Saturday, March 29, 2008

ಕಾಮೆಂಟ್‌ ರೀ

ಕೊಳವೆ ಬಾವಿಯಲ್ಲಿ ಬಿದ್ದಿದ್ದ ಪುಟ್ಟಿ ವಂದನಾ ಹೆದರಿಕೆಯಿಂದ ಕಂಗಾಲಾಗಿರಬೇಕು ಅಂತ ನಾವು ನೀವೆಲ್ಲಾ ಕಳವಳ ಪಡುತ್ತಿರುವಾಗಲೆ, ಆವಳಿಗೆ ಬಿಸ್ಕಿಟ್ ಗಿಸ್ಕಿಟ್ ಸರಬರಾಜಾಗುತ್ತಿತ್ತು. ಆಗ ಒಳಗಿದ್ದ ಆ ಧೀರೆ ‘ನನಗೆ ಜಿಲೇಬಿ ಬೇಕು’(ಮುಝೇ ಜಲೇಬಿ ಚಾಹಿಯೇ) ಅಂತ ಆರ್ಡರ್ ಮಾಡಿದ್ದನ್ನು ನೀವು ಕೇಳಿಸಿಕೊಂಡಿರಾ? ಈ ಬದುಕು ಅಷ್ಟೊಂದು ಅಚ್ಚರಿದಾಯಕ ಅನಿಸೋದು ಇಂಥ ಮನ ಬೆಳಗುವ ಪುಟ್ಟ ಪುಟ್ಟ ಸಂಗತಿಗಳಿಂದಲೇ ಇರಬೇಕು. ಬಾವಿಗೆ ಬಿದ್ದ ಪ್ರಿನ್ಸ್‌ಗೆ ಹಣ ಹರಿದು ಬಂದಂತೆಯೇ ಈ ಮಗುವಿಗೂ ಹಲವು ಸೌಲಭ್ಯ, ನೆರವು ಪ್ರಕಟವಾಗುತ್ತಿದೆ. ಸರಕಾರ ಆಕೆಯ ವಿದ್ಯಾಭ್ಯಾಸದ ಹೊಣೆ ಹೊತ್ತಿದೆಯಂತೆ. ಭಾವುಕ ಪ್ರತಿಕ್ರಿಯೆ ಅಂತ ಸುಮ್ಮನಾಗಬಹುದಾದರೂ, ಇಂಥ ಹಣದಾಸೆಗೆ ಬಡ ಜನ ತಮ್ಮ ಮಗುವನ್ನು ಬಾವಿಗಿಳಿಸುವ ಅಪಾಯಕ್ಕೆ ಕೈ ಹಾಕದಿದ್ದರೆ ಸಾಕು ಅಂತಲೂ ಅನಿಸುತ್ತೆ. ಪರಿಹಾರದ ಹಣಕ್ಕಾಗಿ ರೈತ ಆತ್ಮಹತ್ಯೆಗಿಳಿಯುತ್ತಿರುವ ಈ ಕ್ರೂರ ವಾಸ್ತವದ ನಾಡಿನಲ್ಲಿ ಯಾವ ಆಲೋಚನೆಯೂ ಸಿನಿಕತನದ್ದಾಗಲಾರದು ಅಲ್ಲವೆ?
*
ಹಣದುಬ್ಬರ ಕಳೆದೊಂದು ವರ್ಷದಲ್ಲೇ ಅತಿ ಹೆಚ್ಚು ಮಟ್ಟ ತಲುಪಿದೆ. ದರ್ಶನ್ ಸಿನಿಮಾ ನೋಡಿಕೊಂಡು, ದರ್ಶಿನಿಯಲ್ಲಿ ಉಣ್ಣುವ ಎರಡು ಸಾವಿರ ರೂಪಾಯಿ ಸಂಬಳದವರೂ, ಮಲ್ಟಿಪ್ಲೆಕ್ಸ್‌ಗಳಲ್ಲಿ ಸುಖಿಸಿ, ಡೂಪ್ಲೆಕ್ಸ್ ಮನೆಗಳಲ್ಲಿ ನಿದ್ರಿಸುವ ಲಕ್ಷ ರೂ ಸಂಬಳದವರೂ -ಇಬ್ಬರಿಗೂ ತೆರೆದಿರುವ ಬೆಂಗಳೂರಿನಂಥ ಮಾರುಕಟ್ಟೆಯಲ್ಲಿ ಇನ್‌ಫ್ಲೇಷನ್ ೬.೬೮ ಆಯಿತು ಎಂಬ ಸುದ್ದಿಯನ್ನು ಏನೆಂದು ಅರ್ಥ ಮಾಡಿಕೊಳ್ಳುವುದೊ ಹೇಳಿ. ಡಾಲರ್ ಬೆಲೆ ಕುಸಿದಿದೆಯಂತೆ, ಐಟಿನವರ ಕೆಲಸಗಳು ಹೋಗುತ್ತವಂತೆ, ಬೆಂಗಳೂರಲ್ಲಿ ಅದೆಷ್ಟೋ ಸಾವಿರ ಮನೆಗಳು ಕೊಳ್ಳುವವರಿಲ್ಲದೆ ಖಾಲಿ ಇವೆಯಂತೆ, ರಿಯಲ್ ಎಸ್ಟೇಟ್ ಮಾರ್ಕೆಟ್ ಜರ್ರಂತ ಬಿದ್ದುಹೋಗುತ್ತಂತೆ.... ಉತ್ತರಹಳ್ಳಿಯಂಥ ಹೊರವಲಯಕ್ಕೆ ಹೋದರೆ ಸುತ್ತಮುತ್ತ ಯಾವ ಮಾಯದಲ್ಲೋ ಎದ್ದುನಿಂತಿರುವ ಡಜನ್‌ಗಟ್ಟಲೆ ಗಗನಚುಂಬಿ ಅಪಾರ್ಟ್‌ಮೆಂಟುಗಳು. ಆದರೂ ಈ ಊರಿನಲ್ಲಿ ನಮಗೊಂದು ಬಾಡಿಗೆ ಮನೆ ಸಿಗುವುದೂ ಸುಲಭವಲ್ಲ. ವೆಜ್ಜಾ ನಾನ್ ವೆಜ್ಜಾ? ಬ್ಯಾಚುಲರ್ರಾ ಫೆಮಿಲೀನಾ? ಕುಡುಕರಾ ಕೆಡುಕರಾ?........
*
ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ರಾಹುಲ್ ಗಾಂಧಿಗೆ ಮೊನ್ನೆ ಹೆಲಿಕಾಪ್ಟರ್ ಹತ್ತುವಾಗ ಪ್ರಕೃತಿಯ ಕರೆ ಬಂದು ಫಜೀತಿಯಾಗಿದ್ದು ಪತ್ರಿಕೆಗಳಲ್ಲಿ ಬಾಕ್ಸ್ ಐಟೆಮ್ ಆಯಿತು. ಅತ್ತಲಿಂದ ಸಿದ್ದರಾಮಯ್ಯ, ಇತ್ತಲಿಂದ ಪ್ರಕಾಶ್, ಮತ್ತೊಂದೆಡೆಯಿಂದ ಕೃಷ್ಣ ಬಂದು ಸೇರಿಕೊಂಡ ಮೇಲೆ ಕಾಂಗ್ರೆಸ್‌ನಲ್ಲಿ ನಂಬರ್ ಒನ್ ನಾಯಕ ಯಾರು ಅನ್ನೋದು ತೀರಾ ಸೂಕ್ಷ್ಮ ಪ್ರಶ್ನೆಯಾಗಿಬಿಟ್ಟಿದೆ. ಇಂಥ ಸಮಯದಲ್ಲೇ ರಾಹುಲ್ ನಂಬರ್ ಒನ್‌ಗೆ ಅವಸರವಾಗಿದೆ, ಏನು ಮಾಡಲಿ ಎಂದು ಸಿದ್ದರಾಮಯ್ಯನವರ ಬಳಿ ಸಲಹೆ ಕೇಳಿದ್ದಾರೆ. ಹಾಗಾಗಿ ಸಿದ್ದು ತಾನೇ ‘ನಂಬರ್ ಒನ್’ ನಾಯಕ ಅಂತ ಹೇಳಿಕೊಂಡು ಓಡಾಡುತ್ತಿದ್ದರಂತೆ ನಿಜವೆ? ಅಂತ ಕೇಳುತ್ತಿರುವುದು ನಮ್ಮ ನಿಮ್ಮ ಮಿಸ್ ಸೋಸಿಲಿ.

Wednesday, March 26, 2008

ಮದ್ಯಸಾರ

1
ಮಿಡಿಯುತಿರುವೆ ನಿನ್ನ ಸಂಬಂಧ
ಕುಡಿಯುತಿರುವೆ ನಿನ್ನ ಸಂಬಂಧ
ಸಿಡಿಯುತಿರುವೆ ನಿನ್ನ ಸಂಬಂಧ
ಈಗ ಹೇಳು ಏನು ನನ್ನ ನಿನ್ನ ಸಂಬಂಧ?
2
ಆಟೋಗೆ ಈಗ ಡಬಲ್‌ ಮೀಟರು ಇಲ್ಲ
ಬೀಡಾನೂ ಬೇಡ ಹೆಜ್ಜೇನೂ ತಪ್ಪೋದಿಲ್ಲ
ಸಜ್ಜನನ ಬದುಕಿದು ಅತಿ ನೇರ ಅತಿ ಘೋರ
ನಾಕು ದಿನಕೇ ಸಾಕಾಗಿದೆ ಸಂಜೆ ಸಿಗತೀರಾ?

Sunday, March 23, 2008

ಮದ್ಯಸಾರ


ಒರಗಲೊಂದು ದಿಂಬು, ಚಂದದ ಮಧುಪಾತ್ರೆ

ಬೇಡವೇ ಬೇಡ ಅದನ್ನಿಡಲು ಕುಸುರಿಯ ಟೀಪಾಯಿ

ನನ್ನ ದುಃಖದಂತೇ ನನ್ನ ಕುಡಿತವೂ ಅಸ್ತವ್ಯಸ್ತ

ಇದ್ದರಾಯ್ತು ಎಂಥದೋ ಒಂದು ಹೆಂಡದ ಪೀಪಾಯಿ

ಕಾಮೆಂಟ್ ರೀ

ಸಣ್ಣಪುಟ್ಟ ಲೋಕಲ್ ವಿಲನ್‌ಗಳೆಲ್ಲಾ ಒದೆ ತಿಂದು ಓಡಿದ ನಂತರ ಕೇಡಿ ಬಾಸ್‌ಗಳು ಹೀರೊನನ್ನು ಮಟ್ಟ ಹಾಕಲು ಇಂಪೋರ್ಟೆಡ್ ವಿಲನ್‌ಗಳ ಮೊರೆ ಹೋಗುತ್ತಿದ್ದರು. ಆ ರೀತಿ, ದುಬಾರಿ ಕಾರುಗಳಿಂದ ಸ್ಲೋಮೋಷನ್‌ನಲ್ಲಿ ಇಳಿದು ಕನ್ನಡ ಸಿನಿಮಾಗಳಿಗೆ ಬಂದ ವಿಲನ್ ರಘುವರನ್. ಸಮಕಾಲೀನ ಖಳರೆಲ್ಲಾ ಇನ್ನಿಲ್ಲದ ಆರ್ಭಟ ನಡೆಸುತ್ತಿದ್ದಾಗ ‘ಸೌಂಡ್ ಅಂದ್ರೆ ನಂಗೆ ಅಲರ್ಜಿ’ ಎನ್ನುತ್ತಾ ವಿಚಿತ್ರ ಮ್ಯಾನರಿಸಂನಲ್ಲಿ ಶ್ ಎಂದು ತುಟಿ ಮೇಲೆ ಬೆರಳಿಡುತ್ತಾ , ನಮ್ಮನ್ನು ಗೆದ್ದ ರಘುವರನ್ ನೋಡಲು ಕೂಡ ಖಳನಾಯಕನಂತಿರಲಿಲ್ಲ . ಆಮೇಲೆ ಅವನನ್ನು ಹಲವರು ಅನುಕರಿಸಿದ್ದನ್ನು ನಾವು ಕಂಡಿದ್ದೇವೆ. ಟೆನ್ಷನ್ನನ್ನೇ ಮಾಡಿಕೊಳ್ಳದ, ಸಾಯುವಾಗಲೂ ನಗಬಲ್ಲ ಸ್ಥಿತಪ್ರಜ್ಞತೆ ಹೊಂದಿದ ಹೊಸಬಗೆಯ ಖಳನನ್ನು ಈ ಸುಂದರ ನಟನಲ್ಲೇ ನಾವು ಮೊದಲು ಕಂಡಿದ್ದು. ಬಹಳಷ್ಟು ಖಳನಟರಂತೆ ಈತನೂ ಡ್ರಗ್ ಚಟಕ್ಕೆ ಬಿದ್ದು ಆರೋಗ್ಯ ಹಾಳುಮಾಡಿಕೊಂಡು ಅರ್ಧದಲ್ಲೇ ಸತ್ತು ಹೋಗಿದ್ದಾನೆ. ಆದರೇನು? ಅವರ ಪಾತ್ರಗಳಂತೂ ಬಹಳ ಕಾಲ ನೆನಪಿನಲ್ಲಿರುತ್ತವೆ.
*
ಹೆಂಡತಿಯನ್ನು ‘ಚಿನ್ನಾ’ ಎಂದು ಕರೆಯಲೂ ಭಯವಾಗುವಷ್ಟು ಚಿನ್ನದ ಬೆಲೆ ಹೆಚ್ಚಾಗಿ ಹೋಗಿದೆ. ಆಭರಣದ ಆಸೆಯವರೂ ಅದರ ಸಹವಾಸ ಸದ್ಯಕ್ಕೆ ಬೇಡಪ್ಪಾ ಎಂದುಕೊಂಡು ಚಿನ್ನ ಚಿನ್ನ ಆಸೆಗಳಲ್ಲೇ ಸಮಾಧಾನ ಮಾಡಿಕೊಳ್ಳುವಂತಾಗಿದೆ.
*
ಅವರನ್ ಬಿಟ್ ಇವರನ್ ಬಿಟ್ ಇವರ್‍ಯಾರು ಅಂತ ದಿನಕ್ಕೊಬ್ಬ ಬಾಯ್ ಫ್ರೆಂಡ್ ಬದಲಿಸುತ್ತಿದ್ದ ದೀಪಿಕಾ ಪಡುಕೋಣೆ ಕಡೆಗೂ ಸೆಟ್ಲ್ ಆದಂತೆ ಕಾಣುತ್ತದೆ. ಭಾರತ ಕ್ರಿಕೆಟ್ ತಂಡದಲ್ಲಿ ‘ಸ್ಪರ್ಧಾ ಮನೋಭಾವ’ ಹೆಚ್ಚಿಸಿದ ಕೀರ್ತಿಗೆ ಪಾತ್ರವಾದ ಈ ಚೆಲುವೆ ಈ ಸಲ ಪರ್ತಕರ್ತರಿಗೆ ಊಹಿಸಲು ಬಿಡದೆ ರಿಶಿಕಪೂರ್ ಮಗ ರಣಬೀರ್‌ನನ್ನು ಪ್ರೀತಿಸುತ್ತಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾಳೆ. ಮುಂದುವರಿದು ರಿಶಿ ಅಂಕಲ್ ನನ್ನ ಅಪ್ಪನ ಥರ ಕಾಣುತ್ತಾರೆ ಅಂತಲೂ ಹೇಳಿದ್ದಾಳೆ. ನಾಳೆ ಅದೇ ಲೆಕ್ಕಕ್ಕೆ ರಣಬೀರ್ ಅಣ್ಣನಂತೆ ಕಾಣುತ್ತಾನೆ ಎನ್ನದಿದ್ದರೆ ಸಾಕು.
*
ಕೃಷ್ಣ ಮುಂಬೈಯಿಂದ ವಾಪಸ್ ಬಂದ ಮೆಲೆ ಪದೇ ಪದೇ ಪ್ಲಸ್ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಬ್ರ್ಯಾಂಡ್‌ಗಳಲ್ಲಿ ಸುಧಾರಣೆ ಮಾಡಿದ್ದೇವೆಂದು ತೋರಿಸಿಕೊಳ್ಳಲು ಕಂಪನಿಗಳು ಸ್ಪ್ಲೆಂಡರ್ ಪ್ಲಸ್, ಕ್ಲಿನಿಕ್ ಪ್ಲಸ್ ಎಂದೆಲ್ಲಾ ಸೇರಿಸುವಂತೆಯೇ ಇದೂ ಇರಬಹುದೇ? ಈಗಾಗಲೇ ಗಾಯಾಳುಗಳ ಶಿಬಿರವಾಗಿರುವ ಕಾಂಗ್ರೆಸ್, ಕೃಷ್ಣರ ಆಗಮನದಿಂದಲೂ ಚೇತರಿಸಿಕೊಳ್ಳದಿದ್ದರೆ ಪ್ಲಸ್ ಮಾರ್ಕ್‌ನ ವಾಹನದಲ್ಲೇ ಆಸ್ಪತ್ರೆ ಸೇರಬೇಕಾಗುತ್ತದೆ.
*
ಮೊದಲು ಸೆಲ್ ಹಾಕಿಕೊಂಡು ರೇಡಿಯೋ ಕೇಳುತ್ತಿದ್ದೆವು. ಈಗ ಸೆಲ್‌ನಲ್ಲಿ ರೇಡಿಯೋ ಕೇಳುತ್ತಿದ್ದೇವೆ. ಎರಡೂ ಸೆಲ್ ರೇಡಿಯೋಗಳೆ ತಾನೆ. ವಿಜ್ಞಾನ ಮುಂದುವರಿದಿದೆ ಅಂತ ಸುಮ್ಮನೇ ಹೇಳುತ್ತಾರೆ ಅಂತನ್ನುತ್ತಿರುವುದು ನಮ್ಮ ನಿಮ್ಮ ಮಿಸ್ ಸೋಸಿಲಿ!

Wednesday, March 19, 2008

ಮದ್ಯಸಾರ

1
ಸಲುಪ ಹೆಚ್ಚಾಗಿದೆ ಮತ್ತೆ
ಫುಟ್‌ಪಾತಿನಲಿ ಬಿದ್ದಿರುವೆ
ನಗುವ ಜನರಿಗೆ ಗೊತ್ತೆ
ಇನ್ನೊಂದ್‌ ದಿನವ ಗೆದ್ದಿರುವೆ

2
ವರುಷಗಳೆ ಉರುಳಿದವು ನೀನು ತೊರೆದು
ನೆನಪೇಕೆ ಕಾಡುವುದು ಕೊರೆದು ಕೊರೆದು
ಮದಿರೆಯದೆ ಕಿತಾಪತಿ ಒಮ್ಮೊಮ್ಮೆ ಅನಿಸುವುದು
ಅದರಿಂದೆ ನನ ವಿರಹ ಜೀವಂತ ಉಳಿದಿಹುದು

Monday, March 17, 2008

ಕಾಮೆಂಟ್ ರೀ

ಸಿನಿಮಾಗಳಲ್ಲಿ ನ್ಯಾಯಾಧೀಶರು, ವಕೀಲರು ಕನ್ನಡದಲ್ಲೇ ಮಾತಾಡುವುದನ್ನು ನೋಡಿದ್ದರಿಂದ ಈ ಸುದ್ದಿ ನಮಗೆ ಹೊಸದೆನಿಸದಿರಬಹುದು. ಆದರೂ ಉಚ್ಛ ನ್ಯಾಯಾಲಯದಲ್ಲಿ ಕನ್ನಡದಲ್ಲೆ ತೀರ್ಪು ಬರೆದಿರುವುದು ಇದೇ ಮೊದಲು. ನ್ಯಾಯಾಧೀಶ ಅರಳಿ ನಾಗರಾಜ್ ಅವರಿಗೆ ಕೃತಜ್ಞತೆಗಳು. ಹಾರಾ ಅವರು ಬರೆದ ಪುಸ್ತಕದಲ್ಲಿನ ಒಂದು ಘಟನೆ ನೆನಪಾಗುತ್ತಿದೆ. ವಾದವನ್ನೆಲ್ಲ ಆಲಿಸಿದ ನಂತರ ‘ಯು ಆರ್ ಅಕ್ವಿಟೆಡ್’ ಅಂತ ನ್ಯಾಯಾಧೀಶರು ತೀರ್ಪು ಹೇಳಿದರಂತೆ. ಆದರೆ ಇಂಗ್ಲಿಷ್ ತಿಳಿಯದ ಕಳ್ಳ ಹೆದರಿ ‘ಏನೋ ಸಣ್ಣಪುಟ್ಟ ಕಳ್ಳತನ ಮಾಡಿದ್ದಕ್ಕೆ ಇಷ್ಟು ದೊಡ್ಡ ಶಿಕ್ಷೆನೇ ಸ್ವಾಮಿ’ ಅಂತ ಕೇಳಿದನಂತೆ! ಕನ್ನಡನಾಡಿನಲ್ಲಿ ಇಂಗ್ಲಿಷಿನಲ್ಲಿ ನ್ಯಾಯ ನೀಡುವುದು ಎಂಥ ನ್ಯಾಯ ಸ್ವಾಮಿ?
*
ಎರಡು ವರ್ಷಕ್ಕೊಮ್ಮೆ ಜಾರಿ ಬೀಳುವ ಉಡುಪಿಗಾಗಿ ದಿನಾ ಫ್ಯಾಷನ್ ಶೋ ನೋಡುವುದು ಹೇಗೆ ಎಂದು ಬೆಂಗಳೂರಿನ ಹುಡುಗರು ಹಳಹಳಿಸುತ್ತಿದ್ದಾರಂತೆ. ಯಾಕೆಂದರೆ ಮೊನ್ನೆ ಕ್ಯಾಟ್ ವಾಕ್ ಮಾಡುತ್ತಿದ್ದ ಮತ್ತೊಬ್ಬ ಚೆಲುವೆಯ ಟಾಪ್ ಜಾರಿ ಬಿದ್ದಿದೆ. ಅವರೇ ಬೇಕೆಂದೇ ಬೀಳಿಸುತ್ತಾರೋ, ವಿನ್ಯಾಸಕಾರರೇ ಹೀಗೆ ಮಾಡುತ್ತಾರೋ, ಆಯೋಜಕರೆ ಈ ಆಕರ್ಷಣೆಯನ್ನು ಯೋಜಿಸುತ್ತಾರೋ ಗೊತ್ತಿಲ್ಲ. ಇದುವರೆಗೆ ಇಂಥ ಐದು ‘ಜಾರ್‌ಖಂಡ’ಗಳು ನಡೆದಿದ್ದು ಎಲ್ಲವೂ ಫೆಬ್ರವರಿ- ಮಾರ್ಚ್ ತಿಂಗಳಲ್ಲೇ ಆಗಿರುವುದು ಆಸಕ್ತರಿಗೊಂದು ಉಪಯುಕ್ತ ಕ್ಲೂ ಎನ್ನಬಹುದು!(ಸೆಕೆಗಾಲ ಅಂತನಾ?) ಹಾಗಾಗಿ ಈ ಬೇಸಗೆಯಲ್ಲಿ ಫ್ಯಾಷನ್ ಶೋಗಳನ್ನು ಉಸಿರು ಬಿಗಿ ಹಿಡಿದು ನೋಡಿ. ಉಸಿರು ಬಿಗಿ ಹಿಡಿಯುವುದು ಟಾಪ್ ಜಾರದಿರಲಿ ಎಂದೋ ಜಾರಲಿ ಎಂದೋ ಎಂಬುದು ಅವರವರ ‘ಭಕುತಿ’ಗೆ ಬಿಟ್ಟದ್ದು.
*
೮೦ ವರ್ಷಗಳ ನಂತರ ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆಯನ್ನೂ ಕಳೆದುಕೊಂಡಿದೆ. ಹಾಕಿಗೆ ಚಕ್ ದೇ ಅಂತಿದ್ದವರೆಲ್ಲಾ ಈಗ ಗಿಲ್‌ಗೆ ಕಿಕ್ ದೆ ಅನ್ನುತ್ತಿದ್ದಾರೆ(ಕನ್ನಡದಲ್ಲಾದರೆ ‘ಹಾಕಿ ಹಾಕಿ, ಗಿಲ್‌ಗೆ ಇನ್ನೊಂದೇಟು ಹಾಕಿ..’ ಅನ್ನಬಹುದು!) ಆದರೂ ಗಿಲ್ ಮಾತ್ರ ತಾನು ಹಾಕಿಯನ್ನು ಪುನರುತ್ಥಾನ ಮಾಡಿಯೇ ಹೋಗೋದು ಅಂದಿದ್ದಾರೆ. ಅದನ್ನು ‘ಹಾಕಿಗೆ ಒಂದು ಗತಿ ಕಾಣಿಸಿಯೇ ಹೋಗೋದು’ ಅಂತ ಅರ್ಥ ಮಾಡಿಕೊಳ್ಳಬೇಕು ಎಂದು ಗಿಲ್ ಕಂಡರಾಗದ ಕೆಲವರು ಗುಲ್ ಮಾಡುತ್ತಿದ್ದಾರೆ!
*
ಅಂಬರೀಷ್‌ಗೆ ಬಿಜೆಪಿ ಗಾಳ ಹಾಕುತ್ತಿದೆ. ಅವರು ಬಂದರೆ ಆನೆಬಲ ಬರಲಿದೆ ಎಂದು ವರದಿಯಾಗಿದೆ. ಅಂಬಿಯ ಆಕೃತಿಯನ್ನು ನೋಡಿದ ಯಾರಿಗೂ ಅವರು ಹೋದ ಪಕ್ಷಕ್ಕೆ ‘ಆನೆ’ ಬಲ ಬರುವುದರಲ್ಲಿ ಅನುಮಾನ ಬಾರದು ಬಿಡಿ. ಆದರೆ ಅವರನ್ನು ಹಿಡಿಯಲು ಗಾಳ ಹಾಕುವುದೇ ಒಂದಿಷ್ಟು ಯಡವಟ್ಟು. ಖೆಡ್ಡಾನೇ ಸರಿಯಾದ ಉಪಾಯ ಎಂಬುದು ಸೋಸಿಲಿಯ ಸಲಹೆ!

Saturday, March 15, 2008

ಮದ್ಯಸಾರ

ನಡುರಾತ್ರಿಯ ಈ ಬಿಕನಾಸಿ ಬಾರಲ್ಲಿ
ಏಳು ಏಳೆನ್ನುತಿರುವ ವೇಟರನೆದುರು
ಇನ್ನೊಂದು ಥರ್ಟಿಗೆ ಗೋಗರೆಯುತಿರುವಾಗ
ಏಕೋ ನಿನ್ನ ನಿದ್ರಾಭಂಗಿ ನೆನಪಾಯಿತು
*
ನೋವಿನಿಂದ ತಪ್ಪಿಸಿಕೊಳ್ಳಲು
ಕುಡಿವವರು ನೂರಾರು
ನನ್ನಂತೆ ಸಾವಿನಿಂದ ತಪ್ಪಿಸಿಕೊಳ್ಳಲು
ಕುಡಿವವರು ಬೇರಾರು?

Thursday, March 13, 2008

ಮದ್ಯಸಾರ

1
ಮಧುಪಾತ್ರೆ ಕಣ್ಣಿನಂತೆ ಗೆಳೆಯಾ
ಖುಷಿಗೂ ತುಂಬುತ್ತೆ ದುಃಖಕೂ ತುಂಬುತ್ತೆ
ಕುಡಿತ ಸಾವಿದ್ದಂತೆ ಗೆಳೆಯಾ
ಮೈಯನೂ ಮರೆಸುತ್ತೆ ನೋವನೂ ಮರೆಸುತ್ತೆ

2
ಎಲ್ಲ ಗೆಳತಿಯರೂ ನೆನಪಾಗುತಿಹರೀಗ
ತುಟಿಗೆ ಸೋಕುತಿರುವ ಮದ್ಯಕೆ ಯಾರ ಹೆಸರು
ತಿಳಿಯುತಿಲ್ಲ ಯಾರ ವಿರಹ ಯಾವ ತರಹ
ಕುಡುಕನದು ಎಂದೂ ಇದೇ ಹಣೆಬರಹ

3
ಚಳಿಗಾಲದ ಸಂಜೆ ಹಿತವಾಗಿ ಆವರಿಸಿದೆ
ಸುರಿಯುತಿಹ ಮಳೆ ಹೂವಂತೆ ನೇವರಿಸಿದೆ
ಈ ಖುಷಿಗೆ ಕುಡಿಯಲು ಗೆಳೆಯರೊಬ್ಬರೂ ಇಲ್ಲ
ಹಾಗೆಂದು ಸುಮ್ಮನುಳಿದರೆ ದೇವರೂ ಕ್ಷಮಿಸಲ್ಲ

Thursday, March 6, 2008

ಇಂತಿಷ್ಟು ಸೂರಿಯ ಪ್ರೀತಿ

-ವಸುಧೇಂದ್ರ

ಬೋರು ಹೊಡೆಸುವ ಪನ್ನು, ಬೇಕಾಬಿಟ್ಟಿ ಮನಸು ಹಾಗೂ 'ವೈಯಕ್ತಿಕ' ಸಮಸ್ಯೆಗಳಿಂದ ಕನ್ನಡ ಪತ್ರಿಕಾ ವಿಮರ್ಶೆಗಳು ಬಳಲುತ್ತಿರುವಾಗ, ವಸುಧೇಂದ್ರರ ಈ ಬರಹ, ಚಿತ್ರ ಮಾಡುವವರು ಹಾಗೂ ನೋಡುವವರು ಇಬ್ಬರ ಬಗ್ಗೆಯೂ ಹೊಂದಿರುವ ಪ್ರೀತಿಯಿಂದ ಇಷ್ಟವಾಗುತ್ತದೆ.

’ಇಂತಿ ನಿನ್ನ ಪ್ರೀತಿಯ’ ಸಿನಿಮಾದ ಕತೆ ಹೇಳುವುದು ಅಂತಹ ಕಷ್ಟದ್ದೇನಲ್ಲ. "ಪ್ರೀತಿ-ನಿರಾಸೆ-ನಶೆ-ಹಸೆ-ಬಿಸಿ-ಹುಸಿ-ಸ್ವಸ್ತಿ" ಎಂಬ ಕೆಲವು ಪದಗಳಲ್ಲಿ ಕತೆಯನ್ನು ಕಟ್ಟಿ ಕೊಡಬಹುದು. ಆ ಪದಗಳ ವಿವರಣೆ ಕನ್ನಡ ಸಿನಿಮಾ ನೋಡಿ ಅಭ್ಯಾಸವಿರುವ ಯಾರಿಗೂ ಬೇಕಾಗುವದಿಲ್ಲ. ನೀವೇನಾದರೂ ಸಿನಿಮಾಕ್ಕೆ ಅದ್ಭುತ ಕತೆಯೊಂದು ಬೇಕೇ ಬೇಕೆನ್ನುವ ಹಳೆಯ ಕಾಲದವರಾದರೆ ನಿಮಗೆ ಈ ಸಿನಿಮಾ ನಿರಾಸೆ ಮೂಡಿಸಬಹುದು. ಕತೆಯನ್ನು ಬದಿಗಿಟ್ಟು ಸಿನಿಮಾ ನೋಡುವವರಾದರೆ, ಸೂರಿಯ ಪ್ರೀತಿಯಲ್ಲಿ ಕನ್ನಡ ಚಿತ್ರ ಜಗತ್ತು ಕಂಡರಿಯದ ಸಾಕಷ್ಟು ಹೊಸತುಗಳನ್ನು ಕಾಣಬಹುದಾಗಿದೆ.
ಸೂರಿ ಒಳ್ಳೆಯ ಪೇಂಟರ್ ಎಂದು ಕೇಳಿದ್ದೇನೆ. ಅದು ನಿಜವಿರಬೇಕು. ಚಿತ್ರದಲ್ಲಿ ಪ್ರತಿಯೊಂದು ದೃಶ್ಯವೂ ಒಳ್ಳೆಯ ಕಲಾಕೃತಿಯನ್ನು ನೋಡಿದ ಅನುಭವ ನೀಡುತ್ತದೆ. ಹಾಗಂತ ಗೆಳೆಯ ಯೋಗರಾಜ್ ಭಟ್‌ನಂತೆ ಸೂರಿ ಮಲೆನಾಡಿನ ಕಾಡನ್ನೋ, ಜೋಗಜಲಪಾತವನ್ನೋ ಹುಡುಕಿಕೊಂಡು ಹೋಗುವದಿಲ್ಲ. ಎತ್ತ ಕ್ಯಾಮರಾ ಹಿಡಿದರೂ ಸುಂದರವಾಗಿಯೇ ಕಾಣುವ ಅಂತಹ ದೈವನಿರ್ಮಿತ ತಾಣಗಳ ಸುಲಭದ ದಾರಿಯ ಆಯ್ಕೆ ಅವನದಲ್ಲ. ಸುಮ್ಮನೆ ನಮ್ಮ ದೈನಂದಿನ ಬದುಕಿನ ಚಕಮಕಿಗಳ ನಗಣ್ಯ ಸಂಗತಿಗಳಲ್ಲಿಯೇ ಸೊಗಸನ್ನು ಕಾಣುವ ಅವರ ಕಣ್ಣು ವಿಶೇಷವಾದದ್ದು. ಕೊರಳ ಸರವನ್ನು ಸುಮ್ಮನೆ ನಾಯಕಿ ಕೈಯಲ್ಲಿ ಹಿಡಿದುಕೊಳ್ಳುವುದು, ಗಂಡು ನೋಡಲು ಬಂದ ಹುಡುಗಿ ಕಣ್ಣಲ್ಲಿಯೇ ಮನೆಯನ್ನೆಲ್ಲಾ ಗಮನಿಸುವುದು, ಪ್ರೇಮಿಗಳಿಬ್ಬರು ಹಳೆಯ ಗೋಡೆಗೆ ನೇತು ಹಾಕಿದ ಓರೆಯಾದ ಕೆಂಪು ಅಂಚೆ ಪೆಟ್ಟಿಗೆಯ ಪಕ್ಕ ನಿಂತು ಮಾತನಾಡುವುದು - ಎಲ್ಲವೂ ಅದೆಷ್ಟು ಸೊಗಸಾಗಿ ಕಾಣುತ್ತದೆಂದರೆ ವಾಸ್ತವಕ್ಕಿಂತಲೂ ಕ್ಯಾಮರಾ ಸುಂದರವೆನ್ನಿಸುತ್ತದೆ. ಸೂರಿಯ ಕಲ್ಪನೆಯನ್ನು ಸೊಗಸಾಗಿ ಸೆರೆ ಹಿಡಿಯುವಲ್ಲಿ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ ಕೈ ಜೋಡಿಸಿದ್ದಾರೆ.
ಗೆಳೆಯ ಯೋಗರಾಜ್ ಭಟ್‌ಗೆ ಮಾತೇ ಮುತ್ತಿನ ಹಾರವಾದರೆ, ಸೂರಿಗೆ ಮೌನ ಬಂಗಾರ. ಪ್ರೇಮಿಗಳಿಬ್ಬರು ಮೌನವಾಗಿ ಕಣ್ಣಲ್ಲಿ ಪಿಸುಗುಟ್ಟುವುದು ಅವರಿಗಿಷ್ಟ, ವಾಚಾಳಿ ರಂಗಾಯಣದ ರಘುವಿನ ನಾಲಿಗೆ ಕತ್ತರಿಸಿ ಮೂಕನಾಗಿಸುವಲ್ಲಿ ಅವರಿಗೆ ಆನಂದ, ಮೌನದಲ್ಲಿಯೇ ಗಂಡನ ದೌರ್ಜನ್ಯವನ್ನು ಎದುರಿಸುವ ಭಾವನಾಳ ಬಗ್ಗೆ ಅವರಿಗೆ ಕುತೂಹಲ, ಹೆಂಡದಂಗಡಿಯ ಕಡೆ ಎಳೆಯುವ ಕಾಲುಗಳ ಸೆಳೆತಗಳನ್ನು ಚಿತ್ರಿಸುವದಲ್ಲಿ ಅವರಿಗೆ ಆಸಕ್ತಿ. ಅಬ್ಬರದ ಹಾಡು ಕುಣಿತಗಳ ಈ ದಿನಗಳಲ್ಲಿ, ಸೂರಿ ಬರೀ ಹಿನ್ನೆಲೆಗಾಯನದಲ್ಲಿ ಪ್ರೀತಿಯ ಮೌನಗೀತೆಗಳನ್ನು ಬರೆಯುತ್ತಾರೆ. ಸಂಗೀತ ನಿರ್ದೇಶಕ ಸಾಧು ಕೋಕಿಲ ಆ ಮೌನದಲ್ಲಿ ಕೆಲವೊಮ್ಮೆ ಗಲಾಟೆ ಮಾಡುತ್ತಾರೆ. ಆದರೆ ಒಂದೆರಡು ಒಳ್ಳೆಯ ಹಾಡುಗಳನ್ನು ಕನ್ನಡೀಕರಿಸಿ, ಕನ್ನಡದ ಧ್ವನಿಗಳಿಗೆ ಅವಕಾಶ ಕೊಟ್ಟಿದ್ದಾರೆಂದು ಅವರನ್ನು ಕ್ಷಮಿಸಬಹುದಾಗಿದೆ.
ಬೆಂಗಳೂರಿನ ಕೆಳಮಧ್ಯಮ ವರ್ಗದ ಚಿತ್ರಣ ಕನ್ನಡ ಚಿತ್ರರಂಗ ಅಷ್ಟಾಗಿ ಕಂಡಿಲ್ಲ. ಹಳ್ಳಿಯ ಬಡವರನ್ನು ಬೆಳ್ಳಿತೆರೆಯಲ್ಲಿ ಕಂಡಿದ್ದೇವೆ ಹೊರತು, ನಗರದ ಬಡವರನ್ನಲ್ಲ. ಸೂರಿಗೆ ಆ ದುನಿಯಾದ ಒಳನೋಟ, ಅಲ್ಲಿಯ ಮೌಲ್ಯ, ಹಾಸ್ಯ, ಬವಣೆ ಎಲ್ಲವೂ ಗೊತ್ತು. ಎಲ್ಲಿಯೂ ವಾಸ್ತವವನ್ನು ವೈಭವೀಕರಿಸದೆ ಆ ಬದುಕನ್ನು ನಮ್ಮ ಮುಂದಿಡುತ್ತಾನೆ. ಅನಾಥ ಹೆಣಗಳ ಸಂಸ್ಕಾರ ಮಾಡಿ ಬಂದ ಹಣದಿಂದ ಬದುಕುವ ವ್ಯಕ್ತಿ, ’ಒಳ್ಳೆ ಕ್ವಾಲಿಟಿ ಡ್ರಿಂಕ್ಸ ತೊಗೋ ॒ಪೇಪರಲ್ಲಿ ಕಳ್ಳಭಟ್ಟಿ ಕುಡಿದು ಸತ್ತವರ ವರದಿ ಬಂದಿದೆ’ ಎಂದು ಮೈದುನಗೆ ಕಳಕಳಿಯಿಂದ ಹೇಳುವ ಅತ್ತಿಗೆ, ಹೆಣ ಸಾಗಿಸುವ ವ್ಯಾನಿನಲ್ಲಿ ಸರಸ ಸಲ್ಲಾಪವಾಡುವ ಪ್ರೇಮಿಗಳು, ’ನೀ ಸತ್ತರೆ ನಾನು, ನಾ ಸತ್ತರೆ ನೀನು ಹೆಣದ ಮುಂದೆ ಸಖತ್ತಾಗಿ ಡ್ಯಾನ್ಸ್ ಮಾಡಬೇಕು’ ಎಂದು ಒಪ್ಪಂದ ಮಾಡಿಕೊಳ್ಳುವ ಗೆಳೆಯರು, ’ತುಟಿಯಲ್ಲಿ ರಕ್ತ ಬರೋ ಹಾಗೆ ಮುತ್ತು ಕೊಡೋ’॒ ಎಂದು ಪೀಡಿಸುವ ಹುಡುಗಿ - ಹೀಗೆ ವಿಭಿನ್ನ ಲೋಕವೊಂದು ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಈ ಲೋಕದಲ್ಲಿ ಕುಡಿಯುವದೆಂದರೆ ಎಲ್ಲೋ ಪಬ್ಬಿನಲ್ಲಿ ಮಬ್ಬು ಬೆಳಕಿನಲ್ಲಿ ಆರಾಮಾಗಿ ಕುಳಿತು ಹೀರುವದಲ್ಲ, ಸುಮ್ಮನೆ ಮನೆಗೆಲಸಕ್ಕಾಗಿ ರಣಬಿಸಿಲಿನಲ್ಲಿ ಹೊರಗೆ ಬಂದಾಗ ಹಾಗೇ ಮೂಲೆಯ ಅಂಗಡಿಯ ಮುಂದೆ ನಿಂತು ಗುಳಿಗೆ ನುಂಗಿ ನೀರು ಕುಡಿದಂತೆ ಎರಡು ಗ್ಲಾಸ್ ಗಟಗಟನೆ ಹೀರಿ ಹೊರಡುವುದು ಎಂದು ಸೂರಿಗೆ ಗೊತ್ತು.
ಇಷ್ಟೆಲ್ಲಾ ಹೇಳಿದರೂ ನಾನು ಸ್ವಲ್ಪ ಹಳೆಯ ಕಾಲದವನು. ಚಿತ್ರಕ್ಕೆ ಒಳ್ಳೆಯ ಕತೆಯಿಲ್ಲದೆ ಉಳಿದ ವೈಭವಗಳನ್ನು ಸ್ವೀಕರಿಸುವುದು ನನಗೆ ಒಗ್ಗದ್ದು. ಹಂಜಕ್ಕಿ ಅನ್ನಕ್ಕೆ ಎಂತಹ ಅದ್ಭುತ ಸಾರು-ಹುಳಿ-ಚಟ್ಣಿಗಳಿದ್ದರೆ ಏನುಪಯೋಗ? ಸೂರಿ ಒಳ್ಳೆಯ ಕತೆಯನ್ನು ಮೊದಲು ತಯಾರಿ ಮಾಡಿಕೊಂಡು ನಂತರ ಸಿನಿಮಾಕ್ಕೆ ಕೈ ಹಾಕಬೇಕಿತ್ತೆನ್ನಿಸುತ್ತದೆ. ಅನಾವಶ್ಯಕವಾಗಿ ಸಹಾಯಕ ಪಾತ್ರಗಳಿಗೆ ಉಪಕತೆಗಳನ್ನು ಕೊಟ್ಟು ಮುಖ್ಯ ಕತೆಯನ್ನು ಮರೆಯುತ್ತಾನೆ. ಪ್ರೀತಿಸಿದ ಹುಡುಗಿ ಕೈ ಕೊಟ್ಟಾಗ ನಾಯಕ ಮದ್ಯವ್ಯಸನಿಯಾಗುವುದು ಸಹಜವಾದರೂ, ವರ್ಷಗಟ್ಟಳೆ ಅದರಲ್ಲಿಯೇ ಮುಳುಗಿ ಹೋಗುತ್ತಾನೆನ್ನುವ ದೇವದಾಸ್ ಕತೆಯನ್ನು ಬೆಂಗಳೂರಿನ ಪರಿಸರದಲ್ಲಿ ಸ್ವೀಕರಿಸುವುದು ಕಷ್ಟ. ಮದ್ಯವ್ಯಸನದಂತಹ ಜ್ವಲಂತ ಸಮಸ್ಯೆಯನ್ನಾದರೂ ಮುಖ್ಯವಾಗಿ ತೆಗೆದುಕೊಂಡು ಅದರ ಸೂಕ್ಷ್ಮಗಳನ್ನು ಗುರುತಿಸಬೇಕಿತ್ತು. ಸುಖಾಸುಮ್ಮನೆ ಕೆಲವು ಪಾತ್ರಗಳನ್ನು ಸಾಯಿಸುವದರಿಂದ ಹೃದಯಸ್ಪರ್ಶಿ ಸನ್ನಿವೇಶಗಳನ್ನು ಸೃಷ್ಟಿಸಲಾಗುವದಿಲ್ಲ ಎನ್ನುವುದು ಸೂರಿಗೆ ಗೊತ್ತಿಲ್ಲವೆ?
ಕಡೆದಿಟ್ಟ ಶಿಲ್ಪದಂತೆ ದಷ್ಟಪುಷ್ಟವಾಗಿ ಸುಂದರವಾಗಿರುವ ಕಿಟ್ಟಿ ಪಡ್ಡೆ ಹುಡುಗನಾಗಿ ಇಷ್ಟವಾಗುತ್ತಾನೆ. ಆದರೆ ಯಾಕೋ ಕುಡಿತದ ಪಾತ್ರವನ್ನು ಅಭಿನಯಿಸಲು ಒದ್ದಾಡಿದ್ದಾನೆ! ಭಾವನಾ ತನ್ನ ಕಣ್ಣಲ್ಲಿ ಇನ್ನೂ ಜೀವಂತಿಕೆಯನ್ನು ಉಳಿಸಿಕೊಂಡಿದ್ದಾಳಾದರೂ ಉಳಿದಂತೆ ಯಾಕೋ ಸುಸ್ತಾಗಿದ್ದಾಳ. ಗರಮಾಗರಂ ದೃಶ್ಯಗಳಿರುವ ಒಂದು ಹಾಡಿಗೆ ಜಯಂತ ಕಾಯ್ಕಿಣಿಯವರ ಒಂದು ಸುಂದರ ಭಾವಗೀತೆಯನ್ನು ಬಳಸಿಕೊಳ್ಳಲಾಗಿದೆ. ಯೋಗರಾಜ ಭಟ್ಟರ ಕವನಗಳಲ್ಲಿ ಒಂದೆರಡು ಸಾಲುಗಳು ಕಾಡುವಂತಿವೆ. ಕ್ಷಿಪ್ರ ನಿರೂಪಣೆಗೆ ಸಂಕಲನಕಾರನ ಕೊಡುಗೆ ಅಪಾರವಾಗಿದೆ.
ಇಷ್ಟಾಗಿಯೂ ನೀವು ಈ ಸಿನಿಮಾಕ್ಕೆ ಹೊರಡುವಿರಾದರೆ ನಾನು ನಿಮ್ಮೊಡನೆ ಮತ್ತೊಮ್ಮೆ ಬರಲು ಸಿದ್ಧ. ಕನ್ನಡದ ಹುಡುಗರು ಸ್ವತಂತ್ರವಾಗಿ ನಮ್ಮ ಮಣ್ಣಿನ ವಾಸನೆಯ ಸಿನಿಮಾಗಳನ್ನು ಹೊಸ ಹುರುಪಿನಲ್ಲಿ ಮಾಡುತ್ತಿದ್ದಾರೆನ್ನುವ ಸಂಗತಿಯೇ ನನಗೆ ಚಿತ್ರದ ಚಿಕ್ಕಪುಟ್ಟ ದೋಷಗಳನ್ನು ಗೌಣವಾಗಿ ಕಾಣುವಂತೆ ಮಾಡುತ್ತದೆ.

Tuesday, March 4, 2008

ಮದ್ಯಸಾರ

ಈಜು ಬಾರದೆ ಧುಮುಕಿರುವೆ
ಅಶಾಂತ ಸಂಸಾರ ಸಾಗರಕೆ ನಾನು
ಇಲ್ಲಿವರೆಗಂತೂ ತೇಲುತಿರುವೆ
ಸೊಂಟಕೆ ಕಟ್ಟಿದ ಹೆಂಡದ ಬುರುಡೆಗೆ ಶರಣು

Monday, March 3, 2008

ಕಾಮೆಂಟ್‌ ರೀ

*
ಬೆಂಗಳೂರಲ್ಲಿ ಬಾರುಗಳು ಇನ್ನು ಮುಂದೆ ರಾತ್ರಿ ಒಂದರವರೆಗೆ ತೆರೆದಿರುತ್ತವಂತೆ. ಹನ್ನೊಂದು ಗಂಟೆವರೆಗೆ ಅಂತ ನಿಯಮ ಇದ್ದಾಗಲೇ ಕದ್ದುಮುಚ್ಚಿ ಒಂದು ಎರಡು ಗಂಟೆವರೆಗೆ ತೆರೆದಿರುತ್ತಿದ್ದ ಬಾರುಗಳು ಇನ್ನುಮುಂದೆ ‘ಉಷೆ ಮೂಡುವವರೆಗೂ ನಶೆ’ ಅಂತಲೇ ಬೋರ್ಡ್ ಹಾಕಬಹುದು. ನಾವಾದರೂ ಏನು ಮಾಡಲು ಸಾಧ್ಯ? ಇದೇ ಹಿಗ್ಗಿನಲ್ಲಿ ಮತ್ತೆರಡು ಪೆಗ್ಗು ಹಾಕಬಹುದು ಅಷ್ಟೇ!
*
ಈ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿಕೆಟ್ ಹಿಂದೆ ಹೋದ ಬೈಗಳಿಗಿಂತ ಆಟಗಾರರು ಅಂದ ಬೈಗುಳಗಳೇ ಹೆಚ್ಚಾದಂತಿದೆ. ಜತೆಗೆ ಅವರಂದಿದ್ದು ಇವರಿಗೆ ತಿಳಿಯಲ್ಲ, ಇವರಂದಿದ್ದು ಅವರಿಗೆ ತಿಳಿಯಲ್ಲ. ಮಾಕಿ ಅಂದರೆ ಮಂಕಿ ಅಂತಂದ್ಕೋತಾರೆ. ಬ್ಯಾಡ್ ಬಾಯ್ ಅಂದರೆ ಮ್ಯಾಡ್ ಬಾಯ್ ಅಂತ ಕೇಳಿಸ್ಕೋತಾರೆ. ಈಗ ಹೇಡನ್ ಹರ್ಭಜನ್‌ಗೆ ‘ಕಳೆ’ ಅಂದಿದ್ದಾನೆ. ಕಳೆ ಅಂದನೋ ಕೊಳೆ ಅಂದನೋ ? ಈ ನಡುವೆ ಧೋನಿ ಬಯ್ಯೋದು ಒಂದು ಕಲೆ(ಕಳೆ ಅಲ್ಲ), ಕಲಿತುಕೊಳ್ಳಿ ಅಂತ ಹೇಳಿದ್ದಾನೆ. ಈ ಕೆಟ್ಟ ಕಲೆ ಗಿಲೆ ಬಿಟ್ಟು ಚೆನ್ನಾಗಿ ಆಡಿ ಭಲೆ ಅನ್ನಿಸ್ಕೊಳ್ಳೋಕೇನು ಇವರಿಗೆ ರೋಗ ಅಂತಿರೋದು ನಮ್ಮ ನಿಮ್ಮ ಸೋಸಿಲಿ.
*
ಈ ಕೆಳಗಿನ ಸಾಲುಗಳನ್ನು ಸೋಸಿಲಿ ಇಮೇಲ್ ಮುಖಾಂತರ ಕಳುಹಿಸಿದ್ದಾಳೆ(ನಿಮಗೂ ಬಂದಿರಬಹುದು ಚೆಕ್ ಮಾಡಿ). ಕೆಲವು ಹಳೆಯವು, ಕೆಲ ಹೊಸವು. ಇವು ಈ ಅಂಕಣದಲ್ಲೇಕೆ ಎಂದು ನೀವು ಆಕ್ಷೇಪ ತೆಗೆದರೆ ಜೀವನದ ಬಗೆಗಿನ ಕಾಮೆಂಟು ರೀ ಅಂತ ಹೇಳಿ ನಾನು ತಪ್ಪಿಸಿಕೊಳ್ಳುತ್ತೇನೆ. ಓದಿ.
ಆಲ್ಕೋಹಾಲು ಸೇವಿಸುವುದರಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಹಾಲು ಸೇವಿಸಿದರೂ ಅಷ್ಟೇ.
ತಪ್ಪು ಮಾಡುವುದು ಸಹಜ. ಕ್ಷಮಿಸುವುದು ಕಂಪನಿ ಪಾಲಿಸಿಯಲ್ಲಿಲ್ಲ.
ಯಶಸ್ಸಿನ ದಾರಿ? ಅದು ಯಾವಾಗಲೂ ದುರಸ್ತಿಯಲ್ಲಿರುತ್ತೆ ಬಿಡಿ.
ಲೋನ್ ಸಿಗಬೇಕೆಂದರೆ ನಿಮಗೆ ಅದರ ಅಗತ್ಯ ಇಲ್ಲ ಅಂತ ಮೊದಲು ನಿರೂಪಿಸಬೇಕಾಗುತ್ತೆ.
ಜೀವನದಲ್ಲಿ ಆಸೆ ಹುಟ್ಟಿಸುವ ಸಂಗತಿಗಳೆಲ್ಲಾ ಒಂದೋ ಅಕ್ರಮವಾದವು, ಇಲ್ಲಾ ದುಬಾರಿಯಾದವು ಅಥವಾ ಬೇರೆಯವರನ್ನು ಮದುವೆಯಾದಂಥವು!
೨೧೦ ನಂಬರ್ ಬಸ್ಸಿಗೆ ಒಂದು ಗಂಟೆ ಕಾದ ನಂತರ ಎರಡು ೨೧೦ ಬಸ್‌ಗಳು ಒಟ್ಟೊಟ್ಟಿಗೆ ಬರುತ್ತವೆ. ಮತ್ತು ನೀವು ಹತ್ತಿಕೊಂಡ ಬಸ್ಸಿನಲ್ಲಿ ಮಾತ್ರ ಸೀಟು ಖಾಲಿ ಇರುವುದಿಲ್ಲ!
ಪೆನ್ನಿದ್ದರೆ ಪೇಪರ್ ಇರಲ್ಲ, ಪೇಪರ್ ಇದ್ದರೆ ಪೆನ್ ಇರಲ್ಲ, ಎರಡೂ ಇದ್ದಾಗ ಯಾರೂ ಕಾಲ್ ಮಾಡೋದಿಲ್ಲ!
ರೋಮಿಂಗ್‌ನಲ್ಲಿದ್ದಾಗಲೇ ಹೆಚ್ಚು ರಾಂಗ್‌ನಂಬರ್‌ಗಳು ಬರೋದು!
ಗಾಳಿಯ ದಿಕ್ಕು ಯಾವುದೇ ಇರಲಿ, ಸಿಗರೇಟಿನ ಹೊಗೆ ಯಾವಾಗಲೂ ಸೇದದವನ ಕಡೆಗೇ ಬರುತ್ತದೆ!