿನ ವಿಷ
ನಡುವೆ ನಿತ್ಯವೂ ನೀರು ಕುಡಿಸೋ ಬದುಕು
ಕುಡಿತವೊಂದೇ ಇಷ್ಟು ದಿನ ಉಳಿಸಿದ್ದು ಕೇಳೇ
ಮರೆಯದೆ ನೆನೆಯುವೆನು ಸಂಜೆಯಾ ವೇಳೆ
*
ಖಾಲಿಯಾಗಿದೆ ಬದುಕು
ಖಾಲಿಯಾಗಿದೆ ಬಾಟಲಿ
ಉನ್ಮತ್ತ ಹೃದಯವನು ಹೊತ್ತು
ರಸ್ತೆಯನೀಗ ಹೇಗೆ ದಾಟಲಿ?
*
ಅರ್ಜೆಂಟ್ ಕೆಲಸವೇನು ಎಲ್ರಿಗೂ ಇರುತ್ತೆ
ನಿಧಾನ ಕುಡಿಯಬೇಕು ಮದ್ಯ
ಕುಡುಕನಿಗೇನು ಹಿಂದಿಲ್ಲ ಮುಂದಿಲ್ಲ
ಬಾರಿನಲ್ಲಿ ಇರೋದೊಂದೇ: ಅದು ಸದ್ಯ
*
ಕುಡಿದು ಮೈಮರೆತಾಗ ಎಲ್ಲರೂ ಒಂದೆನಾ
ಅದಕೇ ಅನ್ನೋದು ಬಾರೊಂದು ನಂದನ
ಸೆರೆ ಮಾಡಿದಾತನಿಗೆ ಇದೋ ನನ್ನ ವಂದನಾ
ಎದಕೆ ಬೇಕಿನ್ನು ಬೇರೊಂದು ಬಂಧನ?
*
ದುಃಖವನ್ನು ಬಿಯರಿನಂತೆ ಬಗ್ಗಿಸಿಕೊಂಡು
ಗಂಟಲಸೆರೆ ಉಬ್ಬುವಂತೆ
ಗಟಗಟ ಕುಡಿಯಬಲ್ಲ ನನಗೆ
ಸುಖದ ಹಂಬಲವಿಲ್ಲ
*
ಮದ್ಯ ಕರುಳನ್ನು ಸುಡುತ್ತದೆ
ಎಂಬುದು ಬೇರೆ ಮಾತು
ಮನದ ನೋವಿಗಂತೂ ಅದು ದಿವ್ಯೌಷಧಿ
ಸೈಡ್ ಎಫೆಕ್ಟಿಲ್ಲದ ಔಷಧಿಯುಂಟೆ ಹೇಳಿ?
Wednesday, October 24, 2007
ಅರೆ ರೇ!
ಅನನ್ಯ ದಿಗ್ದರ್ಶಕ ಸತ್ಯಜಿತ್ ರೇ ತಮ್ಮ ಚಿತ್ರಕತೆ ಪುಸ್ತಕದಲ್ಲಿ ರೇಖಾಚಿತ್ರಗಳನ್ನು ಬಿಡಿಸುತ್ತಿದ್ದರು ಎಂಬುದು ಗೊತ್ತಿತ್ತು. ಆದರೆ ರೇ ಮುಖಪುಟ ವಿನ್ಯಾಸವನ್ನೂ ಮಾಡಿದ್ದರು ಎಂಬ ವಿಷಯ ಮೊನ್ನೆಯಷ್ಟೇ ತಿಳಿದು ಅರೆರೇ ಅನ್ನಿಸಿತು. ಮೊದಲ ಪುಸ್ತಕಕ್ಕೆ ರಕ್ಷಾಪುಟ ರಚಿಸಿದಾಗ ಸತ್ಯಜಿತ್ ರೇ ಅವರಿಗೆ ಬರೀ 24 ವರ್ಷ. ಪಶ್ಚಿಮದ ವಿನ್ಯಾಸಗಳಿಂದ ತೀರಾ ಭಿನ್ನವಾದ ಅವರ ವಿನ್ಯಾಸಗಳು ಜನಮೆಚ್ಚುಗೆಗೆ ಪಾತ್ರವಾದವು. ಪಥೇರ್ ಪಾಂಚಾಲಿ(ಸಂಗ್ರಹ ರೂಪ) ಪುಸ್ತಕಕ್ಕೆ ಮುಖಪುಟ ರಚಿಸಿದ ನಂತರವೇ ಅವರು ಅದನ್ನು ಬೆಳ್ಳಿತೆರೆಗೆ ತಂದಿದ್ದು. ಆದರೆ ಸಿನಿಮಾಕ್ಕೆ ಬಂದ ನಂತರ ರೇ ಹೊದಿಕೆ ವಿನ್ಯಾಸವನ್ನು ಬಿಟ್ಟರು. ಮತ್ತೆ ಎಪ್ಪತ್ತರ ದಶಕದಲ್ಲಿ ಅವರು ಮತ್ತೆ ಪುಸ್ತಕ ಮುಖಪುಟ ರೂಪಿಸತೊಡಗಿದರಾದರೂ ಮೊದಲಿದ್ದ ಕಾವ್ಯಾತ್ಮಕತೆ ಮಾಯವಾಗಿತ್ತು ಎನ್ನುತ್ತಾರೆ ವಿಮರ್ಶಕರು. www.satyajitrayworld.comನಲ್ಲಿ ಕಂಡ ಸತ್ಯಜಿತ್ ರೇ ರೂಪಿಸಿದ ಕೆಲವು ಪುಸ್ತಕ ಮುಖಪುಟಗಳನ್ನು ಇಲ್ಲಿ ಕಾಣಬಹುದು(ಏನನಿಸಿತೆಂದು ಹೇಳಲೂಬಹುದು.)
Wednesday, October 17, 2007
Monday, October 15, 2007
ಮದ್ಯಸಾರ:ಭಾಗ ನಾಲ್ಕು
*
ಯಾವ ಸಂಪತ್ತಿಗೆ ಕುಡಿಯಬೇಕೊ
ಕುಡಿದರೂ ಅವಳ ನೆನಪಾಗುವುದಾದರೆ.
ಆಗ ಅವಳನ್ನು ಕ್ಷಮಿಸುವುದು ಸುಲಭ
ಎಂಬುದು ಬೇರೆ ಮಾತು
*
ಕರಗುತಿವೆ ಕೊರಗು ಬಾಟಲಿನಲ್ಲಿ
ಕಡೆಗೊಂದೇ ಉಳಿದಿದೆ ಚಿಂತೆ
ಕುಡಿಯಲಾರದ ಅವಳು ಹೇಗೆ
ನಿಭಾಯಿಸುತಿರುವಳೋ ಈ ಕ್ಷಣವ?
*
ಮೋರೆ ನೋಡದೆ ಅಪ್ಪಿ
ಚಿಂತೆ ಕಳೆವಳು ಮದಿರೆ
ಮೋರಿಯಾದರೆ ಏನು
ಬಾರದಿರುವುದೆ ನಿದಿರೆ
*
ತಂತಿ ಹರಿದ ವೀಣೆ ನಾನು
ನುಡಿಸಲಾಗದು
ಕುಡಿತ ನನ್ನ ಎದೆಯ ಬಡಿತ
ಬಿಡಿಸಲಾಗದು
*
ಯುಗಗಳ ಬಳಿಕ ಸಿಕ್ಕಿರುವೆ ಗೆಳೆಯ ಹೀಗೆ
ಮೆಚ್ಚನಾ ಪರಮಾತ್ಮ ಕುಡಿಸದೆ ಕಳಿಸಿದರೆ ಹಾಗೇ
ಮುಗಿಯುವುದೆ ತಬ್ಬಿದರೆ, ಮಾತಾಡಿದರೆ ನಕ್ಕು
ಹೇಳಲಾಗದ್ದನ್ನೂ ಹೇಳಲು ಏರಲೇಬೇಕು ಕಿಕ್ಕು
ಯಾವ ಸಂಪತ್ತಿಗೆ ಕುಡಿಯಬೇಕೊ
ಕುಡಿದರೂ ಅವಳ ನೆನಪಾಗುವುದಾದರೆ.
ಆಗ ಅವಳನ್ನು ಕ್ಷಮಿಸುವುದು ಸುಲಭ
ಎಂಬುದು ಬೇರೆ ಮಾತು
*
ಕರಗುತಿವೆ ಕೊರಗು ಬಾಟಲಿನಲ್ಲಿ
ಕಡೆಗೊಂದೇ ಉಳಿದಿದೆ ಚಿಂತೆ
ಕುಡಿಯಲಾರದ ಅವಳು ಹೇಗೆ
ನಿಭಾಯಿಸುತಿರುವಳೋ ಈ ಕ್ಷಣವ?
*
ಮೋರೆ ನೋಡದೆ ಅಪ್ಪಿ
ಚಿಂತೆ ಕಳೆವಳು ಮದಿರೆ
ಮೋರಿಯಾದರೆ ಏನು
ಬಾರದಿರುವುದೆ ನಿದಿರೆ
*
ತಂತಿ ಹರಿದ ವೀಣೆ ನಾನು
ನುಡಿಸಲಾಗದು
ಕುಡಿತ ನನ್ನ ಎದೆಯ ಬಡಿತ
ಬಿಡಿಸಲಾಗದು
*
ಯುಗಗಳ ಬಳಿಕ ಸಿಕ್ಕಿರುವೆ ಗೆಳೆಯ ಹೀಗೆ
ಮೆಚ್ಚನಾ ಪರಮಾತ್ಮ ಕುಡಿಸದೆ ಕಳಿಸಿದರೆ ಹಾಗೇ
ಮುಗಿಯುವುದೆ ತಬ್ಬಿದರೆ, ಮಾತಾಡಿದರೆ ನಕ್ಕು
ಹೇಳಲಾಗದ್ದನ್ನೂ ಹೇಳಲು ಏರಲೇಬೇಕು ಕಿಕ್ಕು
Thursday, October 11, 2007
ಮದ್ಯಸಾರ: ಭಾಗ ಮೂರು
*
ಕುಡಿದ ವಿಸ್ಕಿಯ ವಾಸನೆ ನಿಮಗೆ ಮಾತ್ರ
ನನಗದರ ಅರಿವೇ ಇಲ್ಲ
ನನ್ನ ಹಿಂಡುವ ದುಃಖ ನನಗೆ ಮಾತ್ರ
ನಿಮಗದರ ಪರಿವೆ ಇಲ್ಲ
*
ಎಲ್ಲರೂ ಮಹಾತ್ಮರಾದರೇನು ಚಂದ
ಹಾಳಾಗಿ ಹೋಗಬೇಕಿದೆ ನಮಗೆ
ಕುಡಿಸಲಾಗದ ಜಾಣರೆ ನಿಮಗೆ
ಬಿಡಿಸುವ ಹಟವೇಕೆ?
*
ಮದಿರೆಯ ಕೃಪೆ
ಇದು ಮದಿರೆಯ ಕೃಪೆ
ಪ್ರತಿಯೊಂದೂ ಹೋಗಿದೆ ಮರೆತು
ಅವಳ ಹೆಸರೊಂದರ ಹೊರತು
*
ಹೆಂಡ ಕುಡೀಬಾರದು, ಕುಡಿದರೆ
ಲೆಕ್ಕ ಇಡಬಾರದು
ಎತ್ತಿದ ಗ್ಲಾಸನು ಏನೇ ಆದರೂ
ಪಕ್ಕ ಇಡಬಾರದು
*
ಅಪಘಾತ ಆಗುವುದೇ ಹಣೆಯಲ್ಲಿದ್ದರೆ
ಆಸ್ಪತ್ರೆ ಮುಂದೆಯೇ ಆಗಲಿ
ಪ್ರೇಮ ಭಗ್ನವಾಗುವುದೇ ಬರೆದಿದ್ದರೆ
ಬಾರಿನ ಬಳಿಯೇ ಆಗಲಿ
*
ಇದೇ ಕೊನೆ ಭೇಟಿ ಅಂತ ಅವಳ ಒದ್ದಾಟ
ತಡವಾದರೆ ಬಾರು ಮುಚ್ಚುತ್ತೆ ಅಂತ ನನ್ನದು
ಶಾಲೆಯಾಗಲಿ ಮಧುಶಾಲೆಯಾಗಲಿ
ಮೊದಲ ದಿನವೇ ತಡ ಸರಿಯೆ ಹೇಳಿ?
Tuesday, October 9, 2007
ಮದ್ಯ ಸಾರ: ಭಾಗ ಎರಡು
*
ಶೇಂಗಾ, ಪಾಪಡ್, ಚಿಪ್ಸ್, ಎಗ್ ಪಕೋಡ
ಯಾವುದು ಗುಂಡಿಗೆ ಸರಿಯಾದ ಜೋಡಿ?
ತಿಳಿಯದು ಏನೊ ಎಂತೋ ನಿಮ್ಮ ರೀತಿ
ನನ್ನ ಆಯ್ಕೆ ಇದು: ಮುಗಿದುಹೋದ ಪ್ರೀತಿ
*
ಕುಡಿದ್ರೂ ಲಿಮಿಟ್ಟಲ್ಲಿರಬೇಕು ಎನುವ
ಜಾಣರು ತಿಳಿಯುವುದೆಂದು
ಎಲ್ಲ ಲಿಮಿಟ್ಟುಗಳ ಮೀರಬೇಕೆಂದೇ
ನಾವು ಕುಡಿಯುವುದೆಂದು
*
ಬಹಳ ದಿನಗಳ ನಂತರ ಗೆಳೆಯ ಸಿಕ್ಕ
ತೆರೆಯಬೇಕಿದೆ ಜತೆಗೆ ಹಳೆಯ ಲೋಕ
ವರುಷಗಳ ಅಂತರವ ಸಲೀಸಾಗಿ ದಾಟಲು
ಬೇಕೊಂದು ಓಪನರ್, ಎರಡಾದರೂ ಬಾಟಲು
*
ನನ್ನ ಮಾತನ್ನು ನಂಬಿ ಸ್ವಾಮಿ
ನಾನು ಕುಡಿದಿದ್ದೇನೆ
ಹಾಗೆಂದೇ
ನನ್ನ ಮಾತನ್ನು ನಂಬಿ!
ಶೇಂಗಾ, ಪಾಪಡ್, ಚಿಪ್ಸ್, ಎಗ್ ಪಕೋಡ
ಯಾವುದು ಗುಂಡಿಗೆ ಸರಿಯಾದ ಜೋಡಿ?
ತಿಳಿಯದು ಏನೊ ಎಂತೋ ನಿಮ್ಮ ರೀತಿ
ನನ್ನ ಆಯ್ಕೆ ಇದು: ಮುಗಿದುಹೋದ ಪ್ರೀತಿ
*
ಕುಡಿದ್ರೂ ಲಿಮಿಟ್ಟಲ್ಲಿರಬೇಕು ಎನುವ
ಜಾಣರು ತಿಳಿಯುವುದೆಂದು
ಎಲ್ಲ ಲಿಮಿಟ್ಟುಗಳ ಮೀರಬೇಕೆಂದೇ
ನಾವು ಕುಡಿಯುವುದೆಂದು
*
ಬಹಳ ದಿನಗಳ ನಂತರ ಗೆಳೆಯ ಸಿಕ್ಕ
ತೆರೆಯಬೇಕಿದೆ ಜತೆಗೆ ಹಳೆಯ ಲೋಕ
ವರುಷಗಳ ಅಂತರವ ಸಲೀಸಾಗಿ ದಾಟಲು
ಬೇಕೊಂದು ಓಪನರ್, ಎರಡಾದರೂ ಬಾಟಲು
*
ನನ್ನ ಮಾತನ್ನು ನಂಬಿ ಸ್ವಾಮಿ
ನಾನು ಕುಡಿದಿದ್ದೇನೆ
ಹಾಗೆಂದೇ
ನನ್ನ ಮಾತನ್ನು ನಂಬಿ!
Subscribe to:
Posts (Atom)