
ಪುಸ್ತಕ ಕೊಳ್ಳುವ ಉದ್ದೇಶವಿಲ್ಲದವರನ್ನೂ ಒಮ್ಮೆ ಪುಸ್ತಕ ಕೈಗೆತ್ತಿಕೊಳ್ಳುವಂತೆ ಮಾಡುವ ಶಕ್ತಿ ಮುದ್ದಾದ ಮುಖಪುಟಕ್ಕೆ ಇರುತ್ತದೆ. ಕೆಲವೊಮ್ಮೆ ಒಳಗಿನ ಬರಹದ ಬಗ್ಗೆ ಗೊತ್ತಿಲ್ಲದಿದ್ದರೂ ಇರಲಿ ತಗೊಂಬಿಡೋಣ ಎಂದು ಮರುಳು ಮಾಡುವಷ್ಟು ಅಂದವಾಗೂ ಇವು ಇರುತ್ತವೆ! ಕಂಪ್ಯೂಟರ್, ಫೋಟೋಶಾಪ್, ಡಿಜಿಟಲ್ ಕ್ಯಾಮರಾಗಳು ಎಲ್ಲರಿಗೂ ಸುಲಭವಾಗಿ ಎಟುಕುತ್ತಿರುವ ಈ ಕಾಲದಲ್ಲಿ ಅಂಥ ಚಂದದ ಮುಖಪುಟವೊಂದನ್ನು ರಚಿಸುವ ಆಸೆ ಬಹಳಷ್ಟು ಜನಕ್ಕೆ ಬಂದಿರಬಹುದು. ಆದರೆ ಅವಕಾಶ ? ಹಾಗಿದ್ದರೆ ನಿಮಗೊಂದು ಖುಷಿಯ ಸುದ್ದಿ.
ಹೊಸ ಕತೆಗಾರರ ಶೋಧ, ಕಡಿಮೆ ದರದಲ್ಲಿ ಪುಸ್ತಕ ಪ್ರಕಟಣೆ, ಸಿಡಿಯಲ್ಲಿ ಪುಸ್ತಕ, ಬ್ರೈಲ್‌ನಲ್ಲಿ ಪುಸ್ತಕ.... ಛಂದ ಪುಸ್ತಕದ ಹೊಸತುಗಳ ಪಟ್ಟಿಗೆ ಇದೀಗ ಮತ್ತೊಂದು ಸೇರ್ಪಡೆಯಾಗಿದೆ. ಹೊಸಬಗೆಯ ಪುಸ್ತಕ ಮುಖಪುಟಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಛಂದಪುಸ್ತಕವು ‘ಛಂದ ಮುಖಪುಟ ವಿನ್ಯಾಸ" ಸ್ಪರ್ಧೆ ಏರ್ಪಡಿಸಿದೆ.
ಇದೇ ಡಿಸೆಂಬರ್ ನಲ್ಲಿ ಅದು ಪ್ರಕಟಿಸಲಿರುವ ವಸುಧೇಂದ್ರರ ‘ಹಂಪಿ ಎಕ್ಸ್‌ಪ್ರೆಸ್" ಕಥಾಸಂಕಲನಕ್ಕೆ ನೀವು ಮುಖಪುಟ ರಚಿಸಬಹುದು. ಆಯ್ಕೆಗೊಂಡ ಒಂದು ವಿನ್ಯಾಸಕ್ಕೆ 5000 ರೂ ಬಹುಮಾನ ನೀಡಲಾಗುವುದು. ಪುಸ್ತಕದ ವಸ್ತು ಬಳ್ಳಾರಿ ಹಾಗೂ ಬೆಂಗಳೂರಿನ ಪರಿಸರದಲ್ಲಿ ನಡೆಯುವ ಜೀವನಪ್ರೀತಿಯ ಕತೆಗಳು.
ಮುಖಪುಟ ವಿನ್ಯಾಸದ ಅಳತೆ: ಎತ್ತರ 22.5 ಸೆಮೀ, ಅಗಲ 14.5 ಸೆಮೀ. ಒಬ್ಬರು ಎಷ್ಟು ಬೇಕಾದರೂ ವಿನ್ಯಾಸಗಳನ್ನು ಕಳಿಸಬಹುದು.
ನಿಮ್ಮ ವಿನ್ಯಾಸಗಳನ್ನು
chandapustaka@yahoo.com ಗೆ ಇ ಮೇಲ್ ಮಾಡಿ. ವಿನ್ಯಾಸವನ್ನು 300 ರೆಸಲ್ಯೂಷನ್‌ನಲ್ಲಿ ಸಿದ್ಧಪಡಿಸಿ, ಇ ಮೇಲ್ ಮಾಡುವಾಗ ರೆಸಲ್ಯೂಷನ್ ಅನ್ನು 72ಕ್ಕೆ ಇಳಿಸಿ, ಜೆಪೆಗ್ ಫಾರ್ಮ್ಯಾಟ್‌ನಲ್ಲಿ ಕಳಿಸಿರಿ.
ಮುಂದೇನಾಯಿತು ಎಂಬುದಕ್ಕೆ ಈ ಬ್ಲಾಗನ್ನು ಆಗಾಗ ವೀಕ್ಷಿಸುತ್ತಿರಿ. ಕಡೆಯ ದಿನಾಂಕ: ಅಕ್ಟೋಬರ್ 20.
ವಿವರಗಳಿಗೆ ಸಂಪರ್ಕಿಸಿ: 98444 22782