Thursday, May 1, 2008

ಶಪಿತನ ಹಾಡು

1
ದಣಿವಾಯಿತೆಂದು ಕೂತಿರುವೆ
ಈ ಊರು ನಂದಲ್ಲ
ಸ್ವಂತ ಊರು ಸ್ವಂತ ಮನೆ
ಸೋತವನಿಗೆ ಹೊಂದಲ್ಲ


2
ಮೂರು ದಾರಿ ಕೂಡುವಲಿ ಯಾರೊ
ನನ್ನ ಸರ್ವಸ್ವವನೂ ಕದ್ದರು
ಗೆಳೆಯಾ, ಆಗಲೂ ಈ ಜಗದಲಿ
ಮುಕ್ಕೋಟಿ ದೇವರುಗಳು ಇದ್ದರು

3
ನೀನು ವಂಚಿಸುತಿರುವುದರ ಅರಿವು
ನನಗಿಲ್ಲ ಎಂದಲ್ಲ
ಸದಾ ಎಚ್ಚರಿಕೆಯಿಂದಿದ್ದು ನನಗೂ
ಸಾಕುಸಾಕಾಗಿದೆಯಲ್ಲ

4
ಮಾಡದ ತಪ್ಪಿಗೆ ಕಲ್ಲಾಗಿ ಹೋಗಿರುವೆ
ಗಂಧರ್ವನಲ್ಲ ಸಾಧಾರಣ ಶಪಿತ
ಕಲ್ಲಾದುದಕೆ ಉಳಿದಿರುವೆ ಇಲ್ಲಾದರುಂಟೆ
ವಿಮೋಚನೆ ಬೇಡ ಇದೇ ನನಗೆ ಬಲುಹಿತ

3 comments:

Anonymous said...

ಮೂರು ದಾರಿ ಕೂಡುವಲಿ ಯಾರೊ
ನನ್ನ ಸರ್ವಸ್ವವನೂ ಕದ್ದರು
ಗೆಳೆಯಾ, ಆಗಲೂ ಈ ಜಗದಲಿ
ಮುಕ್ಕೋಟಿ ದೇವರುಗಳು ಇದ್ದರು
Hhmmmmm....

- Chetana

Anonymous said...

ಅಪಾರ,
ನಿಮ್ಮ ಪದ್ಯದ ಸಾಲುಗಳಿಗೆ ಎಂಥ ಲಯ ಇದೇರಿ. ಪ್ರತಿಮೆಗಳು, ರೂಪಕಗಳನ್ನು ಸುಖಾಸುಮ್ಮನೆ ತುರುಕಿ ಪದ್ಯ ಬರೆದು ಗೋಳು ಹೊಯ್ದುಕೊಳ್ಳುವುದಿಲ್ಲ ನೀವು.ಓದಿ ಮತ್ತೆ ಓದುವಂತೆ ಮಾಡುತ್ತೀರಿ.
ಎಲ್ಲ ಸಾಲುಗಳು ಆಪ್ತವಾಗಿವೆ. ಇವು ನನ್ನೊಳಗೆ ಮಾರ್ದನಿಸುತ್ತಿವೆ.
ಸದಾ ಎಚ್ಚರಿಕೆಯಿಂದಿದ್ದು ನನಗೂ ಸಾಕಾಗಿದೆಯಲ್ಲ...ಅನ್ನೋ ಸಾಲು ..
why should i live with consciousness ಅನ್ನೋ ಸಾಲನ್ನು ನೆನಪಿಸಿತ್ತು.
ಕಾವ್ಯ ನಿಮ್ಮ ಕೈಬಿಡದಿರಲಿ. ನಿಮ್ಮೊಳಗಿನ ಕಾವ್ಯ ಚಿಲುಮೆ ಸದಾ ಚಿಮ್ಮಲಿ..
ಅಲೆಮಾರಿ

Anonymous said...

ಅಪಾರ, ನಿಮ್ಮ ಬ್ಲಾಗಿನ ಪರಿಚಯ ಇತ್ತೀಚೆಗೆ ತಾನೆ ಅಯ್ತು, ಈಗನ್ನಿಸುತಿದೆ, ನನಗೆ ತುಂಬ ತಡವಾಗಿ ಜ್ನಾನೋದಯ ಆಗಿದೆ ಅಂತ!ಆದರೂ ಬೇಜಾರಿಲ್ಲ, at least ಈಗಾದ್ರೂ ನೋಡ್ತಿದ್ದೀನಲ್ಲ!
(इस्का रॊना नही, कि क्यॊन तुम ने किया दिल बर बाद, इस्का घम है कि बहुत दॆर से बर्बाद किया ಅಂತ ಗುಲಾಮ್ ಆಲಿ ಹೇಳಿದ್ದಾನಲ್ಲ!)
ಕಣ್ಣೀರು ತರಿಸುತ್ವೆ..they are awesome! u r blessed! (or us, rather..!)