ವಸುಧೇಂದ್ರ ಕನ್ನಡಕ್ಕೆ ತಂದ ತೆಲುಗು ಕತೆ `ಮಿಥುನ'ವನ್ನು ಎರಡು ವಾರಗಳ ಹಿಂದೆ ಮೈಸೂರಿನಲ್ಲಿ ಕೆಲ ಕಾಲೇಜು ಹುಡುಗಿಯರು ನಾಟಕ ಮಾಡಿದರು. ಆ ಚೆಂದದ ನಾಟಕವನ್ನು ನೋಡಿಕೊಂಡು ಬೆಂಗಳೂರಿಗೆ ಮರಳಿ ಹೊರಟಾಗ ಸಂಜೆ ಏಳಾಗುತ್ತಾ ಬಂದಿತ್ತು. ಅಕಸ್ಮಾತ್ ದಾರಿಯಲ್ಲಿ ಸಿಗುವ ಗೆಳೆಯನಂತೆ ಆಗ ಕಣ್ಣಿಗೆ ಬಿದ್ದ ಅರಮನೆ ಎಂದಿನದಲ್ಲದ ಬೆಡಗಿನಿಂದ ಕಣ್ಸೆಳೆಯಿತು. ಬೃಹತ್ ನಾಟಕದ ಸೆಟ್ಟಿನಂತೆ ದೀಪದ ಬೆಳಕಿನಲ್ಲಿ ಹೊಳೆಯುತ್ತಿದ್ದ ಅರಮನೆಗೆ ಅಲೌಕಿಕತೆಯನ್ನು ದಯಪಾಲಿಸಿದ್ದು ಹಿನ್ನೆಲೆಗಿದ್ದ ವಿಚಿತ್ರ ವಿನ್ಯಾಸದ ಆಗಸವೇ ಇರಬೇಕು. ಕ್ಯಾಮರಾದಲ್ಲೆಲ್ಲಾ ಸೆರೆ ಸಿಗುವಂಥದಲ್ಲ ಈ ಮಾಯೆ ಅನಿಸಿದರೂ ಒಂದಷ್ಟು ಚಿತ್ರ ತೆಗೆದೆ. ಆಯ್ದ ಎರಡು ನಿಮಗೆ.
Thursday, September 27, 2007
Wednesday, September 26, 2007
ಗಂಗೂಲಿ-ಒಂದು ರೀಪ್ಲೆ (ಪುಸ್ತಕ ವಿಮರ್ಶೆ)
ಸೌರವ್ ಗಂಗೂಲಿ ಕಳೆದ ೧೫ ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವುದರಿಂದ, ಆತನನ್ನು ಹಿಂಬಾಲಿಸುತ್ತಾ ಹೋಗುವ ಲೇಖಕರ ನೆನಪುಗಳು ಸಹಜವಾಗೇ ಆ ಅವಧಿಯ ಭಾರತ ಕ್ರಿಕೆಟ್‌ನ ಮೆಲುಕೂ ಆಗುತ್ತದೆ. ಹಾಗಾಗಿ ಓದುತ್ತಿರುವವರಿಗೆ ಒಂದು ರೀತಿಯ ನಾಸ್ಟಾಲ್ಜಿಯಾ ಅನುಭವಕ್ಕೆ ಬಾರದಿರುವುದಿಲ್ಲ.
*ಇಡೀ ಜಗತ್ತು ಸಚಿನ್ ತೆಂಡೂಲ್ಕರ್ ಎಂಬ ದೇವತೆಯ ಆರಾಧನೆಯಲ್ಲಿ ಪರವಶವಾಗಿದ್ದ ಸಮಯವದು. ಆಟದ ಜತೆಗೆೆ ತನ್ನ ಮಾತು, ವಿನಯಗಳಿಂದಲೂ ಆತ ಪ್ರೇಕ್ಷಕರು ಮತ್ತು ಎದುರಾಳಿಗಳ ಮನವನ್ನು ಸಮಾನವಾಗಿ ಗೆಲ್ಲುತ್ತಾ ಸಾಗಿದ್ದ. ಅಂಥ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡ ಪ್ರವೇಶಿಸುವ ಯಾವುದೇ ಬ್ಯಾಟ್ಸ್‌ಮನ್‌ಗೆ ತನ್ನ ಕನಸನ್ನು ಕಿರಿದಾಗಿಸಿಕೊಳ್ಳುವ ಅನಿವಾರ್ಯತೆ ಇತ್ತು. ಹಠ, ಛಲ, ಸ್ವಾಭಿಮಾನಗಳೇ ತುಂಬಿದ್ದ ಸೌರವ್ ಗಂಗೂಲಿ ಎಂಬ ಹುಡುಗನಿಗಂತೂ ಅದು ತೀರಾ ಕಷ್ಟದ ಪರಿಸ್ಥಿತಿಯಾಗಿತ್ತು.`ನಾನು ರಾಮು ಅಲ್ಲ, ಮಹಾರಾಜ'. ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಂದು ತಿಂಗಳು ಕಳೆದರೂ ಆಡುವ ಅವಕಾಶ ಸಿಗದ ಹತಾಶೆಯಲ್ಲಿದ್ದ ಗಂಗೂಲಿ, ಡ್ರಿಂಕ್ಸ್ ಟ್ರಾಲಿಯ ಜತೆ ಮೈದಾನದೊಳಗೆ ಹೋಗು ಎಂದವರಿಗೆ ಕೊಟ್ಟನೆನ್ನಲಾದ ಈ ಉತ್ತರದಿಂದ ಶುರುವಾಗುತ್ತದೆ, ಒಂದು ಯಶೋಗಾಥೆ. ತಾನು ಹಾಗೆನ್ನಲಿಲ್ಲ ಎಂದು ಹೇಳಿದರೂ ಗಂಗೂಲಿಗೆ ನಾಲ್ಕು ವರ್ಷಗಳ `ಕಠಿಣ ಶಿಕ್ಷೆ' ವಿಧಿಸಲಾಗುತ್ತದೆ. ಆ ಅಜ್ಞಾತವಾಸದಿಂದ ಕಳೆದ ವರ್ಷ ಅನುಭವಿಸಿದ ಮತ್ತೊಂದು ಅಜ್ಞಾತವಾಸ ಮತ್ತು ಬಳಿಕದ ವಿರೋಚಿತ ಪುನರಾಗಮನದ ಕತೆಯನ್ನು `ಸೌರವ್ ಗಂಗೂಲಿ-ದ ಮಹಾರಾಜ ಆಫ್ ಕ್ರಿಕೆಟ್' ಪುಸ್ತಕ ವಿಷದವಾಗಿ ಹೇಳುತ್ತದೆ.ಕೋಲ್ಕತಾದ ಆಜ್‌ಕಲ್ ಪತ್ರಿಕೆಯಲ್ಲಿ ಕಳೆದ ೨೬ ವರ್ಷಗಳಿಂದ ಕ್ರಿಕೆಟ್ ವರದಿಗಾರರಾಗಿರುವ ದೇಬಸಿಸ್ ದತ್ತಾ ಬರೆದಿರುವ ಈ ಪುಸ್ತಕ ಗಂಗೂಲಿಯ ಜೀವನ ಚರಿತ್ರೆ ಖಂಡಿತಾ ಅಲ್ಲ. ಗಂಗೂಲಿಯ ಆಟವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಪ್ರಯತ್ನದಂತೆಯೂ ಇದು ಕಾಣುವುದಿಲ್ಲ. ಆತನ ಖಾಸಗಿ ಬದುಕಿನ ವಿಶೇಷ ವಿವರಗಳನ್ನೂ ಇದು ಕೊಡುವುದಿಲ್ಲ. ಕಟ್ಟಾ ಅಭಿಮಾನಿಯೊಬ್ಬ ಉತ್ಕಂಠಿತವಾಗಿ ಬರೆದ ಸಾಲುಗಳಿವು ಅಷ್ಟೆ. ಹಾಗಾಗೇ ಸೌರವ್ ಅಭಿಮಾನಿಗಳಿಗೆ ಇದರ ಓದು ಖುಷಿ ಕೊಡುತ್ತದೆ. ಎಲ್ಲ ಅಡ್ಡಿ ಹಾಗೂ ಸಂಚುಗಳನ್ನು ಮೆಟ್ಟಿ ಬಂಗಾಳಿ ಹುಡುಗನೊಬ್ಬ ಭಾರತ ಕ್ರಿಕೆಟ್ ತಂಡದ ಯಶಸ್ವಿ ಕ್ಯಾಪ್ಟನ್ ಆದದ್ದು ಹೇಗೆ ಎಂಬುದನ್ನು ದತ್ತಾ ಇಲ್ಲಿ ವಿವರಿಸುತ್ತಾರೆ. ೧೯೯೬ರ ಇಂಗ್ಲೆಂಡ್ ಪ್ರವಾಸಕ್ಕೆ ಗಂಗೂಲಿ `ಕೊಂಚ ಬ್ಯಾಟ್ ಮಾಡಬಲ್ಲ ಐದನೇ ಬೌಲರ್' ಆಗಿ ಆಯ್ಕೆಯಾಗಿದ್ದು, ಗಂಗೂಲಿ ಬೇಡ ಎಂದು ಆಗಿನ ನಾಯಕ ಅಜರ್ ಮತ್ತು ಕೋಚ್ ಸಂದೀಪ್ ಪಾಟೀಲ್ ಹಠ ಹಿಡಿದದ್ದು, ಜಗಳ ಮಾಡಿಕೊಂಡು ಹಠಾತ್ತನೆ ಭಾರತಕ್ಕೆ ಮರಳಿದ ಸಿಧು ಜಾಗದಲ್ಲಿ ಕಣಕ್ಕಿಳಿದ ಗಂಗೂಲಿ ಲಾರ್ಡ್ಸ್‌ನಲ್ಲಿ ಸೆಂಚುರಿ ಹೊಡೆದದ್ದು, ಆಗ ಅದೇ ಅಜರ್ ಖುಷಿಯಾಗಿ ತನ್ನ ರಿಸ್ಟ್ ವಾಚನ್ನು ಗಂಗೂಲಿಗೆ ಉಡುಗೊರೆಯಾಗಿ ನೀಡಿದ್ದು, `ಆರಂಭದಲ್ಲಿ ನಾವ್ಯಾರೂ ಗಂಗೂಲಿಯ ಪ್ರತಿಭೆಯನ್ನು ಸರಿಯಾಗಿ ಗುರುತಿಸಲಿಲ್ಲ' ಎಂದು ಮತ್ಯಾವಾಗಲೋ ಅಜರ್ ಪ್ರಾಂಜಲವಾಗಿ ಒಪ್ಪಿಕೊಂಡಿದ್ದು, ಶುರುವಿನಲ್ಲಿ ಗವಾಸ್ಕರ್ ಗಂಗೂಲಿಗೆ ಪ್ರಾಯೋಜಕರನ್ನು ಹುಡುಕಿಕೊಟ್ಟಿದ್ದು, ಸತತ ೧೫ ಪಂದ್ಯಗಳನ್ನು ಗೆದ್ದ ಹಮ್ಮಿನಲ್ಲಿ ಭಾರತಕ್ಕೆ ಬಂದ ಆಸ್ಟ್ರೇಲಿಯಾ ತಂಡದವರಿಗೆ `ಸಂಖ್ಯೆ ೧೬, ೧೭, ೧೮ಗಳನ್ನು ಅವರು ಮರೆಯುವುದೊಳ್ಳೆಯದು' ಎಂದು ಸಂದರ್ಶನವೊಂದರಲ್ಲಿ ಗಂಗೂಲಿ ಹೇಳಿದ್ದು- ಇಂಥ ಕೆಲವು ಗೊತ್ತಿರದ ಅಥವಾ ಮರೆತುಹೋದ ಸಂಗತಿಗಳು ಪುಸ್ತಕದಲ್ಲಿ ಅಲ್ಲಲ್ಲಿ ಬರುತ್ತವೆ. ಆದರೆ ಪುಸ್ತಕದಲ್ಲಿ ಇಂಥ ಮನ ಬೆಳಗುವ ವಿವರಗಳ ಸಂಖ್ಯೆ ಹೆಚ್ಚಿಲ್ಲ ಎಂಬುದು ಬೇಸರದ ವಿಷಯ.ಸೌರವ್ ಗಂಗೂಲಿ ಕಳೆದ ೧೫ ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವುದರಿಂದ, ಆತನನ್ನು ಹಿಂಬಾಲಿಸುತ್ತಾ ಹೋಗುವ ಲೇಖಕರ ನೆನಪುಗಳು ಸಹಜವಾಗೇ ಆ ಅವಧಿಯಲ್ಲಿ ಭಾರತ ಕ್ರಿಕೆಟ್‌ನಲ್ಲಿ ನಡೆದ ಪ್ರಮುಖ ಘಟನಾವಳಿಗಳ ಮೆಲುಕೂ ಆಗುತ್ತವೆ. ಹಾಗಾಗಿ ಓದುತ್ತಿರುವವರಿಗೆ ಒಂದು ರೀತಿಯ ನಾಸ್ಟಾಲ್ಜಿಯಾ ಅನುಭವಕ್ಕೆ ಬಾರದಿರುವುದಿಲ್ಲ. ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಗಂಗೂಲಿಯನ್ನು ಬಹುವಾಗಿ ಮೆಚ್ಚುವ ಮಾಜಿ ಕ್ರಿಕೆಟಿಗ, ಹಾಲಿ ವೀಕ್ಷಕ ವಿವರಣೆಗಾರ ಜೆಫ್ರಿ ಬಾಯ್ಕಾಟ್. `ನನ್ನ ಇಷ್ಟು ವರ್ಷಗಳ ಜೀವನದಲ್ಲಿ ಸೌರವ್‌ನಷ್ಟು ಚೆನ್ನಾಗಿ ಬಾಲನ್ನು ಟೈಮ್ ಮಾಡಬಲ್ಲ ಬ್ಯಾಟ್ಸ್‌ಮನ್‌ನನ್ನ ನೋಡೇ ಇಲ್ಲ' ಎಂದು ಹೇಳುವ ಅವರು `ಭಾರತ ತಂಡಕ್ಕೆ ಒಂದು ನಿರ್ದಿಷ್ಟ ದಿಕ್ಕು ತೋರಿದ್ದು ಗಂಗೂಲಿ' ಎಂಬುದನ್ನು ಸರಿಯಾಗಿ ಗುರುತಿಸಿದ್ದಾರೆ. ಪುಸ್ತಕ ಬರೆಯಲು ತಮ್ಮ ವೃತ್ತಿ ಜೀವನದ ನೆನಪುಗಳನ್ನೇ ಹೆಚ್ಚಾಗಿ ಆಶ್ರಯಿಸಿರುವ ದತ್ತಾ, ಇದಕ್ಕಾಗಿಯೇ ಸೌರವ್‌ನನ್ನು ವಿಶೇಷವಾಗಿ ಮಾತನಾಡಿಸಿದಂತೆ ಕಾಣುವುದಿಲ್ಲ. ಸೌರವ್ ಕುರಿತು ಇತರ ಹಿರಿಯ ಕ್ರಿಕೆಟರುಗಳಾಗಲಿ, ಕ್ರಿಕೆಟ್ ಪಂಡಿತರಾಗಲಿ ಏನೆನ್ನುತ್ತಾರೆ ಎಂದೂ ಅವರು ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಹಲವೆಡೆ ಗಂಗೂಲಿ ಕೇವಲ ಬಂಗಾಳಿಗಳ ಆಸ್ತಿ ಎಂಬಂತೆ ಬರೆಯುವ ಅವರು, ಈ ಪುಸ್ತಕ ಬಂಗಾಳಿಗಳಿಗೆ ಸ್ಫೂರ್ತಿಯಾಗಲಿ ಎಂದೂ ಆಶಿಸುತ್ತಾರೆ. ಒಂದು ಟೂರ್ನಿಮೆಂಟಿನ ಬಗ್ಗೆ ಮಾತಾಡುತ್ತಾ ಆದರ ಪ್ರತಿ ಪಂದ್ಯದಲ್ಲೂ ಏನಾಯಿತು, ಯಾರು ಗೆದ್ದರು ಎಂದು ಬರೆಯುವುದು ಬೋರು ಹೊಡೆಸುತ್ತದೆ. ನೀವು ನಿರೀಕ್ಷಿಸುವಂತೆ ಗಂಗೂಲಿ ಚಾಪೆಲ್ ಜಗಳದ ಬಗ್ಗೆ ಹೊಸ ವಿವರಗಳಿರಲಿ, ಆ ವಿಷಯವನ್ನು ಸರಿಯಾಗಿ ಪ್ರಸ್ತಾಪಿಸುವುದೂ ಇಲ್ಲ ದತ್ತಾ. ಒಂದು ರೀತಿಯಲ್ಲಿ ಯಾವ ವಿವಾದಗಳಿಗೂ ಎಡೆಯಿಲ್ಲದೆ ಸುಮ್ಮನೆ ಗಂಗೂಲಿಯ ಗುಣಗಾನವನ್ನಷ್ಟೇ ಮಾಡುವ ಪ್ರಯತ್ನವಿದು.ಸಚಿನ್ ಬಾಲ್ಯದ ಫೋಟೊವನ್ನು ನೋಡಿ ಬೋರಾಗಿದ್ದರೆ ಇಲ್ಲಿ ನೀವು ಬಾಲಕ ಗಂಗೂಲಿಯ ಮೂರ್ನಾಲ್ಕು ಚಿತ್ರಗಳನ್ನು ನೋಡಿ ಆನಂದಿಸಬಹುದು. ಅವನ್ನು ಬಿಟ್ಟರೆ ಇಲ್ಲಿರುವ ಉಳಿದೆಲ್ಲ ಫೋಟೊಗಳನ್ನು ನೀವು ಈ ಮೊದಲೆ ಪತ್ರಿಕೆಗಳಲ್ಲಿ ನೋಡಿರುತ್ತೀರಿ. ಸುಂದರ ಮುದ್ರಣ ಇದ್ದರೂ, ಒಳಪುಟಗಳ ವಿನ್ಯಾಸದಲ್ಲಿ ಅಂಥ ವಿಶೇಷವೇನೂ ಇಲ್ಲ. ಕಡೆಯ ೧೮ ಪುಟಗಳಲ್ಲಿ ಗಂಗೂಲಿಯ ಬ್ಯಾಟಿಂಗ್ ಅಂಕಿ ಅಂಶಗಳಿವೆ.ಒಟ್ಟಿನಲ್ಲಿ ಕೊಂಡುಕೊಳ್ಳಲೇಬೇಕಾದ ಪುಸ್ತಕ ಅಲ್ಲ, ಯಾರದಾದರೂ ಟೇಬಲ್ ಮೇಲೆ ಕಂಡರೆ ತಪ್ಪದೆ ಒಮ್ಮೆ ತಿರುವಿಹಾಕಿ.

Tuesday, September 25, 2007
ಕಾಮೆಂಟ್ ರೀ ಎಂಬ ಕಾಲಮ್ಮು ರೀ
ಡಿಸ್‌ಕ್ಲೈಮರ್: ಟೈಮ್‌ಪಾಸ್ ಈ ಬರೆಹಗಳ ಪರಮ ಮತ್ತು ಏಕೈಕ ಉದ್ದೇಶ. ಪ್ರಚಲಿತ ಸುದ್ದಿಗಳನ್ನು ಕೊಂಕಿನಿಂದ ನೋಡುವುದು ಇಲ್ಲಿನ ಯತ್ನ. ಮಾಡಲು ಇನ್ನೇನೂ ಒಗೆತನವಿಲ್ಲದಿದ್ದರೆ ಮಾತ್ರ ಇವನ್ನು ಓದಬಹುದು. ವಿಜಯ ಕರ್ನಾಟಕದಲ್ಲಿ ಕೆಲವಾರಗಳಿಂದ ಪ್ರತಿ ಭಾನುವಾರ ಕಾಮೆಂಟ್ ರೀ ಎಂಬ ಹೆಸರಿನ ಅಂಕಣದ ರೂಪದಲ್ಲಿ ಇವು ಪ್ರಕಟವಾಗುತ್ತಿವೆ. ನೋ ಕಮೆಂಟ್ಸ್ ಎನ್ನದೆ ಏನೆನಿಸಿತೆಂದು ಹೇಳಿ.
*
ಮೊನ್ನೆ ಟ್ವೆಂಟಿ ಟ್ವೆಂಟಿ ಪಂದ್ಯವೊಂದು ನಡೀತಿತ್ತು. ಬ್ಯಾಟ್ಸ್‌ಮನ್ ಸತತ ಎರಡು ಬಾಲ್‌ನಲ್ಲಿ ರನ್ ತೆಗೆಯಲಿಲ್ಲ. ನೋಡುತ್ತಿದ್ದವರೊಬ್ಬರು ಬೇಸರದಿಂದ ಉದ್ಗರಿಸಿದರು: ‘ಇವನು ಒನ್‌ಡೇ ಮ್ಯಾಚ್ ಅಂದ್ಕೊಂಡಿದಾನೇನು?’! ಕ್ರಿಕೆಟ್‌ನ ಅತಿಚಿಕ್ಕ ನಮೂನೆಯಾದ ಟಿ ಟ್ವೆಂಟಿ ನಮ್ಮೊಳಗೆ ಇಳಿಯುತ್ತಿರುವುದು ಹೀಗೆ. ದೈನಿಕ ಧಾರಾವಾಹಿಗಳ ಈ ಕಾಲದಲ್ಲಿ ವಾರವಿಡೀ ಕಾದು ಅರ್ಧ ಗಂಟೆಯ ಧಾರಾವಾಹಿ ನೋಡುವ ತಾಳ್ಮೆ ಯಾರಿಗೂ ಇಲ್ಲ. ಕಲೆಗಿಂತ ಕಾಲ ಮುಖ್ಯ ನಮಗೀಗ. ಎಲ್ಲವೂ ಸಟಸಟ ಆಗಬೇಕು. ಫಲವಾಗಿ ಈ ವರ್ಲ್ಡ್ ಕಪ್‌ನಲ್ಲಿ ೨೫೦ಕ್ಕೂ ಹೆಚ್ಚು ಸಿಕ್ಸರ್‌ಗಳು ಬಂದವು. ಓವರಿಗೆ ೯ರಂತೆ ರನ್‌ಗಳು ಬೇಕಿದ್ದರೆ ಈಗದು ಈಸಿಯಾಗಿ ಹೊಡೆಯಬಹುದಾದ ಸ್ಕೋರು! ಸೌತ್ ಆಫ್ರಿಕಾದ ಮಾಜಿ ಬೌಲರ್ ಡೊನಾಲ್ಡ್ ಈ ಪ್ರಕಾರದ ಬಗ್ಗೆ ಒಮ್ಮೆ ಹೇಳಿದ್ದ ಮಾತನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳಬಹುದು: ‘ಇದೇನಿದ್ದರೂ ಬ್ಯಾಟ್ಸ್‌ಮನ್‌ಗಳ ಆಟ. ಬೌಲರ್ಗಳಿಗೆ ಥ್ಯಾಂಕ್ಸ್ ಫಾರ್ ಕಮಿಂಗ್ ಅಂತ ಹೇಳಬೇಕಷ್ಟೆ!’
*
‘ಕೊಲ್ಲು ಹುಡುಗಿ ಒಮ್ಮೆ ನನ್ನ, ಹಾಗೇ ಸುಮ್ಮನೆ’ ಅಂತ ಬರೆದಿದ್ದ ಜಯಂತ್ ಕಾಯ್ಕಿಣಿ ‘ಮಿಲನ’ ಚಿತ್ರಕ್ಕೆ ಬರೆದಿರುವ ಹಾಡೊಂದರಲ್ಲಿ ‘ನಿಂತಲ್ಲೇ ಹಾಳಾದೆ ನಿನ್ನಿಂದಲೇ’ ಎಂಬ ಸಾಲಿದೆ. ಹಿಂದಿ ಸಿನಿಮಾದ ಇಷ್ಕಿನಲ್ಲಿ ‘ಮಾರ್ ಡಾಲ್‌ನಾ’ ಹಾಗೂ ‘ಬರ್‌ಬಾದ್ ಹೋನಾ’ಗಳು ಮೊದಲಿನಿಂದ ಇದ್ದಂಥ ಅಭಿವ್ಯಕ್ತಿಗಳೇ ಆದರೂ ಅವು ಜಯಂತರ ಕನ್ನಡದಲ್ಲಿ ಹೊಸದಾಗೇ ಕೇಳಿಸುತ್ತವೆ. ‘ಮೂಡಣದ ಕುಂಕುಮದಂಗಡಿ ಹೊಸಾ ದಿನ’, ‘ಕಣ್ಣು ತೆರೆದು ಕಾಣುವ ಕನಸೇ ಜೀವನ’, ‘ಸಾವಿರ ಕಣ್ಣಿನ ನವಿಲಾಗಿ ಕಾದಿದೆ ಸಮಯವು ನಿನಗಾಗಿ’, ‘ಸಂತೆಯ ವೇಷಕೆ ಉಂಟೆ ಕೊನೆ, ಸಂಜೆಗೆ ಮರಳಲು ಎಲ್ಲಿ ಮನೆ’ ಎಂಬಂಥ ಸಾಲುಗಳು ಚಿತ್ರಗೀತೆಗಳಲ್ಲಿ ಕೇಳಿಸುತ್ತಿರುವುದು ನಿಜಕ್ಕೂ ಹಿತವಾದ ಸಂಗತಿ.
*
ಸೇತುವೆ ಕಟ್ಟಿದ ರಾಮನನ್ನು ಯಾವ ಇಂಜಿಯರಿಂಗ್ ಕಾಲೇಜಲ್ಲಿ ಓದಿದ ಎಂದು ಪ್ರಶ್ನಿಸಿದ್ದಾರೆ ಕರುಣಾನಿಧಿ. ಶಿವನೇನಾದರೂ ವಿವಾದದಲ್ಲಿ ಸಿಲುಕಿದ್ದರೆ ಅವನು ಯಾವ ಮೆಡಿಕಲ್ ಕಾಲೇಜಲ್ಲಿ ಓದಿದ ಎಂದು ಅವರು ಕೇಳುತ್ತಿದ್ದರೇನೊ ಎಂಬುದು ಸೋಸಿಲಿಯ ಊಹೆ. ಯಾಕೆ ಹೇಳಿ? ಆನೆಯ ತಲೆಯನ್ನು ಗಣಪತಿ ದೇಹಕ್ಕೆ ಸೇರಿಸಿದ್ದು ಡಾಕ್ಟರ್ ಶಿವನಲ್ಲವೆ!
*
ಜಗತ್ತೇ ಡಿಜಿಟಲ್ ಕ್ಯಾಮರ ಕ್ರಾಂತಿಯಲ್ಲಿ ಮೀಯುತ್ತಿರುವಾಗ, ಉತ್ತರಪ್ರದೇಶದ ದಾರುಲ್ ಉಲೇಮಾ ಫೋಟೋಗ್ರಫಿ ಧರ್ಮಬಾಹಿರ ಎಂದು ಫತ್ವಾ ಹೊರಡಿಸಿದ ಸುದ್ದಿ ಬಂದಿದೆ (ಇದೂ ಒಂಥರಾ ‘ಫ್ಲಾಶ್’ ನ್ಯೂಸ್ ಅಲ್ಲವೆ?). ಅವರ ಪ್ರಕಾರ ಫೋಟೊ ತೆಗೆಯುವುದು ಮತ್ತು ಅದಕ್ಕೆ ಪೋಸು ನೀಡುವುದು ಎರಡೂ ಪಾಪವಂತೆ. ಫತ್ವಾ ಉಲ್ಲಂಘಿಸಿ ಕ್ಯಾಮರಾ ಕ್ಲಿಕ್ಕಿಸಿದವರನ್ನು ‘ಫೋಟೋ ಕಾಯ್ದೆ’ ಅಡಿ ಬಂಧಿಸಲಾಗುವುದೆ ಅನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ. ಇಷ್ಟು ದಿನ ಫೋಟೊ ಮಾತ್ರ ಹೊಡೆಯುತ್ತಿದ್ದರು, ಇನ್ನುಮೇಲೆ ಫೋಟೋಗ್ರಾಫರನ್ನೂ ಹೊಡೆಯಬಹುದೇನೋ ಎಂಬುದು ಮಿಸ್ ಸೋಸಿಲಿಯ ಅನುಮಾನ.
*
ಇತ್ತೀಚಿಗೆ ಅತ್ಯಂತ ಹೆಚ್ಚು ಚರ್ಚೆಗೊಳಗಾಗುತ್ತಿರುವುದು ಯಾರ ಉಡುಪು ಹೇಳಬಲ್ಲಿರಾ? ಬಿಪಾಶಾ ಬಸುನೂ ಅಲ್ಲ, ಮಲ್ಲಿಕಾ ಶೆರಾವತ್‌ನೂ ಅಲ್ಲ. ಪಾಕ್ ಅಧ್ಯಕ್ಷ ಮುಷರ್ರಫ್‌ದು. ಅವರು ಚುನಾವಣೆಗೆ ಮುನ್ನ ಸಮವಸ್ತ್ರ ತೊರೆಯುತ್ತಾರೋ ಇಲ್ಲವೋ ಎಂಬ ಕುರಿತು ದಿನವೂ ಪತ್ರಿಕೆಗಳಲ್ಲಿ ಸುದ್ದಿಗಳನ್ನು ಓದುತ್ತಿದ್ದೇವೆ. ‘ಸಮವಸ್ತ್ರ ಇದ್ದರೂ, ಇರದಿದ್ದರೂ ಮುಷರ್ರಫ್ ನನಗೆ ಒಪ್ಪಿಗೆ ಇಲ್ಲ’ ಎಂದು ನವಾಜ್ ಷರೀಫ್ ಹೇಳಿದ್ದರೆ, ಕಣಕ್ಕಿಳಿಯುವ ಮೊದಲು ಸಮವಸ್ತ್ರ ಕಳಚುತ್ತೇನೆಂದು ಮುಷರ್ರಫ್ ತಮಗೆ ಮಾತು ಕೊಟ್ಟಿದ್ದಾರೆಂದು ಅವರೊಂದಿಗೆ ಡೀಲು ಕುದುರಿಸುತ್ತಿರುವ ಬೇನಜೀರ್ ಭುಟ್ಟೊ ಹೇಳಿದ್ದಾರೆ. ಇದು ಹಲವು ‘ಅಪಾರ್ಥಸಾರಥಿ’ಗಳ ಹುಬ್ಬೇರಿಸಿದೆ!
*
ಅಮ್ಮನ್ ಅಕ್ಕನ್ ಅಂತೆಲ್ಲ ಮಾತನಾಡುವುದು ಕೇವಲ ಸಾಯಿಕುಮಾರ್ ಥರದ ಸಿನಿಮಾನಟರ ಹಕ್ಕೇನಲ್ಲ. ಕೆಲ ದಿನಗಳ ಹಿಂದೆ ಆಂಧ್ರ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಸದನದಲ್ಲೇ ಚಂದ್ರಬಾಬು ನಾಯ್ಡು ಅವರ ತಾಯಿಯನ್ನು ಅವಮಾನಿಸುವಂಥ ಮಾತನಾಡಿ ನಂತರ ಕ್ಷಮೆ ಕೋರಿದ್ದರು. ಮೊನ್ನೆ ಮೊನ್ನೆ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಡಿ ಕೆ ಶಿವಕುಮಾರ್ ತಾಯಿಯ ಬಗ್ಗೆಯೂ ಅಂಥದೇ ಮಾತನಾಡಿ ಕಡೆಗೆ ಹಾಗಲ್ಲ ಹೀಗೆ ಎಂದು ವಿವರ ನೀಡಿದ್ದರು.(ಇದರ ಮಧ್ಯೆ ಜಾರ್ಜ್ ಫರ್ನಾಂಡಿಸ್ ಪ್ರಧಾನಿಯ ತಲೆ ಉರುಳಿಸುವ ಬಗ್ಗೆಯೂ, ಪ್ರಧಾನಿ ಬಿಜೆಪಿಯವರು ತಮ್ಮ ಕೊಲೆಗೆ ಹವನ ಮಾಡಿಸಿದ ಬಗ್ಗೆಯೂ ಮಾತಾಡಿದರು). ಕುಮಾರಸ್ವಾಮಿ ಯಡಿಯೂರಪ್ಪನವರಿಗೆ ಕೊಟ್ಟ ಭಾಷೆಗೆ ತಪ್ಪಿದರೆ ಪರವಾಗಿಲ್ಲ, ಆಡುವ ಭಾಷೆ ತಪ್ಪಬಾರದಲ್ಲವೆ ಎಂಬುದು ಸೋಸಿಲಿಯ ಕಳವಳ!
*
ಭಾಗಲ್ಪುರದಲ್ಲಿ ಸರಗಳ್ಳನೊಬ್ಬನನ್ನು ಬೈಕಿಗೆ ಕಟ್ಟಿ ಎಳೆದಿದ್ದಾರೆ. ಗುಜರಾಥ್‌ನಲ್ಲೆಲ್ಲೋ ಹುಡುಗಿಯನ್ನು ಓಡಿಸಿಕೊಂಡು ಹೋದ ತಪ್ಪಿಗೆ ಹುಡುಗನನ್ನು ಟ್ರಾಕ್ಟರ್‌ಗೆ ಕಟ್ಟಿ ಎಳೆದು ಕೊಂದೇಬಿಟ್ಟಿದ್ದಾರೆ. ಧರ್ಮದೇಟು ಹಾಕುವಾಗ ನಮ್ಮಲ್ಲಿ ಮೂಡುವ ಹುರುಪಿನ ಮೂಲವ್ಯಾವುದು? ಮುಖ ಮೂತಿ ನೋಡದೆ ಲಂಚ ಕೇಳುವ ಸಬ್‌ರಿಜಿಸ್ಟ್ರಾರುಗಳನ್ನು, ಹೇಳದೆ ಕೇಳದೆ ದರ ಏರಿಸುವ ಮೊಬೈಲ್ ಸರ್ವಿಸ್ ಕಂಪನಿಗಳನ್ನು, ವೋಟು ಪಡೆದೂ ಕೆಲಸ ಮಾಡದ ರಾಜಕಾರಣಿಗಳನ್ನು ಕೊರಳಪಟ್ಟಿ ಹಿಡಿದು ಕೇಳಲಾಗದ ನಮ್ಮ ಅಸಹಾಯಕತೆ, ಹತಾಶೆ ಹೀಗೆ ಬಡಪಾಯಿಗಳು ಸಿಕ್ಕಾಗ ಸ್ಫೋಟಗೊಳ್ಳುವುದೇನೊ. ಮೇರಾ ಭಾರತ್ ಮಹಾನ್.
*
ಇದರ ನಡುವೆಯೇ ಕಾನೂನಿನ ಮೇಲೆ ಭರವಸೆ ಹೆಚ್ಚಿಸುವಂಥ ಸುದ್ದಿಯೆಂದರೆ ಬಾಲಿವುಡ್‌ನ ಪ್ರಭಾವಿ ತಾರೆಗಳು ಕೂಡ ಜೈಲಿಗೆ ಹೋಗುತ್ತಿರುವುದು. ಅದನ್ನು ಹೀಗೆ ಹೇಳುವುದಕ್ಕಿಂತ ಸೋಸಿಲಿಯ ಹನಿಗವನದಲ್ಲಿ ಕೇಳಿದರೇ ಚೆನ್ನ.
ಕೊಂದ್ಹಾಕಿದರೆ ಜಿಂಕೆ
ಬಿಟ್ ಬಿಡ್ತಾರಾ ಸುಮ್‌ಕೆ
ಸ್ಟಾರ್ ಆದ್ರೂನೂ ಸಂಜಯ್, ಸಲ್ಲು
ಕಾನೂನ್ ಹೇಳಿತು: ಬಗ್ಗಿ ನಿಲ್ಲು
*
ತಂಗಿ ಸೆಂಟಿಮೆಂಟು ತೆರೆಯ ಮೇಲಷ್ಟೇ ಅಲ್ಲ, ಸೆರೆಯ ಬಳಿಯೂ ವರ್ಕಾಗುತ್ತೆ ಅನ್ನೋದು ನ್ಯೂಸ್‌ಚಾನೆಲ್ ನೋಡಿದ್ ಮೇಲೆ ತಿಳೀತಿದೆ. ಸಂಜಯ್ ದತ್ ಜತೆ ಕೋರ್ಟಿಗೆ ಮತ್ತು ಜೈಲಿಗೆ ಅಲೆದದ್ದು ತಂಗಿ ಪ್ರಿಯಾ ದತ್ ಆದರೆ, ಸಲ್ಮಾನ್‌ಗೆ ಜತೆ ನೀಡುತ್ತಿರುವುದು ತಂಗಿ ಅಲ್ವೀರಾ.
*
ಅಧಿಕಾರ ಹಸ್ತಾಂತರ ಖಚಿತ ಅಂತ ಕುಮಾರಸ್ವಾಮಿ ಹೇಳಿದ್ದನ್ನೇ ನಂಬಿಕೊಂಡು ಯಡಿಯೂರಪ್ಪ ಸಂಭ್ರಮಿಸುತ್ತಿದ್ದಾರೆ. ಹಸ್ತಾಂತರದಲ್ಲಿ ಹಸ್ತಕ್ಕೆ ಕೋಟ್ ಇದೆಯಾ ಅಂತ ಈಗಲೇ ಪರಿಶೀಲಿಸಿಕೊಳ್ಳುವುದು ಒಳ್ಳೆಯದು ಎಂಬುದು ಮಿಸ್ ಸೋಸಿಲಿಯ ಪ್ರಾಮಾಣಿಕ ಸಜೆಷನ್!
*
ಮೊನ್ನೆ ಸಂಸತ್ತಿಗೆ ಕೋಳಿ ನುಗ್ಗಿತ್ತು. ಸಂಸದರನ್ನು ತಲೆ ಇಲ್ಲದ ಕೋಳಿಗಳೆಂದು ಕರೆದ ರಾಯಭಾರಿ ಸೇನ್ ವಿರುದ್ಧ ಎಡಪಕ್ಷಗಳು ಖಾರವಾದರೆ, ಬಿಜೆಪಿ ಮಸಾಲೆ ಅರೆಯಿತು. ಕೊನೆಗೆ ಕೋಳಿ ಕೆ ರಂಗ ರೊನೇನ್ ಸೆನ್ ‘ನಾನಂದಿದ್ದು ನಿಮಗಲ್ಲ, ಪತ್ರಕರ್ತರಿಗೆ’ ಅಂತ ಹೇಳಿದ್ದೂ ಆಯ್ತು. ಪತ್ರಕರ್ತರು ಹೆಡ್‌ಲೆಸ್ ಚಿಕನ್, ಸಂಸದರು ಬೋನ್‌ಲೆಸ್ ಚಿಕನ್, ಸರಕಾರಕ್ಕೆ ಚಿಕೂನ್‌ಗುನ್ಯಾ ಅಂತ ಮಮತಾ ಬ್ಯಾನರ್ಜಿ ಥೇಟ್ ಸೋಸಿಲಿಯ ಥರ ಜೋಕ್ ಕಟ್ ಮಾಡಿದ್ದೂ ಆಯ್ತು. ನಮ್ಮನ್ನೇಕೆ ಆಡಿಕೊಂಡಿದ್ದು ಅಂತ ಕೋಳಿಗಳೂ ಸಿಟ್ಟಾಗಿವೆಯಂತೆ, ಆದರೆ ಪತ್ರಕರ್ತರು ಸಿಟ್ಟಾದ ಸುದ್ದಿ ಬಂದಿಲ್ಲ!
*
ಸಂಸತ್ತಿಗೆ ಕೋಳಿ ಕಾಟವಾದರೆ, ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಸಲ್ಮಾನ್ ಖಾನ್ ಜೈಲಿಗೆ ಹೊರಟಿದ್ದಾರೆ. ಮೊನ್ನೆ ಅಬು ಸಲೇಂ ಕನವರಿಸಿದ ಹೆಸರುಗಳಲ್ಲಿ ಸುಭಾಷ್ ಘಾಯ್‌ರಂಥ ಕೆಲ ನಿರ್ಮಾಪಕ, ನಿರ್ದೇಶಕರೂ ಇದ್ದರು. ಹಿಂದಿ ಸಿನಿಮಾದವರೆಲ್ಲಾ ಹೀಗೆ ಜೈಲಿಗೆ ಹೋಗುತ್ತಿದ್ದರೆ ಜೈಲಿನಲ್ಲೇ ಒಂದು ಬಹುತಾರಾ ಸಿನಿಮಾ ಮಾಡಬಹುದು ಅನ್ನಿಸುತ್ತೆ. ಲೊಕೇಶನ್ ಶಿಫ್ಟ್!...
*
ನಾನೇ ಮುಂದಿನ ಮುಖ್ಯಮಂತ್ರಿ ಅಂತ ಪದೇಪದೇ ಹೇಳುತ್ತಿದ್ದ ಯಡಿಯೂರಪ್ಪ, ಕುಮಾರಸ್ವಾಮಿ ಆಕ್ಷೇಪಿಸಿದ ನಂತರ ಮೌನವ್ರತಕ್ಕಿಳಿದಿದ್ದಾರೆ. ಅವರೀಗ ನಾನು ಮಾತಾಡುವುದಿಲ್ಲ ಎಂದು ಪದೇಪದೇ ಹೇಳುತ್ತಿದ್ದಾರೆ. ಸದ್ಯಕ್ಕೆ ಮೂಕರಾಗಿರುವ ಅವರು ಮೂರ್ಖ ಆಗುವುದನ್ನು ನೋಡಲು ಇನ್ನೂ ೩೬ ದಿನ ಕಾಯಬೇಕು.
*
ಏಳು ಜನ ಶಿಕ್ಷಕರು ಸೇರಿಕೊಂಡು ಒಬ್ಬ ೧೧ ವರ್ಷದ ಬಾಲಕಿಯನ್ನು ಆಸ್ಪತ್ರೆ ಸೇರುವಂತೆ ಹೊಡೆದಿರುವ ದಾರುಣ ಸುದ್ದಿ ನಮ್ಮ ಬೆಂಗಳೂರಿನಿಂದಲೇ ವರದಿಯಾಗಿದೆ. ಇಂಥ ‘ಶಿಕ್ಷೆ’ಕರು ಯಾಕಿರುತ್ತಾರೆ? ಡಾಕ್ಟರು, ಇಂಜಿನಿಯರು, ಕಮಿಷನರು ಆಗಲು ಯೋಗ್ಯತೆ ಇಲ್ಲದವರನ್ನೇ ಆರಿಸಿ ನಾವು ಪ್ರಾಥಮಿಕ ಶಿಕ್ಷಕರ ಹುದ್ದೆಗಳನ್ನು ತುಂಬುತ್ತಿರುವುದರಿಂದಲೆ? ಕನಿಷ್ಟ ಪಕ್ಷ ಶಿಕ್ಷಕ ಮತ್ತು ಪೊಲೀಸರ ಹುದ್ದೆಗಳಿಗೆ ನೇಮಕ ಮಾಡುವಾಗ ಅಭ್ಯರ್ಥಿಯ ವ್ಯಕ್ತಿತ್ವವನ್ನು(ತಾಳ್ಮೆಯಂಥ ಗುಣಗಳು) ಪರಿಗಣಿಸುವ ಅವಶ್ಯಕತೆ ಇದೆ ಎಂದು ನಿಮಗನ್ನಿಸುವುದಿಲ್ಲವೆ?
*
ಶಾಲಾಮಕ್ಕಳು ಎದುರಿಸುತ್ತಿರುವ ಮತ್ತೆರಡು ಶಿಕ್ಷೆಗಳು ಹೀಗಿವೆ: ಮೊದಲನೆಯದು ಕೆಜಿಗಟ್ಟಲೆ ತೂಕದ ಚೀಲವನ್ನು ಹೊತ್ತುಕೊಂಡು ಶಾಲೆಗೆ ಹೋಗುವುದು. ಎರಡನೆಯದು, ಒಂದೇ ರಿಕ್ಷಾದಲ್ಲಿ ೧೦ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುವುದು. ರಕ್ಷಾಬಂಧನ ಹಬ್ಬದ ಮೂಡಿನಲ್ಲಿರುವ ಮಿಸ್ ಸೋಸಿಲಿಯ ಪ್ರಕಾರ, ಮಕ್ಕಳ ಈ ನಿತ್ಯದ ಗೋಳನ್ನು ‘ರಿಕ್ಷಾಬಂಧನ’ ಎನ್ನುವುದು ಸೂಕ್ತ!
*
ಮೊದಲಾದರೆ ಒಬ್ಬರು ಮತ್ತೊಬ್ಬರ ಹೃದಯ ಕದಿಯುವುದಿತ್ತು. ಜಗ್ಗೇಶ್ ಸಿನಿಮಾಗಳಲ್ಲಿ ತಲೆ ತಿನ್ನೋ ಪಾರ್ಟಿಗಳಿಗೆ ಮೆದುಳಿಗೇ ಕೈ ಹಾಕ್ತಾನಲ್ಲ ಅನ್ನುವುದಿತ್ತು. ಅಷ್ಟು ಬಿಟ್ಟರೆ ನಿಜವಾದ ಅರ್ಥದಲ್ಲಿ ಮನುಷ್ಯನ ಅಂಗಾಂಗಗಳು ಕಳ್ಳತನವಾಗುವ ಭಯವಿರಲಿಲ್ಲ. ಆದರೀಗ ನೋಡಿ, ಆಸ್ಪತ್ರೆಯಿಂದ ಹೊರಬರುವಾಗ ಎಲ್ಲಾ ಇದೆ ತಾನೇ ಎಂದು ಮುಟ್ಟಿ ನೋಡಿಕೊಳ್ಳುವಂತಾಗಿದೆ. ಮತ್ತಿನ್ನೇನು? ಡಾಕ್ಟರುಗಳು ಕಿಡ್ನಿ ಬಿಚ್ಚಿಕೊಂಡು ಕಳಿಸುತ್ತಿರುವ ಪ್ರಕರಣಗಳನ್ನು ಪೇಪರ್‌ನಲ್ಲಿ ಓದಿದ ಮೇಲೆ ಆಪರೇಷನ್ ಥೇಟರ್‌ನಲ್ಲಿ ಅರಿವಳಿಕೆ ಕೊಟ್ಟರೂ ರೋಗಿಗಳು ಎಚ್ಚರ ತಪ್ಪಬಹುದೆ? ಕಲಿಗಾಲ!
*
ಕಿಡ್ನಿ ಎಂದಾಗ ಒಂದು ಹಳೆಯ ಜೋಕು ನೆನಪಾಯಿತು. ಜೋಕು ಹಳೆಯದಾದರೇನು ನಗೆ ನವನವೀನ ಎಂದು ಓದಿಕೊಳ್ಳುವುದಾದರೆ ಹೇಳಬಹುದು. ಹೆಂಡತಿ, ಮಗ ಮಗಳ ಜತೆ ವಾಕಿಂಗ್ ಹೊರಟಿದ್ದ ಸರ್ದಾರ್‌ಜಿಗೆ ಹಳೇ ಸ್ನೇಹಿತನೊಬ್ಬ ಎದುರು ಸಿಕ್ಕ. ತನ್ನ ಫ್ಯಾಮಿಲಿಯನ್ನು ಪರಿಚಯಿಸುತ್ತಾ ಆತ ಸ್ನೇಹಿತನಿಗೆ ಹೇಳಿದ್ದು ಹೀಗೆ: ನಾನು ಸರದಾರ, ಇವಳು ನನ್ನ ಸರದಾರನಿ, ಇವನು ನನ್ನ ಕಿಡ್, ಇವಳು ನನ್ನ ಕಿಡ್ನಿ!
*
ಕೋಚು ಮತ್ತು ಕ್ರೀಡಾಪಟುಗಳ ನಡುವಿನ ಜಗಳ ನಮಗೆ ಹೊಸದೇನಲ್ಲ. ಚಾಪೆಲ್-ಗಂಗೂಲಿ ಜಗಳ ಆದ ನಂತರ ಇದೀಗ ಬಾಲ ಪ್ರತಿಭೆ ಬುಧಿಯಾ ಕೂಡ ಕೋಚ್ ಮೇಲೆ ಸಿಟ್ಟಿಗೆದ್ದು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾನೆ. ಪರಿಣಾಮ ಪೊಲೀಸರು ಕೋಚ್‌ನನ್ನು ಬಂಧಿಸಿದ್ದು, ಬುಧಿಯಾಗೆ ಕೋಚಿಲ್ಲದಂತಾಗಿದೆ. ಚಿಂತೆಯ ವಿಷಯವೇನಲ್ಲ, ಕೋಚ್ ಇಲ್ಲವಾದ ಮೇಲೆ ಗೆಲ್ಲತೊಡಗಿರುವ ಕ್ರಿಕೆಟ್ ಟೀಮಿಂದ ಬುಧಿಯಾ ಸ್ಫೂರ್ತಿ ಪಡೆಯಬಹುದು.
*
ಅವಿವಾಹಿತರಾಗಿದ್ದರೆ ಈ ಕೆಳಗಿನ ಹಾರೈಕೆಯನ್ನು ನಿರ್ಲಕ್ಷಿಸಿ: ೬೦ನೇ ಸ್ವಾತಂತ್ರೋತ್ಸವದ ಶುಭಾಶಯಗಳು!ಇಂಥ ಎಸ್ಸೆಮ್ಮೆಸ್ ನಿಮಗೂ ಬಂದಿತ್ತೆ?
*
ಈ ವಾರದ ‘ಬಿಸಿ’ ಸುದ್ದಿ ಯಾವುದು ಗೊತ್ತೆ? ೫೬೦ ಕೋಟಿ ರೂ ನಷ್ಟ ಮಾಡಿಕೊಂಡು ನೋಕಿಯಾದವರು ತಮ್ಮ ಬಿಸಿಯಾಗುತ್ತಿರುವ ಬ್ಯಾಟರಿಗಳನ್ನು ವಾಪಾಸ್ ಪಡೆಯಲು ನಿರ್ಧರಿಸಿರುವುದು.
*
ಸದಾ ಕತ್ತಿ ಮಸೆಯುತ್ತಾ, ಫೋನಿನಲ್ಲಿ ಇನ್ನೊಬ್ಬರನ್ನು ಸರ್ವನಾಶ ಮಾಡುತ್ತೇವೆಂದು ಸವಾಲು ಹಾಕುತ್ತಲೇ ಇರುವ ರೌಡಿ ಹೆಣ್ಣುಗಳು, ಕಣ್ಣು, ಕಿವಿ, ಮನಸ್ಸುಗಳನ್ನು ಏಕಕಾಲಕ್ಕೆ ತುಕುಡ ಮಾಡುವ ಸಂಕಲನಕಾರ ಮತ್ತು ಸಂಗೀತ ನಿರ್ದೇಶಕರು, ಪುಗಸಟ್ಟೆ ಸಿಕ್ಕರೆ ಏನನ್ನೂ ನೋಡುತ್ತೇವೆಂದು ಪಟ್ಟಾಗಿ ಟಿವಿ ಮುಂದೆ ಕೂತಿರುವ ನಾವು-ಇವಿಷ್ಟೂ ಸೇರಿದರೆ ನಮ್ಮ ಮೆಗಾ ಸೀರಿಯಲ್‌ಗಳು ಎಂಬ ವಿಷವರ್ತುಲ ಪೂರ್ಣವಾಗುತ್ತದೆ(ಒಂದೆರಡು ಅಪವಾದಗಳನ್ನು ಬಿಡಿ). ಸೋ ಕಾಲ್ಡ್ ಕಮರ್ಶಿಯಲ್ ಸಿನಿಮಾ ಮಂದಿಯೂ ಬೇರೇನೂ ಹೊಳೆಯದಾದಾಗ ತಾಯಿ ತಂಗಿ ಸೆಂಟಿಮೆಂಟು ಅಥವಾ ಒಂದೆರೆಡು ಹೆಚ್ಚು ಹೊಡೆದಾಟದ ಸಿನಿಮಾಗಳನ್ನು ಮಾಡಿರಬಹುದೇ ಹೊರತು ಮೆಗಾಸೀರಿಯಲ್ಲುಗಳಂಥ ಅನರ್ಥಕಾರಿ, ಅಪಾಯಕಾರಿ ಕತೆಗಳಿಗೆ ಕೈ ಹಾಕಿಲ್ಲ. ಕಾರ್ಯಕ್ರಮದ ನಡುವೆ ಜಾಹೀರಾತು ಬಂದರೆ ಶಾಪ ಹಾಕುತ್ತಿದ್ದ ಕಾಲವೊಂದಿತ್ತು. ಈಗ ಕೊಳಕು ಧಾರಾವಾಹಿಗಳ ದಾಳಿಯಿಂದ ನಮ್ಮನ್ನು ಕ್ಷಣಕಾಲವಾದರೂ ರಕ್ಷಿಸಬಲ್ಲವೆಂದರೆ ಅಡ್ವಟೈಸ್‌ಮೆಂಟುಗಳು ಮಾತ್ರ. ಮೆಗಾ ಸೀರಿಯಲ್ಲುಗಳು ಮುಗಿಯುವುದಿಲ್ಲ. ಅವುಗಳು ನೀಡುವ ಹಿಂಸೆಗೂ ಕೊನೆಯಿದ್ದಂತಿಲ್ಲ. ಈಗಂತೂ ಕನ್ನಡ ಚಾನೆಲ್‌ಗಳು ಹೆಚ್ಚುತ್ತಿವೆ. ಸೀರಿಯಲ್ಲುಗಳಂತೆಯೇ ಆದಿ ಅಂತ್ಯವಿಲ್ಲದ ಭಗವಂತ ಮಾತ್ರ ವೀಕ್ಷಕನನ್ನು ಕಾಪಾಡಬಹುದು.ಐಟಮ್ ಸಾಂಗುಗಳಿಗೆ ಕತ್ತರಿ ಹಾಕಹೊರಟಿರುವ ನಾವು ಇಂಥ ಕಳಪೆ ಸರಕಿಗೆ ಕಡಿವಾಣ ಹಾಕಲು ಇದು ಸೂಕ್ತ ಸಮಯವಲ್ಲವೆ?
*
ಜಗತ್ತಿನ ಅತ್ಯುತ್ತಮ ವೇಟ್‌ಲಿಫ್ಟರ್ ಭಗವಂತ. ಯಾಕೆಂದರೆ ಎಲ್ಲರೂ ಭಗವಂತನ ಮೇಲೆ ಭಾರ ಹಾಕಿದರೂ ಆತ ತಡೆದುಕೊಳ್ಳುತ್ತಾನಲ್ಲ ಎಂಬ ಸಿಲ್ಲಿ ಜೋಕನ್ನು ಸೋಸಿಲಿಯಲ್ಲದೆ ಇನ್ಯಾರು ಮಾಡಲು ಸಾಧ್ಯ?
*
ಒಳ್ಳೆಯವರಿಗಿದು ಕಾಲವಲ್ಲವೇನೋ. ಇತ್ತೀಚಿಗೆ ರೌಡಿಸಂ ಸಬ್ಜೆಕ್ಟಿರುವ ಕನ್ನಡ ಸಿನಿಮಾಗಳಿಗೆಲ್ಲ ತಮ್ಮ ಪಾಡಿಗೆ ತಾವಿದ್ದ ಸಜ್ಜನರ ಹೆಸರುಗಳನ್ನೇ ಇಡುತ್ತಿರುವುದನ್ನು ನೋಡಿದಾಗ ಹಾಗನ್ನಿಸುತ್ತದೆ. ಉದಾಹರಣೆಗೆ ನೋಡಿ: ಜೋಗಿ, ಸಂತ, ದಾಸ, ಶಾಸ್ತ್ರಿ, ಪೂಜಾರಿ, ಸ್ವಾಮಿ, ಭಕ್ತ, ಶಿಷ್ಯ.‘ಮಾಸ್ತಿ’ಯಂಥ ಸಾಹಿತಿಯನ್ನೂ ಅವರು ಬಿಡಲಿಲ್ಲ. ರೌಡಿಸಂ ಎಂಬ ಅವಗುಣದ ಕತೆಯಿರುವ ಸಿನಿಮಾಗಳಿಗೆ ಗುಣವಂತರ ಹೆಸರೇಕೆ ಇಡುತ್ತಾರೆಂದು ಚಿಂತಿಸುತ್ತಿರುವಾಗಲೆ ‘ಗುಣ’ ಎಂಬ ಹೆಸರಿನಲ್ಲಿ ಮತ್ತೊಂದು ರೌಡಿ ಚಿತ್ರದ ಪೋಸ್ಟರು ಕಾಣುತ್ತಿದೆ.
*
ಕಡೆಗೂ ಸಂಜು ‘ಬಾಬಾ’ ಪವಾಡ ನಡೆಯಲಿಲ್ಲ. ಗಾಂಧಿಗಿರಿ(ಸನ್ನಡತೆ) ಆಧಾರದಲ್ಲಿ ಶಿಕ್ಷೆ ಮನ್ನಾ ಆಗುವ ಆಸೆಯನ್ನು ಮುನ್ನಾಭಾಯಿ ಕೈಬಿಡಬೇಕಾಯಿತು. ಆದರೂ ಗಾಂಧಿ ತತ್ವಗಳನ್ನು ಹೊಸರೀತಿಯಲ್ಲಿ ಮತ್ತೆ ಜನಪ್ರಿಯಗೊಳಿಸಿದ ಅವರಿಗೀಗ ಗಾಂಧಿ ಇದ್ದ ಯರವಡಾ ಜೈಲೇ ಅಲಾಟಾಗಿರುವುದು ಅವರ ಪ್ರಯತ್ನಗಳಿಗೆ ಸಂದ ಜಯ ಅಂತ ಭಾವಿಸಬಹುದು.
*
ಮೋನಿಕಾ ಬೇಡಿ ಹೊರಬಂದರೆ, ಸಂಜಯ್ ದತ್ ಒಳಗೆ ಹೋದರು. ಅಂದರೆ ಜೈಲಿನಲ್ಲಿ ಬಾಲಿವುಡ್ ಲೆಕ್ಕ ಮೊದಲಿನಂತೇ ಉಳಿಯಿತು. ನಮ್ಮ ಜೈಲುಗಳ ತಾರಾಮೌಲ್ಯ ಕುಸಿದಿಲ್ಲ ಎಂಬುದು ಮಿಸ್ ಸೋಸಿಲಿ ಅಬ್ಸರ್‌ವೇಶನ್.
*
ಕಳೆದ ವಾರ ‘ಮಾತು ಕ(ವಿ)ತೆ’ಯಲ್ಲಿ ಜಪಾನಿ ಹೈಕುಗಳ ಬಗ್ಗೆ ಬರೆದಿರುವ ಡುಂಡಿರಾಜ್, ಪ್ರಾಸವಿಲ್ಲದೆಯೂ ಸೊಗಸಾಗಿ ಹನಿಗವನಗಳನ್ನು ಬರೆಯುವುದು ಹೀಗೆ ಎಂದಿದ್ದಾರೆ. ಅದಕ್ಕೆ ಬದ್ಧವಾಗಿ ಉಳಿಯಲೆಂದೋ ಏನೋ, ಮೊತ್ತ ಮೊದಲ ಬಾರಿಗೆ ಅವರ ಇಡೀ ಅಂಕಣದಲ್ಲಿ ಒಂದೆಡೆಯೂ ಪನ್ ಇಣುಕಿಲ್ಲ. ಅದನ್ನು ಸರಿದೂಗಿಸಲು ಮಿಸ್ ಸೋಸಿಲಿ ಹೈಕುಗಳ ಕುರಿತೇ ಒಂದು ಹನಿಗವಿತೆ ಬರೆದಿದ್ದು, ಅದು ಹೀಗಿದೆ.
ಆಫೀಸು ಆಗುವುದ್ಹೇಗೆ ಲೈಕು
ಆಗದಿದ್ದರೆ ಕಾಲ ಕಾಲಕ್ಕೆ ಹೈಕು!
ಕೇವಲ ಪ್ರಾಸವೊಂದೇ ಇದ್ದರೆ ಓದುಗರಿಗೆ ತ್ರಾಸವಾಗುತ್ತೆ ಅಂತ ಅರ್ಥ ಮಾಡಿಕೊಳ್ಳದೆ ಬರೆಯುವ ಹನಿಗವಿಗಳು ಈಗ ಹೆಚ್ಚುತ್ತಿದ್ದಾರೆ(‘ಮೆನಿ’ಗವಿಗಳು?). ಹನಿಹನಿಗೂಡಿದರೆ ‘ಹಳ್ಳ’ ಎಂದರೆ ಇದೇ ಏನು?(ಹಳ್ಳ ಎಂದರೆ ಹಾಳಾಗಿ ಹೋಗುವುದು ಎಂಬ ಅರ್ಥವೂ ಇದೆ.) ಅತಿ ಹೆಚ್ಚು ಸಲ ಬಳಸಲಾದ ಹನಿಗವಿತೆ ಶೀರ್ಷಿಕೆ ‘ವಿಪರ್ಯಾಸ’ ಅಂತ ಕಂಡುಹಿಡಿದಿರುವ ಸೋಸಿಲಿಯ ಪ್ರಕಾರ, ‘ಹನಿ’ ಎಂಬುದು ಪ್ರೇಮಿಯನ್ನು ಸಂಬೋಧಿಸುವ ಪದವೂ ಆದ್ದರಿಂದ ಶೇಕಡಾ ೯೦ರಷ್ಟು ಹನಿಗವಿತೆಗಳ ವಸ್ತು ಪ್ರೀತಿ, ಪ್ರೇಮ, ಪ್ರಣಯವೇ ಆಗಿರುತ್ತದೆ.
*
ಮೋನಿಕಾ ಬೇಡಿ ಮತ್ತು ಕಿರಣ್ ಬೇಡಿ ಒಂದೇ ಸಲ ಸುದ್ದಿಯಲ್ಲಿದ್ದಾರೆ.(ಮಂದಿರಾ ಬೇಡಿ ಮತ್ತು ಪೂಜಾ ಬೇಡಿಗಳನ್ನು ನೋಡಿ ಸಾಕಾಗಿ ‘ಬೇಡಿ ಬೇಡಿ’ ಎನ್ನುತ್ತಿದ್ದವರಿಗೆ ಇದೊಂದು ಚೇಂಜು). ಜೈಲಿಂದ ಬಿಡುಗಡೆಯಾಗಿ ಮತ್ತಷ್ಟು ಫಳಫಳ ಹೊಳೆಯುತ್ತಿರುವ ಮೋನಿಕಾಗೆ ಸಿನಿಮಾಗಳಲ್ಲಿ ಆಫರ್ ಇದೆಯಂತೆ. ಅಭಿನಯ ಆರಂಭಿಸುವುದಕ್ಕೂ ಮುನ್ನ ‘ಜೈಲಿನೊಳಗಿದ್ದೂ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ?’ ಅಂತ ಆಕೆ ಒಂದು ಪುಸ್ತಕ ಬರೆಯಬೇಕು ಎಂಬುದು ಸೌಂದರ್ಯೋಪಾಸಕರ ‘ಬೇಡಿ’ಕೆ!
*
ಮೋನಿಕಾ ಬೇಡಿಯ ಜತೆಗೇ ಹನೀಫ್ ಕೂಡ ಬಿಡುಗಡೆಯಾಗಿದ್ದಾರೆ. ಸಮಾನ ಅಂಶವೆಂದರೆ ಇಬ್ಬರೂ ಕೆಟ್ಟ ಸಹವಾಸದಿಂದ ಕಷ್ಟಪಟ್ಟವರು.
*
ಭಾರತದ್ದು diverse ಕಲ್ಚರ್(ವೈವಿಧ್ಯಮಯ ಸಂಸ್ಕೃತಿ) ಎಂದು ನಾಲ್ಕನೇ ಇಯತ್ತೆಯಲ್ಲಿ ಓದಿದ್ದು ಕೊನೆಗೂ ನಿಜವಾಗಿದೆ. ದೇಶದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಡೈವೋರ್ಸ್ ಪ್ರಕರಣಗಳು ಕಳೆದ ಹತ್ತುವರ್ಷಗಳಲ್ಲಿ ದುಪ್ಪಟ್ಟಾಗಿವೆ ಎಂಬ ಸಂಸಾರದ ಗುಟ್ಟನ್ನು ಇತ್ತೀಚಿನ ಅಧ್ಯಯನವೊಂದು ರಟ್ಟು ಮಾಡಿದೆ. ತಲಾಖ್ ತಲಾಖ್ ತಲಾಖ್ ಅಂತ ಮೂರು ಸಲ ಹೇಳಲು ತಗುಲುವ ಸಮಯದಲ್ಲಿ ಮೂರು ವಿಚ್ಛೇದನಗಳು ಆಗುತ್ತಿರುವ ಕಾಲವಿದು. ತಾಳಿ ಕಟ್ಟಿದವನು ಬಾಳಿಯಾನೆ ಎಂಬುದು ಈಗ ಕೋಟಿ ರೂಪಾಯಿ ಪ್ರಶ್ನೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಹಿರಿಯರ ಮಾತನ್ನು ಈಗಿನ ಜನಾಂಗ ‘ಲಿವಿಂಗ್ ಟುಗೆದರ್’ ಎಂದು ಅರ್ಥಮಾಡಿಕೊಳ್ಳತೊಡಗಿದೆ. ಈ ಬಂಧದಲ್ಲಿ ಕಟ್ಟಿಕೊಂಡವಳೂ ಇರೋತನಕ. ಲಿವಿಂಗ್ ಟುಗೆದರ್ ಅನ್ನು ಕನ್ನಡದಲ್ಲಿ ‘ಸಹವಾಸ’ ಎಂದು ಕರೆದರೆ ಅರ್ಥಪೂರ್ಣವಾಗಿರುತ್ತದೆ ಎಂಬುದು ಮಿಸ್ ಸೋಸಿಲಿಯ ಸಲಹೆ. ‘ಸಹವಾಸ’ ಮಾಡಿ ಸನ್ಯಾಸಿಗಳು ಕೆಡಬಹುದೆ ಹೊರತು ಸಂಸಾರಿಗಳಲ್ಲ ಎಂಬ ಸಮರ್ಥನೆಯೂ ಆಕೆಯದೆ. ಗಂಡ/ಹೆಂಡತಿ ಸಹವಾಸ ಸಾಕಪ್ಪಾ ಸಾಕು ಅಂತನಿಸಿದವರಿಗೆ ಈ ‘ಸಹವಾಸ’ ಸೂಕ್ತ ಆಯ್ಕೆ.
*
ಹೊಚ್ಚ ಹೊಸ ನೀತಿಪಾಠ: ಅಣ್ಣ ತಮ್ಮ ಯಂಕ ತಿಮ್ಮ, ಯಾರಿಗೂ ಕೊಡದಿರಿ ನಿಮ್ಮ ಸಿಮ್ಮ. ತನ್ನ ಮೊಬೈಲ್ ಸಿಮ್ಮನ್ನು ಸಬೀಲ್‌ಗೆ ಕೊಟ್ಟ ತಪ್ಪಿಗೆ ಹನೀಫ್ ಈಗ ಆಸ್ಟ್ರೇಲಿಯಾದಲ್ಲಿ ಕೊಳೆಯುತ್ತಿಲ್ಲವೆ? ಮೊನ್ನೆ ಅಲ್ಲಿ ಹನೀಫ್ ಪರ ಪ್ರತಿಭಟನೆಗಿಳಿದ ಜನರ ಕೈಯಲ್ಲಿದ್ದ ಫಲಕದಲ್ಲಿ ಹೀಗೆ ಬರೆದಿತ್ತು: ‘ನಾನೂ ಯಾರಿಗೋ ಸಿಮ್ ಕೊಟ್ಟಿದ್ದೇನೆ, ನನ್ನನ್ನೂ ಬಂಧಿಸಿ. ಕಥೆ ಹೀಗಿರುವುದರಿಂದಲೇ ಯಾರ್‍ಯಾರಿಗೋ ಸಿಮ್ ದಾನ ಮಾಡಿದ ಸಿಮ್ಮಳೀಯರಿಗೆಲ್ಲ ಈಗ ಆ ತಪ್ಪು ಸಿಮ್ಮ ಸ್ವಪ್ನವಾಗಿ ಕಾಡುತ್ತಿದೆಯಂತೆ.
*
ತಾಜ್ ಮಹಲಿನ ಮಿನಾರ್ ವಾಲುತ್ತಿದೆಯಂತೆ. ವಾಹ್ ತಾಜ್ ಅಂತ ಹೇಳುತ್ತಿದ್ದವರು ಇನ್ನು ಮುಂದೆ ‘ವಾರೆ’ ವಾಹ್ ತಾಜ್ ಅನ್ನಬೇಕೇನೋ!
*
ತಾಜ್ ಮಹಲನ್ನು ವಿಶ್ವದ ಹೊಸ ಅದ್ಭುತಗಳ ಪಟ್ಟಿಗೆ ಸೇರಿಸಲು ಎಸ್ಸೆಮ್ಮೆಸ್ ಮಾಡಿ ಎಂಬ ಕೂಗು ಎಲ್ಲೆಡೆ ಕೇಳುತ್ತಿದೆ. ರಾಷ್ಟ್ರಪತಿ ಚುನಾವಣೆಗಿಂತ ಈ ಚುನಾವಣೆಯೇ ಹೆಚ್ಚು ಬಿಸಿ ಉಂಟುಮಾಡಿದೆ. ಜನರಿಂದ ೩ ರೂಪಾಯಿಗೊಂದು ಎಸ್ಸೆಮ್ಮೆಸ್ ಮಾಡಿಸಿ ಮೊಬೈಲ್ ನೆಟ್‌ವರ್ಕ್ ಕಂಪನಿಗಳ ಜೇಬು ತುಂಬಿಸುವ ಹುನ್ನಾರವಿದು ಅಂತ ಕೆಲವರು ಆಕ್ಷೇಪ. ಜನಸಾಮಾನ್ಯರು ಅದ್ಭುತಗಳನ್ನು ಆರಿಸುವುದು ಹಾಸ್ಯಾಸ್ಪದವೇ. ಯಾಕೆಂದರೆ ಎಸ್ಸೆಮ್ಮೆಸ್ ಮಾಡುವ ನಾವು ಸ್ಪರ್ಧೆಯಲ್ಲಿರುವ ಉಳಿದ ಅದ್ಭುತಗಳನ್ನು ನೋಡೇ ಇಲ್ಲ. ಅಷ್ಟೇಕೆ, ನಮ್ಮಲ್ಲಿ ತಾಜ್ ಮಹಲನ್ನು ನೋಡಿದವರು ಎಷ್ಟು ಸಾವಿರ ಜನ? ಅದೇ ವೇಳೆ, ‘ಎಂಥೆಂಥ ಭ್ರಷ್ಟ, ಕೊಳಕು ರಾಜಕಾರಣಿಗಳಿಗೆಲ್ಲಾ ಎಷ್ಟೊಂದ್ ಸಲ ವೋಟು ಹಾಕಿದೀವಂತೆ, ಪ್ರೇಮದ ಭವ್ಯ ಸಂಕೇತ ತಾಜ್‌ಗೆ ಒಂದ್ಸಲ ವೋಟು ಹಾಕಿದರೇನು ಗಂಟು ಹೋಗುತ್ತೆ?’ ಅಂತ ವಾರಪತ್ರಿಕೆಯೊಂದರಲ್ಲಿ ಓದುಗನೊಬ್ಬ ಕೇಳಿದ ಪ್ರಶ್ನೆಯೂ ಚಿಂತನಾರ್ಹವೆ.
*
‘ಮೊದಲನೇ ಆಪರೇಷನ್ ಅಂತ ಏಕೆ ಹೆದ್ರಿಕೋತಿದ್ದೀರಿ? ನನಗೂ ಇದು ಮೊದಲನೇ ಆಪರೇಷನ್ನು, ನಾನು ಧೈರ್ಯವಾಗಿಲ್ಲವೆ?’ ಅಂತ ರೋಗಿಗೆ ಹೇಳಿದ ವೈದ್ಯನ ಜೋಕು ನೀವು ಕೇಳಿರುತ್ತೀರಿ. ಮೊನ್ನೆ ಚೆನ್ನೈನ ವೈದ್ಯ ದಂಪತಿಗಳು ಇಂಥದೇ ಪ್ರಾಕ್ಟಿಕಲ್ ಜೋಕು ಮಾಡಿದರು. ಎಸ್ಸೆಸ್ಸೆಲ್ಸಿ ಓದುತ್ತಿರುವ ತಮ್ಮ ಮಗನಿಂದ ಸಿಸೇರಿಯನ್ ಆಪರೇಷನ್ ಮಾಡಿಸಿ, ಗಿನ್ನೆಸ್ ರೆಕಾರ್ಡ್ ಮಾಡಲು ಹೋದ ಇವರೀಗ ವಿವಾದಕ್ಕೆ ಸಿಲುಕಿದ್ದಾರೆ. ಅಂದಹಾಗೆ, ತಮ್ಮ ಹದಿನೆಂಟು ದಾಟದ ಮಕ್ಕಳಿಗೆ ಕಾರ್ ಡ್ರೈವಿಂಗ್ ಕಲಿಸಿ ಹೆಮ್ಮೆ ಪಡುವ ಪೋಷಕರು ಮಾಡುತ್ತಿರುವ ಅಪರಾಧ ಇದಕ್ಕಿಂತ ಕಡಿಮೆ ಏನಲ್ಲ.
*
ಕಷ್ಟಕ್ಕೆ ಸಿಲುಕಿರುವ ವೈದ್ಯರು ಅವರು ಮಾತ್ರ ಅಲ್ಲ. ಅತ್ತ ಲಂಡನ್‌ನಲ್ಲಿ ನಡೆದ ಬಾಂಬ್ ದಾಳಿಗಳಿಗೂ ಬೆಂಗಳೂರಿನ ಕೆಲವು ವೈದ್ಯರಿಗೂ ನಂಟಿರುವ ವಿಷಯ ಎಲ್ಲೆಡೆ ಅಲ್ಲೋಲಕಲ್ಲೋಲ ಉಂಟುಮಾಡಿದೆ. ‘ಗುಣ ಮಾಡುವವರೇ ಹೆಣ ಹಾಕುತ್ತಾರೆ’ (ದೋಸ್ ಹು ಕ್ಯೂರ್ ಯು, ವಿಲ್ ಕಿಲ್ ಯು) ಎಂಬ ಅಲ್‌ಖೈದಾದ ಇತ್ತೀಚಿನ ಸಂದೇಶವೊಂದರಲ್ಲಿರುವ ಸಾಲು ಪೊಲೀಸರಿಗೆ ಇದೀಗ ಅರ್ಥವಾಗಿದೆಯಂತೆ.
*
ಮೊನ್ನೆ ಮೊನ್ನೆ ‘ಡೈಹಾರ್ಡ್ ಫೋರ್’ ಬಂತು, ಇದೀಗ ‘ಹ್ಯಾರಿ ಪಾಟರ್’ ೫ನೇ ಭಾಗ ಬಂದಿದೆ. ‘ಗಾಡ್ ಫಾದರ್’ನಿಂದ ಹಿಡಿದು ‘ಲಾರ್ಡ್ ಆಫ್ ದಿ ರಿಂಗ್’ವರೆಗೆ ಹಾಲಿವುಡ್ಡಿನವರು ಸರಣಿ ಚಿತ್ರಗಳನ್ನು ತಯಾರಿಸುತ್ತಲೇ ಇದ್ದಾರೆ. ಆದರೆ ನಾವೇಕೆ ಎರಡು ಪಾರ್ಟುಗಳಲ್ಲೇ ಸುಸ್ತಾಗುತ್ತೇವೆ? ಕನ್ನಡದಲ್ಲಿ ಇದುವರೆಗೆ ಸಾಂಗ್ಲಿಯಾನ ಚಿತ್ರವೊಂದು ಮಾತ್ರ ಮೂರನೇ ಭಾಗ ಬಂದಿದೆ. ಹಿಂದಿಯಲ್ಲೂ ಅಷ್ಟೇ, ಮುನ್ನಾಭಾಯಿ ಮೂರನೇ ಭಾಗ ಇನ್ನೂ ಬರಬೇಕಷ್ಟೆ. ಥೇಟರಿಗೆ ಹೋಗುವುದು ಮರೆತೇ ಹೋಗಿ, ಬಾಡಿಗೆ ತಂದ ಡಿವಿಡಿಯಲ್ಲಿರುವ ಒಂದೇ ಸಿನಿಮಾವನ್ನು ಮೂರು ನಾಲ್ಕು ಭಾಗಗಳಲ್ಲಿ ನೋಡಿ ಮುಗಿಸುವ ಈ ಧಾವಂತದ ಕಾಲದಲ್ಲೂ ಭಾಗ ೪, ಭಾಗ ೫ ನಿರ್ಮಿಸುವ ಹಾಲಿವುಡ್ ಎಂಬ ‘ಭಾಗ’ಮಂಡಲದಲ್ಲಿರುವವರ ಉತ್ಸಾಹಿಗಳಿಗೆ ಶರಣು.
*
ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ವಯಸ್ಸಾಗ್ತಾ ಆಗ್ತಾ ಜನ ಜೋಕಿಗೆ ನಗೋದು ಕಡಿಮೆ ಆಗುತ್ತಂತೆ. ಕಾರಣ ಹೀಗಿರಬಹುದು. ಒಂದು- ಅಷ್ಟು ವರ್ಷದಿಂದ ಕೇಳ್ತಾ ಬಂದಿರುವುದರಿಂದ ಈಗ ಕೇಳುವ ಬಹಳಷ್ಟು ಜೋಕು ಹಳೆಯವೇ ಆಗಿರುತ್ತವೆ. ಹೇಗೆ ನಗೋದು? ಇನ್ನೊಂದು ಕಾರಣ: ನಿತ್ಯ ನೂತನವಾದ ಪೋಲಿ ಜೋಕುಗಳನ್ನು ಯಾರೂ ಅವರಿಗೆ ಹೇಳುವಂತಿಲ್ಲ. ಹೇಳಿದ್ರೂ ನಗುವಂತಿಲ್ಲ, ವಯಸ್ಸಿಗಾದ್ರೂ ಮರ್ಯಾದೆ ಬೇಡವೆ ಅನ್ನೋದು ಸೋಸಿಲಿಯ ಅಭಿಪ್ರಾಯ.
*
ಮೇವು ಹಗರಣದಲ್ಲಿ ಲಾಲು ಎಸಗಿದ್ದಾರೆನ್ನಲಾದ ಅಕ್ರಮಗಳನ್ನು ‘ಗ್ರಾಸ್’ ಇರೆಗುಲ್ಯಾರಿಟಿ ಅನ್ನಬಹುದು.
*
ಕಾರ್ಪೊರೇಟ್ ರಂಗದಲ್ಲೀಗ ಒಂದೇ ಗೆಲುವಿನ ಸೂತ್ರ. ನಿಮಗೆ ಪ್ರತಿಸ್ಪರ್ಧಿ ಹುಟ್ಟಿದಾಗ ಒಂದೋ ಓವರ್‌ಟೇಕ್ ಮಾಡಿ, ಆಗದಿದ್ದರೆ ಟೇಕ್‌ಓವರ್ ಮಾಡಿ!
*
ಐಸಿಸಿ ಹೊಸದಾಗಿ ರೂಪಿಸಿರುವ ನಿಯಮದ ಪ್ರಕಾರ ಬೌಲರ್ ನೋಬಾಲ್ ಮಾಡಿದರೆ ಮುಂದಿನ ಚೆಂಡಿನಲ್ಲಿ ಬ್ಯಾಟ್ಸ್‌ಮನ್ ಔಟಾದರೂ ಔಟಿಲ್ಲವಂತೆ! ಅಂದರೆ ಫ್ರೀ ಹಿಟ್. ಅದಕ್ಕಿಂತ ಬೌಲರನ್ನೇ ನಿಲ್ಲಿಸಿ ಹಿಟ್ ಮಾಡಿದ್ದರೂ ವಾಸಿಯಾಗಿತ್ತು. ಕ್ಷೇತ್ರ ರಕ್ಷಣೆ ನಿಯಮಗಳು, ಪವರ್ ಪ್ಲೇ, ಟ್ವೆಂಟಿ ಟ್ವೆಂಟಿ, ಈಗ ಇದು. ‘ದಿನದಿಂದ ದಿನಕ್ಕೆ ಕ್ರಿಕೆಟ್ ಬ್ಯಾಟ್ಸಮನ್‌ಗಳ ಆಟವಾಗುತ್ತಿದೆ, ಬೌಲರುಗಳಿಗೆ ಬಂದದ್ದಕ್ಕೆ ಥ್ಯಾಂಕ್ಸ್ ರೀ ಅಂತ ಹೇಳಬೇಕಾದ ಪರಿಸ್ಥಿತಿ ಬಂದಿದೆ’ ಅಂತ ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಡೊನಾಲ್ಡ್ ಒಮ್ಮೆ ಕಾಮೆಂಟ್ರಿ ಮಾಡುತ್ತಾ ಹೇಳಿದ್ದರು. ಶೇಕಡಾ ನೂರರಷ್ಟು ಸತ್ಯ ಅದು.
*
ಛಾಪಾ ತೆಲಗಿ ಈಗ ಪಾಪ ತೆಲಗಿ ಅನ್ನೋ ಥರ ಆಗಿದ್ದಾನೆ. ೧೩ ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ ಜತೆಗೆ ದಾಖಲೆಯ ೨೫೧ ಕೋಟಿ ರೂಪಾಯಿ ದಂಡವನ್ನೂ ಹಾಕಿದೆ. ‘ನನ್ನ ಹತ್ರ ಅಂತೂ ಒಂದು ಸಾವ್ರನೂ ಇಲ್ಲ’ ಅಂತ ತೆಲಗಿ ಬಾಯಿಬಿಟ್ಟು ಹೇಳಿದ್ದಾನೆ. ‘ಕೋಟಿ ಕೋಟಿ ದಂಡ, ಕಟ್ಟೋ ಯೋಚನೇನೂ ದಂಡ; ಛಾಪ ಕೂಪದ ತೆಲಗಿ, ಸುಮ್ಮನೆ ಜೈಲಲ್ಲಿ ಮಲಗಿ’ ಅಂತ ಅವನಿಗೆ ಸಲಹೆ ಕೊಟ್ಟಿದ್ದು ನಮ್ಮ ಮಿಸ್ ಸೋಸಿಲಿ.
*
ಅಂದಹಾಗೆ, ತೆಲಗಿ ನ್ಯಾಯಾಧೀಶರಿಗೆ ನ್ಯಾಯದೇವತೆಯ ಬೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಾನಂತೆ. ಅದೂ ನಕಲೀನೇ ಇರಬೇಕು ಅನ್ನೋದು ನಿಜವಾಗಲೂ ಸಿನಿಕತೆ ಆಗುತ್ತೆ!
*
ಕಳೆದೊಂದು ವರ್ಷದಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಲ್ಲಿ ಬಹಳಷ್ಟರ ನಿರ್ಮಾಪಕರು ರಿಯಲ್ ಎಸ್ಟೇಟ್ ವ್ಯವಹಾರದವರಂತೆ. ರೀಲು ಮತ್ತು ರಿಯಲ್ಲು ಒಂದೇ ಆದ ಅಪರೂಪದ ಪ್ರಸಂಗ ಇದಲ್ಲವೆ?!
*
ತಾನು ಭಾರತ ತಂಡದ ಕೋಚ್ ಆಗಿ ಬರುವುದಿಲ್ಲ ಎಂದು ಘೋಷಿಸಿ ಗ್ರಹಾಂ ಫೋರ್ಡ್ ಬಿಸಿಸಿಐಗೆ ಮುಜುಗರ ತಂದಿತ್ತಿದ್ದಾರೆ. ಮಿಸ್ ಸೋಸಿಲಿ ಈ ಸುದ್ದಿಗೆ ಶೀರ್ಷಿಕೆ ಕೊಟ್ಟರೆ ಅದು ಹೀಗೆ: ಒಲ್ಲೆನೆಂದ ಫೋರ್ಡು; ಕಂಗಾಲಾದ ಬೋರ್ಡು ಅಥವಾ ಭಾರತಕ್ಕೆ ಸಿಗದ ಕೋಚು; ಬಿಸಿಸಿಐಗೆ ಪೇಚು. ಆದರೆ ಆಟಗಾರರರಿಗೆ ಇದು ಸಂತಸಕರ ಸುದ್ದಿಯೇ. ಯಾಕೆಂದರೆ
ಇದ್ದಿದ್ದರೆ ಒಬ್ಬ ವಿದೇಶದಿಂದ ಬಂದ ಕೋಚು
ಪಾಲಿಸಬೇಕಿತ್ತು ಅವನಪ್ಪಣೆ ತಪ್ಪದೆ ಚಾಚೂ
ಅದೇ ಈಗ ನೋಡಿ ಬರೀ ತಿನ್ನು, ಕುಡಿ, ಪಾಚು
ನಮ್ಮ ಕ್ರಿಕೆಟ್ ರೈಲೀಗ ಸ್ಲೀಪರ್ ಕೋಚು! ಎಂಬ ಹನಿಗವನವೂ ಸೋಸಿಲಿಯದೆ.
*
ಪುಸ್ತಕಗಳಿಗೀಗ ವಿವಾದದ ಸಮಯ. ‘ಆನು ದೇವಾ ಹೊರಗಣವನು’ ಕೃತಿ ಕುರಿತ ಚರ್ಚೆ ಬಿಸಿ ಏರಿ ಸ್ವಾಮೀಜಿಯೊಬ್ಬರು ಸಾಹಿತಿಯೊಬ್ಬರಿಗೆ ಏಕ‘ವಚನ’ದಲ್ಲಿ ಬೈದು, ಬೆನ್ನಿಗೆ ಗುದ್ದಿದ ಸುದ್ದಿ ಓದಿರುವಿರಲ್ಲ? ಯಾಕೆ ಹೊಡಿತೀರಿ ‘ಸ್ವಾಮಿ’ ಅಂತ ‘ನೊಂದ’ ಸಾಹಿತಿಗಳು ಕೇಸು ಹಾಕಲು ಮುಂದಾಗಿದ್ದಾರಂತೆ. ಹಾಡುವ ಸ್ವಾಮಿ ಗೊತ್ತಿತ್ತು, ಈಜುವ ಸ್ವಾಮಿ ಗೊತ್ತಿತ್ತು, ಹೊಡೆಯುವ ಸ್ವಾಮಿ ಈಗ ಗೊತ್ತಾಯ್ತು.
*
ಗೀರ್ ಅರಣ್ಯದಲ್ಲಿ ಸಿಂಹಗಳು ಸಾಯುತ್ತಿರುವ ಆತಂಕಕಾರಿ ಸುದ್ದಿಗಳು ನಿಯಮಿತವಾಗಿ ಬರುತ್ತಿವೆಯಾದರೂ, ಕನ್ನಡ ನಾಡಿನಲ್ಲಿ ಸಿಂಹಗಳ ಸಂಖ್ಯೆ ಹೆಚ್ಚುತ್ತಿರುವಂತಿದೆ. ನಾನು ಸಿಂಹದ ಮರಿ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಘರ್ಜಿಸಿದ್ದಾರೆ. ಹಾಗಾದರೆ ಸಿಂಹದ ಮರಿ ಎಂಬ ಸಿನಿಮಾ ಮಾಡಿದ ಶಿವರಾಜ್‌ಕುಮಾರ್ ಗತಿ ಏನು? ಅವರಿನ್ನು ಸಿನ್ಮಾದ ಮರಿಯೇ?!
*
ಇದು ಐಕ್ಯತಾ ಯುಗ. ‘ಒಂದಾಗಿ’ ಬಾಳು ಇಂದಿನ ಬಿಸಿನೆಸ್ ಮಂತ್ರ. ಜೆಟ್‌ನಲ್ಲಿ ಸಹಾರಾ, ಕಿಂಗ್‌ಫಿಶರ್‌ನಲ್ಲಿ ಏರ್‌ಡೆಕ್ಕನ್ ಹೀಗೆ ಒಂದು ಕಂಪನಿ ಮತ್ತೊಂದರಲ್ಲಿ ವಿಲೀನಗೊಳ್ಳುವ ಸುದ್ದಿಗಳು ಬರುತ್ತಲೇ ಇವೆ. ಭಾರತದಲ್ಲಿ ಈ ವರ್ಷ ನಡೆದ ಇಂಥ ಟೇಕೋವರ್‌ಗಳಲ್ಲಿ ಅತ್ಯಂತ ದೊಡ್ಡದು ಅಮಿತಾಭ್ ಬಚ್ಚನ್, ಐಶ್ವರ್ಯಾ ರೈಯನ್ನು ಸೊಸೆ ಮಾಡಿಕೊಂಡದ್ದು. ಈಗ ಅಭಿ-ಅಮಿತಾಭ್-ಐಶ್‌ರ ಈ ‘ಕಂಪನಿ’ಯ ವಾರ್ಷಿಕ ವಹಿವಾಟು ೨೫೦ ಕೋಟಿ ರೂಪಾಯಿಗೂ ಹೆಚ್ಚಂತೆ!
*
ಸಿನಿಮಾ ನಟರು ತಾವು ಕೃಷಿಕರು ಅಂತ ಹೇಳಿಕೊಂಡಿದ್ದು ಈ ವಾರದ ಜೋಕು. ಇದನ್ನು ಕೇಳಿ ದೇಶದ ರೈತರು ಆತ್ಮಹತ್ಯೆ ಮಾಡಿಕೊಳ್ಳಬಹುದು. ಮಿಸ್ ಸೋಸಿಲಿ ಈ ಕುರಿತು ಬರೆದಿರುವ ಹನಿಗವನ ನೋಡಿ:
ಅಮಿತಾಭ್ ಅಂತಾನೆ ನಾನು ರೈತ
ಅಮೀರ್‌ಖಾನ್ ಅಂತಾನೆ ನಾನೂ ರೈತ
ರೈತರಾಗಿಲ್ಲ ಇಬ್ಬರೂ ಸಿನಿಮಾದಲ್ಲಿ ಸೈತ
*
ಸುದ್ದಿ ಇಂದು ರಂಜನೆ ಕೂಡ. ಸುದ್ದಿಯಷ್ಟೇ ಟಿವಿಯಲ್ಲಿ ಅದನ್ನು ಓದುವಾಕೆಯ ಸೌಂದರ್ಯವೂ ಇಂದು ಚರ್ಚೆಯ ವಿಷಯ. ಹಾಗೇ ಆಕೆ ಮಾಡುವ ತಪ್ಪುಗಳೂ ರಂಜನೀಯವಾಗಿರುತ್ತವೆ. ಕೆಲವು ದಿನಗಳ ಹಿಂದೆ ಚಾನೆಲ್‌ವೊಂದರಲ್ಲಿ ಸುದ್ದಿ ಓದುವಾಕೆ ‘ರಸ್ತೆ ಅಪಘಾತದಲ್ಲಿ ಸಚಿವರು ಪರಾರಿಯಾಗಿದ್ದಾರೆ’(ಪಾರಾಗಿದ್ದಿರಬೇಕು ಪಾಪ) ಎಂದು ಹೇಳಿದ ನಂತರ ಸಾರಿ ಗೀರಿ ಕೇಳಲು ಹೋಗಲಿಲ್ಲ. ತನ್ನ ತಪ್ಪಿನ ಅರಿವಾಗಿ ತನಗೇ ನಗು ಬಂತೇನೋ, ಚೆಂದವಾಗಿ ನಕ್ಕುಬಿಟ್ಟಳು. ನೋಡುಗರು ಪ್ರಸನ್ನರಾದರು.
*
ಸುನೀತಾ ಧರೆಗಿಳಿದಿದ್ದಾರೆ. ಎಲ್ಲರಿಗೂ ಸಂತಸವಾಗಿದೆ. ಆದರೆ ಆಕೆಯ ವಿರೋಧಿಗಳಿಗೆ? ಅಷ್ಟು ದಿನದಿಂದ ಬಾಹ್ಯಾಕಾಶದಲ್ಲಿ ನಡೆದಾಡಿದ ಅವಳಿಗೀಗ ನೆಲದ ಮೇಲೆ ಕಾಲೇ ನಿಲ್ತಿಲ್ಲ ಅಂತ ಅವರು ಆಡಿಕೊಳ್ಳಬಹುದು. ಅಥವಾ ಮೇಲೇರಿದವರು ಒಂದು ದಿನ ಕೆಳಗಿಳಿಯಲೇಬೇಕು ಅಂತ ವೇದಾಂತದ ಮಾತಾಡಿ ಸಮಾಧಾನ ಪಟ್ಟುಕೊಳ್ಳಬಹುದು. ಬರೀ ವೇದಾಂತವಲ್ಲ, ಗುರುತ್ವಾಕರ್ಷಣೆಯ ಸಿದ್ಧಾಂತವೂ ಅದನ್ನೇ ಅಲ್ಲವೇ ಹೇಳೋದು?
*
ಜನಪ್ರಿಯ ಹಾಡಿನ ಆರಂಭದಲ್ಲಿ ಎಲ್ಲಾದರು ಒಂದೆಡೆ ತನ್ನ ಹೆಸರನ್ನು ಸೇರಿಸಿ ಕೇಳಿಸುವುದು ಎಲ್ಲ ಎಫ್ ಎಂ ರೇಡಿಯೋಗಳ ಹಳೆಯ ಚಾಳಿ. ‘ಪಲ್ಲಕ್ಕಿ’ ಸಿನಿಮಾದ ‘ಕಣ್ಣಲ್ಲು ನೀನೇನೆ ಓಹೋ, ಕುಂತಲ್ಲು ನೀನೇನೇ ಓಹೋ’ ಎಂಬ ಗೀತೆಯ ಓಹೋ ಎಂಬಲ್ಲೆಲ್ಲ ‘ಮಿರ್ಚಿ’ ಅಂತ ಸೇರಿಸಿ ಕೇಳಿಸಿದ್ದು ರೇಡಿಯೋ ಮಿರ್ಚಿಯವರು. ಅಲ್ಲಾ ಮಾರಾಯ್ರೆ ಕಣ್ಣಲ್ಲಿ ಮಿರ್ಚಿ ಇಟ್ಟರೆ ಹಾಹಾ‘ಖಾರ’ ಆಗೋಲ್ವೆ? ಹಾಗಂತ ಕೇಳುತ್ತಿರುವುದು ಮಿಸ್ ಸೋಸಿಲಿ.
*
ಮಹಾನಗರಗಳ ಮಹಾಜನತೆಗೆ ಈಗ ಬೇಡದಿದ್ದರೂ ಸುಮ್ಮನೆ ವಸ್ತುಗಳನ್ನು ಖರೀದಿಸುವ ಚಟ. ಅಂಥ ಮನೋಭಾವಕ್ಕ್ಕೆ ‘ಶಾಪಿಂಗ್ ಕಾಂಪ್ಲೆಕ್ಸ್’ ಎಂದು ಕರೆಯಬಹುದು ಎಂಬುದು ಹಳೆಯದು. ಅದೇ ರೀತಿ, ಈ ಚಟಕ್ಕೆ ಬಿದ್ದು ಹೊರಬರಲಾರದೆ ಒದ್ದಾಡುತ್ತಿರುವವರನ್ನು ಶಾಪ್‌ಗ್ರಸ್ತರು ಎಂದು ಕರೆಯಬಹುದು ಎಂಬುದು ಹೊಸದು.
*
ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಪೊಲೀಸರು ಏನೆಲ್ಲಾ ನಿಯಮಗಳನ್ನು ಜಾರಿಗೆ ತಂದರೂ ಫಾಲೋ ಆಗುತ್ತಿರುವ ಒಂದೇ ನಿಯಮ ಯಾವುದು ಗೊತ್ತೇ? -ನೀನು ನುಗ್ತಿಯೋ ಇಲ್ಲಾ ನಾನ್ ನುಗ್ಲೋ?!
*
ಮೂರ್ತಿ ಅಂದರೆ ವಿವಾದ ಎಂಬಂತಾಗಿದೆ. ಗಾಂಧಿ, ಅಂಬೇಡ್ಕರ್‌ರಂಥ ದೊಡ್ಡವರ ಮೂರ್ತಿಗಳಿಗೆ ಅವಮಾನ ಮಾಡೋದು ಆಗಾಗ ವಿವಾದವಾಗುತ್ತಲೇ ಇರುತ್ತದೆ. ಮೊನ್ನೆ ಮೊನ್ನೆ ಇನ್ಫೋಸಿಸ್ ನಾರಾಯಣಮೂರ್ತಿ ಏನೋ ಹೇಳಿ ದೊಡ್ಡ ವಿವಾದವಾಗಿತ್ತು. ಈಗ ಸಾಹಿತಿ ಅನಂತಮೂರ್ತಿ ಸರದಿ. ಮೂರ್ತಿ ಚಿಕ್ಕದಾದರೂ ‘ಕೀರ್ತಿ’ ದೊಡ್ಡದು(ಪೂರ್ತಿ ದೊಡ್ಡದು) ಯಾಕೆಂಬುದು ಸಂಶೋಧನೆಗೆ ಯೋಗ್ಯ ವಿಷಯ. ಸದಾ ವಿವಾದ ಮಾಡುತ್ತಾ ಇರುವ ಸಂಶೋಧಕ ಚಿದಾನಂದ‘ಮೂರ್ತಿ’ಯವರೇ ಅದನ್ನು ಕೈಗೆತ್ತಿಕೊಂಡರೆ ಇನ್ನೂ ಒಳಿತು!
*
ಅವರು ಕಾದಂಬರಿಕಾರರೇ ಅಲ್ಲ ಎಂದು ಅನಂತಮೂರ್ತಿ ಆರೋಪಿಸಿದ್ದರೂ ಭೈರಪ್ಪ ಎಲ್ಲೂ ಪ್ರತಿಕ್ರಿಯಿಸಲೇ ಇಲ್ಲ. ಎಷ್ಟ್ ಬೈತೀರಾ ಬೈರಪ್ಪ ಅಂತ ಅವರು ಮೌನವಾಗಿದ್ದುಬಿಟ್ಟಿದ್ದಾರೆ. ಆದರೂ ವಿವಾದ ಇಷ್ಟೊಂದು ಬಿಸಿಯಾಗಿದ್ದು ನೋಡಿದ ಮೇಲೆ ಅನಂತಮೂರ್ತಿಯವರಿಗೂ ಮೌನದ ಮೌಲ್ಯ ಅರಿವಾಗಿ ತಾವೂ ಮೌನವ್ರತ ಕೈಗೊಂಡಿದ್ದಾರೆ. ಆದರೆ ಕನ್ನಡದ ಸೂಕ್ಷ್ಮ ಮನಸ್ಸುಗಳಿಗೆ ಭೈರಪ್ಪನವರು ಬರೆದದ್ದು ಟ್ರಾಶ್ ಆದರೆ ಎಷ್ಟು ನಷ್ಟವೋ, ಅನಂತಮೂರ್ತಿಯವರ ಅದ್ಭುತ ಭಾಷಣಗಳು ಇನ್ನು ಮುಂದೆ ಮಿಸ್ ಆದರೆ ಅದೂ ಅಷ್ಟೇ ನಷ್ಟ. ಈ ಕಾಲದ ಇಬ್ಬರು ಪ್ರಮುಖ ಲೇಖಕರ ಇಂಥ ಒಣ ಠೇಂಕಾರ ಈಗಾಗಲೇ ಕ್ಷೀಣವಾಗಿರುವ ಗಂಭೀರ ಓದುಗರ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಅಷ್ಟೆ. ಗುಂಪುಗಾರಿಕೆಗೆ ಸಾಕಷ್ಟು ಓದುಗರು ಇಲ್ಲಿಲ್ಲವೆಂಬ ಕಟು ಸತ್ಯ ಸಾಹಿತಿಗಳಿಗೆ ಗೊತ್ತಾಗಬೇಕು.
*
ಇಡೀ ಭಾರತದಲ್ಲಿರುವ ದರ್ಶಿನಿಗಳ ಗ್ರಾಹಕರು ಒಂದು ಸಂಘ ರಚಿಸಿಕೊಂಡರೆ ಅದನ್ನು ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಅನ್ನಬಹುದು!
*
ಪ್ರಾಣಭಯದಿಂದಾಗಿ ಹಿಟ್ಲರ್ ಮತ್ತು ಸದ್ದಾಂ ಹುಸೇನ್ ಸಭೆಗಳಿಗೆ ಬರುವಾಗ ತಮ್ಮಂತೇ ಕಾಣುವ ಒಂದಷ್ಟು ಜನರನ್ನು ಜತೆಗೆ ಒಯ್ಯುತ್ತಿದ್ದನಂತೆ. ಅನಗತ್ಯವಾಗಿ ಜನರ ಗಮನ ಸೆಳೆಯುವುದನ್ನು ತಪ್ಪಿಸಲು ನಮ್ಮ ಮಾಜಿ ಮುಖ್ಯಮಂತ್ರಿಯೊಬ್ಬರು ವಿಗ್ ತೆಗೆದಿಟ್ಟು ನೆಮ್ಮದಿಯಿಂದ ರಸ್ತೆಗಳಲ್ಲಿ ನಡೆದಾಡುತ್ತಿದ್ದರಂತೆ! ಅದೇ ರೀತಿ ಮೊನ್ನೆ ಕೋರ್ಟಿಗೆ ಬಂದ ಐವರು ಬುರ್ಖಾಧಾರಿಗಳಲ್ಲಿ ಆರೋಪಿ ಹಸೀನಾ ಪಾರ್ಕರ್ ಯಾರೆಂಬುದು ನ್ಯಾಯಾಧೀಶರಿಗೂ ತಿಳಿಯಲಿಲ್ಲ. ಕಡೆಗೆ, ನಿಜವಾದ ಹಸೀನಾ ಎದ್ದು ನಿಲ್ಲದಿದ್ದರೆ, ಬಂಧನಕ್ಕೆ ಆದೇಶಿಸುವುದಾಗಿ ಜಡ್ಜ್ ಹೆದರಿಸಬೇಕಾಯಿತು. ನಟ ಸಂಜಯ್ ದತ್ ಕೂಡ ಹಸೀನಾರಿಂದ ಪಾಠ ಕಲಿತು ಕೋರ್ಟಿಗೆ ಬುರ್ಖಾ ಧರಿಸಿ ಬಂದರೆ ಅವರನ್ನು ಬುರ್ಖಾ ದತ್ ಅನ್ನಬಹುದೇನೊ? ಅದರಿಂದ ಪತ್ರಕರ್ತೆ ಬರ್ಖಾ ದತ್‌ಗೆ ಬೇಸರವಾಗುವುದೆ?
*
ಎಲ್ಲರನ್ನೂ ಅಪ್ಪಿಕೊಳ್ಳುವ ಶಪಿರೋನ ಅಪ್ಪಿಕೋ ಚಳವಳಿ(ನೂರೆಂಟು ಮಾತು ಅಂಕಣ)ಯಿಂದ ಪ್ರೇರಿತರಾದ ಬೆಂಗಳೂರಿನ ಪಡ್ಡೆಗಳು, ಅಪ್ಪಿಕೊಳ್ಳಲು ತಮಗಿರುವ ಕಷ್ಟವನ್ನು ಈ ಹನಿಗವನದಲ್ಲಿ ಹೇಳಿದ್ದಾರೆ.
ಶಪಿರೊ ಅಮೃತಾರ ರೀತಿ ನಮಗೂ ಇಷ್ಟ ಅಪ್ಪುಗೆ
ಆದರದಕೆ ಮೊದಲು ಬೇಕು ಚೆಲುವೆಯರ ಒಪ್ಪಿಗೆ
ಅಪ್ಪಿ ತಪ್ಪಿದ ಪಾಕಿಸ್ತಾನದ ಪ್ರವಾಸೋದ್ಯಮ ಸಚಿವೆ ನೀಲೋಫರ್ ಬಕ್ತಿಯಾರ್ ಉದಾಹರಣೆ ಬಿಸಿಬಿಸಿಯಾಗೇ ಇದೆ. ಕೋಚನ್ನು ಸುಮ್ಮನೆ ಅಪ್ಪಿಕೊಂಡದ್ದಕ್ಕೆ ರಾಜೀನಾಮೆ ತೆತ್ತರು ನೀಲೋಫರ್ ರ್ಹುಡುಗಿಯನ್ನು ಶುದ್ಧ ಮನಸಿಂದ ಅಪ್ಪಿದರೂ ಲೋಕದ ಕಣ್ಣಲ್ಲಿ ನೀ ಲೋಫರ್
*
ಕ್ರಿಕೆಟಿಗ ಧೋನಿಯನ್ನು ಇತ್ತೀಚೆಗೆ ವುಮನ್ ಹ್ಯಾಂಡಲ್ ಮಾಡಲಾಯಿತು! ಕೋಲ್ಕತಾದ ಹುಡುಗಿಯೊಬ್ಬಳು ತರಬೇತಿ ಮುಗಿಸಿ ಕ್ರೀಡಾಂಗಣದಿಂದ ಹೊರಬರುತ್ತಿದ್ದ ನೀಳಕೇಶಿಗೆ ‘ಮುತ್ತಿ’ಗೆ ಹಾಕಿ ‘ತಬ್ಬಿ’ಬ್ಬುಗೊಳಿಸಿದಳು. ಜತೆಗೆ, ವಿಶ್ವಕಪ್‌ನಲ್ಲಿ ಎರಡು ಮ್ಯಾಚ್ ಸೋತಿದ್ದಕ್ಕೆ ಆಟಗಾರರ ಪೋಸ್ಟರುಗಳನ್ನು ಸುಡುತ್ತಿದ್ದ ದೇಶದ ಜನರನ್ನೂ ಆಕೆ ತಬ್ಬಿಬ್ಬುಗೊಳಿಸಿದ್ದಳು. ‘ಮಾಡಬೇಕನಿಸಿತು, ಮಾಡ್ದೆ ’ ಎಂದು ಆಕೆ ಬಿಂದಾಸ್ ಆಗಿ ಟಿವಿಯಲ್ಲಿ ಹೇಳಿದರೆ, ತನಗೇನನ್ನಿಸಿತು ಎಂದು ಧೋನಿ ಹೇಳಲಿಲ್ಲ. ಆದರೆ ಬಾಂಗ್ಲಾ ವಿರುದ್ಧದ ಮ್ಯಾಚಿನಲ್ಲಿ ಭಾರತವನ್ನು ಗೆಲ್ಲಿಸಿ ಪಂದ್ಯಪುರುಷನಾದ. ಸುಳ್ಳಲ್ಲ, ಎಲ್ಲ ವಿಜಯಗಳ ಹಿಂದೂ ಒಬ್ಬ...
*
ಎಲ್ಲರಿಗೂ ಸುದ್ದಿ ಮಾಡುವ ಬಯಕೆ. ಅದು ಜನರಿಗೆ ಅನ್ವಯಿಸಿದಷ್ಟೇ ಸುದ್ದಿ ಚಾನೆಲ್‌ಗಳಿಗೂ ಅನ್ವಯಿಸುತ್ತದೆ. ಪೀಪಲ್ ಮೇಕ್ ನ್ಯೂಸ್, ಚಾನೆಲ್ಸ್ ಬ್ರೇಕ್ ನ್ಯೂಸ್. ಮೊನ್ನೆ ವ್ಯಕ್ತಿಯೊಬ್ಬ ಪ್ರಧಾನಿ ಮನೆಯ ಬಳಿ ಆತ್ಮಹತ್ಯೆಗೆ ಯತ್ನಿಸಿದ. ಚಾನೆಲ್‌ಗಳು ದಿನವಿಡೀ ಬ್ರೇಕಿಂಗ್ ನ್ಯೂಸ್ ಎಂದು ಹೊಡೆದು ಅವನ ಪ್ರಯತ್ನವನ್ನು ಗ್ರಾಂಡ್ ಸಕ್ಸಸ್ ಮಾಡಿದವು. ಪ್ರಚಾರಕ್ಕಾಗಿ ಹಾಗೆ ಮಾಡಿದೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆ ವ್ಯಕ್ತಿ ಹೇಳಿದಾಗ ಸುದ್ದಿಗಾರರಿಗೆ ಕೊಂಚವಾದರೂ ಮೂರ್ಖರಾದೆವಲ್ಲ ಅನಿಸಲಿಲ್ಲವೆ? ಐಶ್ವರ್ಯಾ ಅಭಿಶೇಕ್ ಒಂದಾದ ಸುದ್ದಿಗೂ ಬ್ರೇಕಿಂಗ್ ನ್ಯೂಸ್ ಎಂದು ತೋರಿಸುವ ನ್ಯೂಸ್ ಚಾನೆಲ್‌ಗಳು ಸೆಲಿಬ್ರಿಟಿಗಳ ಸಂಬಂಧ ಬ್ರೇಕ್ ಆದಾಗ ಏನಂತ ತೋರಿಸುತ್ತವೊ? ಶಿಲ್ಪಾ -ಗೆರೆ ಚುಂಬನ ವಿವಾದಕ್ಕೆ ಸಂಬಂಧಿಸಿದಂತೆ ಪದೇಪದೇ ಅದನ್ನೇ ತೋರಿಸಿದ ಚಾನೆಲ್‌ಗಳನ್ನು ಸಚಿವ ದಾಸ್‌ಮುನ್ಶಿ ‘ಇದೆಂಥಾ ಬ್ರೇಕಿಂಗ್ ನ್ಯೂಸ್? ಮನಗಳನ್ನು ಬ್ರೇಕ್ ಮಾಡುವುದೆ?’ ಅಂತ ಕೇಳಿದ್ದು ಅತ್ಯಂತ ಸೂಕ್ತವಾಗಿತ್ತು.
*
ನಿಜಕ್ಕೂ ಸಖತ್ ಹಾಟ್ ಆದ ಸುದ್ದಿಯೊಂದು ಬ್ಯಾಂಕಾಕ್‌ನಿಂದ ಬಂದಿದೆ. ಮನುಷ್ಯನ ಐಷಾರಾಮ, ದುರಾಸೆಗಳು ಹೀಗೇ ಮುಂದುವರಿದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಭೂಮಿಯ ತಾಪಮಾನ ೨ ಡಿಗ್ರಿಯಷ್ಟು ಏರಿ ಆಗಬಾರದ ಅನಾಹುತಗಳು ಆಗುತ್ತವೆ ಎಂದು ಗ್ಲೋಬಲ್ ವಾರ್ಮಿಂಗ್ ಬಗ್ಗೆ ಸಮ್ಮೇಳನ ನಡೆಸಿದ ವಿಜ್ಞಾನಿಗಳು ಗ್ಲೋಬಲ್ ವಾರ್ನಿಂಗ್ ನೀಡಿದ್ದಾರೆ. ಹಸಿರು ಮನೆ ಅನಿಲಗಳ ಉತ್ಪನ್ನಕ್ಕೆ ಅತಿ ಹೆಚ್ಚು ಕಾಣಿಕೆ ನೀಡುತ್ತಿರುವ ಅಮೆರಿಕದಂಥ ದೇಶಗಳು ಈ ನೋಟಿಸಿನಿಂದಾದರೂ ಎಚ್ಚೆತ್ತುಕೊಳ್ಳದಿದ್ದರೆ ಭೂಮಿ ಬಿಸಿ ಉಸಿರು ಬಿಡುವುದು ತಪ್ಪದು.
*
ನೋಡು ನಮ್ಮ ಬಾವುಟ!ಮಂದಿರ ವಿವಾದ ಕಳೆದ ವಾರ ಮತ್ತೆ ಕೇಳಿಬಂತು. ಆಕ್ಚುಯಲಿ ಅದು ಮಂದಿರಾ ವಿವಾದ. ಕ್ರಿಕೆಟ್ ಕಾಮೆಂಟರಿಕಾರ್ತಿ ಮಂದಿರಾ ಬೇಡಿ ಈ ಸಲ ಸೀರೆ ಧರಿಸಿ ವಿವಾದ ಸೃಷ್ಟಿಸಿದ್ದಾರೆ. ಪಾಪ ಆಕೆ ಬಿಕಿನಿ ತೊಟ್ಟರೂ ವಿವಾದ, ಸೀರೆ ತೊಟ್ಟರೂ ವಿವಾದ ಎಂಬ ಅನುಕಂಪವೇನೂ ಬೇಡ. ಆಕೆ ಸೀರೆಯ ಕೆಳಭಾಗದ ಮೇಲೆ ರಾಷ್ಟ್ರಧ್ವಜ ತೊಟ್ಟದ್ದು ಎಲ್ಲರ ಆಕ್ರೋಶಕ್ಕೆ ಕಾರಣ. ಸಾರಿ ಮೇಲೆ ಧ್ವಜ ತೊಟ್ಟಿದ್ದಕ್ಕೆ ಅವರಾಗಲೇ ಸಾರಿ ಹೇಳಿದ್ದರೂ ಕೆಲವರು ಮಂದಿರಾ ಮೇಲೆ ಕೇಸ್ ದಾಖಲಿಸಿದ್ದಾರೆ. ಇನ್ನೊಮ್ಮೆ ಹೀಗೆ ಮಾಡ ‘ಬೇಡಿ’ ಎಂದಿದ್ದರೆ ಸಾಕಿತ್ತು ಎಂಬುದು ಬೇಡಿ ಅಭಿಮಾನಿಗಳ ಅಭಿಪ್ರಾಯ. ಸದ್ಯ ಈ ವಿವಾದದಿಂದ ಮುಂಚಿನ ಬಿಕಿನಿ ಮತ್ತು ಹಚ್ಚೆ ವಿವಾದಗಳು ಮರೆಯಾಗುತ್ತವಲ್ಲ ಎಂಬುದೊಂದೇ ಮಂದಿರಾ ಬೇಡಿಗೆ ಸಮಾಧಾನವಂತೆ.
*
ರಾಷ್ಟ್ರಧ್ವಜ ಇತ್ತೀಚೆಗೆ ಅಪಮಾನಕ್ಕೀಡಾಗುತ್ತಿರುವುದು ಇದು ಮೊದಲ ಸಲವಲ್ಲ. ರಿಟೈರಾಗು ಎಂಬುವರ ಕಾಟಗಳೇ ಸಾಕು ಅಂತಿದ್ದ ಸಚಿನ್, ರಾಷ್ಟ್ರಧ್ವಜದ ರೂಪದ ಕೇಕ್ ಕತ್ತರಿಸಿ ವಿವಾದದಲ್ಲಿ ಸಿಕ್ಕಿಕೊಂಡರು. ಅತ್ತ ಒರಿಸ್ಸಾದಲ್ಲಿ ಸ್ವಘೋಷಿತ ದೇವತೆ ನಿರ್ಮಲಾರಂತೂ ರಾಷ್ಟ್ರಧ್ವಜವನ್ನು ಕಾಲ ಬುಡದಲ್ಲೇ ಹಾಸಿಕೊಂಡು ಕುಳಿತಿದ್ದರು. ಪ್ರತಿ ಸ್ವಾತಂತ್ರೋತ್ಸವ ದಿನದಂದೂ ಉಲ್ಟಾ ಹಾರಿಸಿ ಧ್ವಜಕ್ಕೆ ಅಪಮಾನ ಮಾಡುವುದಂತೂ ಇದ್ದದ್ದೇ ಬಿಡಿ.
*
ಮಕ್ಮಲ್ ಟೋಪಿ ಹಾಕೋದು ಬೇಡ ಎಂದು ಗೌಡರು ಗುಡುಗಿದ ಬೆನ್ನಲ್ಲೇ ಇನ್ನೊಬ್ಬರು ಟೋಪಿ ಹಾಕದಂತೆ ಸದಾ ತಾವೇ ಟೋಪಿ ಹಾಕಿಕೊಂಡು ಕುಳಿತ ರಾಜಕಾರಣಿಗಳು ನೆನಪಾದರು. ಎಂಜಿಆರ್, ವಿ ಪಿ ಸಿಂಗ್, ಫಾರೂಕ್ ಅಬ್ದುಲ್ಲಾ, ವಾಟಾಳ್ ನಾಗರಾಜ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಥರ ಗೌಡರೂ ಯಾಕೆ ಟೋಪಿ ಧರಿಸಬಾರದು? ಕಡೇ ಪಕ್ಷ ಕೃಷ್ಣರ ಥರ ಒಂದು .... ಹೋಗಲಿ ಬಿಡಿ!
*
ಎಲ್ಲೆಲ್ಲೂ ಈಗ ರಣಬಿಸಿಲು. ಅಷ್ಟಿಷ್ಟು ಮಳೆಯಾಗಿದ್ದರೂ, ಸುಡುವ ಬಿಸಿಲಿನಲ್ಲಿ ಕೆಂಡಾಮಂಡಲವಾಗಿರುವ ಬೆಂಗಳೂರಿಗರ ಬಾಯಲ್ಲಿ ಈಗ ಒಂದೇ ಕಾಮೆಂಟು: ಸಖತ್ ಹಾಟ್ ಮಗಾ!
*
ಎಲೆಕ್ಟ್ರಾನಿಕ್ ಮಾಧ್ಯಮಗಳ ‘ಇ’ ಕಾಲದಲ್ಲೂ ಪತ್ರಿಕೆಗಳನ್ನು ಜನ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಇತ್ತೀಚೆಗೆ ನಡೆದ ಎರಡು ಪ್ರಕರಣಗಳನ್ನು ನೋಡಿ. ತಮಿಳ್ನಾಡಿನಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸರ್ವೆಯಿಂದ ರೊಚ್ಚಿಗೆದ್ದ ಜನ ಮೂವರು ಜನರನ್ನ್ನು ಸುಟ್ಟು ಹಾಕಿದರು (‘ಸರ್ವೆ’ ಜನ ಸುಖಿನಾ ಭವಂತು ಎಂಬ ದೊಡ್ಡ ಗುಣ ದಾಳಿ ಮಾಡಿದವರಿಗಿರದಿದ್ದುದು ವಿಷಾದನೀಯ). ಜತೆಗೆ ಐಟಿ ಸಚಿವರು ರಾಜೀನಾಮೆ ಕೊಡಬೇಕಾಯಿತು. ಅತ್ತ ಪಂಜಾಬು, ಹರಿಯಾಣಾಗಳಲ್ಲಿ ಸಿಖ್ಖರು ಸಿಕ್ಕ ಸಿಕ್ಕವರನ್ನೆಲ್ಲಾ ಹಿಡಿದು ಬಡಿಯುತ್ತಿರುವುದಕ್ಕೂ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವಿವಾದಾಸ್ಪದ ಜಾಹೀರಾತೇ ಕಾರಣ. ವಿಷ್ಯ ಹೀಗಿರುವಾಗ ಪತ್ರಿಕೆಗಳಿಗೆ ಭವಿಷ್ಯವಿಲ್ಲ ಎನ್ನುವವರ್‍ಯಾರು?
*
ಹೆಂಗಳೆಯರ ವಸ್ತ್ರ ಸಂಹಿತೆಗೆ ಸಂಬಂಧಿಸಿದ ಕೆಲವು ತುಣುಕು ಸುದ್ದಿಗಳನ್ನು ನೋಡಿ. ಯುವರಾಜ್ ಸಿಂಗ್‌ನ ಗರ್ಲ್‌ಫ್ರೆಂಡ್ ಕಿಮ್ ಶರ್ಮ ಅಂಗಪ್ರದರ್ಶನ ಮಾಡುತ್ತಾಳೆ ಎಂಬುದು ಆ ಕ್ರಿಕೆಟಿಗನ ಅಮ್ಮನ ಪ್ರಾಬ್ಲಂ. ಎಕ್ಸ್‌ಪೋಸ್ ಮಾಡುವ ಸೊಸೆ ಬೇಡ ಎಂಬುದು ಅವರ ತಕರಾರು. ಮಧ್ಯಪ್ರದೇಶದಲ್ಲೊಬ್ಬ ತನ್ನ ೨೬ ವಯಸ್ಸಿನ ಹೆಂಡತಿಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಕೋರ್ಟಿನಲ್ಲಿ ವಿಚಾರಣೆ ನಡೆದಾಗ ಆತ ಅದಕ್ಕೆ ಕೊಟ್ಟ ಕಾರಣವೇನು ಗೊತ್ತೆ? ಆಕೆ ಸೀರೆ ಉಡುವುದನ್ನು ಬಿಟ್ಟು ಸಲ್ವಾರ್ ಕಮೀಜ್ ತೊಡುತ್ತಾಳೆ ಎಂಬುದು! ಕೋಟ್ಯಾಂತರ ಹೆಣ್ಣುಮಕ್ಕಳು ಸಲ್ವಾರ್ ಕಮೀಜ್ ತೊಡುವ ಭಾರತದಲ್ಲಿ ಇಂಥ ಹೇಳಿಕೆಗೆ ಹೇಗೆ ಪ್ರತಿಕ್ರಿಯಿಸುವುದು? ಅತ್ತ ಹಿಂದೂ ಸಂಘಟನೆಗಳಂತೂ ಕಲಾವಿದರು ರಚಿಸುವ ಚಿತ್ರಗಳಲ್ಲಿ ವಸ್ತ್ರ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಬೊಬ್ಬೆ ಹಾಕುತ್ತಿವೆ!
*
ಟ್ರಾಫಿಕ್ಕಿನಲ್ಲಿ ಸಿಕ್ಕಿಬಿದ್ದು ಕೆಂಪು ಸಿಗ್ನಲ್ಲು ಹಸಿರಾಗುವುದನ್ನೇ ಕಾಯುತ್ತಾ ಕುಳಿತಾಗ ನೆನಪಾಗುವ ಹಾಡು ಯಾವುದು?-ಯೇ ಲಾಲ್ ರಂಗ್ ಕಬ್ ಮುಝೇ ಛೋಡೇಗಾ...
*
ತಾಯಾಣೆ ಎನ್ನುತ್ತಿದ್ದೆವು, ಶಾರದಾಣೆ ಎನ್ನುತ್ತಿದ್ದೆವು- ಅಲ್ಲಿಗೆ ಮುಗಿಯುತ್ತಿತ್ತು. ಸತ್ಯ ನಿರೂಪಿಸಲು ಅಗ್ನಿಪರೀಕ್ಷೆ ಮಾಡಬೇಕಾಗಿ ಬಂದದ್ದು ಒಬ್ಬ ಸೀತೆಗೆ ಮಾತ್ರ. ಅಲ್ಲಿಂದ ಮುಂದುವರಿದು ನಾವೀಗ ಮಂಪರು ಪರೀಕ್ಷೆವರೆಗೆ ಬಂದು ನಿಂತಿದ್ದೇವೆ. ನರ್ಸ್ ಒಬ್ಬರಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಶಾಸಕ ರೇಣುಕಾಚಾರ್ಯ ಆಕೆ ಹೇಳುತ್ತಿರುವುದು ಸುಳ್ಳು, ಮಂಪರು ಪರೀಕ್ಷೆ ಮಾಡಿಸಿ ಅಂದಿದ್ದಾರೆ. ಈಗಾಗಲೇ ತೆಲಗಿ ಮಂಪರು ಪರೀಕ್ಷೆಯ ಚಿತ್ರಿಕೆಗಳನ್ನು ಟಿವಿಯಲ್ಲಿ ನೋಡಿ ನಾವು ನಕ್ಕಿದ್ದೇವೆ. ಕುಡಿದವರು ನಿಜ ಹೇಳುತ್ತಾರೆ ಎಂಬ ಮಾತಿನಿಂದಲೇ ಹೊಳೆಯಿತೇನೊ ಈ ಮಂಪರು ಪರೀಕ್ಷೆ ಐಡಿಯಾ. ವಿಪರ್‍ಯಾಸವೆಂದರೆ ಕುಡುಕರ ಪತ್ತೆಗೆ ಮಂಪರು ಪರೀಕ್ಷೆ ಉಪಯೋಗಕ್ಕೆ ಬಾರದು. ಏಕೆಂದರೆ ಅವರು ಈಗಾಗಲೇ ಮಂಪರಿನಲ್ಲಿರುತ್ತಾರಲ್ಲ!
*
ಹೆಂಗಸರಿಗೆ ಕಿರುಕುಳ ನೀಡುವ ಶಾಸಕನನ್ನು ದುಶ್ಯಾಸಕ ಎಂದು ಕರೆಯಬಹುದೆ?-ಕರೆಯಬಾರದು, ಕರೆದರೆ ಬಂದು ಬಿಟ್ಟರೆ ಎಂಬುದು ಒಂದು ಆತಂಕ!
*
ಮೊನ್ನೆ ಇಸ್ರೋ ಇಟಲಿಯ ಉಪಗ್ರಹವನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಸೇರಿಸಿದೆ. ಇಟಲಿಯ ಸೋನಿಯಾರನ್ನು ಪ್ರಧಾನಿ ಪಟ್ಟಕ್ಕೇರಿಸಲೂ ಇಸ್ರೋ ನೆರವು ಪಡೆದರೆ ಹೇಗೆ ಎಂಬ ಚಿಂತನೆ ೧೦ ಜನಪಥ್ ಹೊರಗೆ ಇದೀಗ ನಡೆಯುತ್ತಿದೆ.
*
ಎಲ್ಲರೆದುರಿಗೇ ಮುತ್ತು ಕೊಡಿಸಿಕೊಂಡಳಲ್ಲ ಶಿಲ್ಪಾ, ಇರಬಾರದೆ ಅವಳಿಗೆ ನಾಚಿಕೆ ಸ್ವಲ್ಪ ? ಎಂದು ಕೆಲವು ಮಡಿವಂತರು ಕೇಳುತ್ತಿದ್ದರೆ, ಕೊಡಿಸಿಕೊಂಡವಳು ಶೆಟ್ಟಿ, ಮನರಂಜನೆ ಬಿಟ್ಟಿ ಎಂಬುದು ಕೆಲ ರಸಿಕರ ಅಭಿಪ್ರಾಯ. ಒಟ್ಟಿನಲ್ಲಿ ಈ ಮಂಗಳೂರು ತರಳೆ(ಲೆ) ವರ್ಷವಿಡೀ ಸುದ್ದಿಯಲ್ಲಿದ್ದಾಳೆ. ಮೊದಲು ಜನಾಂಗೀಯ ನಿಂದನೆ, ಈಗ ಚುಂಬನ ಆಲಿಂಗನೆ! ಶಿಲ್ಪಾ ನಿನಗಿದೋ ದೊಡ್ಡ ವಂದನೆ, ಹೀಗೆ ಸುದ್ದಿ ಮಾಡೋದು ನಿನಗೆ ಚಂದನೆ? ಎಂದು ಕೇಳುತ್ತಿದ್ದಾರೆ ಮಾಣಿಗಳು!
*
ಡಿಜಿಟಲ್ ಪ್ರಿಂಟಿಂಗ್ ಬಂದ ಮೇಲೆ ಈಗೇನು ಬ್ಯಾನರ್ ಮಾಡಿಸುವುದು ಬಲು ಅಗ್ಗ. ಅದಕ್ಕೇ ಬೆಂಗಳೂರಿನ ಬೀದಿ ಬೀದಿಗಳಲ್ಲಿ ದೃಶ್ಯಮಾಲಿನ್ಯ. ಸುಮ್ಮನೆ ನೆಪ ಹುಡುಕಿಕೊಂಡು ದಸರಾ ಶುಭಾಶಯಗಳನ್ನು ಕೋರುವ ಬ್ಯಾನರಿನಲ್ಲಿ ಐದಾರು ಮರಿಪುಡಾರಿಗಳ ತಲೆಗಳು . ಆರುತಿಂಗಳ ನಂತರ ಈ ಬ್ಯಾನರ್ ಕೆಳಗಿಳಿದು ಅದರ ಜಾಗದಲ್ಲಿ ಯುಗಾದಿ ಶುಭಾಶಯ ಪ್ರಕಟವಾಗುತ್ತದೆ. ಕೆಳಗೆ ಮತ್ತೆ ಅವೇ ಪುಡಿ ಫುಡಾರಿ ತಲೆಗಳು. ಕ್ರಿಕೆಟ್ ವಿಶ್ವಕಪ್, ಫುಟ್‌ಬಾಲ್ ವಿಶ್ವಕಪ್, ಕಬಡ್ಡಿ ಟೂರ್ನಿಮೆಂಟ್, ಸಚಿವರ ಜನ್ಮದಿನ, ರಾಜ್‌ಕುಮಾರ್ ಪುಣ್ಯತಿಥಿ, ರಾಮನವಮಿ, ಹೊಸವರ್ಷ ಇವರಿಗೆ ನೆಪಗಳು ನೂರಾರು. ಸಾರ್ವಜನಿಕ ಜಾಗಗಳಲ್ಲಿ ಹೀಗೆ ಮ್ಯಾನರ್‍ಸ್ ಇಲ್ಲದೆ ಬ್ಯಾನರ್‍ಸ್ ನಿಲ್ಲಿಸುವುದನ್ನು ಬ್ಯಾನ್ ಮಾಡುವುದು ಯಾವಾಗ?
*
ರಾಜ್‌ಕುಮಾರ್ ಪುಣ್ಯತಿಥಿಯ ಅಂಗವಾಗಿ ಎಲ್ಲೆಲ್ಲೂ ಪ್ರದರ್ಶನಗೊಂಡ ಬ್ಯಾನರುಗಳಲ್ಲಿ ಒಂದು ವಿಶೇಷ ಗಮನಿಸಿದಿರಾ? ಸಾಮಾನ್ಯವಾಗಿ ಪುಣ್ಯತಿಥಿಗಳಲ್ಲಿ ನೆನಪು, ಆತ್ಮಕ್ಕೆ ಶಾಂತಿ ಕೋರಿಕೆಗಳು ಮಾತ್ರ ಇರುತ್ತವೆ. ಆದರಿಲ್ಲಿ ಬಹುತೇಕ ಪೋಸ್ಟರುಗಳಲ್ಲಿ ತಮ್ಮ ನೆಚ್ಚಿನ ನಟನನ್ನು ಮರಳಿ ಬಾ ಎಂದು ಕರೆಯಲಾಗಿತ್ತು. ಅದು ವರುಷವಾದರೂ ಕನ್ನಡಿಗ ರಾಜ್ ಅಗಲಿಕೆಯ ದಿಗ್ಭ್ರಮೆಯಿಂದ ಹೊರಬರದಿರುವುದನ್ನೂ, ಆರಾಧಿಸಲು ಬದಲಿ ದೈವವೊಂದು ಅವರಿಗೆ ಸಿಗದಿರುವುದನ್ನೂ ಸೂಚಿಸುತ್ತದೆಯೇ?ತೀರಾ ವಿರಳ ಜನರು ನಿಧನರಾದಾಗ ಇಂಥ ತುಂಬಲಾರದ ನಷ್ಟ ಆಗುತ್ತದೆ. ಪೂರ್ಣ ಚಂದ್ರ ತೇಜಸ್ವಿಯವರು ಹೋಗಿದ್ದೂ ಅಂಥದ್ದೇ ಸಂಗತಿ. ಕುವೆಂಪು, ಬೇಂದ್ರೆಯಂಥವರನ್ನು ಕೇವಲ ಪುಸ್ತಕಗಳಲ್ಲಷ್ಟೇ ಕಂಡಿದ್ದ ಇಂದಿನ ಯುವ ಬರಹಗಾರರಿಗೆ ತೇಜಸ್ವಿ ಕಣ್ಣ ಮುಂದಿನಧೈರ್ಯವಾಗಿದ್ದರು. ಕಳೆದ ಹತ್ತು ವರ್ಷಗಳಲ್ಲಿ ರಾಜ್ ನಟಿಸಿದ್ದು, ತೇಜಸ್ವಿ ಬರೆದದ್ದೂ ಎರಡೂ ತೀರಾ ಕಡಿಮೆ. ಆದರೂ ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿರುವುದು ಅವರ ವ್ಯಕ್ತಿತ್ವದ ಸೊಗಸನ್ನು ಹೇಳುತ್ತದೆ.
*
ವಿದೇಶಿಯರ ಮುಂದೆ ರಾಷ್ಟ್ರಗೀತೆ ಹಾಡಲು ಇನ್ಫೋಸಿಸ್‌ನ ನಾರಾಯಣಮೂರ್ತಿಯವರಿಗೆ ಮುಜುಗರವಾಯಿತಂತೆ. ಮೂರ್ತಿಗಿಂತ (ನಾಡಿನ) ಕೀರ್ತಿ ದೊಡ್ಡದು ಎಂಬುದನ್ನು ಇವರೇಕೆ ಮರೆತರೋ?!
*
ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಭದ್ರತಾ ಭೀತಿಗಳನ್ನೂ ಲೆಕ್ಕಿಸದೆ ಸಿಕ್ಕ ಕಡೆಯೆಲ್ಲಾ ರೋಡ್ ಶೋ ಮಾಡುತ್ತಾ ಚುನಾವಣಾ ಪ್ರಚಾರ ನಿರತರಾಗಿರುವಾಗಲೆ, ಇತ್ತ ವರುಣ್ ಗಾಂಧಿ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡು ಕಲೆಯತ್ತ ಹೊರಳಿರುವ ಸುದ್ದಿ ಬಂದಿದೆ. ಕಲಾಸಕ್ತಿ ಇರಲಿ, ಆದರೆ ಅದಕ್ಕಾಗಿ ಚುನಾವಣಾ ಟಿಕೆಟ್ ನಿರಾಕರಿಸಬೇಕಿತ್ತೆ? ಕವಿತೆ ಬರೆದುಕೊಂಡೇ ವಾಜಪೇಯಿ ಪ್ರಧಾನಿ ಆಗಿರಲಿಲ್ಲವೆ? ಇತ್ತೀಚೆಗೆ ಕವಿತಾಸಂಕಲನ ಬಿಡುಗಡೆ ಮಾಡಿರುವ ನರೇಂದ್ರ ಮೋದಿ ಮುಖ್ಯಮಂತ್ರಿ ಅಲ್ಲವೆ? ನಮ್ಮ ವೀರಪ್ಪ ಮೊಯ್ಲಿ ಕಗ್ಗ ಬರೆದಿಲ್ಲವೆ?ಅಷ್ಟಕ್ಕೂ ರಾಜಕೀಯವೂ ಒಂದು ‘ಕಲೆ’ ಎಂಬ ಮಾತಿಲ್ಲವೆ? ಪೊಲಿಟಿಕಲ್ ‘ಸೈನ್ಸ್’ ಎಂದು ಕರೆದರೂ ಅಧ್ಯಯನ ಮಾಡುವವರು ‘ಕಲಾ’ ವಿದ್ಯಾರ್ಥಿಗಳೇ ಅಲ್ಲವೇ? ಮಗನಿಗೆ ಹುಚ್ಚು ಹಿಡಿಸಿದೆ ಕುಂಚ, ಅಮ್ಮನಿಗೋ ಪ್ರಾಣಿಗಳೇ ಪ್ರಪಂಚ, ಪಕ್ಷದ ಕಾಳಜಿ ಇರಬಾರದೆ ಕೊಂಚ? ಎಂದು ಕೇಳುತ್ತಿದ್ದಾರಂತೆ ಬಿಜೆಪಿಯವರು!
*
ಮೇನಕಾ ಗಾಂಧಿಯ ಪ್ರಾಣಿ ಪ್ರೀತಿಯ ಬಗ್ಗೆ ಯೋಚಿಸುತ್ತಿರುವಾಗ ನೆನಪಾದದ್ದು ಬೆಂಗಳೂರಿನ ನಾಯಿ ಕಾಟ. ಮತ್ತೊಂದು ಮಗು ನಾಯಿ ಕಚ್ಚಿ ರೇಬೀಸ್‌ನಿಂದ ಸತ್ತಿದೆ. ಸರಕಾರವಂತೂ ನಾಯಿ ಕಚ್ಚಿದರೆ ದೇವಲೋಕ ಹಾಳಾಗುವುದೇ ಎಂದು ಸುಮ್ಮನಿದ್ದುಬಿಟ್ಟಿದೆ. ನಮ್ಮ ಆರೋಗ್ಯ ಸಚಿವರಿಗೆ ಇದೊಂದು ಸತ್ವ ಪರೀಕ್ಷೆಯಾಗಿ ಕಾಡುತ್ತಿರುವಾಗಲೇ, ಹೈದರಾಬಾದಿನಲ್ಲಿ ಪರೀಕ್ಷೆ ಹಾಲ್‌ಗೇ ನುಗ್ಗಿದ ನಾಯಿಗಳು ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಚ್ಚಿ , ಪರೀಕ್ಷೆಯನ್ನೇ ಮುಂದೂಡುವಂತೆ ಮಾಡಿವೆ. ಕಾಪಿ ಮಾಡುತ್ತಿದ್ದವರ ಪತ್ತೆಗೆ ಮಾಮೂಲಿ ಸ್ಕ್ವಾಡ್ ಬದಲು ಡಾಗ್ ಸ್ಕ್ವಾಡನ್ನು ಕಳಿಸಿದ್ದರೋ ಏನೋ! ಮನುಷ್ಯನ ಮೇಲೆ ಹೀಗೆ ತಿರುಗಿಬಿದ್ದಿರುವುದು ನಾಯಿ ಮಾತ್ರ ಅಲ್ಲ. ಕೇರಳದಲ್ಲಿ ಮತ್ತೊಂದು ಆನೆ ಮಾವುತನನ್ನು ಭೀಕರವಾಗಿ ಕೊಂದಿದೆ. ಅಲ್ಲಿನ ಸರಕಾರ ದಿಢೀರ್ ಸಭೆ ಸೇರಿ ಆನೆಗಳನ್ನು ಸರಿಯಾಗಿ ನೋಡಿಕೊಳ್ಳಲು ಮಾರ್ಗಸೂಚಿ ಸಿದ್ಧಪಡಿಸಿದೆ. ಅದರಲ್ಲಿ ಬೆಳಗ್ಗೆ ೧೧ರಿಂದ ಸಂಜೆ ೪ರವರೆಗೆ ಅವುಗಳ ಹತ್ತಿರ ಕೆಲಸ ಮಾಡಿಸುವಂತಿಲ್ಲ ಎಂಬುದೂ ಸೇರಿದೆ. ಸರಕಾರದ ಈ ಕಾಳಜಿಯಿಂದ ಆನೆಗಳಿಗೇನು ಆನೆಬಲ ಬಂದಂತಾಗಿದೆಯೋ ಅಥವಾ ಇವೆಲ್ಲಾ ಅರೆಕಾಸಿನ ಮಜ್ಜಿಗೆಯೋ ಅವುಗಳನ್ನೇ ಕೇಳಬೇಕು!

Tuesday, September 18, 2007
ಮತ್ತಷ್ಟು ಮುಖಪುಟ (ವಿನ್ಯಾಸ: ಅಪಾರ)
ಕೇರಾಫ್ ಕೊಯಮತ್ತೂರ್ (ಕತೆ)
ನಸುಕು ನಾಲ್ಕೂವರೆಗೆಲ್ಲ ಬಂದುಬಿಡಬೇಕಿದ್ದ ಟ್ರಕ್ಕು ಆರಾಗುತ್ತಾ ಬಂದಿದ್ದರೂ ಪತ್ತೆ ಇರಲಿಲ್ಲ. ಮೂರು ನಾಲ್ಕು ಗೋಣಿ ಚೀಲಗಳನ್ನು ಸೇರಿಸಿ ಹೊಲಿದ ಹೊದಿಕೆಗಳಲ್ಲಿ ಮನೆಯ ಸಮಸ್ತವೂ ತೂರಿಕೊಂಡು ಮೌನವಾಗಿ ತಮ್ಮನ್ನು ಎತ್ತಿ ಟ್ರಕ್ಕಿಗೆ ಹಾಕುವುದನ್ನೇ ಕಾದಂತೆ ಕೂತಿದ್ದವು. ಅಂಥ ಹಲವು ಮೂಟೆಗಳ ನಡುವೆ ದಾರಿ ಮಾಡಿಕೊಂಡು ಏನಾದರೂ ಮುಖ್ಯವಾದ್ದೇ ಉಳಿದುಬಿಟ್ಟಿದೆಯಾ ಎಂದು ಹುಡುಕುತ್ತಿದ್ದರು ಸೀತಮ್ಮ.
ಹೊರಗೆ ಗೇಟಿನ ಬಳಿ ನಿಂತು ಇನ್ನೂ ಬಾರದ ಟ್ರಕ್ಕಿಗಾಗಿ ಚಡಪಡಿಸುತ್ತಿದ್ದ ಗೋಪಾಲ ರಾವ್ ಒಮ್ಮೆ ಒಳಬಂದು ಹೆಂಡತಿಯ ಸಮಸ್ಯೆ ಅರಿತವರಂತೆ `ಎಷ್ಟನ್ನು ಇಲ್ಲೇ ಬಿಟ್ಟು ಹೋಗಲು ಸಾಧ್ಯವೊ ಅಷ್ಟೂ ಒಳ್ಳೆಯದು' ಎಂದೇನೊ ಹೇಳಿದರು. ಅದು ಸೀತಮ್ಮನ ಲಕ್ಷ್ಯಕ್ಕೆ ಬರಲಿಲ್ಲ. ಅವರೀಗ ಹಜಾರದ ಮೂಲೆಯಲ್ಲಿ ಬಣ್ಣ ಕಳೆದುಕೊಂಡು ಕೂತಿದ್ದ ಕಬ್ಬಿಣದ ಸ್ಟೂಲನ್ನು ತೆಗೆದುಕೊಂಡು ಹೋಗುವುದೋ ಬೇಡವೊ ಎಂಬ ಸಂದಿಗ್ಧದಲ್ಲಿ ಬಿದ್ದಿದ್ದರು.
ಹೊರಬಂದು ಮನೆಯ ಮುಂದಿನ ಕಟ್ಟೆಯ ಮೇಲೆ ಗೋಡೆಗೊರಗಿ ಕೂತ ರಾವ್ ಕಣ್ಣುಗಳು ಶೂನ್ಯದಲ್ಲಿ ನೆಟ್ಟಿದ್ದರೂ, ಕಳೆದೊಂದು ವಾರದಿಂದ ಅವು ಗಳಿಸಿಕೊಂಡಿರುವ ಹೊಸ ಹೊಳಪನ್ನು ಯಾರೂ ಫಕ್ಕನೆ ಗುರುತಿಸಬಹುದಿತ್ತು. ರಿಟೈರಾಗಿ ವಾರ ಕಳೆಯುವುದಕ್ಕೂ ಮುಂಚೆಯೇ, ಸರ್ವಸ್ವವನ್ನೂ ಧಾರೆ ಎರೆದು ಬಲು ಕಷ್ಟದಿಂದ ಕಟ್ಟಿಸಿದ ಈ ಮನೆಯನ್ನು ಮಾರಿ, ಗುರುತು ಪರಿಚಯವಿರದ ದೂರದೂರು ಕೊಯಮತ್ತೂರಿಗೆ ಇಡೀ ಕುಟುಂಬ ಏಕೆ ಸ್ಥಳಾಂತರಗೊಳ್ಳಬೇಕಿತ್ತೋ ಅವರಿಗೇ ಗೊತ್ತು. ಅಪ್ಪನನ್ನು ಕೇಳುವ ಧೈರ್ಯವಾಗದ ಪರಿಮಳ ಅಮ್ಮನನ್ನೇ ಮತ್ತೆಮತ್ತೆ ಕೇಳಿ ನಿಜವಾಗ್ಲೂ ಗೊತ್ತಿಲ್ಲ ಅಂದ್ನಲ್ಲ ಅಂತ ರೇಗಿದ ಮೇಲೆ ಸುಮ್ಮನಾಗಿದ್ದಳು. ಆ ವಿಷಯ ಎತ್ತಿದಾಗಲೆಲ್ಲ ಎತ್ತಲೋ ನೋಡಿಕೊಂಡು, `ಬೋರ್ಡಿನ ಮೇಲೆ ಈವರೆಗೆ ಬರರೆದ ಲೆಕ್ಕವನ್ನೆಲ್ಲ ಅಳಿಸಿ ಹೊಸದಾಗಿ ಬರೆಯೋಕಾಗೋದು ಎಂಥ ಅದ್ಭುತ ಅಲ್ವೇ?' ಎಂದು ಚಕಿತರಾಗುತ್ತಿದ್ದ ಗಂಡನ ಮಾತಿನ ತಲೆಬುಡ ತಿಳಿಯದ ಸೀತಮ್ಮ ವನವಾಸವೊ ಅಜ್ಞಾತವಾಸವೋ ಕಟ್ಟಿಕೊಂಡ ವ್ಯಕ್ತಿಯೊಂದಿಗೆ ಯಾವುದಾದರೇನು ಎಂಬಂತೆ ಸಾಮಾನು ಕಟ್ಟಲಾರಂಭಿಸಿದ್ದರು.
ಕಾಣದೂರಿನಲ್ಲಿ ತಮಗೆ ಕಾದಿರಬಹುದಾದ ಮಹಾಸುಖದದ ಬಗ್ಗೆ ಚಿಂತಿಸುತ್ತಲೆ, ಒಳಗೆ ಮಾಡುವುದು ಏನೂ ಉಳಿದಿಲ್ಲವೆಂಬುದನ್ನು ಖಚಿತಪಡಿಸಿಕೊಂಡ ಸೀತಮ್ಮ ನಿಧಾನಕ್ಕೆ ಹೊರಬಂದು ಕಾಂಪೌಂಡಿನೊಳಗಿರುವ ಕಟ್ಟೆಯ ಮೇಲೆ ವಿಗ್ರಹದಂತೆ ಕೂತಿದ್ದ ಗಂಡನ ಪಕ್ಕದಲ್ಲೇ ಅವರಿಗೆ ತಾಗದಂತೆ ಕುಳಿತರು. ಒಂದೆರಡು ಚೀಲ, ಸಣ್ಣ ಸೂಟ್‌ಕೇಸ್‌ಗಳನ್ನು ಹೊರಗೆ ತಂದಿಟ್ಟ ನಂತರ ಪರಿಮಳಳೂ ಸೊಂಟದ ಮೇಲೆ ಎರಡೂ ಕೈ ಇರಿಸಿಕೊಂಡು ಮೆಲ್ಲಗೆ ಅದೇ ಕಟ್ಟೆ ಮೇಲೆ ಕೂತಳು. ಅವಳ ಏಳು ತಿಂಗಳ ಹೊಟ್ಟೆ ಈಗ ತುಸುತುಸುವೇ ಸ್ಪಷ್ಟವಾಗತೊಡಗಿತ್ತು. ಇನಿತೂ ಮಾತಿಲ್ಲದೆ, ಅಲುಗಾಟವಿಲ್ಲದೆ ಹಿನ್ನೆಲೆಗೆ ಮನೆಯ ಚೂರುಗಳನ್ನು ಹರಡಿಕೊಂಡು ಕುಳಿತ ಕುಟುಂಬ ಬೀದಿಯಿಂದ ನೋಡುವವರಿಗೆ ಒಂದು ಸ್ಥಿರಚಿತ್ರದಂತೆ ಭಾಸವಾಗುತ್ತಿತ್ತು.
^^^
ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಗಣಿತ ಹೇಳುತ್ತಾ ಬಂದಿರುವ ಗೋಪಾಲ ರಾವ್ ಗೊತ್ತಿಲ್ಲ ಎನ್ನುವವರು ಆ ಊರಿನಲ್ಲಿ ಯಾರೂ ಇಲ್ಲ. ಶುರುವಿನಲ್ಲಿ ಎರಡು ಮೂರು ವರ್ಷ ಬೇರೆ ಬೇರೆ ಊರುಗಳ ಶಾಲೆಗಳಲ್ಲಿ ಕೆಲಸ ಮಾಡಿದ ರಾವ್, ನಂತರ ಯಾರೋ ಪರಿಚಯದ ಶಾಸಕರಿಂದ ಹೇಳಿಸಿ ಹುಟ್ಟೂರಿಗೆ ಸಮೀಪದ ಈ ಊರಿಗೆ ವರ್ಗ ಮಾಡಿಸಿಕೊಂಡು ಬಂದಿದ್ದರು. ಮನೆಪಾಠ ಹೇಳಿ ಒಂದಷ್ಟು ದುಡ್ಡು ಮಾಡಿಕೊಂಡು ಈಗ್ಗೆ ಹತ್ತು ವರ್ಷಗಳ ಹಿಂದೆ ಸ್ವಂತ ಮನೆಯನ್ನೂ ಕಟ್ಟಿದರು. ಈ ಮಧ್ಯೆ ಅವರಿಗೇ ಗೊತ್ತಾಗದಂತೆ ಸುರೇಶ, ಶಾಂತಿ, ಪರಿಮಳ ಸದ್ದಿಲ್ಲದೆ ಬೆಳೆದು ದೊಡ್ಡವರಾಗಿದ್ದರು.
ಮೊದಮೊದಲು ಆಲ್ಜೀಬ್ರಾದಂಥ ಕಷ್ಟದ ವಿಷಯವನ್ನು ಸಲೀಸೆನಿಸುವಂತೆ ಹೇಳಿಕೊಡಬಲ್ಲವರು ಎಂದಷ್ಟೇ ಹೆಸರಾಗಿದ್ದ ಮೇಷ್ಟ್ರು ಬರುಬರುತ್ತಾ ತಮ್ಮ ಧೂರ್ವಾಸ ಕೋಪಕ್ಕೂ ಪ್ರಸಿದ್ಧರಾಗಿದ್ದರು. ಅರ್ಥ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವರು ಒಮ್ಮೊಮ್ಮೆ ವಿದ್ಯಾರ್ಥಿಗಳ ಮೇಲೆ ಅವಾಚ್ಯ ಬೈಗುಳ ಬಳಸುವುದೂ ಉಂಟು. ಆಗೆಲ್ಲ ಹತ್ತನೆ ತರಗತಿಯಲ್ಲಿದ್ದ ಸುರೇಶ ಸಹಪಾಠಿಗಳ ಮುಖ ನೋಡುವುದನ್ನು ತಪ್ಪಿಸುತ್ತಿದ್ದ. ಟೈಲರ್ ಇರಲಿ, ಹಾಲಿನವನಿರಲಿ, ಡಿಶ್‌ನವನಿರಲಿ ಹಾಗೇ ಆಗುತ್ತಿತ್ತು. ಎಂದೂ ನೋಡದ ಅರ್ಥವೂ ಆಗದ ಸೂರ್ಯ ಟಿವಿ ಸರಿ ಮಾಡಿದರೇ ದುಡ್ಡು ಕೊಡೋದು ಅಂತ ಡಿಶ್‌ನವನ ಮೇಲೆ ಪ್ರತಿ ಸಲ ರೇಗುವರು. ಅವನು ಹಂಗಾದ್ರೆ ನೋಡಿ ಮಾಡ್ತೀನಿ ಎಂಬಂತೆ ಕನ್ನಡ ಚಾನೆಲ್‌ಗಳನ್ನೂ ಕೆಡಿಸಿ ಏನೋ ಒಂದು ನೆಪ ಹೇಳುವನು. ಸುರೇಶ ಇದನ್ನೆಲ್ಲ ಪ್ರಶ್ನಿಸಿದರೆ ರಾವ್,`ಏ ಸುಮ್ನೆ ಕುತ್ಕೊಳ್ಳೊ ಅಲ್ಲಿ, ಅವನು ನನ್ನ ಹಳೇ ಶಿಷ್ಯ. ಬಯ್ದರೆ ಏನೂ ಅಂದ್ಕೋಳಲ್ಲ , ಬಂದುಬಿಟ್ಟ ಬುದ್ದೀ ಹೇಳೋಕೆ ದೊಡ್ ಮನ್ಷಾ' ಎಂದು ಕೂಗಾಡುವರು. ಕೊನೆಗೂ ಆ ಶಿಷ್ಯ ಗುರುಗಳ ಕಾಟ ತಾಳಲಾರದೆ ಡಿಸ್‌ಕನೆಕ್ಟ್ ಮಾಡಿಕೊಂಡು ಹೋದಮೇಲೆ ಮನೆಯ ತುಂಬಾ ಶಾಂತಿ ನೆಲೆಸಿತು.
ತಾನು ನಿಷ್ಠುರವಾದಿ, ಇದ್ದುದನ್ನು ಇದ್ದ ಹಾಗೆ ಮುಖದ ಮೇಲೆ ಆಡಿಬಿಡುವ ಧೀರ ಎಂಬಂಥ ಒಂದು ಹಠದಂತೆ ತಮ್ಮೀ ವಿಚಿತ್ರ ಸ್ವಭಾವವನ್ನು ಮುಂದುವರೆಸಿಕೊಂಡೇ ಬಂದರು ರಾವ್. ಮೂಲಭೂತವಾಗಿ ತಾವು ಯಾರಿಗೂ ಅನ್ಯಾಯ ಮಾಡಿಲ್ಲದ ಕಾರಣವಾಗಿಯೇ ಹೀಗೆ ಉದ್ಧಟವಾಗಿ ವರ್ತಿಸುವ ಹಕ್ಕು ತಮಗಿದೆ ಎಂದು ಅವರು ಭಾವಿಸಿದಂತಿತ್ತು. ಈ ಮನೋಭಾವವನ್ನು ಬೆಳೆಸುವಲ್ಲಿ ಅವರ ಮಾಸ್ತರಿಕೆಯ ಪಾಲೂ ಇದ್ದಿರಬೇಕು. ಹಾಗಾಗೇ ಕಾಲೇಜು ಮುಗಿಸಲಾರದೆ ಸುಮ್ಮನೆ ಅಲೆಯುವ ಅವರ ಹಳೆಯ ವಿದ್ಯಾರ್ಥಿಗಳು ಮೇಷ್ಟ್ರುರಸ್ತೆಯಲ್ಲಿ ನಡೆಯುವಾಗ ವಿನಾಕಾರಣ ಜೋರಾಗಿ ನಗುವುದು ಅಥವಾ ಸುಮ್ಮನೆ ದುರುಗುಟ್ಟಿ ನೋಡುತ್ತಲೇ ಉಳಿಯುವುದು ಮಾಡುತ್ತಿದ್ದರು. ರಾವ್ ಇದಕ್ಕೆ ಕ್ಯಾರೆ ಅನ್ನದಾದಾಗ ಅವರ ಕಣ್ಣು ದೊಡ್ಡ ಮಗಳು ಶಾಂತಳ ಮೇಲೆ ಬಿತ್ತು. ಟೈಪಿಂಗ್ ಕ್ಲಾಸಿಗೆಂದು ಕಡಲೆಕಾಯಿ ಮಂಡಿ ಮೈದಾನವನ್ನು ಹಾದು ಹೋಗಬೇಕಿದ್ದ ಶಾಂತ ಮದುವೆ ಪ್ರಾಯವನ್ನು ಎಂದೋ ಮೀರಿದ್ದಳು. ಅಲ್ಲಿ ಕೂತು ಹರಟೆಹೊಡೆಯುತ್ತಾ ಸಂಜೆ ದೂಡುತ್ತಿದ್ದ ಈ ಫಾಲ್ತೂ ಹುಡುಗರು `ಏನ್ರೋ ಲೆಕ್ಕದ ಮೇಷ್ಟ್ರಿಗೆ ಮಗಳ ವಯಸ್ಸಿನ ಲೆಕ್ಕವೇ ಮರೆತ್ಹೋಯ್ತಲ್ರೋ ಪಾಪ' ಎಂದು ಛೇಡಿಸಿದಾಗ ಶಾಂತ ಕಂಗೆಟ್ಟಳು. ದಾರಿ ಬದಲಾಯಿಸಿ ನೋಡಿದರೆ ಆ ಫಟಿಂಗರು ಅಲ್ಲೂ ಬಂದು ಕೆಣಕುತ್ತಿದ್ದರು.
ಹಾಗಂತ ರಾವ್ ಏನೂ ಕೈ ಕಟ್ಟಿ ಕುಳಿತಿರಲಿಲ್ಲ. ಶಾಂತಿಯನ್ನು ನೋಡಲು ಎಷ್ಟೋ ಹುಡುಗರು ಬಂದಿದ್ದರು. ಬಂದ ಕ್ಷಣವೇ ಮೇಷ್ಟ್ರು ಅವರಿಗೆ ಒಂದು ಮಾಮೂಲಿ ಡೈಲಾಗ್ ಹೇಳುವುದನ್ನು ತಪ್ಪಿಸುತ್ತಿರಲಿಲ್ಲ: `ನೋಡಪ್ಪಾ ಇಷ್ಟ ಆದ್ರೆ ಆಗು ಇಲ್ಲಾಂದ್ರೆ ಬಿಡು, ನಾನ್ ಮಾತ್ರ ಒಂದು ಪೈಸೆ ವರದಕ್ಷಿಣೆ ಕೊಡೋವ್ನಲ್ಲ.' ಬಂದವರಿಗೆ ಹಣದ ಬಯಕೆ ಇರಲಿ ಬಿಡಲಿ ಅವರು ಮಾತ್ರ ತಮ್ಮ ಆದರ್ಶವಾಕ್ಯವನ್ನು ಹೇಳಿಬಿಡುತ್ತಿದ್ದರು. ವಾಕ್ಯದ ಅಂಚಿಗೆ ಒಂದು ನಗೆಯನ್ನು ಸೇರಿಸಲು ಅವರು ಪ್ರಯತ್ನಿಸುತ್ತಿದ್ದರಾದರೂ ಪ್ರತಿಸಲವೂ ಅದು ವಿಚಿತ್ರವಾಗಿ ಕೇಳುತ್ತಿತ್ತು.
ಅಪ್ಪನ ಈ ವರ್ತನೆಯಲ್ಲಿ ತಪ್ಪೆಲ್ಲಿದೆ ಎಂದು ಗೊತ್ತಾಗದಿದ್ದರೂ ಅಲಂಕಾರ ಮಾಡಿಕೊಂಡು ಚಾಪೆಯ ಮೇಲೆ ಕೂತ ಶಾಂತ ಮಾತ್ರ ಕೂತಲ್ಲೆ ಬೆವರುತ್ತಿದ್ದಳು. ಈ ಸಲ ಅಪ್ಪ ಹಾಗೆ ಹೇಳುವುದಿಲ್ಲವೇನೊ ಎಂದು ನಿರೀಕ್ಷಿಸುತ್ತಲೆ ಇನ್ನಷ್ಟು ದೊಡ್ಡವಳಾದಳು. ಸಾಲು ಹುಡುಗರು ಬಂದು ನೋಡಿ ಹೋಗುತ್ತಿದ್ದರೂ ತನ್ನ ಸಾಧಾರಣ ರೂಪವನ್ನೇ ಹಳಿದುಕೊಂಡಳೇ ಹೊರತು ಎಂದೂ ಅಪ್ಪ ವರದಕ್ಷಿಣೆ ಕೊಟ್ಟು ಮದುವೆ ಮಾಡಲಿ ಎಂದು ಅಂದುಕೊಳ್ಳಲಿಲ್ಲ. ತೀರಾ ಇತ್ತೀಚೆಗೆ ಅವಳನ್ನು ನೋಡಲು ಮೇಷ್ಟರ ಹಳೆಯ ಶಿಷ್ಯನೊಬ್ಬ ಬಂದಿದ್ದ. ತಿಂಡಿ ತಿನ್ನುತ್ತಿದ್ದ ನಸುಗಪ್ಪು ಬಣ್ಣದ ಹುಡುಗನನ್ನು ಶಾಂತ ಒಮ್ಮೆ ಕಿರುಗಣ್ಣಿನಲ್ಲಿ ನೋಡಿದ್ದಳು. ಅವನು ತಿನ್ನುತ್ತಿದ್ದ ಆತುರ ಅವಳಿಗೆ ತುಸು ತಮಾಷೆ ಎನಿಸಿತು. ಅವನು ಹೊರಡುವಾಗ `ನನಗೆ ಹುಡುಗಿ ಒಪ್ಪಿಗೆ' ಎಂದುಬಿಟ್ಟ. ತನ್ನೆದುರು ಖುರ್ಚಿಯಲ್ಲಿ ಕೂತು ಉಪ್ಪಿಟ್ಟು ತಿಂದ ಗಂಡಸೊಂದು ಹೀಗೆ `ಒಪ್ಪಿಗೆ' ಎಂದಿದ್ದನ್ನು ಕೇಳಿ ಶಾಂತಿಗೆ ಬೆಚ್ಚಿಬೀಳುವಂತಾಯಿತು. ಆದರೂ ತಕ್ಷಣ ಸಾವರಿಸಿಕೊಂಡ ಅವಳು ಈಗ ಬಿಟ್ಟರೆ ಜೀವನದಲ್ಲೆ ಮತ್ತೊಮ್ಮೆ ಇಂಥ ಅವಕಾಶ ಸಿಗಲಾರದೆಂಬಂತೆ ದಢಕ್ಕನೆ ಎದ್ದು `ಆದರೆ ನನಗೆ ಒಪ್ಪಿಗೆ ಇಲ್ಲ' ಎಂದುಬಿಟ್ಟಳು. ಮತ್ತು ಪೆಚ್ಚಾದ ಹುಡುಗನ ಮುಖವನ್ನು ದಿಟ್ಟಿಸುತ್ತಲೆ ಉಳಿದಳು. ಆಮೇಲೆ ಅಪ್ಪ ಅಮ್ಮ ಜತೆಯಾಗಿ ಹೂಡಿದ ಜಗಳವನ್ನು ಇಡಿಯಾಗಿ ಆನಂದಿಸುತ್ತ , ನಡುವೊಮ್ಮೆ ಜೋರು ದನಿಯಲ್ಲಿ `ನಾನು ಈ ಜನ್ಮದಲ್ಲಿ ಮದ್ವೆಯಾಗೋದಿಲ್ಲ' ಎಂದು ಘೋಷಿಸಿಬಿಟ್ಟಳು. ಮರುದಿನವೇ ತಲೆ ಮೇಲೆ ಆಕಾಶವನ್ನೇ ಹಾಕಿಕೊಂಡು ಕೂತಿದ್ದ ತಂದೆ ತಾಯಿಗಳನ್ನು ದಾಟಿಕೊಂಡು ಹತ್ತಿರದ ಬ್ಯೂಟಿಪಾರ್ಲರಿಗೆ ಹೋಗಿ ಮೊದಲಬಾರಿಗೆ ಹುಬ್ಬು ಕತ್ತರಿಸಿಕೊಂಡು ಬಂದಳು. ಮತ್ಯಾವುದೋ ಒಂದು ರಾತ್ರಿ ನಸುಗಪ್ಪು ಹುಡುಗನಿಗೆ ಎಷ್ಟು ಬೇಸರವಾಯಿತೋ ಎಂದು ಮರುಕಪಟ್ಟಳು.
^^^
ಕಪ್ಪು ಹೆದ್ದಾರಿಯನ್ನು ಹಿಂದೆ ಹಾಕುತ್ತಾ ಸಾಗುತ್ತಿತ್ತು ಟ್ರಕ್ಕು. ಹೆಂಡತಿ ಮತ್ತು ಪರಿಮಳಳನ್ನು ಟ್ರಕ್ಕಿನ ಒಳಗೆ ಕೂಡಿಸಿ, ಸಾಮಾನು ಉರುಳಿ ಬಿದ್ದಾವು ಎಂದು ತಾವು ಹಿಂಬದಿಯಲ್ಲಿ ಕೂತಿದ್ದ ರಾವ್‌ಗೆ ಟ್ರಕ್ಕಿನ ವೇಗ ಸಾಕೆನಿಸಲಿಲ್ಲ. ಆಗಸದತ್ತ ನೋಡಿದರೆ ನೀಲಿಯ ಹಿನ್ನೆಲೆಯಲ್ಲಿ ಬಿಳಿ ಮೋಡಗಳು ತೇಲುತ್ತ ಸಾಗುವುದು ಚಲಿಸುವ ಟ್ರಕ್ಕಿನಿಂದ ಸೊಗಸಾಗಿ ಕಂಡಿತು.
ಅಕ್ಕನ ಹೊಸ ವರಸೆಗಳಿಂದ ದಿಕ್ಕೆಟ್ಟಿದ್ದಳೆ ಪರಿಮಳ? ಇದ್ದಕ್ಕಿದ್ದಂತೆ ಒಂದು ದಿನ `ಸವಿ ಮೆಲಡಿ ಮೇಕರ್ಸ್'ನ ಗಾಯಕನೊಂದಿಗೆ ಓಡಿಹೋಗಿಬಿಟ್ಟಳಲ್ಲ, ನಾನು ಅಷ್ಟು ಹಚ್ಚಿಕೊಂಡಿದ್ದ ಕಿರಿಮಗಳು? ಒಂದು ವಾರ ಶಾಲೆಗೂ ಹೋಗದೆ, ಮಾತಾಡಿಸಿದವರ ಮೇಲೆಲ್ಲ ಎಗರಾಡಿ, ಏಕಾಂತದಲ್ಲಿ ಸದ್ದಿಲ್ಲದೆ ಅತ್ತು ಮನಸ್ಸು ಗಟ್ಟಿ ಮಾಡಿಕೊಳ್ಳುತ್ತಿರುವಾಗಲೆ ದಿಢೀರನೆ ಒಂದು ಮಧ್ಯಾಹ್ನ ಸೂಟ್ ಕೇಸಿನೊಂದಿಗೆ ಮರಳಿ, ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳಂತಲ್ಲ. ಸಂಜೆ ಶಾಲೆಯಿಂದ ಬಂದ ನಾನು ವಿಷಯ ತಿಳಿದು ಕೈ ನೋವು ಬರುವಷ್ಟು ಬಾಗಿಲು ಬಡಿದರೂ, `ನನ್ನ ಮರ್ಯಾದೆ ತೆಗೆದ ನಿನಗೆ ಈ ಮನೆಯಲ್ಲಿ ಜಾಗವಿಲ್ಲ' ಎಂದು ಅಬ್ಬರಿಸಿದರೂ ಪಿಟ್ ಎನ್ನದೆ ಕೂತಳಲ್ಲ ಒಳಗೆ. ದಿನಗಟ್ಟಲೆ ಏನೂ ತಿನ್ನದೆ, ಕಡೆಗೆ ನೀರನ್ನೂ ಕುಡಿಯದೆ ಅದ್ಹೇಗೆ ಇದ್ದಳು ಕೋಣೆಯೊಳಗೆ! ಮೂರನೇ ದಿನ ಸಂಜೆ ಬಾಗಿಲು ತೆಗೆದು ಏನೂ ಆಗಿಲ್ಲವೆಂಬಂತೆ ಉಳಿದಾಗ ಮಾತ್ರ ಅವಳನ್ನು ಹೊರಹಾಕುವ ನನ್ನ ಉತ್ಸಾಹ, ಆವೇಶಗಳು ಎಲ್ಲಿ ಹೋಗಿದ್ದವು? ಮೂರು ತಿಂಗಳ ಗರ್ಭಿಣಿ ಮತ್ತೆಂದೂ ಗಂಡನ ಮನೆಗೆ ಹೋಗುವುದೂ ಇಲ್ಲ, ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸುವುದೂ ಇಲ್ಲ ಎಂದಾಗ ನಾನೇಕೆ ಸಂಬಂಧವಿಲ್ಲದವನಂತೆ ಸುಮ್ಮನುಳಿದೆ?
`ನಮ್ಮ ಮನೆ ಹಾಳಾಗಿ ಹೋಗಿರುವುದು ನಿನ್ನಂದಲೇ' ಎಂದು ಸುರೇಶ ರೇಗುವುದು ಅವನ ದೃಷ್ಟಿಯಲ್ಲಿ ಸರಿಯೇ ಇರಬಹುದು. ಆದರೆ ಶಾಂತಳ ಅಸಹನೆ ನನಗೆ ಅರ್ಥವಾಗುತ್ತದೆ. ಬೆಂಗಳೂರಿನಲ್ಲಿ ಸಿಟಿಬಸ್ ಕಂಡಕ್ಟರ್ ಕೆಲಸಕ್ಕೆ ಅವಳು ಹೊರಟು ನಿಂತಾಗ ನನ್ನ ವಿರೋಧವನ್ನು ಎಷ್ಟು ತಣ್ಣಗೆ ತಳ್ಳಿಹಾಕಿದ್ದಳು. `ಯಾಕಪ್ಪಾ? ನಿನ್ನ ಮರ್ಯಾದೆ ಹೋಗುತ್ತಾ?' ಎಂದವಳ ಚೂಪು ನೋಟವನ್ನೆದುರಿಸಲಾಗಿತ್ತೆ ನನಗೆ? ಎಲ್ಲದಕ್ಕೂ ನಾನೇ ಹೊಣೆಯೋ ಅಥವಾ ನನ್ನ ಅವಿವೇಕಕ್ಕೆ ಜಗತ್ತಿನ ಕ್ಷುಲ್ಲಕತೆಯೂ ಕೂಡಿತ್ತೆ? ನಿರ್ಧರಿಸಲಾಗದ ರಾವ್ ಕೊಯಮತ್ತೂರಿಗೆ ಹೋದ ನಂತರ ಶಾಂತಳನ್ನು ಮರಳಿ ಮನೆಗೆ ಕರೆಸಿಕೊಳ್ಳಬೇಕು ಎಂದಷ್ಟೆ ಅಂದುಕೊಂಡರು.
`ನನ್ನ ಆಸ್ತಿ ನನಗೆ ಕೊಟ್ಟುಬಿಡು' ಎಂದು ಜಗಳವೇನೋ ಆಡಿದ್ದ. ಆದರೆ ಅದಕ್ಕಾಗಿ ಸುರೇಶ ಲಾಯರ್ ಬಳಿ ಹೋಗುತ್ತಾನೆಂದು ನಾನು ಎಣಿಸಿರಲಿಲ್ಲ. ಸಣ್ಣ ಊರಾದ್ದರಿಂದ ಹೇಗೊ ತನ್ನ ಬಗ್ಗೆ ತಿಳಿದಿದ್ದ ಲಾಯರ್, ಬುದ್ದಿಮಾತು ಹೇಳಿ ಕಳಿಸಿದ್ದರು. ಊರು ಎಲ್ಲವನ್ನು ನೋಡಿಕೊಂಡು ಸಂಭ್ರಮಿಸುತ್ತಿತ್ತು. ದುರದೃಷ್ಟವಂತರನ್ನು ಸಹನೆಯಿಂದ ನೋಡುವಷ್ಟು ಒಳ್ಳೆಯದಾಗೂ ಉಳಿದಿಲ್ಲ ಜಗತ್ತು ಎಂದುಕೊಳ್ಳುವಾಗ ಮೇಷ್ಟರ ಹಣೆಯಲ್ಲಿ ಸುಕ್ಕುಗಳು ಮೂಡಿದವು. ಮಧ್ಯಾಹ್ನದ ಸೂರ್ಯ ಕ್ಷಣಕ್ಷಣಕ್ಕೂ ಹೆಚ್ಚು ಪ್ರಖರವಾಗುತ್ತಿದ್ದ. ನಡುವೊಂದು ಕಡೆ ಟ್ರಕ್ ನಿಂತಾಗ ರಾವ್ ಹೆಂಡತಿ, ಮಗಳಿಗೆ ವಡೆ, ಚಹಾ ತಂದುಕೊಟ್ಟರು. ಪಯಣ ಮುಂದುವರೆಯಿತು.
^^^
ಇಷ್ಟೆಲ್ಲಾ ಆಗುತ್ತಿದ್ದರೂ ಸೀತು ಮಾತ್ರ ಸುಮ್ಮನೆ ಉಳಿದುಬಿಟ್ಟಳಲ್ಲ-ತನ್ನಷ್ಟಕ್ಕೆ ವಾಸ್ತು ದೋಷ, ಸರ್ಪದೋಷ, ಆ ಪೂಜೆ, ಈ ಶಾಂತಿ ಎಂದು ಮಾಡಿಕೊಂಡು? ಗಂಡನಿಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲ , ಈ ಜನ್ಮಕ್ಕೆ ಇಷ್ಟೆ ಎಂದು ಅವಳು ತೀರ್ಮಾನಿಸಿಬಿಟ್ಟಿದ್ದಳೆ? ಮೆಚ್ಚಿದ ಹುಡುಗಿಯನ್ನೆ ಮದುವೆಯಾಗುತ್ತೇನೆಂದು ಸುರೇಶ ಹೇಳಿದಾಗ ನಾನು ಅಷ್ಟೊಂದು ಹಠ ಮಾಡಿದಾಗಲೂ, ನಂತರ ನಾನೇ ಹುಡುಕಿ ತಂದ ಸೊಸೆಯೂ ಮೂರೇ ತಿಂಗಳಿಗೆ ಬೇರೆ ಸಂಸಾರ ಹೂಡಿ ಹೊರಟಾಗಲೂ ಸೀತು ಒಂದೇ ಒಂದು ಮಾತಾಡಲಿಲ್ಲ. ಅಳಲೂ ಇಲ್ಲ. ಶತಮಾನಗಳೇ ಕಳೆದವಲ್ಲವೆ ನಾವೆಲ್ಲ ಜತೆಯಾಗಿ ನಕ್ಕು? ಒಟ್ಟಾಗಿ ಕೂತು ಉಂಡ ದಿನವೂ ನೆನಪಿಲ್ಲ. ಮೇಷ್ಟ್ರು ಕರ್ಚೀಪು ತೆಗೆದು ಕಣ್ಣೊರೆಸಿಕೊಂಡರು.
^^^
ತಮಿಳುನಾಡು ಚೆಕ್‌ಪೋಸ್ಟ್ ಬಳಿ ಟ್ರಕ್ ಕೆಲ ಕಾಲ ನಿಂತು ಮುಂದೆ ಸಾಗಿತು. ಹೊಸ ಊರು ಹಳೆಯದೆಲ್ಲವನ್ನು ತೊಳೆದು ಸ್ವಚ್ಛ , ಹೊಸ ಬದುಕೊಂದನ್ನು ನೀಡೀತು ಎಂಬ ಆಲೋಚನೆ ರಾವ್ ತಲೆಯಲ್ಲಿ ಹೊಳೆದದ್ದು ಆರು ತಿಂಗಳ ಹಿಂದೆ. ಆ ಕ್ಷಣದಿಂದ ರಿಟೈರಾಗುವುದನ್ನೆ ಕಾದರು ಅವರು. ಆ ಮಾತಿಗೆ ಕೊಯಮತ್ತೂರೇ ಆಗಬೇಕಿರಲಿಲ್ಲ. ಒಂದಷ್ಟು ದೂರದ, ಯಾರ ಗುರುತೂ ಇಲ್ಲದ ಯಾವ ಊರಾದರೂ ನಡೆಯುತ್ತಿತ್ತು. ಬಿಎಡ್ ಮಾಡುವಾಗ ಒಮ್ಮೆ ಗೆಳೆಯರೊಂದಿಗೆ ದಕ್ಷಿಣ ಭಾರತ ಪ್ರವಾಸಕ್ಕೆಂದು ಬಂದಾಗ ಕೊಯಮತ್ತೂರಿನಲ್ಲಿ ರೈಲು ಬದಲಿಸಿದ್ದಷ್ಟೆ. ನಿಲ್ದಾಣದಲ್ಲಿ ಒಂದಿಪ್ಪತ್ತು ನಿಮಿಷ ಕಳೆದದ್ದು ಬಿಟ್ಟರೆ ಆ ಊರಿನೊಂದಿಗೆ ಮತ್ಯಾವ ಬಂಧವೂ ಇರಲಿಲ್ಲ ಅವರಿಗೆ. ಎಲ್ಲ ರೈಲು ನಿಲ್ದಾಣಗಳೂ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತವೆ, ಈಗ ಆ ಸ್ಟೇಷನ್ನನ್ನೂ ಗುರುತು ಹಿಡಿಯಲಾರೆ ಎಂದೆನಿಸಿತು ರಾವ್‌ಗೆ.
ಕೊಯಮತ್ತೂರು-೫ ಕಿ.ಮೀ. ಎಂದು ಬರೆದಿದ್ದ ಮೈಲಿಗಲ್ಲನ್ನು ನೋಡಿದ ರಾವ್ ಪುಳಕಿತರಾದರು. ಆತ್ಮಹತ್ಯೆಯಿಲ್ಲದೆ ಮರುಹುಟ್ಟು ಪಡೆಯುವುದೆಂದರೆ ಹೀಗೆ ಎನಿಸಿತು ಅವರಿಗೆ.
^^^
ಕಳೆದವಾರವೇ ಬಂದು ರಾವ್ ನೋಡಿಟ್ಟಿದ್ದ ಮನೆಯ ಮುಂದೆ ಟ್ರಕ್ಕು ನಿಂತಾಗ ಸಂಜೆಯೊಂದು ನಗರವನ್ನು ಮಡಿಲಲ್ಲಿ ಕರಗಿಸುತ್ತಿತ್ತು. ಸಾಮಾನುಗಳನ್ನೆಲ್ಲ ಇಳಿಸಿಕೊಂಡು ಒಂದು ಹಂತಕ್ಕೆ ಜೋಡಿಸಿಕೊಳ್ಳುವಷ್ಟರಲ್ಲಿ ಬೀದಿ ದೀಪಗಳು ಬೆಳಗತೊಡಗಿದ್ದವು. ಹೆಂಡತಿ ಮತ್ತು ಮಗಳು ನೆಲ ತೊಳೆದುಕೊಂಡು, ಹತ್ತಿರದ ಜಗ್ಗುವ ಬೋರಿನಿಂದ ಕುಡಿಯುವ ನೀರು ತರುವಷ್ಟರಲ್ಲಿ ರಾವ್ ಮುಖ ತೊಳೆದು ಸಿದ್ಧರಾದರು. ಹೊರಬಿದ್ದು ಸಂಪೂರ್ಣ ಅಪರಿಚಿತ ರಸ್ತೆಗಳಲ್ಲಿ ನಿಧಾನವಾಗಿ ನಡೆಯತೊಡಗಿದರು.
ಸಂಜೆಯ ಪೇಟೆ ಸರಬರದಿಂದ ಕೂಡಿತ್ತು. ಮಾರುಕಟ್ಟೆ ತುಂಬ ಹಸಿರಿನದ್ದೆ ಗಲಾಟೆ. ಸುಂದರವಾಗಿ ಅಲಂಕರಿಸಿಕೊಂಡ, ಹಣೆಗೆ ದೊಡ್ಡ ದೊಡ್ಡ ಕುಂಕುಮಗಳನ್ನಿಟ್ಟುಕೊಂಡ ಹೆಂಗಸರು, ಸ್ಕೂಟರ್ ಮೇಲೆ ಸಾಗಿದ ಪುಟ್ಟ ಸುಖೀ ಕುಟುಂಬಗಳು, ವಿನಾಕಾರಣ ಅಳುವ ಹಾಲುಗೆನ್ನೆಯ ಪುಟಾಣಿ ದೇವತೆಗಳು, ರಸ್ತೆಬದಿಯಲ್ಲಿ ದೇವರ ಪಟಗಳನ್ನು ಮಾರುವ ಪುಟಾಣಿ ಹುಡುಗಿ... ನೋಡುತ್ತ ನೋಡುತ್ತ ಮೇಷ್ಟ್ರು ಹುರುಪು ತುಂಬಿಕೊಂಡರು. ಅವರೀಗ ಮೊದಲ ಬಾರಿಗೆ ನಮಸ್ಕಾರ ಹೇಳುವವರ ಕಾಟವಿಲ್ಲದೆ ನೆಮ್ಮದಿಯಿಂದ ನಡೆಯುತ್ತಿದ್ದರು.
ಪಕ್ಕದಲ್ಲಿ ಕಣ್ಣಿಗೆ ಬಿದ್ದ ಉದ್ಯಾನದೊಳಕ್ಕೆ ಹೋಗಿ ಕಲ್ಲು ಬೆಂಚಿನ ಮೇಲೆ ಕೂತು ಕೊಂಚ ವಿರಮಿಸಿಕೊಂಡರು. ಜೋಕಾಲಿಯ ಮೇಲೆ ಒಬ್ಬಳೇ ಕೂತು ತಮ್ಮತ್ತ ಕಣ್ಣರಳಿಸಿ ನೋಡಿದ ಪುಟ್ಟಿಯತ್ತ ನಕ್ಕರು. ಎದ್ದು ಹೋಗಿ ಮೆಲ್ಲಕ್ಕೆ ಸ್ವಲ್ಪ ಹೊತ್ತು ತೂಗಿದರು. ಉದ್ಯಾನಕ್ಕೆ ಹೊಂದಿಕೊಂಡಂತೆ ಇದ್ದ ಗ್ರಂಥಾಲಯವನ್ನು ನೋಡಿ `ಓ ಇಲ್ಲೂ ಬರಬಹುದು' ಎಂದುಕೊಂಡವರು ಹಿಂದೆಯೇ `ಓ! ಅಲ್ಲಿ ಬರೇ ತಮಿಳು ಪುಸ್ತಕಗಳಿದ್ದರೆ?' ಎಂದು ಯೋಚಿಸಿದರು. ತಮಿಳುನಾಡಿನಲ್ಲೆಲ್ಲ ಮಧ್ಯಾಹ್ನ ಮಾತ್ರ ಅನ್ನದ ಊಟ, ಬೆಳಿಗ್ಗೆ ಮತ್ತು ರಾತ್ರಿ ಬರೀ ಇಡ್ಲಿ ಇಲ್ಲವೇ ದೋಸೆ ಎಂದು ಊರಲ್ಲಿ ಯಾರೋ ಹೇಳಿದ್ದು ನೆನಪಾಯಿತು. ಆ ರಾತ್ರಿಯ ತಂಪು ಗಾಳಿ ಮೇಷ್ಟ್ರಿಗೆ ಹಿತವೆನಿಸಿತು. ಊರಿನ ಬಗ್ಗೆ ವಿಶ್ವಾಸ ಹುಟ್ಟಿದವರಂತೆ ಹೆಂಡತಿ ಮಗಳಿಗೆ ಹೂವು ಕೊಂಡರು. ಹೂವಿನವಳೊಡನೆ ಸನ್ನೆಯಲ್ಲೇ ಮಾತನಾಡುವ ಕ್ಷಣದಲ್ಲಿ ಊರು ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಂತೆನಿಸಿ ರೋಮಾಂಚಿತರಾದರು.
ಹೂವಾಡಗಿತ್ತಿಗೂ ಒಂದು ಹೂನಗೆ ಇತ್ತು , ಮತ್ತೊಂದು ಅಂಗಡಿಯಲ್ಲಿ `ಮೈಸೂರ್ ಪಾ' ಕೊಂಡು ಮನೆ ಕಡೆ ಹೊರಟ ಮೇಷ್ಟ್ರಿಗೆ ಕತ್ತಲಿನಲ್ಲಿ ಗೊಂದಲವಾಯಿತು. ಮೂರ್ನಾಕು ಬೀದಿಗಳನ್ನು ಸುತ್ತಿದ ಮೇಲೂ ತಾವು ಬಂದ ಹಾದಿಯ ಸುಳಿವು ಹತ್ತಲಿಲ್ಲ. ಸೋಡಿಯಂ ದೀಪಗಳ ಬೆಳಕಿನಲ್ಲಿ ಲೋಕವೆಲ್ಲ ಹಳದಿಯಾಗಿತ್ತು. ತುಸು ಎತ್ತರದಲ್ಲಿದ್ದ ಮೂರು ರಸ್ತೆ ಕೂಡುವ ಸರ್ಕಲ್ ಒಂದಂತೂ ಆ ಹಳದಿಯಲ್ಲಿ ಥೇಟ್ ಕಂಪನಿ ನಾಟಕದ ರಾಸ್ತಾ ಸೀನಿನಂತೆ ತೋರುತ್ತಿತ್ತು. ಯಾರಲ್ಲೂ ವಿಚಾರಿಸದೆ ಸುಮ್ಮನೆ ಊಹೆಯ ಮೇಲೆಯೇ ಮೇಷ್ಟರು ನಡೆದರು. ತಮ್ಮ ಮನೆ ತಮಗೇ ಸಿಕ್ಕುತ್ತಿಲ್ಲ ಎಂದು ಕೇಳುವುದಾದರೂ ಹೇಗೆ? ಇನ್ನೇನು ಚಿಂತಿತರಾಗುತ್ತಿರುವಂತೆಯೇ ಪುಟ್ಟ ಗಣೇಶನ ಗುಡಿ ಕಣ್ಣಿಗೆ ಬಿತ್ತು.ಅದರಿಂದ ಮುಂದಕ್ಕೆ ಒಂದೇ ಬೀದಿ ನಡೆದರೆ ಮನೆ ಎಂಬುದು ಹೊಳೆಯುತ್ತಲೆ, ಗೆಲುವಿನಿಂದ ಹೆಜ್ಜೆ ಹಾಕಿ ಬಾಗಿಲಲ್ಲೇ ಕಾಯುತ್ತಿದ್ದ ಹೆಂಡತಿ, ಮಗಳನ್ನು ಕೂಡಿಕೊಂಡರು.
^^^
ಆ ರಾತ್ರಿ ಪರಿಮಳ ಬೇಗನೆ ನಿದ್ದೆಹೋದಳು. ತಡರಾತ್ರಿಯವರೆಗೂ ಅಂಗಳದಲ್ಲಿ ಕೂತಿದ್ದ ದಂಪತಿಗಳು ಹೆಚ್ಚೇನೂ ಮಾತಾಡಲಿಲ್ಲ. ಬಹಳ ಹೊತ್ತಿನ ನಂತರ ರಾವ್ `ಸೀತು, ಹಳೇದೆಲ್ಲವನ್ನು ಇವತ್ತಿಗೆ ಮರೆತುಬಿಡು' ಎಂದರು. ನಕ್ಷತ್ರಗಳನ್ನು ನೋಡುತ್ತಾ ಸೀತಮ್ಮ ಮೆಲುದನಿಯಲ್ಲಿ `ಹೂ' ಎಂದರು. ರಾವ್ `ನಾಳೆನೇ ಶಾಂತಿಗೂ ಸುರೇಶನಿಗೂ ಟೆಲಿಗ್ರಾಂ ಮಾಡಬೇಕು ಕಣೇ' ಎಂದರು. ಸೀತಮ್ಮ ಅದಕ್ಕೂ `ಹೂ' ಎಂದರು. ಅವರಿಗೆ ಇನ್ನೇನಲ್ಲದಿದ್ದರೂ ಗಂಡನ ನಿರಾಳತೆ ಅರ್ಥವಾಗುತ್ತಿತ್ತು. ಆಗಸದಲ್ಲಿ ಚಂದಿರ ಹುರುಪಿನಿಂದ ಅಲೆಯುತ್ತಿದ್ದ. ಇಬ್ಬರೂ ಎದ್ದು ಒಳ ಹೋಗುವಾಗ `ಬೆಳಗ್ಗೆ ಬೇಗ ಏಳಿಸೇ' ಎಂದರು ರಾವ್.
ಆದರೆ ಟ್ರಕ್ ಪ್ರಯಾಣದ ಆಯಾಸಕ್ಕೋ ಏನೋ ಸೀತಮ್ಮ ಏಳುವಾಗಲೇ ಎಂಟು ಹೊಡೆದಿತ್ತು. ಕಾಫಿ ಮಾಡಿಕೊಂಡು ಬಂದೇ ಎಬ್ಬಿಸೋಣ ಎಂದುಕೊಂಡ ಅವರು ಅಡಿಗೆ ಮನೆಗೆ ನೆಡೆದರು. ನೆಮ್ಮದಿಯಿಂದ ಮಲಗಿದ್ದ ಮೇಷ್ಟ್ರು ಮಾತ್ರ ಯಾರು ಏಳಿಸಿದರೂ ಏಳುವಂತಿರಲಿಲ್ಲ.
ಸಾರಿ ಪದ್ಮಿನಿ(ಕತೆ)
ಏನೇ ಆಗಲಿ, ಇವತ್ತು ಪದ್ಮಿನಿಯನ್ನು ಮಾತನಾಡಿಸಿ ಎಲ್ಲ ಹೇಳಿಬಿಡಬೇಕು ಎಂದು ಕಳೆದ ರಾತ್ರಿಯೆಲ್ಲಾ ಕುಳಿತು ತಾನು ಮಾಡಿದ ಉಕ್ಕಿನಂಥ ನಿರ್ಧಾರ ಐದು ನಿಮಿಷ ಹಿಂದಿನವರೆಗೂ ಅಷ್ಟೇ ಗಟ್ಟಿಯಾಗಿದ್ದದ್ದು , ಈಗ ಕೃಷ್ಣ ಅಪಾರ್ಟ್‌ಮೆಂಟಿನ ಮೂರನೇ ಮಹಡಿಯ ಕೊನೇ ಮೆಟ್ಟಿಲುಗಳನ್ನೇರುತ್ತಿರುವಾಗ ಏಕೋ ಐಸ್‌ಕ್ರೀಮಿನಂತೆ ಕರಗುತ್ತಿರುವ ಸುಳಿವು ಹತ್ತಿ ದತ್ತಾತ್ತ್ರೇಯ ಕಂಗಾಲಾಗಿ ಆಸರೆಗೆ ಪಕ್ಕದ ಗೋಡೆಯನ್ನು ಹಿಡಿದುಕೊಂಡ. ವರ್ಚುಯಲ್ ಸಿಸ್ಟಮ್ಸ್ ಕಂಪ್ಯೂಟರ್ ಸೆಂಟರಿನ ಬಾಗಿಲಿನಲ್ಲಿದ್ದ ಒಂದೇ ಜತೆ ಪರಿಚಿತ ಚಪ್ಪಲಿಗಳು ಒಳಗೆ ಪದ್ಮಿನಿ ಇದ್ದಾಳೆಂದೂ ಮತ್ತು ಪದ್ಮಿನಿ ಒಬ್ಬಳೇ ಇದ್ದಾಳೆಂದೂ ಸೂಚಿಸಿ ಅವನ ಎದೆಬಡಿತವನ್ನು ಮತ್ತಷ್ಟು ಹೆಚ್ಚಿಸಿದವು. ಕಾರಿಡಾರಿನಲ್ಲಿ ನಿಂತ ದತ್ತಾತ್ರೇಯ ಕೈಯಿಂದ ತಲೆಗೂದಲನ್ನು ಸರಿಮಾಡಿಕೊಂಡು ಬಾಗಿಲ ಕಡೆಗೆ ನಡೆದ. ಹೆಜ್ಜೆಗಳು ಭಾರ ಎನಿಸಿದವು. ಸದ್ದು ಮಾಡದಂತೆ ಬಾಗಿಲ ಬಳಿಗೆ ಹೋದವನಿಗೆ ಕಂಪ್ಯೂಟರಿನ ಮುಂದೆ ಕುಳಿತಿದ್ದ ಪದ್ಮಿನಿಯ ಬೆನ್ನಿನ ಭಾಗ ಮಾತ್ರ ಕಾಣುತ್ತಿತ್ತು. ನೀಲಿಬಣ್ಣದ ಕಮೀಜಿನಲ್ಲಿ ಗೋಡೆಯ ಕಡೆ ಮುಖ ಮಾಡಿ ತನ್ನ ಕೆಲಸದಲ್ಲಿ ಮಗ್ನಳಾಗಿದ್ದ ಪದ್ಮಿನಿ ದತ್ತಾತ್ರೇಯನಿಗೆ ಹಿಂದೆಂದಿಗಿಂತಲೂ ಕಠಿಣವಾಗಿ ಕಂಡು ಅವನು ಸದ್ದಿಲ್ಲದೆ ವಾಪಾಸು ಬಂದು ಕೆಳಗೆ ರಸ್ತೆಯಲ್ಲಿ ಹರಿಯುತ್ತಿದ್ದ ಜನಸಂದಣಿಯನ್ನು ಗಮನಿಸುತ್ತಾ, ಇವರಿಗೆಲ್ಲಾ ತನ್ನ ಸಮಸ್ಯೆಯ ಪರಿವೆಯೇ ಇಲ್ಲವಲ್ಲ ಎಂದು ಗಲಿಬಿಲಿಗೊಂಡ. ಪದ್ಮಿನಿಯನ್ನು ಮಾತಾಡಿಸಲು ನನಗೇಕೆ ಇಂಥ ಭಯವಾಗಬೇಕು ಎಂಬ ಯಕ್ಷಪ್ರಶ್ನೆಯನ್ನು ಪ್ರಸ್ತುತ ವಾರದಲ್ಲಿ ನೂರಾ ಎಂಟನೇ ಸಲ ಹಾಕಿಕೊಂಡು ಖಿನ್ನನಾದ.
ಇದೆಲ್ಲ ಶುರುವಾಗಿದ್ದು ಸರಿಸುಮಾರು ಎರಡು ತಿಂಗಳಿನ ಹಿಂದೆ. ಕಂಪ್ಯೂಟರಿನ ಯಾವುದೋ ಡಿಪ್ಲೊಮ ಮುಗಿಸಿಕೊಂಡಿದ್ದ ಕುಮಾರ್ ತೀರ ಚಿಕ್ಕದಾದ ಆ ಸಣ್ಣ ರೂಮಿನಲ್ಲಿ ಎರಡು ಕಪ್ಪು ಬಿಳುಪು ಕಂಪ್ಯೂಟರುಗಳನ್ನಿಟ್ಟುಕೊಂಡು ವರ್ಚುಯಲ್ ಸಿಸ್ಟಮ್ಸ್ ಎಂದು ದೊಡ್ಡ ಬೋರ್ಡು ಬರೆಸಿ, ಅದಕ್ಕೆ ಎರಡು ಮಾರು ಸೇವಂತಿಗೆ ಹೂವಿನ ಹಾರ ಹಾಕಿ, ಊದಿನಕಡ್ಡಿ ಬೆಳಗಿ, ಓಪನಿಂಗ್ ಶಾಸ್ತ್ರ ಮುಗಿಸಿದ ಮಾರನೇ ದಿನವೇ ಆಗಷ್ಟೇ ಡಿಗ್ರಿ ಮುಗಿಸಿದ್ದ ದತ್ತಾತ್ರೇಯ ಫೀಜು ಕಡಿಮೆ ಎಂಬ ಒಂದೇ ಕಾರಣಕ್ಕೆ ಸೇರಿಕೊಂಡ.
ಸಣ್ಣಕೋಣೆಯೆಂದೋ, ಕಪ್ಪು ಬಿಳುಪು ಮಾನಿಟರುಗಳ ದೆಸೆಯಿಂದಲೊ ಅಥವಾ ನೋಡಲು ಕುಮಾರ ಸ್ವಲ್ಪ ಪೆಕರನಂತೆ ಕಾಣುತ್ತಿದ್ದುದರಿಂದಲೊ ಅಂತೂ ದತ್ತಾತ್ರೇಯನ ನಂತರ ಬಹಳ ಜನವೇನೂ ಆ ಕಂಪ್ಯೂಟರ್ ಸೆಂಟರಿಗೆ ಸೇರಿಕೊಳ್ಳಲಿಲ್ಲ. ಹೀಗಾಗಿ ಸೇರಿದ ಕೆಲವರಿಗೇ ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಅಭ್ಯಾಸ ಮಾಡಲು ಅನುವಾಗುತ್ತಿತ್ತು. ದತ್ತಾತ್ರೇಯ ಹೋಗುತ್ತಿದ್ದ ಸಂಜೆ ಆರೂವರೆಯಿಂದ ಏಳೂವರೆವರೆಗಿನ ಅವಧಿಯಲ್ಲಿ ಮತ್ತಾರು ಬರುತ್ತಿಲ್ಲವಾದ್ದರಿಂದ ಅವನ ಪಕ್ಕದಲ್ಲಿದ್ದ ಎರಡನೇ ಕಂಪ್ಯೂಟರ್ ಮುಸುಕು ಹೊದ್ದು ಕುಳಿತಿರುತ್ತಿತ್ತು. ಆ ಸಮಯ ಕುಮಾರನ ಚಾ, ಸಿಗರೇಟಿನ ಸಮಯವಾದ್ದರಿಂದ ಹತ್ತು ನಿಮಿಷ ದತ್ತಾತ್ರೇಯನಿಗೆ ಪಾಠ ಮಾಡಿದಂತೆ ಮಾಡಿ, ಇದನ್ನು ಪ್ರಾಕ್ಟಿಸ್ ಮಾಡ್ತಿರು, ಈಗ ಬಂದೆ ಎಂದು ಮೂರನೇ ಕ್ರಾಸಿನಲ್ಲಿದ್ದ ಸಲೀಮನ ಟೀ ಶಾಪಿಗೆ ಹೋಗುತ್ತಿದ್ದವನು ವಾಪಾಸು ಬರುತ್ತಿದ್ದುದು ಏಳೂವರೆಗೆ. ಹೀಗಾಗಿ ಪ್ರತಿದಿನವೂ ತೀರಾ ಸಣ್ಣದಾದ ಆ ರೂಮಿನಲ್ಲಿ ದತ್ತಾತ್ರೇಯ ಒಬ್ಬನೇ ಒಂದು ಗಂಟೆಯ ಅವಧಿಯನ್ನು ಕಂಪ್ಯೂಟರಿನೊಡನೆ ಕಳೆಯಬೇಕಾಗುತ್ತಿತ್ತು. ಆಗೆಲ್ಲಾ ಅವನು ಆ ಏಕಾಂತವನ್ನು ಅನುಭವಿಸುವನಂತೆ ಕಾಲುಗಳನ್ನು ಉದ್ದಕ್ಕೆ ಗೋಡೆಗೆ ತಗಲುವಂತೆ ಚಾಚಿ, ಫ್ಯಾನಿಲ್ಲದ ಕೋಣೆಯ ಸೆಖೆಯನ್ನು ನಿವಾರಿಸಲೆಂದು ಷರಟಿನ ಮೂರು ಗುಂಡಿಗಳನ್ನು ಬಿಚ್ಚಿ ಸಣ್ಣ ದನಿಯಲ್ಲಿ `ಚಾಂದ್ ನೇ ಕುಚ್ ಕಹಾ ರಾತ್ ನೇ ಕುಚ್ ಸುನಾ' ಅಂತ ಯಾವುದೊ ಹಾಡನ್ನು ಗುನುಗಿಕೊಳ್ಳುತ್ತ ಕಂಪ್ಯೂಟರಿನೊಡನೆ ಗುದ್ದಾಡುತ್ತಿದ್ದವನು ಅಪರೂಪಕ್ಕೊಮ್ಮೆ ಯಾರಾದರೂ ಕುಮಾರನನ್ನು ಕೇಳಿಕೊಂಡು ತಕ್ಷಣ ಒಳಗೆ ಬಂದರೆ ಸರಕ್ಕನೆ ಖುರ್ಚಿಯಿಂದೆದ್ದು ಷರಟಿನ ಗುಂಡಿಗಳನ್ನು ಹಾಕಿಕೊಳ್ಳುತ್ತ `ಏಳೂವರೆಗೆ ಬಂದರೆ ಸಿಗ್ತಾರೆ' ಎಂದು ತಡವರಿಸುತ್ತಿದ್ದ.
ಒಂದು ತಿಂಗಳಿನವರೆಗೂ ಹೀಗೇ ದಿನ ಕಳೆಯುತ್ತಿದ್ದ ದತ್ತಾತ್ರೇಯನಿಗೆ ಅವತ್ತು ಕಂಪ್ಯೂಟರಿಗೆ ಬಂದಾಗ ಬಿಳಿಯ ಬಣ್ಣದ ವಸ್ತ್ರಗಳಲ್ಲಿ ಹಂಸದಂತೆ ಕಾಣುತ್ತಿದ್ದ ಹುಡುಗಿಯೊಬ್ಬಳು ಕುಮಾರನ ಹತ್ತಿರ `ಹೌ ಟು ಕ್ರಿಯೇಟ್ ಎ ಡೈರೆಕ್ಟರಿ' ಎಂಬುದನ್ನು ಹೇಳಿಸಿಕೊಳ್ಳುತ್ತಿದ್ದುದನ್ನು ಕಂಡು ತನ್ನ ಒಂಟಿತನದ ಸಮಸ್ಯೆ ಹೀಗೆ ಅನಿರೀಕ್ಷಿತ ರೋಮಾಂಚಕಾರಿ ರೀತಿಯಲ್ಲಿ ಪರಿಹಾರವಾದದ್ದು ಪರಮಾನಂದವುಂಟುಮಾಡಿತು.ಅದರ ನಂತರ ದತ್ತಾತ್ರೇಯನಿಗೆ ಕಂಪ್ಯೂಟರಿಗೆ ಬರಲು ಎಂತದೋ ಹೊಸ ಹುರುಪು ತುಂಬಿಕೊಂಡಿತು. ಮಾಮೂಲಿಯಂತೆ ಸೂಚನೆಗಳನ್ನು ಕೊಟ್ಟು ಕುಮಾರ್ ಸಲೀಮ್ ಟೀ ಶಾಪಿಗೆ ಹೋಗಿಬಿಡುತ್ತಿದ್ದ. ಇವನು ಇನ್‌ಷರ್ಟ್ ಮಾಡಿಕೊಂಡು ನೇರವಾಗಿ ಕೂತುಕೊಂಡು ಸೀರಿಯಸ್ಸಾಗಿ ಅಭ್ಯಾಸ ಮಾಡಲಾರಂಬಿಸಿದ. ಪಕ್ಕದಲ್ಲಿ ಕುಳಿತ ಪದ್ಮಿನಿಯ ಮೈಯಿಂದ ಬರುತ್ತಿದ್ದ ಎಂಥದೋ ಸುವಾಸನೆಯನ್ನು ಹೀರಿಕೊಳ್ಳುತ್ತಾ,ಅವಳ ಬೆಳ್ಳನೆಯ ಪಾದಗಳನ್ನು ಗಮನಿಸುತ್ತಾ ಸ್ವಲ್ಪ ಹೊತ್ತು ಮೈಮರೆಯುತ್ತಿದ್ದ ದತ್ತಾತ್ರೇಯ ಮರುಕ್ಷಣವೇ ಅವಳ ಇರುವಿಕೆಯಿಂದ ತನಗೇನೂ ಆಗಿಲ್ಲವೆನ್ನುವುದನ್ನ ಯಾರಿಗೋ ತೋರಿಸುವವನಂತೆ ಒಮ್ಮೆ ಪುಸ್ತಕದೆಡೆಗೂ ಮತ್ತೊಮ್ಮೆ ಕಂಪ್ಯೂಟರ್ ತೆರೆಯೆಡೆಗೂ ನೋಡುತ್ತಾ ಬ್ಯುಸಿಯಾಗಿ ಅಭ್ಯಾಸ ಮಾಡುತ್ತಿದ್ದ. ಮತ್ತೆರಡು ನಿಮಿಷಗಳಲ್ಲಿ ಟೈಪ್ ಮಾಡುತ್ತಿದ್ದ ಅವಳ ಬೆರಳುಗಳೋ, ಮುಡಿದ ಜಾಜಿ ಹೂವಿನ ವಾಸನೆಯೋ ಅಥವಾ ಕುಳಿತ ಭಂಗಿಯೋ ಅವನ ಗಮನವನ್ನು ಸೆಳೆಯುತ್ತಿದ್ದವು.
ಇಲ್ಲಿಯವರೆಗೂ ಗೆಳತಿಯರೇ ಇರದಿದ್ದ ದತ್ತಾತ್ರೇಯ ನಿಗೆ ಈಗ ತನ್ನ ಪಕ್ಕದಲ್ಲಿ ಕೂತುಕೊಳ್ಳುವ ಪದ್ಮಿನಿ ಎಂಬ ಹುಡುಗಿಯನ್ನು ತಾನು ಮಾತಾಡಿಸಿ ಗೆಳೆತನ ಆರಂಭಿಸುವ ಬಗ್ಗೆ ಯಾವ ನಂಬಿಕೆಯೂ ಇರಲಿಲ್ಲವಾದುದರಿಂದ ಈ ವಾಸನೆ ಹೀರುವ, ಪಾದಗಳನ್ನು ಗಮನಿಸುವ ಆಟಗಳೆಲ್ಲಾ ಬಲು ಬೇಗ ಬೇಸರವಾಗಿ ಹೋಗಿ `ಇವಳು ಬರದಿದ್ದರೇ ಚೆನ್ನಾಗಿತ್ತು , ಕಾಲು ಚಾಚಿ ಗುಂಡಿ ಬಿಚ್ಚಿಕೊಂಡು, ಹಾಡಿಕೊಳ್ಳುವ ಸ್ವಾತಂತ್ರ್ಯವಾದರೂ ಉಳಿಯುತ್ತಿತ್ತು' ಎಂದುಕೊಳ್ಳಲಾರಂಭಿಸಿದ. ಆದರೂ ಒಮ್ಮೊಮ್ಮೆ ಈ ಪದ್ಮಿನಿ ಎಂಬ ಹುಡುಗಿ ತನ್ನ ಭಾವನೆಗಳನ್ನು ನಿಯಂತ್ರಿಸುತ್ತಾಳೆ ಎಂಬ ಅರಿವು ದತ್ತಾತ್ರೇಯನಿಗೂ ಇತ್ತು.ಹೀಗಿರುವಾಗ ತಮ್ಮಿಬ್ಬರ ಮೊದಲ ಮಾತುಕತೆ ಇಷ್ಟು ಅನಿರೀಕ್ಷಿತವಾಗಿ ಆಗಿಬಿಡಬಹುದೆಂಬ ಕಲ್ಪನೆಯೂ ಅವನಿಗಿರಲಿಲ್ಲ.
ಅವತ್ತು ಪದ್ಮಿನಿ ಏನನ್ನೋ ಟೈಪು ಮಾಡುತ್ತಿದ್ದಳು. ನೋಡಲು ಮುದ್ದಾಗಿದ್ದರೂ ಪದ್ಮಿನಿ ಸ್ಪೆಲಿಂಗ್ ವಿಷಯದಲ್ಲಿ ಮಹಾದಡ್ಡಿಯಾಗಿದ್ದಳು.ಅವಳು ಮಾಡಿದ ಮಿಸ್ಟೇಕುಗಳನ್ನು ಗಮನಿಸಿ ಮನಸ್ಸಿನಲ್ಲೆ ನಗುತ್ತ ಮುಂದೆ ಓದುತ್ತಿದ್ದ ದತ್ತಾತ್ರೇಯನಿಗೆ ಅವಳು ಒಂದು ಕಡೆ ಟಿ ಞಟಿ ಎಂಬುದಕ್ಕೆ ಞಟಿತಿ ಞಟಿ ಎಂದು ಟೈಪ್ ಮಾಡಿದ್ದನ್ನು ನೋಡಿದಾಗ ಆಘಾತವಾಗಿ ತಡೆಯಲಾಗದೆ ಮಾಯೆಯಲ್ಲೆಂಬಂತೆ ಅದನ್ನು ಅವಳಿಗೆ ಹೇಳಿಬಿಟ್ಟ. ತನ್ನ ಅನರ್ಥಕಾರಿ ತಪ್ಪನ್ನು ನೋಡಿ ಪದ್ಮಿನಿ `ಅಯ್ಯಯ್ಯೋ' ಎಂದು ತನ್ನ ಬೆರಳುಗಳನ್ನು ಕೊಡವಿಕೊಳ್ಳುತ್ತಾ `ಥ್ಯಾಂಕ್ಸ್ ರೀ' ಎನ್ನುವಾಗ ಅವಳ ತುಟಿಯಂಚಿನಲ್ಲಿ ಒಂದು ಸುಂದರ ನಗುವಿತ್ತು.
ಆ ನಗು ಅವನನ್ನು ಕನಸಿನಲ್ಲೂ ಕಾಡತೊಡಗಿತು. ಈಗ ಅವಳು ಎಲ್ಲ ಸನ್ನ ಪುಟ್ಟ ಡೌಟುಗಳನ್ನೂ ದತ್ತಾತ್ರೇಯನ ಹತ್ತಿರವೇ ಕೇಳುತ್ತಿದ್ದಳು. `ಅಯ್ಯೋ ಈ ಟೂಲ್ ಬಾರ್ ಕೆಳಗೆ ಹೋಯ್ತಲ್ಲಾ , ಇದನ್ನ ಮೂಲೆಯಿಂದ ಸೆಂಟರಿಗೆ ತರಬೋದಾ, ಇದನ್ನು ಚಿಕ್ಕದು ಮಾಡೋದು ಹೇಗೆ?' ಅಂತೆಲ್ಲಾ ವಿಧವಿಧವಾದ ಪ್ರಶ್ನೆಗಳಿಗೆಲ್ಲಾ ಪರಿಹಾರ ನೀಡುತ್ತಿದ್ದ ದತ್ತಾತ್ರೇಯ ಒಂದು ತಿಂಗಳು ಮೊದಲೇ ಅದನ್ನೆಲ್ಲಾ ಕಲಿತದ್ದು ಸಾರ್ಥಕವಾಯಿತು ಎಂದುಕೊಳ್ಳುತ್ತಿದ್ದ. ಅವುಗಳ ಜೊತೆಗೆ ಇಂಗ್ಲಿಷ್ ಸ್ಪೆಲ್ಲಿಂಗ್‌ನಲ್ಲಿ ಮಹಾಪೆದ್ದಿಯಾಗಿದ್ದಂರಿಂದ ಮತ್ತೆ ಮತ್ತೆ ತನ್ನ ತಪ್ಪುಗಳನ್ನು ಸರಿ ಮಾಡುತ್ತಿದ್ದ ಅವನಿಗೆ ಥ್ಯಾಂಕ್ಸ್ ಹೇಳುತ್ತಾ ಮೋಹಕವಾಗಿ ನಗುತ್ತಿದ್ದಳು ಅವಳು.ಹೀಗೆ ಸ್ವಲ್ಪ ಪೆದ್ದಾದರೂ ಮುದ್ದಾದ ಪದ್ಮಿನಿಯೆಂಬ ಹುಡುಗಿಯ ಥ್ಯಾಂಕ್ಸ್‌ಗಳಲ್ಲಿ ಮೈಮರೆತಿದ್ದ ದತ್ತಾತ್ರೇಯನೂ ಲಕ್ಷಣವಂತನಾಗಿಯೂ, ವಿನಯವಂತನಾಗಿಯೂ ಇದ್ದುದರಿಂದ ಪದ್ಮಿನಿಯ ಎದೆಯಲ್ಲೂ ಪ್ರೀತಿ ಹಕ್ಕಿ ರೆಕ್ಕೆ ಬಡಿಯಲಾರಂಭಿಸಿತು. ಎಂದೋ ಒಂದು ದಿನ ಬಗ್ಗಿದರೆ ಕಾಣುವ ಪೇಟೆಯಲ್ಲಿ ಹೆಂಗಸರು ಕೊತ್ತಂಬರಿ ಸೊಪ್ಪಿಗೆ ಚೌಕಾಶಿ ಮಾಡುತ್ತಿರುವಾಗಲೋ, ಎರಡನೇ ಫ್ಲೋರಿನ ಟೈಲರ್ ಷರ್ಟಿನ ಅಳತೆ ಬರೆದುಕೊಂಡು ಪ್ಯಾಂಟಿನ ಅಳತೆ ನಡೆಸಿರುವಾಗಲೋ, ಸಲೀಮ್ ಟೀ ಷಾಪಿನಲ್ಲಿ ಪೆದ್ದನಂತೆ ಕುಳಿತ ಕುಮಾರ ಎರಡನೇ ರೌಂಡು ಚಾ ಕುಡಿದು ಮೂರನೇ ಸಿಗರೇಟು ಸುಡುತ್ತಿರುವಾಗಲೋ ಅಂತೂ ಇವರಿಬ್ಬರೂ ಸದ್ದಿಲ್ಲದೆ ತಮ್ಮ ಹೃದಯಗಳನ್ನು ಬಿಚ್ಚಿಟ್ಟುಕೊಂಡರು.
ಮುಂದಿನ ದಿನಗಳಲ್ಲಿ ಸಂಜೆಯ ಹೊತ್ತು ಅವರಿಬ್ಬರೂ ಪಕ್ಕದಲ್ಲೇ ಇದ್ದ ವಿವೇಕಾನಂದ ಪಾರ್ಕಿನ ಹಸಿರಿನಲ್ಲಿ ಕೂತು ಕೈ ಕೈ ಹಿಡಿದು `ಏನಾದ್ರೂಹೇಳು' `ಏನು ಹೇಳಲಿ?ನೀನೆ ಹೇಳು' ಎಂದು ಗಂಟೆಗಟ್ಟಲೇ ಮಾತಾಡಲಾರಂಭಿಸಿದರು. ಹೀಗಿರಲು ಒಂದು ದಿನ ಯಾಕೋ ಪದ್ಮಿನಿ ಸೆಂಟರಿಗೆ ಬರದಿರಲು ಅದೇ ಬೇಸರದಿಂದ ಸುಮ್ಮನೆ ಕಂಪ್ಯೂಟರಿನ ಮುಂದೆ ಕೂತಿದ್ದ ದತ್ತಾತ್ರೇಯ ಕುತೂಹಲಕ್ಕೆಂದು ಪದ್ಮಿನಿಯ ಫೈಲು ತೆರೆದು ನೋಡತೊಡಗಿದ.ಅದರಲ್ಲಿ ಅವಳ ಬಯೋಡೇಟಾವಿತ್ತು. ಜನ್ಮದಿನಾಂಕಕ್ಕಾಗಿ ಹುಡುಕಿದ.ಅದು ನಾಳೆ ಬಿಟ್ಟು ನಾಡಿದ್ದೇ ಇರುವುದನ್ನು ಗಮನಿಸಿದ ದತ್ತಾತ್ರೇಯ ತಾನೇನಾದರೂ ಇದನ್ನು ಇವತ್ತು ನೋಡದಿದ್ದರೆ ತನ್ನ ಪ್ರೀತಿಯ ಹುಡುಗಿಯ ಬರ್ತ್‌ಡೇ ತನಗೆ ಗೊತ್ತಿಲ್ಲದಂತೆ ಕಳೆದುಹೋಗಿಬಿಡುತ್ತಿತ್ತಲ್ಲ ಎಂದು ಸಂತೋಷ ಮಿಶ್ರಿತ ಗಾಬರಿಯಲ್ಲಿ ಕಳೆದುಹೋದ.ಅವಳಿಗೆ ಸುಳಿವೇ ನೀಡದೇ ಒಂದು ವಿಶೇಷವಾದ ಉಡುಗೊರೆಯನ್ನು ಕೊಡಬೇಕೆಂದು ನಿರ್ಧರಿಸಿದ.
ರಾತ್ರಿಯೆಲ್ಲಾ ಕುಳಿತು ಯೋಚಿಸಿ ಗ್ರೀಟಿಂಗ್ ಕಾರ್ಡು, ಪೆನ್ನು, ಕೆಸೆಟ್ಟುಗಳಂತಹ ಮಾಮೂಲಿ ಉಡುಗೊರೆ ಅಲ್ಲದೆ ಏನಾದರೂ ವಿಶೇಷವಾದದ್ದನ್ನು ಕೊಡಬೇಕೆಂದುಕೊಂಡನೇ ಹೊರತು ಆ ವಿಶೇಷವಾದದ್ದು ಏನು ಎಂಬುದು ಮಾತ್ರ ಅವನಿಗೆ ಹೊಳೆಯಲಿಲ್ಲ. ಮಧ್ಯಾಹ್ನ ಊಟ ಮಾಡುವಾಗಲೂ ಯಾರೂ ಎಂದೂ ಕೊಟ್ಟಿರಬಾರದು, ವಿಶೇಷವಾಗಿರಬೇಕು, ಅವಳ ಹೃದಯಕ್ಕೆ ಹತ್ತಿರ ಇರುವಂಥದ್ದಾಗಿರಬೇಕು ಎಂಬ ಮೂರು ಅಂಶಗಳನ್ನು ಇಟ್ಟುಕೊಂಡು ಯೋಚಿಸುತ್ತಿರುವಾಗ ಹೃದಯಕ್ಕೆ ಹತ್ತಿರ ಇರುವಂಥದ್ದು ಎಂಬ ಅಂಶದಿಂದಾಗಿ ಒಂದು ಕಿಡಿಗೇಡಿ ಆಲೋಚನೆ ಹೊಳೆದು ನಗು ಬಂತು.ಮತ್ತೆರಡು ಕ್ಷಣಗಳಲ್ಲಿ ಅದನ್ನೇ ಯಾಕೆ ಕೊಡಬಾರದು ಅಂತ ಚಿಂತಿಸತೊಡಗಿ, ಮತ್ತೊಂದು ಕ್ಷಣದಲ್ಲಿ ಅದನ್ನೇ ಕೊಡುವುದು ಎಂದು ಧೃಢವಾಗಿ ನಿರ್ಧರಿಸಿದ.
ಅದು ಒಂದು `ಬ್ರಾ' ಆಗಿತ್ತು. ಆಗಿನಿಂದಲೂ ದತ್ತಾತ್ರೇಯ ಅದನ್ನು ಪದ್ಮಿನಿಗೆ ವಿವೇಕಾನಂದ ಪಾರ್ಕಿನ ಮಾಮೂಲಿ ಜಾಗದಲ್ಲಿ ಕೊಟ್ಟಾಗ ಅವಳು ನಾಚಿ ನೀರಾಗಿ ತಲೆ ತಗ್ಗಿಸುವಳೋ ಹುಸಿಕೋಪದಿಂದ ಮುನಿಸಿಕೊಳ್ಳುವಳೋ ಅಥವಾ ಅಟ್ಟಿಸಿಕೊಂಡು ಬಂದು ಬೆನ್ನಿಗೊಂದು ಹುಸಿಪೆಟ್ಟು ಕೊಟ್ಟು ತಬ್ಬಿಕೊಳ್ಳುವಳೋ ಎಂದೆಲ್ಲಾ ಕಲ್ಪಿಸಿಕೊಂಡು ರೋಮಾಂಚಿತನಾಗತೊಡಗಿದ. ನೆಹರೂ ಸರ್ಕಲ್ಲಿನ ಹತ್ತಿರ ಹೊಸದಾಗಿ ತೆರೆದಿರುವ ಹೆಂಗಸರ ಒಳ ಉಡುಪುಗಳ ಅಂಗಡಿ `ಪೆಟಲ್ಸ್'ನ ಮೆಟ್ಟಿಲುಗಳನ್ನೇರುತ್ತಿರುವಾಗ ಅವನಿಗೆ ಅಸಲೀ ಸಮಸ್ಯೆಯೊಂದು ಹೊಳೆದು ವಾಪಾಸು ಬಂದುಬಿಟ್ಟ. ಅದು ಬ್ರಾನ ಸೈಜಿನದು.ನಿಜ ಹೇಳಬೇಕೆಂದರೆ ಅವು ಯಾವ ರೇಂಜಿನ ಸೈಜುಗಳಲ್ಲಿರುತ್ತವೆ ಎಂಬ ಮೂಲಭೂತ ಕಲ್ಪವೆಯೂ ಇರದಿದ್ದ ದತ್ತಾತ್ರೇಯನಿಗೆ ಇದು ಯಾಕೋ ಸುಲಭದ ಸಮಸ್ಯೆಯಲ್ಲ ಎನಿಸತೊಡಗಿತು.ಸಂಜೆ ಪದ್ಮಿನಿ ಕಂಪ್ಯೂಟರಿನ ಮುಂದೆ ಕುಳಿತಿರುವಾಗ ಕಳ್ಳನಂತೆ ಅವಳಿಗೆ ಗೊತ್ತಾಗದಂತೆ ಅವಳ ಎದೆಯನ್ನೇ ಗಮನಿಸಿದ. ಹೊರಗೆ ಬಂದು ಸೈಜು ಎಷ್ಟಿರಬಹುದೆಂದು ಕಣ್ಮುಚ್ಚಿಕೊಂಡು ಎಷ್ಟು ಹೊತ್ತು ಯೋಚಿಸಿದರೂ ಬರಿಯ ಗೋಲಾಕೃತಿಗಳು ಕಣ್ಮುಂದೆ ತಿರುಗಿದವೇ ಹೊರತು ಯಾವ ನಂಬರೂ ಕಾಣದೆ ವಿಚಲಿತನಾದ.ಪೆಟಲ್ಸ್ ಅಂಗಡಿಯ ಸೇಲ್ಸ್ ಗರ್ಲ್‌ನ್ನು `ನಿಮ್ಮ ಸೈಜಿನದೇ ಕೊಡಿ' ಅಂದರೆ ಚಪ್ಪಲಿಯಿಂದ ಹೊಡೆಯುವಳೋ ಎಂದು ಯೋಚಿಸಿ ಕಂಗೆಟ್ಟ. ಬಹಳ ಹೊತ್ತು ರಸ್ತೆಯಲ್ಲಿ ಹೋಗಿಬರುವ ಹೆಂಗಸರನ್ನೆಲ್ಲಾ ಗಮನಿಸಿದ.
ಇನ್ನೇನು ಈ ಸಮಸ್ಯೆಗೆ ಪರಿಹಾರವೇ ಇಲ್ಲ ಎಂದು ದುಃಖತಪ್ತನಾಗಿರುವಾಗ ತಟ್ಟನೆ ಸ್ವಲ್ಪ ಮುಜುಗರವಾದರೂ ಅಷ್ಟೊಂದು ಅಪಾಯಕಾರಿಯಲ್ಲದ ಪರಿಹಾರವೊಂದು ಹೊಳೆದು ಉತ್ಸಾಹಿತನಾದ. ಮಿಂಚುತ್ತಿದ್ದ ಗಾಜಿನ ಷೋಕೇಸಿನಲ್ಲಿದ್ದ ಬೊಂಬೆಗೆ ಹಾಕಿದ್ದನ್ನು ತೋರಿಸಿ ಅದೇ ಬೇಕು, ಅದೇ ಸೈಜು ,ಅದೇ ಕೊಡಿ ಎಂದು ತನ್ನ ಮುಖವನ್ನು ನೋಡದೇ ತೊದಲಿದ ದತ್ತಾತ್ರೇಯನನ್ನು ವಿಚಿತ್ರಪ್ರಾಣಿಯಂತೆ ನೋಡಿದಳು ಸೇಲ್ಸ್ ಗರ್ಲ್ .ಸೇಲ್ಸ್ ಗರ್ಲ್ ಕೈಯಿಂದ ಅದನ್ನು ಹೆಚ್ಚೂಕಡಿಮೆ ಕಸಿದುಕೊಂಡವನು ಚಿಲ್ಲರೆಗೂ ಕಾಯದೆ ಹೊರಬಿದ್ದು ಎದುರಿನ ಹೋಟೇಲ್ ನಲ್ಲಿ ಒಂದೇ ಬಾರಿಗೆ ಎರಡು ಟೀ ಕುಡಿದು ಸುಧಾರಿಸಿಕೊಂಡ.ಸಾಯಂಕಾಲ ಪಾರ್ಕಿನಲ್ಲಿ ಪದ್ಮಿನಿಗೆ ಅದನ್ನು ಕೊಡುವ ದೃಶ್ಯವನ್ನು ನೆನೆದು ಉತ್ಸಾಹದಿಂದ ಕೈಲಿದ್ದ ಉಡುಗೊರೆಯನ್ನೊಮ್ಮೆ ಸವರಿದ.
ಸಂಜೆ ಅವರಿಬ್ಬರೂ ವಿವೇಕಾನಂದ ಪಾರ್ಕನಲ್ಲಿ ಎದಿರುಬದಿರಾಗಿ ಕುಳಿತಾಗ ಕತ್ತಲಾಗುತ್ತಾ ಬಂದಿತ್ತು.ದತ್ತಾತ್ರೇಯ ಹುಟ್ಟುಹಬ್ಬದ ಶುಭಾಷಯಗಳು ಎನ್ನುತ್ತಾ ಉಡುಗೊರೆಯ ಪೊಟ್ಟಣವನ್ನು ಪದ್ಮಿನಿಯ ಕೈಗಿತ್ತಾಗ ಅವಳು ಅಚ್ಚರಿಯಿಂದ `ನಾನೇ ಮರೆತುಬಿಟ್ಟಿದ್ದೆ .ಡಿಸೆಂಬರ್ ೧೪ ಅಲ್ವಾ ? ನಿಂಗೆ ಹೆಂಗೊತ್ತಾಯ್ತು ' ಅಂತ ವಿಚಾರಿಸುತ್ತಾ ಪೊಟ್ಟಣವನ್ನು ಬಿಚ್ಚತೊಡಗಿದಳು. ಅವನು ಕಾಗದ ಹರಿಯುವ ಪರಪರ ಸದ್ದಿನ ಜೊತೆಗೆ ಕಾಯುತ್ತಾ ಕುಳಿತ. ಪಿಂಕ್ ಬಣ್ಣದ ಬ್ರಾ ನೋಡುತ್ತಲೇ ಪದ್ಮಿನಿ ಹೌಹಾರಿದಳು.ಹೇಗೆ ಪ್ರತಿಕ್ರಿಯಿಸುವುದು ಎಂದು ತಿಳಿಯದೆ ವಿಚಲಿತಳಾದವಳು ತಕ್ಷಣ ಸಾವರಿಸಿಕೊಂಡು ತಲೆಯೆತ್ತಿದಳು. ಮುಖ ಕೋಪದಿಂದ ಕೆಂಪಾಗಿತ್ತು. ಕಣ್ಣುಗಳು ಅಗಲವಾಗಿ ಮೂಗು ಕಂಪಿಸುತ್ತಿತ್ತು.ಅವಳದೇ ಅಲ್ಲವೇನೋ ಎಂಬಂತಹ ವಿಚಿತ್ರ ದನಿಯಲ್ಲಿ ಮಾತಾಡತೊಡಗಿದಳು:`ನೀನು ನನ್ನ ಏನು ಅಂತ ತಿಳ್ಕಂಡಿದೀಯ? ಇಂಥದನ್ನ ತಂದು ಕೊಡೋಕೆ ನಿಂಗೆಷ್ಟು ಧೈರ್ಯ ಇರಬೇಕು? ನನ್ನೇನು ಥರ್ಡ್ ಕ್ಲಾಸ್ ಹುಡುಗಿ ಅಂತ ಅಂದ್ಕಂಡೆಯಾ? ಹೇಳು ನಿನ್ನ ಉದ್ದೇಶ ಏನಿದೆ ಹೇಳು ನೇರವಾಗಿ.ನನಗ್ಯಾರೂ ಹೇಳೋರು ಕೇಳೋರು ಇಲ್ಲ ಅಂದ್ಕಂಡಿದೀಯಾ? ನಿಂದು ಇಂಥಾ ಕಚಡಾ ಬುದ್ಧಿ ಅಂತ ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ' ಎನ್ನುವಾಗ ಪದ್ಮಿನಿ ಮಿತಿಮೀರಿದ ಕೋಪದಿಂದ ತೊದಲುತ್ತಿದ್ದಳು.
ದತ್ತಾತ್ರೇಯ ಪೆಚ್ಚಾಗಿ ಏನೋ ಹೇಳಲು ಬಾಯಿ ತೆರೆದ.ಅಷ್ಟರಲ್ಲಿ `ನೀನೇನೂ ಹೇಳೋದು ಬೇಡ, ಒಂದು ನಿಮಿಷನೂ ಇಲ್ಲಿ ಕೂತುಕೋಬೇಡ ಎದ್ದೋಗು' ಎಂದು ಅವಳು ಚೀರಿದಳು.ಅವನಿಗೂ ಈಗ ಕೋಪ ಬಂದು `ಆಯ್ತು , ಇನ್ನೆಂದೂ ನಿನ್ನ ಮುಖ ಕೂಡ ನೋಡಲ್ಲ' ಎಂದು ಹೇಳಿ ಧಡಧಡನೇ ಹೊರಟುಹೋದ.ಅವನು ಹೊರಟು ಹೋದ ಎರಡು ನಿಮಿಷದ ನಂತರ ವಾಸ್ತವಕ್ಕೆ ಬಂದ ಪದ್ಮಿನಿ ಅವನು ಹೋದರೂ ನಾನೇಕೆ ಹೀಗೆ ಕತ್ತಲಲ್ಲಿ ಕೂತುಕೊಂಡಿರುವೆ ಎಂದು ಎದ್ದು ಹೊರಟವಳು ಅವನು ಕೊಟ್ಟ ಆ ಉಡುಗೊರೆಯನ್ನು ತೆಗೆದುಕೊಂಡುಹೋಗುವುದೋ ಬೇಡವೋ ಎಂಬ ಸಂದಿಗ್ಧದಲ್ಲಿ ಬಿದ್ದಳು.
ಇದಾದ ಮರುದಿನ ದತ್ತಾತ್ರೇಯ, ಪದ್ಮಿನಿ ಎದುರಿಗೆ ಬಂದಾಗಲೂ ಮುಖ ತಿರುಗಿಸಿಕೊಂಡು ಹೋದ. ಬಹು ಅಗತ್ಯವಾದ ಸಮಸ್ಯೆ ಬಂದರೂ ಕಾದಿದ್ದು ಕುಮಾರನ ಬಳಿಯೇ ಪರಿಹರಿಸಿಕೊಂಡಳು ಪದ್ಮಿನಿ .`ನನ್ನದು ಕಚಡಾ ಬುದ್ದಿ ಅಂತಾಳೆ, ಹೌದು ಇಷ್ಟು ದಿನವಾದರೂ ಒಂದು ಮುತ್ತೂ ಕೇಳಲಿಲ್ಲವಲ್ಲ ನನ್ನದು ಕಚಡಾ ಬುದ್ದಿಯೇ, ಹೋಗೆ ಹೋಗೆ, ನಿನ್ನಂಥಾ ಹುಡುಗಿಯರು ನೂರು ಜನ' ಎಂದುಕೊಳ್ಳುತ್ತಾ ದತ್ತಾತ್ರೇಯ ಅವಳ ಮೇಲಿನ ಕೋಪವನ್ನು ಕಂಪ್ಯೂಟರ್ ಕೀಗಳ ಮೇಲೆ ತೋರಿಸತೊಡಗಿದ.ಎಲ್ಲ ಬಿಟ್ಟು ಅದೇ ಕೊಡಬೇಕಾದರೆ ಕೆಟ್ಟ ಒಳ ಉದ್ದೇಶವಿರಲೇಬೇಕು ಸದ್ಯ ಗಂಡಸರ ಬುದ್ಧೀನ ಆರಂಭದಲ್ಲೇ ತೋರಿಸಿದ ಎಂದುಕೊಂಡ ಪದ್ಮಿನಿ ಅವನತ್ತ ತಪ್ಪಿಯೂ ತಿರುಗಿ ನೋಡದಂತೆ ಅಭ್ಯಾಸ ನಡೆಸಿದಳು. ಅವಳು ತನ್ನ ಹೊಟ್ಟೆ ಉರಿಸಲೆಂದೇ ಕುಮಾರನ ಹತ್ತಿರ ನಗುನಗುತ್ತಾ ಮಾತಾಡುತ್ತಿರುವಳು ಎಂದು ದತ್ತಾತ್ರೇಯನಿಗೆ ಅನಿಸತೊಡಗಿತು. ಈಗಾಗಲೇ ಕಂಪ್ಯೂಟರ್ ಸಹಾಯದಿಂದಲೇ ಸ್ಪೆಲ್ ಚೆಕ್ ಮಾಡಲು ಕಲಿತಿದ್ದ ಪದ್ಮಿನಿ ಬೇಕೆಂತಲೇ ಅವನಿಗೆ ಕಾಣುವಂತೆ ಎರಡೆರಡು ಬಾರಿ ಸ್ಪೆಲ್ ಚೆಕ್ ಮಾಡಿದಳು. ಇವನಿಗೆ ಕೋಪ ಹೆಚ್ಚಿ ಕಂಪ್ಯೂಟರ್ ಕೀಗಳನ್ನು ಮತ್ತಷ್ಟು ಒರಟಾಗಿ ಬಾರಿಸುತ್ತಿದ್ದ.ಹೀಗೆ ಯಾರದೋ ವೈಯುಕ್ತಿಕ ಜಗಳದಲ್ಲಿ ತನ್ನ ಕಂಪ್ಯೂಟರ್ ಹಾಳಾಗುವುದನ್ನು ನೋಡಿ ಹೌಹಾರಲು ಕುಮಾರನು ಅಲ್ಲಿರದೆ ಒಂದು ಫರ್ಲಾಂಗ್ ದೂರದ ಸಲೀಮ್ ಟೀ ಶಾಪಿನಲ್ಲಿ ಮೂರನೇ ಸಿಗರೇಟು ಎಳೆಯುತ್ತಿದ್ದನು.
ಆದರೆ ದತ್ತಾತ್ರೇಯನಿಗೆ ಈ ಆವೇಶವೆಲ್ಲಾ ಮೂರು ದಿನಕ್ಕೆ ಇಳಿದು ಪದ್ಮಿನಿಯ ಬಗ್ಗೆ ಪ್ರಸನ್ನತೆ ಮೂಡತೊಡಗಿತು. ಆದರೂ ಸುಮ್ಮನೆ ಒಂದೇ ಉಸಿರಿನಲ್ಲಿ ಪ್ರೀತಿಸುವುದರಲ್ಲಿ ಏನು ಮಜಾ ಇದೆ, ಹೀಗೆ ಆಗಾಗ ಜಗಳ ಮುನಿಸುಗಳಿದ್ದರೇನೆ ಚೆನ್ನ ಎಂದೆನಿಸಿತು. ಮತ್ತೆ ಎರಡು ದಿನ ಕಳೆದ ಬಳಿಕ ಅವನಿಗೆ ದುಃಖವಾಗತೊಡಗಿತು. ಈ ಜಗಳ ಆಗದೇ ಇದ್ದಿದ್ದರೆ ದಿನಾ ಪಾರ್ಕಿನಲ್ಲಿ ಕುಳಿತು ಮಾತಾಡುತ್ತಿದ್ದೆವು ಎಂದು ನೆನೆಸಿಕೊಂಡಾಗ ದುಃಖ ಮತ್ತೂ ಹೆಚ್ಚಾಯಿತು. ಇದೆಲ್ಲಾ ಅದದ್ದು ತನ್ನಿಂದಲೇ ಎಲ್ಲಾ ಬಿಟ್ಟು ಅಂಥ ಪೋಲಿ ಆಲೋಚನೆ ಯಾಕೆ ಬರಬೇಕಿತ್ತು ನಂಗೆ ಅಂತ ತನ್ನನ್ನೇ ಹಳಿದುಕೊಂಡ. ಯಾವತ್ತೋ ಒಂದು ದಿನ ಪದ್ಮಿನಿ ಅವನ ಕೈ ಹಿಡಿದುಕೊಂಡು ಜಗತ್ತಿನಲ್ಲಿ ಪ್ರೇಮಕ್ಕಿಂತ ನಿರ್ಮಲವಾದದ್ದು ಯಾವುದೂ ಇಲ್ಲ ಅಲ್ಲವೇ ಅಂತ ಕೇಳಿದ್ದು ನೆನಪಾಗಿ ಛೆ ಅಂಥಾ ಮುಗ್ಧ ಹುಡುಗಿಗೆ ಇಂಥಾ ಉಡುಗೊರೆ ಕೊಟ್ಟರೆ ನನ್ನ ಒಳ ಉದ್ದೇಶದ ಮೇಲೆ ಅನುಮಾನ ಬರುವುದು ಸಹಜವೇ ಆಗಿದೆ ಎಂದುಕೊಂಡು ಆಗಷ್ಟೇ ್ಞಾನೋದಯವಾದವನಂತೆ ಯಾರಿಗೂ ಕಾಣದಂತೆ ಅತ್ತ. ತಪ್ಪು ಒಪ್ಪುಗಳಲ್ಲಿ ಪ್ರೀತಿ ಕಳೆದುಹೋಗಲು ಬಿಡಬಾರದು, ಕಾಲು ಹಿಡಿದಾದರೂ ಅವಳ ಕ್ಷಮೆ ಕೇಳಿ ಎಲ್ಲಾ ಮೊದಲಿನಂತಾಗುವಂತೆ ಮಾಡಬೇಕು ಎಂದು ನಿರ್ಧರಿಸಿದ ಮೇಲೇ ಅವನಿಗೆ ನಿದ್ದೆ ಬಂದದ್ದು.
ಮರುದಿನ ಸಾಯಂಕಾಲ ಅವನು ಕಾಲುಗಂಟೆ ಮೊದಲೇ ಹೋಗಿ ಕಂಪ್ಯೂಟರ್ ಸೆಂಟರಿನಲ್ಲಿ ಪದ್ಮಿನಿಗಾಗಿ ಕಾಯತೊಡಗಿದ.ಅವಳು ಯಾವುದೋ ಹೊಸ ಚೂಡಿದಾರದಲ್ಲಿ ಸುಂದರವಾಗಿ ಸಿಂಗರಿಸಿಕೊಂಡಿದ್ದಳು. ಪಾಠ ಹೇಳಿಕೊಡುತ್ತಿದ್ದ ಕುಮಾರನೊಡನೆ ಉತ್ಸಾಹದಿಂದ ಮಾತಾಡುತ್ತಿದ್ದಳು. ಇವನಿಗೆ ತನ್ನಲ್ಲಿ ಉತ್ಸಾಹವೇ ಉಳಿದಿಲ್ಲ ಅನಿಸಿತು. ಶೇವ್ ಮಾಡದ ಕೆನ್ನೆಯನ್ನೇ ಸವರಿಕೊಳ್ಳುತ್ತಾ ಕುಮಾರ್ ಹೊರಗೆ ಹೋಗುವುದನ್ನೇ ಕಾಯುತ್ತಾ ನೆಪಕ್ಕೆ ಕಂಪ್ಯೂಟರಿನ ಮುಂದೆ ಕುಳಿತಿದ್ದ. ಹತ್ತು ನಿಮಿಷದ ಬಳಿಕ ಕುಮಾರ್ ಹೊರಟು ಹೋದ ಮೇಲೆ ಪದ್ಮಿನಿ ಗಂಭೀರವಾಗಿ ಅಭ್ಯಾಸ ಮಾಡತೊಡಗಿದಳು. ಈಗ ದತ್ತಾತ್ರೇಯನಿಗೆ ಹೇಗೆ ಶುರು ಮಾಡುವುದು ಅಂತ ಯೋಚನೆಯಾಯಿತು.
ಅವಳೆಡೆಗೆ ನೋಡಿದ. ಬಹಳ ಗಂಭೀರವಾಗಿದ್ದ ಪದ್ಮಿನಿಯ ಮುಖದಲ್ಲಿಅವನಿಗೆ ಹಿಂದೆಂದೂ ಕಾಣದ ಕಾಠಿಣ್ಯ ಕಂಡುಬಂತು. ಕ್ಷಮಿಸುವುದಿಲ್ಲ ಎಂದುಬಿಡಬಹುದು ಅಂತ ಭಯಗೊಂಡ. ಮರುಕ್ಷಣವೇ ನನ್ನ ಪದ್ಮಿನಿಯನ್ನು ಮಾತಾಡಿಸಲು ನನಗೆಂಥಾ ಭಯ ಎಂದು ಗಂಟಲು ಸರಿಮಾಡಿಕೊಳ್ಳಲು ಯತ್ನಿಸಿದರೆ ಸದ್ದೇ ಬರಲಿಲ್ಲ.ಯಾಕೋ ಎದೆ ಬಡಿತ ಹೆಚ್ಚುತ್ತಿದೆ ಅನಿಸಿತು.ಇದೆಲ್ಲಾ ವಿಚಿತ್ರವೆನಿಸಿ ಹೇಳಿಯೇಬಿಡಬೇಕು ಎಂದುಕೊಂಡವನಿಗೆ ನಾನು ಹೇಳುತ್ತಿರುವಾಗ ಯಾರಾದರೂ ಬಂದುಬಿಟ್ಟರೆ ಎಂದು ಹೊರಗೆ ಹೋಗಿ ನೋಡಿದ.ಕಾರಿಡಾರು ನಿರ್ಜನವಾಗಿತ್ತು. ಪದ್ಮಿನಿ ಪಟಪಟನೆ ಟೈಪು ಮಾಡುವುದರಲ್ಲಿ ಮೈಮರೆತಿದ್ದಳು.ಅವನಿಗೆ ಯಾಕೋ ಪದ್ಮಿನಿ ತನ್ನನ್ನು ಪೂರ್ಣವಾಗಿ ಮರೆತುಬಿಟ್ಟಿರಬಹುದು ಅನಿಸತೊಡಗಿತು. ನಾಳೆ ಹೇಳಿದರಾಯಿತು ಎಂದುಕೊಂಡು ಅಲ್ಲಿ ಉಸಿರುಗಟ್ಟುತ್ತಿದೆಯೆಂಬಂತೆ ಇನ್ನೂ ಸಮಯ ಉಳಿದಿದ್ದರೂ ಎದ್ದು ಮನೆಗೆ ಹೋಗಿಬಿಟ್ಟ.
ರಾತ್ರಿ ಹಾಸಿಗೆಯ ಮೇಲೆ ಉರುಳಿಕೊಂಡು ಯೋಚಿಸುತ್ತಿರುವಾಗ ಹೀಗೇಕಾಯಿತು ನಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಮಾತಾಡಿಸಲು ತನಗ್ಯಾಕೆ ಭಯವಾಯಿತು ಎಂಬುದು ಒಗಟಾಗಿಯೇ ಉಳಿಯಿತು. ಪದ್ಮಿನಿ ಒಮ್ಮೆ ಭಾವುಕಳಾಗಿ ನನಗ್ಯಾಕೋ ಹೋದ ಜನ್ಮದಲ್ಲೂ ನಾವು ಪ್ರೇಮಿಗಳಾಗಿದ್ವಿ ಅನಿಸುತ್ತೆ ಅಂದದ್ದು ನೆನಪಾಗಿ ಅಳು ಬಂದುಬಿಟ್ಟಿತು. ಇಲ್ಲ ಪದ್ಮಿನಿ ನನ್ನನ್ನ ತಿರಸ್ಕರಿಸಲಾರಳು, ನಾಳೆ ಎಲ್ಲ ಹೇಳಿ ಅವಳ ತೊಡೆಯ ಮೇಲೆ ತಲೆಯಿಟ್ಟು ಅತ್ತುಬಿಡಬೇಕು ಎಂದುಕೊಳ್ಳುವನು.
ಇದಾಗಿ ಈಗ ಏಳು ದಿನ ಕಳೆದಿವೆ. ಪ್ರತಿದಿನವೂ ದತ್ತಾತ್ರೇಯ ನಾಳೆ ಪದ್ಮಿನಿಯ ಕ್ಷಮಾಪಣೆ ಕೇಳುತ್ತೇನೆ ಅಂತ ನಿರ್ಧರಿಸುತ್ತಾನೆ. ಅವಳು ಎದುರಿಗೆ ಬರುವ ತನಕವೂ ಗಟ್ಟಿಯಾಗಿರುವ ಅವನ ನಿರ್ಧಾರ ಅವಳ ನಿರ್ಲಿಪ್ತ ಮುಖದೆದುರು ಮಂಜುಗಡ್ಡೆಯಂತೆ ಕರಗುತ್ತದೆ.ಯಾವುದೋ ಅವ್ಯಕ್ತ ಭಯ, ಅನುಮಾನ . ಅವಳ ಮುಖದಲ್ಲಿರುವ ಕಾಠಿಣ್ಯ ದಿನೇದಿನೇ ಹಚ್ಚುತ್ತಿರುವಂತೆ ಭಾಸವಾಗುತ್ತದೆ.ಅವಳ ಪಕ್ಕದಲ್ಲಿ ಕಂಪ್ಯೂಟರಿನ ಮುಂದೆ ಕುಳಿತಾಗಲೂ ಮಾತಾಡಿಸಬೇಕು ಎಂಬ ಭಾವನೆಯ ಜೊತೆಗೇ ಕಾಲುಗಳು ನಡುಗುವಂತಾಗುತ್ತವೆ. ಎದುರಿಗಿಲ್ಲದಾಗ ಜನ್ಮ ಜನ್ಮಾಂತರದ ಗೆಳತಿಯಂತೆ ಕಾಣುವ ಪದ್ಮಿನಿ ಕಂಪ್ಯೂಟರಿನ ಮುಂದೆ ಕೂತು ಟೈಪ್ ಮಾಡುವಾಗ ಅಪರಿಚಿತೆಯಂತೆ ತೋರುತ್ತಿದ್ದಳು.ಒಮ್ಮೊಮ್ಮೆ ಅವನಿಗೆ ತಾವಿಬ್ಬರೂ ಮಾತಾಡುವುದನ್ನು ಬಿಟ್ಟು ತಿಂಗಳುಗಳೇ ಕಳೆದಿವೆ ಎನಿಸುತ್ತದೆ.ಬಹಳಷ್ಟು ದಿನ ಅವಳಿಗಿಂತ ಮುಂಚೆ ಎದ್ದು ಆ ಉಸಿರುಗಟ್ಟಿಸುವ ರೂಮಿನಿಂದ ಹೊರಗೆ ಬಂದುಬಿಡುತ್ತಾನೆ- ನಾಳೆ ಹೇಳಿದರಾಯಿತು ಎಂಬ ಭಾವದೊಂದಿಗೆ.ರಾತ್ರಿ ತಾರಸಿಯ ಮೇಲೆ ಕೂತು ಯೋಚಿಸುವಾಗ ಮಾತ್ರ ಪದ್ಮಿನಿ ವಾತ್ಸಲ್ಯಮಯಿಯಂತೆ ಬಂದು ಅವನನ್ನು ಸಮಾಧಾನಗೊಳಿಸಿ ತಲೆಗೂದಲು ಸವರುತ್ತಾ ನೀನಲ್ಲದೆ ನನಗಿನ್ನಾರಿದ್ದಾರೆ ಹೇಳು ಅಂದಂತಾಗಿ ಕಣ್ಣು ತುಂಬಾ ನೀರು ತುಂಬಿಕೊಳ್ಳುತ್ತಾನೆ.ಆಗೆಲ್ಲಾ ನಾಳೆ ಖಂಡಿತವಾಗಿಯೂ ಹೇಳಬಲ್ಲೆ ಅನಿಸಿ ಉತ್ಸಾಹಗೊಳ್ಳುತ್ತಾ ಕಣ್ಣೊರೆಸಿಕೊಳ್ಳುವನು.ಬೆಳಿಗ್ಗೆ ಮತ್ತದೇ ಕಥೆ. ಒಮ್ಮೊಮ್ಮೆ ಮಾತಾಡಿಸಲೂ ಆಗದೆ ಎದ್ದು ಬರಲೂ ಮನಸ್ಸೊಪ್ಪದೆ ಕಂಪ್ಯೂಟರ್ ರೂಮಿನಲ್ಲಿ ಹಿಂಸೆಪಡುತ್ತಿರುವಾಗ ಕುಮಾರ್ ಬಂದುಬಿಟ್ಟರೆ ನಿರಾಳವೆನಿಸುತ್ತಿತ್ತು ದತ್ತಾತ್ರೇಯನಿಗೆ.
ಇಂದೂ ಕೂಡ ಪದ್ಮಿನಿಯನ್ನು ಕ್ಷಮಿಸೆಂದು ಕೇಳುವ ಭಾವಶಕ್ತಿ ತನ್ನೊಳಗೆ ಒಡಮೂಡುತ್ತಿಲ್ಲದ್ದರಿಂದ ವ್ಯಾಕುಲಗೊಂಡು ನಿಯಾನ್ ದೀಪದಲ್ಲಿ ಬೆಳಗುತ್ತಿದ್ದ ವಿವಿಧ ಅಂಗಡಿಗಳ ಹೆಸರುಗಳನ್ನು ಗಮನಿಸುತ್ತಾ ದತ್ತಾತ್ರೇಯ ವರ್ಚುಯಲ್ ಸಿಸ್ಟಮ್ಸಿನ ಕಾರಿಡಾರಿನಲ್ಲಿ ನಿಂತಿರುವಾಗಲೇ ಇವನ ಕಷ್ಟವನ್ನು ನೋಡಲಾರೆನೆಂಬಂತೆ ಕರೆಂಟು ಹೋಗಿ ಕತ್ತಲೆ ಆವರಿಸಿಕೊಂಡಿತು. ಮನೆಗೆ ಹೋಗಲು ನಿರ್ಧರಿಸಿದ ದತ್ತಾತ್ರೇಯ ರೂಮಿನೊಳಗಿದ್ದ ತನ್ನ ನೋಟ್ ಪುಸ್ತಕವನ್ನು ತರಲೆಂದು ಕಂಪ್ಯೂಟರ್ ರೂಮಿನೆಡೆಗೆ ನಡೆದ.ಬಾಗಿಲ ಬಳಿಯಲ್ಲಿ ನಿಂತವನಿಗೆ ಪದ್ಮಿನಿ ಕ್ಯಾಂಡಲ್‌ಗಾಗಿ ಯಾವುದೋ ಡ್ರಾದಲ್ಲಿ ಹುಡುಕುತ್ತಿರುವುದು ಮಸುಕಾಗಿ ಕಂಡಿತು. ಯಾವುದೋ ಅಂತಃಪ್ರೇರಣೆಯಿಂದ ದತ್ತಾತ್ರೇಯ `ಕ್ಯಾಂಡಲ್ ಆ ಕಪಾಟಿನಲ್ಲಿದೆ' ಎಂದುಬಿಟ್ಟ. ಮತ್ತು ತಾನು ಮಾತಾಡಿದ್ದು ಪದ್ಮಿನಿಯೊಂದಿಗೆ ಎಂದು ತಾನೇ ಅಚ್ಚರಿಗೊಂಡ.
ಪದ್ಮಿನಿ ಮೆಲುದನಿಯಲ್ಲಿ `ಹೌದಾ? ನಾನು ಈ ಡ್ರಾದಲ್ಲಿರಬೋದು ಅಂದುಕೊಂಡೆ' ಅಂದಳು.ಒಬ್ಬರ ಮುಖ ಮತ್ತೊಬ್ಬರಿಗೆ ಕಾಣುವಂತಿರಲಿಲ್ಲ. ಅವಳು `ಮ್ಯಾಚ್ ಬಾಕ್ಸ್ ಎಲ್ಲಿದೆ ಗೊತ್ತಾ 'ಎಂದಳು. ಒಂದು ಕ್ಷಣ ಮೌನವಾಗಿದ್ದ ದತ್ತಾತ್ರೇಯ ಮೆಲ್ಲಗೆ `ಪದ್ಮಿನಿ' ಎಂದ. ಅವಳು ಏನು ಎಂದು ಕೇಳದೆ ನಿಧಾನವಾಗಿ ಅವನೆಡೆಗೆ ನಡೆದುಬಂದಳು. `ಪದ್ಮಿನಿ ನನ್ನ ಕ್ಷಮಿಸಿಬಿಡು' ಎನ್ನುವಾಗ ಅವನ ಧ್ವನಿ ಕಂಪಿಸುತ್ತಿತ್ತು. ಅವಳು ಇದ್ದಕ್ಕಿದ್ದಂತೆ ಬಿಕ್ಕಿಬಿಕ್ಕಿ ಅಳತೊಡಗಿದಳು. ಇವನು `ಪದ್ಮಿನಿ...ಪದ್ಮಿನಿ... ಏ ಪದ್ಮಿನಿ' ಅಂತ ಅವಳ ಮುಖವನ್ನು ತನ್ನ ಬೊಗಸೆಯಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಿ ಕತ್ತಲಿನಿಂದಾಗಿ ಮೂಗು, ತುಟಿಗಳನ್ನು ನೇವರಿಸಿದ. ಅವಳ ಕೆನ್ನೆಗಳ ಮೇಲೆ ಹರಿಯುತ್ತಿದ್ದ ನೀರನ್ನು ಅವನು ಬೆರಳಿನಿಂದ ಒರೆಸುವಾಗ ಅವಳಿಗೆ ತಡೆಯಲಾಗದೆ ಅವನ ಎದೆಗೆ ತಲೆಯೊತ್ತಿ ಮತ್ಷ್ಟು ಜೋರಾಗಿ ಅಳತೊಡಗಿದಳು,ಯಾರಾದರೂ ಬಂದಾರು ಎಂಬ ಪರಿವೆಯಿಲ್ಲದೆ.ಅವನು ಅವಳನ್ನು ಸಮಾಧಾನಪಡಿಸುವಂತೆ ಅವಳ ತಲೆಗೂದಲಲ್ಲಿ ಒಂದು ಮುತ್ತಿಟ್ಟ.ಅವಳು ಅವನ ಷರಟಿನ ಮೇಲಿನಿಂದ ಎದೆಗೊಂದು ಮುತ್ತಿಟ್ಟಳು.ಸ್ವಲ್ಪ ಹೊತ್ತಿನ ನಿಶ್ಯಬ್ದದ ನಂತರ ಅವಳು `ನಾನು ಅವತ್ತು ಅಷ್ಟೊಂದು ಕೋಪಿಸಿಕೊಂಡು ಏನೇನೋ ಅಂದುಬಿಟ್ಟೆ' ಎಂದಾಗ ಅವನು ` ಇಲ್ಲ, ಅಂಥಾ ಉಡುಗೊರೆ ಕೊಟ್ಟದ್ದು ನಂದೇ ತಪ್ಪು ' ಎಂದ.
ಈಗ ಇಬ್ಬರೂ ಸಾಧಾರಣವಾಗಿ ಮಾತಾಡುವ ಹಂತ ತಲುಪಿದ್ದರು.ಅವನು ಕೇಳಿದ :`ಅದನ್ನು ಅಲ್ಲೇ ಪಾರ್ಕಿನಲ್ಲೇ ಎಸೆದು ಬಿಟ್ಟೆಯಾ?' ಅವಳು `ಇಲ್ಲ' ಎಂದಳು. ಅವನಿಗೆ ಅದನ್ನು ಕೊಂಡುಕೊಳ್ಳುವ ದಿನ ತಾನು ಪಟ್ಟ ಪಾಡೆಲ್ಲಾ ನೆನಪಾಗಿ ಥಟ್ಟನೇ ಏನೋ ಹೊಳೆದು `ಸೈಜು ಸರಿಯಾಗುತ್ತಾ ' ಅಂದುಬಿಟ್ಟ. `ಸ್ವಲ್ಪ ಟೈಟು' ಎಂದ ಪದ್ಮಿನಿ ತಕ್ಷಣ ನಾಲಿಗೆ ಕಚ್ಚಿಕೊಂಡಳು. ಅವನಿಗೆ ನಗು ಬಂದು ನಾಚಿ ಕೆಂಪಗಾಗಿರಬಹುದಾದ ಅವಳ ಮುಖವನ್ನು ಕಲ್ಪಿಸಿಕೊಳ್ಳುತ್ತಾ ಜೋರಾಗಿ ನಕ್ಕುಬಿಟ್ಟ. ಪದ್ಮಿನಿಯೂ ನಕ್ಕಳು.
ಕತ್ತಲೆಯಿನ್ನೂ ಮುಂದುವರೆದಿತ್ತು.

Subscribe to:
Posts (Atom)