Wednesday, July 22, 2009

ಒಂದು ಕ್ಷಣದ(ಯುಗದ?) ಮೌನ

ಪ್ರಿಯ ಗಾಯಕಿ ಗಂಗೂಬಾಯಿ ಹಾನಗಲ್ ಇನ್ನಿಲ್ಲ. ಇನ್ನಿಲ್ಲವೆಂದರೂ ಅವರ ಹಾಡುಗಳಿವೆ. ಹಾಡು ಮುಗಿದರೂ ಉಳಿವ ಸ್ವರ ಕಂಪನದಂತೆ ಅವರಿದ್ದಾರೆ- ನಮ್ಮ ಎದೆಯಲ್ಲಿ. ಅವರ ಗುಂಗಿನಲ್ಲಿ ಕವಿ ಎಸ್ ಮಂಜುನಾಥ್ ಹಿಂದೆ ಬರೆದಿದ್ದ ಕವಿತೆಯೊಂದನ್ನು ತೆರೆದು ಓದಿದೆ. ಅದು ಈ ಕೆಳಗಿದೆ.

ಭೈರವಿಯ ಹಾಡಲು ಗಂಗವ್ವ

ಎಂಥ ಬೆಳ್ಳಿಯ ಚಂದ್ರ
ಶಿವನ ಮುಡಿಯಲ್ಲಿರಲು ಯೋಗ್ಯ
ಶಿವನೆಲ್ಲಿ?
ನಕ್ಷತ್ರವೆಲ್ಲೆಲ್ಲು ಬೀಳುತಿವೆ ಉದುರುದುರಿ
ಕೀಳುತಿರುವವರು ಯಾರು?
ಮಿಂಚಿನ ಬಳ್ಳಿಯನ್ನೆಳೆದಿರುವರು ಧರೆಗೆ
ಬಾನಂಚಿಗೆ ಕೆಂಪು ಬಳಿದು ತೊಡೆದು
ಕತ್ತಲಗೊಳಿಸಿರುವರು
ಮತ್ತೆ ಅದ ಚಲಿಸಿರುವರು
ಯಾರು ಈ ಭುವಿಯನ್ನೊಮ್ಮೆ ಮೀಟಿಬಿಟ್ಟರು?

ಭೈರವಿಯ ಹಾಡಲು ಗಂಗವ್ವ
ದಿಕ್ಕುಗಳ ಎಂಟೆದೆಯು ಸೀಳಿರುವುದು
ಬೆಳಕಿನ ಒಡಲುಗಿದು ಕಾವು
ದಳದಳವಾಗಿ ಅರಳಿರುವುದು

ತಾಯ ಮಾರಿಮುಖ ತೋರಿರುವುದು
ಭಯದ ದಯೆ ನಿಡಿದಾಗಿ ಚಾಚಿರುವುದು

3 comments:

sunaath said...

ಒಳ್ಳೆಯ ಫೋಟೋ ಹಾಗೂ ಒಳ್ಳೆಯ ಕವನ.
ಧನ್ಯವಾದಗಳು.

Ittigecement said...

ತುಂಬಾ ಚೆನ್ನಾಗಿದೆ..
ಕವನ...

Jayalaxmi said...

ನಕ್ಷತ್ರವೆಲ್ಲೆಲ್ಲು ಬೀಳುತಿವೆ ಉದುರುದುರಿ
ಕೀಳುತಿರುವವರು ಯಾರು?...
ಈ ಸಾಲುಗಳು ತುಂಬಾ ಇಷ್ಟವಾದವು ಅಪಾರ ಅವರೆ.ಗಂಗಜ್ಜಿ ತೆರಳಿದರೂ ಶಿವನ ಮನೆಗೆ ಆಕೆಯ ಗಾಯನ ನಮ್ಮೊಂದಿಗಿರುತ್ತಲ್ಲ, ಆ ಕಾರಣದಿಂದಲೇ ಎಲ್ಲರಿಗೂ ಅವರು ನಮ್ಮವರು ಎನಿಸುವುದು.