ಸಣ್ಣಪುಟ್ಟ ಲೋಕಲ್ ವಿಲನ್‌ಗಳೆಲ್ಲಾ ಒದೆ ತಿಂದು ಓಡಿದ ನಂತರ ಕೇಡಿ ಬಾಸ್‌ಗಳು ಹೀರೊನನ್ನು ಮಟ್ಟ ಹಾಕಲು ಇಂಪೋರ್ಟೆಡ್ ವಿಲನ್‌ಗಳ ಮೊರೆ ಹೋಗುತ್ತಿದ್ದರು. ಆ ರೀತಿ, ದುಬಾರಿ ಕಾರುಗಳಿಂದ ಸ್ಲೋಮೋಷನ್‌ನಲ್ಲಿ ಇಳಿದು ಕನ್ನಡ ಸಿನಿಮಾಗಳಿಗೆ ಬಂದ ವಿಲನ್ ರಘುವರನ್. ಸಮಕಾಲೀನ ಖಳರೆಲ್ಲಾ ಇನ್ನಿಲ್ಲದ ಆರ್ಭಟ ನಡೆಸುತ್ತಿದ್ದಾಗ ‘ಸೌಂಡ್ ಅಂದ್ರೆ ನಂಗೆ ಅಲರ್ಜಿ’ ಎನ್ನುತ್ತಾ ವಿಚಿತ್ರ ಮ್ಯಾನರಿಸಂನಲ್ಲಿ ಶ್ ಎಂದು ತುಟಿ ಮೇಲೆ ಬೆರಳಿಡುತ್ತಾ , ನಮ್ಮನ್ನು ಗೆದ್ದ ರಘುವರನ್ ನೋಡಲು ಕೂಡ ಖಳನಾಯಕನಂತಿರಲಿಲ್ಲ . ಆಮೇಲೆ ಅವನನ್ನು ಹಲವರು ಅನುಕರಿಸಿದ್ದನ್ನು ನಾವು ಕಂಡಿದ್ದೇವೆ. ಟೆನ್ಷನ್ನನ್ನೇ ಮಾಡಿಕೊಳ್ಳದ, ಸಾಯುವಾಗಲೂ ನಗಬಲ್ಲ ಸ್ಥಿತಪ್ರಜ್ಞತೆ ಹೊಂದಿದ ಹೊಸಬಗೆಯ ಖಳನನ್ನು ಈ ಸುಂದರ ನಟನಲ್ಲೇ ನಾವು ಮೊದಲು ಕಂಡಿದ್ದು. ಬಹಳಷ್ಟು ಖಳನಟರಂತೆ ಈತನೂ ಡ್ರಗ್ ಚಟಕ್ಕೆ ಬಿದ್ದು ಆರೋಗ್ಯ ಹಾಳುಮಾಡಿಕೊಂಡು ಅರ್ಧದಲ್ಲೇ ಸತ್ತು ಹೋಗಿದ್ದಾನೆ. ಆದರೇನು? ಅವರ ಪಾತ್ರಗಳಂತೂ ಬಹಳ ಕಾಲ ನೆನಪಿನಲ್ಲಿರುತ್ತವೆ.
*
ಹೆಂಡತಿಯನ್ನು ‘ಚಿನ್ನಾ’ ಎಂದು ಕರೆಯಲೂ ಭಯವಾಗುವಷ್ಟು ಚಿನ್ನದ ಬೆಲೆ ಹೆಚ್ಚಾಗಿ ಹೋಗಿದೆ. ಆಭರಣದ ಆಸೆಯವರೂ ಅದರ ಸಹವಾಸ ಸದ್ಯಕ್ಕೆ ಬೇಡಪ್ಪಾ ಎಂದುಕೊಂಡು ಚಿನ್ನ ಚಿನ್ನ ಆಸೆಗಳಲ್ಲೇ ಸಮಾಧಾನ ಮಾಡಿಕೊಳ್ಳುವಂತಾಗಿದೆ.
*
ಅವರನ್ ಬಿಟ್ ಇವರನ್ ಬಿಟ್ ಇವರ್‍ಯಾರು ಅಂತ ದಿನಕ್ಕೊಬ್ಬ ಬಾಯ್ ಫ್ರೆಂಡ್ ಬದಲಿಸುತ್ತಿದ್ದ ದೀಪಿಕಾ ಪಡುಕೋಣೆ ಕಡೆಗೂ ಸೆಟ್ಲ್ ಆದಂತೆ ಕಾಣುತ್ತದೆ. ಭಾರತ ಕ್ರಿಕೆಟ್ ತಂಡದಲ್ಲಿ ‘ಸ್ಪರ್ಧಾ ಮನೋಭಾವ’ ಹೆಚ್ಚಿಸಿದ ಕೀರ್ತಿಗೆ ಪಾತ್ರವಾದ ಈ ಚೆಲುವೆ ಈ ಸಲ ಪರ್ತಕರ್ತರಿಗೆ ಊಹಿಸಲು ಬಿಡದೆ ರಿಶಿಕಪೂರ್ ಮಗ ರಣಬೀರ್‌ನನ್ನು ಪ್ರೀತಿಸುತ್ತಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾಳೆ. ಮುಂದುವರಿದು ರಿಶಿ ಅಂಕಲ್ ನನ್ನ ಅಪ್ಪನ ಥರ ಕಾಣುತ್ತಾರೆ ಅಂತಲೂ ಹೇಳಿದ್ದಾಳೆ. ನಾಳೆ ಅದೇ ಲೆಕ್ಕಕ್ಕೆ ರಣಬೀರ್ ಅಣ್ಣನಂತೆ ಕಾಣುತ್ತಾನೆ ಎನ್ನದಿದ್ದರೆ ಸಾಕು.
*
ಕೃಷ್ಣ ಮುಂಬೈಯಿಂದ ವಾಪಸ್ ಬಂದ ಮೆಲೆ ಪದೇ ಪದೇ ಪ್ಲಸ್ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಬ್ರ್ಯಾಂಡ್‌ಗಳಲ್ಲಿ ಸುಧಾರಣೆ ಮಾಡಿದ್ದೇವೆಂದು ತೋರಿಸಿಕೊಳ್ಳಲು ಕಂಪನಿಗಳು ಸ್ಪ್ಲೆಂಡರ್ ಪ್ಲಸ್, ಕ್ಲಿನಿಕ್ ಪ್ಲಸ್ ಎಂದೆಲ್ಲಾ ಸೇರಿಸುವಂತೆಯೇ ಇದೂ ಇರಬಹುದೇ? ಈಗಾಗಲೇ ಗಾಯಾಳುಗಳ ಶಿಬಿರವಾಗಿರುವ ಕಾಂಗ್ರೆಸ್, ಕೃಷ್ಣರ ಆಗಮನದಿಂದಲೂ ಚೇತರಿಸಿಕೊಳ್ಳದಿದ್ದರೆ ಪ್ಲಸ್ ಮಾರ್ಕ್‌ನ ವಾಹನದಲ್ಲೇ ಆಸ್ಪತ್ರೆ ಸೇರಬೇಕಾಗುತ್ತದೆ.
*
ಮೊದಲು ಸೆಲ್ ಹಾಕಿಕೊಂಡು ರೇಡಿಯೋ ಕೇಳುತ್ತಿದ್ದೆವು. ಈಗ ಸೆಲ್‌ನಲ್ಲಿ ರೇಡಿಯೋ ಕೇಳುತ್ತಿದ್ದೇವೆ. ಎರಡೂ ಸೆಲ್ ರೇಡಿಯೋಗಳೆ ತಾನೆ. ವಿಜ್ಞಾನ ಮುಂದುವರಿದಿದೆ ಅಂತ ಸುಮ್ಮನೇ ಹೇಳುತ್ತಾರೆ ಅಂತನ್ನುತ್ತಿರುವುದು ನಮ್ಮ ನಿಮ್ಮ ಮಿಸ್ ಸೋಸಿಲಿ!
No comments:
Post a Comment