Thursday, March 6, 2008

ಇಂತಿಷ್ಟು ಸೂರಿಯ ಪ್ರೀತಿ

-ವಸುಧೇಂದ್ರ

ಬೋರು ಹೊಡೆಸುವ ಪನ್ನು, ಬೇಕಾಬಿಟ್ಟಿ ಮನಸು ಹಾಗೂ 'ವೈಯಕ್ತಿಕ' ಸಮಸ್ಯೆಗಳಿಂದ ಕನ್ನಡ ಪತ್ರಿಕಾ ವಿಮರ್ಶೆಗಳು ಬಳಲುತ್ತಿರುವಾಗ, ವಸುಧೇಂದ್ರರ ಈ ಬರಹ, ಚಿತ್ರ ಮಾಡುವವರು ಹಾಗೂ ನೋಡುವವರು ಇಬ್ಬರ ಬಗ್ಗೆಯೂ ಹೊಂದಿರುವ ಪ್ರೀತಿಯಿಂದ ಇಷ್ಟವಾಗುತ್ತದೆ.

’ಇಂತಿ ನಿನ್ನ ಪ್ರೀತಿಯ’ ಸಿನಿಮಾದ ಕತೆ ಹೇಳುವುದು ಅಂತಹ ಕಷ್ಟದ್ದೇನಲ್ಲ. "ಪ್ರೀತಿ-ನಿರಾಸೆ-ನಶೆ-ಹಸೆ-ಬಿಸಿ-ಹುಸಿ-ಸ್ವಸ್ತಿ" ಎಂಬ ಕೆಲವು ಪದಗಳಲ್ಲಿ ಕತೆಯನ್ನು ಕಟ್ಟಿ ಕೊಡಬಹುದು. ಆ ಪದಗಳ ವಿವರಣೆ ಕನ್ನಡ ಸಿನಿಮಾ ನೋಡಿ ಅಭ್ಯಾಸವಿರುವ ಯಾರಿಗೂ ಬೇಕಾಗುವದಿಲ್ಲ. ನೀವೇನಾದರೂ ಸಿನಿಮಾಕ್ಕೆ ಅದ್ಭುತ ಕತೆಯೊಂದು ಬೇಕೇ ಬೇಕೆನ್ನುವ ಹಳೆಯ ಕಾಲದವರಾದರೆ ನಿಮಗೆ ಈ ಸಿನಿಮಾ ನಿರಾಸೆ ಮೂಡಿಸಬಹುದು. ಕತೆಯನ್ನು ಬದಿಗಿಟ್ಟು ಸಿನಿಮಾ ನೋಡುವವರಾದರೆ, ಸೂರಿಯ ಪ್ರೀತಿಯಲ್ಲಿ ಕನ್ನಡ ಚಿತ್ರ ಜಗತ್ತು ಕಂಡರಿಯದ ಸಾಕಷ್ಟು ಹೊಸತುಗಳನ್ನು ಕಾಣಬಹುದಾಗಿದೆ.
ಸೂರಿ ಒಳ್ಳೆಯ ಪೇಂಟರ್ ಎಂದು ಕೇಳಿದ್ದೇನೆ. ಅದು ನಿಜವಿರಬೇಕು. ಚಿತ್ರದಲ್ಲಿ ಪ್ರತಿಯೊಂದು ದೃಶ್ಯವೂ ಒಳ್ಳೆಯ ಕಲಾಕೃತಿಯನ್ನು ನೋಡಿದ ಅನುಭವ ನೀಡುತ್ತದೆ. ಹಾಗಂತ ಗೆಳೆಯ ಯೋಗರಾಜ್ ಭಟ್‌ನಂತೆ ಸೂರಿ ಮಲೆನಾಡಿನ ಕಾಡನ್ನೋ, ಜೋಗಜಲಪಾತವನ್ನೋ ಹುಡುಕಿಕೊಂಡು ಹೋಗುವದಿಲ್ಲ. ಎತ್ತ ಕ್ಯಾಮರಾ ಹಿಡಿದರೂ ಸುಂದರವಾಗಿಯೇ ಕಾಣುವ ಅಂತಹ ದೈವನಿರ್ಮಿತ ತಾಣಗಳ ಸುಲಭದ ದಾರಿಯ ಆಯ್ಕೆ ಅವನದಲ್ಲ. ಸುಮ್ಮನೆ ನಮ್ಮ ದೈನಂದಿನ ಬದುಕಿನ ಚಕಮಕಿಗಳ ನಗಣ್ಯ ಸಂಗತಿಗಳಲ್ಲಿಯೇ ಸೊಗಸನ್ನು ಕಾಣುವ ಅವರ ಕಣ್ಣು ವಿಶೇಷವಾದದ್ದು. ಕೊರಳ ಸರವನ್ನು ಸುಮ್ಮನೆ ನಾಯಕಿ ಕೈಯಲ್ಲಿ ಹಿಡಿದುಕೊಳ್ಳುವುದು, ಗಂಡು ನೋಡಲು ಬಂದ ಹುಡುಗಿ ಕಣ್ಣಲ್ಲಿಯೇ ಮನೆಯನ್ನೆಲ್ಲಾ ಗಮನಿಸುವುದು, ಪ್ರೇಮಿಗಳಿಬ್ಬರು ಹಳೆಯ ಗೋಡೆಗೆ ನೇತು ಹಾಕಿದ ಓರೆಯಾದ ಕೆಂಪು ಅಂಚೆ ಪೆಟ್ಟಿಗೆಯ ಪಕ್ಕ ನಿಂತು ಮಾತನಾಡುವುದು - ಎಲ್ಲವೂ ಅದೆಷ್ಟು ಸೊಗಸಾಗಿ ಕಾಣುತ್ತದೆಂದರೆ ವಾಸ್ತವಕ್ಕಿಂತಲೂ ಕ್ಯಾಮರಾ ಸುಂದರವೆನ್ನಿಸುತ್ತದೆ. ಸೂರಿಯ ಕಲ್ಪನೆಯನ್ನು ಸೊಗಸಾಗಿ ಸೆರೆ ಹಿಡಿಯುವಲ್ಲಿ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ ಕೈ ಜೋಡಿಸಿದ್ದಾರೆ.
ಗೆಳೆಯ ಯೋಗರಾಜ್ ಭಟ್‌ಗೆ ಮಾತೇ ಮುತ್ತಿನ ಹಾರವಾದರೆ, ಸೂರಿಗೆ ಮೌನ ಬಂಗಾರ. ಪ್ರೇಮಿಗಳಿಬ್ಬರು ಮೌನವಾಗಿ ಕಣ್ಣಲ್ಲಿ ಪಿಸುಗುಟ್ಟುವುದು ಅವರಿಗಿಷ್ಟ, ವಾಚಾಳಿ ರಂಗಾಯಣದ ರಘುವಿನ ನಾಲಿಗೆ ಕತ್ತರಿಸಿ ಮೂಕನಾಗಿಸುವಲ್ಲಿ ಅವರಿಗೆ ಆನಂದ, ಮೌನದಲ್ಲಿಯೇ ಗಂಡನ ದೌರ್ಜನ್ಯವನ್ನು ಎದುರಿಸುವ ಭಾವನಾಳ ಬಗ್ಗೆ ಅವರಿಗೆ ಕುತೂಹಲ, ಹೆಂಡದಂಗಡಿಯ ಕಡೆ ಎಳೆಯುವ ಕಾಲುಗಳ ಸೆಳೆತಗಳನ್ನು ಚಿತ್ರಿಸುವದಲ್ಲಿ ಅವರಿಗೆ ಆಸಕ್ತಿ. ಅಬ್ಬರದ ಹಾಡು ಕುಣಿತಗಳ ಈ ದಿನಗಳಲ್ಲಿ, ಸೂರಿ ಬರೀ ಹಿನ್ನೆಲೆಗಾಯನದಲ್ಲಿ ಪ್ರೀತಿಯ ಮೌನಗೀತೆಗಳನ್ನು ಬರೆಯುತ್ತಾರೆ. ಸಂಗೀತ ನಿರ್ದೇಶಕ ಸಾಧು ಕೋಕಿಲ ಆ ಮೌನದಲ್ಲಿ ಕೆಲವೊಮ್ಮೆ ಗಲಾಟೆ ಮಾಡುತ್ತಾರೆ. ಆದರೆ ಒಂದೆರಡು ಒಳ್ಳೆಯ ಹಾಡುಗಳನ್ನು ಕನ್ನಡೀಕರಿಸಿ, ಕನ್ನಡದ ಧ್ವನಿಗಳಿಗೆ ಅವಕಾಶ ಕೊಟ್ಟಿದ್ದಾರೆಂದು ಅವರನ್ನು ಕ್ಷಮಿಸಬಹುದಾಗಿದೆ.
ಬೆಂಗಳೂರಿನ ಕೆಳಮಧ್ಯಮ ವರ್ಗದ ಚಿತ್ರಣ ಕನ್ನಡ ಚಿತ್ರರಂಗ ಅಷ್ಟಾಗಿ ಕಂಡಿಲ್ಲ. ಹಳ್ಳಿಯ ಬಡವರನ್ನು ಬೆಳ್ಳಿತೆರೆಯಲ್ಲಿ ಕಂಡಿದ್ದೇವೆ ಹೊರತು, ನಗರದ ಬಡವರನ್ನಲ್ಲ. ಸೂರಿಗೆ ಆ ದುನಿಯಾದ ಒಳನೋಟ, ಅಲ್ಲಿಯ ಮೌಲ್ಯ, ಹಾಸ್ಯ, ಬವಣೆ ಎಲ್ಲವೂ ಗೊತ್ತು. ಎಲ್ಲಿಯೂ ವಾಸ್ತವವನ್ನು ವೈಭವೀಕರಿಸದೆ ಆ ಬದುಕನ್ನು ನಮ್ಮ ಮುಂದಿಡುತ್ತಾನೆ. ಅನಾಥ ಹೆಣಗಳ ಸಂಸ್ಕಾರ ಮಾಡಿ ಬಂದ ಹಣದಿಂದ ಬದುಕುವ ವ್ಯಕ್ತಿ, ’ಒಳ್ಳೆ ಕ್ವಾಲಿಟಿ ಡ್ರಿಂಕ್ಸ ತೊಗೋ ॒ಪೇಪರಲ್ಲಿ ಕಳ್ಳಭಟ್ಟಿ ಕುಡಿದು ಸತ್ತವರ ವರದಿ ಬಂದಿದೆ’ ಎಂದು ಮೈದುನಗೆ ಕಳಕಳಿಯಿಂದ ಹೇಳುವ ಅತ್ತಿಗೆ, ಹೆಣ ಸಾಗಿಸುವ ವ್ಯಾನಿನಲ್ಲಿ ಸರಸ ಸಲ್ಲಾಪವಾಡುವ ಪ್ರೇಮಿಗಳು, ’ನೀ ಸತ್ತರೆ ನಾನು, ನಾ ಸತ್ತರೆ ನೀನು ಹೆಣದ ಮುಂದೆ ಸಖತ್ತಾಗಿ ಡ್ಯಾನ್ಸ್ ಮಾಡಬೇಕು’ ಎಂದು ಒಪ್ಪಂದ ಮಾಡಿಕೊಳ್ಳುವ ಗೆಳೆಯರು, ’ತುಟಿಯಲ್ಲಿ ರಕ್ತ ಬರೋ ಹಾಗೆ ಮುತ್ತು ಕೊಡೋ’॒ ಎಂದು ಪೀಡಿಸುವ ಹುಡುಗಿ - ಹೀಗೆ ವಿಭಿನ್ನ ಲೋಕವೊಂದು ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಈ ಲೋಕದಲ್ಲಿ ಕುಡಿಯುವದೆಂದರೆ ಎಲ್ಲೋ ಪಬ್ಬಿನಲ್ಲಿ ಮಬ್ಬು ಬೆಳಕಿನಲ್ಲಿ ಆರಾಮಾಗಿ ಕುಳಿತು ಹೀರುವದಲ್ಲ, ಸುಮ್ಮನೆ ಮನೆಗೆಲಸಕ್ಕಾಗಿ ರಣಬಿಸಿಲಿನಲ್ಲಿ ಹೊರಗೆ ಬಂದಾಗ ಹಾಗೇ ಮೂಲೆಯ ಅಂಗಡಿಯ ಮುಂದೆ ನಿಂತು ಗುಳಿಗೆ ನುಂಗಿ ನೀರು ಕುಡಿದಂತೆ ಎರಡು ಗ್ಲಾಸ್ ಗಟಗಟನೆ ಹೀರಿ ಹೊರಡುವುದು ಎಂದು ಸೂರಿಗೆ ಗೊತ್ತು.
ಇಷ್ಟೆಲ್ಲಾ ಹೇಳಿದರೂ ನಾನು ಸ್ವಲ್ಪ ಹಳೆಯ ಕಾಲದವನು. ಚಿತ್ರಕ್ಕೆ ಒಳ್ಳೆಯ ಕತೆಯಿಲ್ಲದೆ ಉಳಿದ ವೈಭವಗಳನ್ನು ಸ್ವೀಕರಿಸುವುದು ನನಗೆ ಒಗ್ಗದ್ದು. ಹಂಜಕ್ಕಿ ಅನ್ನಕ್ಕೆ ಎಂತಹ ಅದ್ಭುತ ಸಾರು-ಹುಳಿ-ಚಟ್ಣಿಗಳಿದ್ದರೆ ಏನುಪಯೋಗ? ಸೂರಿ ಒಳ್ಳೆಯ ಕತೆಯನ್ನು ಮೊದಲು ತಯಾರಿ ಮಾಡಿಕೊಂಡು ನಂತರ ಸಿನಿಮಾಕ್ಕೆ ಕೈ ಹಾಕಬೇಕಿತ್ತೆನ್ನಿಸುತ್ತದೆ. ಅನಾವಶ್ಯಕವಾಗಿ ಸಹಾಯಕ ಪಾತ್ರಗಳಿಗೆ ಉಪಕತೆಗಳನ್ನು ಕೊಟ್ಟು ಮುಖ್ಯ ಕತೆಯನ್ನು ಮರೆಯುತ್ತಾನೆ. ಪ್ರೀತಿಸಿದ ಹುಡುಗಿ ಕೈ ಕೊಟ್ಟಾಗ ನಾಯಕ ಮದ್ಯವ್ಯಸನಿಯಾಗುವುದು ಸಹಜವಾದರೂ, ವರ್ಷಗಟ್ಟಳೆ ಅದರಲ್ಲಿಯೇ ಮುಳುಗಿ ಹೋಗುತ್ತಾನೆನ್ನುವ ದೇವದಾಸ್ ಕತೆಯನ್ನು ಬೆಂಗಳೂರಿನ ಪರಿಸರದಲ್ಲಿ ಸ್ವೀಕರಿಸುವುದು ಕಷ್ಟ. ಮದ್ಯವ್ಯಸನದಂತಹ ಜ್ವಲಂತ ಸಮಸ್ಯೆಯನ್ನಾದರೂ ಮುಖ್ಯವಾಗಿ ತೆಗೆದುಕೊಂಡು ಅದರ ಸೂಕ್ಷ್ಮಗಳನ್ನು ಗುರುತಿಸಬೇಕಿತ್ತು. ಸುಖಾಸುಮ್ಮನೆ ಕೆಲವು ಪಾತ್ರಗಳನ್ನು ಸಾಯಿಸುವದರಿಂದ ಹೃದಯಸ್ಪರ್ಶಿ ಸನ್ನಿವೇಶಗಳನ್ನು ಸೃಷ್ಟಿಸಲಾಗುವದಿಲ್ಲ ಎನ್ನುವುದು ಸೂರಿಗೆ ಗೊತ್ತಿಲ್ಲವೆ?
ಕಡೆದಿಟ್ಟ ಶಿಲ್ಪದಂತೆ ದಷ್ಟಪುಷ್ಟವಾಗಿ ಸುಂದರವಾಗಿರುವ ಕಿಟ್ಟಿ ಪಡ್ಡೆ ಹುಡುಗನಾಗಿ ಇಷ್ಟವಾಗುತ್ತಾನೆ. ಆದರೆ ಯಾಕೋ ಕುಡಿತದ ಪಾತ್ರವನ್ನು ಅಭಿನಯಿಸಲು ಒದ್ದಾಡಿದ್ದಾನೆ! ಭಾವನಾ ತನ್ನ ಕಣ್ಣಲ್ಲಿ ಇನ್ನೂ ಜೀವಂತಿಕೆಯನ್ನು ಉಳಿಸಿಕೊಂಡಿದ್ದಾಳಾದರೂ ಉಳಿದಂತೆ ಯಾಕೋ ಸುಸ್ತಾಗಿದ್ದಾಳ. ಗರಮಾಗರಂ ದೃಶ್ಯಗಳಿರುವ ಒಂದು ಹಾಡಿಗೆ ಜಯಂತ ಕಾಯ್ಕಿಣಿಯವರ ಒಂದು ಸುಂದರ ಭಾವಗೀತೆಯನ್ನು ಬಳಸಿಕೊಳ್ಳಲಾಗಿದೆ. ಯೋಗರಾಜ ಭಟ್ಟರ ಕವನಗಳಲ್ಲಿ ಒಂದೆರಡು ಸಾಲುಗಳು ಕಾಡುವಂತಿವೆ. ಕ್ಷಿಪ್ರ ನಿರೂಪಣೆಗೆ ಸಂಕಲನಕಾರನ ಕೊಡುಗೆ ಅಪಾರವಾಗಿದೆ.
ಇಷ್ಟಾಗಿಯೂ ನೀವು ಈ ಸಿನಿಮಾಕ್ಕೆ ಹೊರಡುವಿರಾದರೆ ನಾನು ನಿಮ್ಮೊಡನೆ ಮತ್ತೊಮ್ಮೆ ಬರಲು ಸಿದ್ಧ. ಕನ್ನಡದ ಹುಡುಗರು ಸ್ವತಂತ್ರವಾಗಿ ನಮ್ಮ ಮಣ್ಣಿನ ವಾಸನೆಯ ಸಿನಿಮಾಗಳನ್ನು ಹೊಸ ಹುರುಪಿನಲ್ಲಿ ಮಾಡುತ್ತಿದ್ದಾರೆನ್ನುವ ಸಂಗತಿಯೇ ನನಗೆ ಚಿತ್ರದ ಚಿಕ್ಕಪುಟ್ಟ ದೋಷಗಳನ್ನು ಗೌಣವಾಗಿ ಕಾಣುವಂತೆ ಮಾಡುತ್ತದೆ.

3 comments:

ರವಿ ಕೃಷ್ಣಾ ರೆಡ್ಡಿ said...

ರಘು, ಲೇಖನಕ್ಕೆ ಬರೆದ ಮುನ್ನುಡಿ ಇಷ್ಟವಾಯಿತು. ಪತ್ರಿಕೆಗಳಲ್ಲಿ ಕೆಲಸ ಮಾಡುವ ನಿಮ್ಮಂತಹವರು ಈ ಮಾತುಗಳನ್ನು ಹೇಳುವುದರಿಂದ ಅದಕ್ಕೆ ಅದರದೇ ಅರ್ಥ ಮತ್ತು ತೂಕ ಇದೆ.

ವಸು,

ಸೂರಿಯ ಬಗ್ಗೆ ಇತ್ತೀಚೆಗೆ ತಾನೆ ಪತ್ರಿಕೆಯೊಂದರಲ್ಲಿ ಓದಿದ್ದೆ. ಇಷ್ಟವಾದ. ಈ ಸದರಿ ಸಿನೆಮಾದ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಬಂದ ಪರ-ವಿರೋಧ ವಿಮರ್ಶೆ ಓದಿ ಸಿನೆಮಾ ಹೇಗಿದೆ ಎಂತಲೆ ಗೊತ್ತಾಗಲಿಲ್ಲ. ಈಗ ನೀನು "(ನಾಯಕ ಶ್ರೀನಗರ ಕಿಟ್ಟಿ) ಕುಡಿತದ ಪಾತ್ರವನ್ನು ಅಭಿನಯಿಸಲು ಒದ್ದಾಡಿದ್ದಾನೆ! " ಎಂದು ಬರೆದಿದ್ದೀಯ. ಆದರೆ ಇದೇ ವಿಷಯಕ್ಕೆ ಪತ್ರಿಕೆಯೊಂದರಲ್ಲಿ "ನಾಯಕ ಶ್ರೀನಗರ ಕಿಟ್ಟಿಯಂತೂ ಇಲ್ಲಿವರೆಗೆ ಒಳಗಿದ್ದ ಕಲಾವಿದನನ್ನು ಹೊರಗೆ ತಂದು ಹರವಿದ್ದಾರೆ. ಒಬ್ಬ ಕುಡುಕನ ಕಳ್ಳ ನೋಟ, ಚಪಲ, ಅಸಹಾಯಕತೆ, ದರಿದ್ರತನವನ್ನು ಅನುಭವಿಸಿದಂತೆ ನಟಿಸಿದ್ದಾರೆ." ಎಂದು ಬಂದಿದೆ!!!

ಇಲ್ಲಿ ನನಗಿನ್ನೂ ದುನಿಯಾ ನೋಡುವ ಅವಕಾಶವಾಗಿಲ್ಲ. ಇದನ್ನು ಓದಿದ ಮೇಲೆ ಇವೆರಡನ್ನೂ ಈ ಸಲ ಅಲ್ಲಿಗೆ ಬಂದಾಗ ನೋಡಲೇಬೇಕು ಎಂದುಕೊಂಡಿದ್ದೇನೆ. ಕನ್ನಡದಲ್ಲಿ ಸ್ವತಂತ್ರ ಆಲೋಚನೆಗಳ, ಪ್ರಯೋಗಶೀಲ ನಿರ್ದೇಶಕರು ಹೆಚ್ಚಾಗಲೇಬೇಕಿದೆ. ಇಲ್ಲದಿದ್ದರೆ ಅದು ಇಡೀ ಸಮಾಜದ ಬೌದ್ಧಿಕ ದಾರಿದ್ರ್ಯವನ್ನು ಎತ್ತಿ ತೋರಿಸುತ್ತಿರುತ್ತದೆ.

ನಮಸ್ಕಾರ,
ರವಿ...

ಪೂರ್ಣ ವಿ-ರಾಮ said...

ನಿಮ್ಮ ವಿಮರ್ಶೆ ಹಲವು ನಮ್ಮಂಥ ಅಂಬೆಗಾಲಿಟ್ಟು, ವಿಮರ್ಶೆ ಬರೆಯಲು ಪ್ರಯತ್ನಿಸುತ್ತಿರುವವರಿಗೆ ನಿಜವಾದ ಸ್ಪೂತಿ.

ಇಂತಿ ನಿಮ್ಮ ಪ್ರೀತಿಯ

ಪೂರ್ಣ ವಿ-ರಾಮ

Parisarapremi said...

ನಮಸ್ತೇ ರಘು,

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಅರುಣ್

~~~~~~ಮೀ ನ ಹೆ ಜ್ಜೆ