Monday, March 17, 2008

ಕಾಮೆಂಟ್ ರೀ

ಸಿನಿಮಾಗಳಲ್ಲಿ ನ್ಯಾಯಾಧೀಶರು, ವಕೀಲರು ಕನ್ನಡದಲ್ಲೇ ಮಾತಾಡುವುದನ್ನು ನೋಡಿದ್ದರಿಂದ ಈ ಸುದ್ದಿ ನಮಗೆ ಹೊಸದೆನಿಸದಿರಬಹುದು. ಆದರೂ ಉಚ್ಛ ನ್ಯಾಯಾಲಯದಲ್ಲಿ ಕನ್ನಡದಲ್ಲೆ ತೀರ್ಪು ಬರೆದಿರುವುದು ಇದೇ ಮೊದಲು. ನ್ಯಾಯಾಧೀಶ ಅರಳಿ ನಾಗರಾಜ್ ಅವರಿಗೆ ಕೃತಜ್ಞತೆಗಳು. ಹಾರಾ ಅವರು ಬರೆದ ಪುಸ್ತಕದಲ್ಲಿನ ಒಂದು ಘಟನೆ ನೆನಪಾಗುತ್ತಿದೆ. ವಾದವನ್ನೆಲ್ಲ ಆಲಿಸಿದ ನಂತರ ‘ಯು ಆರ್ ಅಕ್ವಿಟೆಡ್’ ಅಂತ ನ್ಯಾಯಾಧೀಶರು ತೀರ್ಪು ಹೇಳಿದರಂತೆ. ಆದರೆ ಇಂಗ್ಲಿಷ್ ತಿಳಿಯದ ಕಳ್ಳ ಹೆದರಿ ‘ಏನೋ ಸಣ್ಣಪುಟ್ಟ ಕಳ್ಳತನ ಮಾಡಿದ್ದಕ್ಕೆ ಇಷ್ಟು ದೊಡ್ಡ ಶಿಕ್ಷೆನೇ ಸ್ವಾಮಿ’ ಅಂತ ಕೇಳಿದನಂತೆ! ಕನ್ನಡನಾಡಿನಲ್ಲಿ ಇಂಗ್ಲಿಷಿನಲ್ಲಿ ನ್ಯಾಯ ನೀಡುವುದು ಎಂಥ ನ್ಯಾಯ ಸ್ವಾಮಿ?
*
ಎರಡು ವರ್ಷಕ್ಕೊಮ್ಮೆ ಜಾರಿ ಬೀಳುವ ಉಡುಪಿಗಾಗಿ ದಿನಾ ಫ್ಯಾಷನ್ ಶೋ ನೋಡುವುದು ಹೇಗೆ ಎಂದು ಬೆಂಗಳೂರಿನ ಹುಡುಗರು ಹಳಹಳಿಸುತ್ತಿದ್ದಾರಂತೆ. ಯಾಕೆಂದರೆ ಮೊನ್ನೆ ಕ್ಯಾಟ್ ವಾಕ್ ಮಾಡುತ್ತಿದ್ದ ಮತ್ತೊಬ್ಬ ಚೆಲುವೆಯ ಟಾಪ್ ಜಾರಿ ಬಿದ್ದಿದೆ. ಅವರೇ ಬೇಕೆಂದೇ ಬೀಳಿಸುತ್ತಾರೋ, ವಿನ್ಯಾಸಕಾರರೇ ಹೀಗೆ ಮಾಡುತ್ತಾರೋ, ಆಯೋಜಕರೆ ಈ ಆಕರ್ಷಣೆಯನ್ನು ಯೋಜಿಸುತ್ತಾರೋ ಗೊತ್ತಿಲ್ಲ. ಇದುವರೆಗೆ ಇಂಥ ಐದು ‘ಜಾರ್‌ಖಂಡ’ಗಳು ನಡೆದಿದ್ದು ಎಲ್ಲವೂ ಫೆಬ್ರವರಿ- ಮಾರ್ಚ್ ತಿಂಗಳಲ್ಲೇ ಆಗಿರುವುದು ಆಸಕ್ತರಿಗೊಂದು ಉಪಯುಕ್ತ ಕ್ಲೂ ಎನ್ನಬಹುದು!(ಸೆಕೆಗಾಲ ಅಂತನಾ?) ಹಾಗಾಗಿ ಈ ಬೇಸಗೆಯಲ್ಲಿ ಫ್ಯಾಷನ್ ಶೋಗಳನ್ನು ಉಸಿರು ಬಿಗಿ ಹಿಡಿದು ನೋಡಿ. ಉಸಿರು ಬಿಗಿ ಹಿಡಿಯುವುದು ಟಾಪ್ ಜಾರದಿರಲಿ ಎಂದೋ ಜಾರಲಿ ಎಂದೋ ಎಂಬುದು ಅವರವರ ‘ಭಕುತಿ’ಗೆ ಬಿಟ್ಟದ್ದು.
*
೮೦ ವರ್ಷಗಳ ನಂತರ ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆಯನ್ನೂ ಕಳೆದುಕೊಂಡಿದೆ. ಹಾಕಿಗೆ ಚಕ್ ದೇ ಅಂತಿದ್ದವರೆಲ್ಲಾ ಈಗ ಗಿಲ್‌ಗೆ ಕಿಕ್ ದೆ ಅನ್ನುತ್ತಿದ್ದಾರೆ(ಕನ್ನಡದಲ್ಲಾದರೆ ‘ಹಾಕಿ ಹಾಕಿ, ಗಿಲ್‌ಗೆ ಇನ್ನೊಂದೇಟು ಹಾಕಿ..’ ಅನ್ನಬಹುದು!) ಆದರೂ ಗಿಲ್ ಮಾತ್ರ ತಾನು ಹಾಕಿಯನ್ನು ಪುನರುತ್ಥಾನ ಮಾಡಿಯೇ ಹೋಗೋದು ಅಂದಿದ್ದಾರೆ. ಅದನ್ನು ‘ಹಾಕಿಗೆ ಒಂದು ಗತಿ ಕಾಣಿಸಿಯೇ ಹೋಗೋದು’ ಅಂತ ಅರ್ಥ ಮಾಡಿಕೊಳ್ಳಬೇಕು ಎಂದು ಗಿಲ್ ಕಂಡರಾಗದ ಕೆಲವರು ಗುಲ್ ಮಾಡುತ್ತಿದ್ದಾರೆ!
*
ಅಂಬರೀಷ್‌ಗೆ ಬಿಜೆಪಿ ಗಾಳ ಹಾಕುತ್ತಿದೆ. ಅವರು ಬಂದರೆ ಆನೆಬಲ ಬರಲಿದೆ ಎಂದು ವರದಿಯಾಗಿದೆ. ಅಂಬಿಯ ಆಕೃತಿಯನ್ನು ನೋಡಿದ ಯಾರಿಗೂ ಅವರು ಹೋದ ಪಕ್ಷಕ್ಕೆ ‘ಆನೆ’ ಬಲ ಬರುವುದರಲ್ಲಿ ಅನುಮಾನ ಬಾರದು ಬಿಡಿ. ಆದರೆ ಅವರನ್ನು ಹಿಡಿಯಲು ಗಾಳ ಹಾಕುವುದೇ ಒಂದಿಷ್ಟು ಯಡವಟ್ಟು. ಖೆಡ್ಡಾನೇ ಸರಿಯಾದ ಉಪಾಯ ಎಂಬುದು ಸೋಸಿಲಿಯ ಸಲಹೆ!

1 comment:

Anonymous said...

:-) ‘ಜಾರ್‌ಖಂಡ’ is good pun.