Tuesday, September 18, 2007

ಸಾರಿ ಪದ್ಮಿನಿ(ಕತೆ)

ಏನೇ ಆಗಲಿ, ಇವತ್ತು ಪದ್ಮಿನಿಯನ್ನು ಮಾತನಾಡಿಸಿ ಎಲ್ಲ ಹೇಳಿಬಿಡಬೇಕು ಎಂದು ಕಳೆದ ರಾತ್ರಿಯೆಲ್ಲಾ ಕುಳಿತು ತಾನು ಮಾಡಿದ ಉಕ್ಕಿನಂಥ ನಿರ್ಧಾರ ಐದು ನಿಮಿಷ ಹಿಂದಿನವರೆಗೂ ಅಷ್ಟೇ ಗಟ್ಟಿಯಾಗಿದ್ದದ್ದು , ಈಗ ಕೃಷ್ಣ ಅಪಾರ್ಟ್‌ಮೆಂಟಿನ ಮೂರನೇ ಮಹಡಿಯ ಕೊನೇ ಮೆಟ್ಟಿಲುಗಳನ್ನೇರುತ್ತಿರುವಾಗ ಏಕೋ ಐಸ್‌ಕ್ರೀಮಿನಂತೆ ಕರಗುತ್ತಿರುವ ಸುಳಿವು ಹತ್ತಿ ದತ್ತಾತ್ತ್ರೇಯ ಕಂಗಾಲಾಗಿ ಆಸರೆಗೆ ಪಕ್ಕದ ಗೋಡೆಯನ್ನು ಹಿಡಿದುಕೊಂಡ. ವರ್ಚುಯಲ್ ಸಿಸ್ಟಮ್ಸ್ ಕಂಪ್ಯೂಟರ್ ಸೆಂಟರಿನ ಬಾಗಿಲಿನಲ್ಲಿದ್ದ ಒಂದೇ ಜತೆ ಪರಿಚಿತ ಚಪ್ಪಲಿಗಳು ಒಳಗೆ ಪದ್ಮಿನಿ ಇದ್ದಾಳೆಂದೂ ಮತ್ತು ಪದ್ಮಿನಿ ಒಬ್ಬಳೇ ಇದ್ದಾಳೆಂದೂ ಸೂಚಿಸಿ ಅವನ ಎದೆಬಡಿತವನ್ನು ಮತ್ತಷ್ಟು ಹೆಚ್ಚಿಸಿದವು. ಕಾರಿಡಾರಿನಲ್ಲಿ ನಿಂತ ದತ್ತಾತ್ರೇಯ ಕೈಯಿಂದ ತಲೆಗೂದಲನ್ನು ಸರಿಮಾಡಿಕೊಂಡು ಬಾಗಿಲ ಕಡೆಗೆ ನಡೆದ. ಹೆಜ್ಜೆಗಳು ಭಾರ ಎನಿಸಿದವು. ಸದ್ದು ಮಾಡದಂತೆ ಬಾಗಿಲ ಬಳಿಗೆ ಹೋದವನಿಗೆ ಕಂಪ್ಯೂಟರಿನ ಮುಂದೆ ಕುಳಿತಿದ್ದ ಪದ್ಮಿನಿಯ ಬೆನ್ನಿನ ಭಾಗ ಮಾತ್ರ ಕಾಣುತ್ತಿತ್ತು. ನೀಲಿಬಣ್ಣದ ಕಮೀಜಿನಲ್ಲಿ ಗೋಡೆಯ ಕಡೆ ಮುಖ ಮಾಡಿ ತನ್ನ ಕೆಲಸದಲ್ಲಿ ಮಗ್ನಳಾಗಿದ್ದ ಪದ್ಮಿನಿ ದತ್ತಾತ್ರೇಯನಿಗೆ ಹಿಂದೆಂದಿಗಿಂತಲೂ ಕಠಿಣವಾಗಿ ಕಂಡು ಅವನು ಸದ್ದಿಲ್ಲದೆ ವಾಪಾಸು ಬಂದು ಕೆಳಗೆ ರಸ್ತೆಯಲ್ಲಿ ಹರಿಯುತ್ತಿದ್ದ ಜನಸಂದಣಿಯನ್ನು ಗಮನಿಸುತ್ತಾ, ಇವರಿಗೆಲ್ಲಾ ತನ್ನ ಸಮಸ್ಯೆಯ ಪರಿವೆಯೇ ಇಲ್ಲವಲ್ಲ ಎಂದು ಗಲಿಬಿಲಿಗೊಂಡ. ಪದ್ಮಿನಿಯನ್ನು ಮಾತಾಡಿಸಲು ನನಗೇಕೆ ಇಂಥ ಭಯವಾಗಬೇಕು ಎಂಬ ಯಕ್ಷಪ್ರಶ್ನೆಯನ್ನು ಪ್ರಸ್ತುತ ವಾರದಲ್ಲಿ ನೂರಾ ಎಂಟನೇ ಸಲ ಹಾಕಿಕೊಂಡು ಖಿನ್ನನಾದ.
ಇದೆಲ್ಲ ಶುರುವಾಗಿದ್ದು ಸರಿಸುಮಾರು ಎರಡು ತಿಂಗಳಿನ ಹಿಂದೆ. ಕಂಪ್ಯೂಟರಿನ ಯಾವುದೋ ಡಿಪ್ಲೊಮ ಮುಗಿಸಿಕೊಂಡಿದ್ದ ಕುಮಾರ್ ತೀರ ಚಿಕ್ಕದಾದ ಆ ಸಣ್ಣ ರೂಮಿನಲ್ಲಿ ಎರಡು ಕಪ್ಪು ಬಿಳುಪು ಕಂಪ್ಯೂಟರುಗಳನ್ನಿಟ್ಟುಕೊಂಡು ವರ್ಚುಯಲ್ ಸಿಸ್ಟಮ್ಸ್ ಎಂದು ದೊಡ್ಡ ಬೋರ್ಡು ಬರೆಸಿ, ಅದಕ್ಕೆ ಎರಡು ಮಾರು ಸೇವಂತಿಗೆ ಹೂವಿನ ಹಾರ ಹಾಕಿ, ಊದಿನಕಡ್ಡಿ ಬೆಳಗಿ, ಓಪನಿಂಗ್ ಶಾಸ್ತ್ರ ಮುಗಿಸಿದ ಮಾರನೇ ದಿನವೇ ಆಗಷ್ಟೇ ಡಿಗ್ರಿ ಮುಗಿಸಿದ್ದ ದತ್ತಾತ್ರೇಯ ಫೀಜು ಕಡಿಮೆ ಎಂಬ ಒಂದೇ ಕಾರಣಕ್ಕೆ ಸೇರಿಕೊಂಡ.
ಸಣ್ಣಕೋಣೆಯೆಂದೋ, ಕಪ್ಪು ಬಿಳುಪು ಮಾನಿಟರುಗಳ ದೆಸೆಯಿಂದಲೊ ಅಥವಾ ನೋಡಲು ಕುಮಾರ ಸ್ವಲ್ಪ ಪೆಕರನಂತೆ ಕಾಣುತ್ತಿದ್ದುದರಿಂದಲೊ ಅಂತೂ ದತ್ತಾತ್ರೇಯನ ನಂತರ ಬಹಳ ಜನವೇನೂ ಆ ಕಂಪ್ಯೂಟರ್ ಸೆಂಟರಿಗೆ ಸೇರಿಕೊಳ್ಳಲಿಲ್ಲ. ಹೀಗಾಗಿ ಸೇರಿದ ಕೆಲವರಿಗೇ ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ಅಭ್ಯಾಸ ಮಾಡಲು ಅನುವಾಗುತ್ತಿತ್ತು. ದತ್ತಾತ್ರೇಯ ಹೋಗುತ್ತಿದ್ದ ಸಂಜೆ ಆರೂವರೆಯಿಂದ ಏಳೂವರೆವರೆಗಿನ ಅವಧಿಯಲ್ಲಿ ಮತ್ತಾರು ಬರುತ್ತಿಲ್ಲವಾದ್ದರಿಂದ ಅವನ ಪಕ್ಕದಲ್ಲಿದ್ದ ಎರಡನೇ ಕಂಪ್ಯೂಟರ್ ಮುಸುಕು ಹೊದ್ದು ಕುಳಿತಿರುತ್ತಿತ್ತು. ಆ ಸಮಯ ಕುಮಾರನ ಚಾ, ಸಿಗರೇಟಿನ ಸಮಯವಾದ್ದರಿಂದ ಹತ್ತು ನಿಮಿಷ ದತ್ತಾತ್ರೇಯನಿಗೆ ಪಾಠ ಮಾಡಿದಂತೆ ಮಾಡಿ, ಇದನ್ನು ಪ್ರಾಕ್ಟಿಸ್ ಮಾಡ್ತಿರು, ಈಗ ಬಂದೆ ಎಂದು ಮೂರನೇ ಕ್ರಾಸಿನಲ್ಲಿದ್ದ ಸಲೀಮನ ಟೀ ಶಾಪಿಗೆ ಹೋಗುತ್ತಿದ್ದವನು ವಾಪಾಸು ಬರುತ್ತಿದ್ದುದು ಏಳೂವರೆಗೆ. ಹೀಗಾಗಿ ಪ್ರತಿದಿನವೂ ತೀರಾ ಸಣ್ಣದಾದ ಆ ರೂಮಿನಲ್ಲಿ ದತ್ತಾತ್ರೇಯ ಒಬ್ಬನೇ ಒಂದು ಗಂಟೆಯ ಅವಧಿಯನ್ನು ಕಂಪ್ಯೂಟರಿನೊಡನೆ ಕಳೆಯಬೇಕಾಗುತ್ತಿತ್ತು. ಆಗೆಲ್ಲಾ ಅವನು ಆ ಏಕಾಂತವನ್ನು ಅನುಭವಿಸುವನಂತೆ ಕಾಲುಗಳನ್ನು ಉದ್ದಕ್ಕೆ ಗೋಡೆಗೆ ತಗಲುವಂತೆ ಚಾಚಿ, ಫ್ಯಾನಿಲ್ಲದ ಕೋಣೆಯ ಸೆಖೆಯನ್ನು ನಿವಾರಿಸಲೆಂದು ಷರಟಿನ ಮೂರು ಗುಂಡಿಗಳನ್ನು ಬಿಚ್ಚಿ ಸಣ್ಣ ದನಿಯಲ್ಲಿ `ಚಾಂದ್ ನೇ ಕುಚ್ ಕಹಾ ರಾತ್ ನೇ ಕುಚ್ ಸುನಾ' ಅಂತ ಯಾವುದೊ ಹಾಡನ್ನು ಗುನುಗಿಕೊಳ್ಳುತ್ತ ಕಂಪ್ಯೂಟರಿನೊಡನೆ ಗುದ್ದಾಡುತ್ತಿದ್ದವನು ಅಪರೂಪಕ್ಕೊಮ್ಮೆ ಯಾರಾದರೂ ಕುಮಾರನನ್ನು ಕೇಳಿಕೊಂಡು ತಕ್ಷಣ ಒಳಗೆ ಬಂದರೆ ಸರಕ್ಕನೆ ಖುರ್ಚಿಯಿಂದೆದ್ದು ಷರಟಿನ ಗುಂಡಿಗಳನ್ನು ಹಾಕಿಕೊಳ್ಳುತ್ತ `ಏಳೂವರೆಗೆ ಬಂದರೆ ಸಿಗ್ತಾರೆ' ಎಂದು ತಡವರಿಸುತ್ತಿದ್ದ.
ಒಂದು ತಿಂಗಳಿನವರೆಗೂ ಹೀಗೇ ದಿನ ಕಳೆಯುತ್ತಿದ್ದ ದತ್ತಾತ್ರೇಯನಿಗೆ ಅವತ್ತು ಕಂಪ್ಯೂಟರಿಗೆ ಬಂದಾಗ ಬಿಳಿಯ ಬಣ್ಣದ ವಸ್ತ್ರಗಳಲ್ಲಿ ಹಂಸದಂತೆ ಕಾಣುತ್ತಿದ್ದ ಹುಡುಗಿಯೊಬ್ಬಳು ಕುಮಾರನ ಹತ್ತಿರ `ಹೌ ಟು ಕ್ರಿಯೇಟ್ ಎ ಡೈರೆಕ್ಟರಿ' ಎಂಬುದನ್ನು ಹೇಳಿಸಿಕೊಳ್ಳುತ್ತಿದ್ದುದನ್ನು ಕಂಡು ತನ್ನ ಒಂಟಿತನದ ಸಮಸ್ಯೆ ಹೀಗೆ ಅನಿರೀಕ್ಷಿತ ರೋಮಾಂಚಕಾರಿ ರೀತಿಯಲ್ಲಿ ಪರಿಹಾರವಾದದ್ದು ಪರಮಾನಂದವುಂಟುಮಾಡಿತು.ಅದರ ನಂತರ ದತ್ತಾತ್ರೇಯನಿಗೆ ಕಂಪ್ಯೂಟರಿಗೆ ಬರಲು ಎಂತದೋ ಹೊಸ ಹುರುಪು ತುಂಬಿಕೊಂಡಿತು. ಮಾಮೂಲಿಯಂತೆ ಸೂಚನೆಗಳನ್ನು ಕೊಟ್ಟು ಕುಮಾರ್ ಸಲೀಮ್ ಟೀ ಶಾಪಿಗೆ ಹೋಗಿಬಿಡುತ್ತಿದ್ದ. ಇವನು ಇನ್‌ಷರ್ಟ್ ಮಾಡಿಕೊಂಡು ನೇರವಾಗಿ ಕೂತುಕೊಂಡು ಸೀರಿಯಸ್ಸಾಗಿ ಅಭ್ಯಾಸ ಮಾಡಲಾರಂಬಿಸಿದ. ಪಕ್ಕದಲ್ಲಿ ಕುಳಿತ ಪದ್ಮಿನಿಯ ಮೈಯಿಂದ ಬರುತ್ತಿದ್ದ ಎಂಥದೋ ಸುವಾಸನೆಯನ್ನು ಹೀರಿಕೊಳ್ಳುತ್ತಾ,ಅವಳ ಬೆಳ್ಳನೆಯ ಪಾದಗಳನ್ನು ಗಮನಿಸುತ್ತಾ ಸ್ವಲ್ಪ ಹೊತ್ತು ಮೈಮರೆಯುತ್ತಿದ್ದ ದತ್ತಾತ್ರೇಯ ಮರುಕ್ಷಣವೇ ಅವಳ ಇರುವಿಕೆಯಿಂದ ತನಗೇನೂ ಆಗಿಲ್ಲವೆನ್ನುವುದನ್ನ ಯಾರಿಗೋ ತೋರಿಸುವವನಂತೆ ಒಮ್ಮೆ ಪುಸ್ತಕದೆಡೆಗೂ ಮತ್ತೊಮ್ಮೆ ಕಂಪ್ಯೂಟರ್ ತೆರೆಯೆಡೆಗೂ ನೋಡುತ್ತಾ ಬ್ಯುಸಿಯಾಗಿ ಅಭ್ಯಾಸ ಮಾಡುತ್ತಿದ್ದ. ಮತ್ತೆರಡು ನಿಮಿಷಗಳಲ್ಲಿ ಟೈಪ್ ಮಾಡುತ್ತಿದ್ದ ಅವಳ ಬೆರಳುಗಳೋ, ಮುಡಿದ ಜಾಜಿ ಹೂವಿನ ವಾಸನೆಯೋ ಅಥವಾ ಕುಳಿತ ಭಂಗಿಯೋ ಅವನ ಗಮನವನ್ನು ಸೆಳೆಯುತ್ತಿದ್ದವು.
ಇಲ್ಲಿಯವರೆಗೂ ಗೆಳತಿಯರೇ ಇರದಿದ್ದ ದತ್ತಾತ್ರೇಯ ನಿಗೆ ಈಗ ತನ್ನ ಪಕ್ಕದಲ್ಲಿ ಕೂತುಕೊಳ್ಳುವ ಪದ್ಮಿನಿ ಎಂಬ ಹುಡುಗಿಯನ್ನು ತಾನು ಮಾತಾಡಿಸಿ ಗೆಳೆತನ ಆರಂಭಿಸುವ ಬಗ್ಗೆ ಯಾವ ನಂಬಿಕೆಯೂ ಇರಲಿಲ್ಲವಾದುದರಿಂದ ಈ ವಾಸನೆ ಹೀರುವ, ಪಾದಗಳನ್ನು ಗಮನಿಸುವ ಆಟಗಳೆಲ್ಲಾ ಬಲು ಬೇಗ ಬೇಸರವಾಗಿ ಹೋಗಿ `ಇವಳು ಬರದಿದ್ದರೇ ಚೆನ್ನಾಗಿತ್ತು , ಕಾಲು ಚಾಚಿ ಗುಂಡಿ ಬಿಚ್ಚಿಕೊಂಡು, ಹಾಡಿಕೊಳ್ಳುವ ಸ್ವಾತಂತ್ರ್ಯವಾದರೂ ಉಳಿಯುತ್ತಿತ್ತು' ಎಂದುಕೊಳ್ಳಲಾರಂಭಿಸಿದ. ಆದರೂ ಒಮ್ಮೊಮ್ಮೆ ಈ ಪದ್ಮಿನಿ ಎಂಬ ಹುಡುಗಿ ತನ್ನ ಭಾವನೆಗಳನ್ನು ನಿಯಂತ್ರಿಸುತ್ತಾಳೆ ಎಂಬ ಅರಿವು ದತ್ತಾತ್ರೇಯನಿಗೂ ಇತ್ತು.ಹೀಗಿರುವಾಗ ತಮ್ಮಿಬ್ಬರ ಮೊದಲ ಮಾತುಕತೆ ಇಷ್ಟು ಅನಿರೀಕ್ಷಿತವಾಗಿ ಆಗಿಬಿಡಬಹುದೆಂಬ ಕಲ್ಪನೆಯೂ ಅವನಿಗಿರಲಿಲ್ಲ.
ಅವತ್ತು ಪದ್ಮಿನಿ ಏನನ್ನೋ ಟೈಪು ಮಾಡುತ್ತಿದ್ದಳು. ನೋಡಲು ಮುದ್ದಾಗಿದ್ದರೂ ಪದ್ಮಿನಿ ಸ್ಪೆಲಿಂಗ್ ವಿಷಯದಲ್ಲಿ ಮಹಾದಡ್ಡಿಯಾಗಿದ್ದಳು.ಅವಳು ಮಾಡಿದ ಮಿಸ್ಟೇಕುಗಳನ್ನು ಗಮನಿಸಿ ಮನಸ್ಸಿನಲ್ಲೆ ನಗುತ್ತ ಮುಂದೆ ಓದುತ್ತಿದ್ದ ದತ್ತಾತ್ರೇಯನಿಗೆ ಅವಳು ಒಂದು ಕಡೆ ಟಿ ಞಟಿ ಎಂಬುದಕ್ಕೆ ಞಟಿತಿ ಞಟಿ ಎಂದು ಟೈಪ್ ಮಾಡಿದ್ದನ್ನು ನೋಡಿದಾಗ ಆಘಾತವಾಗಿ ತಡೆಯಲಾಗದೆ ಮಾಯೆಯಲ್ಲೆಂಬಂತೆ ಅದನ್ನು ಅವಳಿಗೆ ಹೇಳಿಬಿಟ್ಟ. ತನ್ನ ಅನರ್ಥಕಾರಿ ತಪ್ಪನ್ನು ನೋಡಿ ಪದ್ಮಿನಿ `ಅಯ್ಯಯ್ಯೋ' ಎಂದು ತನ್ನ ಬೆರಳುಗಳನ್ನು ಕೊಡವಿಕೊಳ್ಳುತ್ತಾ `ಥ್ಯಾಂಕ್ಸ್ ರೀ' ಎನ್ನುವಾಗ ಅವಳ ತುಟಿಯಂಚಿನಲ್ಲಿ ಒಂದು ಸುಂದರ ನಗುವಿತ್ತು.
ಆ ನಗು ಅವನನ್ನು ಕನಸಿನಲ್ಲೂ ಕಾಡತೊಡಗಿತು. ಈಗ ಅವಳು ಎಲ್ಲ ಸನ್ನ ಪುಟ್ಟ ಡೌಟುಗಳನ್ನೂ ದತ್ತಾತ್ರೇಯನ ಹತ್ತಿರವೇ ಕೇಳುತ್ತಿದ್ದಳು. `ಅಯ್ಯೋ ಈ ಟೂಲ್ ಬಾರ್ ಕೆಳಗೆ ಹೋಯ್ತಲ್ಲಾ , ಇದನ್ನ ಮೂಲೆಯಿಂದ ಸೆಂಟರಿಗೆ ತರಬೋದಾ, ಇದನ್ನು ಚಿಕ್ಕದು ಮಾಡೋದು ಹೇಗೆ?' ಅಂತೆಲ್ಲಾ ವಿಧವಿಧವಾದ ಪ್ರಶ್ನೆಗಳಿಗೆಲ್ಲಾ ಪರಿಹಾರ ನೀಡುತ್ತಿದ್ದ ದತ್ತಾತ್ರೇಯ ಒಂದು ತಿಂಗಳು ಮೊದಲೇ ಅದನ್ನೆಲ್ಲಾ ಕಲಿತದ್ದು ಸಾರ್ಥಕವಾಯಿತು ಎಂದುಕೊಳ್ಳುತ್ತಿದ್ದ. ಅವುಗಳ ಜೊತೆಗೆ ಇಂಗ್ಲಿಷ್ ಸ್ಪೆಲ್ಲಿಂಗ್‌ನಲ್ಲಿ ಮಹಾಪೆದ್ದಿಯಾಗಿದ್ದಂರಿಂದ ಮತ್ತೆ ಮತ್ತೆ ತನ್ನ ತಪ್ಪುಗಳನ್ನು ಸರಿ ಮಾಡುತ್ತಿದ್ದ ಅವನಿಗೆ ಥ್ಯಾಂಕ್ಸ್ ಹೇಳುತ್ತಾ ಮೋಹಕವಾಗಿ ನಗುತ್ತಿದ್ದಳು ಅವಳು.ಹೀಗೆ ಸ್ವಲ್ಪ ಪೆದ್ದಾದರೂ ಮುದ್ದಾದ ಪದ್ಮಿನಿಯೆಂಬ ಹುಡುಗಿಯ ಥ್ಯಾಂಕ್ಸ್‌ಗಳಲ್ಲಿ ಮೈಮರೆತಿದ್ದ ದತ್ತಾತ್ರೇಯನೂ ಲಕ್ಷಣವಂತನಾಗಿಯೂ, ವಿನಯವಂತನಾಗಿಯೂ ಇದ್ದುದರಿಂದ ಪದ್ಮಿನಿಯ ಎದೆಯಲ್ಲೂ ಪ್ರೀತಿ ಹಕ್ಕಿ ರೆಕ್ಕೆ ಬಡಿಯಲಾರಂಭಿಸಿತು. ಎಂದೋ ಒಂದು ದಿನ ಬಗ್ಗಿದರೆ ಕಾಣುವ ಪೇಟೆಯಲ್ಲಿ ಹೆಂಗಸರು ಕೊತ್ತಂಬರಿ ಸೊಪ್ಪಿಗೆ ಚೌಕಾಶಿ ಮಾಡುತ್ತಿರುವಾಗಲೋ, ಎರಡನೇ ಫ್ಲೋರಿನ ಟೈಲರ್ ಷರ್ಟಿನ ಅಳತೆ ಬರೆದುಕೊಂಡು ಪ್ಯಾಂಟಿನ ಅಳತೆ ನಡೆಸಿರುವಾಗಲೋ, ಸಲೀಮ್ ಟೀ ಷಾಪಿನಲ್ಲಿ ಪೆದ್ದನಂತೆ ಕುಳಿತ ಕುಮಾರ ಎರಡನೇ ರೌಂಡು ಚಾ ಕುಡಿದು ಮೂರನೇ ಸಿಗರೇಟು ಸುಡುತ್ತಿರುವಾಗಲೋ ಅಂತೂ ಇವರಿಬ್ಬರೂ ಸದ್ದಿಲ್ಲದೆ ತಮ್ಮ ಹೃದಯಗಳನ್ನು ಬಿಚ್ಚಿಟ್ಟುಕೊಂಡರು.
ಮುಂದಿನ ದಿನಗಳಲ್ಲಿ ಸಂಜೆಯ ಹೊತ್ತು ಅವರಿಬ್ಬರೂ ಪಕ್ಕದಲ್ಲೇ ಇದ್ದ ವಿವೇಕಾನಂದ ಪಾರ್ಕಿನ ಹಸಿರಿನಲ್ಲಿ ಕೂತು ಕೈ ಕೈ ಹಿಡಿದು `ಏನಾದ್ರೂಹೇಳು' `ಏನು ಹೇಳಲಿ?ನೀನೆ ಹೇಳು' ಎಂದು ಗಂಟೆಗಟ್ಟಲೇ ಮಾತಾಡಲಾರಂಭಿಸಿದರು. ಹೀಗಿರಲು ಒಂದು ದಿನ ಯಾಕೋ ಪದ್ಮಿನಿ ಸೆಂಟರಿಗೆ ಬರದಿರಲು ಅದೇ ಬೇಸರದಿಂದ ಸುಮ್ಮನೆ ಕಂಪ್ಯೂಟರಿನ ಮುಂದೆ ಕೂತಿದ್ದ ದತ್ತಾತ್ರೇಯ ಕುತೂಹಲಕ್ಕೆಂದು ಪದ್ಮಿನಿಯ ಫೈಲು ತೆರೆದು ನೋಡತೊಡಗಿದ.ಅದರಲ್ಲಿ ಅವಳ ಬಯೋಡೇಟಾವಿತ್ತು. ಜನ್ಮದಿನಾಂಕಕ್ಕಾಗಿ ಹುಡುಕಿದ.ಅದು ನಾಳೆ ಬಿಟ್ಟು ನಾಡಿದ್ದೇ ಇರುವುದನ್ನು ಗಮನಿಸಿದ ದತ್ತಾತ್ರೇಯ ತಾನೇನಾದರೂ ಇದನ್ನು ಇವತ್ತು ನೋಡದಿದ್ದರೆ ತನ್ನ ಪ್ರೀತಿಯ ಹುಡುಗಿಯ ಬರ್ತ್‌ಡೇ ತನಗೆ ಗೊತ್ತಿಲ್ಲದಂತೆ ಕಳೆದುಹೋಗಿಬಿಡುತ್ತಿತ್ತಲ್ಲ ಎಂದು ಸಂತೋಷ ಮಿಶ್ರಿತ ಗಾಬರಿಯಲ್ಲಿ ಕಳೆದುಹೋದ.ಅವಳಿಗೆ ಸುಳಿವೇ ನೀಡದೇ ಒಂದು ವಿಶೇಷವಾದ ಉಡುಗೊರೆಯನ್ನು ಕೊಡಬೇಕೆಂದು ನಿರ್ಧರಿಸಿದ.
ರಾತ್ರಿಯೆಲ್ಲಾ ಕುಳಿತು ಯೋಚಿಸಿ ಗ್ರೀಟಿಂಗ್ ಕಾರ್ಡು, ಪೆನ್ನು, ಕೆಸೆಟ್ಟುಗಳಂತಹ ಮಾಮೂಲಿ ಉಡುಗೊರೆ ಅಲ್ಲದೆ ಏನಾದರೂ ವಿಶೇಷವಾದದ್ದನ್ನು ಕೊಡಬೇಕೆಂದುಕೊಂಡನೇ ಹೊರತು ಆ ವಿಶೇಷವಾದದ್ದು ಏನು ಎಂಬುದು ಮಾತ್ರ ಅವನಿಗೆ ಹೊಳೆಯಲಿಲ್ಲ. ಮಧ್ಯಾಹ್ನ ಊಟ ಮಾಡುವಾಗಲೂ ಯಾರೂ ಎಂದೂ ಕೊಟ್ಟಿರಬಾರದು, ವಿಶೇಷವಾಗಿರಬೇಕು, ಅವಳ ಹೃದಯಕ್ಕೆ ಹತ್ತಿರ ಇರುವಂಥದ್ದಾಗಿರಬೇಕು ಎಂಬ ಮೂರು ಅಂಶಗಳನ್ನು ಇಟ್ಟುಕೊಂಡು ಯೋಚಿಸುತ್ತಿರುವಾಗ ಹೃದಯಕ್ಕೆ ಹತ್ತಿರ ಇರುವಂಥದ್ದು ಎಂಬ ಅಂಶದಿಂದಾಗಿ ಒಂದು ಕಿಡಿಗೇಡಿ ಆಲೋಚನೆ ಹೊಳೆದು ನಗು ಬಂತು.ಮತ್ತೆರಡು ಕ್ಷಣಗಳಲ್ಲಿ ಅದನ್ನೇ ಯಾಕೆ ಕೊಡಬಾರದು ಅಂತ ಚಿಂತಿಸತೊಡಗಿ, ಮತ್ತೊಂದು ಕ್ಷಣದಲ್ಲಿ ಅದನ್ನೇ ಕೊಡುವುದು ಎಂದು ಧೃಢವಾಗಿ ನಿರ್ಧರಿಸಿದ.
ಅದು ಒಂದು `ಬ್ರಾ' ಆಗಿತ್ತು. ಆಗಿನಿಂದಲೂ ದತ್ತಾತ್ರೇಯ ಅದನ್ನು ಪದ್ಮಿನಿಗೆ ವಿವೇಕಾನಂದ ಪಾರ್ಕಿನ ಮಾಮೂಲಿ ಜಾಗದಲ್ಲಿ ಕೊಟ್ಟಾಗ ಅವಳು ನಾಚಿ ನೀರಾಗಿ ತಲೆ ತಗ್ಗಿಸುವಳೋ ಹುಸಿಕೋಪದಿಂದ ಮುನಿಸಿಕೊಳ್ಳುವಳೋ ಅಥವಾ ಅಟ್ಟಿಸಿಕೊಂಡು ಬಂದು ಬೆನ್ನಿಗೊಂದು ಹುಸಿಪೆಟ್ಟು ಕೊಟ್ಟು ತಬ್ಬಿಕೊಳ್ಳುವಳೋ ಎಂದೆಲ್ಲಾ ಕಲ್ಪಿಸಿಕೊಂಡು ರೋಮಾಂಚಿತನಾಗತೊಡಗಿದ. ನೆಹರೂ ಸರ್ಕಲ್ಲಿನ ಹತ್ತಿರ ಹೊಸದಾಗಿ ತೆರೆದಿರುವ ಹೆಂಗಸರ ಒಳ ಉಡುಪುಗಳ ಅಂಗಡಿ `ಪೆಟಲ್ಸ್'ನ ಮೆಟ್ಟಿಲುಗಳನ್ನೇರುತ್ತಿರುವಾಗ ಅವನಿಗೆ ಅಸಲೀ ಸಮಸ್ಯೆಯೊಂದು ಹೊಳೆದು ವಾಪಾಸು ಬಂದುಬಿಟ್ಟ. ಅದು ಬ್ರಾನ ಸೈಜಿನದು.ನಿಜ ಹೇಳಬೇಕೆಂದರೆ ಅವು ಯಾವ ರೇಂಜಿನ ಸೈಜುಗಳಲ್ಲಿರುತ್ತವೆ ಎಂಬ ಮೂಲಭೂತ ಕಲ್ಪವೆಯೂ ಇರದಿದ್ದ ದತ್ತಾತ್ರೇಯನಿಗೆ ಇದು ಯಾಕೋ ಸುಲಭದ ಸಮಸ್ಯೆಯಲ್ಲ ಎನಿಸತೊಡಗಿತು.ಸಂಜೆ ಪದ್ಮಿನಿ ಕಂಪ್ಯೂಟರಿನ ಮುಂದೆ ಕುಳಿತಿರುವಾಗ ಕಳ್ಳನಂತೆ ಅವಳಿಗೆ ಗೊತ್ತಾಗದಂತೆ ಅವಳ ಎದೆಯನ್ನೇ ಗಮನಿಸಿದ. ಹೊರಗೆ ಬಂದು ಸೈಜು ಎಷ್ಟಿರಬಹುದೆಂದು ಕಣ್ಮುಚ್ಚಿಕೊಂಡು ಎಷ್ಟು ಹೊತ್ತು ಯೋಚಿಸಿದರೂ ಬರಿಯ ಗೋಲಾಕೃತಿಗಳು ಕಣ್ಮುಂದೆ ತಿರುಗಿದವೇ ಹೊರತು ಯಾವ ನಂಬರೂ ಕಾಣದೆ ವಿಚಲಿತನಾದ.ಪೆಟಲ್ಸ್ ಅಂಗಡಿಯ ಸೇಲ್ಸ್ ಗರ್ಲ್‌ನ್ನು `ನಿಮ್ಮ ಸೈಜಿನದೇ ಕೊಡಿ' ಅಂದರೆ ಚಪ್ಪಲಿಯಿಂದ ಹೊಡೆಯುವಳೋ ಎಂದು ಯೋಚಿಸಿ ಕಂಗೆಟ್ಟ. ಬಹಳ ಹೊತ್ತು ರಸ್ತೆಯಲ್ಲಿ ಹೋಗಿಬರುವ ಹೆಂಗಸರನ್ನೆಲ್ಲಾ ಗಮನಿಸಿದ.
ಇನ್ನೇನು ಈ ಸಮಸ್ಯೆಗೆ ಪರಿಹಾರವೇ ಇಲ್ಲ ಎಂದು ದುಃಖತಪ್ತನಾಗಿರುವಾಗ ತಟ್ಟನೆ ಸ್ವಲ್ಪ ಮುಜುಗರವಾದರೂ ಅಷ್ಟೊಂದು ಅಪಾಯಕಾರಿಯಲ್ಲದ ಪರಿಹಾರವೊಂದು ಹೊಳೆದು ಉತ್ಸಾಹಿತನಾದ. ಮಿಂಚುತ್ತಿದ್ದ ಗಾಜಿನ ಷೋಕೇಸಿನಲ್ಲಿದ್ದ ಬೊಂಬೆಗೆ ಹಾಕಿದ್ದನ್ನು ತೋರಿಸಿ ಅದೇ ಬೇಕು, ಅದೇ ಸೈಜು ,ಅದೇ ಕೊಡಿ ಎಂದು ತನ್ನ ಮುಖವನ್ನು ನೋಡದೇ ತೊದಲಿದ ದತ್ತಾತ್ರೇಯನನ್ನು ವಿಚಿತ್ರಪ್ರಾಣಿಯಂತೆ ನೋಡಿದಳು ಸೇಲ್ಸ್ ಗರ್ಲ್ .ಸೇಲ್ಸ್ ಗರ್ಲ್ ಕೈಯಿಂದ ಅದನ್ನು ಹೆಚ್ಚೂಕಡಿಮೆ ಕಸಿದುಕೊಂಡವನು ಚಿಲ್ಲರೆಗೂ ಕಾಯದೆ ಹೊರಬಿದ್ದು ಎದುರಿನ ಹೋಟೇಲ್ ನಲ್ಲಿ ಒಂದೇ ಬಾರಿಗೆ ಎರಡು ಟೀ ಕುಡಿದು ಸುಧಾರಿಸಿಕೊಂಡ.ಸಾಯಂಕಾಲ ಪಾರ್ಕಿನಲ್ಲಿ ಪದ್ಮಿನಿಗೆ ಅದನ್ನು ಕೊಡುವ ದೃಶ್ಯವನ್ನು ನೆನೆದು ಉತ್ಸಾಹದಿಂದ ಕೈಲಿದ್ದ ಉಡುಗೊರೆಯನ್ನೊಮ್ಮೆ ಸವರಿದ.
ಸಂಜೆ ಅವರಿಬ್ಬರೂ ವಿವೇಕಾನಂದ ಪಾರ್ಕನಲ್ಲಿ ಎದಿರುಬದಿರಾಗಿ ಕುಳಿತಾಗ ಕತ್ತಲಾಗುತ್ತಾ ಬಂದಿತ್ತು.ದತ್ತಾತ್ರೇಯ ಹುಟ್ಟುಹಬ್ಬದ ಶುಭಾಷಯಗಳು ಎನ್ನುತ್ತಾ ಉಡುಗೊರೆಯ ಪೊಟ್ಟಣವನ್ನು ಪದ್ಮಿನಿಯ ಕೈಗಿತ್ತಾಗ ಅವಳು ಅಚ್ಚರಿಯಿಂದ `ನಾನೇ ಮರೆತುಬಿಟ್ಟಿದ್ದೆ .ಡಿಸೆಂಬರ್ ೧೪ ಅಲ್ವಾ ? ನಿಂಗೆ ಹೆಂಗೊತ್ತಾಯ್ತು ' ಅಂತ ವಿಚಾರಿಸುತ್ತಾ ಪೊಟ್ಟಣವನ್ನು ಬಿಚ್ಚತೊಡಗಿದಳು. ಅವನು ಕಾಗದ ಹರಿಯುವ ಪರಪರ ಸದ್ದಿನ ಜೊತೆಗೆ ಕಾಯುತ್ತಾ ಕುಳಿತ. ಪಿಂಕ್ ಬಣ್ಣದ ಬ್ರಾ ನೋಡುತ್ತಲೇ ಪದ್ಮಿನಿ ಹೌಹಾರಿದಳು.ಹೇಗೆ ಪ್ರತಿಕ್ರಿಯಿಸುವುದು ಎಂದು ತಿಳಿಯದೆ ವಿಚಲಿತಳಾದವಳು ತಕ್ಷಣ ಸಾವರಿಸಿಕೊಂಡು ತಲೆಯೆತ್ತಿದಳು. ಮುಖ ಕೋಪದಿಂದ ಕೆಂಪಾಗಿತ್ತು. ಕಣ್ಣುಗಳು ಅಗಲವಾಗಿ ಮೂಗು ಕಂಪಿಸುತ್ತಿತ್ತು.ಅವಳದೇ ಅಲ್ಲವೇನೋ ಎಂಬಂತಹ ವಿಚಿತ್ರ ದನಿಯಲ್ಲಿ ಮಾತಾಡತೊಡಗಿದಳು:`ನೀನು ನನ್ನ ಏನು ಅಂತ ತಿಳ್ಕಂಡಿದೀಯ? ಇಂಥದನ್ನ ತಂದು ಕೊಡೋಕೆ ನಿಂಗೆಷ್ಟು ಧೈರ್ಯ ಇರಬೇಕು? ನನ್ನೇನು ಥರ್ಡ್ ಕ್ಲಾಸ್ ಹುಡುಗಿ ಅಂತ ಅಂದ್ಕಂಡೆಯಾ? ಹೇಳು ನಿನ್ನ ಉದ್ದೇಶ ಏನಿದೆ ಹೇಳು ನೇರವಾಗಿ.ನನಗ್ಯಾರೂ ಹೇಳೋರು ಕೇಳೋರು ಇಲ್ಲ ಅಂದ್ಕಂಡಿದೀಯಾ? ನಿಂದು ಇಂಥಾ ಕಚಡಾ ಬುದ್ಧಿ ಅಂತ ನಾನು ಕನಸು ಮನಸಿನಲ್ಲೂ ಎಣಿಸಿರಲಿಲ್ಲ' ಎನ್ನುವಾಗ ಪದ್ಮಿನಿ ಮಿತಿಮೀರಿದ ಕೋಪದಿಂದ ತೊದಲುತ್ತಿದ್ದಳು.
ದತ್ತಾತ್ರೇಯ ಪೆಚ್ಚಾಗಿ ಏನೋ ಹೇಳಲು ಬಾಯಿ ತೆರೆದ.ಅಷ್ಟರಲ್ಲಿ `ನೀನೇನೂ ಹೇಳೋದು ಬೇಡ, ಒಂದು ನಿಮಿಷನೂ ಇಲ್ಲಿ ಕೂತುಕೋಬೇಡ ಎದ್ದೋಗು' ಎಂದು ಅವಳು ಚೀರಿದಳು.ಅವನಿಗೂ ಈಗ ಕೋಪ ಬಂದು `ಆಯ್ತು , ಇನ್ನೆಂದೂ ನಿನ್ನ ಮುಖ ಕೂಡ ನೋಡಲ್ಲ' ಎಂದು ಹೇಳಿ ಧಡಧಡನೇ ಹೊರಟುಹೋದ.ಅವನು ಹೊರಟು ಹೋದ ಎರಡು ನಿಮಿಷದ ನಂತರ ವಾಸ್ತವಕ್ಕೆ ಬಂದ ಪದ್ಮಿನಿ ಅವನು ಹೋದರೂ ನಾನೇಕೆ ಹೀಗೆ ಕತ್ತಲಲ್ಲಿ ಕೂತುಕೊಂಡಿರುವೆ ಎಂದು ಎದ್ದು ಹೊರಟವಳು ಅವನು ಕೊಟ್ಟ ಆ ಉಡುಗೊರೆಯನ್ನು ತೆಗೆದುಕೊಂಡುಹೋಗುವುದೋ ಬೇಡವೋ ಎಂಬ ಸಂದಿಗ್ಧದಲ್ಲಿ ಬಿದ್ದಳು.
ಇದಾದ ಮರುದಿನ ದತ್ತಾತ್ರೇಯ, ಪದ್ಮಿನಿ ಎದುರಿಗೆ ಬಂದಾಗಲೂ ಮುಖ ತಿರುಗಿಸಿಕೊಂಡು ಹೋದ. ಬಹು ಅಗತ್ಯವಾದ ಸಮಸ್ಯೆ ಬಂದರೂ ಕಾದಿದ್ದು ಕುಮಾರನ ಬಳಿಯೇ ಪರಿಹರಿಸಿಕೊಂಡಳು ಪದ್ಮಿನಿ .`ನನ್ನದು ಕಚಡಾ ಬುದ್ದಿ ಅಂತಾಳೆ, ಹೌದು ಇಷ್ಟು ದಿನವಾದರೂ ಒಂದು ಮುತ್ತೂ ಕೇಳಲಿಲ್ಲವಲ್ಲ ನನ್ನದು ಕಚಡಾ ಬುದ್ದಿಯೇ, ಹೋಗೆ ಹೋಗೆ, ನಿನ್ನಂಥಾ ಹುಡುಗಿಯರು ನೂರು ಜನ' ಎಂದುಕೊಳ್ಳುತ್ತಾ ದತ್ತಾತ್ರೇಯ ಅವಳ ಮೇಲಿನ ಕೋಪವನ್ನು ಕಂಪ್ಯೂಟರ್ ಕೀಗಳ ಮೇಲೆ ತೋರಿಸತೊಡಗಿದ.ಎಲ್ಲ ಬಿಟ್ಟು ಅದೇ ಕೊಡಬೇಕಾದರೆ ಕೆಟ್ಟ ಒಳ ಉದ್ದೇಶವಿರಲೇಬೇಕು ಸದ್ಯ ಗಂಡಸರ ಬುದ್ಧೀನ ಆರಂಭದಲ್ಲೇ ತೋರಿಸಿದ ಎಂದುಕೊಂಡ ಪದ್ಮಿನಿ ಅವನತ್ತ ತಪ್ಪಿಯೂ ತಿರುಗಿ ನೋಡದಂತೆ ಅಭ್ಯಾಸ ನಡೆಸಿದಳು. ಅವಳು ತನ್ನ ಹೊಟ್ಟೆ ಉರಿಸಲೆಂದೇ ಕುಮಾರನ ಹತ್ತಿರ ನಗುನಗುತ್ತಾ ಮಾತಾಡುತ್ತಿರುವಳು ಎಂದು ದತ್ತಾತ್ರೇಯನಿಗೆ ಅನಿಸತೊಡಗಿತು. ಈಗಾಗಲೇ ಕಂಪ್ಯೂಟರ್ ಸಹಾಯದಿಂದಲೇ ಸ್ಪೆಲ್ ಚೆಕ್ ಮಾಡಲು ಕಲಿತಿದ್ದ ಪದ್ಮಿನಿ ಬೇಕೆಂತಲೇ ಅವನಿಗೆ ಕಾಣುವಂತೆ ಎರಡೆರಡು ಬಾರಿ ಸ್ಪೆಲ್ ಚೆಕ್ ಮಾಡಿದಳು. ಇವನಿಗೆ ಕೋಪ ಹೆಚ್ಚಿ ಕಂಪ್ಯೂಟರ್ ಕೀಗಳನ್ನು ಮತ್ತಷ್ಟು ಒರಟಾಗಿ ಬಾರಿಸುತ್ತಿದ್ದ.ಹೀಗೆ ಯಾರದೋ ವೈಯುಕ್ತಿಕ ಜಗಳದಲ್ಲಿ ತನ್ನ ಕಂಪ್ಯೂಟರ್ ಹಾಳಾಗುವುದನ್ನು ನೋಡಿ ಹೌಹಾರಲು ಕುಮಾರನು ಅಲ್ಲಿರದೆ ಒಂದು ಫರ್ಲಾಂಗ್ ದೂರದ ಸಲೀಮ್ ಟೀ ಶಾಪಿನಲ್ಲಿ ಮೂರನೇ ಸಿಗರೇಟು ಎಳೆಯುತ್ತಿದ್ದನು.
ಆದರೆ ದತ್ತಾತ್ರೇಯನಿಗೆ ಈ ಆವೇಶವೆಲ್ಲಾ ಮೂರು ದಿನಕ್ಕೆ ಇಳಿದು ಪದ್ಮಿನಿಯ ಬಗ್ಗೆ ಪ್ರಸನ್ನತೆ ಮೂಡತೊಡಗಿತು. ಆದರೂ ಸುಮ್ಮನೆ ಒಂದೇ ಉಸಿರಿನಲ್ಲಿ ಪ್ರೀತಿಸುವುದರಲ್ಲಿ ಏನು ಮಜಾ ಇದೆ, ಹೀಗೆ ಆಗಾಗ ಜಗಳ ಮುನಿಸುಗಳಿದ್ದರೇನೆ ಚೆನ್ನ ಎಂದೆನಿಸಿತು. ಮತ್ತೆ ಎರಡು ದಿನ ಕಳೆದ ಬಳಿಕ ಅವನಿಗೆ ದುಃಖವಾಗತೊಡಗಿತು. ಈ ಜಗಳ ಆಗದೇ ಇದ್ದಿದ್ದರೆ ದಿನಾ ಪಾರ್ಕಿನಲ್ಲಿ ಕುಳಿತು ಮಾತಾಡುತ್ತಿದ್ದೆವು ಎಂದು ನೆನೆಸಿಕೊಂಡಾಗ ದುಃಖ ಮತ್ತೂ ಹೆಚ್ಚಾಯಿತು. ಇದೆಲ್ಲಾ ಅದದ್ದು ತನ್ನಿಂದಲೇ ಎಲ್ಲಾ ಬಿಟ್ಟು ಅಂಥ ಪೋಲಿ ಆಲೋಚನೆ ಯಾಕೆ ಬರಬೇಕಿತ್ತು ನಂಗೆ ಅಂತ ತನ್ನನ್ನೇ ಹಳಿದುಕೊಂಡ. ಯಾವತ್ತೋ ಒಂದು ದಿನ ಪದ್ಮಿನಿ ಅವನ ಕೈ ಹಿಡಿದುಕೊಂಡು ಜಗತ್ತಿನಲ್ಲಿ ಪ್ರೇಮಕ್ಕಿಂತ ನಿರ್ಮಲವಾದದ್ದು ಯಾವುದೂ ಇಲ್ಲ ಅಲ್ಲವೇ ಅಂತ ಕೇಳಿದ್ದು ನೆನಪಾಗಿ ಛೆ ಅಂಥಾ ಮುಗ್ಧ ಹುಡುಗಿಗೆ ಇಂಥಾ ಉಡುಗೊರೆ ಕೊಟ್ಟರೆ ನನ್ನ ಒಳ ಉದ್ದೇಶದ ಮೇಲೆ ಅನುಮಾನ ಬರುವುದು ಸಹಜವೇ ಆಗಿದೆ ಎಂದುಕೊಂಡು ಆಗಷ್ಟೇ ್ಞ‌ಾನೋದಯವಾದವನಂತೆ ಯಾರಿಗೂ ಕಾಣದಂತೆ ಅತ್ತ. ತಪ್ಪು ಒಪ್ಪುಗಳಲ್ಲಿ ಪ್ರೀತಿ ಕಳೆದುಹೋಗಲು ಬಿಡಬಾರದು, ಕಾಲು ಹಿಡಿದಾದರೂ ಅವಳ ಕ್ಷಮೆ ಕೇಳಿ ಎಲ್ಲಾ ಮೊದಲಿನಂತಾಗುವಂತೆ ಮಾಡಬೇಕು ಎಂದು ನಿರ್ಧರಿಸಿದ ಮೇಲೇ ಅವನಿಗೆ ನಿದ್ದೆ ಬಂದದ್ದು.
ಮರುದಿನ ಸಾಯಂಕಾಲ ಅವನು ಕಾಲುಗಂಟೆ ಮೊದಲೇ ಹೋಗಿ ಕಂಪ್ಯೂಟರ್ ಸೆಂಟರಿನಲ್ಲಿ ಪದ್ಮಿನಿಗಾಗಿ ಕಾಯತೊಡಗಿದ.ಅವಳು ಯಾವುದೋ ಹೊಸ ಚೂಡಿದಾರದಲ್ಲಿ ಸುಂದರವಾಗಿ ಸಿಂಗರಿಸಿಕೊಂಡಿದ್ದಳು. ಪಾಠ ಹೇಳಿಕೊಡುತ್ತಿದ್ದ ಕುಮಾರನೊಡನೆ ಉತ್ಸಾಹದಿಂದ ಮಾತಾಡುತ್ತಿದ್ದಳು. ಇವನಿಗೆ ತನ್ನಲ್ಲಿ ಉತ್ಸಾಹವೇ ಉಳಿದಿಲ್ಲ ಅನಿಸಿತು. ಶೇವ್ ಮಾಡದ ಕೆನ್ನೆಯನ್ನೇ ಸವರಿಕೊಳ್ಳುತ್ತಾ ಕುಮಾರ್ ಹೊರಗೆ ಹೋಗುವುದನ್ನೇ ಕಾಯುತ್ತಾ ನೆಪಕ್ಕೆ ಕಂಪ್ಯೂಟರಿನ ಮುಂದೆ ಕುಳಿತಿದ್ದ. ಹತ್ತು ನಿಮಿಷದ ಬಳಿಕ ಕುಮಾರ್ ಹೊರಟು ಹೋದ ಮೇಲೆ ಪದ್ಮಿನಿ ಗಂಭೀರವಾಗಿ ಅಭ್ಯಾಸ ಮಾಡತೊಡಗಿದಳು. ಈಗ ದತ್ತಾತ್ರೇಯನಿಗೆ ಹೇಗೆ ಶುರು ಮಾಡುವುದು ಅಂತ ಯೋಚನೆಯಾಯಿತು.
ಅವಳೆಡೆಗೆ ನೋಡಿದ. ಬಹಳ ಗಂಭೀರವಾಗಿದ್ದ ಪದ್ಮಿನಿಯ ಮುಖದಲ್ಲಿಅವನಿಗೆ ಹಿಂದೆಂದೂ ಕಾಣದ ಕಾಠಿಣ್ಯ ಕಂಡುಬಂತು. ಕ್ಷಮಿಸುವುದಿಲ್ಲ ಎಂದುಬಿಡಬಹುದು ಅಂತ ಭಯಗೊಂಡ. ಮರುಕ್ಷಣವೇ ನನ್ನ ಪದ್ಮಿನಿಯನ್ನು ಮಾತಾಡಿಸಲು ನನಗೆಂಥಾ ಭಯ ಎಂದು ಗಂಟಲು ಸರಿಮಾಡಿಕೊಳ್ಳಲು ಯತ್ನಿಸಿದರೆ ಸದ್ದೇ ಬರಲಿಲ್ಲ.ಯಾಕೋ ಎದೆ ಬಡಿತ ಹೆಚ್ಚುತ್ತಿದೆ ಅನಿಸಿತು.ಇದೆಲ್ಲಾ ವಿಚಿತ್ರವೆನಿಸಿ ಹೇಳಿಯೇಬಿಡಬೇಕು ಎಂದುಕೊಂಡವನಿಗೆ ನಾನು ಹೇಳುತ್ತಿರುವಾಗ ಯಾರಾದರೂ ಬಂದುಬಿಟ್ಟರೆ ಎಂದು ಹೊರಗೆ ಹೋಗಿ ನೋಡಿದ.ಕಾರಿಡಾರು ನಿರ್ಜನವಾಗಿತ್ತು. ಪದ್ಮಿನಿ ಪಟಪಟನೆ ಟೈಪು ಮಾಡುವುದರಲ್ಲಿ ಮೈಮರೆತಿದ್ದಳು.ಅವನಿಗೆ ಯಾಕೋ ಪದ್ಮಿನಿ ತನ್ನನ್ನು ಪೂರ್ಣವಾಗಿ ಮರೆತುಬಿಟ್ಟಿರಬಹುದು ಅನಿಸತೊಡಗಿತು. ನಾಳೆ ಹೇಳಿದರಾಯಿತು ಎಂದುಕೊಂಡು ಅಲ್ಲಿ ಉಸಿರುಗಟ್ಟುತ್ತಿದೆಯೆಂಬಂತೆ ಇನ್ನೂ ಸಮಯ ಉಳಿದಿದ್ದರೂ ಎದ್ದು ಮನೆಗೆ ಹೋಗಿಬಿಟ್ಟ.
ರಾತ್ರಿ ಹಾಸಿಗೆಯ ಮೇಲೆ ಉರುಳಿಕೊಂಡು ಯೋಚಿಸುತ್ತಿರುವಾಗ ಹೀಗೇಕಾಯಿತು ನಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಮಾತಾಡಿಸಲು ತನಗ್ಯಾಕೆ ಭಯವಾಯಿತು ಎಂಬುದು ಒಗಟಾಗಿಯೇ ಉಳಿಯಿತು. ಪದ್ಮಿನಿ ಒಮ್ಮೆ ಭಾವುಕಳಾಗಿ ನನಗ್ಯಾಕೋ ಹೋದ ಜನ್ಮದಲ್ಲೂ ನಾವು ಪ್ರೇಮಿಗಳಾಗಿದ್ವಿ ಅನಿಸುತ್ತೆ ಅಂದದ್ದು ನೆನಪಾಗಿ ಅಳು ಬಂದುಬಿಟ್ಟಿತು. ಇಲ್ಲ ಪದ್ಮಿನಿ ನನ್ನನ್ನ ತಿರಸ್ಕರಿಸಲಾರಳು, ನಾಳೆ ಎಲ್ಲ ಹೇಳಿ ಅವಳ ತೊಡೆಯ ಮೇಲೆ ತಲೆಯಿಟ್ಟು ಅತ್ತುಬಿಡಬೇಕು ಎಂದುಕೊಳ್ಳುವನು.
ಇದಾಗಿ ಈಗ ಏಳು ದಿನ ಕಳೆದಿವೆ. ಪ್ರತಿದಿನವೂ ದತ್ತಾತ್ರೇಯ ನಾಳೆ ಪದ್ಮಿನಿಯ ಕ್ಷಮಾಪಣೆ ಕೇಳುತ್ತೇನೆ ಅಂತ ನಿರ್ಧರಿಸುತ್ತಾನೆ. ಅವಳು ಎದುರಿಗೆ ಬರುವ ತನಕವೂ ಗಟ್ಟಿಯಾಗಿರುವ ಅವನ ನಿರ್ಧಾರ ಅವಳ ನಿರ್ಲಿಪ್ತ ಮುಖದೆದುರು ಮಂಜುಗಡ್ಡೆಯಂತೆ ಕರಗುತ್ತದೆ.ಯಾವುದೋ ಅವ್ಯಕ್ತ ಭಯ, ಅನುಮಾನ . ಅವಳ ಮುಖದಲ್ಲಿರುವ ಕಾಠಿಣ್ಯ ದಿನೇದಿನೇ ಹಚ್ಚುತ್ತಿರುವಂತೆ ಭಾಸವಾಗುತ್ತದೆ.ಅವಳ ಪಕ್ಕದಲ್ಲಿ ಕಂಪ್ಯೂಟರಿನ ಮುಂದೆ ಕುಳಿತಾಗಲೂ ಮಾತಾಡಿಸಬೇಕು ಎಂಬ ಭಾವನೆಯ ಜೊತೆಗೇ ಕಾಲುಗಳು ನಡುಗುವಂತಾಗುತ್ತವೆ. ಎದುರಿಗಿಲ್ಲದಾಗ ಜನ್ಮ ಜನ್ಮಾಂತರದ ಗೆಳತಿಯಂತೆ ಕಾಣುವ ಪದ್ಮಿನಿ ಕಂಪ್ಯೂಟರಿನ ಮುಂದೆ ಕೂತು ಟೈಪ್ ಮಾಡುವಾಗ ಅಪರಿಚಿತೆಯಂತೆ ತೋರುತ್ತಿದ್ದಳು.ಒಮ್ಮೊಮ್ಮೆ ಅವನಿಗೆ ತಾವಿಬ್ಬರೂ ಮಾತಾಡುವುದನ್ನು ಬಿಟ್ಟು ತಿಂಗಳುಗಳೇ ಕಳೆದಿವೆ ಎನಿಸುತ್ತದೆ.ಬಹಳಷ್ಟು ದಿನ ಅವಳಿಗಿಂತ ಮುಂಚೆ ಎದ್ದು ಆ ಉಸಿರುಗಟ್ಟಿಸುವ ರೂಮಿನಿಂದ ಹೊರಗೆ ಬಂದುಬಿಡುತ್ತಾನೆ- ನಾಳೆ ಹೇಳಿದರಾಯಿತು ಎಂಬ ಭಾವದೊಂದಿಗೆ.ರಾತ್ರಿ ತಾರಸಿಯ ಮೇಲೆ ಕೂತು ಯೋಚಿಸುವಾಗ ಮಾತ್ರ ಪದ್ಮಿನಿ ವಾತ್ಸಲ್ಯಮಯಿಯಂತೆ ಬಂದು ಅವನನ್ನು ಸಮಾಧಾನಗೊಳಿಸಿ ತಲೆಗೂದಲು ಸವರುತ್ತಾ ನೀನಲ್ಲದೆ ನನಗಿನ್ನಾರಿದ್ದಾರೆ ಹೇಳು ಅಂದಂತಾಗಿ ಕಣ್ಣು ತುಂಬಾ ನೀರು ತುಂಬಿಕೊಳ್ಳುತ್ತಾನೆ.ಆಗೆಲ್ಲಾ ನಾಳೆ ಖಂಡಿತವಾಗಿಯೂ ಹೇಳಬಲ್ಲೆ ಅನಿಸಿ ಉತ್ಸಾಹಗೊಳ್ಳುತ್ತಾ ಕಣ್ಣೊರೆಸಿಕೊಳ್ಳುವನು.ಬೆಳಿಗ್ಗೆ ಮತ್ತದೇ ಕಥೆ. ಒಮ್ಮೊಮ್ಮೆ ಮಾತಾಡಿಸಲೂ ಆಗದೆ ಎದ್ದು ಬರಲೂ ಮನಸ್ಸೊಪ್ಪದೆ ಕಂಪ್ಯೂಟರ್ ರೂಮಿನಲ್ಲಿ ಹಿಂಸೆಪಡುತ್ತಿರುವಾಗ ಕುಮಾರ್ ಬಂದುಬಿಟ್ಟರೆ ನಿರಾಳವೆನಿಸುತ್ತಿತ್ತು ದತ್ತಾತ್ರೇಯನಿಗೆ.
ಇಂದೂ ಕೂಡ ಪದ್ಮಿನಿಯನ್ನು ಕ್ಷಮಿಸೆಂದು ಕೇಳುವ ಭಾವಶಕ್ತಿ ತನ್ನೊಳಗೆ ಒಡಮೂಡುತ್ತಿಲ್ಲದ್ದರಿಂದ ವ್ಯಾಕುಲಗೊಂಡು ನಿಯಾನ್ ದೀಪದಲ್ಲಿ ಬೆಳಗುತ್ತಿದ್ದ ವಿವಿಧ ಅಂಗಡಿಗಳ ಹೆಸರುಗಳನ್ನು ಗಮನಿಸುತ್ತಾ ದತ್ತಾತ್ರೇಯ ವರ್ಚುಯಲ್ ಸಿಸ್ಟಮ್ಸಿನ ಕಾರಿಡಾರಿನಲ್ಲಿ ನಿಂತಿರುವಾಗಲೇ ಇವನ ಕಷ್ಟವನ್ನು ನೋಡಲಾರೆನೆಂಬಂತೆ ಕರೆಂಟು ಹೋಗಿ ಕತ್ತಲೆ ಆವರಿಸಿಕೊಂಡಿತು. ಮನೆಗೆ ಹೋಗಲು ನಿರ್ಧರಿಸಿದ ದತ್ತಾತ್ರೇಯ ರೂಮಿನೊಳಗಿದ್ದ ತನ್ನ ನೋಟ್ ಪುಸ್ತಕವನ್ನು ತರಲೆಂದು ಕಂಪ್ಯೂಟರ್ ರೂಮಿನೆಡೆಗೆ ನಡೆದ.ಬಾಗಿಲ ಬಳಿಯಲ್ಲಿ ನಿಂತವನಿಗೆ ಪದ್ಮಿನಿ ಕ್ಯಾಂಡಲ್‌ಗಾಗಿ ಯಾವುದೋ ಡ್ರಾದಲ್ಲಿ ಹುಡುಕುತ್ತಿರುವುದು ಮಸುಕಾಗಿ ಕಂಡಿತು. ಯಾವುದೋ ಅಂತಃಪ್ರೇರಣೆಯಿಂದ ದತ್ತಾತ್ರೇಯ `ಕ್ಯಾಂಡಲ್ ಆ ಕಪಾಟಿನಲ್ಲಿದೆ' ಎಂದುಬಿಟ್ಟ. ಮತ್ತು ತಾನು ಮಾತಾಡಿದ್ದು ಪದ್ಮಿನಿಯೊಂದಿಗೆ ಎಂದು ತಾನೇ ಅಚ್ಚರಿಗೊಂಡ.
ಪದ್ಮಿನಿ ಮೆಲುದನಿಯಲ್ಲಿ `ಹೌದಾ? ನಾನು ಈ ಡ್ರಾದಲ್ಲಿರಬೋದು ಅಂದುಕೊಂಡೆ' ಅಂದಳು.ಒಬ್ಬರ ಮುಖ ಮತ್ತೊಬ್ಬರಿಗೆ ಕಾಣುವಂತಿರಲಿಲ್ಲ. ಅವಳು `ಮ್ಯಾಚ್ ಬಾಕ್ಸ್ ಎಲ್ಲಿದೆ ಗೊತ್ತಾ 'ಎಂದಳು. ಒಂದು ಕ್ಷಣ ಮೌನವಾಗಿದ್ದ ದತ್ತಾತ್ರೇಯ ಮೆಲ್ಲಗೆ `ಪದ್ಮಿನಿ' ಎಂದ. ಅವಳು ಏನು ಎಂದು ಕೇಳದೆ ನಿಧಾನವಾಗಿ ಅವನೆಡೆಗೆ ನಡೆದುಬಂದಳು. `ಪದ್ಮಿನಿ ನನ್ನ ಕ್ಷಮಿಸಿಬಿಡು' ಎನ್ನುವಾಗ ಅವನ ಧ್ವನಿ ಕಂಪಿಸುತ್ತಿತ್ತು. ಅವಳು ಇದ್ದಕ್ಕಿದ್ದಂತೆ ಬಿಕ್ಕಿಬಿಕ್ಕಿ ಅಳತೊಡಗಿದಳು. ಇವನು `ಪದ್ಮಿನಿ...ಪದ್ಮಿನಿ... ಏ ಪದ್ಮಿನಿ' ಅಂತ ಅವಳ ಮುಖವನ್ನು ತನ್ನ ಬೊಗಸೆಯಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಿ ಕತ್ತಲಿನಿಂದಾಗಿ ಮೂಗು, ತುಟಿಗಳನ್ನು ನೇವರಿಸಿದ. ಅವಳ ಕೆನ್ನೆಗಳ ಮೇಲೆ ಹರಿಯುತ್ತಿದ್ದ ನೀರನ್ನು ಅವನು ಬೆರಳಿನಿಂದ ಒರೆಸುವಾಗ ಅವಳಿಗೆ ತಡೆಯಲಾಗದೆ ಅವನ ಎದೆಗೆ ತಲೆಯೊತ್ತಿ ಮತ್ಷ್ಟು ಜೋರಾಗಿ ಅಳತೊಡಗಿದಳು,ಯಾರಾದರೂ ಬಂದಾರು ಎಂಬ ಪರಿವೆಯಿಲ್ಲದೆ.ಅವನು ಅವಳನ್ನು ಸಮಾಧಾನಪಡಿಸುವಂತೆ ಅವಳ ತಲೆಗೂದಲಲ್ಲಿ ಒಂದು ಮುತ್ತಿಟ್ಟ.ಅವಳು ಅವನ ಷರಟಿನ ಮೇಲಿನಿಂದ ಎದೆಗೊಂದು ಮುತ್ತಿಟ್ಟಳು.ಸ್ವಲ್ಪ ಹೊತ್ತಿನ ನಿಶ್ಯಬ್ದದ ನಂತರ ಅವಳು `ನಾನು ಅವತ್ತು ಅಷ್ಟೊಂದು ಕೋಪಿಸಿಕೊಂಡು ಏನೇನೋ ಅಂದುಬಿಟ್ಟೆ' ಎಂದಾಗ ಅವನು ` ಇಲ್ಲ, ಅಂಥಾ ಉಡುಗೊರೆ ಕೊಟ್ಟದ್ದು ನಂದೇ ತಪ್ಪು ' ಎಂದ.
ಈಗ ಇಬ್ಬರೂ ಸಾಧಾರಣವಾಗಿ ಮಾತಾಡುವ ಹಂತ ತಲುಪಿದ್ದರು.ಅವನು ಕೇಳಿದ :`ಅದನ್ನು ಅಲ್ಲೇ ಪಾರ್ಕಿನಲ್ಲೇ ಎಸೆದು ಬಿಟ್ಟೆಯಾ?' ಅವಳು `ಇಲ್ಲ' ಎಂದಳು. ಅವನಿಗೆ ಅದನ್ನು ಕೊಂಡುಕೊಳ್ಳುವ ದಿನ ತಾನು ಪಟ್ಟ ಪಾಡೆಲ್ಲಾ ನೆನಪಾಗಿ ಥಟ್ಟನೇ ಏನೋ ಹೊಳೆದು `ಸೈಜು ಸರಿಯಾಗುತ್ತಾ ' ಅಂದುಬಿಟ್ಟ. `ಸ್ವಲ್ಪ ಟೈಟು' ಎಂದ ಪದ್ಮಿನಿ ತಕ್ಷಣ ನಾಲಿಗೆ ಕಚ್ಚಿಕೊಂಡಳು. ಅವನಿಗೆ ನಗು ಬಂದು ನಾಚಿ ಕೆಂಪಗಾಗಿರಬಹುದಾದ ಅವಳ ಮುಖವನ್ನು ಕಲ್ಪಿಸಿಕೊಳ್ಳುತ್ತಾ ಜೋರಾಗಿ ನಕ್ಕುಬಿಟ್ಟ. ಪದ್ಮಿನಿಯೂ ನಕ್ಕಳು.
ಕತ್ತಲೆಯಿನ್ನೂ ಮುಂದುವರೆದಿತ್ತು.

3 comments:

dinesh said...

ಪ್ರೀಯ ಅಪಾರ... ಈ ಕಥೆ ಓದಿದಾಕ್ಷಣ .... ’ಭಾವನಾ’ ನೆನಪಾದ್ಲು. ತುಂಬಾ ದು:ಖ ಆಯ್ತು ಯಾಕೆ ಗೊತ್ತಾ? ಮೊದಲ ಸಂಚಿಕೆಯಿಂದ ಒಂದನ್ನೂ ಬಿಡದೇ ನಾನು ಪೇರಿಸಿಟ್ಟಿದ್ದೆ. ನಾನು ಓದೋದಕ್ಕೆ ಧಾರವಾಡಕ್ಕೆ ಹೋದಾಗ ಮನೆಲಿ ಇಟ್ಟ ’ಭಾವನೆ’ಗೆಲ್ಲ.. ಒರಲೆ ಹತ್ತಿತ್ತು.. ನಾನು ಊರಿಗೆ ಹೋಗುವುದ್ರೊಳಗಾಗಿ ಅವನ್ನೆಲ್ಲ ನನ್ನ ಅಣ್ಣ ಒಂದು ಗೋಣಿ ಚೀಲದಲ್ಲಿ ತುಂಬಿಟ್ಟಿದ್ದ. ತುಂಬಾ ಬೇಸರವಾಗಿತ್ತು ಆವತ್ತು. ಒರಲೆ ತಿಂದ ಭಾವನಾ ಇವತ್ತಿಗೂ ನನ್ನ ಪುಸ್ತಕಗಳ ಸಂಗ್ರಹದಲ್ಲಿದೆ.ಒರಲೆ ತಿಂದ ಅವುಗಳ ಸುಂದರ ಮುಖಪುಟಗಳ ಕೊಲಾಜ್ ಇವತ್ತು ನಮ್ಮ ಮನೆಯ ಗೋಡೆಯಲ್ಲಿ ತೂಗಾಡುತ್ತಿದೆ. ತುಂಬಾ ಸುಂದರ ಕಥೆ.

Anonymous said...

Hi Apara,
Now your blog is loking superb! Excellent image of Mysore Palace...Thank you

B Jayakishore

Anonymous said...

sogasaaagide kathe. so poems maatra alla u write stories too. good good. iam impressed. Any other latent talent?
Just browsed the entire blog.
:-)
MS