Tuesday, September 18, 2007

ಕೇರಾಫ್ ಕೊಯಮತ್ತೂರ್ (ಕತೆ)


ನಸುಕು ನಾಲ್ಕೂವರೆಗೆಲ್ಲ ಬಂದುಬಿಡಬೇಕಿದ್ದ ಟ್ರಕ್ಕು ಆರಾಗುತ್ತಾ ಬಂದಿದ್ದರೂ ಪತ್ತೆ ಇರಲಿಲ್ಲ. ಮೂರು ನಾಲ್ಕು ಗೋಣಿ ಚೀಲಗಳನ್ನು ಸೇರಿಸಿ ಹೊಲಿದ ಹೊದಿಕೆಗಳಲ್ಲಿ ಮನೆಯ ಸಮಸ್ತವೂ ತೂರಿಕೊಂಡು ಮೌನವಾಗಿ ತಮ್ಮನ್ನು ಎತ್ತಿ ಟ್ರಕ್ಕಿಗೆ ಹಾಕುವುದನ್ನೇ ಕಾದಂತೆ ಕೂತಿದ್ದವು. ಅಂಥ ಹಲವು ಮೂಟೆಗಳ ನಡುವೆ ದಾರಿ ಮಾಡಿಕೊಂಡು ಏನಾದರೂ ಮುಖ್ಯವಾದ್ದೇ ಉಳಿದುಬಿಟ್ಟಿದೆಯಾ ಎಂದು ಹುಡುಕುತ್ತಿದ್ದರು ಸೀತಮ್ಮ.
ಹೊರಗೆ ಗೇಟಿನ ಬಳಿ ನಿಂತು ಇನ್ನೂ ಬಾರದ ಟ್ರಕ್ಕಿಗಾಗಿ ಚಡಪಡಿಸುತ್ತಿದ್ದ ಗೋಪಾಲ ರಾವ್ ಒಮ್ಮೆ ಒಳಬಂದು ಹೆಂಡತಿಯ ಸಮಸ್ಯೆ ಅರಿತವರಂತೆ `ಎಷ್ಟನ್ನು ಇಲ್ಲೇ ಬಿಟ್ಟು ಹೋಗಲು ಸಾಧ್ಯವೊ ಅಷ್ಟೂ ಒಳ್ಳೆಯದು' ಎಂದೇನೊ ಹೇಳಿದರು. ಅದು ಸೀತಮ್ಮನ ಲಕ್ಷ್ಯಕ್ಕೆ ಬರಲಿಲ್ಲ. ಅವರೀಗ ಹಜಾರದ ಮೂಲೆಯಲ್ಲಿ ಬಣ್ಣ ಕಳೆದುಕೊಂಡು ಕೂತಿದ್ದ ಕಬ್ಬಿಣದ ಸ್ಟೂಲನ್ನು ತೆಗೆದುಕೊಂಡು ಹೋಗುವುದೋ ಬೇಡವೊ ಎಂಬ ಸಂದಿಗ್ಧದಲ್ಲಿ ಬಿದ್ದಿದ್ದರು.
ಹೊರಬಂದು ಮನೆಯ ಮುಂದಿನ ಕಟ್ಟೆಯ ಮೇಲೆ ಗೋಡೆಗೊರಗಿ ಕೂತ ರಾವ್ ಕಣ್ಣುಗಳು ಶೂನ್ಯದಲ್ಲಿ ನೆಟ್ಟಿದ್ದರೂ, ಕಳೆದೊಂದು ವಾರದಿಂದ ಅವು ಗಳಿಸಿಕೊಂಡಿರುವ ಹೊಸ ಹೊಳಪನ್ನು ಯಾರೂ ಫಕ್ಕನೆ ಗುರುತಿಸಬಹುದಿತ್ತು. ರಿಟೈರಾಗಿ ವಾರ ಕಳೆಯುವುದಕ್ಕೂ ಮುಂಚೆಯೇ, ಸರ್ವಸ್ವವನ್ನೂ ಧಾರೆ ಎರೆದು ಬಲು ಕಷ್ಟದಿಂದ ಕಟ್ಟಿಸಿದ ಈ ಮನೆಯನ್ನು ಮಾರಿ, ಗುರುತು ಪರಿಚಯವಿರದ ದೂರದೂರು ಕೊಯಮತ್ತೂರಿಗೆ ಇಡೀ ಕುಟುಂಬ ಏಕೆ ಸ್ಥಳಾಂತರಗೊಳ್ಳಬೇಕಿತ್ತೋ ಅವರಿಗೇ ಗೊತ್ತು. ಅಪ್ಪನನ್ನು ಕೇಳುವ ಧೈರ್ಯವಾಗದ ಪರಿಮಳ ಅಮ್ಮನನ್ನೇ ಮತ್ತೆಮತ್ತೆ ಕೇಳಿ ನಿಜವಾಗ್ಲೂ ಗೊತ್ತಿಲ್ಲ ಅಂದ್ನಲ್ಲ ಅಂತ ರೇಗಿದ ಮೇಲೆ ಸುಮ್ಮನಾಗಿದ್ದಳು. ಆ ವಿಷಯ ಎತ್ತಿದಾಗಲೆಲ್ಲ ಎತ್ತಲೋ ನೋಡಿಕೊಂಡು, `ಬೋರ್ಡಿನ ಮೇಲೆ ಈವರೆಗೆ ಬರರೆದ ಲೆಕ್ಕವನ್ನೆಲ್ಲ ಅಳಿಸಿ ಹೊಸದಾಗಿ ಬರೆಯೋಕಾಗೋದು ಎಂಥ ಅದ್ಭುತ ಅಲ್ವೇ?' ಎಂದು ಚಕಿತರಾಗುತ್ತಿದ್ದ ಗಂಡನ ಮಾತಿನ ತಲೆಬುಡ ತಿಳಿಯದ ಸೀತಮ್ಮ ವನವಾಸವೊ ಅಜ್ಞಾತವಾಸವೋ ಕಟ್ಟಿಕೊಂಡ ವ್ಯಕ್ತಿಯೊಂದಿಗೆ ಯಾವುದಾದರೇನು ಎಂಬಂತೆ ಸಾಮಾನು ಕಟ್ಟಲಾರಂಭಿಸಿದ್ದರು.
ಕಾಣದೂರಿನಲ್ಲಿ ತಮಗೆ ಕಾದಿರಬಹುದಾದ ಮಹಾಸುಖದದ ಬಗ್ಗೆ ಚಿಂತಿಸುತ್ತಲೆ, ಒಳಗೆ ಮಾಡುವುದು ಏನೂ ಉಳಿದಿಲ್ಲವೆಂಬುದನ್ನು ಖಚಿತಪಡಿಸಿಕೊಂಡ ಸೀತಮ್ಮ ನಿಧಾನಕ್ಕೆ ಹೊರಬಂದು ಕಾಂಪೌಂಡಿನೊಳಗಿರುವ ಕಟ್ಟೆಯ ಮೇಲೆ ವಿಗ್ರಹದಂತೆ ಕೂತಿದ್ದ ಗಂಡನ ಪಕ್ಕದಲ್ಲೇ ಅವರಿಗೆ ತಾಗದಂತೆ ಕುಳಿತರು. ಒಂದೆರಡು ಚೀಲ, ಸಣ್ಣ ಸೂಟ್‌ಕೇಸ್‌ಗಳನ್ನು ಹೊರಗೆ ತಂದಿಟ್ಟ ನಂತರ ಪರಿಮಳಳೂ ಸೊಂಟದ ಮೇಲೆ ಎರಡೂ ಕೈ ಇರಿಸಿಕೊಂಡು ಮೆಲ್ಲಗೆ ಅದೇ ಕಟ್ಟೆ ಮೇಲೆ ಕೂತಳು. ಅವಳ ಏಳು ತಿಂಗಳ ಹೊಟ್ಟೆ ಈಗ ತುಸುತುಸುವೇ ಸ್ಪಷ್ಟವಾಗತೊಡಗಿತ್ತು. ಇನಿತೂ ಮಾತಿಲ್ಲದೆ, ಅಲುಗಾಟವಿಲ್ಲದೆ ಹಿನ್ನೆಲೆಗೆ ಮನೆಯ ಚೂರುಗಳನ್ನು ಹರಡಿಕೊಂಡು ಕುಳಿತ ಕುಟುಂಬ ಬೀದಿಯಿಂದ ನೋಡುವವರಿಗೆ ಒಂದು ಸ್ಥಿರಚಿತ್ರದಂತೆ ಭಾಸವಾಗುತ್ತಿತ್ತು.
^^^
ಸರಕಾರಿ ಪ್ರೌಢಶಾಲೆಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಗಣಿತ ಹೇಳುತ್ತಾ ಬಂದಿರುವ ಗೋಪಾಲ ರಾವ್ ಗೊತ್ತಿಲ್ಲ ಎನ್ನುವವರು ಆ ಊರಿನಲ್ಲಿ ಯಾರೂ ಇಲ್ಲ. ಶುರುವಿನಲ್ಲಿ ಎರಡು ಮೂರು ವರ್ಷ ಬೇರೆ ಬೇರೆ ಊರುಗಳ ಶಾಲೆಗಳಲ್ಲಿ ಕೆಲಸ ಮಾಡಿದ ರಾವ್, ನಂತರ ಯಾರೋ ಪರಿಚಯದ ಶಾಸಕರಿಂದ ಹೇಳಿಸಿ ಹುಟ್ಟೂರಿಗೆ ಸಮೀಪದ ಈ ಊರಿಗೆ ವರ್ಗ ಮಾಡಿಸಿಕೊಂಡು ಬಂದಿದ್ದರು. ಮನೆಪಾಠ ಹೇಳಿ ಒಂದಷ್ಟು ದುಡ್ಡು ಮಾಡಿಕೊಂಡು ಈಗ್ಗೆ ಹತ್ತು ವರ್ಷಗಳ ಹಿಂದೆ ಸ್ವಂತ ಮನೆಯನ್ನೂ ಕಟ್ಟಿದರು. ಈ ಮಧ್ಯೆ ಅವರಿಗೇ ಗೊತ್ತಾಗದಂತೆ ಸುರೇಶ, ಶಾಂತಿ, ಪರಿಮಳ ಸದ್ದಿಲ್ಲದೆ ಬೆಳೆದು ದೊಡ್ಡವರಾಗಿದ್ದರು.
ಮೊದಮೊದಲು ಆಲ್ಜೀಬ್ರಾದಂಥ ಕಷ್ಟದ ವಿಷಯವನ್ನು ಸಲೀಸೆನಿಸುವಂತೆ ಹೇಳಿಕೊಡಬಲ್ಲವರು ಎಂದಷ್ಟೇ ಹೆಸರಾಗಿದ್ದ ಮೇಷ್ಟ್ರು ಬರುಬರುತ್ತಾ ತಮ್ಮ ಧೂರ್ವಾಸ ಕೋಪಕ್ಕೂ ಪ್ರಸಿದ್ಧರಾಗಿದ್ದರು. ಅರ್ಥ ಗೊತ್ತಿದ್ದೋ ಗೊತ್ತಿಲ್ಲದೆಯೋ ಅವರು ಒಮ್ಮೊಮ್ಮೆ ವಿದ್ಯಾರ್ಥಿಗಳ ಮೇಲೆ ಅವಾಚ್ಯ ಬೈಗುಳ ಬಳಸುವುದೂ ಉಂಟು. ಆಗೆಲ್ಲ ಹತ್ತನೆ ತರಗತಿಯಲ್ಲಿದ್ದ ಸುರೇಶ ಸಹಪಾಠಿಗಳ ಮುಖ ನೋಡುವುದನ್ನು ತಪ್ಪಿಸುತ್ತಿದ್ದ. ಟೈಲರ್ ಇರಲಿ, ಹಾಲಿನವನಿರಲಿ, ಡಿಶ್‌ನವನಿರಲಿ ಹಾಗೇ ಆಗುತ್ತಿತ್ತು. ಎಂದೂ ನೋಡದ ಅರ್ಥವೂ ಆಗದ ಸೂರ್ಯ ಟಿವಿ ಸರಿ ಮಾಡಿದರೇ ದುಡ್ಡು ಕೊಡೋದು ಅಂತ ಡಿಶ್‌ನವನ ಮೇಲೆ ಪ್ರತಿ ಸಲ ರೇಗುವರು. ಅವನು ಹಂಗಾದ್ರೆ ನೋಡಿ ಮಾಡ್ತೀನಿ ಎಂಬಂತೆ ಕನ್ನಡ ಚಾನೆಲ್‌ಗಳನ್ನೂ ಕೆಡಿಸಿ ಏನೋ ಒಂದು ನೆಪ ಹೇಳುವನು. ಸುರೇಶ ಇದನ್ನೆಲ್ಲ ಪ್ರಶ್ನಿಸಿದರೆ ರಾವ್,`ಏ ಸುಮ್ನೆ ಕುತ್ಕೊಳ್ಳೊ ಅಲ್ಲಿ, ಅವನು ನನ್ನ ಹಳೇ ಶಿಷ್ಯ. ಬಯ್ದರೆ ಏನೂ ಅಂದ್ಕೋಳಲ್ಲ , ಬಂದುಬಿಟ್ಟ ಬುದ್ದೀ ಹೇಳೋಕೆ ದೊಡ್ ಮನ್ಷಾ' ಎಂದು ಕೂಗಾಡುವರು. ಕೊನೆಗೂ ಆ ಶಿಷ್ಯ ಗುರುಗಳ ಕಾಟ ತಾಳಲಾರದೆ ಡಿಸ್‌ಕನೆಕ್ಟ್ ಮಾಡಿಕೊಂಡು ಹೋದಮೇಲೆ ಮನೆಯ ತುಂಬಾ ಶಾಂತಿ ನೆಲೆಸಿತು.
ತಾನು ನಿಷ್ಠುರವಾದಿ, ಇದ್ದುದನ್ನು ಇದ್ದ ಹಾಗೆ ಮುಖದ ಮೇಲೆ ಆಡಿಬಿಡುವ ಧೀರ ಎಂಬಂಥ ಒಂದು ಹಠದಂತೆ ತಮ್ಮೀ ವಿಚಿತ್ರ ಸ್ವಭಾವವನ್ನು ಮುಂದುವರೆಸಿಕೊಂಡೇ ಬಂದರು ರಾವ್. ಮೂಲಭೂತವಾಗಿ ತಾವು ಯಾರಿಗೂ ಅನ್ಯಾಯ ಮಾಡಿಲ್ಲದ ಕಾರಣವಾಗಿಯೇ ಹೀಗೆ ಉದ್ಧಟವಾಗಿ ವರ್ತಿಸುವ ಹಕ್ಕು ತಮಗಿದೆ ಎಂದು ಅವರು ಭಾವಿಸಿದಂತಿತ್ತು. ಈ ಮನೋಭಾವವನ್ನು ಬೆಳೆಸುವಲ್ಲಿ ಅವರ ಮಾಸ್ತರಿಕೆಯ ಪಾಲೂ ಇದ್ದಿರಬೇಕು. ಹಾಗಾಗೇ ಕಾಲೇಜು ಮುಗಿಸಲಾರದೆ ಸುಮ್ಮನೆ ಅಲೆಯುವ ಅವರ ಹಳೆಯ ವಿದ್ಯಾರ್ಥಿಗಳು ಮೇಷ್ಟ್ರುರಸ್ತೆಯಲ್ಲಿ ನಡೆಯುವಾಗ ವಿನಾಕಾರಣ ಜೋರಾಗಿ ನಗುವುದು ಅಥವಾ ಸುಮ್ಮನೆ ದುರುಗುಟ್ಟಿ ನೋಡುತ್ತಲೇ ಉಳಿಯುವುದು ಮಾಡುತ್ತಿದ್ದರು. ರಾವ್ ಇದಕ್ಕೆ ಕ್ಯಾರೆ ಅನ್ನದಾದಾಗ ಅವರ ಕಣ್ಣು ದೊಡ್ಡ ಮಗಳು ಶಾಂತಳ ಮೇಲೆ ಬಿತ್ತು. ಟೈಪಿಂಗ್ ಕ್ಲಾಸಿಗೆಂದು ಕಡಲೆಕಾಯಿ ಮಂಡಿ ಮೈದಾನವನ್ನು ಹಾದು ಹೋಗಬೇಕಿದ್ದ ಶಾಂತ ಮದುವೆ ಪ್ರಾಯವನ್ನು ಎಂದೋ ಮೀರಿದ್ದಳು. ಅಲ್ಲಿ ಕೂತು ಹರಟೆಹೊಡೆಯುತ್ತಾ ಸಂಜೆ ದೂಡುತ್ತಿದ್ದ ಈ ಫಾಲ್ತೂ ಹುಡುಗರು `ಏನ್ರೋ ಲೆಕ್ಕದ ಮೇಷ್ಟ್ರಿಗೆ ಮಗಳ ವಯಸ್ಸಿನ ಲೆಕ್ಕವೇ ಮರೆತ್ಹೋಯ್ತಲ್ರೋ ಪಾಪ' ಎಂದು ಛೇಡಿಸಿದಾಗ ಶಾಂತ ಕಂಗೆಟ್ಟಳು. ದಾರಿ ಬದಲಾಯಿಸಿ ನೋಡಿದರೆ ಆ ಫಟಿಂಗರು ಅಲ್ಲೂ ಬಂದು ಕೆಣಕುತ್ತಿದ್ದರು.
ಹಾಗಂತ ರಾವ್ ಏನೂ ಕೈ ಕಟ್ಟಿ ಕುಳಿತಿರಲಿಲ್ಲ. ಶಾಂತಿಯನ್ನು ನೋಡಲು ಎಷ್ಟೋ ಹುಡುಗರು ಬಂದಿದ್ದರು. ಬಂದ ಕ್ಷಣವೇ ಮೇಷ್ಟ್ರು ಅವರಿಗೆ ಒಂದು ಮಾಮೂಲಿ ಡೈಲಾಗ್ ಹೇಳುವುದನ್ನು ತಪ್ಪಿಸುತ್ತಿರಲಿಲ್ಲ: `ನೋಡಪ್ಪಾ ಇಷ್ಟ ಆದ್ರೆ ಆಗು ಇಲ್ಲಾಂದ್ರೆ ಬಿಡು, ನಾನ್ ಮಾತ್ರ ಒಂದು ಪೈಸೆ ವರದಕ್ಷಿಣೆ ಕೊಡೋವ್ನಲ್ಲ.' ಬಂದವರಿಗೆ ಹಣದ ಬಯಕೆ ಇರಲಿ ಬಿಡಲಿ ಅವರು ಮಾತ್ರ ತಮ್ಮ ಆದರ್ಶವಾಕ್ಯವನ್ನು ಹೇಳಿಬಿಡುತ್ತಿದ್ದರು. ವಾಕ್ಯದ ಅಂಚಿಗೆ ಒಂದು ನಗೆಯನ್ನು ಸೇರಿಸಲು ಅವರು ಪ್ರಯತ್ನಿಸುತ್ತಿದ್ದರಾದರೂ ಪ್ರತಿಸಲವೂ ಅದು ವಿಚಿತ್ರವಾಗಿ ಕೇಳುತ್ತಿತ್ತು.
ಅಪ್ಪನ ಈ ವರ್ತನೆಯಲ್ಲಿ ತಪ್ಪೆಲ್ಲಿದೆ ಎಂದು ಗೊತ್ತಾಗದಿದ್ದರೂ ಅಲಂಕಾರ ಮಾಡಿಕೊಂಡು ಚಾಪೆಯ ಮೇಲೆ ಕೂತ ಶಾಂತ ಮಾತ್ರ ಕೂತಲ್ಲೆ ಬೆವರುತ್ತಿದ್ದಳು. ಈ ಸಲ ಅಪ್ಪ ಹಾಗೆ ಹೇಳುವುದಿಲ್ಲವೇನೊ ಎಂದು ನಿರೀಕ್ಷಿಸುತ್ತಲೆ ಇನ್ನಷ್ಟು ದೊಡ್ಡವಳಾದಳು. ಸಾಲು ಹುಡುಗರು ಬಂದು ನೋಡಿ ಹೋಗುತ್ತಿದ್ದರೂ ತನ್ನ ಸಾಧಾರಣ ರೂಪವನ್ನೇ ಹಳಿದುಕೊಂಡಳೇ ಹೊರತು ಎಂದೂ ಅಪ್ಪ ವರದಕ್ಷಿಣೆ ಕೊಟ್ಟು ಮದುವೆ ಮಾಡಲಿ ಎಂದು ಅಂದುಕೊಳ್ಳಲಿಲ್ಲ. ತೀರಾ ಇತ್ತೀಚೆಗೆ ಅವಳನ್ನು ನೋಡಲು ಮೇಷ್ಟರ ಹಳೆಯ ಶಿಷ್ಯನೊಬ್ಬ ಬಂದಿದ್ದ. ತಿಂಡಿ ತಿನ್ನುತ್ತಿದ್ದ ನಸುಗಪ್ಪು ಬಣ್ಣದ ಹುಡುಗನನ್ನು ಶಾಂತ ಒಮ್ಮೆ ಕಿರುಗಣ್ಣಿನಲ್ಲಿ ನೋಡಿದ್ದಳು. ಅವನು ತಿನ್ನುತ್ತಿದ್ದ ಆತುರ ಅವಳಿಗೆ ತುಸು ತಮಾಷೆ ಎನಿಸಿತು. ಅವನು ಹೊರಡುವಾಗ `ನನಗೆ ಹುಡುಗಿ ಒಪ್ಪಿಗೆ' ಎಂದುಬಿಟ್ಟ. ತನ್ನೆದುರು ಖುರ್ಚಿಯಲ್ಲಿ ಕೂತು ಉಪ್ಪಿಟ್ಟು ತಿಂದ ಗಂಡಸೊಂದು ಹೀಗೆ `ಒಪ್ಪಿಗೆ' ಎಂದಿದ್ದನ್ನು ಕೇಳಿ ಶಾಂತಿಗೆ ಬೆಚ್ಚಿಬೀಳುವಂತಾಯಿತು. ಆದರೂ ತಕ್ಷಣ ಸಾವರಿಸಿಕೊಂಡ ಅವಳು ಈಗ ಬಿಟ್ಟರೆ ಜೀವನದಲ್ಲೆ ಮತ್ತೊಮ್ಮೆ ಇಂಥ ಅವಕಾಶ ಸಿಗಲಾರದೆಂಬಂತೆ ದಢಕ್ಕನೆ ಎದ್ದು `ಆದರೆ ನನಗೆ ಒಪ್ಪಿಗೆ ಇಲ್ಲ' ಎಂದುಬಿಟ್ಟಳು. ಮತ್ತು ಪೆಚ್ಚಾದ ಹುಡುಗನ ಮುಖವನ್ನು ದಿಟ್ಟಿಸುತ್ತಲೆ ಉಳಿದಳು. ಆಮೇಲೆ ಅಪ್ಪ ಅಮ್ಮ ಜತೆಯಾಗಿ ಹೂಡಿದ ಜಗಳವನ್ನು ಇಡಿಯಾಗಿ ಆನಂದಿಸುತ್ತ , ನಡುವೊಮ್ಮೆ ಜೋರು ದನಿಯಲ್ಲಿ `ನಾನು ಈ ಜನ್ಮದಲ್ಲಿ ಮದ್ವೆಯಾಗೋದಿಲ್ಲ' ಎಂದು ಘೋಷಿಸಿಬಿಟ್ಟಳು. ಮರುದಿನವೇ ತಲೆ ಮೇಲೆ ಆಕಾಶವನ್ನೇ ಹಾಕಿಕೊಂಡು ಕೂತಿದ್ದ ತಂದೆ ತಾಯಿಗಳನ್ನು ದಾಟಿಕೊಂಡು ಹತ್ತಿರದ ಬ್ಯೂಟಿಪಾರ್ಲರಿಗೆ ಹೋಗಿ ಮೊದಲಬಾರಿಗೆ ಹುಬ್ಬು ಕತ್ತರಿಸಿಕೊಂಡು ಬಂದಳು. ಮತ್ಯಾವುದೋ ಒಂದು ರಾತ್ರಿ ನಸುಗಪ್ಪು ಹುಡುಗನಿಗೆ ಎಷ್ಟು ಬೇಸರವಾಯಿತೋ ಎಂದು ಮರುಕಪಟ್ಟಳು.
^^^
ಕಪ್ಪು ಹೆದ್ದಾರಿಯನ್ನು ಹಿಂದೆ ಹಾಕುತ್ತಾ ಸಾಗುತ್ತಿತ್ತು ಟ್ರಕ್ಕು. ಹೆಂಡತಿ ಮತ್ತು ಪರಿಮಳಳನ್ನು ಟ್ರಕ್ಕಿನ ಒಳಗೆ ಕೂಡಿಸಿ, ಸಾಮಾನು ಉರುಳಿ ಬಿದ್ದಾವು ಎಂದು ತಾವು ಹಿಂಬದಿಯಲ್ಲಿ ಕೂತಿದ್ದ ರಾವ್‌ಗೆ ಟ್ರಕ್ಕಿನ ವೇಗ ಸಾಕೆನಿಸಲಿಲ್ಲ. ಆಗಸದತ್ತ ನೋಡಿದರೆ ನೀಲಿಯ ಹಿನ್ನೆಲೆಯಲ್ಲಿ ಬಿಳಿ ಮೋಡಗಳು ತೇಲುತ್ತ ಸಾಗುವುದು ಚಲಿಸುವ ಟ್ರಕ್ಕಿನಿಂದ ಸೊಗಸಾಗಿ ಕಂಡಿತು.
ಅಕ್ಕನ ಹೊಸ ವರಸೆಗಳಿಂದ ದಿಕ್ಕೆಟ್ಟಿದ್ದಳೆ ಪರಿಮಳ? ಇದ್ದಕ್ಕಿದ್ದಂತೆ ಒಂದು ದಿನ `ಸವಿ ಮೆಲಡಿ ಮೇಕರ್ಸ್'ನ ಗಾಯಕನೊಂದಿಗೆ ಓಡಿಹೋಗಿಬಿಟ್ಟಳಲ್ಲ, ನಾನು ಅಷ್ಟು ಹಚ್ಚಿಕೊಂಡಿದ್ದ ಕಿರಿಮಗಳು? ಒಂದು ವಾರ ಶಾಲೆಗೂ ಹೋಗದೆ, ಮಾತಾಡಿಸಿದವರ ಮೇಲೆಲ್ಲ ಎಗರಾಡಿ, ಏಕಾಂತದಲ್ಲಿ ಸದ್ದಿಲ್ಲದೆ ಅತ್ತು ಮನಸ್ಸು ಗಟ್ಟಿ ಮಾಡಿಕೊಳ್ಳುತ್ತಿರುವಾಗಲೆ ದಿಢೀರನೆ ಒಂದು ಮಧ್ಯಾಹ್ನ ಸೂಟ್ ಕೇಸಿನೊಂದಿಗೆ ಮರಳಿ, ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಳಂತಲ್ಲ. ಸಂಜೆ ಶಾಲೆಯಿಂದ ಬಂದ ನಾನು ವಿಷಯ ತಿಳಿದು ಕೈ ನೋವು ಬರುವಷ್ಟು ಬಾಗಿಲು ಬಡಿದರೂ, `ನನ್ನ ಮರ್ಯಾದೆ ತೆಗೆದ ನಿನಗೆ ಈ ಮನೆಯಲ್ಲಿ ಜಾಗವಿಲ್ಲ' ಎಂದು ಅಬ್ಬರಿಸಿದರೂ ಪಿಟ್ ಎನ್ನದೆ ಕೂತಳಲ್ಲ ಒಳಗೆ. ದಿನಗಟ್ಟಲೆ ಏನೂ ತಿನ್ನದೆ, ಕಡೆಗೆ ನೀರನ್ನೂ ಕುಡಿಯದೆ ಅದ್ಹೇಗೆ ಇದ್ದಳು ಕೋಣೆಯೊಳಗೆ! ಮೂರನೇ ದಿನ ಸಂಜೆ ಬಾಗಿಲು ತೆಗೆದು ಏನೂ ಆಗಿಲ್ಲವೆಂಬಂತೆ ಉಳಿದಾಗ ಮಾತ್ರ ಅವಳನ್ನು ಹೊರಹಾಕುವ ನನ್ನ ಉತ್ಸಾಹ, ಆವೇಶಗಳು ಎಲ್ಲಿ ಹೋಗಿದ್ದವು? ಮೂರು ತಿಂಗಳ ಗರ್ಭಿಣಿ ಮತ್ತೆಂದೂ ಗಂಡನ ಮನೆಗೆ ಹೋಗುವುದೂ ಇಲ್ಲ, ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸುವುದೂ ಇಲ್ಲ ಎಂದಾಗ ನಾನೇಕೆ ಸಂಬಂಧವಿಲ್ಲದವನಂತೆ ಸುಮ್ಮನುಳಿದೆ?
`ನಮ್ಮ ಮನೆ ಹಾಳಾಗಿ ಹೋಗಿರುವುದು ನಿನ್ನಂದಲೇ' ಎಂದು ಸುರೇಶ ರೇಗುವುದು ಅವನ ದೃಷ್ಟಿಯಲ್ಲಿ ಸರಿಯೇ ಇರಬಹುದು. ಆದರೆ ಶಾಂತಳ ಅಸಹನೆ ನನಗೆ ಅರ್ಥವಾಗುತ್ತದೆ. ಬೆಂಗಳೂರಿನಲ್ಲಿ ಸಿಟಿಬಸ್ ಕಂಡಕ್ಟರ್ ಕೆಲಸಕ್ಕೆ ಅವಳು ಹೊರಟು ನಿಂತಾಗ ನನ್ನ ವಿರೋಧವನ್ನು ಎಷ್ಟು ತಣ್ಣಗೆ ತಳ್ಳಿಹಾಕಿದ್ದಳು. `ಯಾಕಪ್ಪಾ? ನಿನ್ನ ಮರ್ಯಾದೆ ಹೋಗುತ್ತಾ?' ಎಂದವಳ ಚೂಪು ನೋಟವನ್ನೆದುರಿಸಲಾಗಿತ್ತೆ ನನಗೆ? ಎಲ್ಲದಕ್ಕೂ ನಾನೇ ಹೊಣೆಯೋ ಅಥವಾ ನನ್ನ ಅವಿವೇಕಕ್ಕೆ ಜಗತ್ತಿನ ಕ್ಷುಲ್ಲಕತೆಯೂ ಕೂಡಿತ್ತೆ? ನಿರ್ಧರಿಸಲಾಗದ ರಾವ್ ಕೊಯಮತ್ತೂರಿಗೆ ಹೋದ ನಂತರ ಶಾಂತಳನ್ನು ಮರಳಿ ಮನೆಗೆ ಕರೆಸಿಕೊಳ್ಳಬೇಕು ಎಂದಷ್ಟೆ ಅಂದುಕೊಂಡರು.
`ನನ್ನ ಆಸ್ತಿ ನನಗೆ ಕೊಟ್ಟುಬಿಡು' ಎಂದು ಜಗಳವೇನೋ ಆಡಿದ್ದ. ಆದರೆ ಅದಕ್ಕಾಗಿ ಸುರೇಶ ಲಾಯರ್ ಬಳಿ ಹೋಗುತ್ತಾನೆಂದು ನಾನು ಎಣಿಸಿರಲಿಲ್ಲ. ಸಣ್ಣ ಊರಾದ್ದರಿಂದ ಹೇಗೊ ತನ್ನ ಬಗ್ಗೆ ತಿಳಿದಿದ್ದ ಲಾಯರ್, ಬುದ್ದಿಮಾತು ಹೇಳಿ ಕಳಿಸಿದ್ದರು. ಊರು ಎಲ್ಲವನ್ನು ನೋಡಿಕೊಂಡು ಸಂಭ್ರಮಿಸುತ್ತಿತ್ತು. ದುರದೃಷ್ಟವಂತರನ್ನು ಸಹನೆಯಿಂದ ನೋಡುವಷ್ಟು ಒಳ್ಳೆಯದಾಗೂ ಉಳಿದಿಲ್ಲ ಜಗತ್ತು ಎಂದುಕೊಳ್ಳುವಾಗ ಮೇಷ್ಟರ ಹಣೆಯಲ್ಲಿ ಸುಕ್ಕುಗಳು ಮೂಡಿದವು. ಮಧ್ಯಾಹ್ನದ ಸೂರ್ಯ ಕ್ಷಣಕ್ಷಣಕ್ಕೂ ಹೆಚ್ಚು ಪ್ರಖರವಾಗುತ್ತಿದ್ದ. ನಡುವೊಂದು ಕಡೆ ಟ್ರಕ್ ನಿಂತಾಗ ರಾವ್ ಹೆಂಡತಿ, ಮಗಳಿಗೆ ವಡೆ, ಚಹಾ ತಂದುಕೊಟ್ಟರು. ಪಯಣ ಮುಂದುವರೆಯಿತು.
^^^
ಇಷ್ಟೆಲ್ಲಾ ಆಗುತ್ತಿದ್ದರೂ ಸೀತು ಮಾತ್ರ ಸುಮ್ಮನೆ ಉಳಿದುಬಿಟ್ಟಳಲ್ಲ-ತನ್ನಷ್ಟಕ್ಕೆ ವಾಸ್ತು ದೋಷ, ಸರ್ಪದೋಷ, ಆ ಪೂಜೆ, ಈ ಶಾಂತಿ ಎಂದು ಮಾಡಿಕೊಂಡು? ಗಂಡನಿಗೆ ಬುದ್ಧಿ ಹೇಳಿ ಪ್ರಯೋಜನವಿಲ್ಲ , ಈ ಜನ್ಮಕ್ಕೆ ಇಷ್ಟೆ ಎಂದು ಅವಳು ತೀರ್ಮಾನಿಸಿಬಿಟ್ಟಿದ್ದಳೆ? ಮೆಚ್ಚಿದ ಹುಡುಗಿಯನ್ನೆ ಮದುವೆಯಾಗುತ್ತೇನೆಂದು ಸುರೇಶ ಹೇಳಿದಾಗ ನಾನು ಅಷ್ಟೊಂದು ಹಠ ಮಾಡಿದಾಗಲೂ, ನಂತರ ನಾನೇ ಹುಡುಕಿ ತಂದ ಸೊಸೆಯೂ ಮೂರೇ ತಿಂಗಳಿಗೆ ಬೇರೆ ಸಂಸಾರ ಹೂಡಿ ಹೊರಟಾಗಲೂ ಸೀತು ಒಂದೇ ಒಂದು ಮಾತಾಡಲಿಲ್ಲ. ಅಳಲೂ ಇಲ್ಲ. ಶತಮಾನಗಳೇ ಕಳೆದವಲ್ಲವೆ ನಾವೆಲ್ಲ ಜತೆಯಾಗಿ ನಕ್ಕು? ಒಟ್ಟಾಗಿ ಕೂತು ಉಂಡ ದಿನವೂ ನೆನಪಿಲ್ಲ. ಮೇಷ್ಟ್ರು ಕರ್ಚೀಪು ತೆಗೆದು ಕಣ್ಣೊರೆಸಿಕೊಂಡರು.
^^^
ತಮಿಳುನಾಡು ಚೆಕ್‌ಪೋಸ್ಟ್ ಬಳಿ ಟ್ರಕ್ ಕೆಲ ಕಾಲ ನಿಂತು ಮುಂದೆ ಸಾಗಿತು. ಹೊಸ ಊರು ಹಳೆಯದೆಲ್ಲವನ್ನು ತೊಳೆದು ಸ್ವಚ್ಛ , ಹೊಸ ಬದುಕೊಂದನ್ನು ನೀಡೀತು ಎಂಬ ಆಲೋಚನೆ ರಾವ್ ತಲೆಯಲ್ಲಿ ಹೊಳೆದದ್ದು ಆರು ತಿಂಗಳ ಹಿಂದೆ. ಆ ಕ್ಷಣದಿಂದ ರಿಟೈರಾಗುವುದನ್ನೆ ಕಾದರು ಅವರು. ಆ ಮಾತಿಗೆ ಕೊಯಮತ್ತೂರೇ ಆಗಬೇಕಿರಲಿಲ್ಲ. ಒಂದಷ್ಟು ದೂರದ, ಯಾರ ಗುರುತೂ ಇಲ್ಲದ ಯಾವ ಊರಾದರೂ ನಡೆಯುತ್ತಿತ್ತು. ಬಿಎಡ್ ಮಾಡುವಾಗ ಒಮ್ಮೆ ಗೆಳೆಯರೊಂದಿಗೆ ದಕ್ಷಿಣ ಭಾರತ ಪ್ರವಾಸಕ್ಕೆಂದು ಬಂದಾಗ ಕೊಯಮತ್ತೂರಿನಲ್ಲಿ ರೈಲು ಬದಲಿಸಿದ್ದಷ್ಟೆ. ನಿಲ್ದಾಣದಲ್ಲಿ ಒಂದಿಪ್ಪತ್ತು ನಿಮಿಷ ಕಳೆದದ್ದು ಬಿಟ್ಟರೆ ಆ ಊರಿನೊಂದಿಗೆ ಮತ್ಯಾವ ಬಂಧವೂ ಇರಲಿಲ್ಲ ಅವರಿಗೆ. ಎಲ್ಲ ರೈಲು ನಿಲ್ದಾಣಗಳೂ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತವೆ, ಈಗ ಆ ಸ್ಟೇಷನ್ನನ್ನೂ ಗುರುತು ಹಿಡಿಯಲಾರೆ ಎಂದೆನಿಸಿತು ರಾವ್‌ಗೆ.
ಕೊಯಮತ್ತೂರು-೫ ಕಿ.ಮೀ. ಎಂದು ಬರೆದಿದ್ದ ಮೈಲಿಗಲ್ಲನ್ನು ನೋಡಿದ ರಾವ್ ಪುಳಕಿತರಾದರು. ಆತ್ಮಹತ್ಯೆಯಿಲ್ಲದೆ ಮರುಹುಟ್ಟು ಪಡೆಯುವುದೆಂದರೆ ಹೀಗೆ ಎನಿಸಿತು ಅವರಿಗೆ.
^^^
ಕಳೆದವಾರವೇ ಬಂದು ರಾವ್ ನೋಡಿಟ್ಟಿದ್ದ ಮನೆಯ ಮುಂದೆ ಟ್ರಕ್ಕು ನಿಂತಾಗ ಸಂಜೆಯೊಂದು ನಗರವನ್ನು ಮಡಿಲಲ್ಲಿ ಕರಗಿಸುತ್ತಿತ್ತು. ಸಾಮಾನುಗಳನ್ನೆಲ್ಲ ಇಳಿಸಿಕೊಂಡು ಒಂದು ಹಂತಕ್ಕೆ ಜೋಡಿಸಿಕೊಳ್ಳುವಷ್ಟರಲ್ಲಿ ಬೀದಿ ದೀಪಗಳು ಬೆಳಗತೊಡಗಿದ್ದವು. ಹೆಂಡತಿ ಮತ್ತು ಮಗಳು ನೆಲ ತೊಳೆದುಕೊಂಡು, ಹತ್ತಿರದ ಜಗ್ಗುವ ಬೋರಿನಿಂದ ಕುಡಿಯುವ ನೀರು ತರುವಷ್ಟರಲ್ಲಿ ರಾವ್ ಮುಖ ತೊಳೆದು ಸಿದ್ಧರಾದರು. ಹೊರಬಿದ್ದು ಸಂಪೂರ್ಣ ಅಪರಿಚಿತ ರಸ್ತೆಗಳಲ್ಲಿ ನಿಧಾನವಾಗಿ ನಡೆಯತೊಡಗಿದರು.
ಸಂಜೆಯ ಪೇಟೆ ಸರಬರದಿಂದ ಕೂಡಿತ್ತು. ಮಾರುಕಟ್ಟೆ ತುಂಬ ಹಸಿರಿನದ್ದೆ ಗಲಾಟೆ. ಸುಂದರವಾಗಿ ಅಲಂಕರಿಸಿಕೊಂಡ, ಹಣೆಗೆ ದೊಡ್ಡ ದೊಡ್ಡ ಕುಂಕುಮಗಳನ್ನಿಟ್ಟುಕೊಂಡ ಹೆಂಗಸರು, ಸ್ಕೂಟರ್ ಮೇಲೆ ಸಾಗಿದ ಪುಟ್ಟ ಸುಖೀ ಕುಟುಂಬಗಳು, ವಿನಾಕಾರಣ ಅಳುವ ಹಾಲುಗೆನ್ನೆಯ ಪುಟಾಣಿ ದೇವತೆಗಳು, ರಸ್ತೆಬದಿಯಲ್ಲಿ ದೇವರ ಪಟಗಳನ್ನು ಮಾರುವ ಪುಟಾಣಿ ಹುಡುಗಿ... ನೋಡುತ್ತ ನೋಡುತ್ತ ಮೇಷ್ಟ್ರು ಹುರುಪು ತುಂಬಿಕೊಂಡರು. ಅವರೀಗ ಮೊದಲ ಬಾರಿಗೆ ನಮಸ್ಕಾರ ಹೇಳುವವರ ಕಾಟವಿಲ್ಲದೆ ನೆಮ್ಮದಿಯಿಂದ ನಡೆಯುತ್ತಿದ್ದರು.
ಪಕ್ಕದಲ್ಲಿ ಕಣ್ಣಿಗೆ ಬಿದ್ದ ಉದ್ಯಾನದೊಳಕ್ಕೆ ಹೋಗಿ ಕಲ್ಲು ಬೆಂಚಿನ ಮೇಲೆ ಕೂತು ಕೊಂಚ ವಿರಮಿಸಿಕೊಂಡರು. ಜೋಕಾಲಿಯ ಮೇಲೆ ಒಬ್ಬಳೇ ಕೂತು ತಮ್ಮತ್ತ ಕಣ್ಣರಳಿಸಿ ನೋಡಿದ ಪುಟ್ಟಿಯತ್ತ ನಕ್ಕರು. ಎದ್ದು ಹೋಗಿ ಮೆಲ್ಲಕ್ಕೆ ಸ್ವಲ್ಪ ಹೊತ್ತು ತೂಗಿದರು. ಉದ್ಯಾನಕ್ಕೆ ಹೊಂದಿಕೊಂಡಂತೆ ಇದ್ದ ಗ್ರಂಥಾಲಯವನ್ನು ನೋಡಿ `ಓ ಇಲ್ಲೂ ಬರಬಹುದು' ಎಂದುಕೊಂಡವರು ಹಿಂದೆಯೇ `ಓ! ಅಲ್ಲಿ ಬರೇ ತಮಿಳು ಪುಸ್ತಕಗಳಿದ್ದರೆ?' ಎಂದು ಯೋಚಿಸಿದರು. ತಮಿಳುನಾಡಿನಲ್ಲೆಲ್ಲ ಮಧ್ಯಾಹ್ನ ಮಾತ್ರ ಅನ್ನದ ಊಟ, ಬೆಳಿಗ್ಗೆ ಮತ್ತು ರಾತ್ರಿ ಬರೀ ಇಡ್ಲಿ ಇಲ್ಲವೇ ದೋಸೆ ಎಂದು ಊರಲ್ಲಿ ಯಾರೋ ಹೇಳಿದ್ದು ನೆನಪಾಯಿತು. ಆ ರಾತ್ರಿಯ ತಂಪು ಗಾಳಿ ಮೇಷ್ಟ್ರಿಗೆ ಹಿತವೆನಿಸಿತು. ಊರಿನ ಬಗ್ಗೆ ವಿಶ್ವಾಸ ಹುಟ್ಟಿದವರಂತೆ ಹೆಂಡತಿ ಮಗಳಿಗೆ ಹೂವು ಕೊಂಡರು. ಹೂವಿನವಳೊಡನೆ ಸನ್ನೆಯಲ್ಲೇ ಮಾತನಾಡುವ ಕ್ಷಣದಲ್ಲಿ ಊರು ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಂತೆನಿಸಿ ರೋಮಾಂಚಿತರಾದರು.
ಹೂವಾಡಗಿತ್ತಿಗೂ ಒಂದು ಹೂನಗೆ ಇತ್ತು , ಮತ್ತೊಂದು ಅಂಗಡಿಯಲ್ಲಿ `ಮೈಸೂರ್ ಪಾ' ಕೊಂಡು ಮನೆ ಕಡೆ ಹೊರಟ ಮೇಷ್ಟ್ರಿಗೆ ಕತ್ತಲಿನಲ್ಲಿ ಗೊಂದಲವಾಯಿತು. ಮೂರ್ನಾಕು ಬೀದಿಗಳನ್ನು ಸುತ್ತಿದ ಮೇಲೂ ತಾವು ಬಂದ ಹಾದಿಯ ಸುಳಿವು ಹತ್ತಲಿಲ್ಲ. ಸೋಡಿಯಂ ದೀಪಗಳ ಬೆಳಕಿನಲ್ಲಿ ಲೋಕವೆಲ್ಲ ಹಳದಿಯಾಗಿತ್ತು. ತುಸು ಎತ್ತರದಲ್ಲಿದ್ದ ಮೂರು ರಸ್ತೆ ಕೂಡುವ ಸರ್ಕಲ್ ಒಂದಂತೂ ಆ ಹಳದಿಯಲ್ಲಿ ಥೇಟ್ ಕಂಪನಿ ನಾಟಕದ ರಾಸ್ತಾ ಸೀನಿನಂತೆ ತೋರುತ್ತಿತ್ತು. ಯಾರಲ್ಲೂ ವಿಚಾರಿಸದೆ ಸುಮ್ಮನೆ ಊಹೆಯ ಮೇಲೆಯೇ ಮೇಷ್ಟರು ನಡೆದರು. ತಮ್ಮ ಮನೆ ತಮಗೇ ಸಿಕ್ಕುತ್ತಿಲ್ಲ ಎಂದು ಕೇಳುವುದಾದರೂ ಹೇಗೆ? ಇನ್ನೇನು ಚಿಂತಿತರಾಗುತ್ತಿರುವಂತೆಯೇ ಪುಟ್ಟ ಗಣೇಶನ ಗುಡಿ ಕಣ್ಣಿಗೆ ಬಿತ್ತು.ಅದರಿಂದ ಮುಂದಕ್ಕೆ ಒಂದೇ ಬೀದಿ ನಡೆದರೆ ಮನೆ ಎಂಬುದು ಹೊಳೆಯುತ್ತಲೆ, ಗೆಲುವಿನಿಂದ ಹೆಜ್ಜೆ ಹಾಕಿ ಬಾಗಿಲಲ್ಲೇ ಕಾಯುತ್ತಿದ್ದ ಹೆಂಡತಿ, ಮಗಳನ್ನು ಕೂಡಿಕೊಂಡರು.
^^^
ಆ ರಾತ್ರಿ ಪರಿಮಳ ಬೇಗನೆ ನಿದ್ದೆಹೋದಳು. ತಡರಾತ್ರಿಯವರೆಗೂ ಅಂಗಳದಲ್ಲಿ ಕೂತಿದ್ದ ದಂಪತಿಗಳು ಹೆಚ್ಚೇನೂ ಮಾತಾಡಲಿಲ್ಲ. ಬಹಳ ಹೊತ್ತಿನ ನಂತರ ರಾವ್ `ಸೀತು, ಹಳೇದೆಲ್ಲವನ್ನು ಇವತ್ತಿಗೆ ಮರೆತುಬಿಡು' ಎಂದರು. ನಕ್ಷತ್ರಗಳನ್ನು ನೋಡುತ್ತಾ ಸೀತಮ್ಮ ಮೆಲುದನಿಯಲ್ಲಿ `ಹೂ' ಎಂದರು. ರಾವ್ `ನಾಳೆನೇ ಶಾಂತಿಗೂ ಸುರೇಶನಿಗೂ ಟೆಲಿಗ್ರಾಂ ಮಾಡಬೇಕು ಕಣೇ' ಎಂದರು. ಸೀತಮ್ಮ ಅದಕ್ಕೂ `ಹೂ' ಎಂದರು. ಅವರಿಗೆ ಇನ್ನೇನಲ್ಲದಿದ್ದರೂ ಗಂಡನ ನಿರಾಳತೆ ಅರ್ಥವಾಗುತ್ತಿತ್ತು. ಆಗಸದಲ್ಲಿ ಚಂದಿರ ಹುರುಪಿನಿಂದ ಅಲೆಯುತ್ತಿದ್ದ. ಇಬ್ಬರೂ ಎದ್ದು ಒಳ ಹೋಗುವಾಗ `ಬೆಳಗ್ಗೆ ಬೇಗ ಏಳಿಸೇ' ಎಂದರು ರಾವ್.
ಆದರೆ ಟ್ರಕ್ ಪ್ರಯಾಣದ ಆಯಾಸಕ್ಕೋ ಏನೋ ಸೀತಮ್ಮ ಏಳುವಾಗಲೇ ಎಂಟು ಹೊಡೆದಿತ್ತು. ಕಾಫಿ ಮಾಡಿಕೊಂಡು ಬಂದೇ ಎಬ್ಬಿಸೋಣ ಎಂದುಕೊಂಡ ಅವರು ಅಡಿಗೆ ಮನೆಗೆ ನೆಡೆದರು. ನೆಮ್ಮದಿಯಿಂದ ಮಲಗಿದ್ದ ಮೇಷ್ಟ್ರು ಮಾತ್ರ ಯಾರು ಏಳಿಸಿದರೂ ಏಳುವಂತಿರಲಿಲ್ಲ.

No comments: