Wednesday, September 26, 2007

ಗಂಗೂಲಿ-ಒಂದು ರೀಪ್ಲೆ (ಪುಸ್ತಕ ವಿಮರ್ಶೆ)


ಸೌರವ್ ಗಂಗೂಲಿ ಕಳೆದ ೧೫ ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವುದರಿಂದ, ಆತನನ್ನು ಹಿಂಬಾಲಿಸುತ್ತಾ ಹೋಗುವ ಲೇಖಕರ ನೆನಪುಗಳು ಸಹಜವಾಗೇ ಆ ಅವಧಿಯ ಭಾರತ ಕ್ರಿಕೆಟ್‌ನ ಮೆಲುಕೂ ಆಗುತ್ತದೆ. ಹಾಗಾಗಿ ಓದುತ್ತಿರುವವರಿಗೆ ಒಂದು ರೀತಿಯ ನಾಸ್ಟಾಲ್ಜಿಯಾ ಅನುಭವಕ್ಕೆ ಬಾರದಿರುವುದಿಲ್ಲ.

*ಇಡೀ ಜಗತ್ತು ಸಚಿನ್ ತೆಂಡೂಲ್ಕರ್ ಎಂಬ ದೇವತೆಯ ಆರಾಧನೆಯಲ್ಲಿ ಪರವಶವಾಗಿದ್ದ ಸಮಯವದು. ಆಟದ ಜತೆಗೆೆ ತನ್ನ ಮಾತು, ವಿನಯಗಳಿಂದಲೂ ಆತ ಪ್ರೇಕ್ಷಕರು ಮತ್ತು ಎದುರಾಳಿಗಳ ಮನವನ್ನು ಸಮಾನವಾಗಿ ಗೆಲ್ಲುತ್ತಾ ಸಾಗಿದ್ದ. ಅಂಥ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡ ಪ್ರವೇಶಿಸುವ ಯಾವುದೇ ಬ್ಯಾಟ್ಸ್‌ಮನ್‌ಗೆ ತನ್ನ ಕನಸನ್ನು ಕಿರಿದಾಗಿಸಿಕೊಳ್ಳುವ ಅನಿವಾರ್ಯತೆ ಇತ್ತು. ಹಠ, ಛಲ, ಸ್ವಾಭಿಮಾನಗಳೇ ತುಂಬಿದ್ದ ಸೌರವ್ ಗಂಗೂಲಿ ಎಂಬ ಹುಡುಗನಿಗಂತೂ ಅದು ತೀರಾ ಕಷ್ಟದ ಪರಿಸ್ಥಿತಿಯಾಗಿತ್ತು.`ನಾನು ರಾಮು ಅಲ್ಲ, ಮಹಾರಾಜ'. ಆಸ್ಟ್ರೇಲಿಯಾ ಪ್ರವಾಸದಲ್ಲಿ ಒಂದು ತಿಂಗಳು ಕಳೆದರೂ ಆಡುವ ಅವಕಾಶ ಸಿಗದ ಹತಾಶೆಯಲ್ಲಿದ್ದ ಗಂಗೂಲಿ, ಡ್ರಿಂಕ್ಸ್ ಟ್ರಾಲಿಯ ಜತೆ ಮೈದಾನದೊಳಗೆ ಹೋಗು ಎಂದವರಿಗೆ ಕೊಟ್ಟನೆನ್ನಲಾದ ಈ ಉತ್ತರದಿಂದ ಶುರುವಾಗುತ್ತದೆ, ಒಂದು ಯಶೋಗಾಥೆ. ತಾನು ಹಾಗೆನ್ನಲಿಲ್ಲ ಎಂದು ಹೇಳಿದರೂ ಗಂಗೂಲಿಗೆ ನಾಲ್ಕು ವರ್ಷಗಳ `ಕಠಿಣ ಶಿಕ್ಷೆ' ವಿಧಿಸಲಾಗುತ್ತದೆ. ಆ ಅಜ್ಞಾತವಾಸದಿಂದ ಕಳೆದ ವರ್ಷ ಅನುಭವಿಸಿದ ಮತ್ತೊಂದು ಅಜ್ಞಾತವಾಸ ಮತ್ತು ಬಳಿಕದ ವಿರೋಚಿತ ಪುನರಾಗಮನದ ಕತೆಯನ್ನು `ಸೌರವ್ ಗಂಗೂಲಿ-ದ ಮಹಾರಾಜ ಆಫ್ ಕ್ರಿಕೆಟ್' ಪುಸ್ತಕ ವಿಷದವಾಗಿ ಹೇಳುತ್ತದೆ.ಕೋಲ್ಕತಾದ ಆಜ್‌ಕಲ್ ಪತ್ರಿಕೆಯಲ್ಲಿ ಕಳೆದ ೨೬ ವರ್ಷಗಳಿಂದ ಕ್ರಿಕೆಟ್ ವರದಿಗಾರರಾಗಿರುವ ದೇಬಸಿಸ್ ದತ್ತಾ ಬರೆದಿರುವ ಈ ಪುಸ್ತಕ ಗಂಗೂಲಿಯ ಜೀವನ ಚರಿತ್ರೆ ಖಂಡಿತಾ ಅಲ್ಲ. ಗಂಗೂಲಿಯ ಆಟವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವ ಪ್ರಯತ್ನದಂತೆಯೂ ಇದು ಕಾಣುವುದಿಲ್ಲ. ಆತನ ಖಾಸಗಿ ಬದುಕಿನ ವಿಶೇಷ ವಿವರಗಳನ್ನೂ ಇದು ಕೊಡುವುದಿಲ್ಲ. ಕಟ್ಟಾ ಅಭಿಮಾನಿಯೊಬ್ಬ ಉತ್ಕಂಠಿತವಾಗಿ ಬರೆದ ಸಾಲುಗಳಿವು ಅಷ್ಟೆ. ಹಾಗಾಗೇ ಸೌರವ್ ಅಭಿಮಾನಿಗಳಿಗೆ ಇದರ ಓದು ಖುಷಿ ಕೊಡುತ್ತದೆ. ಎಲ್ಲ ಅಡ್ಡಿ ಹಾಗೂ ಸಂಚುಗಳನ್ನು ಮೆಟ್ಟಿ ಬಂಗಾಳಿ ಹುಡುಗನೊಬ್ಬ ಭಾರತ ಕ್ರಿಕೆಟ್ ತಂಡದ ಯಶಸ್ವಿ ಕ್ಯಾಪ್ಟನ್ ಆದದ್ದು ಹೇಗೆ ಎಂಬುದನ್ನು ದತ್ತಾ ಇಲ್ಲಿ ವಿವರಿಸುತ್ತಾರೆ. ೧೯೯೬ರ ಇಂಗ್ಲೆಂಡ್ ಪ್ರವಾಸಕ್ಕೆ ಗಂಗೂಲಿ `ಕೊಂಚ ಬ್ಯಾಟ್ ಮಾಡಬಲ್ಲ ಐದನೇ ಬೌಲರ್' ಆಗಿ ಆಯ್ಕೆಯಾಗಿದ್ದು, ಗಂಗೂಲಿ ಬೇಡ ಎಂದು ಆಗಿನ ನಾಯಕ ಅಜರ್ ಮತ್ತು ಕೋಚ್ ಸಂದೀಪ್ ಪಾಟೀಲ್ ಹಠ ಹಿಡಿದದ್ದು, ಜಗಳ ಮಾಡಿಕೊಂಡು ಹಠಾತ್ತನೆ ಭಾರತಕ್ಕೆ ಮರಳಿದ ಸಿಧು ಜಾಗದಲ್ಲಿ ಕಣಕ್ಕಿಳಿದ ಗಂಗೂಲಿ ಲಾರ್ಡ್ಸ್‌ನಲ್ಲಿ ಸೆಂಚುರಿ ಹೊಡೆದದ್ದು, ಆಗ ಅದೇ ಅಜರ್ ಖುಷಿಯಾಗಿ ತನ್ನ ರಿಸ್ಟ್ ವಾಚನ್ನು ಗಂಗೂಲಿಗೆ ಉಡುಗೊರೆಯಾಗಿ ನೀಡಿದ್ದು, `ಆರಂಭದಲ್ಲಿ ನಾವ್ಯಾರೂ ಗಂಗೂಲಿಯ ಪ್ರತಿಭೆಯನ್ನು ಸರಿಯಾಗಿ ಗುರುತಿಸಲಿಲ್ಲ' ಎಂದು ಮತ್ಯಾವಾಗಲೋ ಅಜರ್ ಪ್ರಾಂಜಲವಾಗಿ ಒಪ್ಪಿಕೊಂಡಿದ್ದು, ಶುರುವಿನಲ್ಲಿ ಗವಾಸ್ಕರ್ ಗಂಗೂಲಿಗೆ ಪ್ರಾಯೋಜಕರನ್ನು ಹುಡುಕಿಕೊಟ್ಟಿದ್ದು, ಸತತ ೧೫ ಪಂದ್ಯಗಳನ್ನು ಗೆದ್ದ ಹಮ್ಮಿನಲ್ಲಿ ಭಾರತಕ್ಕೆ ಬಂದ ಆಸ್ಟ್ರೇಲಿಯಾ ತಂಡದವರಿಗೆ `ಸಂಖ್ಯೆ ೧೬, ೧೭, ೧೮ಗಳನ್ನು ಅವರು ಮರೆಯುವುದೊಳ್ಳೆಯದು' ಎಂದು ಸಂದರ್ಶನವೊಂದರಲ್ಲಿ ಗಂಗೂಲಿ ಹೇಳಿದ್ದು- ಇಂಥ ಕೆಲವು ಗೊತ್ತಿರದ ಅಥವಾ ಮರೆತುಹೋದ ಸಂಗತಿಗಳು ಪುಸ್ತಕದಲ್ಲಿ ಅಲ್ಲಲ್ಲಿ ಬರುತ್ತವೆ. ಆದರೆ ಪುಸ್ತಕದಲ್ಲಿ ಇಂಥ ಮನ ಬೆಳಗುವ ವಿವರಗಳ ಸಂಖ್ಯೆ ಹೆಚ್ಚಿಲ್ಲ ಎಂಬುದು ಬೇಸರದ ವಿಷಯ.ಸೌರವ್ ಗಂಗೂಲಿ ಕಳೆದ ೧೫ ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವುದರಿಂದ, ಆತನನ್ನು ಹಿಂಬಾಲಿಸುತ್ತಾ ಹೋಗುವ ಲೇಖಕರ ನೆನಪುಗಳು ಸಹಜವಾಗೇ ಆ ಅವಧಿಯಲ್ಲಿ ಭಾರತ ಕ್ರಿಕೆಟ್‌ನಲ್ಲಿ ನಡೆದ ಪ್ರಮುಖ ಘಟನಾವಳಿಗಳ ಮೆಲುಕೂ ಆಗುತ್ತವೆ. ಹಾಗಾಗಿ ಓದುತ್ತಿರುವವರಿಗೆ ಒಂದು ರೀತಿಯ ನಾಸ್ಟಾಲ್ಜಿಯಾ ಅನುಭವಕ್ಕೆ ಬಾರದಿರುವುದಿಲ್ಲ. ಪುಸ್ತಕಕ್ಕೆ ಮುನ್ನುಡಿ ಬರೆದಿರುವುದು ಗಂಗೂಲಿಯನ್ನು ಬಹುವಾಗಿ ಮೆಚ್ಚುವ ಮಾಜಿ ಕ್ರಿಕೆಟಿಗ, ಹಾಲಿ ವೀಕ್ಷಕ ವಿವರಣೆಗಾರ ಜೆಫ್ರಿ ಬಾಯ್ಕಾಟ್. `ನನ್ನ ಇಷ್ಟು ವರ್ಷಗಳ ಜೀವನದಲ್ಲಿ ಸೌರವ್‌ನಷ್ಟು ಚೆನ್ನಾಗಿ ಬಾಲನ್ನು ಟೈಮ್ ಮಾಡಬಲ್ಲ ಬ್ಯಾಟ್ಸ್‌ಮನ್‌ನನ್ನ ನೋಡೇ ಇಲ್ಲ' ಎಂದು ಹೇಳುವ ಅವರು `ಭಾರತ ತಂಡಕ್ಕೆ ಒಂದು ನಿರ್ದಿಷ್ಟ ದಿಕ್ಕು ತೋರಿದ್ದು ಗಂಗೂಲಿ' ಎಂಬುದನ್ನು ಸರಿಯಾಗಿ ಗುರುತಿಸಿದ್ದಾರೆ. ಪುಸ್ತಕ ಬರೆಯಲು ತಮ್ಮ ವೃತ್ತಿ ಜೀವನದ ನೆನಪುಗಳನ್ನೇ ಹೆಚ್ಚಾಗಿ ಆಶ್ರಯಿಸಿರುವ ದತ್ತಾ, ಇದಕ್ಕಾಗಿಯೇ ಸೌರವ್‌ನನ್ನು ವಿಶೇಷವಾಗಿ ಮಾತನಾಡಿಸಿದಂತೆ ಕಾಣುವುದಿಲ್ಲ. ಸೌರವ್ ಕುರಿತು ಇತರ ಹಿರಿಯ ಕ್ರಿಕೆಟರುಗಳಾಗಲಿ, ಕ್ರಿಕೆಟ್ ಪಂಡಿತರಾಗಲಿ ಏನೆನ್ನುತ್ತಾರೆ ಎಂದೂ ಅವರು ತಲೆಕೆಡಿಸಿಕೊಳ್ಳಲು ಹೋಗಿಲ್ಲ. ಹಲವೆಡೆ ಗಂಗೂಲಿ ಕೇವಲ ಬಂಗಾಳಿಗಳ ಆಸ್ತಿ ಎಂಬಂತೆ ಬರೆಯುವ ಅವರು, ಈ ಪುಸ್ತಕ ಬಂಗಾಳಿಗಳಿಗೆ ಸ್ಫೂರ್ತಿಯಾಗಲಿ ಎಂದೂ ಆಶಿಸುತ್ತಾರೆ. ಒಂದು ಟೂರ್ನಿಮೆಂಟಿನ ಬಗ್ಗೆ ಮಾತಾಡುತ್ತಾ ಆದರ ಪ್ರತಿ ಪಂದ್ಯದಲ್ಲೂ ಏನಾಯಿತು, ಯಾರು ಗೆದ್ದರು ಎಂದು ಬರೆಯುವುದು ಬೋರು ಹೊಡೆಸುತ್ತದೆ. ನೀವು ನಿರೀಕ್ಷಿಸುವಂತೆ ಗಂಗೂಲಿ ಚಾಪೆಲ್ ಜಗಳದ ಬಗ್ಗೆ ಹೊಸ ವಿವರಗಳಿರಲಿ, ಆ ವಿಷಯವನ್ನು ಸರಿಯಾಗಿ ಪ್ರಸ್ತಾಪಿಸುವುದೂ ಇಲ್ಲ ದತ್ತಾ. ಒಂದು ರೀತಿಯಲ್ಲಿ ಯಾವ ವಿವಾದಗಳಿಗೂ ಎಡೆಯಿಲ್ಲದೆ ಸುಮ್ಮನೆ ಗಂಗೂಲಿಯ ಗುಣಗಾನವನ್ನಷ್ಟೇ ಮಾಡುವ ಪ್ರಯತ್ನವಿದು.ಸಚಿನ್ ಬಾಲ್ಯದ ಫೋಟೊವನ್ನು ನೋಡಿ ಬೋರಾಗಿದ್ದರೆ ಇಲ್ಲಿ ನೀವು ಬಾಲಕ ಗಂಗೂಲಿಯ ಮೂರ್ನಾಲ್ಕು ಚಿತ್ರಗಳನ್ನು ನೋಡಿ ಆನಂದಿಸಬಹುದು. ಅವನ್ನು ಬಿಟ್ಟರೆ ಇಲ್ಲಿರುವ ಉಳಿದೆಲ್ಲ ಫೋಟೊಗಳನ್ನು ನೀವು ಈ ಮೊದಲೆ ಪತ್ರಿಕೆಗಳಲ್ಲಿ ನೋಡಿರುತ್ತೀರಿ. ಸುಂದರ ಮುದ್ರಣ ಇದ್ದರೂ, ಒಳಪುಟಗಳ ವಿನ್ಯಾಸದಲ್ಲಿ ಅಂಥ ವಿಶೇಷವೇನೂ ಇಲ್ಲ. ಕಡೆಯ ೧೮ ಪುಟಗಳಲ್ಲಿ ಗಂಗೂಲಿಯ ಬ್ಯಾಟಿಂಗ್ ಅಂಕಿ ಅಂಶಗಳಿವೆ.ಒಟ್ಟಿನಲ್ಲಿ ಕೊಂಡುಕೊಳ್ಳಲೇಬೇಕಾದ ಪುಸ್ತಕ ಅಲ್ಲ, ಯಾರದಾದರೂ ಟೇಬಲ್ ಮೇಲೆ ಕಂಡರೆ ತಪ್ಪದೆ ಒಮ್ಮೆ ತಿರುವಿಹಾಕಿ.

5 comments:

Keshav Kulkarni said...

Thanks for the review. I will not read the book

Keshav
www.kannada-nudi.blogspot.com

Anonymous said...

good layout and presentation....

sreeja

CresceNet said...

Oi, achei seu blog pelo google está bem interessante gostei desse post. Gostaria de falar sobre o CresceNet. O CresceNet é um provedor de internet discada que remunera seus usuários pelo tempo conectado. Exatamente isso que você leu, estão pagando para você conectar. O provedor paga 20 centavos por hora de conexão discada com ligação local para mais de 2100 cidades do Brasil. O CresceNet tem um acelerador de conexão, que deixa sua conexão até 10 vezes mais rápida. Quem utiliza banda larga pode lucrar também, basta se cadastrar no CresceNet e quando for dormir conectar por discada, é possível pagar a ADSL só com o dinheiro da discada. Nos horários de minuto único o gasto com telefone é mínimo e a remuneração do CresceNet generosa. Se você quiser linkar o Cresce.Net(www.provedorcrescenet.com) no seu blog eu ficaria agradecido, até mais e sucesso. (If he will be possible add the CresceNet(www.provedorcrescenet.com) in your blogroll I thankful, bye friend).

Anonymous said...

ಕುಡಿದವರ ಬಗ್ಗೆ
ಕುಡಿಯದವರು ಬರೆಯಬಾರದು
ಕವಿತೆ

ಮದ್ಯ
ಕುಡಿಯುವುದೇ
ಒಂದು
ಸೊಗಸಾದ ಪದ್ಯ

ಮೊದಲ ಪೆಗ್ಗಿಗೆ
ಪಲ್ಲವಿ
ಆಮೇಲೆ ಚರಣ

ಬಾರಿನೊಳಗೆ
ಗಂಗಾವತರಣ
ಇಳಿದು ಬಾ ತಾಯೇ ಇಳಿದು
ಬಾ ವರಣ
ನಿದಿರೆ ಬರುವನಕ
ಮದಿರೆ
ಕನಸಲ್ಲು ಕವಿತೆಯ
ಧ್ಯಾನ
ರಾತ್ರಿಯೂ ಮದ್ಯಾಹ್ನ

ವಿಸ್ಕಿ ವಿಪರೀತ
ರಿಸ್ಕು
ರಮ್ಮು ಘಮಘಮ್ಮುಟ
ಬಿಯರು ನೀರಾ
ವರಿ
ಜಿನ್ನು ವರ್ಜಿನ್ನು
ಮಾತಿನ ತುಂಬ
ಕಾಕ್-ಟೇಲು

ಬೆರೆಸಿದರೆ ನೋಡಾ
ನೊರೆಗರೆವ ಸೋಡಾ
ಕಿಕ್ಕೇರಿ
ನರಸಿಂಹಸ್ವಾಮಿ
ಅಡಿಗ
ಎಕ್ಕುಂಡಿ
ಮೆರವಣಿಗೆ

ಕುಡಿಯದವರು
ಬರೆಯಬಾರದು
ಕವಿತೆ..

ಕೇಳು ಜನಮೇಜಯ
ಧರಿತ್ರೀ ಪಾಲ
ಕೊಡದೇ ಹೋದರೆ
ಹೋಯ್ತು ಕತ್ತೆ ಬಾಲ
-ಜೋಗಿ

apara said...

ಜೋಗಿ,ಚೆನ್ನಾಗಿದೆ ನಿಮ್ಮ ಪದ್ಯ...
-ಅಪಾರ

~~~~~~ಮೀ ನ ಹೆ ಜ್ಜೆ