ಕಳೆದ ವಾರ ವಸುಧೇಂದ್ರ ಒಟ್ಟೊಟ್ಟಿಗೆ ಮೂರು ಪ್ರಶಸ್ತಿ ಪಡೆದು(ರಾಜ್ಯ ಅಕಾಡೆಮಿ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಮತ್ತು ಅಮ್ಮ ಪ್ರಶಸ್ತಿ) ಹ್ಯಾಟ್ರಿಕ್ ಸಾಧಿಸಿದ್ದು ಸುದ್ದಿಯಾಯಿತು. ಆದರೆ ಅವರಿಗೆ ನಾಲ್ಕನೆಯ ಪ್ರಶಸ್ತಿಯೊಂದು ಬಂದಿರುವುದು ನಿಮಗೆ ಗೊತ್ತೆ? ಉದಯವಾಣಿ ವಿಶೇಷಾಂಕದಲ್ಲಿ ಪ್ರಕಟಗೊಂಡಿರುವ ಅವರ 'ಸೀಳು ಲೋಟ' ಎಂಬ ಅದ್ಭುತ ನೀಳ್ಗತೆಯನ್ನು ಮೆಚ್ಚಿ ಹಿರಿಯ ಸಾಹಿತಿ ಯು ಆರ್ ಅನಂತಮೂರ್ತಿ ಒಂದು ಉದ್ದದ ಪತ್ರ ಬರೆದಿದ್ದಾರೆ. ಅನಂತಮೂರ್ತಿ ಮೆಚ್ಚಿ ಪತ್ರ ಬರೆದಿದ್ದಾರೆ ಎಂದಮೇಲೆ ಅದು ಪ್ರಶಸ್ತಿ 'ಪತ್ರ'ವಲ್ಲದೆ ಮತ್ತೇನು?
~ಪತ್ರ~
~ಪತ್ರ~
ಅನು, ವಿವೇಕ್ ಹೇಳಿದರೆಂದು ಉದಯವಾಣಿ ವಿಶೇಷಾಂಕದ ನಿಮ್ಮ ಕಥೆ ಓದಿದೆ. ಚೆನ್ನಾಗಿದೆಯೆಂದು ಹೇಳಿದರೆ ಸಾಲದು. ಗಹನವಾಗಿದೆ. ಹಾಗೆ ಶೈಲಿಯ ಬಡಿವಾರದಲ್ಲಿ ತೋರಿಕೊಳ್ಳದಂತೆ ಗಹನವಾಗಿದೆ. ನಾನು ತಿಳಿಯಲು ಯತ್ನಿಸುತ್ತ ಇರುವ ಭಾರತದ ಧರ್ಮದ ವಿಶಿಷ್ಟತೆಯನ್ನು ನಾನು ತಿಳಿದಿರುವುದಕ್ಕಿಂತ ಗಹನವಾಗಿ ನಿಮ್ಮ ಕಥೆಯ 'ತಿಮ್ಮಪ್ಪನೂ' ಆದ ವೆಂಕಟೇಶ್ವರ ಅನುಭವಕ್ಕೆ ತಂದಿದ್ದಾನೆ.
ಇಡೀ ಪ್ರಪಂಚದಲ್ಲಿ ಸೆಮಿಟಿಕ್ ಮತಗಳಿಗಿಂತ ಭಿನ್ನವಾಗಿ ಉಳಿದಿರುವ ಪೇಗನ್ ಧರ್ಮವೆಂದರೆ ಭಾರತದ ಹಿಂದೂಗಳದು. ಗ್ರೀಕರಲ್ಲಿ ಹೋಮರ್ ನಂತರ ಇದು ಅವಸಾನವಾಯಿತು. ಪೇಗನ್ ದೇವತೆಗಳು ಯೂರೋಪಿನ ಕವಿಗಳಲ್ಲಿ ಮಾತ್ರ ಉಳಿದರು. ಆದರೆ ನಿಮ್ಮ ಕಥೆಯ ಬಡ ದಂಪತಿಗಳಲ್ಲಿ ಅವನು ಕಳ್ಳರ ದೇವರಾಗಿ ಕಾಣಿಸಿಕೊಂಡಿದ್ದಾನೆ. ಕಳ್ಳರದೇವರಾಗದೆ ಅವನು ಬಡವರಿಗೆ ದಕ್ಕುವುದು ಸಾಧ್ಯವೆ? ದೇವರು ಸಾಮಾನ್ಯನಾಗಿ ದಕ್ಕುವುದು; ದಕ್ಕಿ ಬಡವರ ಹೃದಯದಲ್ಲಿ ಮಿಕ್ಕುವುದು. ಬೀಡಿ ಸೇದುವ ಗಂಡನಿಗೆ; ಬಾಯಾಳಿ ಹೆಂಡತಿಗೆ. ಅವನಿಗೂ ಹೆಂಡತಿಯಿದ್ದಾಳೆ; ಬಾಯಾಳಿ ಹೆಂಗಸು ಈ ದೇವ ತನ್ನ ಹೆಂಡತಿಯನ್ನು ಪಡೆದ ಕ್ರಮವನ್ನು ಟೀಕಿಸುವವಳೇ. ಬದುಕಿನಲ್ಲಿ ಒದಗಿ ಬರುವ ಈ ದೇವದೇವಿಯರ ಕಲ್ಪನೆ ಅಪ್ಪಟ ದೇಸಿ. ಭಕ್ತಿಯ ಉಗಮ ಇಲ್ಲಿದೆ. ಈ ದೇವನೇ ಅತೀತನೂ ಆಗುವುದು ಸೋಜಿಗವೇ. ಕಳ್ಳರ ದೇವನಾಗಿ ಉಳಿದಿದ್ದೇ ಅತೀತನೂ ಹೌದು. ಬಾಯಾಳಿ ತನ್ನ ಮಗನ ಕಣ್ಣಿನಲ್ಲಿ ಅವನನ್ನು ತುಂಬಿಸುತ್ತಾಳೆ. ದಂಪತಿಗಳು ಟ್ರಂಕು ಹೊತ್ತು ಮೆಟ್ಟಲು ಹತ್ತಿ ರೈಲ್ ಪ್ರಯಾಣ ಸುಖಿಸಿ ಹೊಟ್ಟೆನೋವಿನಲ್ಲೂ ಅಪಮಾನದಲ್ಲೂ ನರಳಿ ಅವನ್ನು ಕ್ಷಣಕಂಡು ಮರಳುತ್ತಾರೆ. ಪ್ರೆಸ್ಸು, ಕೋಡುಬಳೆ ಕಾಯಕಕ್ಕೆ.
'ನಂಬಿಕೆ' ಎನ್ನುವುದು ಸೆಮಿಟಿಕ್ ಧರ್ಮಗಳಿಗೆ ಮುಖ್ಯವಾದಂತೆ ನಮಗೆ ಮುಖ್ಯವಲ್ಲ. ಆಚರಣೆಯಲ್ಲಿ, ಉಸಿರಾಟದಷ್ಟೇ ಸಹಜವಾದ ಆಚರಣೆಯಲ್ಲಿ, ನಮ್ಮ ದೇವತೆಗಳು ಜೀವಂತರಾಗಿ ಉಳಿದಿದ್ದಾರೆ. ಗಾಂಧಿಯ ರಾಮ ನೋಡಿ. ಅವನು ಸೀತೆಯ ಪತಿಯಾದ ಮನುಷ್ಯ. ಅವನು ರಾಜ. ಅವನು ಸಗುಣ, ಸಾಕಾರ. ಹಾಗೆಯೇ ಅಲ್ಲಾ ಕೂಡ ಅವನು. ಅಂದರೆ ಬೇಕಾದ ಆಕಾರ ಪಡೆಯಬಲ್ಲ ನಿರಾಕಾರ. ಗಾಂಧಿಗೆ ಇದು ಸಾಧ್ಯವಾದ್ದು ಹಿಂದೂ ಮನಸ್ಸಿನಿಂದಾಗಿ. 'ಹಿಂದೂ’ ಎನ್ನುವ ಪದ ಕೂಡ ಈಗಿನ ಕಾಲಕ್ಕಾಗಿ ನಾವು ಬಳಸೋದು. ನಿಮ್ಮ ಕಥೆಯ ಯಾವ ಪಾತ್ರವೂ ತಮ್ಮನ್ನು ಹಿಂದೂ ಎಂದು ಗುರುತಿಸಿಕೊಳ್ಳುವ ಅಗತ್ಯ ಕಂಡವರಲ್ಲ. ಪ್ರೆಸ್ ಮಾಲೀಕನಂತಹ ಜುಗ್ಗನೂ ತಿರುಪತಿಗೆ ಹೋಗಲೆಂದು ಸೇವಕನಿಗೆ ಕೂಡಲೇ ಐದುನೂರು ರೂಪಾಯಿ ಕೊಟ್ಟು ಬಿಡುತ್ತಾನೆ.
ನಿಮ್ಮ ಕಥೆಯ ಬಾಯಾಳಿ ಹೆಂಗಸು ಬೈದಾಡುತ್ತಲೇ ಗಂಡನ ಕಾಲಿಗೆ ನಮಸ್ಕರಿಸುತ್ತಾಳೆ. ಬೈಯುತ್ತಲೇ ರಾಘವೇಂದ್ರ ಸ್ವಾಮಿಗೆ ಹೂವನ್ನು ಪೋಣಿಸುತ್ತಾಳೆ. ವಿಧವೆ ತನ್ನ ತಾಳಿಯನ್ನು ಹಂಗಿಸಿ ದೇವರಿಗೆ ಕೊಡುತ್ತಾಳೆ. ಈ ದೇವರೂ ಒಲಿಯುವುದು ಕಳ್ಳತನ ಮಾಡಿದವರಿಗೆ. ಕದಿಯುವುದನ್ನೂ ಒಂದು ಆಚರಣೆಯಂತೆ, ಅಂಜುತ್ತಂಜುತ್ತ, ಬೀಡಿಸೇದುವ ಗಂಡ ಮಾಡುತ್ತಾನೆ. ಆದರೂ ಇವರೆಲ್ಲರೂ ಎಷ್ಟು ಸ್ವಾಭಿಮಾನಿಗಳು. ಬಾಯಾಳಿ ತನ್ನ ಶ್ರೀಮಂತ ಅಣ್ಣನನ್ನು ಈಗಲೂ ಪ್ರೀತಿಸಬಲ್ಲಳು. ಅವನೂ ಪ್ರೀತಿಸಬಲ್ಲ.
ಆದರೂ ಅಣ್ಣ ಶ್ರೀಮಂತನೇ; ತಂಗಿ ಬಡವಳೇ. ಅವಳು ಕೊಡುವ ಬಳುವಳಿ ಸೀರೆ ಬಣ್ಣ ಬಿಟ್ಟು ಎಲ್ಲರ ಬಟ್ಟೆಗೆ ಅಂಟಿಕೊಂಡಾಗ ಅವಳಿಗಾಗುವ ಅವಮಾನವೂ ಸಹಜವೇ. ಇವರೆಲ್ಲರನ್ನೂ ಆಳುವ ತಿಮ್ಮಪ್ಪ ಈ ಎಲ್ಲ ಕಳ್ಳರ ದೇವರು. ಕದಿಯುವುದೂ ಅವನ ಸೇವೆಯೇ. ಬೀಗತಿಯ ಸರ ಕಳೆದದ್ದನ್ನು ಹೊಟ್ಟೆನೋವಿಗೆ ಆರೋಪಿಸುವ ಶ್ರೀಮಂತಿಕೆಯ ಅಹಂಕಾರದ ಈ ಬೀಗರ ಗುರುವನ್ನ್ನು ಹಾಸ್ಯಮಾಡಲು ಕೂಡ ತಿರುಪತಿಯ ದೇವರೂ ಸಹಾಯಕನಾಗುತ್ತಾನೆ ಬಡವರ ಪಾಲಿಗೆ.
ಸಿಂಗರ್ ನಂತಹ ಕಥೆಗಾರನ ಗುಣ ನಿಮ್ಮ ಕಥನಗಳಲ್ಲಿ ಬೆಳೆಯಲಿ ಎಂದು ಹಾರೈಸುತ್ತೇನೆ. ಅವಸರದಲ್ಲಿ ಇದನ್ನು ಬರೆದಿದ್ದೇನೆ. ಕಥೆಗಳ ಪಾತ್ರಗಳ ಹಸರು ಹೇಳಲೂ ಸಮಯವಿಲ್ಲದವನಂತೆ ಬರೆದಿದ್ದೇನೆ. ನನ್ನ
ಖುಷಿ ಹಂಚಿಕೊಳ್ಳಬೇಕಿತ್ತು. ಕೆಲವು ಈಜಿಪ್ಟಿನ ಮುಸ್ಲಿಂ ಕಥೆಗಾರರು ಇಸ್ಲಾಮನ್ನೂ ಇಷ್ಟೇ ಪ್ರೀತಿಯಿಂದ, ವಿನೋದದ ಕಾರುಣ್ಯದಿಂದ, ಒಳಬಾಳಿನ ಹೊಳಪನ್ನು, ಹೊಳಹುಗಳನ್ನು ತೋರಿಕೆಯಿಲ್ಲದಂತೆ, ಗುಣದೋಷಗಳ ಅಭಿನ್ನತೆಯಲ್ಲಿ ಕಾಣಬಲ್ಲಂತೆ, ಬರೆಯುತ್ತಾರೆ.
ಖುಷಿ ಹಂಚಿಕೊಳ್ಳಬೇಕಿತ್ತು. ಕೆಲವು ಈಜಿಪ್ಟಿನ ಮುಸ್ಲಿಂ ಕಥೆಗಾರರು ಇಸ್ಲಾಮನ್ನೂ ಇಷ್ಟೇ ಪ್ರೀತಿಯಿಂದ, ವಿನೋದದ ಕಾರುಣ್ಯದಿಂದ, ಒಳಬಾಳಿನ ಹೊಳಪನ್ನು, ಹೊಳಹುಗಳನ್ನು ತೋರಿಕೆಯಿಲ್ಲದಂತೆ, ಗುಣದೋಷಗಳ ಅಭಿನ್ನತೆಯಲ್ಲಿ ಕಾಣಬಲ್ಲಂತೆ, ಬರೆಯುತ್ತಾರೆ.
~ಅನಂತಮೂರ್ತಿ
ನವೆಂಬರ್ ೧೪, ೦೭
~ಇನ್ನಷ್ಟು ಮಾತು~
ಸಮಾಜದಲ್ಲಿ ಸತ್ಯವಂತನೆಂದು ಸಲ್ಲಲು ಕದಿಯಬಾರದು; ಆದರೆ ತಿರುಪತಿಯ ದೇವರು ಒಲಿಯಲು ಕದಿಯಬೇಕು. ರಿಚುಯಲ್ಲಿಗಾಗಿ ಕದಿಯುವ ಆಟದಲ್ಲೂ ಗಂಡ ಆಸೆಹುಟ್ಟಿದ್ದನ್ನು ಕದಿಯುವುದಿಲ್ಲ. ಅವನ ಹೆಂಡತಿಗೆ ಬೀಗತಿಯ ಹಾರ ಆಸೆಯಾಗುತ್ತದೆ; ಅದನ್ನು ಕದ್ದು ತಿಮ್ಮಪ್ಪನಿಗೆ ಕೊಟ್ಟಿದ್ದರೆ ಕದಿಯುವ ರಿಚುಯಲ್ ನೈಜವಾಗಬಹುದಿತ್ತು. ಬೀಗರ ಕಳ್ಳಗುರು ಇದನ್ನು ಒಪ್ಪಲಾರ. ಗಂಡನ ಮೇಲಿನ ಕಳ್ಳತನದ ಅಪಾದನೆಯಲ್ಲಿ ವರ್ಚುಯಲ್ ಸತ್ಯವಿದೆ; ಸಂಭಾವ್ಯ ಸತ್ಯ. ಈ ಬಗೆಯ ಒಳ ಪಠ್ಯಗಳನ್ನು ನಿಮ್ಮ ಕಥೆ ಗರ್ಭದಲ್ಲಿಟ್ಟುಕೊಂಡಿದೆ.
ಈ ಒಳ ಸತ್ಯಗಳನ್ನು ರಿಚುಯಲ್ ನಲ್ಲಿ ಬಳಸುವ ದೇವ ಕಲ್ಪನೆಯೇ ಈ ಕಥೆಯ ಅಪ್ಪಟ ದೇಸಿ ಭಾರತೀಯತೆಗೆ ಕಾರಣ. ವಾಸ್ತವದ ಸತ್ಯ ಮರೆಮಾಚದಂತೆ ಈ ಇನ್ನೊಂದು ಮಾನವತ್ವದ ನಿಜದ ಪಾಡಿನ ಸತ್ಯ ಇಣುಕುತ್ತದೆ. ಆಸೆಯ ನಿಜಸ್ವರೂಪದ ದರ್ಶನವಾಗುವುದು, ನಮ್ಮೆಲ್ಲರಲ್ಲೂ ಅಡಗಿರುವ, ಬಾಲ್ಯದಲ್ಲಿ ಪ್ರಾಯಶಃ ಎಲ್ಲರಲ್ಲೂ ವ್ಯಕ್ತವಾಗುವ, ಕದಿಯಬೇಕೆಂಬ ಅಪೇಕ್ಷೆಯಲ್ಲಿ. ಕದಿಯುವಾಗಿನ ಗೌಪ್ಯ ಸಾಹಸದಲ್ಲಿ. ಆಸೆಯೆಂಬುದರ ಈ ಪೂರ್ಣ ಅವಿಷ್ಕಾರದ ಮುಖೇನ ತಿಮ್ಮಪ್ಪನಿಗೆ ನಾವು ಪ್ರಿಯರಾಗುವುದೆಂದರೆ ದೈವಕ್ಕೂ ನಮಗೂ ಇರುವ ನಂಟಿನ ಹೊಸ ವ್ಯಾಖ್ಯೆಯನ್ನು ಮಾಡಿಕೊಂಡಂತೆ. ಹೀಗೆ ಕದ್ದಿದ್ದನ್ನು ದೇವನೆಂಬ ಮಹಾಕಳ್ಳನಿಗೆ ಒಪ್ಪಿಸಬೇಕೆಂಬ ರಿಚುಯಲ್ಲೆ ಅರ್ಥಪೂರ್ಣವಾದ್ದು. ಈ ತಿಮ್ಮಪ್ಪನಿಗೆ ಇಂದಿಗೂ ಸಲ್ಲುವ ಕಾಣಿಕೆಯಲ್ಲಿ ಹೆಚ್ಚನವು ಬ್ಲಾಕ್ ಮನಿಯೇ.
ನನಗೆ ಉಪನಯನವಾದ್ದು ತಿರುಪತಿಯಲ್ಲಿ. ನನಗಾಗ ಹತ್ತೊ ಹನ್ನೆರಡೊ ವಯಸ್ಸು. ಮೊದಲ ರೈಲ್ ಪ್ರಯಾಣ. ಪಾಪನಾಶಿನಿಯಲ್ಲಿ ಮುಳುಗಿ ಎದ್ದು, ಅಪ್ಪ ಅಮ್ಮನ ಜೊತೆ ತಿಮ್ಮಪ್ಪನ ದರ್ಶನಕ್ಕೆ ಸಾಲಿನಲ್ಲಿ ನಿಂತು ಕಾದಿದ್ದು ಆ ಸರ್ವಾಲಂಕೃತನಿಗೆ ಎದುರಾದೆ. ಈಗಲೂ ಆ ಕ್ಷಣ ನೆನಪಾಗುತ್ತದೆ. ಇವನು ದೇವರಲ್ಲ ಎನ್ನಿಸಿತು. ಆ ಕ್ಷಣದಿಂದ ನನ್ನ ಸ್ವಂತದ ಹುಡುಕಾಟವೇ ಬೇರೆಯಾಗಿದೆ . ಈ ದೃಷ್ಟಿಯಲ್ಲಿ ನಿಮ್ಮ ಕಥಾಲೋಕಕ್ಕೆ ಅನ್ಯ ನಾನು. ಆದರೆ ನಿಮ್ಮಿಂದ ನಾನು ಬಾಲ್ಯದಲ್ಲಿ ಒಪ್ಪದ ತಿಮ್ಮಪ್ಪನ ದರ್ಶನ ಈಗ ನಿಮ್ಮಿಂದ ಆಯಿತು. ಅನುಮಾನಿಸುತ್ತ ಮೆಚ್ಚುತ್ತ ಅವನನ್ನು ನೋಡುತ್ತ ಇದ್ದೇನೆ. ಪಾಪ ತಿಮ್ಮಪ್ಪನಿಗೆ ಈಗ ನಿದ್ದೆಯೇ ಇಲ್ಲವಂತೆ. ಅವನು ನಿದ್ದೆ ಮಾಡುತ್ತ ಇದ್ದ ನನ್ನ ಉಪನಯನದ ಕಾಲಕ್ಕಿಂತ ಹೆಚ್ಚು ಕಾಲ ಕಣ್ಣು ಕಾಣಿಸದಷ್ಟು ದೊಡ್ಡ ನಾಮಧರಿಸಿ ಅವನು ಟೂರಿಸ್ಟರು ಹೆಚ್ಚಾಗಿರುವದರಿಂದ ಎಚ್ಚರವಾಗಿರಬೇಕಾಗಿ ಬಂದಿದೆಯಂತೆ.
~ಅನಂತಮೂರ್ತಿ
No comments:
Post a Comment