Tuesday, June 16, 2009

ಮನಸಿಗೆ ಬಂದವಳು

ಇದು ಕವಿ ಜಯಂತ್ ಕಾಯ್ಕಿಣಿ ಬರೆದ ಮೊದಲ ಗೀತೆ ಎನ್ನಬಹುದು।

`ಅನುರಾಗ' ಎಂಬ ಭಾವಗೀತೆಗಳ ಕ್ಯಾಸೆಟ್‌ ಒಂದಿದೆ। ಸಿ ಅಶ್ವಥ್‌ ಸಂಗೀತ ನೀಡಿದ್ದ ಆ ಕ್ಯಾಸೆಟ್‌ನಲ್ಲಿ ಹಲವು ತರುಣ ಕವಿಗಳು ಬರೆದ ಗೀತೆಗಳಿದ್ದವು। ಅದರಲ್ಲಿದ್ದ ಎಲ್ಲ ಗೀತೆಗಳನ್ನು ಹಾಡಿದ್ದವರು ನಮ್ಮ ಪ್ರೀತಿಯ ರಾಜ್‌ಕುಮಾರ್! `ಅನಿಸುತಿದೆ'ಗಿಂತ ಬಹಳ ಹಿಂದೆ ಜಯಂತ್‌ ಬರೆದ ಈ ಚೆನ್ನಾದ ಕವಿತೆಯನ್ನು ಓದಿ ಆನಂದಿಸಿ, ಇದರಲ್ಲಿ ನಿಮಗೆ ಬಹು ಇಷ್ಟವಾದ ಸಾಲು ಯಾವುದು ಅಂತ ಹೇಳಿ। ಹಾಡನ್ನು ಕೇಳಬೇಕೆಂದಿದ್ದರೆ ಕನ್ನಡ ಆಡಿಯೋ ಡಾಟ್ ಕಾಮ್‌ಗೆ ಹೋಗಿ .

ಕಣ್ಣಿಗೆ ಬಂದವಳು

ಕನಸಿಗೆ ಬಾರದಿರುವೆಯಾ

ಮಾತಿಗೆ ಬಂದವಳು

ಮನಸಿಗೆ ಬಾರದಿರುವೆಯಾ

*

ಗಾಯವೆಲ್ಲ ಮಾಯುವಂಥ

ರಾತ್ರಿಯೊಂದು ಕನಸೇ

ದಳದಳಗಳ ನೋವಿನಲ್ಲಿ

ಅರಳಿನಿಂತ ಮನಸೇ

ತಂಗಾಳಿಯ ಕರೆಯೇ

ಹೊಸಲೋಕವ ತೆರೆಯೇ

ಕೊನೆಗೂ ಬಂದವಳು

ಬೆಳಗು ತಾರದಿರುವೆಯಾ

*

ಬಾಯಾರಿದ ಬಿಸಿಲಿನಲ್ಲಿ

ಹೊಸ ಹಗಲ ತೇರು

ಎಳೆಯದೇ ದಾರಿಯಲ್ಲಿ

ಬಿಟ್ಟು ಹೋದವರಾರು?

ಹುಚ್ಚು ನೂರು ಸಂತೆ

ನೆಚ್ಚಿ ಕಾದು ನಿಂತೆ

ಸಖ ಎಂದವಳು

ಮುಖ ತೋರದಿರುವೆಯಾ?

*

ಕಣ್ಣಿಗೆ ಬಂದವಳು

ಕನಸಿಗೆ ಬಾರದಿರುವೆಯಾ

ಮಾತಿಗೆ ಬಂದವಳು

ಮನಸಿಗೆ ಬಾರದಿರುವೆಯಾ?

6 comments:

ಹರೀಶ್ ಕೇರ said...

ಅಲ್ಲಿ ಇಲ್ಲಿ ಹೋದರೂ
ಬ್ಲಾಗಿಗೆ ಬಾರದಿರುವೆಯಾ
ಮೂರು ತಿಂಗಳು ಕಳೆದರೂ
ಪೋಸ್ಟು ಹಾಕದಿರುವೆಯಾ
- ಹರೀಶ್ ಕೇರ

ಸಂದೀಪ್ ಕಾಮತ್ said...

ಹರೀಶ್ ಕೇರರವರ ಸಾಲೇ ಚೆನ್ನಾಗಿದೆ;)

ಸುಧನ್ವಾ ದೇರಾಜೆ. said...

ಗಾಯವೆಲ್ಲ ಮಾಯುವಂಥ
ರಾತ್ರಿಯೊಂದು ಕನಸೇ
ದಳದಳಗಳ ನೋವಿನಲ್ಲಿ
ಅರಳಿನಿಂತ ಮನಸೇ
v.good post.

ಮಲ್ಲಿಕಾರ್ಜುನ.ಡಿ.ಜಿ. said...

ಗಾಯವೆಲ್ಲ ಮಾಯುವಂಥ

ರಾತ್ರಿಯೊಂದು ಕನಸೇ

ದಳದಳಗಳ ನೋವಿನಲ್ಲಿ

ಅರಳಿನಿಂತ ಮನಸೇ

-ನನಗಿಷ್ಟವಾದ ಸಾಲುಗಳು.

Shree said...

ಮಾಮೂಲು ಸ್ಟೀರಿಯೋಟೈಪ್ ರಾಗದ ಬದಲು ಹಾಡಿನ ಭಾವಕ್ಕೆ ತಕ್ಕ ರಾಗ ಇದ್ದಿದ್ರೆ ಇನ್ನೂ ಚೆನ್ನಾಗಿರ್ತಿತ್ತು... ಅಣ್ಣಾವ್ರ ದನಿ ಮಾತ್ರ ಸಖತ್!

sunanda said...

ಬಾಯಾರಿದ ಬಿಸಿಲಿನಲ್ಲಿ
ಹೊಸ ಹಗಲ ತೇರು
ಎಳೆಯದೇ ದಾರಿಯಲ್ಲಿ
ಬಿಟ್ಟು ಹೋದವರಾರು?
ವಾವ್! ಆನುದಾದಾ, ರಥಬೀದಿಯ ತೇರೇ ಇರಬೇಕಲ್ವೇನೊ ?
-ಸುನಂದಾ