Saturday, March 29, 2008

ಕಾಮೆಂಟ್‌ ರೀ

ಕೊಳವೆ ಬಾವಿಯಲ್ಲಿ ಬಿದ್ದಿದ್ದ ಪುಟ್ಟಿ ವಂದನಾ ಹೆದರಿಕೆಯಿಂದ ಕಂಗಾಲಾಗಿರಬೇಕು ಅಂತ ನಾವು ನೀವೆಲ್ಲಾ ಕಳವಳ ಪಡುತ್ತಿರುವಾಗಲೆ, ಆವಳಿಗೆ ಬಿಸ್ಕಿಟ್ ಗಿಸ್ಕಿಟ್ ಸರಬರಾಜಾಗುತ್ತಿತ್ತು. ಆಗ ಒಳಗಿದ್ದ ಆ ಧೀರೆ ‘ನನಗೆ ಜಿಲೇಬಿ ಬೇಕು’(ಮುಝೇ ಜಲೇಬಿ ಚಾಹಿಯೇ) ಅಂತ ಆರ್ಡರ್ ಮಾಡಿದ್ದನ್ನು ನೀವು ಕೇಳಿಸಿಕೊಂಡಿರಾ? ಈ ಬದುಕು ಅಷ್ಟೊಂದು ಅಚ್ಚರಿದಾಯಕ ಅನಿಸೋದು ಇಂಥ ಮನ ಬೆಳಗುವ ಪುಟ್ಟ ಪುಟ್ಟ ಸಂಗತಿಗಳಿಂದಲೇ ಇರಬೇಕು. ಬಾವಿಗೆ ಬಿದ್ದ ಪ್ರಿನ್ಸ್‌ಗೆ ಹಣ ಹರಿದು ಬಂದಂತೆಯೇ ಈ ಮಗುವಿಗೂ ಹಲವು ಸೌಲಭ್ಯ, ನೆರವು ಪ್ರಕಟವಾಗುತ್ತಿದೆ. ಸರಕಾರ ಆಕೆಯ ವಿದ್ಯಾಭ್ಯಾಸದ ಹೊಣೆ ಹೊತ್ತಿದೆಯಂತೆ. ಭಾವುಕ ಪ್ರತಿಕ್ರಿಯೆ ಅಂತ ಸುಮ್ಮನಾಗಬಹುದಾದರೂ, ಇಂಥ ಹಣದಾಸೆಗೆ ಬಡ ಜನ ತಮ್ಮ ಮಗುವನ್ನು ಬಾವಿಗಿಳಿಸುವ ಅಪಾಯಕ್ಕೆ ಕೈ ಹಾಕದಿದ್ದರೆ ಸಾಕು ಅಂತಲೂ ಅನಿಸುತ್ತೆ. ಪರಿಹಾರದ ಹಣಕ್ಕಾಗಿ ರೈತ ಆತ್ಮಹತ್ಯೆಗಿಳಿಯುತ್ತಿರುವ ಈ ಕ್ರೂರ ವಾಸ್ತವದ ನಾಡಿನಲ್ಲಿ ಯಾವ ಆಲೋಚನೆಯೂ ಸಿನಿಕತನದ್ದಾಗಲಾರದು ಅಲ್ಲವೆ?
*
ಹಣದುಬ್ಬರ ಕಳೆದೊಂದು ವರ್ಷದಲ್ಲೇ ಅತಿ ಹೆಚ್ಚು ಮಟ್ಟ ತಲುಪಿದೆ. ದರ್ಶನ್ ಸಿನಿಮಾ ನೋಡಿಕೊಂಡು, ದರ್ಶಿನಿಯಲ್ಲಿ ಉಣ್ಣುವ ಎರಡು ಸಾವಿರ ರೂಪಾಯಿ ಸಂಬಳದವರೂ, ಮಲ್ಟಿಪ್ಲೆಕ್ಸ್‌ಗಳಲ್ಲಿ ಸುಖಿಸಿ, ಡೂಪ್ಲೆಕ್ಸ್ ಮನೆಗಳಲ್ಲಿ ನಿದ್ರಿಸುವ ಲಕ್ಷ ರೂ ಸಂಬಳದವರೂ -ಇಬ್ಬರಿಗೂ ತೆರೆದಿರುವ ಬೆಂಗಳೂರಿನಂಥ ಮಾರುಕಟ್ಟೆಯಲ್ಲಿ ಇನ್‌ಫ್ಲೇಷನ್ ೬.೬೮ ಆಯಿತು ಎಂಬ ಸುದ್ದಿಯನ್ನು ಏನೆಂದು ಅರ್ಥ ಮಾಡಿಕೊಳ್ಳುವುದೊ ಹೇಳಿ. ಡಾಲರ್ ಬೆಲೆ ಕುಸಿದಿದೆಯಂತೆ, ಐಟಿನವರ ಕೆಲಸಗಳು ಹೋಗುತ್ತವಂತೆ, ಬೆಂಗಳೂರಲ್ಲಿ ಅದೆಷ್ಟೋ ಸಾವಿರ ಮನೆಗಳು ಕೊಳ್ಳುವವರಿಲ್ಲದೆ ಖಾಲಿ ಇವೆಯಂತೆ, ರಿಯಲ್ ಎಸ್ಟೇಟ್ ಮಾರ್ಕೆಟ್ ಜರ್ರಂತ ಬಿದ್ದುಹೋಗುತ್ತಂತೆ.... ಉತ್ತರಹಳ್ಳಿಯಂಥ ಹೊರವಲಯಕ್ಕೆ ಹೋದರೆ ಸುತ್ತಮುತ್ತ ಯಾವ ಮಾಯದಲ್ಲೋ ಎದ್ದುನಿಂತಿರುವ ಡಜನ್‌ಗಟ್ಟಲೆ ಗಗನಚುಂಬಿ ಅಪಾರ್ಟ್‌ಮೆಂಟುಗಳು. ಆದರೂ ಈ ಊರಿನಲ್ಲಿ ನಮಗೊಂದು ಬಾಡಿಗೆ ಮನೆ ಸಿಗುವುದೂ ಸುಲಭವಲ್ಲ. ವೆಜ್ಜಾ ನಾನ್ ವೆಜ್ಜಾ? ಬ್ಯಾಚುಲರ್ರಾ ಫೆಮಿಲೀನಾ? ಕುಡುಕರಾ ಕೆಡುಕರಾ?........
*
ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ರಾಹುಲ್ ಗಾಂಧಿಗೆ ಮೊನ್ನೆ ಹೆಲಿಕಾಪ್ಟರ್ ಹತ್ತುವಾಗ ಪ್ರಕೃತಿಯ ಕರೆ ಬಂದು ಫಜೀತಿಯಾಗಿದ್ದು ಪತ್ರಿಕೆಗಳಲ್ಲಿ ಬಾಕ್ಸ್ ಐಟೆಮ್ ಆಯಿತು. ಅತ್ತಲಿಂದ ಸಿದ್ದರಾಮಯ್ಯ, ಇತ್ತಲಿಂದ ಪ್ರಕಾಶ್, ಮತ್ತೊಂದೆಡೆಯಿಂದ ಕೃಷ್ಣ ಬಂದು ಸೇರಿಕೊಂಡ ಮೇಲೆ ಕಾಂಗ್ರೆಸ್‌ನಲ್ಲಿ ನಂಬರ್ ಒನ್ ನಾಯಕ ಯಾರು ಅನ್ನೋದು ತೀರಾ ಸೂಕ್ಷ್ಮ ಪ್ರಶ್ನೆಯಾಗಿಬಿಟ್ಟಿದೆ. ಇಂಥ ಸಮಯದಲ್ಲೇ ರಾಹುಲ್ ನಂಬರ್ ಒನ್‌ಗೆ ಅವಸರವಾಗಿದೆ, ಏನು ಮಾಡಲಿ ಎಂದು ಸಿದ್ದರಾಮಯ್ಯನವರ ಬಳಿ ಸಲಹೆ ಕೇಳಿದ್ದಾರೆ. ಹಾಗಾಗಿ ಸಿದ್ದು ತಾನೇ ‘ನಂಬರ್ ಒನ್’ ನಾಯಕ ಅಂತ ಹೇಳಿಕೊಂಡು ಓಡಾಡುತ್ತಿದ್ದರಂತೆ ನಿಜವೆ? ಅಂತ ಕೇಳುತ್ತಿರುವುದು ನಮ್ಮ ನಿಮ್ಮ ಮಿಸ್ ಸೋಸಿಲಿ.

No comments: