ಬಿ ಫಾರಂ ಇನ್ನೂ ಕೈಗೆ ಬರದಿದ್ದರೂ ಈಗಾಗಲೇ ಅನೇಕರು ಚಿತ್ರವಿಚಿತ್ರ ವಿಧಾನಗಳಿಂದ ಜನರನ್ನು ಆಕರ್ಷಿಸಲು ಶುರುಮಾಡಿದ್ದಾರೆ. ಕ್ಷೇತ್ರದ ಜನರ ‘ಸಂತೋಷ’ಕ್ಕಾಗಿ ಚುನಾವಣೆಗೆ ಸಜ್ಜಾಗುತ್ತಿರುವ ಮಹನೀಯರೊಬ್ಬರು ಬರೋಬ್ಬರಿ ಹನ್ನೆರಡು ಬುಲ್ಡೋಜರ್ಗಳನ್ನು ತಂದು ನಿಲ್ಲಿಸಿಕೊಂಡಿದ್ದಾರಂತೆ. ಜನ ಬಂದು ನಮ್ಮ ಕಡೆಗೆ ರಸ್ತೆ ಸರಿ ಇಲ್ಲ ಎಂದರೆ ಸಾಕು, ರಸ್ತೆ ಮಾಡಿಕೊಡಲು ಅವರು ತಯಾರಂತೆ. ‘ರೋಡ್’ ಟು ಸಕ್ಸಸ್ ಎಂಬುದನ್ನು ಅಕ್ಷರಶ: ನಂಬಿದಂತಿರುವ ಇವರನ್ನು ದೇವರು ಕಾಪಾಡಲಿ. ಇಷ್ಟು ಮಾಡಿಯೂ ಜನ ವೋಟು ಹಾಕದೆ ಸೋಲಿಸಿದರೆ ಇದೇ ಬುಲ್ಡೋಜರ್‌ಗಳನ್ನು ಅವರು ವಿರೋಗಳ ನೆಲಸಮ ಕಾರ್‍ಯಕ್ಕೆ ಬಳಸದಿರಲಿ ಎಂದು ಅದೇ ದೇವರಲ್ಲಿ ಬೇಡಿಕೊಳ್ಳೋಣ!
*
ಇದೇ ವೇಳೆ ಜನರನ್ನು ತಮ್ಮ ಹಾಸ್ಯ‘ಸುಧೆ’ಯಿಂದ ನಗೆ ಸಾಗರದಲ್ಲಿ ಮುಳುಗಿಸುವ ಟಿವಿ ಶೋ ಖ್ಯಾತಿಯ ಮಹಿಳೆಯೊಬ್ಬರು ಸಾಗರ ಕ್ಷೇತ್ರದಿಂದ ಪ್ರಮುಖ ಪಕ್ಷವೊಂದರ ಟಿಕೆಟ್ ಬೇಕು ಅಂತ ಗಲಾಟೆ ಶುರುಮಾಡಿರುವರಂತೆ. ಪಕ್ಷದವರು ಮೇಡಂರ ಟಿಕೆಟ್ ಬೇಡಿಕೆಯನ್ನೂ ಒಂದು ಜೋಕ್ ಎಂದು ಪರಿಗಣಿಸದಿರಲಿ ಎಂಬುದು ನಮ್ಮ ಸೀರಿಯಸ್ ಕಾಳಜಿ!
*
ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಹಸಿರು ಕಾರ್ಡ್ ಇದ್ದೋರಿಗೆಲ್ಲಾ ಕಲರ್ ಟಿವಿ ಕೊಡುತ್ತೇವೆ ಅಂತ ಅದು ಭರವಸೆ ಕೊಟ್ಟಿದೆ. ಸೋಸಿಲಿಗೆ ಈಗ ಬಂದಿರುವ ಅನುಮಾನವೆಂದರೆ ಆ ಕಲರ್ ಟಿವಿಯಲ್ಲಿ ಹಸಿರು ಬಣ್ಣ ಮಾತ್ರ ಬರುತ್ತೋ ಅಥ್ವಾ ಬೇರೆ ಬಣ್ಣಗಳೂ ಬರ್‍ತವೊ?!
*
ಈ ಜೋಕು ಅಂತರ್ಜಾಲದಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಪ್ರಥಮ ಬಹುಮಾನ ಗೆದ್ದಿತಂತೆ. ಕೇಳುವಂತವರಾಗಿ. ಸರ್ದಾರ್ಜಿಯೊಬ್ಬ ಪ್ರತಿದಿನ ಬಾರಿಗೆ ಹೋಗಿ ಮೂರು ಬಾಟಲಿ ಬೀರು ಕೊಂಡು , ಮೂರೂ ಬಾಟಲಿನಿಂದ ಒಂದೊಂದು ಸಿಪ್‌ನಂತೆ ಕುಡಿಯುತ್ತಾ ಕುಳಿತನಂತೆ. ಹಿಂಗ್ಯಾಕೆ ಅಂತ ಬಾರಿನವರು ಕೇಳಿದ್ದಕ್ಕೆ ‘ಏನಿಲ್ಲ , ನಾವು ಮೂರು ಜನ ಬ್ರದರ್‍ಸು. ಜತೆ ಇದ್ದಾಗ ಕೂಡಿ ಕುಡಿಯುತ್ತಿದ್ದೆವು. ಈಗವರು ಒಬ್ಬೊಬ್ಬರು ಒಂದೊಂದ್ ಊರಿನಲ್ಲಿ ಇದ್ದಾರೆ. ಅದಕ್ಕೇ ಅವರ ಪಾಲಿನ ಬಾಟಲನ್ನೂ ನಾನೇ ಕುಡೀತಿದೀನಿ’ ಅಂತ ವಿವರಿಸಿದ. ಬಾರಿನವನಿಗೆ ಬಹಳ ಖುಷಿಯಾಯ್ತು. ಮೂರು ತಿಂಗಳವರೆಗೆ ದಿನಾ ಹೀಗೆ ನಡೆಯುತ್ತಿತ್ತು. ಒಂದು ದಿನ ಸರದಾರ್ಜಿ ಎರಡೇ ಬಾಟಲು ತಗೊಂಡು ಕುಡಿದ. ಬಾರಿನವನು ಪಾಪ ಒಬ್ಬ ಸೋದರನಿಗೆ ಏನೋ ಆಗಿರಬಹುದು ಎಂದುಕೊಂಡು ಸರ್ದಾರ್ಜಿ ಬಳಿ ಬಂದು ಸಂತಾಪದ ದನಿಯಲ್ಲಿ ‘ಸಾರಿ ಹೀಗಾಗಬಾರದಿತ್ತು’ ಎಂದ. ಅದಕ್ಕೆ ಸರ್ದಾರ್ಜಿ ನಗುತ್ತಾ ‘ಅಂಥದ್ದೇನೂ ಆಗಿಲ್ಲ ಮಾರಾಯ, ನಾನು ಇವತ್ತಿಂದ ಕುಡಿಯೋದ್ ಬಿಟ್ಟಿದ್ದೀನಿ ಅಷ್ಟೆ’ ಅಂದ!
No comments:
Post a Comment