Saturday, June 20, 2009

ಒಂದು ಹಾಡಿನ ಪಾತ್ರ

ಮುಂಗೈವರೆಗೆ ಬಿಳಿಯ ಉಡುಪು ತೊಟ್ಟ ಅನಾರ್ಕಲಿ ತುಂಬಿದ ದರ್ಬಾರಿನಲ್ಲಿ ಸಿಂಗಾರಗೊಂಡು ನಿಂತಿದ್ದಾಳೆ. ಚರ್ಕವರ್ತಿ ಅಕ್ಬರನ ಮಗನನ್ನು ಪ್ರೇಮಿಸಿದ ನರ್ತಕಿ ಅವಳು. ಆ ತಪ್ಪಿಗಾಗಿ ಸಂಕೋಲೆಗಳಲ್ಲಿ ಬಂದಿಯಾಗಿ ‘ಮೊಹಬ್ಬತ್ ಕೀ ಝೂಟಿ ಕಹಾನಿ ಪೆ ರೋಯೆ’ ಎಂದು ಸ್ಪಲ್ಪ ಹೊತ್ತಿನ ಹಿಂದೆ ಕಣ್ಣೀರು ಹಾಕುತ್ತಿದ್ದಾಕೆ ಅವಳೇನೆ? ಈ ನೃತ್ಯದ ನಂತರ ಅವಳು ಮತ್ತೆಲ್ಲೂ ಯಾರಿಗೂ ಕಾಣಿಸಿಕೊಳ್ಳದಂತೆ ಮರೆಯಾಗಬೇಕಿದೆ. ಹಾಗೆಂದು ಒತ್ತಡ ಹೇರಿ ಈಗ ಸಿಂಹಾಸನದ ಮೇಲೆ ನರ್ತನ ಆಸ್ವಾದಿಸುತ್ತಾ ಕೂತಿರುವ ಅಕ್ಬರನ ತುಟಿಯಲ್ಲಿ ಕಿರುನಗೆ. ಅವನಿಗೆ ಗೊತ್ತಿಲ್ಲ, ಆ ಒಂದು ಗಳಿಗೆಯಲ್ಲಿ ಅನಾರ್ಕಲಿ ತನ್ನೆಲ್ಲ ಭಯಗಳನ್ನು ದೂರಗೊಳಿಸಲು ನಿರ್ಧರಿಸಿದ್ದಾಳೆಂದು!
ತುಂಬಿದ ಸಭೆಯಲ್ಲಿ ಚಕ್ರವರ್ತಿಯ ಎದುರು ನಿಂತು ‘ಜಾನ್ ಬಿ ಲೇಲೇ ಚಾಹೆ ಜಮಾನಾ’ ಎನ್ನುವ ಅವಳ ಧೈರ್ಯವೇನು? ಮೌತ್ ವಹೀ ಜೋ ದುನಿಯಾ ದೇಖೆ, ಘುಟ್ ಘುಟ್ ಕೆ ಯೂ ಮರ್‍ನಾ ಕ್ಯಾ’ ಎಂದು ತೀರಾ ಸನಿಹಕ್ಕೆ ಹೋಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ಹೇಳುವ ಉದ್ಧಟತನವೇನು? ಈ ಧೈರ್ಯ, ಉದ್ಧಟತನಗಳನ್ನು ಹಾಡು ಮತ್ತು ನೃತ್ಯದ ಭಂಗಿಗಳಲ್ಲದೆ ಯಾವ ಡೈಲಾಗಿನಲ್ಲಾದರೂ ಅಷ್ಟು ಪರಿಣಾಮಕಾರಿಯಾಗಿ ತೋರಿಸಲಾಗುತ್ತಿತ್ತೆ? ತಾರಸಿಯ ಕನ್ನಡಿಗಳ ಮೇಲೆ ಕಾಣುವ ಅವಳ ಸಾವಿರಾರು ಚೂರುಬಿಂಬಗಳನ್ನು ನೋಡಲು ತಲೆಎತ್ತಿರುವ ಅಕ್ಬರನ ಮುಖವೆಷ್ಟು ಕಪ್ಪಿಟ್ಟಿದೆ! ಇನ್ನೊಂದು ಸಿಂಹಾಸನದ ಮೇಲೆ ಕುಳಿತಿರುವ ಸಲೀಂನ ಪ್ರೀತಿಯೂ ಇದೇ ಅಮೃತ ಗಳಿಗೆಯಲ್ಲಿ ಗಟ್ಟಿಗೊಂಡಿತೆ? ನೃತ್ಯ ಮುಗಿಸಿ ಸ್ತಬ್ಧಗೊಂಡಾಗ ತಿರುಗಿ ಬಿದ್ದು ಸದ್ದು ಮಾಡುವ ಅನಾರ್ಕಲಿಯ ಉಡುಪಿನ ಮಣಿಗಳೂ ಅವಳ ಆವೇಶದ ಒಂದು ಭಾಗವನ್ನು ಪಡೆದುಕೊಂಡಂತಿವೆ. ಮತ್ತೆ ಸೆರೆಮನೆಗೆ ಅಟ್ಟಿದ ಚಕ್ರವರ್ತಿಗೆ ಅವಳು ಬಾಗಿ ನಿಂತು, ಕೇವಲ ತೋಳನ್ನಷ್ಟೇ ಚಲಿಸಿ ಮೂರು ಬಾರಿ ಮಾಡುವ ಸಲಾಂನಲ್ಲೂ ಎಂಥ ಸ್ಪಷ್ಟ ಸಂದೇಶವಿದೆ!
ಹಾಲಿವುಡ್ ಚಿತ್ರಗಳಲ್ಲಿ ಹಾಡು ಕುಣಿತಗಳಿಲ್ಲ ಎಂಬುದನ್ನು ಉದಾಹರಿಸುತ್ತಾ, ನಮ್ಮ ಸಿನಿಮಾಗಳಲ್ಲಿರುವ ಹಾಡಿನ ಸನ್ನಿವೇಶಗಳನ್ನು ಅಗ್ಗದ ಮನರಂಜನೆ ಎಂಬಂತೆ ನಾವು ಭಾವಿಸುತ್ತೇವೆ. ಕತೆಯ ನಡುವಿನ ಅಡ್ಡಿಗಳೆಂದು ತಿಳಿಯುತ್ತೇವೆ. ನಮ್ಮ ಬಹುತೇಕ ನಿರ್ದೇಶಕರು ಹಾಡುಗಳನ್ನು ಬಳಸಿಕೊಳ್ಳುವುದೂ ಹಾಗೆಯೇ. ಆದರೆ ‘ಮೊಘಲ್ ಎ ಆಜಮ್ ’ ಸಿನಿಮಾದ ‘ಪ್ಯಾರ್ ಕಿಯಾ ತೊ ಡರ್‌ನಾ ಕ್ಯಾ’ ಹಾಡು ಆ ಇಡೀ ಕತೆಯನ್ನು ನಿರ್ದೇಶಿಸುವಷ್ಟು ಪ್ರಭಾವಶಾಲಿಯಾಗಿದೆ. ಈ ಹಾಡಿನಲ್ಲಿ ಹೇಳಿದ್ದನ್ನು ಸಂಭಾಷಣೆಯಿರುವ ಒಂದು ದೃಶ್ಯದಲ್ಲಿ ಹೇಳಲು ಆಗುತ್ತಲೇ ಇರಲಿಲ್ಲ ಎನಿಸುತ್ತದೆ. ಎಷ್ಟೋ ದಿನಗಳಾದ ಮೇಲೂ ಈ ಹಾಡು ನನ್ನನ್ನು ಬಿಡುತ್ತಿಲ್ಲ.

3 comments:

ಮಲ್ಲಿಕಾರ್ಜುನ.ಡಿ.ಜಿ. said...

ತೆಲುಗಿನಲ್ಲಿ "ಕೋದಮಸಿಂಹಂ" ಎಂಬ ಕೌಬಾಯ್ ಚಿತ್ರ ಬಂದಿತ್ತು. ತೆಲುಗು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆಗೆದಿದ್ದರು. ಚಿರಂಜೀವಿಯದ್ದು. ಇಂಗ್ಲೀಷ್ ಚಿತ್ರ ಅಂದರೆ ತೆಲುಗು ಚಿತ್ರ ಮೈನಸ್ ಹಾಡುಗಳು ಅಷ್ಟೆ! ಅಂದರೆ ಹಾಡಿಲ್ಲದಿದ್ರೂ ಚಿತ್ರ ನಡೆಯುತ್ತೆ! ಆದರೆ ನೀವು ಬರೆದಿರುವ "ಪ್ಯಾರ್ ಕಿಯಾತೋ ಡರ್ ನಾಕ್ಯಾ..." ಇಲ್ಲದಿದ್ರೆ ಆ ಚಿತ್ರವೇ ಇಲ್ಲ. ಈ ರೀತಿಯ ಶಕ್ತಿಶಾಲಿ ಹಾಡುಗಳ ಸರಣಿ ಪೋಣಿಸಿ.

sunaath said...

ಇದೇ ರೀತಿಯಲ್ಲಿ ‘ಅನಾಡಿ’ ಸಿನಿಮಾದ "ಕಿಸೀಕೆ ಮುಸ್ಕುರಾಹಟೋ ಪೆ ಜೀ ಉಠಾ..." ಹಾಡಿನ ಬಗೆಗೂ ಹೇಳಬಹುದು.

Keshav.Kulkarni said...

ನಿಜ, ಹಾಡಿನ ಮೂಲಕ ದೃಶ್ಯ ಕಟ್ಟುವ ಕಲೆ ತುಂಬ ಕಠಿಣ. ನೀವು ಬರೆದಿರುವ ಹಾಡು ಅದಕ್ಕೆ ಅದ್ಭುತ ಉದಾಹರಣೆ.