Monday, March 3, 2008

ಕಾಮೆಂಟ್‌ ರೀ

*
ಬೆಂಗಳೂರಲ್ಲಿ ಬಾರುಗಳು ಇನ್ನು ಮುಂದೆ ರಾತ್ರಿ ಒಂದರವರೆಗೆ ತೆರೆದಿರುತ್ತವಂತೆ. ಹನ್ನೊಂದು ಗಂಟೆವರೆಗೆ ಅಂತ ನಿಯಮ ಇದ್ದಾಗಲೇ ಕದ್ದುಮುಚ್ಚಿ ಒಂದು ಎರಡು ಗಂಟೆವರೆಗೆ ತೆರೆದಿರುತ್ತಿದ್ದ ಬಾರುಗಳು ಇನ್ನುಮುಂದೆ ‘ಉಷೆ ಮೂಡುವವರೆಗೂ ನಶೆ’ ಅಂತಲೇ ಬೋರ್ಡ್ ಹಾಕಬಹುದು. ನಾವಾದರೂ ಏನು ಮಾಡಲು ಸಾಧ್ಯ? ಇದೇ ಹಿಗ್ಗಿನಲ್ಲಿ ಮತ್ತೆರಡು ಪೆಗ್ಗು ಹಾಕಬಹುದು ಅಷ್ಟೇ!
*
ಈ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿಕೆಟ್ ಹಿಂದೆ ಹೋದ ಬೈಗಳಿಗಿಂತ ಆಟಗಾರರು ಅಂದ ಬೈಗುಳಗಳೇ ಹೆಚ್ಚಾದಂತಿದೆ. ಜತೆಗೆ ಅವರಂದಿದ್ದು ಇವರಿಗೆ ತಿಳಿಯಲ್ಲ, ಇವರಂದಿದ್ದು ಅವರಿಗೆ ತಿಳಿಯಲ್ಲ. ಮಾಕಿ ಅಂದರೆ ಮಂಕಿ ಅಂತಂದ್ಕೋತಾರೆ. ಬ್ಯಾಡ್ ಬಾಯ್ ಅಂದರೆ ಮ್ಯಾಡ್ ಬಾಯ್ ಅಂತ ಕೇಳಿಸ್ಕೋತಾರೆ. ಈಗ ಹೇಡನ್ ಹರ್ಭಜನ್‌ಗೆ ‘ಕಳೆ’ ಅಂದಿದ್ದಾನೆ. ಕಳೆ ಅಂದನೋ ಕೊಳೆ ಅಂದನೋ ? ಈ ನಡುವೆ ಧೋನಿ ಬಯ್ಯೋದು ಒಂದು ಕಲೆ(ಕಳೆ ಅಲ್ಲ), ಕಲಿತುಕೊಳ್ಳಿ ಅಂತ ಹೇಳಿದ್ದಾನೆ. ಈ ಕೆಟ್ಟ ಕಲೆ ಗಿಲೆ ಬಿಟ್ಟು ಚೆನ್ನಾಗಿ ಆಡಿ ಭಲೆ ಅನ್ನಿಸ್ಕೊಳ್ಳೋಕೇನು ಇವರಿಗೆ ರೋಗ ಅಂತಿರೋದು ನಮ್ಮ ನಿಮ್ಮ ಸೋಸಿಲಿ.
*
ಈ ಕೆಳಗಿನ ಸಾಲುಗಳನ್ನು ಸೋಸಿಲಿ ಇಮೇಲ್ ಮುಖಾಂತರ ಕಳುಹಿಸಿದ್ದಾಳೆ(ನಿಮಗೂ ಬಂದಿರಬಹುದು ಚೆಕ್ ಮಾಡಿ). ಕೆಲವು ಹಳೆಯವು, ಕೆಲ ಹೊಸವು. ಇವು ಈ ಅಂಕಣದಲ್ಲೇಕೆ ಎಂದು ನೀವು ಆಕ್ಷೇಪ ತೆಗೆದರೆ ಜೀವನದ ಬಗೆಗಿನ ಕಾಮೆಂಟು ರೀ ಅಂತ ಹೇಳಿ ನಾನು ತಪ್ಪಿಸಿಕೊಳ್ಳುತ್ತೇನೆ. ಓದಿ.
ಆಲ್ಕೋಹಾಲು ಸೇವಿಸುವುದರಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಹಾಲು ಸೇವಿಸಿದರೂ ಅಷ್ಟೇ.
ತಪ್ಪು ಮಾಡುವುದು ಸಹಜ. ಕ್ಷಮಿಸುವುದು ಕಂಪನಿ ಪಾಲಿಸಿಯಲ್ಲಿಲ್ಲ.
ಯಶಸ್ಸಿನ ದಾರಿ? ಅದು ಯಾವಾಗಲೂ ದುರಸ್ತಿಯಲ್ಲಿರುತ್ತೆ ಬಿಡಿ.
ಲೋನ್ ಸಿಗಬೇಕೆಂದರೆ ನಿಮಗೆ ಅದರ ಅಗತ್ಯ ಇಲ್ಲ ಅಂತ ಮೊದಲು ನಿರೂಪಿಸಬೇಕಾಗುತ್ತೆ.
ಜೀವನದಲ್ಲಿ ಆಸೆ ಹುಟ್ಟಿಸುವ ಸಂಗತಿಗಳೆಲ್ಲಾ ಒಂದೋ ಅಕ್ರಮವಾದವು, ಇಲ್ಲಾ ದುಬಾರಿಯಾದವು ಅಥವಾ ಬೇರೆಯವರನ್ನು ಮದುವೆಯಾದಂಥವು!
೨೧೦ ನಂಬರ್ ಬಸ್ಸಿಗೆ ಒಂದು ಗಂಟೆ ಕಾದ ನಂತರ ಎರಡು ೨೧೦ ಬಸ್‌ಗಳು ಒಟ್ಟೊಟ್ಟಿಗೆ ಬರುತ್ತವೆ. ಮತ್ತು ನೀವು ಹತ್ತಿಕೊಂಡ ಬಸ್ಸಿನಲ್ಲಿ ಮಾತ್ರ ಸೀಟು ಖಾಲಿ ಇರುವುದಿಲ್ಲ!
ಪೆನ್ನಿದ್ದರೆ ಪೇಪರ್ ಇರಲ್ಲ, ಪೇಪರ್ ಇದ್ದರೆ ಪೆನ್ ಇರಲ್ಲ, ಎರಡೂ ಇದ್ದಾಗ ಯಾರೂ ಕಾಲ್ ಮಾಡೋದಿಲ್ಲ!
ರೋಮಿಂಗ್‌ನಲ್ಲಿದ್ದಾಗಲೇ ಹೆಚ್ಚು ರಾಂಗ್‌ನಂಬರ್‌ಗಳು ಬರೋದು!
ಗಾಳಿಯ ದಿಕ್ಕು ಯಾವುದೇ ಇರಲಿ, ಸಿಗರೇಟಿನ ಹೊಗೆ ಯಾವಾಗಲೂ ಸೇದದವನ ಕಡೆಗೇ ಬರುತ್ತದೆ!

1 comment:

Anonymous said...

ಅಪಾರ
ಸೋಸಿಲಿಯ ಡಿಸ್ಕವರಿಗಳು ಮಾರ್ವೆಲಸ್. ಆಕೆಗೆ ಉಜ್ವಲ ಭವಿಷ್ಯವಿದೆ. ಆಕೆಯೇನಾದರು ಮ್ಯಾನೇಜ್ಮೆಂಟ್ ಗುರುವೆ ಎಂದು ನನಗೆ ಸಂದೇಹ. ಇನ್ನು ಕ್ರಿಕೆಟಿಗರ ಬೈದಾಟ ಒಂಥರ ಗಲ್ಲಿಜಗಳಗಳ ನೆನಪು ತರಿಸಿ ಆಸ್ಟ್ರೇಲಿಗರಿಗು ನಮ್ಮೂರ ಕ್ಯಾತೆkriket ರಾಜರಿಗು ಒಮ್ಮೆ ಮ್ಯಾಚು ಏರ್ಪಡಿಸಿ ನೋಡುವ ಖಾಯಿಶು ಮೂಡಿಸುತ್ತದೆ. ಆವಾಗ ಅವರು ಅದು ಹೇಗೆ ಮಾತಿನಲ್ಲಿ ಗೆಲ್ಲುತ್ತಾರೊ ನೋಡಿಬಿಡುತ್ತೇನೆ.
‘ಉಷೆ ಮೂಡುವವರೆಗೂ ನಶೆ’ !!! ಹಿಹಿಹಿಹಿ.
-ಟೀನಾ.