Tuesday, April 15, 2008

ಮಗುವೇ ತಾಯಿಯ ಹಾಡು


ಮೊದಲ ದಿವಸ ಶಾಲೆಗೆ ಹೋಗಲು ಪುಟ್ಟ
ಬಹಳ ಕಷ್ಟ ಪಟ್ಟ ಬಹಳ ಕಷ್ಟ ಕೊಟ್ಟ
ಎಷ್ಟು ಪೌಡರ್ ಹಾಕಿ ಒರೆಸಿದ್ರೂ ಸರೆ
ಕೆನ್ನೆ ಮೇಲುಳಿದೇ ಇತ್ತು ಕಂಬನಿಯ ಗೆರೆ

ಮನೆಯಲ್ಲಿ ಹಿಡಿಯಲಾಗದಷ್ಟು ತಂಟೆಕೋರ
ಯೂನಿಫಾರ್ಮಿನಲ್ಲಿ ಮಾತ್ರ ಸಂಭಾವಿತ ಪೋರ
ಮಿಸ್‌ ಮುದ್ದಿನಿಂದ ಕರೆದೊಯ್ಯುವಾಗಲೂ ಕೋಪ
ಅಮ್ಮನನ್ನೇ ತಿರುತಿರುಗಿ ನೋಡುತ್ತಿದ್ದ ಪಾಪ

ಇಷ್ಟು ಹೊತ್ತಿಗೆ ಅಳು ನಿಲ್ಲಿಸಿರಬಹುದು
ಪಕ್ಕದ ಮಗು ಜತೆ ದೋಸ್ತಿ ಬೆಳೆದಿರಬಹುದು
ಹೊಸಲೋಕದ ಬೆರಗಲಿ ಮನೆ ಮರೆತಿರಬಹುದು
ವಾಟರ್ ಬಾಟಲಿಯಿಂದ ನೀರು ಕುಡಿದಿರಬಹುದು

ಈ ಪುಕ್ಕಲ ಹುಡುಗ ದೊಡ್ಡಕ್ಕೆ ಬೆಳೆದು
ಹಾಸ್ಟೆಲು ಸೇರಿ ಅಮ್ಮನಿಲ್ಲದೆ ಮಲಗುವನೆ
ದಾಡಿ ಮಾಡಿಕೊಂಡು ಆಫೀಸಿಗೆಲ್ಲಾ ಹೋಗಿ
ಇಂಗ್ಲಿಷಿನಲ್ಲಿ ಮಾತಾಡುತ್ತಾ ಕಾರೋಡಿಸುವನೆ

ದೊಡ್ಡಮ್ಮನ ಮಗನಂತೆ ಕುಡಿದು ಬಂದು
'ನನ್ನ ದುಡ್ಡು ನಾನು ಕುಡಿವೆ ನೀನ್ಯಾರು ಕೇಳಲು'
ಅಂತ ಅಮ್ಮನ ಮೇಲೆ ಉರಿದು ಬೀಳುವನೆ?
ಫೇಲಾಗಿ ಪೋಲಿಯಾಗಿ ಅಪ್ಪನ ಮೇಲೆ ರೇಗುವನೆ?

ಅಯ್ಯೋ ಶಾಲೆ ಬಿಡುವ ಹೊತ್ತಾಯಿತಲ್ಲವೆ
ಹೊರಬರುವ ಹೊತ್ತಿಗೆ ಅಮ್ಮನಿರಲೇಬೇಕು ಗೇಟಿನಲ್ಲಿ
ಆ ಧೈರ್ಯದಿಂದೇ ಒಳಗೆ ಕುಳಿತ ಮಗುವಲ್ಲವೆ
ಹಲ್ವ ಮಾಡಿದ್ದೇನೆಂದು ಹೇಳುವೆ ಮನೆಯ ದಾರಿಯಲ್ಲಿ

ಒಂದೇ ರೀತಿ ಕಾಣುವ ಬೊಂಬೆ ಸಮುದ್ರದೊಳಗಿಂದ
ನನ್ನ ಕಂಡೊಡನೆಯೇ ಹೇಗೆ ಅಳತೊಡಗಿತಲ್ಲ
ಈಗ ನನ್ನ ಸೆರಗಲ್ಲಿ ಅಡಗಿರುವ ಕೂಸಿಗಿಂತ ಬೇರೆ ಬೇಕೆ
ಬೆಳೆದು ಆಗುವ ದೊಡ್ಡ ಮನುಷ್ಯನ ಮಾತು ಈಗ ಯಾಕೆ

ದೇವರೆ, ಕಾಲ ಮೆಲ್ಲನೆ ಸಾಗಲಿ

3 comments:

Anonymous said...

ಅಪಾರ,
ಅಮ್ಮನಾಗೇ ಬರೆದಹಾಗಿದೆ ಕವಿತೆ.
ನನ್ನ ಮಗನ ನೆನಪಾಯ್ತು. ವಿಪರೀತ.
ಹೀಗೇ ಬರೆಯುತ್ತಿರಿ.
ಥ್ಯಾಂಕ್ಸ್.
- ಚೇತನಾ

Anonymous said...

ಅಪಾರ,
ಅರೆ, ಇಷ್ಟೊಂದು ಆರ್ದ್ರತೆ ನಿಮ್ಮಲ್ಲಿ ಅದು ಹೇಗೆ ಬಂದಿತು ಮಾರಾಯರೆ? ಹೀಗೆ ಬರೆಯುವದು ಸುಲಭವೇನಲ್ಲ. ನಾನು ಸೃಷ್ಟಿಯನ್ನು ನರ್ಸರಿಗೆ ಸೇರಿಸಿದಾಗ ಪೂರ್ತಿ ಒಂದು ವರುಷ ಅತ್ತಿತ್ತು ಅದು. ಪ್ರತಿದಿನವೂ ನಾನೂ ಅವಳ ಜತೆ ಕಣ್ಣೀರು ಹಾಕಿದೇನೆ. ಅವ್ಳ ಶಾಲೆ ಶುರುವಾದಾಗಿಂದ ಬಿಡುವವರೆಗು ಸುಮಾರು ಎರಡು ತಿಂಗಳು ಶಾಲೆಯ ಕಾಂಪೌಂಡಿನ ಹೊರಗೇ ಕೂತು ಕಾದಿದೇನೆ. ಅವಳನ್ನ ಬಿಟ್ಟು ಇರಬೇಕಾಗಿ ಬಂದಾಗ.. ಅಬ್ಬ!!
ಅಪರೂಪಕ್ಕೊಮ್ಮೆ ಮದ್ಯಸಾರ ಬಿಟ್ಟು ದ್ರವಿಸುವ ಕವಿತೆ ಬರೆದಿದೀರಿ. ಖುಶಿಯಾಯಿತು, ನಿಮ್ಮ ಈ ಮುಖ ನೋಡಿ. ಪುಸ್ತಕ ಬಿಡುಗಡೆಗೆ ಬರಬೇಕೆಂದಿದ್ದೆ. ಭಾನುವಾರಗಳು ಕೊಂಚ ತಾಪತ್ರಯ ಕಣ್ರಿ. ಆದರೆ ನೀವು ಸಿಕ್ಕಿದಾಗ ಪುಸ್ತಕ ಕಿತ್ತುಕೊಳ್ಳುತ್ತೇನೆ!!

-ಟೀನಾ

PK said...

kavithe chennagi moodi bandide. vichaara dhaare sahaja haagu naija. keep writing.