Monday, July 20, 2009

ಕೈ ಮೀರಿದ ಬದುಕು

ನಾಲ್ಕು ದಿನ ಚಿತ್ರ ಬಿಡಿಸುವ ಹುಮ್ಮಸ್ಸಿನಲ್ಲಿ ಕೂರುತ್ತೇವೆ. ಎರಡು ವಾರ ಕೊಳಲು ಕಲಿಯುತ್ತೇನೆಂದು ಓಡಾಡುತ್ತೇವೆ. ಒಂದಷ್ಟು ದಿನ ಸಿನಿಮಾ ಸ್ಕ್ರಿಪ್ಟ್ ಮಾಡುತ್ತೇನೆಂದು ಹೇಳುತ್ತೇವೆ. ಕೆಲ ದಿನಗಳಲ್ಲೇ ಬೋರಾಗಿ ಇವೆಲ್ಲಾ ಅಟ್ಟ ಸೇರುತ್ತವೆ. ಹಾಗೆ ನಮಗೆ ಬೋರಾದೊಡನೆ ನಿಲ್ಲದೆ ಉಳಿಯುವ ಸಂಗತಿಯೆಂದರೆ ಬದುಕು ಮಾತ್ರ.(ಆತ್ಮಹತ್ಯೆ ಮಾಡಿಕೊಳ್ಳುವ ಕೆಲವರನ್ನು ಬಿಡಿ) ಎಷ್ಟೇ ಬೋರಾದರೂ ಯಾವುದೋ ಒಂದು ದಿಕ್ಕಿನಲ್ಲಿ ಅದು ನಡೆದೇ ಇರುತ್ತದೆ. ನಿರ್ಧಾರ ಕೈಗೊಳ್ಳಬೇಕಾದ ಕಡೆ ನಾವು ಅನಾಸಕ್ತಿ ತೋರಿಸಿ ಸುಮ್ಮನುಳಿದರೂ ಅದೇ ನಮ್ಮ ನಿರ್ಧಾರ ಎಂದು ಬಗೆದು ಬದುಕು ಮುನ್ನಡೆಯುತ್ತಲೇ ಇರುತ್ತದೆ. ಮತ್ತೆ ಹದಿನೈದು ಇಪ್ಪತ್ತು ವರ್ಷ ಬಿಟ್ಟು ನೋಡಿದರೆ ಅರೆ ಎಲ್ಲೋ ಬಂದು ನಿಂತಿದ್ದೇನಲ್ಲ, ಪರವಾಗಿಲ್ಲ ಎನಿಸಿಬಿಡುತ್ತದೆ.
ಅಪ್ಪ ಅಮ್ಮ ಕೆಲಸ ಒಂದೂ ಇಲ್ಲದ ಹುಡುಗನಿಗೆ ಯಾರದೋ ಉತ್ಸಾಹದಿಂದ ಒಂದು ಮದುವೆ ಅಂತ ಆಗಿಬಿಡುತ್ತದೆ. ಅವಳೂ ಅವನಷ್ಟೇ ಸಾಮಾನ್ಯ ಹುಡುಗಿ. ಯಾರದೋ ಶಿಫಾರಸಿನಿಂದ ಕಿರಾಣಿ ಅಂಗಡಿಯೊಂದರಲ್ಲಿ ಸಿಕ್ಕ ಕೆಲಸ. ತಂತಾನೇ ಆದ ಮಕ್ಕಳು. ಬದಲಾದ ಪುಟ್ಟ ಗೂಡುಗಳಂಥ ಬಾಡಿಗೆ ಮನೆಗಳು. ಐದನೇ ಕ್ಲಾಸಾದ ಮೇಲೆ ಆರನೇ ಕ್ಲಾಸು ಅಂತ ಸರಕಾರಿ ಸ್ಕೂಲಿಗೆ ಹೋಗುತ್ತಿರುವ ಮಕ್ಕಳು. ಹೀಗೇ ೨೪ ವರ್ಷ ಉರುಳಿದ ಮೇಲೆ ನೋಡಿದರೆ ಅವನ ಪ್ರಯತ್ನಗಳ ಹಂಗಿಲ್ಲದೆ ಬದುಕು ತನ್ನಷ್ಟಕ್ಕೆ ಒಂದು ವಿಶಿಷ್ಟ ವಿನ್ಯಾಸವನ್ನು ಪಡೆದುಕೊಂಡು ಎದುರು ನಿಂತಿದೆ. ಕನಸಿನಲ್ಲೆಂಬಂತೆ ಮಗಳು ಸಾಫ್ಟ್‌ವೇರ್ ಇಂಜಿನಿಯರಾಗಿಬಿಟ್ಟಿದ್ದಾಳೆ. ನಾನು ಕಷ್ಟಪಟ್ಟು ಓದಿಸಿದೆ ಅಂತ ಹೇಳಬಹುದೆ ಎಂಬ ಗೊಂದಲ ಅವನಿಗೆ? ಇದೆಲ್ಲಾ ನನ್ನ ಕೈ ಮೀರಿ ಆಯಿತು ಎಂಬ ಅನುಮಾನ. ಹೌದು ಒಳ್ಳೆಯ ಸಂಗತಿಗಳೂ ನಮ್ಮ ಕೈ ಮೀರಿ ಆಗುತ್ತವೆ. ಬದುಕಲು ಅದಕ್ಕಿಂತ ಒಳ್ಳೆಯ ಕಾರಣ ಬೇಕೆ?
ಕತೆ ಬರೆಯುವ ಪ್ರಕ್ರಿಯೆಯ ಬಗ್ಗೆ ನೆಚ್ಚಿನ ಕತೆಗಾರರೊಬ್ಬರು ಹೇಳಿದ್ದು ನೆನಪಾಗುತ್ತಿದೆ. ಕತೆಯ ಮೊದಲ ಸಾಲು ಬರೆದಾಗ ಮುಂದೇನಾಗುತ್ತದೆ ಎಂಬುದು ನನಗೆ ಗೊತ್ತಿರುವುದಿಲ್ಲ ಎಂದಿದ್ದರು ಅವರು. ‘ಅವಳು ಆಫೀಸಿನಿಂದ ಹೊರಬಿದ್ದು ರಸ್ತೆ ದಾಟಿದಾಗ ಸರಿಯಾಗಿ ಒಂಭತ್ತು ಹೊಡೆದಿತ್ತು’ ಅಂತ ಕಾಗದದ ಮೇಲೆ ಮೊದಲ ಸಾಲು ಬರೆದು ಮುಗಿಸಿದ ಮೇಲೇ ಅವಳೀಗ ಎಲ್ಲಿ ಹೋಗುವಳು? ಮನೆಯಲ್ಲಿ ಕಾಯುತ್ತಿರಬಹುದಾದವರು ಯಾರು? ಎಂಬೆಲ್ಲಾ ಪ್ರಶ್ನೆಗಳು ಹುಟ್ಟುತ್ತವೆ. ಹೀಗೆ ಆ ಒಂದು ಸಾಲು ಮುಂದಿನ ಸಾಲನ್ನು ನಿರ್ದೇಶಿಸುತ್ತದೆ. ಪೇಂಟಿಂಗ್ ಮಾಡುವಾಗ ಬ್ರಶ್‌ನ ಒಂದು ಸ್ಟ್ರೋಕ್ ಮುಂದಿನದನ್ನು ಪ್ರೇರೇಪಿಸುತ್ತಾ ಕಡೆಗೆ ಕಲಾವಿದನಿಗೆ ಗೊತ್ತಿರದ ಆಕಾರವನ್ನು ಪಡೆಯುವಂತೆ.
ಕಲೆಯಲ್ಲಿ ಹಾಗಾಗುವುದಾದರೆ ಬದುಕಿನಲ್ಲಿ ಹಾಗಾಗದೆ ಏನು? ಕಲೆ ಬದುಕಿನ ಪ್ರತಿಬಿಂಬವೇ ತಾನೆ? ಈ ಕೈ ಮೀರಿ ಆಗುವ ಒಳ್ಳೆ ಸಂಗತಿಗಳು ಮನಸಿಗೆ ಎಂಥದೋ ಮುದ ನೀಡುತ್ತವೆ. ಎಷ್ಟೋ ವರ್ಷಗಳ ನಂತರ ಮದುವೆಯೊಂದರಲ್ಲಿ ಸಂಬಂಕರನ್ನು ಭೇಟಿಯಾಗಿ ಬಸ್ಸಿನಲ್ಲಿ ಮನೆಗೆ ಮರಳುತ್ತಿರುವಾಗ ಹೀಗೆಲ್ಲಾ ಅನಿಸಿತು.

9 comments:

Anonymous said...

:-)
Life imitates art????!!!!
ms

Unknown said...

chennaagide
-g n mohan

ಮಲ್ಲಿಕಾರ್ಜುನ.ಡಿ.ಜಿ. said...

ಈ ರೀತಿಯ ಆಲೋಚನೆಯೇ ಸುಂದರ. ಬಾಟಿಲಿನ ಒಳಗೆ ಚೀಟಿಯಿಟ್ಟು ಬಿರಡೆ ಮುಚ್ಚಿ ಎಸೆದಾಗ ಅದನ್ನು ನೀರ ಅಲೆಗಳು ಹೊತ್ತು ಎಲ್ಲೆಲ್ಲೋ ಒಯ್ದು ಯಾರದ್ದೋ ಅಮೃತಹಸ್ತಕ್ಕೆ ಸಿಕ್ಕು....

Unknown said...

ಸಾರ್, ತುಂಬಾ ಚೆನ್ನಾಗಿ ಬರೆಯುತ್ತೀರಿ.

Pramod said...

Sweet write up

suresh kota said...

ಎಷ್ಟೊಂದು ನಿಜ!
ಅಪಾರ, ನೀವು ಚೆಂದ ಬರೀತೀರಿ ಕೂಡ

ಸುಪ್ತದೀಪ್ತಿ said...

ಎಂದೂ ಯಾರಿಗೂ ಕಾಯದ ಬದುಕಿನ ನಿಗೂಢತೆಯೇ ಅದರ ಅಂದವೂ, ಅಲ್ವಾ? ಕಲೆಗಾರಿಕೆ ಬದುಕಿನ ಪ್ರತಿಬಿಂಬ, ಸತ್ಯ.
ಲೇಖನ ತುಂಬಾ ಇಷ್ಟವಾಯ್ತು. ವಂದನೆಗಳು.

ಅನಿಕೇತನ ಸುನಿಲ್ said...

Geleya Appara,
Hey eshtu chendaagi bardideera......summane heegella annistu anta...eneno anniso haage bardideera....truly..mansige muttitu.
Thanks a lot....
Sunil.

Anonymous said...

ತುಂಬಾ ಚೆನ್ನಾಗಿದೆ..
ನೀವಂದದ್ದು ನಿಜ. ಮೊದಲ ಸಾಲು ಮುಂದಿನ ಸಾಲನ್ನು ನಿರ್ದೇಶಿಸುತ್ತದೆ. ಕತೆಗೊಂದೇ ಅಲ್ಲ ಬದುಕಿಗೂ ಸಹ..
ಬದುಕು ಅದರಾಚೆಗೂ ಸಹ ಸುಂದರವಾಗಿ ಕಾಣುತ್ತದಂತೆ 'ನೋಡಿದರೆ'!. ಇಲ್ಲೆರಡು ಸಾಲುಗಳಿವೆ ನೋಡಿ: ... ಈಕೆ ನನ್ನ ಅಮ್ಮ ಸುಂದರಿ ಅಲ್ಲವಾ? ಅನ್ನುತ್ತಾ ಫೋಟೋಕ್ಕಂಟಿದ ಧೂಳು ವರೆಸಿದ. ನೋಡಿದರೆ 'ದೊಡ್ಡ ಕುಂಕುಮದ, ಉರೂಟು ಮುಖದ, ದೊಡ್ಡ ಕಣ್ಣುಗಳ ಆ ಹೆಂಗಸು ನಗು ಕಲಿಸುವ ಮಾಸ್ತರಿಣಿಯಂತೆ ಕುಳಿತಿದ್ದಳು'
ಕಲ್ಲರೆ,