Wednesday, March 24, 2010

ಬರವಣಿಗೆಯ ಹಬ್ಬ : ಜಯಂತ ಕಾಯ್ಕಿಣಿ

ಭಾವನಾ ಎಂಬ ಹೆಸರಿನಲ್ಲಿ ತಿಂಗಳಿಗೊಂದು ವಿಶೇಷಾಂಕ ರೂಪಿಸಿಕೊಟ್ಟ ಜಯಂತ್‌, ಇಲ್ಲಿ ವಿಶೇಷಾಂಕಗಳು ಹೊತ್ತು ತರುವ ಸಂಭ್ರಮದ ಬಗ್ಗೆ ಬರೆದಿದ್ದಾರೆ. ಓದಿ ಪ್ರತಿಕ್ರಿಯಿಸಿ.

‘ವಿಶೇಷಾಂಕ’ - ಎಂಬ ಶಬ್ದ ಉಚ್ಚರಿಸುವಾಗಲೇ ಅದರಲ್ಲೊಂದು ಹಬ್ಬದ ಸಡಗರ ತಂತಾನೇ ಹೊಮ್ಮುತ್ತದಲ್ಲ - ಅದರಲ್ಲೇ ಒಂದು ಸಾಮಾಜಿಕ, ಸಾಂಸ್ಕೃತಿಕ ಲಕ್ಷಣವಿದೆ. ಹಬ್ಬ, ಉತ್ಸವ ಎನ್ನುವುದೊಂದು ಸಾಮೂಹಿಕ, ಸಾಮುದಾಯಿಕ ಚಟುವಟಿಕೆಯಾಗಿದ್ದರೂ, ಅದರ ಸರಭರದ ನಡುವೆಯೇ ಖಾಸಗಿಯಾದ ಪುಟವನ್ನೊಂದು ತೆರೆದು ಓದುವ ಅಪ್ಪಟ ಸ್ವಂತ ಆವರಣ ವಿಶೇಷಾಂಕದ್ದು.

ದೀಪಾವಳಿ/ಯುಗಾದಿ ಅಂದರೆ ಬರೇ ವರುಷಕ್ಕೊಂದೇ ಬಾರಿ ಲಭಿಸುವ ಹೊಸ ಬಟ್ಟೆ, ನಕ್ಷತ್ರ ಕಡ್ಡಿ ಪೆಟ್ಟಿಗೆ, ಸಿಹಿತಿಂಡಿಯಲ್ಲ. ಬದಲಿಗೆ ಗರಿಗರಿಯಾಗಿ ಬಂದ ವಿಶೇಷಾಂಕ ಕೂಡ ಹೌದು. ಮನೆಯಲ್ಲಿ ಅದನ್ನು ಮೊದಲು ತೆರೆದು ಓದುವವನೇ ಮಹಾ ಭಾಗ್ಯಶಾಲಿ. ಇತರರ ಕಣ್ತಪ್ಪಿಸಿ ಅದನ್ನು ಅಡಗಿಸಿಡುವವನು ಮಹಾದುಷ್ಟ. ‘ಈಗ ತಂದು ಕೊಟ್ಟೆ’ ಎಂದು ತೆಗೆದುಕೊಂಡು ಹೋಗಿ ನಾಪತ್ತೆಯಾದ ನೆರೆಮನೆಯ ಅಕ್ಕ ಮಹಾ ದಗಾಖೋರಳು. ‘ಜನಪ್ರಗತಿ’, ‘ಕರ್ಮವೀರ’, ‘ಗೋಕುಲ’, ಪ್ರಜಾವಾಣಿ’, ‘ಉದಯವಾಣಿ’, ‘ಕನ್ನಡ ಪ್ರಭ’, ‘ವಿಜಯ ಕರ್ನಾಟಕ’, ‘ಸುಧಾ’, ‘ತರಂಗ’, ‘ಕಸ್ತೂರಿ’ ಎಷ್ಟೆಲ್ಲ ವಿಶೇಷಾಂಕಗಳು ಎಷ್ಟೋ ದಶಕಗಳಿಂದ ಅಗಣಿತ ಕನ್ನಡ ಮನೆಗಳಲ್ಲಿ ಹಬ್ಬಗಳನ್ನು ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ಆಚರಣೆಗಳನ್ನಾಗಿಸುತ್ತ ಬಂದಿವೆ.

‘ಈ ಸಲ ನಿಮ್ಮ ಮನೆಯಲ್ಲಿ ಯಾವುದು ತಗೊತೀರಿ? ನಾವು ಇದನ್ನು ತಗೋತೇವೆ ’ ಎಂಬ ಮಾತು, ವೆಹಿಕಲ್ ಬಗೆಗಿನದಲ್ಲ, ಫ್ರಿಜ್, ಟೀವಿ ಬಗೆಗಿನದಲ್ಲ, ವಿಶೇಷಾಂಕಗಳ ಕುರಿತಾದದ್ದು. ಕನ್ನಡದಲ್ಲಂತೂ ಸಾಹಿತ್ಯ, ಕತೆ, ರಂಗಭೂಮಿ, ಸಾಮಾಜಿಕ ವಿದ್ಯಮಾನಗಳ ವಾರ್ಷಿಕ ಖಾನೆಸುಮಾರಿಯಂತೆ ವಿಶೇಷಾಂಕಗಳು ರೂಪುಗೊಂಡು ಬಂದಿವೆ. ಲಂಕೇಶ್, ಅನುಪಮಾ ನಿರಂಜನ, ಬಸವರಾಜ ಕಟ್ಟೀಮನಿ... ಇವರೆಲ್ಲರ ಹೆಸರುಗಳನ್ನು ಮೊದಲು ಕಂಡಿದ್ದು ವಿಶೇಷಾಂಕಗಳಲ್ಲೆ. ಬಿಸ್ಮಿಲ್ಲಾ ಖಾನ್, ಸತ್ಯಜಿತ್ ರೇ, ಪು.ತಿ.ನ, ಶಿವರಾಮ ಕಾರಂತರಂಥ ಮಹನೀಯರ ಅಪರೂಪದ ಸಂದರ್ಶನಗಳನ್ನು ಅವರ ಮಾತಿನ ವಿವಿಧ ಭಂಗಿಗಳ ಭಾವಚಿತ್ರಗಳೊಂದಿಗೆ ಓದಿದ್ದ್ದು ವಿಶೇಷಾಂಕಗಳಲ್ಲಿ. ದೇವನೂರರ ‘ಒಡಲಾಳ’, ತೇಜಸ್ವಿಯವರ ‘ನಿಗೂಢ ಮನುಷ್ಯರು’, ಭಾರತೀಸುತರ ‘ಎಡಕಲ್ಲು ಗುಡ್ಡದ ಮೇಲೆ’, ಚಂದ್ರಶೇಖರ ಪಾಟೀಲರ ‘ಗುರ್ತಿನವರು’ - ಸಿಕ್ಕಿದ್ದು ವಿಶೇಷಾಂಕಗಳಲ್ಲಿ.

ಆಯಾ ವರುಷದ ಸಾಹಿತ್ಯಿಕ ಸಂದರ್ಭಗಳ ಕುರಿತ ವಿಚಾರ ಮಂಥನಗಳು, ಸಂಗೀತ-ಕಲೆ ಇತ್ಯಾದಿಗಳ ಕುರಿತ ವಿಚಾರ ಮಂಥನಗಳು, ಸಂಗೀತ-ಕಲೆ ಇತ್ಯಾದಿಗಳ ಕುರಿತ ಆಸ್ವಾದಕ ಲೇಖನ ಮಾಲೆಗಳು, ಜತೆ ಹೊಸ ಚಿಗುರು-ಹಳೆ ಬೇರುಗಳ ಕತೆ, ಕವಿತೆಗಳು. ಕನ್ನಡ ನವ್ಯೋತ್ತರ ಪೀಳಿಗೆಯ ಬಹುತೇಕ ಕತೆಗಾರರ ಆರಂಭದ ಆಡುಂಬೊಲ - ಈ ವಿಶೇಷಾಂಕದ ಕಥಾಸ್ಪರ್ಧೆಗಳು. ಬೊಳುವಾರು, ಕುಂ.ವೀ, ಅಶೋಕ ಹೆಗಡೆ, ವಿವೇಕ ಶಾನಭಾಗ, ಮೊಗಳ್ಳಿ ಗಣೇಶ್, ಎಂ.ಎಸ್. ಶ್ರೀರಾಮ್, ಅಮರೇಶ ನುಗಡೋಣಿ, ಎಚ್. ನಾಗವೇಣಿ, ಕೃಷ್ಣಮೂರ್ತಿ ಹನೂರು, ಕಾಳೇಗೌಡ ನಾಗವಾರ, ಎಸ್. ದಿವಾಕರ್, ರಾಘವೇಂದ್ರ ಪಾಟೀಲ, ಮಿತ್ರಾ ವೆಂಕಟರಾಜ, ಶ್ರೀಧರ ಬಳಗಾರ ಮುಂತಾದ ಪ್ರಚಲಿತ ಲೇಖಕರೆಲ್ಲರೂ ಒಂದಲ್ಲಾ ಒಂದು ಹಂತಲ್ಲಿ ವಿಶೇಷಾಂಕಗಳ ಕಥಾಸ್ಪರ್ಧೆಗಳ ವಿಜೇತರೇ.

ಕಳೆದ ಮೂರ‍್ನಾಲ್ಕು ದಶಕಗಳ ಈ ವಿಶೇಷಾಂಕಗಳ ಸ್ಪರ್ಧೆಗಳ ಕಥೆಗಳನ್ನು ಸಂಕಲಿಸಿ, ತೀರ್ಪುಗಾರರ ಟಿಪ್ಪಣಿಗಳೊಂದಿಗೆ ಓದಿಕೊಂಡರೆ ಅದೊಂದು ನಮ್ಮ ಕಥನ ವಿನ್ಯಾಸದ ವಿಕಾಸದ ವಿಶಿಷ್ಟ ದಾಖಲೆಯಾದೀತು. ಮತ್ತು ವಿಶೇಷಾಂಕಗಳ ಸ್ಪರ್ಧೆಗಳೇ ಹೇಗೆ ಕನ್ನಡದ ಕಳೆದೆರಡು ದಶಕಗಳ ಕಥನ ಕಲೆಯನ್ನು ನಿರ್ದೇಶಿಸುತ್ತ ಬಂದಿವೆ ಎಂಬುದು ಮನವರಿಕೆಯಾದೀತು. ಸಾಕ್ಷಿ, ಸಂಕ್ರಮಣ, ಕವಿತಾ, ರುಜುವಾತು, ಶೂದ್ರ, ಸಂವಾದ, ಸಂಚಯ, ಸೃಜನವೇದಿಯಂಥ ಸಾಹಿತ್ಯಿಕ ಪತ್ರಿಕೆಗಳು ರೂಪಿಸಿದ ಸಂವೇದನೆಗಳಿಗೆ ಒಂದು ಬಗೆಯ ಸಾರ್ವಜನಿಕ ಅಧಿಕೃತತೆಯನ್ನು ಕೊಡುವ ಪಾತ್ರವನ್ನು ಕನ್ನಡ ವಿಶೇಷಾಂಕಗಳು ನಿರ್ವಹಿಸಿದವು. ಜತೆಗೆ ಚಿತ್ರಲೇಖನ, ಹವ್ಯಾಸಿ ಛಾಯಾಗ್ರಹಣ, ಪ್ರವಾಸ ಲೇಖನಗಳನ್ನು ಇವು ಪೋಷಿಸಿದವು.

ನಾನು ಮುಂಬಯಿಯಲ್ಲಿದ್ದಾಗ ಅಲ್ಲಿನ ಮರಾಠಿ ದೀಪಾವಳಿ/ಯುಗಾದಿ ವಿಶೇಷಾಂಕಗಳ ಮೋಹಿತನಾಗಿದ್ದೆ. ನಮ್ಮ ಕನ್ನಡದ ವಿಶೇಷಾಂಕಗಳು ಅಬ್ಬಬ್ಬ ಎಂದರೆ ನಾಲ್ಕು ಅಥವಾ ಐದು ಎನ್ನೋಣ. ಮರಾಠಿಯಲ್ಲಿ ಎಷ್ಟು ವಿಶೇಷಾಂಕಗಳು ಇದ್ದಿರಬಹುದು ಊಹಿಸಿ. ಮುನ್ನೂರು ! ಹೌದು ಮುನ್ನೂರಕ್ಕೂ ಮಿಕ್ಕಿದ ಸಂಖ್ಯೆಯಲ್ಲಿ ಮರಾಠಿಯಲ್ಲಿ ದೀಪಾವಳಿ ಸಂಚಿಕೆಗಳು ಎಷ್ಟೋ ವರುಷಗಳಿಂದ ಚಾಲ್ತಿಯಲ್ಲಿವೆ. ಮನೋಹರ್, ಮೌಝ್, ಅಕ್ಷರ್, ಕಿರ್ಲೋಸ್ಕರ್, ಮೇನಕಾ, ಆವಾಝ್, ಕಾಲನಿರ್ಣಯ, ಲಲಿತ, ಹಂಸ, ವಸಂತ, ಸ್ತ್ರೀ, ಅನುರಾಧಾ, ದೀಪೋತ್ಸವ, ಮೋಹಿನಿ...ಇತ್ಯಾದಿ ನೂರಾರು ಆಕರ್ಷಕ ಮೋಹಕ ಸಂಚಿಕೆಗಳು. ಅಂದರೆ ಎಷ್ಟೆಲ್ಲ ಲೇಖಕರಿಗೆ, ಎಷ್ಟೊಂದು ಚಿತ್ರಕಲೆಗಾರರಿಗೆ ಅವಕಾಶ ! ಅವರು ಜನೆವರಿಯಿಂದಲೇ ಮುಂಗಡ ಚೆಕ್‌ಗಳನ್ನು ಕೊಟ್ಟು ಲೇಖಕರನ್ನು ಕಟ್ಟಿ ಹಾಕುತ್ತಾರೆ. ಖ್ಯಾತ ಪತ್ರಿಕೆಗಳ ವಿಶೇಷಾಂಕಗಳು ಒಂದೆಡೆಯಾದರೆ, ಕೇವಲ ದೀಪಾವಳಿ/ಯುಗಾದಿಗೆಂದೇ ವಿಶೇಷಾಂಕ ತರುವ ಪ್ರಕಾಶನ ಸಂಸ್ಥೆಗಳು ನೂರಾರಿವೆ. ಅಂದರೆ ಪುಸ್ತಕ ಪ್ರಕಾಶನ ಸಂಸ್ಥೆಗಳು ಸಹ ವರುಷಕ್ಕೊಂದು ಇಂಥ ಸಂಚಿಕೆಯನ್ನು ರೂಪಿಸುತ್ತವೆ. ಜತೆಗೆ ಹತ್ತಾರು ಗೆಳೆಯರು ಸೇರಿ ಪಾಲುದಾರರಾಗಿ ಕೂಡಿ ವಿಶೇಷಾಂಕವನ್ನು ಹೊರತರುತ್ತಾರೆ. ಮರಾಠಿಯಲ್ಲಿ ಓದುವ ಸಂಸ್ಕೃತಿಯೂ ಚೇತೋಹಾರಿಯಾಗಿದೆ. ಪ್ರತಿ ಗಲ್ಲಿಗಳಲ್ಲಿ ಪುಟ್ಟ ಪುಟ್ಟ ಖಾಸಗಿ ಗ್ರಂಥಾಲಯಗಳಿರುವಂತೆ, ಅಪಾರ್ಟ್‌ಮೆಂಟ್‌ಗಳಲ್ಲಿ ಇರುವ ಫ್ಲಾಟ್‌ಗಳೆಲ್ಲವೂ ವಂತಿಗೆ ಹಾಕಿ ಒಟ್ಟಾಗಿ ನೂರಾರು ವಿಶೇಷಾಂಕಗಳನ್ನು ಕೊಂಡು ಆಮೇಲೆ ವರುಷವಿಡೀ ಹಂಚಿಕೊಂಡು ಓದುತ್ತವೆ. ಖ್ಯಾತನಾಮ ಲೇಖಕರಿಗಂತೂ ಈ ವಿಶೇಷಾಂಕಗಳಿಗೆ ಬರೆದುಕೊಡುವುದರಲ್ಲೇ ಕೈ ಬಿದ್ದು ಹೋಗುತ್ತದೆ. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಈ ದೀಪಾವಳಿ ಸಂಚಿಕೆಗಳ ಹೂರಣ, ಓರಣಗಳಿಗಾಗಿಯೇ ಕೆಲವು ಸಂಸ್ಥೆಗಳು ಸ್ಪರ್ಧೆ ನಡೆಸುತ್ತವೆ. ಅವುಗಳ ಮುಖಪುಟ ವಿನ್ಯಾಸಗಳಿಗೂ ಬಹುಮಾನಗಳಿವೆ. ಮೌಝ್, ಅಕ್ಷರ್, ಮನೋಹರ್ ಇಂಥ ವಿಶೇಷಾಂಕಗಳನ್ನು ತಿರುವಿ ಹಾಕುವುದೇ ಒಂದು ಹಬ್ಬ. ನಾನು ಮುಂಬಯಿಯಲ್ಲಿದ್ದಾಗಲೇ ಸಂಗ್ರಹಿಸಿದ್ದ ಇಂಥ ಕೆಲವು ಸಂಚಿಕೆಗಳ ವಿನ್ಯಾಸವೇ ನನ್ನ ‘ಭಾವನಾ’ ಪತ್ರಿಕೆಯ ರೂಪ ರೇಖೆಗೆ ಸ್ಫೂರ್ತಿಯಾಗಿತ್ತು. ಕವಿತೆಗಳನ್ನು ಬಿಡಿಬಿಡಿಯಾಗಿ ಅನಾಥ ಫಿಲ್ಲರ್‌ಗಳಂತೆ ಬಳಸದೆ ಒಟ್ಟಿಗೇ ಪರಸ್ಪರ ಸಹಯೋಗದಲ್ಲಿ ಬಳಸುವುದನ್ನು ಮರಾಠಿ ಸಂಚಿಕೆಗಳಲ್ಲೇ ನಾನು ಕಂಡಿದ್ದೆ.

ಮರಾಠಿಯಷ್ಟೇ ಪ್ರಭಾವಿಯಾದ ವಿಶೇಷಾಂಕಗಳ ಸಂಸ್ಕೃತಿ ಬಂಗಾಲಿಯಲ್ಲೂ ನಡೆದುಕೊಂಡು ಬಂದಿದೆ. ಅಲ್ಲಿ ಅದು ದುರ್ಗಾಪೂಜಾ ಅಥವಾ ನವರಾತ್ರಿ ವಿಶೇಷಾಂಕವೆಂದು ಪ್ರಸಿದ್ಧ. ಮುನ್ನೂರಕ್ಕೂ ಹೆಚ್ಚು ಅಂಕಗಳು ಅಲ್ಲಿ ಜನಾನುರಾಗ ಗಳಿಸಿವೆ. ಅಲ್ಲಿ ಕಾದಂಬರಿಗಳ ಆಕರ್ಷಣೆ ಹೆಚ್ಚು. ಹೆಚ್ಚು ಕಡಿಮೆ ಪ್ರತಿಯೊಂದು ವಿಶೇಷಾಂಕದಲ್ಲೂ ಕಾದಂಬರಿಯೊಂದು ಅಡಕಗೊಂಡಿರುತ್ತದೆ. ಬಂಗಾಲಿ ಮತ್ತು ಮರಾಠೀ ವಿಶೇಷಾಂಕಗಳ ಮುಖ್ಯ ಆಕರ್ಷಣೆ ಅವುಗಳ ರೇಖಾಚಿತ್ರ ವಿನ್ಯಾಸ. ‘ರೇಖಕ’ರ ಅದ್ಭುತ ಪರಂಪರೆಯನ್ನೇ ಹೊಂದಿರುವ ಬಂಗಾಲಿ ವಿಶೇಷಾಂಕಗಳಲ್ಲಿ ಕಲಕತ್ತೆಯ ನಾಮಾಂಕಿತರ ಸ್ವೋಪಜ್ಞ ಕೊಡುಗೆಗಳಿವೆ. ಸತ್ಯಜಿತ್ ರೇ ಅವರು ‘ಸಂದೇಶ್’ ಪತ್ರಿಕೆಗೂ ಅದರ ವಿಶೇಷಾಂಕಗಳಿಗೂ ರಚಿಸಿದ ರೇಖಾಚಿತ್ರಗಳನ್ನು ಅಭಿಮಾನಿಗಳು ಈಗಲೂ ಕಾದಿರಿಸಿದ್ದಾರೆ. ಅದೇ ಥರ ಮರಾಠಿಯಲ್ಲಿ ಅನಿಲ್ ಆವಚಟ್ ಅವರ ವಿಲಕ್ಷಣ ರೇಖಾಚಿತ್ರಗಳಿಗಾಗಿ, ವಿನ್ಯಾಸಗಳಿಗಾಗಿ ಓದುಗ ವಿಶೇಷಾಂಕಗಳ ಪುಟ ತಿರುವುತ್ತಿರುತ್ತಾನೆ. ಒಂದು ಮರಾಠೀ ಅಥವಾ ಬಂಗಾಲೀ ಕುಟುಂಬ ವರ ಪರೀಕ್ಷೆ ಅಥವಾ ವಧು ಪರೀಕ್ಷೆಯ ಭೇಟಿಯಲ್ಲಿ ಪರಸ್ಪರ ಮನೆತನಗಳ ಅಭಿರುಚಿಯ ತಾಳೆ ನೋಡಲು, ಕಪಾಟಿನಲ್ಲಿರುವ ಪುಸ್ತಕಗಳ ಶೀರ್ಷಿಕೆಗಳ ಜತೆ ಟೀಪಾಯ್ ಮೇಲಿರಿಸಿದ ಚಾಲ್ತೀ ದೀಪಾವಳಿ/ಯುಗಾದಿ ವಿಶೇಷಾಂಕಗಳನ್ನೂ ವಿಶೇಷ ಕಣ್ಣುಗಳಿಂದ ಗಮನಿಸಿದರೆ ಖಂಡಿತ ಆಶ್ಚರ್ಯವಿಲ್ಲ.

ಈ ನಿಟ್ಟಿನಲ್ಲಿ ಕನ್ನಡದಲ್ಲಿ ವಿಶೇಷಾಂಕಗಳ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವ ಅನಿವಾರ್ಯತೆ ಈಗ ಉಂಟಾಗಿದೆ ಅನಿಸುತ್ತಿದೆ. ತುಂಬ ವಾಡಿಕೆಯಾಗಿ ಹೋಗಿರುವ ‘ಸಿಲೆಬಸ್’ ಒಂದರಲ್ಲಿ ವಿಶೇಷಾಂಕಗಳು ಸಿಕ್ಕು ಬಿದ್ದಿವೆ. ಎಂಟು ಕತೆಗಳು, ಹತ್ತು ಕವಿತೆಗಳು, ವರ್ಷ ಭವಿಷ್ಯ, ‘ಮೊದಲ ಬಾರಿ ಮಾವನ ಮನೆಗೆ ಹೋದಾಗ’ ಇಂಥ ತೀರ ಗೊಡ್ಡು ವಿಷಯಗಳ ‘ಓದುಗರ ಅಂಕಣ’ಗಳು, ಕಣ್ಣಿಗೆ ಹಬ್ಬವಾದರೂ ಮನಸ್ಸಿಗೆ ಗ್ರಾಸ ಒದಗಿಸದ ಚಿತ್ರಲೇಖನಗಳು.. ಹೀಗೆ ತುಂಬ ಪ್ರೆಡಿಕ್ಟೆಬಲ್ ಆದ ಸಂಚಿಕೆಗಳ ದಿನಾಂಕದಲ್ಲಿ ಮಾತ್ರ ಬದಲಾವಣೆ ಆಗಿದೆ ಅನಿಸುತ್ತದೆ ಹೊರತು, ಒಬ್ಬ ಓದುಗನನ್ನು ಚಿಂತನಶೀಲನಾಗಿ ಮತ್ತು ಅಷ್ಟೇ ರಂಜನೀಯವಾಗಿ ಕೆಣಕಬಲ್ಲ, ಸೆಳೆಯಬಲ್ಲ, ಸ್ಪಂದನಶೀಲ ಹೊಸತನದ ಹಾಜರಿ ಇಲ್ಲ. ತಾಂತ್ರಿಕತೆ, ವರ್ಣವಿನ್ಯಾಸ, ಫೋಟೋಶಾಪ್, ಗ್ರಾಫಿಕ್ಸ್ ಇತ್ಯಾದಿಗಳು ಎಷ್ಟೋ ಮುಂದುವರೆದಿದ್ದರೂ, ಸಂಚಿಕೆಯ ಹಿಂದೆ ಕೆಲಸ ಮಾಡಿರುವ ಮನಸ್ಸು ಒಂದು ಬಗೆಯ ಕುರುಡು ವ್ಯಾಮೋಹದಲ್ಲಿ ಸಾಹಸಕ್ಕೆ ತೊಡಗದೇ ಹೋದರೆ ಇಂದಿನ ನಿತ್ಯದ ಸಾವಿರ ಸಂಚಾರಿಭಾವಗಳಿಗೆ ಸ್ಪಂದಿಸಬಲ್ಲ ಹೊಸ ಅಭಿವ್ಯಕ್ತಿ ರೂಪಗಳಿಗೆ ಹವಣಿಸದೆ ಹೋದರೆ, ಸಂವೇದನೆಯ ಪರಿಷ್ಕಾರದ ವಿಶೇಷ ಅವಕಾಶವೊಂದನ್ನು ಸುಮ್ಮನೆ ಪೋಲು ಮಾಡಿಕೊಂಡಂತೆ.

ಮುಖ್ಯಧಾರೆಯ ದಿನಪತ್ರಿಕೆಗಳ ವಾರ್ಷಿಕ ವಾಡಿಕೆಯಾಗಿಯೇ ಮುಂದುವರೆದಿರುವ ಈ ಸಂಸ್ಕೃತಿ ತುಸು ಖಾಸಗೀ ಬಳಗಗಳಲ್ಲಿ ಕವಲೊಡೆದರೆ, ಸಣ್ಣ ಸಣ್ಣ ಗೆಳೆಯರ ಆಪ್ತ ಪ್ರಕಾಶನ ಕೂಟಗಳ ಮೂಲಕ ಬೆಳೆದರೆ, ಒಂದು ಹೊಸ ಓದು ಸಂಸ್ಕೃತಿಯನ್ನು ಬೆಳೆಸಬಹುದಾಗಿದೆ. ವರುಷಕ್ಕೆ ಒಂದೇ ಸಂಚಿಕೆಯನ್ನು ರೂಪಿಸುವುದು ಅಂಥ ಕಷ್ಟದ ಸಂಗತಿ ಅಲ್ಲ. ಸಪ್ನಾ, ಅಂಕಿತ, ಅತ್ರಿ, ಗೀತಾ, ಸಾಹಿತ್ಯ ಭಂಡಾರ, ಅಭಿನವ, ಸುಮುಖ, ಮನೋಹರ ಇತ್ಯಾದಿ ಪ್ರಕಾಶನ ಸಂಸ್ಥೆಗಳು ಇಂಥದೊಂದು ಉಪಕ್ರಮ ಆರಂಭಿಸಿದರೆ ಹೊಸ ಬಗೆಯ ಅಲೆಯೊಂದು ಸಾಧ್ಯವಾಗಬಹುದು.

ಬಾಲ್ಯದ ದಿನಗಳನ್ನು ನೆನೆದರೆ ಈ ವಿಶೇಷಾಂಕಗಳು ನಮ್ಮ ಮನೆಯಲ್ಲಿ ನಿಯಮಿತವಾಗಿ ಪ್ರತಿ ವರ್ಷ ಎಬ್ಬಿಸುತ್ತಿದ್ದ ಕೋಲಾಹಲ ನೆನಪಾಗುತ್ತದೆ. ನನ್ನ ತಂದೆಯವರ ಲೇಖನಗಳು ‘ಜನಪ್ರಗತಿ’, ‘ಗೋಕುಲ’, ‘ಕರ್ಮವೀರ’, ‘ಪ್ರಜಾವಾಣಿ’, ‘ರಾಯಭಾರಿ’ ಇತ್ಯಾದಿ ಅಂಕಗಳಲ್ಲಿ ಪ್ರಕಟವಾದಾಗೆಲ್ಲ ಆ ಪತ್ರಿಕೆಯವರು ಗೌರವ ಪ್ರತಿ ಅಂಚೆಯಲ್ಲಿ ಕಳಿಸುವುದಿತ್ತು. ನನ್ನ ತಂದೆ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದುದರಿಂದ ಅಂಚೆ ಸೀದ ಅಲ್ಲಿಗೇ ಹೋಗುತ್ತಿತ್ತು. ಅಲ್ಲಿಂದ ಈ ವಿಶೇಷಾಂಕಗಳು ಮನೆಗೇ ಬರುತ್ತಿರಲಿಲ್ಲ. ಇತರ ಶಿಕ್ಷಕರು ಅದನ್ನು ಓದಲು ಒಯ್ದು ಬಿಡುತ್ತಿದ್ದರು. ಮನೆಯಲ್ಲಿ ರಂಪವೋ ರಂಪ. ಎರಡು ಮೂರು ವಾರದ ತನಕ ಅಮ್ಮ ಅಪ್ಪರ ನಡುವಿನ ಈ ರಂಪ ನಡೆಯುತ್ತಿತ್ತು. ನಂತರ ಕೆಲವು ಮನೆಗಳಿಗೆ ಅಮ್ಮ ನನ್ನನ್ನು ‘ದೀಪಾವಳಿ ವಿಶೇಷಾಂಕ ಕೊಡಬೇಕಂತೆ’-ಎಂದು ಸಂಭಾಷಣೆ ಹೇಳಿಕೊಟ್ಟು ಕಳಿಸಿದ್ದೂ ಇದೆ. ಒಮ್ಮೆ ಯಾರದೋ ಮನೆಗೆ ‘ಚಾ ಪಾರ್ಟಿ’ಗೆ ಹೋದಾಗ ಅವರ ಮನೆಯ ದೊಡ್ಡ ರೇಡಿಯೋದ ಬದಿ ಇದ್ದ ದೀಪಾವಳಿ ಸಂಚಿಕೆಯನ್ನು ತೋರಿಸುತ್ತ ಅಮ್ಮ ‘ಅದು ಖಂಡಿತ ನಮ್ಮದು’.. ಎಂದು ಪಿಸುಗುಟ್ಟಿದ್ದೂ ಇದೆ.

ನನ್ನ ಓದಿನ ರುಚಿ ಹೆಚ್ಚಾಗಿದ್ದೂ ವಿಶೇಷಾಂಕಗಳಿಂದಲೇ. ಗಂಗಾಧರ ಚಿತ್ತಾಲರ ‘ಸಂಪರ್ಕ’, ನಿಸಾರ್ ಅಹಮದರ್ ‘ಕ್ಯಾಕ್ಟಸ್’, ಕೆ.ಎಸ್.ನ ರ ‘ಸಾಕುಮಗ’ ಕವಿತೆಗಳನ್ನು ನಾನು ಮೊದಲ ಬಾರಿಗೆ ಓದಿದ ಜಾಗ, ಬೆಳಕು, ವಾತಾವರಣದ ಗಂಧ, ಒದಗಿದ್ದ ಮೈಮರವು - ಈಗಲೂ ತೀವ್ರವಾಗಿ ಆವರಿಸಿಕೊಳ್ಳುತ್ತವೆ. ಈ ವಿಶೇಷಾಂಕಗಳ ಸ್ಪರ್ಧೆಗಳಿಗೆ ಕಥೆಗಳನ್ನು ಕಳಿಸಿದ ನಂತರ, ಮೂರ‍್ನಾಲ್ಕು ತಿಂಗಳು ಸುಮ್ಮನೆ ಫಲಿತಾಂಶಕ್ಕೆ ಕಾಯುವ ವಿಚಿತ್ರ ಖುಶಿಯೇ ಬೇರೆ. ನನ್ನ ‘ಇದ್ದಾಗ ಇದ್ಧಾಂಗ’ ಕಥೆಗೆ ಬಹುಮಾನ ಬಂದಾಗ, ನಾನೊಬ್ಬನೆ ಮುಂಬೈ ವಿ.ಟಿ.ಯ ಮಾರುತಿ ಲೇನ್‌ನ ಸಾಲ್ಯಾನ್‌ರ ವಿದ್ಯಾನಿಧಿ ಬುಕ್ ಡಿಪೋದಿಂದ ಸಂಚಿಕೆ ಕೊಂಡು ಕಂಪಿಸುವ ಕೈಗಳಲ್ಲಿ ತೆರೆಯುತ್ತ ಫೌಂಟನ್ನಿನಿಂದ ನಾರಿಮನ್ ಪಾಯಿಂಟ್ ತನಕ ನಡೆಯುತ್ತಲೇ ಓದಿಕೊಂಡೇ ಹೋದ ನೆನಪು ಅತ್ಯಂತ ಅಮೂಲ್ಯ. ನಂತರ ಒಂದು ಸಾರ್ವಜನಿಕ ಬೂಥ್‌ನಿಂದ ಚಿತ್ತಾಲರಿಗೆ, ಅರವಿಂದ ನಾಡಕರ್ಣಿ ಅವರಿಗೆ ಫೋನ್ ಮಾಡಿ ತಿಳಿಸಿದ್ದೆ. ನನ್ನ ‘ಕಣ್ಣಿಗೊಂದು ಕ್ಷಿತಿಜ’ ಕಥೆಗೆ ಬಹುಮಾನ ಬಂದಾಗ, ನನ್ನ ತಂದೆ ಕಣ್ಣಿನ ಆಪರೇಷನ್‌ಗೆಂದು ನಾನಾವಟಿಯಲ್ಲಿ ದಾಖಲಾಗಿದ್ದರು. ನಾನು ಸಂಚಿಕೆ ತರಲು ವಾರ್ಲೆ, ಸಾಂತಾಕ್ರೂಜ್, ಅಂಧೇರಿ ಸ್ಟೇಷನ್‌ಗಳಲ್ಲೆಲ್ಲ ಅಲೆದು ಅದು ಸಿಗದೆ ಖಿನ್ನನಾಗಿ ಬಂದಿದ್ದೆ. ಆಪರೇಷನ್‌ಗಿಂತ ಅದೇ ಮಹಾ ದೊಡ್ಡ ಸಂಗತಿಯಾಗಿತ್ತು ನನಗೆ !

ಯಾವ ಪ್ರತಿಸ್ಪಂದನವೂ ಇಲ್ಲದ ಒಂದು ಬಗೆಯ ಮುಕ್ತ ಮಂಬಯಿ ಆವರಣದಲ್ಲಿ ಬರೆಯುತ್ತಿದ್ದವನಿಗೆ ಈ ಬಹುಮಾನಗಳು ಕೊಟ್ಟ ಸ್ಥೈರ್ಯ ಅಂತಿಂಥದಲ್ಲ. ಸ್ಪರ್ಧೆಯ ಹಂತ ದಾಟಿದ ನಂತರ ವಿಶೇಷಾಂಕದ ಸಂಪಾದಕರುಗಳ ಕೋರಿಕೆಯೇ ನನ್ನ ಕತೆಗಾರಿಕೆಗೆ ದೊಡ್ಡ ಕುಮ್ಮಕ್ಕಾಯಿತು. ವರುಷಕ್ಕೆ ಒಂದೆರಡು ಕತೆಗಳು... ಐದು ವರುಷಕ್ಕೆ ಒಂದು ಸಂಕಲನ ! ಇದೇ ನನ್ನ ಬರವಣಿಗೆಯ ಗ್ರಾಫ್ ! ಯಾವ ಮಹಾ ಆಂತರಿಕ ಒತ್ತಡ ತಲ್ಲಣ ಗಿಲ್ಲಣ ಪ್ರೇರಣೆ ಇತ್ಯಾದಿ ನಾನು ಕೊಚ್ಚಿಕೊಳ್ಳುವ ಹಾಗೇ ಇಲ್ಲ. ನನ್ನ ಕಾಲು ಶತಮಾನದ ಕತೆಗಳೆಲ್ಲದರ ಕುಮ್ಮಕ್ಕು ಸಂಪಾದಕರ ಕೋರಿಕೆಯ ಪತ್ರ. ನೆನಪಿಸುವ ಟೆಲಿಗ್ರಾಂಗಳೇ ಆಗಿವೆ. ನನ್ನ ಈ ತನಕದ ಅರುವತ್ತು ಕಥೆಗಳಲ್ಲಿ ತೊಂಭತ್ತೊಂಬತ್ತು ಪ್ರತಿಶತ ಕಥೆಗಳು ಪ್ರಕಟಗೊಂಡಿರುವುದು ದೀಪಾವಳಿ/ಯುಗಾದಿ ವಿಶೇಷಾಂಕಗಳಲ್ಲಿಯೇ ! ಇದನ್ನು ಬರೆಯುತ್ತಿರುವಾಗ ಈ ಅಂಶ ಹಠಾತ್ತನೆ ಹೊಳೆದು ಮೈಜುಮ್ಮೆನ್ನುತ್ತದೆ. ಎಂ.ಬಿ. ಸಿಂಗ್, ವೈ.ಎನ್.ಕೆ., ಈಶ್ವರಯ್ಯ, ರಂಗನಾಥ ರಾವ್, ಲಂಕೇಶ್, ಸಂತೋಷ ಕುಮಾರ್ ಗುಲ್ವಾಡಿ, ಶರತ್ ಕಲ್ಕೋಡ್, ಗುರುರಾಜ್, ಡಾ. ವಿಜಯಮ್ಮ... ಇವರೆಲ್ಲರೂ ತಾವು ರೂಪಿಸಿದ ವಿಶೇಷಾಂಕಗಳ ಮೂಲಕ ನನ್ನ ಕತೆಗಾರಿಕೆಯನ್ನು ಪೋಷಿಸಿದ್ದಾರೆ. ದೀಪಾವಳಿ, ಯುಗಾದಿ ವಿಶೇಷಾಂಕಗಳಿಲ್ಲದೇ ಹೋಗಿದ್ದರೆ ನಾನು ಕತೆಗಳನ್ನು ಖಂಡಿತ ಬರೆಯುತ್ತಿರಲಿಲ್ಲ. ಈ ಪಾತಕದ ಡಿಸ್‌ಕ್ರೆಡಿಟ್ ಖಂಡಿತ ವಿಶೇಷಾಂಕಗಳದ್ದು.

ಹೀಗಾಗಿ ಈಗಲೂ ನನಗೆ ದೀಪಾವಳಿ ಅಥವಾ ಯುಗಾದಿ ಬಂತು ಅಂದರೆ ಅದು ಬರವಣಿಗೆಗೆ ಸಂಬಂಧಿಸಿದ ಒಂದು ಸೂಕ್ಷ್ಮ ಅನಿರ್ವಚನೀಯ ಸಂಭ್ರಮದ ಹಬ್ಬವೆಂದೇ ಅನಿಸುತ್ತದೆ. ಅಂಗಡಿಯವನು ಚಿಲ್ಲರೆ ವಾಪಾಸು ಮಾಡುವಷ್ಟರಲ್ಲೇ ಪರಿವಿಡಿಯ ಪುಟದಲ್ಲಿ ಫಕ್ಕೆಂದು ಮುಳುಗಿಬಿಡುವ ಆ ತಲ್ಲೀನತೆಯ ಸುಖಕ್ಕೆ ಸಾಟಿಯಾದದ್ದು ಇನ್ನೆಲ್ಲಿದೆ?
(ಈ ಸಲದ ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕಕ್ಕೆ ಬರೆದದ್ದು)

6 comments:

Sushrutha Dodderi said...

ನಾವೆಲ್ಲ ಬ್ಲಾಗರ್ಸ್ ಆಗಿ ಇಂತಹ ಪುಳಕಗಳನ್ನ ಮಿಸ್ ಮಾಡ್ಕೊಂಡ್ಬಿಟ್ವಿ ಅನ್ನಿಸ್ತಿದೆ.. :(

ಶ್ರೀನಿಧಿ.ಡಿ.ಎಸ್ said...

ನಾನು ಪ್ರತೀ ಬಾರಿ ಮನೆಗೆ ಹೋದಾಗಲೂ, ಮತ್ತೆ ಮತ್ತೆ ಅಪ್ಪ ೭೦ ರ ದಶಕದಿಂದ ಸಂಗ್ರಹಿಸಿಟ್ಟ ವಿಶೇಷಾಂಕಗಳನ್ನ ತಿರುವಿ ಹಾಕುತ್ತೇನೆ, ಅವುಗಳನ್ನು ಓದುವ ಆನಂದವೇಬೇರೆ.

Anonymous said...

ಆಕಸ್ಮಾತ್ ಲೈಬ್ರರಿ ಯಲ್ಲಿ ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕ್ ಸಿಕ್ಕಿದಾಗಲೇ ನನಗೆ ಈ (ವಿಶೇಷಾಂಕ ಇರುವುದರ)ಬಗ್ಗೆ ಗೊತ್ತಾಗಿದ್ದು.
This article i had to read in the library , since we cannot carry magazines home and like always do, i missed my mumbai.my mummy had a great collection of marathi magazines. off late she has disposed them and has neatly filed some contents(few good stories, but mainly recipes) that she has liked
:-)
this particular 'Bhavana' cover pic is lovely. Raghu, thanks for putting up this post.
:-)
malathi S

ಬಿಸಿಲ ಹನಿ said...

ಅಪಾರವರೆ,
ನಿಜಕ್ಕೂ ನಿಮ್ಮ ಲೇಖನ ಓದಿ ನಾವೆಲ್ಲ ವಿಶೇಷಾಂಕಗಳಿಗೆ ಮನೆಯವರೊಂದಿಗೆ ಕಿತ್ತಾಡಿಕೊಂಡು ಓದಿದ್ದು ನೆನಪಾಯಿತು. ಆದರೆ ಈ ಪೀಳಿಗೆಯವರಿಗೆ ಎಲ್ಲವೂ ಇಂಟರ್ನೆಟ್ ನಲ್ಲಿ ಸಿಗುವದರಿಂದ ಅವರೆಲ್ಲಾ ಈ ಸುಖದಿಂದ ವಂಚಿತರಾದರೆ?

Hari said...

ನಮ್ಮ ಸಂಸ್ಥೆಯ ಕಾರ್ಯಕ್ರಮಕ್ಕೆ ಜಯಂತ ಕಾಯ್ಕಿಣಿಯವರನ್ನು ಆಹ್ವಾನಿಸಿದಾಗ ನಡೆದ ಸಂಭಾಷಣೆಯಲ್ಲಿ ಕಾಯ್ಕಿಣಿಯವರು ವಿಶೇಷಾಂಕಗಳ ಬಗ್ಗೆ ಪ್ರಸ್ತಾಪಿಸಿ ಮರಾಠಿ ಹಾಗು ಬಂಗಾಲಿಯಲ್ಲಿನ ವಿಶೇಷಾಂಕಗಳ ವಿಶೇಷತೆಯ ಬಗ್ಗೆ ಹೇಳಿದ್ದರು. ಆ ಮಾತುಗಳು ಸ್ಮರಣೆಗೆ ಬಂದವು.
ಕನ್ನಡದಲ್ಲೂ ಅಷ್ಟೊಂದು ವಿಶೇಷಾಂಕಗಳು ಒಂದು ದಿನ ಬರಬಹುದೇ?

ಕಾಣದ ಕಡಲಿಗೆ ಹಂಬಲಿಸಿದೇ ಮನ...
ಕಾಣಬಲ್ಲೆನೇ ಒಂದು ದಿನ...
ಕಡಲನು ಸೇರಬಲ್ಲೆನೇ ಒಂದು ದಿನ..

ಗುರು. said...

ಕಾಲೇಜಿನ ದಿನಗಳಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ ಗೋಡೆಪತ್ರಿಕೆ ಪ್ರಕಟಿಸುತ್ತಿದ್ದ ಸ್ನೇಹಿತರೆಲ್ಲ, ಕಾಲೇಜಿನಿಂದ ಹೊರಬಿದ್ದ ಮೇಲೆ ಈ-ಮ್ಯಾಗಜೀನ್ ಒಂದನ್ನು ತರುತ್ತಿದ್ದೇವೆ. ಪ್ರತಿ ಹದಿನೈದು ದಿನಕ್ಕೊಂದು ಸಂಚಿಕೆ ತರುವುದು ಅಸಾಧ್ಯವಾದದ್ದರಿಂದ ನಮ್ಮ ಪತ್ರಿಕೆ ದೀಪಾವಳಿ ವಿಶೇಷಾಂಕವಾಗಿ (ವಿಶೇಷಾಂಕವೂ ಅದೇ, ಅವಿಶೇಷಾಂಕವೂ ಅದೇ !!) ಹೊರಬರುತ್ತಿದೆ. ಕಳೆದ ವರುಷಗಳ ಸಂಚಿಕೆಗಳು :
http://spandanasanchike.files.wordpress.com/2008/10/spandana_02_kannada_e_mag.pdf
http://spandanasanchike.files.wordpress.com/2008/10/spandana_03_kannada_e_mag.pdf
http://spandanasanchike.files.wordpress.com/2008/10/spandana_04_kannada_e_mag.pdf
http://spandanasanchike.files.wordpress.com/2008/10/spandana_05_kannada_e_mag.pdf
http://spandanasanchike.files.wordpress.com/2008/10/spandana_06_kannada_e_mag.pdf
http://spandanasanchike.files.wordpress.com/2008/10/spandana_07_kannada_e_mag.pdf
http://spandanasanchike.files.wordpress.com/2008/10/spandana_08_kannada_e_mag.pdf

'ದೀಪಾವಳಿ ವಿಶೇಷಾಂಕ'ಎಂದ ತಕ್ಷಣ ಕೈ ತುರಿಸಿದ್ದಕ್ಕೆ ಕಾಮೆಂಟು ಬರೆದೆ. ನಮ್ಮ ಸ್ಪಂದನದ ಡಂಗುರ ಸಾರುತ್ತಿದ್ದೇನೆ ಎನ್ನಿಸಿದರೆ ಕ್ಷಮಿಸಿ..

-ಗುರು