Friday, May 23, 2008

ಶಪಿತನ ಹಾಡು 8

19
ಹಿಡಿದದ್ದು ಜಾರಿ ಹೋಗುತ್ತೆ ಉಳಿಯುವುದಿಲ್ಲ
ಕಂಗಳಂತೆಯೇ ನನ್ನ ಕೈಗಳೂ ಸದಾ ಒದ್ದೆ
ಜಾರಿದುದು ಮಣ್ಣಿಗೇ ಬೀಳುತ್ತೆ ತುಪ್ಪದಲ್ಲಲ್ಲ
ಅಯ್ಯೋ ನನ್ನ ಹಣೆಬರಹವೇ ಅಂಥದ್ದೆ!

Saturday, May 17, 2008

ಶಪಿತನ ಹಾಡು 7

೧೭
ಕತೆ ದುಃಖಾಂತ್ಯವೆಂಬುದ ನಾನು ಬಲ್ಲೆ
ಆದರೆ ಯಾರನೂ ನಾ ದೂರಲೊಲ್ಲೆ
ಸುಖಿಯಾಗಿದ್ದರೂ ಆನಂದಭಾಷ್ಪ ಸುರಿಸುತಿದ್ದೆ
ತಪ್ಪುತಿತ್ತೆ ಹೇಳಿ ಕಣ್ಣಾಗುವುದು ಒದ್ದೆ

೧೮
ಪಾಪ ಎಷ್ಟೋ ವಾಸಿ, ಬಲು ಘೋರ ಶಾಪ
ಮಿಂದು ಮುಕ್ತವಾಗಲು ಶಾಪನಾಶಿನಿಯಿಲ್ಲ
ಶಪಿತ ಮೊಣಕಾಲುದ್ದ ನೀರಿಗಿಳಿದರೂ
ಅದೆ ಸಮುದ್ರವಾಗಿ ಮುಳುಗುವನಲ್ಲ

Wednesday, May 14, 2008

ಶಪಿತನ ಹಾಡು 6

೧೫
ಅತ್ತೂ ಅತ್ತೂ ನಾ ಕಣ್ಣು ಕೆಂಪು ಮಾಡಿಕೊಳ್ಳಲಿಲ್ಲ
ಕುಡಿದೂ ಕುಡಿದು ನಾ ಕಣ್ಣು ಕೆಂಪು ಮಾಡಿಕೊಳ್ಳಲಿಲ್ಲ
ನೋವ ಅಡಗಿಸಿ ನಗುವ ನನ್ನ ಕಣ್ಣ ತಂಪಿಗೆ
ಉರಿದ ಜಗ ಕಣ್ಣು ಕೆಂಪು ಮಾಡಿಕೊಂಡಿತು


೧೬
ಬಿಗಿಯಾಗಿ ತಬ್ಬಿಕೊಂಡು ಅಳುವುದೆ
ಎಲ್ಲ ಸರಿಹೋಗತ್ತೆ ಅಂತ ಸುಳ್ಳಾಡುವುದೆ
ಪರಸ್ಪರರ ನೋಡಿಕೊಂಡು ನಗುವುದೆ
ಮಾಡುವುದೇನು ಶಪಿತರಿಬ್ಬರು ಕೂಡಿದಾಗ

Thursday, May 8, 2008

ಶಪಿತನ ಹಾಡು 5

13
ಶಪಿತನಿರಬಹುದು ಕುಪಿತ ನಾನಲ್ಲ
ಬಂದು ನೋಡು ನನ್ನ ಕಮಂಡಲದ ಪಕ್ಕ
ಆ ದೇವರಿಗೂ ಕ್ಷಮೆಯಿದೆ ಇದರೊಳು
ಇನ್ನು ನಿನ್ನದ್ಯಾವ ಲೆಕ್ಕ?


14
ನನ್ನ ಹರಿದ ಬದುಕಿನ ಚೂರುಗಳಿಂದ
ನಿನ್ನ ಸುಖವ ಹೇಗೆ ಕಟ್ಟಲಿ
ಈ ಕಂಬನಿಸಿಕ್ತ ಕೈಯಿಗಳಿಂದ
ನಿನ್ನ ಮುಖವ ಹೇಗೆ ಮುಟ್ಟಲಿ

Wednesday, May 7, 2008

ಶಪಿತನ ಹಾಡು ಭಾಗ 4

11
ಪಯಣಕೆ ನನ್ನ ಲಗೇಜು ಬಲು ಭಾರವುಂಟು
ಬಿಚ್ಚುವುದು ಸುಲಭವಲ್ಲ ಬರೀ ತಪ್ಪುಗಂಟು
ಇದ್ದರೆ ಬರೀ ಕಹಿನೆನಪುಗಳೆ, ಬೇರೆ ಏನಿಲ್ಲ
ಕದ್ದರೆ ಜವಾಬ್ದಾರರು ನೀವೇ, ಹೊರ್ತು ನಾನಲ್ಲ


12
ಕತ್ತಲಿಗೆ ಕಣ್ಣು ಒಗ್ಗಿ ಹೋಗುವಂತೆ
ದುಃಖಕ್ಕೆ ನಾನು ಹೊಂದಿಕೊಳ್ಳುತ್ತಿದ್ದೆ
ಸಹಿಸಲಾಗದ ಅವಳು ಈ ದಿನ ಮತ್ತೆ
ಪ್ರೇಮಲವಾಗಿ ನನ್ನನು ದಿಟ್ಟಿಸಿದಳು

Sunday, May 4, 2008

ಶಪಿತನ ಹಾಡು

8
ಸುಖದ ಶಿಖರ ಏರುತಿರುವಾಗಲೂ
ನನಗೆ ಮುಂಬರುವ ದುಃಖದ ಚಿಂತೆ
ಹೆಚ್ಚುತಿರಲು ಕ್ಷಣಕ್ಷಣ ಪ್ರಪಾತದ ಆಳ
ಬೆಚ್ಚುತಿಹೆ ನಾನು ಕಡುಪಾಪಿಯಂತೆ

9
ನಿರ್ಲಿಪ್ತಿಯಿಂದ ಮನಸನೊಡ್ಡುವೆ
ಕಡೆಗೊಮ್ಮೆ ದುಃಖ ಶರಣಾಗುವುದು
ಅತ್ತೂ ಅತ್ತೂ ಅತ್ತೂ ಅತ್ತೂ
ನಿದ್ರೆ ಹೋಗುವ ತೊಟ್ಟಿಲ ಮಗುವಿನಂತೆ

10
ಮೊನ್ನೆ ಬಸವನಗುಡಿಯಲ್ಲಿ ದೇವರು ಸಿಕ್ಕ
ಕಣ್ಣು ತಪ್ಪಿಸ ನೋಡಿ ಪೆಕರು ನಗೆ ನಕ್ಕ
ಸಿಕ್ತೀನಿ ಅರ್ಜೆಂಟಲಿರುವೆ ಎಂದು ಹೊರಟವನು
ಕಲ್ಲಾಗುವ ಭಯಕೆ ತಿರುಗಿ ನೋಡಲೇ ಇಲ್ಲ

ಒಂದು ಮುಖಪುಟ

ಈಚೆಗೆ ಮಾಡಿದ ಒಂದು ಪುಸ್ತಕ ಮುಖಪುಟ ವಿನ್ಯಾಸ. ಗೌರೀಸುತರ ಅನುವಾದಿತ ಪುಟ್ಟ ಕತೆಗಳ ಸಂಗ್ರಹ. ಫೋಟೊ ಪಾಂಡಿಚೇರಿಯ ಬೀಚ್‌ ರೋಡ್‌ನಲ್ಲಿ ಕಳೆದ ವರ್ಷ ತೆಗೆದದ್ದು.

Friday, May 2, 2008

ಶಪಿತನ ಹಾಡು

5
ಇದೇ ಈ ಬೀದಿಯಿಂದ ಒಂದು ದಿನ ಎದ್ದು
ಬಿದ್ದು ಕುದ್ದು, ರಾತ್ರಿಗೂ ಅದನೆ ಹೊದ್ದು
ಅರಳಿದರೂ ಬೆನ್ನ ತುಂಬ ಬೀದಿಹೋಕರ ಗುದ್ದು
ಈ ಹಾಳು ಬೀದಿ ಮೇಲೇಕೊ ನಂಗೆ ಮುದ್ದು

6
ನೀನೊಂದು ನೆಪಮಾತ್ರ
ನನ್ನ ಹಣೆಯಲೆ ಇದೆ ಶಾಪ
ನೀನಲ್ಲದಿದ್ದರೆ ಇನ್ನೊಬ್ಬರು ಅಳಿಸುತಿದ್ದರು
ನಿನ್ನ ಮೇಲೇಕೆ ನನಗೆ ಕೋಪ

7
ಸೋಲೇ ನನ್ನ ಹಣೆಬರಹವೇನಲ್ಲ
ಒಮ್ಮೊಮ್ಮೆ ನಾನೂ ಗೆಲ್ಲುವುದುಂಟು
ಇವತ್ತು ಮತ್ತೆ ಪಿಕ್ ಪಾಕೆಟ್‌ ಆಯ್ತು ಬಸ್ಸಲ್ಲಿ
ಒಂದು ಬಿಡಿಗಾಸೂ ಇರಲಿಲ್ಲ ಪರ್ಸಲ್ಲಿ

Thursday, May 1, 2008

ಶಪಿತನ ಹಾಡು

1
ದಣಿವಾಯಿತೆಂದು ಕೂತಿರುವೆ
ಈ ಊರು ನಂದಲ್ಲ
ಸ್ವಂತ ಊರು ಸ್ವಂತ ಮನೆ
ಸೋತವನಿಗೆ ಹೊಂದಲ್ಲ


2
ಮೂರು ದಾರಿ ಕೂಡುವಲಿ ಯಾರೊ
ನನ್ನ ಸರ್ವಸ್ವವನೂ ಕದ್ದರು
ಗೆಳೆಯಾ, ಆಗಲೂ ಈ ಜಗದಲಿ
ಮುಕ್ಕೋಟಿ ದೇವರುಗಳು ಇದ್ದರು

3
ನೀನು ವಂಚಿಸುತಿರುವುದರ ಅರಿವು
ನನಗಿಲ್ಲ ಎಂದಲ್ಲ
ಸದಾ ಎಚ್ಚರಿಕೆಯಿಂದಿದ್ದು ನನಗೂ
ಸಾಕುಸಾಕಾಗಿದೆಯಲ್ಲ

4
ಮಾಡದ ತಪ್ಪಿಗೆ ಕಲ್ಲಾಗಿ ಹೋಗಿರುವೆ
ಗಂಧರ್ವನಲ್ಲ ಸಾಧಾರಣ ಶಪಿತ
ಕಲ್ಲಾದುದಕೆ ಉಳಿದಿರುವೆ ಇಲ್ಲಾದರುಂಟೆ
ವಿಮೋಚನೆ ಬೇಡ ಇದೇ ನನಗೆ ಬಲುಹಿತ