Sunday, December 16, 2007

ಮದ್ಯಸಾರ~ಒಂಬತ್ತನೇ ರೌಂಡು

ಆ ಲೋಕದ ಮಾತನ್ನು ಹಿಡಿದು
ಈ ಲೋಕದಲ್ಲಿ ಜಗಳ ತೆಗೆವುದು ತರವೆ?
ಮದ್ಯರಾತ್ರಿ ಮತ್ತಿನಲ್ಲಿ ಹೇಳಿದ ಹೆಸರು
ಈ ಸುಡು ಮಧ್ಯಾಹ್ನ ನನಗೂ ನೆನಪಾಗ್ತಿಲ್ಲ ನಂಬು


~
ಎಷ್ಟು ಕುಡಿದು ಬಂದಿದ್ದೆ ನಿನ್ನೆ ರಾತ್ರಿ
ಕಂಡೇ ಇರಲಿಲ್ಲ ನಿನ್ನ ಅಷ್ಟೊಂದು ನಗು
ನನಗೂ ನಗಬೇಕಿದೆ ಅಷ್ಟು ಚಂದವಾಗಿ
ಹೇಳು ಏನು ಕುಡಿದು ಬಂದಿದ್ದೆ ನಿನ್ನೆ ರಾತ್ರಿ

~
ಮುಟ್ಟುವುದಿಲ್ಲ ಇಂದಿನ ನಂತರ
ಅಂತ ಕುಡಿದದ್ದು ಎಷ್ಟು ಸಲ
ಈ ಮದಿರೆಯ ಸೆಳೆತವೇ ಒಂಥರ
ಅಂತ್ಯವೆಂಬುದು ಭ್ರಮೆ, ಇಲ್ಲಿ ಬರೀ ಮದ್ಯಂತರ

~
ಬೆಟ್ಟವನ್ನೆ ಕಡಿಸಿರಿ
ಮೈಯ ಮುರಿಯೆ ದುಡಿಸಿರಿ
ಸಂಜೆಗಿಷ್ಟು ಕುಡಿಸಿರಿ
ಮನದ ದಣಿವ ಮರೆಸಿರಿ

~
ಮುಗಿವ ಮೊದಲು ಬಟ್ಟಲು ತುಂಬಿಸುವ
ನಿಮ್ಮ ತೊದಲು ನುಡಿಗಳನು ಲಾಲಿಸುವ
ಮಾಣಿಯನ್ನು ಅಮ್ಮನಂತೆ ಕಾಣಿ
ಸುಲ್ತಾನನಂತೆ ಟಿಪ್ಪು ಕೊಟ್ಟೇ ಹೊರಡಿ

3 comments:

ಜಿ ಎನ್ ಮೋಹನ್ said...

ಕುಡಿಯೋದಕ್ಕೂ ಒಂದು ಅರ್ಥ ಕೊಡುತ್ತಿರುವ ನಿಮಗೆ ಸದಾ 'ಚಿಯರ್ಸ್'
ಅದಿರಲಿ...ಎಲ್ಲೋ ಓದಿದೆ
ವೈ ಎನ್ ಕೆ ಹೇಳಿದರಂತೆ -
.. ಕುಡಿವ ಮೊದಲು ರೂಮು ಸ್ಥಾವರ, ನಾವು ಜಂಗಮ
ಕುಡಿದ ನಂತರ ನಾವು ಸ್ಥಾವರ, ರೂಮು ಜಂಗಮ...
-ಜಿ ಎನ್ ಮೋಹನ್

Anonymous said...

ಅವಳನ್ನು ಮರೆಯಬೇಕೆಂದು ಕುಡಿದೆ
ಪಾಪಿ ಮದ್ಯವೂ ಹೇಗೆ ಕೈಕೊಟ್ಟಿತು ನೋಡಿ
ನಶೆಯಲ್ಲಿ ಅವಳೊಬ್ಬಳೇ ಏನು
ಅವಳ ಗೆಳತಿಯರೂ ನೆನಪಾಗುತ್ತಿದ್ದಾರೆ
~ಹರಿ

Anonymous said...

ಚಳಿಗಾಲದಲ್ಲಿ ಗ'rum' ಅನುಭೂತಿ ನಿಮ್ಮ ಕವನ.
:-)
ಮಾಲತಿ ಎಸ್.