Tuesday, December 25, 2007

ನೆಲದ ನಕ್ಷತ್ರಗಳು

‘ಪ್ರತಿ ಮಗುವೂ ವಿಶೇಷವೇ’ ಎನ್ನುತ್ತದೆ ಚಿತ್ರದ ಉಪಶೀರ್ಷಿಕೆ. ಇದನ್ನು ಅಮೀರ್ ಖಾನ್‌ಗೂ ಅನ್ವಯಿಸಬಹುದು. ಇತ್ತೀಚೆಗೆ ಆತ ಮಾಡುತ್ತಿರುವ ಪ್ರತಿಯೊಂದೂ ವಿಶೇಷವೇ.
9 X 3 = ?
ಪ್ರಶ್ನೆಪತ್ರಿಕೆಯಲ್ಲಿ ಈ ಪ್ರಶ್ನೆ ನೋಡಿದ ಮೂರನೇ ತರಗತಿ ಬಾಲಕನ ತಲೆಯಲ್ಲಿ ತಾರಾಮಂಡಲವೇ ತೆರೆಯುತ್ತದೆ. ಒಂಭತ್ತು ಅಂದರೆ ನವಗ್ರಹಗಳು, ಮೂರು ಅಂದರೆ ಮೂರನೇ ಗ್ರಹ ಭೂಮಿ...ಭೂಮಿ ಹಾಗೇ ಟೂರ್ ಹೊರಟು ದಾರಿಯಲ್ಲಿ ಗುರುವಿಗೆ ಹಾಯ್ ಹೇಳಿ, ಶನಿಗೆ ಕಣ್ಣುಮಿಟುಕಿಸಿ ಫ್ಲುಟೊಗೆ ಡ್ಯಾಶ್ ಹೊಡೆದರೆ ಅದು ಪೂರ್ತಿ ಪುಡಿಪುಡಿ... ಹೀಗೆಲ್ಲಾ ಕಲ್ಪನಾವಿಲಾಸ ಸಾಗಿ ಇದ್ದಕ್ಕಿದ್ದಂತೆ ಏನೋ ಹೊಳೆದಂತಾಗಿ ಎಚ್ಚರಗೊಂಡು ‘ಎಸ್’ ಎಂದು ಸಂಭ್ರಮಿಸುತ್ತಾ 9 X 3= 3 ಅಂತ ಉತ್ತರ ಬರೆಯುತ್ತಾನೆ ಅವನು !
ಅಮೀರ್ ಖಾನ್‌ನ ಹೊಸ ಸಿನಿಮಾ ‘ತಾರೆ ಜಮೀನ್ ಪರ್’ನ ಮುಖ್ಯ ಪಾತ್ರವಾದ ಇಶಾನ್ ನಿಜಕ್ಕೂ ವಿಶೇಷ ಹುಡುಗನೇ. ಶಾಲೆಗೆ ಹೊರಡೆಂದು ಅಮ್ಮ ಬಾತ್‌ರೂಮಿಗೆ ನೂಕಿದರೆ ಶವರಿನೊಂದಿಗೂ ಅವನ ವಾಗ್ವಾದ. ಥಟ್ಟನೆ ಮೈಮೇಲೆ ಬಿದ್ದ ನೀರಿಗೆ ಅರೆಕ್ಷಣ ನಡುಗಿದರೂ, ಸಾವರಿಸಿಕೊಂಡು ‘ಬಾ ಬಾ ಬರ್‍ತೀಯಾ’ ಎಂದು ಅದಕ್ಕೂ ರೋಪ್ ಹಾಕುವ ಚಿಣ್ಣ. ಅವನು ಬಿಡಿಸುವ ಚಿತ್ರಗಳಲ್ಲೋ ಬೇರೆಯದೇ ಲೋಕದ ಬಣ್ಣ. ತರಗತಿಯ ಪಾಠಗಳಿಗಿಂತ ಕಿಟಕಿಯ ನೋಟಗಳೇ ಅವನಿಗೆ ಸೊಗಸು. ‘೬೭ನೇ ಪುಟ ತೆಗೆದು ಪಾಠ ಓದೊ ’ ಎಂದು ಟೀಚರ್ ಅಬ್ಬರಿಸುತ್ತಿದ್ದರೆ ಇವನಿಗೆ ಓದಲು ಆಗುತ್ತಲೇ ಇಲ್ಲ. ಯಾಕೊ ಎಂದರೆ ‘ಅಕ್ಷರಗಳು ಡ್ಯಾನ್ಸ್ ಮಾಡ್ತಾ ಇವೆ’ ಎಂದು ಹೇಳುವ ಈ ಮುದ್ದು ಹಲ್ಲುಬ್ಬಿನ ತಂಟೆಕೋರನಿಗೆ ಶಾಲೆಯಲ್ಲಿ ಸದಾ ಶಿಕ್ಷೆ. ಬಾಗಿಲ ಹೊರಗೆ ಮಂಡಿಯೂರಿ ಅವನು ನಿಂತಿರುವ ದೃಶ್ಯ ನಿತ್ಯ ಕಾಣುವಂಥದ್ದು. ಸ್ಪೆಲ್ಲಿಂಗ್ ಬರೆವ ಪುಸ್ತಕದ ತುಂಬಾ ಪದಗಳ ಕನ್ನಡಿ ಬಿಂಬಗಳನ್ನೇ ಮೂಡಿಸಿರುವ ಈ ಪುಟ್ಟನ ವಿದ್ಯಾಭ್ಯಾಸ ಕುರಿತು ಅಪ್ಪ ಅಮ್ಮನಿಗೆ ಇನ್ನಿಲ್ಲದ ಕಳವಳ.
ನಿಜಕ್ಕೂ ಅವನಿಗೇನು ಸಮಸ್ಯೆ? ಅದಕ್ಕೇನು ಪರಿಹಾರ ಎಂದು ಆಲೋಚಿಸಬಲ್ಲ ಹೃದಯವಂತ ಶಿಕ್ಷಕನ ಪಾತ್ರದಲ್ಲಿ ಅಮೀರ್‌ಖಾನ್ ಪ್ರವೇಶವಾಗುವುದು ಅರ್ಧ ಸಿನಿಮಾ ಮುಗಿದ ಬಳಿಕ. ಆದರೂ ಈ ಉಜ್ವಲ ಸಿನಿಮಾದ ಮೊದರ್ಧವೇ ಹೆಚ್ಚು ಚೈತನ್ಯಶಾಲಿಯಾಗಿದೆ ಎಂದು ಹೇಳಿದರೆ ಒಮ್ಮೆಗೇ ಅಮೀರ್‌ಖಾನ್‌ನ ಕಾಲೆಳೆದಂತೆಯೂ, ಕೈ ಕುಲುಕಿದಂತೆಯೂ ಆಗುತ್ತದೆ. ಯಾಕೆಂದರೆ ಈ ಚಿತ್ರದ ನಿರ್ದೇಶಕನೂ ಆತನೇ.
ಪ್ರತಿಯೊಂದು ಮಗುವಿನಲ್ಲೂ ಇರುವ ಬೇರೆಬೇರೆ ವಿಶೇಷತೆಗಳನ್ನು ಗುರುತಿಸದೆ ಬರೀ ಪರೀಕ್ಷೆಯಲ್ಲಿ ಮಾರ್ಕ್ಸ್ ತೆಗೆದುಕೊಳ್ಳುವಂತೆ ಒತ್ತಡ ಹೇರುವ ಪೋಷಕರನ್ನು ಹಾಗೂ ಹೊರಗಿನ ವೇಗದ ಓಟಕ್ಕೆ ತಯಾರುಮಾಡುವ ಭರದಲ್ಲಿ ಮಕ್ಕಳ ಸೂಕ್ಷ್ಮ ಮನಸ್ಸನ್ನು ಲಕ್ಷಿಸದ ಶಿಕ್ಷಕರನ್ನು ಆಲೋಚಿಸಲು ಹಚ್ಚುವುದು ಚಿತ್ರದ ಗುರಿ. ಕತೆ ತೀರಾ ಹೊಸದೇನೂ ಅಲ್ಲ. ಆದರೆ ಇಂಥ ಕತೆಯನ್ನು ಚಿತ್ರ ಮಾಡಲು ಸೂಪರ್ ಸ್ಟಾರೊಬ್ಬ ಹೊರಡುವುದು ಮಾತ್ರ ಭಾರತೀಯ ಸಿನಿಮಾಕ್ಕೆ ಹೊಸದು. ಕ್ಲೀಷೆಗಳಿಂದಲೇ ತುಂಬಿಹೋಗಬಹುದಿದ್ದ ಇಂಥ ಕತೆಯನ್ನು ಅಷ್ಟೊಂದು ನವಿರಾಗಿ ಹೇಳಿದ್ದಾರಲ್ಲ ಎಂಬುದು ಹೊಸತು. ಎಲ್ಲಕ್ಕಿಂತ ಬೆಚ್ಚನೆ ಅಚ್ಚರಿ ಎಂದರೆ ಇದು ನಿರ್ದೇಶಕನ ಮೊದಲ ಸಿನಿಮಾ ಎನ್ನುವುದಕ್ಕೆ ಚಿತ್ರದಲ್ಲೆಲ್ಲೂ ಸಾಕ್ಷಿ ಇಲ್ಲ ಎಂಬುದು.
ಮೊದಲರ್ಧದಲ್ಲಿರುವ ದೃಶ್ಯಗಳ ನಿರ್ವಹಣೆಯಂತೂ ನಮ್ಮ ಸಿನಿಮಾಗಳಲ್ಲಿ ಕಂಡರಿಯದಂತ ನವಿರಿನಿಂದ ಕೂಡಿದೆ. ಶಾಲೆಯನ್ನು ಬಂಕ್ ಮಾಡಿ ಮುಂಬಯಿಯ ಓಣಿಗಳಲ್ಲಿ ತಿರುಗುವ ಇಶಾನ್‌ನ ಕುತೂಹಲದ ಕಣ್ಣುಗಳನ್ನು ಹಿಂಬಾಲಿಸಿ ಹೊರಡುವ ಸನ್ನಿವೇಶವಂತೂ ಮರೆಯಲಾಗುವುದೇ ಇಲ್ಲ. ಸಾಹುಕಾರರ ಮಕ್ಕಳು ಐಸ್‌ಕ್ರೀಂ ತಿನ್ನುವುದನ್ನು ಬಡವರ ಮಕ್ಕಳು ಆಸೆಯಿಂದ ನೋಡುವ ದೃಶ್ಯಗಳನ್ನು ಎಷ್ಟೋ ನೋಡಿದ್ದೇವೆ. ಇಲ್ಲಿ ಸ್ಥಿತಿವಂತರ ಮನೆಯ ಹುಡುಗ ಇಶಾನ್, ಬಡವನೊಬ್ಬ ತನ್ನ ಮಗುವಿಗೆ ಐಸ್ ಕ್ಯಾಂಡಿ ಕೊಡಿಸುವುದನ್ನು ಬೆರಗಿನಿಂದ ನೋಡುತ್ತಾನೆ. ತಿಂದಾದ ನಂತರ ಮಗುವನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿರುವ ಆ ಅಪ್ಪನ ಗಟ್ಟಿಮುಟ್ಟಾದ ಕಪ್ಪು ಬೆನ್ನಿನ ಚಿತ್ರಿಕೆಯೂ ಮನವನ್ನು ಸ್ಪರ್ಶಿಸುತ್ತದೆ.
ಈ ಚಂದದ ಸಿನಿಮಾದಲ್ಲಿ ಕೊರತೆ ಅಂತ ಪಟ್ಟಿ ಮಾಡಲೇಬೇಕು ಎಂದು ಹೊರಟರೆ ಹೊಳೆಯುವುದು ಒಂದು ಅಂಶ. ಸಮಸ್ಯೆಯ ಮಕ್ಕಳು ಎಂದು ತೋರಿಸುವುದಕ್ಕಿಂತ ಓದಿನಲ್ಲಿ ಸಾಧಾರಣವಾಗಿರುವ ಆದರೆ ಬೇರೆಬೇರೆ ರೀತಿಯಲ್ಲಿ ಸೃಜನಶೀಲವಾಗಿರುವ ಮಕ್ಕಳೆಲ್ಲರಿಗೂ ಅನ್ವಯಿಸುವಂತೆ ಕತೆಯನ್ನು ನಿರೂಪಿಸಿದ್ದರೆ ಚೆನ್ನಾಗಿರುತ್ತಿತ್ತೇನೊ ಎಂಬುದು. ಈಗ ಅದನ್ನು ಬಿಡಿ.
ಐದೂ ಬೆರಳನ್ನು ಒಂದೇ ಸಮ ಮಾಡಲು ಹೊರಟರೆ ಬೆರಳು ಮುರಿದುಹೋಗುತ್ತೆ, ಪೋಷಕರ ಈ ಹಠ ಬಾಲಕಾರ್ಮಿಕತೆಗಿಂತ ಕೆಟ್ಟದು ಎಂದು ಅಮೀರ್ ಹೇಳುವಾಗ ಒಪ್ಪಿಕೊಳ್ಳಬೇಕು ಅನಿಸುತ್ತದೆ. ‘ಮೇನ್‌ಸ್ಟ್ರೀಮ್’ ಜತೆಗೆ ರ್ಸ್ಪಸಲಾಗದ ‘ವಿಶೇಷ’ ಮಕ್ಕಳ ಬಗ್ಗೆ ಪ್ರೀತಿ, ಸಹಾನುಭೂತಿ ಅನಿಸುತ್ತದೆ. ಇಶಾನ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿರುವ ಬಾಲಕನ ಬಗ್ಗೆ ಖುಷಿ ಅನಿಸುತ್ತದೆ. ಕಾಸರವಳ್ಳಿ ಕೈಗೆ ಸಿಲುಕಿದ್ದರೆ ಬಿಡುಗಡೆಯ ಭಾಗ್ಯ ಸಿಗುವುದೂ ಅನುಮಾನವಿದ್ದ ಕತೆಯನ್ನು ಇಷ್ಟು ಸುಂದರವಾಗಿ ಮಾಡಿ, ಅದ್ದೂರಿಯಾಗಿ ಬಿಡುಗಡೆ ಮಾಡಿರುವ ಅಮೀರ್‌ಖಾನ್ ಸಾಹಸಕ್ಕೆ ಹ್ಯಾಟ್ಸಾಫ್ ಹೇಳಬೇಕು ಅನಿಸುತ್ತದೆ. ಅವೆಲ್ಲಕ್ಕೂ ಮೊದಲು ಸಿನಿಮಾವನ್ನು ಇನ್ನೊಮ್ಮೆ ನೋಡಬೇಕು ಅನಿಸುತ್ತದೆ!
ಈ ‘ವಿಶೇಷ’ ಸಿನಿಮಾ ‘ಮೇನ್‌ಸ್ಟ್ರೀಮ್’ ಸಿನಿಮಾಗಳನ್ನು ಮೀರಿ ಹಿಟ್ ಆಗಲಿ
~ಅಪಾರ

2 comments:

mohan said...

ಅಪಾರ,
ಒಂದು ನೋಡಲೇಬೇಕು ಎನಿಸುವಂತ ಸಿನಿಮಾದ ಬಗ್ಗೆ ಗಮನ ಸೆಳೆದದ್ದಕ್ಕೆ ಥ್ಯಾಂಕ್ಸ್. ಇನ್ನೊಮ್ಮೆ ಸಿನಿಮಾ ನೋಡಬೇಕು ಎಂದಿದ್ದೀರಿ. ನಾನಂತೂ ಕಂಪನಿ ಕೊಡಲು ರೆಡಿ. ಕಿನ್ನರಿಯೂ ಇರುತ್ತಾಳೆ. ಅಮೀರರಂತೆ ಸಿನೆಮಾ ನೋಡೋಣ. ಕಬೀರರಂತೆ ಅದರ ಸಂದೇಶ ಹಂಚೋಣ. ಗರೀಬರಂತೆ ಮಲ್ಟಿಪ್ಲೆಕೃ್ನಲ್ಲಿ ಖರ್ಚು ಮಾಡೋಣ.

ಅದಿರಲಿ ಎಲ್ಲಿ ನಿಮ್ಮ ಮದ್ಯಸಾರ. ಅದಕ್ಕೂ ಒಳ್ಳೆ ಬರಹಗಳಿಗೂ ಸಂಬಂಧವೇ ಇಲ್ಲ. ಮದ್ಯಕ್ಕೆ ಮಧ್ಯಂತರವಿಲ್ಲ.
-ಜಿ ಎನ್ ಮೋಹನ್

ನಾವಡ said...

ಅಪಾರ,
ಈ ಚಿತ್ರ ನೋಡಿದೆ. ನಿಜಕ್ಕೂ ಚೆನ್ನಾಗಿದೆ. ಮಕ್ಕಳ ಪ್ರತಿಭೆ ಅರಿಯದೇ ಏಕರೂಪಿಗಳಾಗಿಸಲು ಹೊರಟಿರುವ ನಮ್ಮ ಸ್ಪರ್ಧೆ ಬಗ್ಗೆ ನಾಚಿಕೆಯಾಯಿತು.
ಪುಟ್ಟ ಕಂಗಳ ಪೋರ ಇಶಾನ್ ಚೆನ್ನಾಗಿ ಮಾಡಿದ್ದಾನೆ. ನವಿರಾದ ಭಾವನೆಗಳಿಗೆ ಅಷ್ಟೇ ನವಿರಾದ ಫ್ರೇಮ್ ಹಾಕಿದ್ದಾನೆ ಅಮೀರ್ ಖಾನ್. ಸತ್ಯ, ನಿಮ್ಮ ಮಾತಿನಂತೆ ಅಮೀರ್ "ವಿಶೇಷ’ ವಾಗುತ್ತಿದ್ದಾನೆ.

ನಾವಡ

~~~~~~ಮೀ ನ ಹೆ ಜ್ಜೆ