Tuesday, September 25, 2007

ಕಾಮೆಂಟ್‌ ರೀ ಎಂಬ ಕಾಲಮ್ಮು ರೀ

ಡಿಸ್‌ಕ್ಲೈಮರ್: ಟೈಮ್‌ಪಾಸ್‌ ಈ ಬರೆಹಗಳ ಪರಮ ಮತ್ತು ಏಕೈಕ ಉದ್ದೇಶ. ಪ್ರಚಲಿತ ಸುದ್ದಿಗಳನ್ನು ಕೊಂಕಿನಿಂದ ನೋಡುವುದು ಇಲ್ಲಿನ ಯತ್ನ. ಮಾಡಲು ಇನ್ನೇನೂ ಒಗೆತನವಿಲ್ಲದಿದ್ದರೆ ಮಾತ್ರ ಇವನ್ನು ಓದಬಹುದು. ವಿಜಯ ಕರ್ನಾಟಕದಲ್ಲಿ ಕೆಲವಾರಗಳಿಂದ ಪ್ರತಿ ಭಾನುವಾರ ಕಾಮೆಂಟ್‌ ರೀ ಎಂಬ ಹೆಸರಿನ ಅಂಕಣದ ರೂಪದಲ್ಲಿ ಇವು ಪ್ರಕಟವಾಗುತ್ತಿವೆ. ನೋ ಕಮೆಂಟ್ಸ್ ಎನ್ನದೆ ಏನೆನಿಸಿತೆಂದು ಹೇಳಿ.

*
ಮೊನ್ನೆ ಟ್ವೆಂಟಿ ಟ್ವೆಂಟಿ ಪಂದ್ಯವೊಂದು ನಡೀತಿತ್ತು. ಬ್ಯಾಟ್ಸ್‌ಮನ್ ಸತತ ಎರಡು ಬಾಲ್‌ನಲ್ಲಿ ರನ್ ತೆಗೆಯಲಿಲ್ಲ. ನೋಡುತ್ತಿದ್ದವರೊಬ್ಬರು ಬೇಸರದಿಂದ ಉದ್ಗರಿಸಿದರು: ‘ಇವನು ಒನ್‌ಡೇ ಮ್ಯಾಚ್ ಅಂದ್ಕೊಂಡಿದಾನೇನು?’! ಕ್ರಿಕೆಟ್‌ನ ಅತಿಚಿಕ್ಕ ನಮೂನೆಯಾದ ಟಿ ಟ್ವೆಂಟಿ ನಮ್ಮೊಳಗೆ ಇಳಿಯುತ್ತಿರುವುದು ಹೀಗೆ. ದೈನಿಕ ಧಾರಾವಾಹಿಗಳ ಈ ಕಾಲದಲ್ಲಿ ವಾರವಿಡೀ ಕಾದು ಅರ್ಧ ಗಂಟೆಯ ಧಾರಾವಾಹಿ ನೋಡುವ ತಾಳ್ಮೆ ಯಾರಿಗೂ ಇಲ್ಲ. ಕಲೆಗಿಂತ ಕಾಲ ಮುಖ್ಯ ನಮಗೀಗ. ಎಲ್ಲವೂ ಸಟಸಟ ಆಗಬೇಕು. ಫಲವಾಗಿ ಈ ವರ್ಲ್ಡ್ ಕಪ್‌ನಲ್ಲಿ ೨೫೦ಕ್ಕೂ ಹೆಚ್ಚು ಸಿಕ್ಸರ್‌ಗಳು ಬಂದವು. ಓವರಿಗೆ ೯ರಂತೆ ರನ್‌ಗಳು ಬೇಕಿದ್ದರೆ ಈಗದು ಈಸಿಯಾಗಿ ಹೊಡೆಯಬಹುದಾದ ಸ್ಕೋರು! ಸೌತ್ ಆಫ್ರಿಕಾದ ಮಾಜಿ ಬೌಲರ್ ಡೊನಾಲ್ಡ್ ಈ ಪ್ರಕಾರದ ಬಗ್ಗೆ ಒಮ್ಮೆ ಹೇಳಿದ್ದ ಮಾತನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳಬಹುದು: ‘ಇದೇನಿದ್ದರೂ ಬ್ಯಾಟ್ಸ್‌ಮನ್‌ಗಳ ಆಟ. ಬೌಲರ್ಗಳಿಗೆ ಥ್ಯಾಂಕ್ಸ್ ಫಾರ್ ಕಮಿಂಗ್ ಅಂತ ಹೇಳಬೇಕಷ್ಟೆ!’

*
‘ಕೊಲ್ಲು ಹುಡುಗಿ ಒಮ್ಮೆ ನನ್ನ, ಹಾಗೇ ಸುಮ್ಮನೆ’ ಅಂತ ಬರೆದಿದ್ದ ಜಯಂತ್ ಕಾಯ್ಕಿಣಿ ‘ಮಿಲನ’ ಚಿತ್ರಕ್ಕೆ ಬರೆದಿರುವ ಹಾಡೊಂದರಲ್ಲಿ ‘ನಿಂತಲ್ಲೇ ಹಾಳಾದೆ ನಿನ್ನಿಂದಲೇ’ ಎಂಬ ಸಾಲಿದೆ. ಹಿಂದಿ ಸಿನಿಮಾದ ಇಷ್ಕಿನಲ್ಲಿ ‘ಮಾರ್ ಡಾಲ್‌ನಾ’ ಹಾಗೂ ‘ಬರ್‌ಬಾದ್ ಹೋನಾ’ಗಳು ಮೊದಲಿನಿಂದ ಇದ್ದಂಥ ಅಭಿವ್ಯಕ್ತಿಗಳೇ ಆದರೂ ಅವು ಜಯಂತರ ಕನ್ನಡದಲ್ಲಿ ಹೊಸದಾಗೇ ಕೇಳಿಸುತ್ತವೆ. ‘ಮೂಡಣದ ಕುಂಕುಮದಂಗಡಿ ಹೊಸಾ ದಿನ’, ‘ಕಣ್ಣು ತೆರೆದು ಕಾಣುವ ಕನಸೇ ಜೀವನ’, ‘ಸಾವಿರ ಕಣ್ಣಿನ ನವಿಲಾಗಿ ಕಾದಿದೆ ಸಮಯವು ನಿನಗಾಗಿ’, ‘ಸಂತೆಯ ವೇಷಕೆ ಉಂಟೆ ಕೊನೆ, ಸಂಜೆಗೆ ಮರಳಲು ಎಲ್ಲಿ ಮನೆ’ ಎಂಬಂಥ ಸಾಲುಗಳು ಚಿತ್ರಗೀತೆಗಳಲ್ಲಿ ಕೇಳಿಸುತ್ತಿರುವುದು ನಿಜಕ್ಕೂ ಹಿತವಾದ ಸಂಗತಿ.
*
ಸೇತುವೆ ಕಟ್ಟಿದ ರಾಮನನ್ನು ಯಾವ ಇಂಜಿಯರಿಂಗ್ ಕಾಲೇಜಲ್ಲಿ ಓದಿದ ಎಂದು ಪ್ರಶ್ನಿಸಿದ್ದಾರೆ ಕರುಣಾನಿಧಿ. ಶಿವನೇನಾದರೂ ವಿವಾದದಲ್ಲಿ ಸಿಲುಕಿದ್ದರೆ ಅವನು ಯಾವ ಮೆಡಿಕಲ್ ಕಾಲೇಜಲ್ಲಿ ಓದಿದ ಎಂದು ಅವರು ಕೇಳುತ್ತಿದ್ದರೇನೊ ಎಂಬುದು ಸೋಸಿಲಿಯ ಊಹೆ. ಯಾಕೆ ಹೇಳಿ? ಆನೆಯ ತಲೆಯನ್ನು ಗಣಪತಿ ದೇಹಕ್ಕೆ ಸೇರಿಸಿದ್ದು ಡಾಕ್ಟರ್ ಶಿವನಲ್ಲವೆ!
*
ಜಗತ್ತೇ ಡಿಜಿಟಲ್ ಕ್ಯಾಮರ ಕ್ರಾಂತಿಯಲ್ಲಿ ಮೀಯುತ್ತಿರುವಾಗ, ಉತ್ತರಪ್ರದೇಶದ ದಾರುಲ್ ಉಲೇಮಾ ಫೋಟೋಗ್ರಫಿ ಧರ್ಮಬಾಹಿರ ಎಂದು ಫತ್ವಾ ಹೊರಡಿಸಿದ ಸುದ್ದಿ ಬಂದಿದೆ (ಇದೂ ಒಂಥರಾ ‘ಫ್ಲಾಶ್’ ನ್ಯೂಸ್ ಅಲ್ಲವೆ?). ಅವರ ಪ್ರಕಾರ ಫೋಟೊ ತೆಗೆಯುವುದು ಮತ್ತು ಅದಕ್ಕೆ ಪೋಸು ನೀಡುವುದು ಎರಡೂ ಪಾಪವಂತೆ. ಫತ್ವಾ ಉಲ್ಲಂಘಿಸಿ ಕ್ಯಾಮರಾ ಕ್ಲಿಕ್ಕಿಸಿದವರನ್ನು ‘ಫೋಟೋ ಕಾಯ್ದೆ’ ಅಡಿ ಬಂಧಿಸಲಾಗುವುದೆ ಅನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ. ಇಷ್ಟು ದಿನ ಫೋಟೊ ಮಾತ್ರ ಹೊಡೆಯುತ್ತಿದ್ದರು, ಇನ್ನುಮೇಲೆ ಫೋಟೋಗ್ರಾಫರನ್ನೂ ಹೊಡೆಯಬಹುದೇನೋ ಎಂಬುದು ಮಿಸ್ ಸೋಸಿಲಿಯ ಅನುಮಾನ.
*
ಇತ್ತೀಚಿಗೆ ಅತ್ಯಂತ ಹೆಚ್ಚು ಚರ್ಚೆಗೊಳಗಾಗುತ್ತಿರುವುದು ಯಾರ ಉಡುಪು ಹೇಳಬಲ್ಲಿರಾ? ಬಿಪಾಶಾ ಬಸುನೂ ಅಲ್ಲ, ಮಲ್ಲಿಕಾ ಶೆರಾವತ್‌ನೂ ಅಲ್ಲ. ಪಾಕ್ ಅಧ್ಯಕ್ಷ ಮುಷರ್ರಫ್‌ದು. ಅವರು ಚುನಾವಣೆಗೆ ಮುನ್ನ ಸಮವಸ್ತ್ರ ತೊರೆಯುತ್ತಾರೋ ಇಲ್ಲವೋ ಎಂಬ ಕುರಿತು ದಿನವೂ ಪತ್ರಿಕೆಗಳಲ್ಲಿ ಸುದ್ದಿಗಳನ್ನು ಓದುತ್ತಿದ್ದೇವೆ. ‘ಸಮವಸ್ತ್ರ ಇದ್ದರೂ, ಇರದಿದ್ದರೂ ಮುಷರ್ರಫ್ ನನಗೆ ಒಪ್ಪಿಗೆ ಇಲ್ಲ’ ಎಂದು ನವಾಜ್ ಷರೀಫ್ ಹೇಳಿದ್ದರೆ, ಕಣಕ್ಕಿಳಿಯುವ ಮೊದಲು ಸಮವಸ್ತ್ರ ಕಳಚುತ್ತೇನೆಂದು ಮುಷರ್ರಫ್ ತಮಗೆ ಮಾತು ಕೊಟ್ಟಿದ್ದಾರೆಂದು ಅವರೊಂದಿಗೆ ಡೀಲು ಕುದುರಿಸುತ್ತಿರುವ ಬೇನಜೀರ್ ಭುಟ್ಟೊ ಹೇಳಿದ್ದಾರೆ. ಇದು ಹಲವು ‘ಅಪಾರ್ಥಸಾರಥಿ’ಗಳ ಹುಬ್ಬೇರಿಸಿದೆ!
*
ಅಮ್ಮನ್ ಅಕ್ಕನ್ ಅಂತೆಲ್ಲ ಮಾತನಾಡುವುದು ಕೇವಲ ಸಾಯಿಕುಮಾರ್ ಥರದ ಸಿನಿಮಾನಟರ ಹಕ್ಕೇನಲ್ಲ. ಕೆಲ ದಿನಗಳ ಹಿಂದೆ ಆಂಧ್ರ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಸದನದಲ್ಲೇ ಚಂದ್ರಬಾಬು ನಾಯ್ಡು ಅವರ ತಾಯಿಯನ್ನು ಅವಮಾನಿಸುವಂಥ ಮಾತನಾಡಿ ನಂತರ ಕ್ಷಮೆ ಕೋರಿದ್ದರು. ಮೊನ್ನೆ ಮೊನ್ನೆ ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಡಿ ಕೆ ಶಿವಕುಮಾರ್ ತಾಯಿಯ ಬಗ್ಗೆಯೂ ಅಂಥದೇ ಮಾತನಾಡಿ ಕಡೆಗೆ ಹಾಗಲ್ಲ ಹೀಗೆ ಎಂದು ವಿವರ ನೀಡಿದ್ದರು.(ಇದರ ಮಧ್ಯೆ ಜಾರ್ಜ್ ಫರ್ನಾಂಡಿಸ್ ಪ್ರಧಾನಿಯ ತಲೆ ಉರುಳಿಸುವ ಬಗ್ಗೆಯೂ, ಪ್ರಧಾನಿ ಬಿಜೆಪಿಯವರು ತಮ್ಮ ಕೊಲೆಗೆ ಹವನ ಮಾಡಿಸಿದ ಬಗ್ಗೆಯೂ ಮಾತಾಡಿದರು). ಕುಮಾರಸ್ವಾಮಿ ಯಡಿಯೂರಪ್ಪನವರಿಗೆ ಕೊಟ್ಟ ಭಾಷೆಗೆ ತಪ್ಪಿದರೆ ಪರವಾಗಿಲ್ಲ, ಆಡುವ ಭಾಷೆ ತಪ್ಪಬಾರದಲ್ಲವೆ ಎಂಬುದು ಸೋಸಿಲಿಯ ಕಳವಳ!
*
ಭಾಗಲ್ಪುರದಲ್ಲಿ ಸರಗಳ್ಳನೊಬ್ಬನನ್ನು ಬೈಕಿಗೆ ಕಟ್ಟಿ ಎಳೆದಿದ್ದಾರೆ. ಗುಜರಾಥ್‌ನಲ್ಲೆಲ್ಲೋ ಹುಡುಗಿಯನ್ನು ಓಡಿಸಿಕೊಂಡು ಹೋದ ತಪ್ಪಿಗೆ ಹುಡುಗನನ್ನು ಟ್ರಾಕ್ಟರ್‌ಗೆ ಕಟ್ಟಿ ಎಳೆದು ಕೊಂದೇಬಿಟ್ಟಿದ್ದಾರೆ. ಧರ್ಮದೇಟು ಹಾಕುವಾಗ ನಮ್ಮಲ್ಲಿ ಮೂಡುವ ಹುರುಪಿನ ಮೂಲವ್ಯಾವುದು? ಮುಖ ಮೂತಿ ನೋಡದೆ ಲಂಚ ಕೇಳುವ ಸಬ್‌ರಿಜಿಸ್ಟ್ರಾರುಗಳನ್ನು, ಹೇಳದೆ ಕೇಳದೆ ದರ ಏರಿಸುವ ಮೊಬೈಲ್ ಸರ್ವಿಸ್ ಕಂಪನಿಗಳನ್ನು, ವೋಟು ಪಡೆದೂ ಕೆಲಸ ಮಾಡದ ರಾಜಕಾರಣಿಗಳನ್ನು ಕೊರಳಪಟ್ಟಿ ಹಿಡಿದು ಕೇಳಲಾಗದ ನಮ್ಮ ಅಸಹಾಯಕತೆ, ಹತಾಶೆ ಹೀಗೆ ಬಡಪಾಯಿಗಳು ಸಿಕ್ಕಾಗ ಸ್ಫೋಟಗೊಳ್ಳುವುದೇನೊ. ಮೇರಾ ಭಾರತ್ ಮಹಾನ್.
*
ಇದರ ನಡುವೆಯೇ ಕಾನೂನಿನ ಮೇಲೆ ಭರವಸೆ ಹೆಚ್ಚಿಸುವಂಥ ಸುದ್ದಿಯೆಂದರೆ ಬಾಲಿವುಡ್‌ನ ಪ್ರಭಾವಿ ತಾರೆಗಳು ಕೂಡ ಜೈಲಿಗೆ ಹೋಗುತ್ತಿರುವುದು. ಅದನ್ನು ಹೀಗೆ ಹೇಳುವುದಕ್ಕಿಂತ ಸೋಸಿಲಿಯ ಹನಿಗವನದಲ್ಲಿ ಕೇಳಿದರೇ ಚೆನ್ನ.
ಕೊಂದ್ಹಾಕಿದರೆ ಜಿಂಕೆ
ಬಿಟ್ ಬಿಡ್ತಾರಾ ಸುಮ್‌ಕೆ
ಸ್ಟಾರ್ ಆದ್ರೂನೂ ಸಂಜಯ್, ಸಲ್ಲು
ಕಾನೂನ್ ಹೇಳಿತು: ಬಗ್ಗಿ ನಿಲ್ಲು
*
ತಂಗಿ ಸೆಂಟಿಮೆಂಟು ತೆರೆಯ ಮೇಲಷ್ಟೇ ಅಲ್ಲ, ಸೆರೆಯ ಬಳಿಯೂ ವರ್ಕಾಗುತ್ತೆ ಅನ್ನೋದು ನ್ಯೂಸ್‌ಚಾನೆಲ್ ನೋಡಿದ್ ಮೇಲೆ ತಿಳೀತಿದೆ. ಸಂಜಯ್ ದತ್ ಜತೆ ಕೋರ್ಟಿಗೆ ಮತ್ತು ಜೈಲಿಗೆ ಅಲೆದದ್ದು ತಂಗಿ ಪ್ರಿಯಾ ದತ್ ಆದರೆ, ಸಲ್ಮಾನ್‌ಗೆ ಜತೆ ನೀಡುತ್ತಿರುವುದು ತಂಗಿ ಅಲ್ವೀರಾ.
*
ಅಧಿಕಾರ ಹಸ್ತಾಂತರ ಖಚಿತ ಅಂತ ಕುಮಾರಸ್ವಾಮಿ ಹೇಳಿದ್ದನ್ನೇ ನಂಬಿಕೊಂಡು ಯಡಿಯೂರಪ್ಪ ಸಂಭ್ರಮಿಸುತ್ತಿದ್ದಾರೆ. ಹಸ್ತಾಂತರದಲ್ಲಿ ಹಸ್ತಕ್ಕೆ ಕೋಟ್ ಇದೆಯಾ ಅಂತ ಈಗಲೇ ಪರಿಶೀಲಿಸಿಕೊಳ್ಳುವುದು ಒಳ್ಳೆಯದು ಎಂಬುದು ಮಿಸ್ ಸೋಸಿಲಿಯ ಪ್ರಾಮಾಣಿಕ ಸಜೆಷನ್!
*
ಮೊನ್ನೆ ಸಂಸತ್ತಿಗೆ ಕೋಳಿ ನುಗ್ಗಿತ್ತು. ಸಂಸದರನ್ನು ತಲೆ ಇಲ್ಲದ ಕೋಳಿಗಳೆಂದು ಕರೆದ ರಾಯಭಾರಿ ಸೇನ್ ವಿರುದ್ಧ ಎಡಪಕ್ಷಗಳು ಖಾರವಾದರೆ, ಬಿಜೆಪಿ ಮಸಾಲೆ ಅರೆಯಿತು. ಕೊನೆಗೆ ಕೋಳಿ ಕೆ ರಂಗ ರೊನೇನ್ ಸೆನ್ ‘ನಾನಂದಿದ್ದು ನಿಮಗಲ್ಲ, ಪತ್ರಕರ್ತರಿಗೆ’ ಅಂತ ಹೇಳಿದ್ದೂ ಆಯ್ತು. ಪತ್ರಕರ್ತರು ಹೆಡ್‌ಲೆಸ್ ಚಿಕನ್, ಸಂಸದರು ಬೋನ್‌ಲೆಸ್ ಚಿಕನ್, ಸರಕಾರಕ್ಕೆ ಚಿಕೂನ್‌ಗುನ್ಯಾ ಅಂತ ಮಮತಾ ಬ್ಯಾನರ್ಜಿ ಥೇಟ್ ಸೋಸಿಲಿಯ ಥರ ಜೋಕ್ ಕಟ್ ಮಾಡಿದ್ದೂ ಆಯ್ತು. ನಮ್ಮನ್ನೇಕೆ ಆಡಿಕೊಂಡಿದ್ದು ಅಂತ ಕೋಳಿಗಳೂ ಸಿಟ್ಟಾಗಿವೆಯಂತೆ, ಆದರೆ ಪತ್ರಕರ್ತರು ಸಿಟ್ಟಾದ ಸುದ್ದಿ ಬಂದಿಲ್ಲ!
*
ಸಂಸತ್ತಿಗೆ ಕೋಳಿ ಕಾಟವಾದರೆ, ಕೃಷ್ಣಮೃಗ ಬೇಟೆಯಾಡಿದ್ದಕ್ಕೆ ಸಲ್ಮಾನ್ ಖಾನ್ ಜೈಲಿಗೆ ಹೊರಟಿದ್ದಾರೆ. ಮೊನ್ನೆ ಅಬು ಸಲೇಂ ಕನವರಿಸಿದ ಹೆಸರುಗಳಲ್ಲಿ ಸುಭಾಷ್ ಘಾಯ್‌ರಂಥ ಕೆಲ ನಿರ್ಮಾಪಕ, ನಿರ್ದೇಶಕರೂ ಇದ್ದರು. ಹಿಂದಿ ಸಿನಿಮಾದವರೆಲ್ಲಾ ಹೀಗೆ ಜೈಲಿಗೆ ಹೋಗುತ್ತಿದ್ದರೆ ಜೈಲಿನಲ್ಲೇ ಒಂದು ಬಹುತಾರಾ ಸಿನಿಮಾ ಮಾಡಬಹುದು ಅನ್ನಿಸುತ್ತೆ. ಲೊಕೇಶನ್ ಶಿಫ್ಟ್!...
*
ನಾನೇ ಮುಂದಿನ ಮುಖ್ಯಮಂತ್ರಿ ಅಂತ ಪದೇಪದೇ ಹೇಳುತ್ತಿದ್ದ ಯಡಿಯೂರಪ್ಪ, ಕುಮಾರಸ್ವಾಮಿ ಆಕ್ಷೇಪಿಸಿದ ನಂತರ ಮೌನವ್ರತಕ್ಕಿಳಿದಿದ್ದಾರೆ. ಅವರೀಗ ನಾನು ಮಾತಾಡುವುದಿಲ್ಲ ಎಂದು ಪದೇಪದೇ ಹೇಳುತ್ತಿದ್ದಾರೆ. ಸದ್ಯಕ್ಕೆ ಮೂಕರಾಗಿರುವ ಅವರು ಮೂರ್ಖ ಆಗುವುದನ್ನು ನೋಡಲು ಇನ್ನೂ ೩೬ ದಿನ ಕಾಯಬೇಕು.
*
ಏಳು ಜನ ಶಿಕ್ಷಕರು ಸೇರಿಕೊಂಡು ಒಬ್ಬ ೧೧ ವರ್ಷದ ಬಾಲಕಿಯನ್ನು ಆಸ್ಪತ್ರೆ ಸೇರುವಂತೆ ಹೊಡೆದಿರುವ ದಾರುಣ ಸುದ್ದಿ ನಮ್ಮ ಬೆಂಗಳೂರಿನಿಂದಲೇ ವರದಿಯಾಗಿದೆ. ಇಂಥ ‘ಶಿಕ್ಷೆ’ಕರು ಯಾಕಿರುತ್ತಾರೆ? ಡಾಕ್ಟರು, ಇಂಜಿನಿಯರು, ಕಮಿಷನರು ಆಗಲು ಯೋಗ್ಯತೆ ಇಲ್ಲದವರನ್ನೇ ಆರಿಸಿ ನಾವು ಪ್ರಾಥಮಿಕ ಶಿಕ್ಷಕರ ಹುದ್ದೆಗಳನ್ನು ತುಂಬುತ್ತಿರುವುದರಿಂದಲೆ? ಕನಿಷ್ಟ ಪಕ್ಷ ಶಿಕ್ಷಕ ಮತ್ತು ಪೊಲೀಸರ ಹುದ್ದೆಗಳಿಗೆ ನೇಮಕ ಮಾಡುವಾಗ ಅಭ್ಯರ್ಥಿಯ ವ್ಯಕ್ತಿತ್ವವನ್ನು(ತಾಳ್ಮೆಯಂಥ ಗುಣಗಳು) ಪರಿಗಣಿಸುವ ಅವಶ್ಯಕತೆ ಇದೆ ಎಂದು ನಿಮಗನ್ನಿಸುವುದಿಲ್ಲವೆ?
*
ಶಾಲಾಮಕ್ಕಳು ಎದುರಿಸುತ್ತಿರುವ ಮತ್ತೆರಡು ಶಿಕ್ಷೆಗಳು ಹೀಗಿವೆ: ಮೊದಲನೆಯದು ಕೆಜಿಗಟ್ಟಲೆ ತೂಕದ ಚೀಲವನ್ನು ಹೊತ್ತುಕೊಂಡು ಶಾಲೆಗೆ ಹೋಗುವುದು. ಎರಡನೆಯದು, ಒಂದೇ ರಿಕ್ಷಾದಲ್ಲಿ ೧೦ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುವುದು. ರಕ್ಷಾಬಂಧನ ಹಬ್ಬದ ಮೂಡಿನಲ್ಲಿರುವ ಮಿಸ್ ಸೋಸಿಲಿಯ ಪ್ರಕಾರ, ಮಕ್ಕಳ ಈ ನಿತ್ಯದ ಗೋಳನ್ನು ‘ರಿಕ್ಷಾಬಂಧನ’ ಎನ್ನುವುದು ಸೂಕ್ತ!
*
ಮೊದಲಾದರೆ ಒಬ್ಬರು ಮತ್ತೊಬ್ಬರ ಹೃದಯ ಕದಿಯುವುದಿತ್ತು. ಜಗ್ಗೇಶ್ ಸಿನಿಮಾಗಳಲ್ಲಿ ತಲೆ ತಿನ್ನೋ ಪಾರ್ಟಿಗಳಿಗೆ ಮೆದುಳಿಗೇ ಕೈ ಹಾಕ್ತಾನಲ್ಲ ಅನ್ನುವುದಿತ್ತು. ಅಷ್ಟು ಬಿಟ್ಟರೆ ನಿಜವಾದ ಅರ್ಥದಲ್ಲಿ ಮನುಷ್ಯನ ಅಂಗಾಂಗಗಳು ಕಳ್ಳತನವಾಗುವ ಭಯವಿರಲಿಲ್ಲ. ಆದರೀಗ ನೋಡಿ, ಆಸ್ಪತ್ರೆಯಿಂದ ಹೊರಬರುವಾಗ ಎಲ್ಲಾ ಇದೆ ತಾನೇ ಎಂದು ಮುಟ್ಟಿ ನೋಡಿಕೊಳ್ಳುವಂತಾಗಿದೆ. ಮತ್ತಿನ್ನೇನು? ಡಾಕ್ಟರುಗಳು ಕಿಡ್ನಿ ಬಿಚ್ಚಿಕೊಂಡು ಕಳಿಸುತ್ತಿರುವ ಪ್ರಕರಣಗಳನ್ನು ಪೇಪರ್‌ನಲ್ಲಿ ಓದಿದ ಮೇಲೆ ಆಪರೇಷನ್ ಥೇಟರ್‌ನಲ್ಲಿ ಅರಿವಳಿಕೆ ಕೊಟ್ಟರೂ ರೋಗಿಗಳು ಎಚ್ಚರ ತಪ್ಪಬಹುದೆ? ಕಲಿಗಾಲ!
*
ಕಿಡ್ನಿ ಎಂದಾಗ ಒಂದು ಹಳೆಯ ಜೋಕು ನೆನಪಾಯಿತು. ಜೋಕು ಹಳೆಯದಾದರೇನು ನಗೆ ನವನವೀನ ಎಂದು ಓದಿಕೊಳ್ಳುವುದಾದರೆ ಹೇಳಬಹುದು. ಹೆಂಡತಿ, ಮಗ ಮಗಳ ಜತೆ ವಾಕಿಂಗ್ ಹೊರಟಿದ್ದ ಸರ್ದಾರ್‌ಜಿಗೆ ಹಳೇ ಸ್ನೇಹಿತನೊಬ್ಬ ಎದುರು ಸಿಕ್ಕ. ತನ್ನ ಫ್ಯಾಮಿಲಿಯನ್ನು ಪರಿಚಯಿಸುತ್ತಾ ಆತ ಸ್ನೇಹಿತನಿಗೆ ಹೇಳಿದ್ದು ಹೀಗೆ: ನಾನು ಸರದಾರ, ಇವಳು ನನ್ನ ಸರದಾರನಿ, ಇವನು ನನ್ನ ಕಿಡ್, ಇವಳು ನನ್ನ ಕಿಡ್ನಿ!
*
ಕೋಚು ಮತ್ತು ಕ್ರೀಡಾಪಟುಗಳ ನಡುವಿನ ಜಗಳ ನಮಗೆ ಹೊಸದೇನಲ್ಲ. ಚಾಪೆಲ್-ಗಂಗೂಲಿ ಜಗಳ ಆದ ನಂತರ ಇದೀಗ ಬಾಲ ಪ್ರತಿಭೆ ಬುಧಿಯಾ ಕೂಡ ಕೋಚ್ ಮೇಲೆ ಸಿಟ್ಟಿಗೆದ್ದು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾನೆ. ಪರಿಣಾಮ ಪೊಲೀಸರು ಕೋಚ್‌ನನ್ನು ಬಂಧಿಸಿದ್ದು, ಬುಧಿಯಾಗೆ ಕೋಚಿಲ್ಲದಂತಾಗಿದೆ. ಚಿಂತೆಯ ವಿಷಯವೇನಲ್ಲ, ಕೋಚ್ ಇಲ್ಲವಾದ ಮೇಲೆ ಗೆಲ್ಲತೊಡಗಿರುವ ಕ್ರಿಕೆಟ್ ಟೀಮಿಂದ ಬುಧಿಯಾ ಸ್ಫೂರ್ತಿ ಪಡೆಯಬಹುದು.
*
ಅವಿವಾಹಿತರಾಗಿದ್ದರೆ ಈ ಕೆಳಗಿನ ಹಾರೈಕೆಯನ್ನು ನಿರ್ಲಕ್ಷಿಸಿ: ೬೦ನೇ ಸ್ವಾತಂತ್ರೋತ್ಸವದ ಶುಭಾಶಯಗಳು!ಇಂಥ ಎಸ್ಸೆಮ್ಮೆಸ್ ನಿಮಗೂ ಬಂದಿತ್ತೆ?
*
ಈ ವಾರದ ‘ಬಿಸಿ’ ಸುದ್ದಿ ಯಾವುದು ಗೊತ್ತೆ? ೫೬೦ ಕೋಟಿ ರೂ ನಷ್ಟ ಮಾಡಿಕೊಂಡು ನೋಕಿಯಾದವರು ತಮ್ಮ ಬಿಸಿಯಾಗುತ್ತಿರುವ ಬ್ಯಾಟರಿಗಳನ್ನು ವಾಪಾಸ್ ಪಡೆಯಲು ನಿರ್ಧರಿಸಿರುವುದು.
*
ಸದಾ ಕತ್ತಿ ಮಸೆಯುತ್ತಾ, ಫೋನಿನಲ್ಲಿ ಇನ್ನೊಬ್ಬರನ್ನು ಸರ್ವನಾಶ ಮಾಡುತ್ತೇವೆಂದು ಸವಾಲು ಹಾಕುತ್ತಲೇ ಇರುವ ರೌಡಿ ಹೆಣ್ಣುಗಳು, ಕಣ್ಣು, ಕಿವಿ, ಮನಸ್ಸುಗಳನ್ನು ಏಕಕಾಲಕ್ಕೆ ತುಕುಡ ಮಾಡುವ ಸಂಕಲನಕಾರ ಮತ್ತು ಸಂಗೀತ ನಿರ್ದೇಶಕರು, ಪುಗಸಟ್ಟೆ ಸಿಕ್ಕರೆ ಏನನ್ನೂ ನೋಡುತ್ತೇವೆಂದು ಪಟ್ಟಾಗಿ ಟಿವಿ ಮುಂದೆ ಕೂತಿರುವ ನಾವು-ಇವಿಷ್ಟೂ ಸೇರಿದರೆ ನಮ್ಮ ಮೆಗಾ ಸೀರಿಯಲ್‌ಗಳು ಎಂಬ ವಿಷವರ್ತುಲ ಪೂರ್ಣವಾಗುತ್ತದೆ(ಒಂದೆರಡು ಅಪವಾದಗಳನ್ನು ಬಿಡಿ). ಸೋ ಕಾಲ್ಡ್ ಕಮರ್ಶಿಯಲ್ ಸಿನಿಮಾ ಮಂದಿಯೂ ಬೇರೇನೂ ಹೊಳೆಯದಾದಾಗ ತಾಯಿ ತಂಗಿ ಸೆಂಟಿಮೆಂಟು ಅಥವಾ ಒಂದೆರೆಡು ಹೆಚ್ಚು ಹೊಡೆದಾಟದ ಸಿನಿಮಾಗಳನ್ನು ಮಾಡಿರಬಹುದೇ ಹೊರತು ಮೆಗಾಸೀರಿಯಲ್ಲುಗಳಂಥ ಅನರ್ಥಕಾರಿ, ಅಪಾಯಕಾರಿ ಕತೆಗಳಿಗೆ ಕೈ ಹಾಕಿಲ್ಲ. ಕಾರ್ಯಕ್ರಮದ ನಡುವೆ ಜಾಹೀರಾತು ಬಂದರೆ ಶಾಪ ಹಾಕುತ್ತಿದ್ದ ಕಾಲವೊಂದಿತ್ತು. ಈಗ ಕೊಳಕು ಧಾರಾವಾಹಿಗಳ ದಾಳಿಯಿಂದ ನಮ್ಮನ್ನು ಕ್ಷಣಕಾಲವಾದರೂ ರಕ್ಷಿಸಬಲ್ಲವೆಂದರೆ ಅಡ್ವಟೈಸ್‌ಮೆಂಟುಗಳು ಮಾತ್ರ. ಮೆಗಾ ಸೀರಿಯಲ್ಲುಗಳು ಮುಗಿಯುವುದಿಲ್ಲ. ಅವುಗಳು ನೀಡುವ ಹಿಂಸೆಗೂ ಕೊನೆಯಿದ್ದಂತಿಲ್ಲ. ಈಗಂತೂ ಕನ್ನಡ ಚಾನೆಲ್‌ಗಳು ಹೆಚ್ಚುತ್ತಿವೆ. ಸೀರಿಯಲ್ಲುಗಳಂತೆಯೇ ಆದಿ ಅಂತ್ಯವಿಲ್ಲದ ಭಗವಂತ ಮಾತ್ರ ವೀಕ್ಷಕನನ್ನು ಕಾಪಾಡಬಹುದು.ಐಟಮ್ ಸಾಂಗುಗಳಿಗೆ ಕತ್ತರಿ ಹಾಕಹೊರಟಿರುವ ನಾವು ಇಂಥ ಕಳಪೆ ಸರಕಿಗೆ ಕಡಿವಾಣ ಹಾಕಲು ಇದು ಸೂಕ್ತ ಸಮಯವಲ್ಲವೆ?
*
ಜಗತ್ತಿನ ಅತ್ಯುತ್ತಮ ವೇಟ್‌ಲಿಫ್ಟರ್ ಭಗವಂತ. ಯಾಕೆಂದರೆ ಎಲ್ಲರೂ ಭಗವಂತನ ಮೇಲೆ ಭಾರ ಹಾಕಿದರೂ ಆತ ತಡೆದುಕೊಳ್ಳುತ್ತಾನಲ್ಲ ಎಂಬ ಸಿಲ್ಲಿ ಜೋಕನ್ನು ಸೋಸಿಲಿಯಲ್ಲದೆ ಇನ್ಯಾರು ಮಾಡಲು ಸಾಧ್ಯ?
*
ಒಳ್ಳೆಯವರಿಗಿದು ಕಾಲವಲ್ಲವೇನೋ. ಇತ್ತೀಚಿಗೆ ರೌಡಿಸಂ ಸಬ್ಜೆಕ್ಟಿರುವ ಕನ್ನಡ ಸಿನಿಮಾಗಳಿಗೆಲ್ಲ ತಮ್ಮ ಪಾಡಿಗೆ ತಾವಿದ್ದ ಸಜ್ಜನರ ಹೆಸರುಗಳನ್ನೇ ಇಡುತ್ತಿರುವುದನ್ನು ನೋಡಿದಾಗ ಹಾಗನ್ನಿಸುತ್ತದೆ. ಉದಾಹರಣೆಗೆ ನೋಡಿ: ಜೋಗಿ, ಸಂತ, ದಾಸ, ಶಾಸ್ತ್ರಿ, ಪೂಜಾರಿ, ಸ್ವಾಮಿ, ಭಕ್ತ, ಶಿಷ್ಯ.‘ಮಾಸ್ತಿ’ಯಂಥ ಸಾಹಿತಿಯನ್ನೂ ಅವರು ಬಿಡಲಿಲ್ಲ. ರೌಡಿಸಂ ಎಂಬ ಅವಗುಣದ ಕತೆಯಿರುವ ಸಿನಿಮಾಗಳಿಗೆ ಗುಣವಂತರ ಹೆಸರೇಕೆ ಇಡುತ್ತಾರೆಂದು ಚಿಂತಿಸುತ್ತಿರುವಾಗಲೆ ‘ಗುಣ’ ಎಂಬ ಹೆಸರಿನಲ್ಲಿ ಮತ್ತೊಂದು ರೌಡಿ ಚಿತ್ರದ ಪೋಸ್ಟರು ಕಾಣುತ್ತಿದೆ.
*
ಕಡೆಗೂ ಸಂಜು ‘ಬಾಬಾ’ ಪವಾಡ ನಡೆಯಲಿಲ್ಲ. ಗಾಂಧಿಗಿರಿ(ಸನ್ನಡತೆ) ಆಧಾರದಲ್ಲಿ ಶಿಕ್ಷೆ ಮನ್ನಾ ಆಗುವ ಆಸೆಯನ್ನು ಮುನ್ನಾಭಾಯಿ ಕೈಬಿಡಬೇಕಾಯಿತು. ಆದರೂ ಗಾಂಧಿ ತತ್ವಗಳನ್ನು ಹೊಸರೀತಿಯಲ್ಲಿ ಮತ್ತೆ ಜನಪ್ರಿಯಗೊಳಿಸಿದ ಅವರಿಗೀಗ ಗಾಂಧಿ ಇದ್ದ ಯರವಡಾ ಜೈಲೇ ಅಲಾಟಾಗಿರುವುದು ಅವರ ಪ್ರಯತ್ನಗಳಿಗೆ ಸಂದ ಜಯ ಅಂತ ಭಾವಿಸಬಹುದು.

*
ಮೋನಿಕಾ ಬೇಡಿ ಹೊರಬಂದರೆ, ಸಂಜಯ್ ದತ್ ಒಳಗೆ ಹೋದರು. ಅಂದರೆ ಜೈಲಿನಲ್ಲಿ ಬಾಲಿವುಡ್ ಲೆಕ್ಕ ಮೊದಲಿನಂತೇ ಉಳಿಯಿತು. ನಮ್ಮ ಜೈಲುಗಳ ತಾರಾಮೌಲ್ಯ ಕುಸಿದಿಲ್ಲ ಎಂಬುದು ಮಿಸ್ ಸೋಸಿಲಿ ಅಬ್ಸರ್‌ವೇಶನ್.
*
ಕಳೆದ ವಾರ ‘ಮಾತು ಕ(ವಿ)ತೆ’ಯಲ್ಲಿ ಜಪಾನಿ ಹೈಕುಗಳ ಬಗ್ಗೆ ಬರೆದಿರುವ ಡುಂಡಿರಾಜ್, ಪ್ರಾಸವಿಲ್ಲದೆಯೂ ಸೊಗಸಾಗಿ ಹನಿಗವನಗಳನ್ನು ಬರೆಯುವುದು ಹೀಗೆ ಎಂದಿದ್ದಾರೆ. ಅದಕ್ಕೆ ಬದ್ಧವಾಗಿ ಉಳಿಯಲೆಂದೋ ಏನೋ, ಮೊತ್ತ ಮೊದಲ ಬಾರಿಗೆ ಅವರ ಇಡೀ ಅಂಕಣದಲ್ಲಿ ಒಂದೆಡೆಯೂ ಪನ್ ಇಣುಕಿಲ್ಲ. ಅದನ್ನು ಸರಿದೂಗಿಸಲು ಮಿಸ್ ಸೋಸಿಲಿ ಹೈಕುಗಳ ಕುರಿತೇ ಒಂದು ಹನಿಗವಿತೆ ಬರೆದಿದ್ದು, ಅದು ಹೀಗಿದೆ.

ಆಫೀಸು ಆಗುವುದ್ಹೇಗೆ ಲೈಕು
ಆಗದಿದ್ದರೆ ಕಾಲ ಕಾಲಕ್ಕೆ ಹೈಕು!
ಕೇವಲ ಪ್ರಾಸವೊಂದೇ ಇದ್ದರೆ ಓದುಗರಿಗೆ ತ್ರಾಸವಾಗುತ್ತೆ ಅಂತ ಅರ್ಥ ಮಾಡಿಕೊಳ್ಳದೆ ಬರೆಯುವ ಹನಿಗವಿಗಳು ಈಗ ಹೆಚ್ಚುತ್ತಿದ್ದಾರೆ(‘ಮೆನಿ’ಗವಿಗಳು?). ಹನಿಹನಿಗೂಡಿದರೆ ‘ಹಳ್ಳ’ ಎಂದರೆ ಇದೇ ಏನು?(ಹಳ್ಳ ಎಂದರೆ ಹಾಳಾಗಿ ಹೋಗುವುದು ಎಂಬ ಅರ್ಥವೂ ಇದೆ.) ಅತಿ ಹೆಚ್ಚು ಸಲ ಬಳಸಲಾದ ಹನಿಗವಿತೆ ಶೀರ್ಷಿಕೆ ‘ವಿಪರ್ಯಾಸ’ ಅಂತ ಕಂಡುಹಿಡಿದಿರುವ ಸೋಸಿಲಿಯ ಪ್ರಕಾರ, ‘ಹನಿ’ ಎಂಬುದು ಪ್ರೇಮಿಯನ್ನು ಸಂಬೋಧಿಸುವ ಪದವೂ ಆದ್ದರಿಂದ ಶೇಕಡಾ ೯೦ರಷ್ಟು ಹನಿಗವಿತೆಗಳ ವಸ್ತು ಪ್ರೀತಿ, ಪ್ರೇಮ, ಪ್ರಣಯವೇ ಆಗಿರುತ್ತದೆ.
*
ಮೋನಿಕಾ ಬೇಡಿ ಮತ್ತು ಕಿರಣ್ ಬೇಡಿ ಒಂದೇ ಸಲ ಸುದ್ದಿಯಲ್ಲಿದ್ದಾರೆ.(ಮಂದಿರಾ ಬೇಡಿ ಮತ್ತು ಪೂಜಾ ಬೇಡಿಗಳನ್ನು ನೋಡಿ ಸಾಕಾಗಿ ‘ಬೇಡಿ ಬೇಡಿ’ ಎನ್ನುತ್ತಿದ್ದವರಿಗೆ ಇದೊಂದು ಚೇಂಜು). ಜೈಲಿಂದ ಬಿಡುಗಡೆಯಾಗಿ ಮತ್ತಷ್ಟು ಫಳಫಳ ಹೊಳೆಯುತ್ತಿರುವ ಮೋನಿಕಾಗೆ ಸಿನಿಮಾಗಳಲ್ಲಿ ಆಫರ್ ಇದೆಯಂತೆ. ಅಭಿನಯ ಆರಂಭಿಸುವುದಕ್ಕೂ ಮುನ್ನ ‘ಜೈಲಿನೊಳಗಿದ್ದೂ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ?’ ಅಂತ ಆಕೆ ಒಂದು ಪುಸ್ತಕ ಬರೆಯಬೇಕು ಎಂಬುದು ಸೌಂದರ್ಯೋಪಾಸಕರ ‘ಬೇಡಿ’ಕೆ!
*
ಮೋನಿಕಾ ಬೇಡಿಯ ಜತೆಗೇ ಹನೀಫ್ ಕೂಡ ಬಿಡುಗಡೆಯಾಗಿದ್ದಾರೆ. ಸಮಾನ ಅಂಶವೆಂದರೆ ಇಬ್ಬರೂ ಕೆಟ್ಟ ಸಹವಾಸದಿಂದ ಕಷ್ಟಪಟ್ಟವರು.
*
ಭಾರತದ್ದು diverse ಕಲ್ಚರ್(ವೈವಿಧ್ಯಮಯ ಸಂಸ್ಕೃತಿ) ಎಂದು ನಾಲ್ಕನೇ ಇಯತ್ತೆಯಲ್ಲಿ ಓದಿದ್ದು ಕೊನೆಗೂ ನಿಜವಾಗಿದೆ. ದೇಶದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಡೈವೋರ್ಸ್ ಪ್ರಕರಣಗಳು ಕಳೆದ ಹತ್ತುವರ್ಷಗಳಲ್ಲಿ ದುಪ್ಪಟ್ಟಾಗಿವೆ ಎಂಬ ಸಂಸಾರದ ಗುಟ್ಟನ್ನು ಇತ್ತೀಚಿನ ಅಧ್ಯಯನವೊಂದು ರಟ್ಟು ಮಾಡಿದೆ. ತಲಾಖ್ ತಲಾಖ್ ತಲಾಖ್ ಅಂತ ಮೂರು ಸಲ ಹೇಳಲು ತಗುಲುವ ಸಮಯದಲ್ಲಿ ಮೂರು ವಿಚ್ಛೇದನಗಳು ಆಗುತ್ತಿರುವ ಕಾಲವಿದು. ತಾಳಿ ಕಟ್ಟಿದವನು ಬಾಳಿಯಾನೆ ಎಂಬುದು ಈಗ ಕೋಟಿ ರೂಪಾಯಿ ಪ್ರಶ್ನೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಹಿರಿಯರ ಮಾತನ್ನು ಈಗಿನ ಜನಾಂಗ ‘ಲಿವಿಂಗ್ ಟುಗೆದರ್’ ಎಂದು ಅರ್ಥಮಾಡಿಕೊಳ್ಳತೊಡಗಿದೆ. ಈ ಬಂಧದಲ್ಲಿ ಕಟ್ಟಿಕೊಂಡವಳೂ ಇರೋತನಕ. ಲಿವಿಂಗ್ ಟುಗೆದರ್ ಅನ್ನು ಕನ್ನಡದಲ್ಲಿ ‘ಸಹವಾಸ’ ಎಂದು ಕರೆದರೆ ಅರ್ಥಪೂರ್ಣವಾಗಿರುತ್ತದೆ ಎಂಬುದು ಮಿಸ್ ಸೋಸಿಲಿಯ ಸಲಹೆ. ‘ಸಹವಾಸ’ ಮಾಡಿ ಸನ್ಯಾಸಿಗಳು ಕೆಡಬಹುದೆ ಹೊರತು ಸಂಸಾರಿಗಳಲ್ಲ ಎಂಬ ಸಮರ್ಥನೆಯೂ ಆಕೆಯದೆ. ಗಂಡ/ಹೆಂಡತಿ ಸಹವಾಸ ಸಾಕಪ್ಪಾ ಸಾಕು ಅಂತನಿಸಿದವರಿಗೆ ಈ ‘ಸಹವಾಸ’ ಸೂಕ್ತ ಆಯ್ಕೆ.
*
ಹೊಚ್ಚ ಹೊಸ ನೀತಿಪಾಠ: ಅಣ್ಣ ತಮ್ಮ ಯಂಕ ತಿಮ್ಮ, ಯಾರಿಗೂ ಕೊಡದಿರಿ ನಿಮ್ಮ ಸಿಮ್ಮ. ತನ್ನ ಮೊಬೈಲ್ ಸಿಮ್ಮನ್ನು ಸಬೀಲ್‌ಗೆ ಕೊಟ್ಟ ತಪ್ಪಿಗೆ ಹನೀಫ್ ಈಗ ಆಸ್ಟ್ರೇಲಿಯಾದಲ್ಲಿ ಕೊಳೆಯುತ್ತಿಲ್ಲವೆ? ಮೊನ್ನೆ ಅಲ್ಲಿ ಹನೀಫ್ ಪರ ಪ್ರತಿಭಟನೆಗಿಳಿದ ಜನರ ಕೈಯಲ್ಲಿದ್ದ ಫಲಕದಲ್ಲಿ ಹೀಗೆ ಬರೆದಿತ್ತು: ‘ನಾನೂ ಯಾರಿಗೋ ಸಿಮ್ ಕೊಟ್ಟಿದ್ದೇನೆ, ನನ್ನನ್ನೂ ಬಂಧಿಸಿ. ಕಥೆ ಹೀಗಿರುವುದರಿಂದಲೇ ಯಾರ್‍ಯಾರಿಗೋ ಸಿಮ್ ದಾನ ಮಾಡಿದ ಸಿಮ್ಮಳೀಯರಿಗೆಲ್ಲ ಈಗ ಆ ತಪ್ಪು ಸಿಮ್ಮ ಸ್ವಪ್ನವಾಗಿ ಕಾಡುತ್ತಿದೆಯಂತೆ.
*
ತಾಜ್ ಮಹಲಿನ ಮಿನಾರ್ ವಾಲುತ್ತಿದೆಯಂತೆ. ವಾಹ್ ತಾಜ್ ಅಂತ ಹೇಳುತ್ತಿದ್ದವರು ಇನ್ನು ಮುಂದೆ ‘ವಾರೆ’ ವಾಹ್ ತಾಜ್ ಅನ್ನಬೇಕೇನೋ!
*
ತಾಜ್ ಮಹಲನ್ನು ವಿಶ್ವದ ಹೊಸ ಅದ್ಭುತಗಳ ಪಟ್ಟಿಗೆ ಸೇರಿಸಲು ಎಸ್ಸೆಮ್ಮೆಸ್ ಮಾಡಿ ಎಂಬ ಕೂಗು ಎಲ್ಲೆಡೆ ಕೇಳುತ್ತಿದೆ. ರಾಷ್ಟ್ರಪತಿ ಚುನಾವಣೆಗಿಂತ ಈ ಚುನಾವಣೆಯೇ ಹೆಚ್ಚು ಬಿಸಿ ಉಂಟುಮಾಡಿದೆ. ಜನರಿಂದ ೩ ರೂಪಾಯಿಗೊಂದು ಎಸ್ಸೆಮ್ಮೆಸ್ ಮಾಡಿಸಿ ಮೊಬೈಲ್ ನೆಟ್‌ವರ್ಕ್ ಕಂಪನಿಗಳ ಜೇಬು ತುಂಬಿಸುವ ಹುನ್ನಾರವಿದು ಅಂತ ಕೆಲವರು ಆಕ್ಷೇಪ. ಜನಸಾಮಾನ್ಯರು ಅದ್ಭುತಗಳನ್ನು ಆರಿಸುವುದು ಹಾಸ್ಯಾಸ್ಪದವೇ. ಯಾಕೆಂದರೆ ಎಸ್ಸೆಮ್ಮೆಸ್ ಮಾಡುವ ನಾವು ಸ್ಪರ್ಧೆಯಲ್ಲಿರುವ ಉಳಿದ ಅದ್ಭುತಗಳನ್ನು ನೋಡೇ ಇಲ್ಲ. ಅಷ್ಟೇಕೆ, ನಮ್ಮಲ್ಲಿ ತಾಜ್ ಮಹಲನ್ನು ನೋಡಿದವರು ಎಷ್ಟು ಸಾವಿರ ಜನ? ಅದೇ ವೇಳೆ, ‘ಎಂಥೆಂಥ ಭ್ರಷ್ಟ, ಕೊಳಕು ರಾಜಕಾರಣಿಗಳಿಗೆಲ್ಲಾ ಎಷ್ಟೊಂದ್ ಸಲ ವೋಟು ಹಾಕಿದೀವಂತೆ, ಪ್ರೇಮದ ಭವ್ಯ ಸಂಕೇತ ತಾಜ್‌ಗೆ ಒಂದ್ಸಲ ವೋಟು ಹಾಕಿದರೇನು ಗಂಟು ಹೋಗುತ್ತೆ?’ ಅಂತ ವಾರಪತ್ರಿಕೆಯೊಂದರಲ್ಲಿ ಓದುಗನೊಬ್ಬ ಕೇಳಿದ ಪ್ರಶ್ನೆಯೂ ಚಿಂತನಾರ್ಹವೆ.
*
‘ಮೊದಲನೇ ಆಪರೇಷನ್ ಅಂತ ಏಕೆ ಹೆದ್ರಿಕೋತಿದ್ದೀರಿ? ನನಗೂ ಇದು ಮೊದಲನೇ ಆಪರೇಷನ್ನು, ನಾನು ಧೈರ್ಯವಾಗಿಲ್ಲವೆ?’ ಅಂತ ರೋಗಿಗೆ ಹೇಳಿದ ವೈದ್ಯನ ಜೋಕು ನೀವು ಕೇಳಿರುತ್ತೀರಿ. ಮೊನ್ನೆ ಚೆನ್ನೈನ ವೈದ್ಯ ದಂಪತಿಗಳು ಇಂಥದೇ ಪ್ರಾಕ್ಟಿಕಲ್ ಜೋಕು ಮಾಡಿದರು. ಎಸ್ಸೆಸ್ಸೆಲ್ಸಿ ಓದುತ್ತಿರುವ ತಮ್ಮ ಮಗನಿಂದ ಸಿಸೇರಿಯನ್ ಆಪರೇಷನ್ ಮಾಡಿಸಿ, ಗಿನ್ನೆಸ್ ರೆಕಾರ್ಡ್ ಮಾಡಲು ಹೋದ ಇವರೀಗ ವಿವಾದಕ್ಕೆ ಸಿಲುಕಿದ್ದಾರೆ. ಅಂದಹಾಗೆ, ತಮ್ಮ ಹದಿನೆಂಟು ದಾಟದ ಮಕ್ಕಳಿಗೆ ಕಾರ್ ಡ್ರೈವಿಂಗ್ ಕಲಿಸಿ ಹೆಮ್ಮೆ ಪಡುವ ಪೋಷಕರು ಮಾಡುತ್ತಿರುವ ಅಪರಾಧ ಇದಕ್ಕಿಂತ ಕಡಿಮೆ ಏನಲ್ಲ.
*
ಕಷ್ಟಕ್ಕೆ ಸಿಲುಕಿರುವ ವೈದ್ಯರು ಅವರು ಮಾತ್ರ ಅಲ್ಲ. ಅತ್ತ ಲಂಡನ್‌ನಲ್ಲಿ ನಡೆದ ಬಾಂಬ್ ದಾಳಿಗಳಿಗೂ ಬೆಂಗಳೂರಿನ ಕೆಲವು ವೈದ್ಯರಿಗೂ ನಂಟಿರುವ ವಿಷಯ ಎಲ್ಲೆಡೆ ಅಲ್ಲೋಲಕಲ್ಲೋಲ ಉಂಟುಮಾಡಿದೆ. ‘ಗುಣ ಮಾಡುವವರೇ ಹೆಣ ಹಾಕುತ್ತಾರೆ’ (ದೋಸ್ ಹು ಕ್ಯೂರ್ ಯು, ವಿಲ್ ಕಿಲ್ ಯು) ಎಂಬ ಅಲ್‌ಖೈದಾದ ಇತ್ತೀಚಿನ ಸಂದೇಶವೊಂದರಲ್ಲಿರುವ ಸಾಲು ಪೊಲೀಸರಿಗೆ ಇದೀಗ ಅರ್ಥವಾಗಿದೆಯಂತೆ.
*
ಮೊನ್ನೆ ಮೊನ್ನೆ ‘ಡೈಹಾರ್ಡ್ ಫೋರ್’ ಬಂತು, ಇದೀಗ ‘ಹ್ಯಾರಿ ಪಾಟರ್’ ೫ನೇ ಭಾಗ ಬಂದಿದೆ. ‘ಗಾಡ್ ಫಾದರ್’ನಿಂದ ಹಿಡಿದು ‘ಲಾರ್ಡ್ ಆಫ್ ದಿ ರಿಂಗ್’ವರೆಗೆ ಹಾಲಿವುಡ್ಡಿನವರು ಸರಣಿ ಚಿತ್ರಗಳನ್ನು ತಯಾರಿಸುತ್ತಲೇ ಇದ್ದಾರೆ. ಆದರೆ ನಾವೇಕೆ ಎರಡು ಪಾರ್ಟುಗಳಲ್ಲೇ ಸುಸ್ತಾಗುತ್ತೇವೆ? ಕನ್ನಡದಲ್ಲಿ ಇದುವರೆಗೆ ಸಾಂಗ್ಲಿಯಾನ ಚಿತ್ರವೊಂದು ಮಾತ್ರ ಮೂರನೇ ಭಾಗ ಬಂದಿದೆ. ಹಿಂದಿಯಲ್ಲೂ ಅಷ್ಟೇ, ಮುನ್ನಾಭಾಯಿ ಮೂರನೇ ಭಾಗ ಇನ್ನೂ ಬರಬೇಕಷ್ಟೆ. ಥೇಟರಿಗೆ ಹೋಗುವುದು ಮರೆತೇ ಹೋಗಿ, ಬಾಡಿಗೆ ತಂದ ಡಿವಿಡಿಯಲ್ಲಿರುವ ಒಂದೇ ಸಿನಿಮಾವನ್ನು ಮೂರು ನಾಲ್ಕು ಭಾಗಗಳಲ್ಲಿ ನೋಡಿ ಮುಗಿಸುವ ಈ ಧಾವಂತದ ಕಾಲದಲ್ಲೂ ಭಾಗ ೪, ಭಾಗ ೫ ನಿರ್ಮಿಸುವ ಹಾಲಿವುಡ್ ಎಂಬ ‘ಭಾಗ’ಮಂಡಲದಲ್ಲಿರುವವರ ಉತ್ಸಾಹಿಗಳಿಗೆ ಶರಣು.
*
ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ವಯಸ್ಸಾಗ್ತಾ ಆಗ್ತಾ ಜನ ಜೋಕಿಗೆ ನಗೋದು ಕಡಿಮೆ ಆಗುತ್ತಂತೆ. ಕಾರಣ ಹೀಗಿರಬಹುದು. ಒಂದು- ಅಷ್ಟು ವರ್ಷದಿಂದ ಕೇಳ್ತಾ ಬಂದಿರುವುದರಿಂದ ಈಗ ಕೇಳುವ ಬಹಳಷ್ಟು ಜೋಕು ಹಳೆಯವೇ ಆಗಿರುತ್ತವೆ. ಹೇಗೆ ನಗೋದು? ಇನ್ನೊಂದು ಕಾರಣ: ನಿತ್ಯ ನೂತನವಾದ ಪೋಲಿ ಜೋಕುಗಳನ್ನು ಯಾರೂ ಅವರಿಗೆ ಹೇಳುವಂತಿಲ್ಲ. ಹೇಳಿದ್ರೂ ನಗುವಂತಿಲ್ಲ, ವಯಸ್ಸಿಗಾದ್ರೂ ಮರ್ಯಾದೆ ಬೇಡವೆ ಅನ್ನೋದು ಸೋಸಿಲಿಯ ಅಭಿಪ್ರಾಯ.
*
ಮೇವು ಹಗರಣದಲ್ಲಿ ಲಾಲು ಎಸಗಿದ್ದಾರೆನ್ನಲಾದ ಅಕ್ರಮಗಳನ್ನು ‘ಗ್ರಾಸ್’ ಇರೆಗುಲ್ಯಾರಿಟಿ ಅನ್ನಬಹುದು.
*
ಕಾರ್ಪೊರೇಟ್ ರಂಗದಲ್ಲೀಗ ಒಂದೇ ಗೆಲುವಿನ ಸೂತ್ರ. ನಿಮಗೆ ಪ್ರತಿಸ್ಪರ್ಧಿ ಹುಟ್ಟಿದಾಗ ಒಂದೋ ಓವರ್‌ಟೇಕ್ ಮಾಡಿ, ಆಗದಿದ್ದರೆ ಟೇಕ್‌ಓವರ್ ಮಾಡಿ!
*
ಐಸಿಸಿ ಹೊಸದಾಗಿ ರೂಪಿಸಿರುವ ನಿಯಮದ ಪ್ರಕಾರ ಬೌಲರ್ ನೋಬಾಲ್ ಮಾಡಿದರೆ ಮುಂದಿನ ಚೆಂಡಿನಲ್ಲಿ ಬ್ಯಾಟ್ಸ್‌ಮನ್ ಔಟಾದರೂ ಔಟಿಲ್ಲವಂತೆ! ಅಂದರೆ ಫ್ರೀ ಹಿಟ್. ಅದಕ್ಕಿಂತ ಬೌಲರನ್ನೇ ನಿಲ್ಲಿಸಿ ಹಿಟ್ ಮಾಡಿದ್ದರೂ ವಾಸಿಯಾಗಿತ್ತು. ಕ್ಷೇತ್ರ ರಕ್ಷಣೆ ನಿಯಮಗಳು, ಪವರ್ ಪ್ಲೇ, ಟ್ವೆಂಟಿ ಟ್ವೆಂಟಿ, ಈಗ ಇದು. ‘ದಿನದಿಂದ ದಿನಕ್ಕೆ ಕ್ರಿಕೆಟ್ ಬ್ಯಾಟ್ಸಮನ್‌ಗಳ ಆಟವಾಗುತ್ತಿದೆ, ಬೌಲರುಗಳಿಗೆ ಬಂದದ್ದಕ್ಕೆ ಥ್ಯಾಂಕ್ಸ್ ರೀ ಅಂತ ಹೇಳಬೇಕಾದ ಪರಿಸ್ಥಿತಿ ಬಂದಿದೆ’ ಅಂತ ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಡೊನಾಲ್ಡ್ ಒಮ್ಮೆ ಕಾಮೆಂಟ್ರಿ ಮಾಡುತ್ತಾ ಹೇಳಿದ್ದರು. ಶೇಕಡಾ ನೂರರಷ್ಟು ಸತ್ಯ ಅದು.
*
ಛಾಪಾ ತೆಲಗಿ ಈಗ ಪಾಪ ತೆಲಗಿ ಅನ್ನೋ ಥರ ಆಗಿದ್ದಾನೆ. ೧೩ ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ ಜತೆಗೆ ದಾಖಲೆಯ ೨೫೧ ಕೋಟಿ ರೂಪಾಯಿ ದಂಡವನ್ನೂ ಹಾಕಿದೆ. ‘ನನ್ನ ಹತ್ರ ಅಂತೂ ಒಂದು ಸಾವ್ರನೂ ಇಲ್ಲ’ ಅಂತ ತೆಲಗಿ ಬಾಯಿಬಿಟ್ಟು ಹೇಳಿದ್ದಾನೆ. ‘ಕೋಟಿ ಕೋಟಿ ದಂಡ, ಕಟ್ಟೋ ಯೋಚನೇನೂ ದಂಡ; ಛಾಪ ಕೂಪದ ತೆಲಗಿ, ಸುಮ್ಮನೆ ಜೈಲಲ್ಲಿ ಮಲಗಿ’ ಅಂತ ಅವನಿಗೆ ಸಲಹೆ ಕೊಟ್ಟಿದ್ದು ನಮ್ಮ ಮಿಸ್ ಸೋಸಿಲಿ.
*
ಅಂದಹಾಗೆ, ತೆಲಗಿ ನ್ಯಾಯಾಧೀಶರಿಗೆ ನ್ಯಾಯದೇವತೆಯ ಬೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಾನಂತೆ. ಅದೂ ನಕಲೀನೇ ಇರಬೇಕು ಅನ್ನೋದು ನಿಜವಾಗಲೂ ಸಿನಿಕತೆ ಆಗುತ್ತೆ!
*
ಕಳೆದೊಂದು ವರ್ಷದಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಲ್ಲಿ ಬಹಳಷ್ಟರ ನಿರ್ಮಾಪಕರು ರಿಯಲ್ ಎಸ್ಟೇಟ್ ವ್ಯವಹಾರದವರಂತೆ. ರೀಲು ಮತ್ತು ರಿಯಲ್ಲು ಒಂದೇ ಆದ ಅಪರೂಪದ ಪ್ರಸಂಗ ಇದಲ್ಲವೆ?!
*
ತಾನು ಭಾರತ ತಂಡದ ಕೋಚ್ ಆಗಿ ಬರುವುದಿಲ್ಲ ಎಂದು ಘೋಷಿಸಿ ಗ್ರಹಾಂ ಫೋರ್ಡ್ ಬಿಸಿಸಿಐಗೆ ಮುಜುಗರ ತಂದಿತ್ತಿದ್ದಾರೆ. ಮಿಸ್ ಸೋಸಿಲಿ ಈ ಸುದ್ದಿಗೆ ಶೀರ್ಷಿಕೆ ಕೊಟ್ಟರೆ ಅದು ಹೀಗೆ: ಒಲ್ಲೆನೆಂದ ಫೋರ್ಡು; ಕಂಗಾಲಾದ ಬೋರ್ಡು ಅಥವಾ ಭಾರತಕ್ಕೆ ಸಿಗದ ಕೋಚು; ಬಿಸಿಸಿಐಗೆ ಪೇಚು. ಆದರೆ ಆಟಗಾರರರಿಗೆ ಇದು ಸಂತಸಕರ ಸುದ್ದಿಯೇ. ಯಾಕೆಂದರೆ
ಇದ್ದಿದ್ದರೆ ಒಬ್ಬ ವಿದೇಶದಿಂದ ಬಂದ ಕೋಚು
ಪಾಲಿಸಬೇಕಿತ್ತು ಅವನಪ್ಪಣೆ ತಪ್ಪದೆ ಚಾಚೂ
ಅದೇ ಈಗ ನೋಡಿ ಬರೀ ತಿನ್ನು, ಕುಡಿ, ಪಾಚು
ನಮ್ಮ ಕ್ರಿಕೆಟ್ ರೈಲೀಗ ಸ್ಲೀಪರ್ ಕೋಚು! ಎಂಬ ಹನಿಗವನವೂ ಸೋಸಿಲಿಯದೆ.
*
ಪುಸ್ತಕಗಳಿಗೀಗ ವಿವಾದದ ಸಮಯ. ‘ಆನು ದೇವಾ ಹೊರಗಣವನು’ ಕೃತಿ ಕುರಿತ ಚರ್ಚೆ ಬಿಸಿ ಏರಿ ಸ್ವಾಮೀಜಿಯೊಬ್ಬರು ಸಾಹಿತಿಯೊಬ್ಬರಿಗೆ ಏಕ‘ವಚನ’ದಲ್ಲಿ ಬೈದು, ಬೆನ್ನಿಗೆ ಗುದ್ದಿದ ಸುದ್ದಿ ಓದಿರುವಿರಲ್ಲ? ಯಾಕೆ ಹೊಡಿತೀರಿ ‘ಸ್ವಾಮಿ’ ಅಂತ ‘ನೊಂದ’ ಸಾಹಿತಿಗಳು ಕೇಸು ಹಾಕಲು ಮುಂದಾಗಿದ್ದಾರಂತೆ. ಹಾಡುವ ಸ್ವಾಮಿ ಗೊತ್ತಿತ್ತು, ಈಜುವ ಸ್ವಾಮಿ ಗೊತ್ತಿತ್ತು, ಹೊಡೆಯುವ ಸ್ವಾಮಿ ಈಗ ಗೊತ್ತಾಯ್ತು.
*
ಗೀರ್ ಅರಣ್ಯದಲ್ಲಿ ಸಿಂಹಗಳು ಸಾಯುತ್ತಿರುವ ಆತಂಕಕಾರಿ ಸುದ್ದಿಗಳು ನಿಯಮಿತವಾಗಿ ಬರುತ್ತಿವೆಯಾದರೂ, ಕನ್ನಡ ನಾಡಿನಲ್ಲಿ ಸಿಂಹಗಳ ಸಂಖ್ಯೆ ಹೆಚ್ಚುತ್ತಿರುವಂತಿದೆ. ನಾನು ಸಿಂಹದ ಮರಿ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ಇತ್ತೀಚೆಗೆ ಘರ್ಜಿಸಿದ್ದಾರೆ. ಹಾಗಾದರೆ ಸಿಂಹದ ಮರಿ ಎಂಬ ಸಿನಿಮಾ ಮಾಡಿದ ಶಿವರಾಜ್‌ಕುಮಾರ್ ಗತಿ ಏನು? ಅವರಿನ್ನು ಸಿನ್ಮಾದ ಮರಿಯೇ?!
*
ಇದು ಐಕ್ಯತಾ ಯುಗ. ‘ಒಂದಾಗಿ’ ಬಾಳು ಇಂದಿನ ಬಿಸಿನೆಸ್ ಮಂತ್ರ. ಜೆಟ್‌ನಲ್ಲಿ ಸಹಾರಾ, ಕಿಂಗ್‌ಫಿಶರ್‌ನಲ್ಲಿ ಏರ್‌ಡೆಕ್ಕನ್ ಹೀಗೆ ಒಂದು ಕಂಪನಿ ಮತ್ತೊಂದರಲ್ಲಿ ವಿಲೀನಗೊಳ್ಳುವ ಸುದ್ದಿಗಳು ಬರುತ್ತಲೇ ಇವೆ. ಭಾರತದಲ್ಲಿ ಈ ವರ್ಷ ನಡೆದ ಇಂಥ ಟೇಕೋವರ್‌ಗಳಲ್ಲಿ ಅತ್ಯಂತ ದೊಡ್ಡದು ಅಮಿತಾಭ್ ಬಚ್ಚನ್, ಐಶ್ವರ್ಯಾ ರೈಯನ್ನು ಸೊಸೆ ಮಾಡಿಕೊಂಡದ್ದು. ಈಗ ಅಭಿ-ಅಮಿತಾಭ್-ಐಶ್‌ರ ಈ ‘ಕಂಪನಿ’ಯ ವಾರ್ಷಿಕ ವಹಿವಾಟು ೨೫೦ ಕೋಟಿ ರೂಪಾಯಿಗೂ ಹೆಚ್ಚಂತೆ!
*
ಸಿನಿಮಾ ನಟರು ತಾವು ಕೃಷಿಕರು ಅಂತ ಹೇಳಿಕೊಂಡಿದ್ದು ಈ ವಾರದ ಜೋಕು. ಇದನ್ನು ಕೇಳಿ ದೇಶದ ರೈತರು ಆತ್ಮಹತ್ಯೆ ಮಾಡಿಕೊಳ್ಳಬಹುದು. ಮಿಸ್ ಸೋಸಿಲಿ ಈ ಕುರಿತು ಬರೆದಿರುವ ಹನಿಗವನ ನೋಡಿ:
ಅಮಿತಾಭ್ ಅಂತಾನೆ ನಾನು ರೈತ
ಅಮೀರ್‌ಖಾನ್ ಅಂತಾನೆ ನಾನೂ ರೈತ
ರೈತರಾಗಿಲ್ಲ ಇಬ್ಬರೂ ಸಿನಿಮಾದಲ್ಲಿ ಸೈತ
*
ಸುದ್ದಿ ಇಂದು ರಂಜನೆ ಕೂಡ. ಸುದ್ದಿಯಷ್ಟೇ ಟಿವಿಯಲ್ಲಿ ಅದನ್ನು ಓದುವಾಕೆಯ ಸೌಂದರ್ಯವೂ ಇಂದು ಚರ್ಚೆಯ ವಿಷಯ. ಹಾಗೇ ಆಕೆ ಮಾಡುವ ತಪ್ಪುಗಳೂ ರಂಜನೀಯವಾಗಿರುತ್ತವೆ. ಕೆಲವು ದಿನಗಳ ಹಿಂದೆ ಚಾನೆಲ್‌ವೊಂದರಲ್ಲಿ ಸುದ್ದಿ ಓದುವಾಕೆ ‘ರಸ್ತೆ ಅಪಘಾತದಲ್ಲಿ ಸಚಿವರು ಪರಾರಿಯಾಗಿದ್ದಾರೆ’(ಪಾರಾಗಿದ್ದಿರಬೇಕು ಪಾಪ) ಎಂದು ಹೇಳಿದ ನಂತರ ಸಾರಿ ಗೀರಿ ಕೇಳಲು ಹೋಗಲಿಲ್ಲ. ತನ್ನ ತಪ್ಪಿನ ಅರಿವಾಗಿ ತನಗೇ ನಗು ಬಂತೇನೋ, ಚೆಂದವಾಗಿ ನಕ್ಕುಬಿಟ್ಟಳು. ನೋಡುಗರು ಪ್ರಸನ್ನರಾದರು.
*
ಸುನೀತಾ ಧರೆಗಿಳಿದಿದ್ದಾರೆ. ಎಲ್ಲರಿಗೂ ಸಂತಸವಾಗಿದೆ. ಆದರೆ ಆಕೆಯ ವಿರೋಧಿಗಳಿಗೆ? ಅಷ್ಟು ದಿನದಿಂದ ಬಾಹ್ಯಾಕಾಶದಲ್ಲಿ ನಡೆದಾಡಿದ ಅವಳಿಗೀಗ ನೆಲದ ಮೇಲೆ ಕಾಲೇ ನಿಲ್ತಿಲ್ಲ ಅಂತ ಅವರು ಆಡಿಕೊಳ್ಳಬಹುದು. ಅಥವಾ ಮೇಲೇರಿದವರು ಒಂದು ದಿನ ಕೆಳಗಿಳಿಯಲೇಬೇಕು ಅಂತ ವೇದಾಂತದ ಮಾತಾಡಿ ಸಮಾಧಾನ ಪಟ್ಟುಕೊಳ್ಳಬಹುದು. ಬರೀ ವೇದಾಂತವಲ್ಲ, ಗುರುತ್ವಾಕರ್ಷಣೆಯ ಸಿದ್ಧಾಂತವೂ ಅದನ್ನೇ ಅಲ್ಲವೇ ಹೇಳೋದು?
*
ಜನಪ್ರಿಯ ಹಾಡಿನ ಆರಂಭದಲ್ಲಿ ಎಲ್ಲಾದರು ಒಂದೆಡೆ ತನ್ನ ಹೆಸರನ್ನು ಸೇರಿಸಿ ಕೇಳಿಸುವುದು ಎಲ್ಲ ಎಫ್ ಎಂ ರೇಡಿಯೋಗಳ ಹಳೆಯ ಚಾಳಿ. ‘ಪಲ್ಲಕ್ಕಿ’ ಸಿನಿಮಾದ ‘ಕಣ್ಣಲ್ಲು ನೀನೇನೆ ಓಹೋ, ಕುಂತಲ್ಲು ನೀನೇನೇ ಓಹೋ’ ಎಂಬ ಗೀತೆಯ ಓಹೋ ಎಂಬಲ್ಲೆಲ್ಲ ‘ಮಿರ್ಚಿ’ ಅಂತ ಸೇರಿಸಿ ಕೇಳಿಸಿದ್ದು ರೇಡಿಯೋ ಮಿರ್ಚಿಯವರು. ಅಲ್ಲಾ ಮಾರಾಯ್ರೆ ಕಣ್ಣಲ್ಲಿ ಮಿರ್ಚಿ ಇಟ್ಟರೆ ಹಾಹಾ‘ಖಾರ’ ಆಗೋಲ್ವೆ? ಹಾಗಂತ ಕೇಳುತ್ತಿರುವುದು ಮಿಸ್ ಸೋಸಿಲಿ.
*
ಮಹಾನಗರಗಳ ಮಹಾಜನತೆಗೆ ಈಗ ಬೇಡದಿದ್ದರೂ ಸುಮ್ಮನೆ ವಸ್ತುಗಳನ್ನು ಖರೀದಿಸುವ ಚಟ. ಅಂಥ ಮನೋಭಾವಕ್ಕ್ಕೆ ‘ಶಾಪಿಂಗ್ ಕಾಂಪ್ಲೆಕ್ಸ್’ ಎಂದು ಕರೆಯಬಹುದು ಎಂಬುದು ಹಳೆಯದು. ಅದೇ ರೀತಿ, ಈ ಚಟಕ್ಕೆ ಬಿದ್ದು ಹೊರಬರಲಾರದೆ ಒದ್ದಾಡುತ್ತಿರುವವರನ್ನು ಶಾಪ್‌ಗ್ರಸ್ತರು ಎಂದು ಕರೆಯಬಹುದು ಎಂಬುದು ಹೊಸದು.
*
ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಪೊಲೀಸರು ಏನೆಲ್ಲಾ ನಿಯಮಗಳನ್ನು ಜಾರಿಗೆ ತಂದರೂ ಫಾಲೋ ಆಗುತ್ತಿರುವ ಒಂದೇ ನಿಯಮ ಯಾವುದು ಗೊತ್ತೇ? -ನೀನು ನುಗ್ತಿಯೋ ಇಲ್ಲಾ ನಾನ್ ನುಗ್ಲೋ?!
*
ಮೂರ್ತಿ ಅಂದರೆ ವಿವಾದ ಎಂಬಂತಾಗಿದೆ. ಗಾಂಧಿ, ಅಂಬೇಡ್ಕರ್‌ರಂಥ ದೊಡ್ಡವರ ಮೂರ್ತಿಗಳಿಗೆ ಅವಮಾನ ಮಾಡೋದು ಆಗಾಗ ವಿವಾದವಾಗುತ್ತಲೇ ಇರುತ್ತದೆ. ಮೊನ್ನೆ ಮೊನ್ನೆ ಇನ್ಫೋಸಿಸ್ ನಾರಾಯಣಮೂರ್ತಿ ಏನೋ ಹೇಳಿ ದೊಡ್ಡ ವಿವಾದವಾಗಿತ್ತು. ಈಗ ಸಾಹಿತಿ ಅನಂತಮೂರ್ತಿ ಸರದಿ. ಮೂರ್ತಿ ಚಿಕ್ಕದಾದರೂ ‘ಕೀರ್ತಿ’ ದೊಡ್ಡದು(ಪೂರ್ತಿ ದೊಡ್ಡದು) ಯಾಕೆಂಬುದು ಸಂಶೋಧನೆಗೆ ಯೋಗ್ಯ ವಿಷಯ. ಸದಾ ವಿವಾದ ಮಾಡುತ್ತಾ ಇರುವ ಸಂಶೋಧಕ ಚಿದಾನಂದ‘ಮೂರ್ತಿ’ಯವರೇ ಅದನ್ನು ಕೈಗೆತ್ತಿಕೊಂಡರೆ ಇನ್ನೂ ಒಳಿತು!
*
ಅವರು ಕಾದಂಬರಿಕಾರರೇ ಅಲ್ಲ ಎಂದು ಅನಂತಮೂರ್ತಿ ಆರೋಪಿಸಿದ್ದರೂ ಭೈರಪ್ಪ ಎಲ್ಲೂ ಪ್ರತಿಕ್ರಿಯಿಸಲೇ ಇಲ್ಲ. ಎಷ್ಟ್ ಬೈತೀರಾ ಬೈರಪ್ಪ ಅಂತ ಅವರು ಮೌನವಾಗಿದ್ದುಬಿಟ್ಟಿದ್ದಾರೆ. ಆದರೂ ವಿವಾದ ಇಷ್ಟೊಂದು ಬಿಸಿಯಾಗಿದ್ದು ನೋಡಿದ ಮೇಲೆ ಅನಂತಮೂರ್ತಿಯವರಿಗೂ ಮೌನದ ಮೌಲ್ಯ ಅರಿವಾಗಿ ತಾವೂ ಮೌನವ್ರತ ಕೈಗೊಂಡಿದ್ದಾರೆ. ಆದರೆ ಕನ್ನಡದ ಸೂಕ್ಷ್ಮ ಮನಸ್ಸುಗಳಿಗೆ ಭೈರಪ್ಪನವರು ಬರೆದದ್ದು ಟ್ರಾಶ್ ಆದರೆ ಎಷ್ಟು ನಷ್ಟವೋ, ಅನಂತಮೂರ್ತಿಯವರ ಅದ್ಭುತ ಭಾಷಣಗಳು ಇನ್ನು ಮುಂದೆ ಮಿಸ್ ಆದರೆ ಅದೂ ಅಷ್ಟೇ ನಷ್ಟ. ಈ ಕಾಲದ ಇಬ್ಬರು ಪ್ರಮುಖ ಲೇಖಕರ ಇಂಥ ಒಣ ಠೇಂಕಾರ ಈಗಾಗಲೇ ಕ್ಷೀಣವಾಗಿರುವ ಗಂಭೀರ ಓದುಗರ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಅಷ್ಟೆ. ಗುಂಪುಗಾರಿಕೆಗೆ ಸಾಕಷ್ಟು ಓದುಗರು ಇಲ್ಲಿಲ್ಲವೆಂಬ ಕಟು ಸತ್ಯ ಸಾಹಿತಿಗಳಿಗೆ ಗೊತ್ತಾಗಬೇಕು.
*
ಇಡೀ ಭಾರತದಲ್ಲಿರುವ ದರ್ಶಿನಿಗಳ ಗ್ರಾಹಕರು ಒಂದು ಸಂಘ ರಚಿಸಿಕೊಂಡರೆ ಅದನ್ನು ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಅನ್ನಬಹುದು!
*
ಪ್ರಾಣಭಯದಿಂದಾಗಿ ಹಿಟ್ಲರ್ ಮತ್ತು ಸದ್ದಾಂ ಹುಸೇನ್ ಸಭೆಗಳಿಗೆ ಬರುವಾಗ ತಮ್ಮಂತೇ ಕಾಣುವ ಒಂದಷ್ಟು ಜನರನ್ನು ಜತೆಗೆ ಒಯ್ಯುತ್ತಿದ್ದನಂತೆ. ಅನಗತ್ಯವಾಗಿ ಜನರ ಗಮನ ಸೆಳೆಯುವುದನ್ನು ತಪ್ಪಿಸಲು ನಮ್ಮ ಮಾಜಿ ಮುಖ್ಯಮಂತ್ರಿಯೊಬ್ಬರು ವಿಗ್ ತೆಗೆದಿಟ್ಟು ನೆಮ್ಮದಿಯಿಂದ ರಸ್ತೆಗಳಲ್ಲಿ ನಡೆದಾಡುತ್ತಿದ್ದರಂತೆ! ಅದೇ ರೀತಿ ಮೊನ್ನೆ ಕೋರ್ಟಿಗೆ ಬಂದ ಐವರು ಬುರ್ಖಾಧಾರಿಗಳಲ್ಲಿ ಆರೋಪಿ ಹಸೀನಾ ಪಾರ್ಕರ್ ಯಾರೆಂಬುದು ನ್ಯಾಯಾಧೀಶರಿಗೂ ತಿಳಿಯಲಿಲ್ಲ. ಕಡೆಗೆ, ನಿಜವಾದ ಹಸೀನಾ ಎದ್ದು ನಿಲ್ಲದಿದ್ದರೆ, ಬಂಧನಕ್ಕೆ ಆದೇಶಿಸುವುದಾಗಿ ಜಡ್ಜ್ ಹೆದರಿಸಬೇಕಾಯಿತು. ನಟ ಸಂಜಯ್ ದತ್ ಕೂಡ ಹಸೀನಾರಿಂದ ಪಾಠ ಕಲಿತು ಕೋರ್ಟಿಗೆ ಬುರ್ಖಾ ಧರಿಸಿ ಬಂದರೆ ಅವರನ್ನು ಬುರ್ಖಾ ದತ್ ಅನ್ನಬಹುದೇನೊ? ಅದರಿಂದ ಪತ್ರಕರ್ತೆ ಬರ್ಖಾ ದತ್‌ಗೆ ಬೇಸರವಾಗುವುದೆ?
*
ಎಲ್ಲರನ್ನೂ ಅಪ್ಪಿಕೊಳ್ಳುವ ಶಪಿರೋನ ಅಪ್ಪಿಕೋ ಚಳವಳಿ(ನೂರೆಂಟು ಮಾತು ಅಂಕಣ)ಯಿಂದ ಪ್ರೇರಿತರಾದ ಬೆಂಗಳೂರಿನ ಪಡ್ಡೆಗಳು, ಅಪ್ಪಿಕೊಳ್ಳಲು ತಮಗಿರುವ ಕಷ್ಟವನ್ನು ಈ ಹನಿಗವನದಲ್ಲಿ ಹೇಳಿದ್ದಾರೆ.

ಶಪಿರೊ ಅಮೃತಾರ ರೀತಿ ನಮಗೂ ಇಷ್ಟ ಅಪ್ಪುಗೆ
ಆದರದಕೆ ಮೊದಲು ಬೇಕು ಚೆಲುವೆಯರ ಒಪ್ಪಿಗೆ
ಅಪ್ಪಿ ತಪ್ಪಿದ ಪಾಕಿಸ್ತಾನದ ಪ್ರವಾಸೋದ್ಯಮ ಸಚಿವೆ ನೀಲೋಫರ್ ಬಕ್ತಿಯಾರ್ ಉದಾಹರಣೆ ಬಿಸಿಬಿಸಿಯಾಗೇ ಇದೆ. ಕೋಚನ್ನು ಸುಮ್ಮನೆ ಅಪ್ಪಿಕೊಂಡದ್ದಕ್ಕೆ ರಾಜೀನಾಮೆ ತೆತ್ತರು ನೀಲೋಫರ್ ರ್ಹುಡುಗಿಯನ್ನು ಶುದ್ಧ ಮನಸಿಂದ ಅಪ್ಪಿದರೂ ಲೋಕದ ಕಣ್ಣಲ್ಲಿ ನೀ ಲೋಫರ್
*
ಕ್ರಿಕೆಟಿಗ ಧೋನಿಯನ್ನು ಇತ್ತೀಚೆಗೆ ವುಮನ್ ಹ್ಯಾಂಡಲ್ ಮಾಡಲಾಯಿತು! ಕೋಲ್ಕತಾದ ಹುಡುಗಿಯೊಬ್ಬಳು ತರಬೇತಿ ಮುಗಿಸಿ ಕ್ರೀಡಾಂಗಣದಿಂದ ಹೊರಬರುತ್ತಿದ್ದ ನೀಳಕೇಶಿಗೆ ‘ಮುತ್ತಿ’ಗೆ ಹಾಕಿ ‘ತಬ್ಬಿ’ಬ್ಬುಗೊಳಿಸಿದಳು. ಜತೆಗೆ, ವಿಶ್ವಕಪ್‌ನಲ್ಲಿ ಎರಡು ಮ್ಯಾಚ್ ಸೋತಿದ್ದಕ್ಕೆ ಆಟಗಾರರ ಪೋಸ್ಟರುಗಳನ್ನು ಸುಡುತ್ತಿದ್ದ ದೇಶದ ಜನರನ್ನೂ ಆಕೆ ತಬ್ಬಿಬ್ಬುಗೊಳಿಸಿದ್ದಳು. ‘ಮಾಡಬೇಕನಿಸಿತು, ಮಾಡ್ದೆ ’ ಎಂದು ಆಕೆ ಬಿಂದಾಸ್ ಆಗಿ ಟಿವಿಯಲ್ಲಿ ಹೇಳಿದರೆ, ತನಗೇನನ್ನಿಸಿತು ಎಂದು ಧೋನಿ ಹೇಳಲಿಲ್ಲ. ಆದರೆ ಬಾಂಗ್ಲಾ ವಿರುದ್ಧದ ಮ್ಯಾಚಿನಲ್ಲಿ ಭಾರತವನ್ನು ಗೆಲ್ಲಿಸಿ ಪಂದ್ಯಪುರುಷನಾದ. ಸುಳ್ಳಲ್ಲ, ಎಲ್ಲ ವಿಜಯಗಳ ಹಿಂದೂ ಒಬ್ಬ...
*
ಎಲ್ಲರಿಗೂ ಸುದ್ದಿ ಮಾಡುವ ಬಯಕೆ. ಅದು ಜನರಿಗೆ ಅನ್ವಯಿಸಿದಷ್ಟೇ ಸುದ್ದಿ ಚಾನೆಲ್‌ಗಳಿಗೂ ಅನ್ವಯಿಸುತ್ತದೆ. ಪೀಪಲ್ ಮೇಕ್ ನ್ಯೂಸ್, ಚಾನೆಲ್ಸ್ ಬ್ರೇಕ್ ನ್ಯೂಸ್. ಮೊನ್ನೆ ವ್ಯಕ್ತಿಯೊಬ್ಬ ಪ್ರಧಾನಿ ಮನೆಯ ಬಳಿ ಆತ್ಮಹತ್ಯೆಗೆ ಯತ್ನಿಸಿದ. ಚಾನೆಲ್‌ಗಳು ದಿನವಿಡೀ ಬ್ರೇಕಿಂಗ್ ನ್ಯೂಸ್ ಎಂದು ಹೊಡೆದು ಅವನ ಪ್ರಯತ್ನವನ್ನು ಗ್ರಾಂಡ್ ಸಕ್ಸಸ್ ಮಾಡಿದವು. ಪ್ರಚಾರಕ್ಕಾಗಿ ಹಾಗೆ ಮಾಡಿದೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆ ವ್ಯಕ್ತಿ ಹೇಳಿದಾಗ ಸುದ್ದಿಗಾರರಿಗೆ ಕೊಂಚವಾದರೂ ಮೂರ್ಖರಾದೆವಲ್ಲ ಅನಿಸಲಿಲ್ಲವೆ? ಐಶ್ವರ್ಯಾ ಅಭಿಶೇಕ್ ಒಂದಾದ ಸುದ್ದಿಗೂ ಬ್ರೇಕಿಂಗ್ ನ್ಯೂಸ್ ಎಂದು ತೋರಿಸುವ ನ್ಯೂಸ್ ಚಾನೆಲ್‌ಗಳು ಸೆಲಿಬ್ರಿಟಿಗಳ ಸಂಬಂಧ ಬ್ರೇಕ್ ಆದಾಗ ಏನಂತ ತೋರಿಸುತ್ತವೊ? ಶಿಲ್ಪಾ -ಗೆರೆ ಚುಂಬನ ವಿವಾದಕ್ಕೆ ಸಂಬಂಧಿಸಿದಂತೆ ಪದೇಪದೇ ಅದನ್ನೇ ತೋರಿಸಿದ ಚಾನೆಲ್‌ಗಳನ್ನು ಸಚಿವ ದಾಸ್‌ಮುನ್ಶಿ ‘ಇದೆಂಥಾ ಬ್ರೇಕಿಂಗ್ ನ್ಯೂಸ್? ಮನಗಳನ್ನು ಬ್ರೇಕ್ ಮಾಡುವುದೆ?’ ಅಂತ ಕೇಳಿದ್ದು ಅತ್ಯಂತ ಸೂಕ್ತವಾಗಿತ್ತು.
*
ನಿಜಕ್ಕೂ ಸಖತ್ ಹಾಟ್ ಆದ ಸುದ್ದಿಯೊಂದು ಬ್ಯಾಂಕಾಕ್‌ನಿಂದ ಬಂದಿದೆ. ಮನುಷ್ಯನ ಐಷಾರಾಮ, ದುರಾಸೆಗಳು ಹೀಗೇ ಮುಂದುವರಿದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ಭೂಮಿಯ ತಾಪಮಾನ ೨ ಡಿಗ್ರಿಯಷ್ಟು ಏರಿ ಆಗಬಾರದ ಅನಾಹುತಗಳು ಆಗುತ್ತವೆ ಎಂದು ಗ್ಲೋಬಲ್ ವಾರ್ಮಿಂಗ್ ಬಗ್ಗೆ ಸಮ್ಮೇಳನ ನಡೆಸಿದ ವಿಜ್ಞಾನಿಗಳು ಗ್ಲೋಬಲ್ ವಾರ್ನಿಂಗ್ ನೀಡಿದ್ದಾರೆ. ಹಸಿರು ಮನೆ ಅನಿಲಗಳ ಉತ್ಪನ್ನಕ್ಕೆ ಅತಿ ಹೆಚ್ಚು ಕಾಣಿಕೆ ನೀಡುತ್ತಿರುವ ಅಮೆರಿಕದಂಥ ದೇಶಗಳು ಈ ನೋಟಿಸಿನಿಂದಾದರೂ ಎಚ್ಚೆತ್ತುಕೊಳ್ಳದಿದ್ದರೆ ಭೂಮಿ ಬಿಸಿ ಉಸಿರು ಬಿಡುವುದು ತಪ್ಪದು.

*
ನೋಡು ನಮ್ಮ ಬಾವುಟ!ಮಂದಿರ ವಿವಾದ ಕಳೆದ ವಾರ ಮತ್ತೆ ಕೇಳಿಬಂತು. ಆಕ್ಚುಯಲಿ ಅದು ಮಂದಿರಾ ವಿವಾದ. ಕ್ರಿಕೆಟ್ ಕಾಮೆಂಟರಿಕಾರ್ತಿ ಮಂದಿರಾ ಬೇಡಿ ಈ ಸಲ ಸೀರೆ ಧರಿಸಿ ವಿವಾದ ಸೃಷ್ಟಿಸಿದ್ದಾರೆ. ಪಾಪ ಆಕೆ ಬಿಕಿನಿ ತೊಟ್ಟರೂ ವಿವಾದ, ಸೀರೆ ತೊಟ್ಟರೂ ವಿವಾದ ಎಂಬ ಅನುಕಂಪವೇನೂ ಬೇಡ. ಆಕೆ ಸೀರೆಯ ಕೆಳಭಾಗದ ಮೇಲೆ ರಾಷ್ಟ್ರಧ್ವಜ ತೊಟ್ಟದ್ದು ಎಲ್ಲರ ಆಕ್ರೋಶಕ್ಕೆ ಕಾರಣ. ಸಾರಿ ಮೇಲೆ ಧ್ವಜ ತೊಟ್ಟಿದ್ದಕ್ಕೆ ಅವರಾಗಲೇ ಸಾರಿ ಹೇಳಿದ್ದರೂ ಕೆಲವರು ಮಂದಿರಾ ಮೇಲೆ ಕೇಸ್ ದಾಖಲಿಸಿದ್ದಾರೆ. ಇನ್ನೊಮ್ಮೆ ಹೀಗೆ ಮಾಡ ‘ಬೇಡಿ’ ಎಂದಿದ್ದರೆ ಸಾಕಿತ್ತು ಎಂಬುದು ಬೇಡಿ ಅಭಿಮಾನಿಗಳ ಅಭಿಪ್ರಾಯ. ಸದ್ಯ ಈ ವಿವಾದದಿಂದ ಮುಂಚಿನ ಬಿಕಿನಿ ಮತ್ತು ಹಚ್ಚೆ ವಿವಾದಗಳು ಮರೆಯಾಗುತ್ತವಲ್ಲ ಎಂಬುದೊಂದೇ ಮಂದಿರಾ ಬೇಡಿಗೆ ಸಮಾಧಾನವಂತೆ.
*
ರಾಷ್ಟ್ರಧ್ವಜ ಇತ್ತೀಚೆಗೆ ಅಪಮಾನಕ್ಕೀಡಾಗುತ್ತಿರುವುದು ಇದು ಮೊದಲ ಸಲವಲ್ಲ. ರಿಟೈರಾಗು ಎಂಬುವರ ಕಾಟಗಳೇ ಸಾಕು ಅಂತಿದ್ದ ಸಚಿನ್, ರಾಷ್ಟ್ರಧ್ವಜದ ರೂಪದ ಕೇಕ್ ಕತ್ತರಿಸಿ ವಿವಾದದಲ್ಲಿ ಸಿಕ್ಕಿಕೊಂಡರು. ಅತ್ತ ಒರಿಸ್ಸಾದಲ್ಲಿ ಸ್ವಘೋಷಿತ ದೇವತೆ ನಿರ್ಮಲಾರಂತೂ ರಾಷ್ಟ್ರಧ್ವಜವನ್ನು ಕಾಲ ಬುಡದಲ್ಲೇ ಹಾಸಿಕೊಂಡು ಕುಳಿತಿದ್ದರು. ಪ್ರತಿ ಸ್ವಾತಂತ್ರೋತ್ಸವ ದಿನದಂದೂ ಉಲ್ಟಾ ಹಾರಿಸಿ ಧ್ವಜಕ್ಕೆ ಅಪಮಾನ ಮಾಡುವುದಂತೂ ಇದ್ದದ್ದೇ ಬಿಡಿ.
*
ಮಕ್ಮಲ್ ಟೋಪಿ ಹಾಕೋದು ಬೇಡ ಎಂದು ಗೌಡರು ಗುಡುಗಿದ ಬೆನ್ನಲ್ಲೇ ಇನ್ನೊಬ್ಬರು ಟೋಪಿ ಹಾಕದಂತೆ ಸದಾ ತಾವೇ ಟೋಪಿ ಹಾಕಿಕೊಂಡು ಕುಳಿತ ರಾಜಕಾರಣಿಗಳು ನೆನಪಾದರು. ಎಂಜಿಆರ್, ವಿ ಪಿ ಸಿಂಗ್, ಫಾರೂಕ್ ಅಬ್ದುಲ್ಲಾ, ವಾಟಾಳ್ ನಾಗರಾಜ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಥರ ಗೌಡರೂ ಯಾಕೆ ಟೋಪಿ ಧರಿಸಬಾರದು? ಕಡೇ ಪಕ್ಷ ಕೃಷ್ಣರ ಥರ ಒಂದು .... ಹೋಗಲಿ ಬಿಡಿ!

*
ಎಲ್ಲೆಲ್ಲೂ ಈಗ ರಣಬಿಸಿಲು. ಅಷ್ಟಿಷ್ಟು ಮಳೆಯಾಗಿದ್ದರೂ, ಸುಡುವ ಬಿಸಿಲಿನಲ್ಲಿ ಕೆಂಡಾಮಂಡಲವಾಗಿರುವ ಬೆಂಗಳೂರಿಗರ ಬಾಯಲ್ಲಿ ಈಗ ಒಂದೇ ಕಾಮೆಂಟು: ಸಖತ್ ಹಾಟ್ ಮಗಾ!
*
ಎಲೆಕ್ಟ್ರಾನಿಕ್ ಮಾಧ್ಯಮಗಳ ‘ಇ’ ಕಾಲದಲ್ಲೂ ಪತ್ರಿಕೆಗಳನ್ನು ಜನ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಇತ್ತೀಚೆಗೆ ನಡೆದ ಎರಡು ಪ್ರಕರಣಗಳನ್ನು ನೋಡಿ. ತಮಿಳ್ನಾಡಿನಲ್ಲಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ಸರ್ವೆಯಿಂದ ರೊಚ್ಚಿಗೆದ್ದ ಜನ ಮೂವರು ಜನರನ್ನ್ನು ಸುಟ್ಟು ಹಾಕಿದರು (‘ಸರ್ವೆ’ ಜನ ಸುಖಿನಾ ಭವಂತು ಎಂಬ ದೊಡ್ಡ ಗುಣ ದಾಳಿ ಮಾಡಿದವರಿಗಿರದಿದ್ದುದು ವಿಷಾದನೀಯ). ಜತೆಗೆ ಐಟಿ ಸಚಿವರು ರಾಜೀನಾಮೆ ಕೊಡಬೇಕಾಯಿತು. ಅತ್ತ ಪಂಜಾಬು, ಹರಿಯಾಣಾಗಳಲ್ಲಿ ಸಿಖ್ಖರು ಸಿಕ್ಕ ಸಿಕ್ಕವರನ್ನೆಲ್ಲಾ ಹಿಡಿದು ಬಡಿಯುತ್ತಿರುವುದಕ್ಕೂ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವಿವಾದಾಸ್ಪದ ಜಾಹೀರಾತೇ ಕಾರಣ. ವಿಷ್ಯ ಹೀಗಿರುವಾಗ ಪತ್ರಿಕೆಗಳಿಗೆ ಭವಿಷ್ಯವಿಲ್ಲ ಎನ್ನುವವರ್‍ಯಾರು?
*
ಹೆಂಗಳೆಯರ ವಸ್ತ್ರ ಸಂಹಿತೆಗೆ ಸಂಬಂಧಿಸಿದ ಕೆಲವು ತುಣುಕು ಸುದ್ದಿಗಳನ್ನು ನೋಡಿ. ಯುವರಾಜ್ ಸಿಂಗ್‌ನ ಗರ್ಲ್‌ಫ್ರೆಂಡ್ ಕಿಮ್ ಶರ್ಮ ಅಂಗಪ್ರದರ್ಶನ ಮಾಡುತ್ತಾಳೆ ಎಂಬುದು ಆ ಕ್ರಿಕೆಟಿಗನ ಅಮ್ಮನ ಪ್ರಾಬ್ಲಂ. ಎಕ್ಸ್‌ಪೋಸ್ ಮಾಡುವ ಸೊಸೆ ಬೇಡ ಎಂಬುದು ಅವರ ತಕರಾರು. ಮಧ್ಯಪ್ರದೇಶದಲ್ಲೊಬ್ಬ ತನ್ನ ೨೬ ವಯಸ್ಸಿನ ಹೆಂಡತಿಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಕೋರ್ಟಿನಲ್ಲಿ ವಿಚಾರಣೆ ನಡೆದಾಗ ಆತ ಅದಕ್ಕೆ ಕೊಟ್ಟ ಕಾರಣವೇನು ಗೊತ್ತೆ? ಆಕೆ ಸೀರೆ ಉಡುವುದನ್ನು ಬಿಟ್ಟು ಸಲ್ವಾರ್ ಕಮೀಜ್ ತೊಡುತ್ತಾಳೆ ಎಂಬುದು! ಕೋಟ್ಯಾಂತರ ಹೆಣ್ಣುಮಕ್ಕಳು ಸಲ್ವಾರ್ ಕಮೀಜ್ ತೊಡುವ ಭಾರತದಲ್ಲಿ ಇಂಥ ಹೇಳಿಕೆಗೆ ಹೇಗೆ ಪ್ರತಿಕ್ರಿಯಿಸುವುದು? ಅತ್ತ ಹಿಂದೂ ಸಂಘಟನೆಗಳಂತೂ ಕಲಾವಿದರು ರಚಿಸುವ ಚಿತ್ರಗಳಲ್ಲಿ ವಸ್ತ್ರ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಬೊಬ್ಬೆ ಹಾಕುತ್ತಿವೆ!

*
ಟ್ರಾಫಿಕ್ಕಿನಲ್ಲಿ ಸಿಕ್ಕಿಬಿದ್ದು ಕೆಂಪು ಸಿಗ್ನಲ್ಲು ಹಸಿರಾಗುವುದನ್ನೇ ಕಾಯುತ್ತಾ ಕುಳಿತಾಗ ನೆನಪಾಗುವ ಹಾಡು ಯಾವುದು?-ಯೇ ಲಾಲ್ ರಂಗ್ ಕಬ್ ಮುಝೇ ಛೋಡೇಗಾ...
*
ತಾಯಾಣೆ ಎನ್ನುತ್ತಿದ್ದೆವು, ಶಾರದಾಣೆ ಎನ್ನುತ್ತಿದ್ದೆವು- ಅಲ್ಲಿಗೆ ಮುಗಿಯುತ್ತಿತ್ತು. ಸತ್ಯ ನಿರೂಪಿಸಲು ಅಗ್ನಿಪರೀಕ್ಷೆ ಮಾಡಬೇಕಾಗಿ ಬಂದದ್ದು ಒಬ್ಬ ಸೀತೆಗೆ ಮಾತ್ರ. ಅಲ್ಲಿಂದ ಮುಂದುವರಿದು ನಾವೀಗ ಮಂಪರು ಪರೀಕ್ಷೆವರೆಗೆ ಬಂದು ನಿಂತಿದ್ದೇವೆ. ನರ್ಸ್ ಒಬ್ಬರಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಶಾಸಕ ರೇಣುಕಾಚಾರ್ಯ ಆಕೆ ಹೇಳುತ್ತಿರುವುದು ಸುಳ್ಳು, ಮಂಪರು ಪರೀಕ್ಷೆ ಮಾಡಿಸಿ ಅಂದಿದ್ದಾರೆ. ಈಗಾಗಲೇ ತೆಲಗಿ ಮಂಪರು ಪರೀಕ್ಷೆಯ ಚಿತ್ರಿಕೆಗಳನ್ನು ಟಿವಿಯಲ್ಲಿ ನೋಡಿ ನಾವು ನಕ್ಕಿದ್ದೇವೆ. ಕುಡಿದವರು ನಿಜ ಹೇಳುತ್ತಾರೆ ಎಂಬ ಮಾತಿನಿಂದಲೇ ಹೊಳೆಯಿತೇನೊ ಈ ಮಂಪರು ಪರೀಕ್ಷೆ ಐಡಿಯಾ. ವಿಪರ್‍ಯಾಸವೆಂದರೆ ಕುಡುಕರ ಪತ್ತೆಗೆ ಮಂಪರು ಪರೀಕ್ಷೆ ಉಪಯೋಗಕ್ಕೆ ಬಾರದು. ಏಕೆಂದರೆ ಅವರು ಈಗಾಗಲೇ ಮಂಪರಿನಲ್ಲಿರುತ್ತಾರಲ್ಲ!

*
ಹೆಂಗಸರಿಗೆ ಕಿರುಕುಳ ನೀಡುವ ಶಾಸಕನನ್ನು ದುಶ್ಯಾಸಕ ಎಂದು ಕರೆಯಬಹುದೆ?-ಕರೆಯಬಾರದು, ಕರೆದರೆ ಬಂದು ಬಿಟ್ಟರೆ ಎಂಬುದು ಒಂದು ಆತಂಕ!
*
ಮೊನ್ನೆ ಇಸ್ರೋ ಇಟಲಿಯ ಉಪಗ್ರಹವನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಸೇರಿಸಿದೆ. ಇಟಲಿಯ ಸೋನಿಯಾರನ್ನು ಪ್ರಧಾನಿ ಪಟ್ಟಕ್ಕೇರಿಸಲೂ ಇಸ್ರೋ ನೆರವು ಪಡೆದರೆ ಹೇಗೆ ಎಂಬ ಚಿಂತನೆ ೧೦ ಜನಪಥ್ ಹೊರಗೆ ಇದೀಗ ನಡೆಯುತ್ತಿದೆ.
*
ಎಲ್ಲರೆದುರಿಗೇ ಮುತ್ತು ಕೊಡಿಸಿಕೊಂಡಳಲ್ಲ ಶಿಲ್ಪಾ, ಇರಬಾರದೆ ಅವಳಿಗೆ ನಾಚಿಕೆ ಸ್ವಲ್ಪ ? ಎಂದು ಕೆಲವು ಮಡಿವಂತರು ಕೇಳುತ್ತಿದ್ದರೆ, ಕೊಡಿಸಿಕೊಂಡವಳು ಶೆಟ್ಟಿ, ಮನರಂಜನೆ ಬಿಟ್ಟಿ ಎಂಬುದು ಕೆಲ ರಸಿಕರ ಅಭಿಪ್ರಾಯ. ಒಟ್ಟಿನಲ್ಲಿ ಈ ಮಂಗಳೂರು ತರಳೆ(ಲೆ) ವರ್ಷವಿಡೀ ಸುದ್ದಿಯಲ್ಲಿದ್ದಾಳೆ. ಮೊದಲು ಜನಾಂಗೀಯ ನಿಂದನೆ, ಈಗ ಚುಂಬನ ಆಲಿಂಗನೆ! ಶಿಲ್ಪಾ ನಿನಗಿದೋ ದೊಡ್ಡ ವಂದನೆ, ಹೀಗೆ ಸುದ್ದಿ ಮಾಡೋದು ನಿನಗೆ ಚಂದನೆ? ಎಂದು ಕೇಳುತ್ತಿದ್ದಾರೆ ಮಾಣಿಗಳು!
*
ಡಿಜಿಟಲ್ ಪ್ರಿಂಟಿಂಗ್ ಬಂದ ಮೇಲೆ ಈಗೇನು ಬ್ಯಾನರ್ ಮಾಡಿಸುವುದು ಬಲು ಅಗ್ಗ. ಅದಕ್ಕೇ ಬೆಂಗಳೂರಿನ ಬೀದಿ ಬೀದಿಗಳಲ್ಲಿ ದೃಶ್ಯಮಾಲಿನ್ಯ. ಸುಮ್ಮನೆ ನೆಪ ಹುಡುಕಿಕೊಂಡು ದಸರಾ ಶುಭಾಶಯಗಳನ್ನು ಕೋರುವ ಬ್ಯಾನರಿನಲ್ಲಿ ಐದಾರು ಮರಿಪುಡಾರಿಗಳ ತಲೆಗಳು . ಆರುತಿಂಗಳ ನಂತರ ಈ ಬ್ಯಾನರ್ ಕೆಳಗಿಳಿದು ಅದರ ಜಾಗದಲ್ಲಿ ಯುಗಾದಿ ಶುಭಾಶಯ ಪ್ರಕಟವಾಗುತ್ತದೆ. ಕೆಳಗೆ ಮತ್ತೆ ಅವೇ ಪುಡಿ ಫುಡಾರಿ ತಲೆಗಳು. ಕ್ರಿಕೆಟ್ ವಿಶ್ವಕಪ್, ಫುಟ್‌ಬಾಲ್ ವಿಶ್ವಕಪ್, ಕಬಡ್ಡಿ ಟೂರ್ನಿಮೆಂಟ್, ಸಚಿವರ ಜನ್ಮದಿನ, ರಾಜ್‌ಕುಮಾರ್ ಪುಣ್ಯತಿಥಿ, ರಾಮನವಮಿ, ಹೊಸವರ್ಷ ಇವರಿಗೆ ನೆಪಗಳು ನೂರಾರು. ಸಾರ್ವಜನಿಕ ಜಾಗಗಳಲ್ಲಿ ಹೀಗೆ ಮ್ಯಾನರ್‍ಸ್ ಇಲ್ಲದೆ ಬ್ಯಾನರ್‍ಸ್ ನಿಲ್ಲಿಸುವುದನ್ನು ಬ್ಯಾನ್ ಮಾಡುವುದು ಯಾವಾಗ?
*
ರಾಜ್‌ಕುಮಾರ್ ಪುಣ್ಯತಿಥಿಯ ಅಂಗವಾಗಿ ಎಲ್ಲೆಲ್ಲೂ ಪ್ರದರ್ಶನಗೊಂಡ ಬ್ಯಾನರುಗಳಲ್ಲಿ ಒಂದು ವಿಶೇಷ ಗಮನಿಸಿದಿರಾ? ಸಾಮಾನ್ಯವಾಗಿ ಪುಣ್ಯತಿಥಿಗಳಲ್ಲಿ ನೆನಪು, ಆತ್ಮಕ್ಕೆ ಶಾಂತಿ ಕೋರಿಕೆಗಳು ಮಾತ್ರ ಇರುತ್ತವೆ. ಆದರಿಲ್ಲಿ ಬಹುತೇಕ ಪೋಸ್ಟರುಗಳಲ್ಲಿ ತಮ್ಮ ನೆಚ್ಚಿನ ನಟನನ್ನು ಮರಳಿ ಬಾ ಎಂದು ಕರೆಯಲಾಗಿತ್ತು. ಅದು ವರುಷವಾದರೂ ಕನ್ನಡಿಗ ರಾಜ್ ಅಗಲಿಕೆಯ ದಿಗ್ಭ್ರಮೆಯಿಂದ ಹೊರಬರದಿರುವುದನ್ನೂ, ಆರಾಧಿಸಲು ಬದಲಿ ದೈವವೊಂದು ಅವರಿಗೆ ಸಿಗದಿರುವುದನ್ನೂ ಸೂಚಿಸುತ್ತದೆಯೇ?ತೀರಾ ವಿರಳ ಜನರು ನಿಧನರಾದಾಗ ಇಂಥ ತುಂಬಲಾರದ ನಷ್ಟ ಆಗುತ್ತದೆ. ಪೂರ್ಣ ಚಂದ್ರ ತೇಜಸ್ವಿಯವರು ಹೋಗಿದ್ದೂ ಅಂಥದ್ದೇ ಸಂಗತಿ. ಕುವೆಂಪು, ಬೇಂದ್ರೆಯಂಥವರನ್ನು ಕೇವಲ ಪುಸ್ತಕಗಳಲ್ಲಷ್ಟೇ ಕಂಡಿದ್ದ ಇಂದಿನ ಯುವ ಬರಹಗಾರರಿಗೆ ತೇಜಸ್ವಿ ಕಣ್ಣ ಮುಂದಿನಧೈರ್ಯವಾಗಿದ್ದರು. ಕಳೆದ ಹತ್ತು ವರ್ಷಗಳಲ್ಲಿ ರಾಜ್ ನಟಿಸಿದ್ದು, ತೇಜಸ್ವಿ ಬರೆದದ್ದೂ ಎರಡೂ ತೀರಾ ಕಡಿಮೆ. ಆದರೂ ಅವರನ್ನು ನಾವು ಮಿಸ್ ಮಾಡಿಕೊಳ್ಳುತ್ತಿರುವುದು ಅವರ ವ್ಯಕ್ತಿತ್ವದ ಸೊಗಸನ್ನು ಹೇಳುತ್ತದೆ.
*
ವಿದೇಶಿಯರ ಮುಂದೆ ರಾಷ್ಟ್ರಗೀತೆ ಹಾಡಲು ಇನ್ಫೋಸಿಸ್‌ನ ನಾರಾಯಣಮೂರ್ತಿಯವರಿಗೆ ಮುಜುಗರವಾಯಿತಂತೆ. ಮೂರ್ತಿಗಿಂತ (ನಾಡಿನ) ಕೀರ್ತಿ ದೊಡ್ಡದು ಎಂಬುದನ್ನು ಇವರೇಕೆ ಮರೆತರೋ?!
*
ಉತ್ತರ ಪ್ರದೇಶದಲ್ಲಿ ರಾಹುಲ್ ಗಾಂಧಿ ಭದ್ರತಾ ಭೀತಿಗಳನ್ನೂ ಲೆಕ್ಕಿಸದೆ ಸಿಕ್ಕ ಕಡೆಯೆಲ್ಲಾ ರೋಡ್ ಶೋ ಮಾಡುತ್ತಾ ಚುನಾವಣಾ ಪ್ರಚಾರ ನಿರತರಾಗಿರುವಾಗಲೆ, ಇತ್ತ ವರುಣ್ ಗಾಂಧಿ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡು ಕಲೆಯತ್ತ ಹೊರಳಿರುವ ಸುದ್ದಿ ಬಂದಿದೆ. ಕಲಾಸಕ್ತಿ ಇರಲಿ, ಆದರೆ ಅದಕ್ಕಾಗಿ ಚುನಾವಣಾ ಟಿಕೆಟ್ ನಿರಾಕರಿಸಬೇಕಿತ್ತೆ? ಕವಿತೆ ಬರೆದುಕೊಂಡೇ ವಾಜಪೇಯಿ ಪ್ರಧಾನಿ ಆಗಿರಲಿಲ್ಲವೆ? ಇತ್ತೀಚೆಗೆ ಕವಿತಾಸಂಕಲನ ಬಿಡುಗಡೆ ಮಾಡಿರುವ ನರೇಂದ್ರ ಮೋದಿ ಮುಖ್ಯಮಂತ್ರಿ ಅಲ್ಲವೆ? ನಮ್ಮ ವೀರಪ್ಪ ಮೊಯ್ಲಿ ಕಗ್ಗ ಬರೆದಿಲ್ಲವೆ?ಅಷ್ಟಕ್ಕೂ ರಾಜಕೀಯವೂ ಒಂದು ‘ಕಲೆ’ ಎಂಬ ಮಾತಿಲ್ಲವೆ? ಪೊಲಿಟಿಕಲ್ ‘ಸೈನ್ಸ್’ ಎಂದು ಕರೆದರೂ ಅಧ್ಯಯನ ಮಾಡುವವರು ‘ಕಲಾ’ ವಿದ್ಯಾರ್ಥಿಗಳೇ ಅಲ್ಲವೇ? ಮಗನಿಗೆ ಹುಚ್ಚು ಹಿಡಿಸಿದೆ ಕುಂಚ, ಅಮ್ಮನಿಗೋ ಪ್ರಾಣಿಗಳೇ ಪ್ರಪಂಚ, ಪಕ್ಷದ ಕಾಳಜಿ ಇರಬಾರದೆ ಕೊಂಚ? ಎಂದು ಕೇಳುತ್ತಿದ್ದಾರಂತೆ ಬಿಜೆಪಿಯವರು!
*
ಮೇನಕಾ ಗಾಂಧಿಯ ಪ್ರಾಣಿ ಪ್ರೀತಿಯ ಬಗ್ಗೆ ಯೋಚಿಸುತ್ತಿರುವಾಗ ನೆನಪಾದದ್ದು ಬೆಂಗಳೂರಿನ ನಾಯಿ ಕಾಟ. ಮತ್ತೊಂದು ಮಗು ನಾಯಿ ಕಚ್ಚಿ ರೇಬೀಸ್‌ನಿಂದ ಸತ್ತಿದೆ. ಸರಕಾರವಂತೂ ನಾಯಿ ಕಚ್ಚಿದರೆ ದೇವಲೋಕ ಹಾಳಾಗುವುದೇ ಎಂದು ಸುಮ್ಮನಿದ್ದುಬಿಟ್ಟಿದೆ. ನಮ್ಮ ಆರೋಗ್ಯ ಸಚಿವರಿಗೆ ಇದೊಂದು ಸತ್ವ ಪರೀಕ್ಷೆಯಾಗಿ ಕಾಡುತ್ತಿರುವಾಗಲೇ, ಹೈದರಾಬಾದಿನಲ್ಲಿ ಪರೀಕ್ಷೆ ಹಾಲ್‌ಗೇ ನುಗ್ಗಿದ ನಾಯಿಗಳು ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಚ್ಚಿ , ಪರೀಕ್ಷೆಯನ್ನೇ ಮುಂದೂಡುವಂತೆ ಮಾಡಿವೆ. ಕಾಪಿ ಮಾಡುತ್ತಿದ್ದವರ ಪತ್ತೆಗೆ ಮಾಮೂಲಿ ಸ್ಕ್ವಾಡ್ ಬದಲು ಡಾಗ್ ಸ್ಕ್ವಾಡನ್ನು ಕಳಿಸಿದ್ದರೋ ಏನೋ! ಮನುಷ್ಯನ ಮೇಲೆ ಹೀಗೆ ತಿರುಗಿಬಿದ್ದಿರುವುದು ನಾಯಿ ಮಾತ್ರ ಅಲ್ಲ. ಕೇರಳದಲ್ಲಿ ಮತ್ತೊಂದು ಆನೆ ಮಾವುತನನ್ನು ಭೀಕರವಾಗಿ ಕೊಂದಿದೆ. ಅಲ್ಲಿನ ಸರಕಾರ ದಿಢೀರ್ ಸಭೆ ಸೇರಿ ಆನೆಗಳನ್ನು ಸರಿಯಾಗಿ ನೋಡಿಕೊಳ್ಳಲು ಮಾರ್ಗಸೂಚಿ ಸಿದ್ಧಪಡಿಸಿದೆ. ಅದರಲ್ಲಿ ಬೆಳಗ್ಗೆ ೧೧ರಿಂದ ಸಂಜೆ ೪ರವರೆಗೆ ಅವುಗಳ ಹತ್ತಿರ ಕೆಲಸ ಮಾಡಿಸುವಂತಿಲ್ಲ ಎಂಬುದೂ ಸೇರಿದೆ. ಸರಕಾರದ ಈ ಕಾಳಜಿಯಿಂದ ಆನೆಗಳಿಗೇನು ಆನೆಬಲ ಬಂದಂತಾಗಿದೆಯೋ ಅಥವಾ ಇವೆಲ್ಲಾ ಅರೆಕಾಸಿನ ಮಜ್ಜಿಗೆಯೋ ಅವುಗಳನ್ನೇ ಕೇಳಬೇಕು!

2 comments:

ಸುಧನ್ವಾ ದೇರಾಜೆ. said...

borobbari aithri...!

Keshav.Kulkarni said...

Please post every weeks' article rather than all together