Sunday, June 28, 2009

ಮತ್ತೆ ಮತ್ತೆ ಬ್ರೆಕ್ಟ್‌

ಯು ಆರ್ ಅನಂತಮೂರ್ತಿ ಅನುವಾದಿಸಿದ ಬ್ರೆಕ್ಟ್‌ ಕವಿತೆಗಳ ಪುಸ್ತಕ ಇಂದು ಸಂಜೆ ಶಿವಮೊಗ್ಗದಲ್ಲಿ ಬಿಡುಗಡೆಗೊಳ್ಳುತ್ತಿದೆ।
ಈ ಪುಸ್ತಕವು ಅಹರ್ನಿಶಿ ಪ್ರಕಾಶನದಿಂದ ಹೊರಬರುತ್ತಿದೆ.

Saturday, June 27, 2009

ಎರಡು ಪುಸ್ತಕಗಳ ಬಿಡುಗಡೆಗೆ ಬನ್ನಿ


‘ನೂರೆಂಟು ಮಾತು ಭಾಗ ೫’ ಮತ್ತು ‘ತಲೆಬರಹ ಪತ್ರಿಕೆಯ ಹಣೆಬರಹ’ - ವಿಶ್ವೇಶ್ವರ ಭಟ್‌ ಬರೆದ ಎರಡು ಪುಸ್ತಕಗಳು ನಾಳೆ(೨೮ ಜೂನ್‌) ಬಿಡುಗಡೆಯಾಗುತ್ತಿವೆ। ಬೆಂಗಳೂರಿನ ಬಸವನಗುಡಿಯ ವರ್ಲ್ಡ್‌ ಕಲ್ಚರ್‌ ಇನ್‌ಸ್ಟಿಟ್ಯೂಟ್‌ ನಲ್ಲಿ ಬೆಳಗ್ಗೆ ೧೦:೩೦ಕ್ಕೆ ಕಾರ್ಯಕ್ರಮ। ಎಚ್ಚೆಸ್ವಿ, ಜಯಂತ್ ಕಾಯ್ಕಿಣಿ ಮತ್ತು ಜಿ ಎನ್‌ ಮೋಹನ್‌ ವೇದಿಕೆಯಲ್ಲಿರುತ್ತಾರೆ। ಎರಡೂ ಪುಸ್ತಕಗಳ ಮುಖಪುಟಗಳು ಇಲ್ಲಿವೆ। ಮೊದಲ ಪುಸ್ತಕದ ಪೋಟೋ ನಾನು ಕಳೆದ ವರ್ಷ ಮಹಾಬಲಿಪುರಂಗೆ ಹೋದಾಗ ತೆಗೆದದ್ದು। ಎರಡನೇ ಪುಸ್ತಕದ ಫೋಟೋ ಖಂಡಿತಾ ನಾನು ತೆಗೆದದ್ದಲ್ಲ।(ಮಹಾಬಲಿಪುರಂ ಪೋಟೋ ತೆಗೆಯೋದರಲ್ಲಿ ಮಹಾ ಏನಿಲ್ಲ; ಎರಡನೇ ಪುಸ್ತಕದ ಫೋಟೋ ತೆಗೆಯಲು ‘ಎದೆಗಾರಿಕೆ’ ಬೇಕಲ್ಲ!)

Tuesday, June 23, 2009

ನಾಲ್ಕು ಹೊಸ ವಿನ್ಯಾಸಗಳು



ಈ ನಾಲ್ಕೂ ಪುಸ್ತಕಗಳನ್ನು ಹೊರತಂದಿರುವುದು ವಸಂತ ಪ್ರಕಾಶನ।



Saturday, June 20, 2009

ಒಂದು ಹಾಡಿನ ಪಾತ್ರ

ಮುಂಗೈವರೆಗೆ ಬಿಳಿಯ ಉಡುಪು ತೊಟ್ಟ ಅನಾರ್ಕಲಿ ತುಂಬಿದ ದರ್ಬಾರಿನಲ್ಲಿ ಸಿಂಗಾರಗೊಂಡು ನಿಂತಿದ್ದಾಳೆ. ಚರ್ಕವರ್ತಿ ಅಕ್ಬರನ ಮಗನನ್ನು ಪ್ರೇಮಿಸಿದ ನರ್ತಕಿ ಅವಳು. ಆ ತಪ್ಪಿಗಾಗಿ ಸಂಕೋಲೆಗಳಲ್ಲಿ ಬಂದಿಯಾಗಿ ‘ಮೊಹಬ್ಬತ್ ಕೀ ಝೂಟಿ ಕಹಾನಿ ಪೆ ರೋಯೆ’ ಎಂದು ಸ್ಪಲ್ಪ ಹೊತ್ತಿನ ಹಿಂದೆ ಕಣ್ಣೀರು ಹಾಕುತ್ತಿದ್ದಾಕೆ ಅವಳೇನೆ? ಈ ನೃತ್ಯದ ನಂತರ ಅವಳು ಮತ್ತೆಲ್ಲೂ ಯಾರಿಗೂ ಕಾಣಿಸಿಕೊಳ್ಳದಂತೆ ಮರೆಯಾಗಬೇಕಿದೆ. ಹಾಗೆಂದು ಒತ್ತಡ ಹೇರಿ ಈಗ ಸಿಂಹಾಸನದ ಮೇಲೆ ನರ್ತನ ಆಸ್ವಾದಿಸುತ್ತಾ ಕೂತಿರುವ ಅಕ್ಬರನ ತುಟಿಯಲ್ಲಿ ಕಿರುನಗೆ. ಅವನಿಗೆ ಗೊತ್ತಿಲ್ಲ, ಆ ಒಂದು ಗಳಿಗೆಯಲ್ಲಿ ಅನಾರ್ಕಲಿ ತನ್ನೆಲ್ಲ ಭಯಗಳನ್ನು ದೂರಗೊಳಿಸಲು ನಿರ್ಧರಿಸಿದ್ದಾಳೆಂದು!
ತುಂಬಿದ ಸಭೆಯಲ್ಲಿ ಚಕ್ರವರ್ತಿಯ ಎದುರು ನಿಂತು ‘ಜಾನ್ ಬಿ ಲೇಲೇ ಚಾಹೆ ಜಮಾನಾ’ ಎನ್ನುವ ಅವಳ ಧೈರ್ಯವೇನು? ಮೌತ್ ವಹೀ ಜೋ ದುನಿಯಾ ದೇಖೆ, ಘುಟ್ ಘುಟ್ ಕೆ ಯೂ ಮರ್‍ನಾ ಕ್ಯಾ’ ಎಂದು ತೀರಾ ಸನಿಹಕ್ಕೆ ಹೋಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ಹೇಳುವ ಉದ್ಧಟತನವೇನು? ಈ ಧೈರ್ಯ, ಉದ್ಧಟತನಗಳನ್ನು ಹಾಡು ಮತ್ತು ನೃತ್ಯದ ಭಂಗಿಗಳಲ್ಲದೆ ಯಾವ ಡೈಲಾಗಿನಲ್ಲಾದರೂ ಅಷ್ಟು ಪರಿಣಾಮಕಾರಿಯಾಗಿ ತೋರಿಸಲಾಗುತ್ತಿತ್ತೆ? ತಾರಸಿಯ ಕನ್ನಡಿಗಳ ಮೇಲೆ ಕಾಣುವ ಅವಳ ಸಾವಿರಾರು ಚೂರುಬಿಂಬಗಳನ್ನು ನೋಡಲು ತಲೆಎತ್ತಿರುವ ಅಕ್ಬರನ ಮುಖವೆಷ್ಟು ಕಪ್ಪಿಟ್ಟಿದೆ! ಇನ್ನೊಂದು ಸಿಂಹಾಸನದ ಮೇಲೆ ಕುಳಿತಿರುವ ಸಲೀಂನ ಪ್ರೀತಿಯೂ ಇದೇ ಅಮೃತ ಗಳಿಗೆಯಲ್ಲಿ ಗಟ್ಟಿಗೊಂಡಿತೆ? ನೃತ್ಯ ಮುಗಿಸಿ ಸ್ತಬ್ಧಗೊಂಡಾಗ ತಿರುಗಿ ಬಿದ್ದು ಸದ್ದು ಮಾಡುವ ಅನಾರ್ಕಲಿಯ ಉಡುಪಿನ ಮಣಿಗಳೂ ಅವಳ ಆವೇಶದ ಒಂದು ಭಾಗವನ್ನು ಪಡೆದುಕೊಂಡಂತಿವೆ. ಮತ್ತೆ ಸೆರೆಮನೆಗೆ ಅಟ್ಟಿದ ಚಕ್ರವರ್ತಿಗೆ ಅವಳು ಬಾಗಿ ನಿಂತು, ಕೇವಲ ತೋಳನ್ನಷ್ಟೇ ಚಲಿಸಿ ಮೂರು ಬಾರಿ ಮಾಡುವ ಸಲಾಂನಲ್ಲೂ ಎಂಥ ಸ್ಪಷ್ಟ ಸಂದೇಶವಿದೆ!
ಹಾಲಿವುಡ್ ಚಿತ್ರಗಳಲ್ಲಿ ಹಾಡು ಕುಣಿತಗಳಿಲ್ಲ ಎಂಬುದನ್ನು ಉದಾಹರಿಸುತ್ತಾ, ನಮ್ಮ ಸಿನಿಮಾಗಳಲ್ಲಿರುವ ಹಾಡಿನ ಸನ್ನಿವೇಶಗಳನ್ನು ಅಗ್ಗದ ಮನರಂಜನೆ ಎಂಬಂತೆ ನಾವು ಭಾವಿಸುತ್ತೇವೆ. ಕತೆಯ ನಡುವಿನ ಅಡ್ಡಿಗಳೆಂದು ತಿಳಿಯುತ್ತೇವೆ. ನಮ್ಮ ಬಹುತೇಕ ನಿರ್ದೇಶಕರು ಹಾಡುಗಳನ್ನು ಬಳಸಿಕೊಳ್ಳುವುದೂ ಹಾಗೆಯೇ. ಆದರೆ ‘ಮೊಘಲ್ ಎ ಆಜಮ್ ’ ಸಿನಿಮಾದ ‘ಪ್ಯಾರ್ ಕಿಯಾ ತೊ ಡರ್‌ನಾ ಕ್ಯಾ’ ಹಾಡು ಆ ಇಡೀ ಕತೆಯನ್ನು ನಿರ್ದೇಶಿಸುವಷ್ಟು ಪ್ರಭಾವಶಾಲಿಯಾಗಿದೆ. ಈ ಹಾಡಿನಲ್ಲಿ ಹೇಳಿದ್ದನ್ನು ಸಂಭಾಷಣೆಯಿರುವ ಒಂದು ದೃಶ್ಯದಲ್ಲಿ ಹೇಳಲು ಆಗುತ್ತಲೇ ಇರಲಿಲ್ಲ ಎನಿಸುತ್ತದೆ. ಎಷ್ಟೋ ದಿನಗಳಾದ ಮೇಲೂ ಈ ಹಾಡು ನನ್ನನ್ನು ಬಿಡುತ್ತಿಲ್ಲ.

Thursday, June 18, 2009

ಹೊಸ ಬಟ್ಟೆ

ಸತ್ಯ ಹರೀಶ್ಚಂದ್ರ, ಮೊಗಲೆ ಆಜಮ್‌ಗಳು ಬಣ್ಣ ಹಚ್ಚಿಕೊಂಡು ಮರಳಿ ಬಂದು ನಮ್ಮ ಮನಸೂರೆಗೊಂಡಂತೆ ಈ ಪುಸ್ತಕಗಳೂ ಹೊಸ ಉಡುಪು ಧರಿಸಿ ಬಂದಿವೆ। ಮೊದಲೂ ನಮ್ಮ ಅಚ್ಚುಮೆಚ್ಚಿನ ಪುಸ್ತಕಗಳಾಗಿದ್ದ ಇವು ಈ ಹೊಸ ವೇಷದಲ್ಲೂ ಇಷ್ಟವಾಗುತ್ತಿವೆಯೇ? ಜಯಂತ್‌ ಮತ್ತು ಜೋಗಿ ಕತೆಗಳ ಪುಸ್ತಕಗಳು ಅಂಗಡಿಯಲ್ಲಿ ಸಿಗುತ್ತಿವೆ। ನಾಗೇಶ್‌ ಹೆಗಡೆ ಪುಸ್ತಕ ಅತಿ ಶೀಘ್ರದಲ್ಲಿ ಬರಲಿದೆ। (ಜಯಂತ್‌ ಪುಸ್ತಕದ ಕಲಾಕೃತಿ: ಪ್ರದೀಪ್‌ ರಾವುತ್‌)

Tuesday, June 16, 2009

ಮನಸಿಗೆ ಬಂದವಳು

ಇದು ಕವಿ ಜಯಂತ್ ಕಾಯ್ಕಿಣಿ ಬರೆದ ಮೊದಲ ಗೀತೆ ಎನ್ನಬಹುದು।

`ಅನುರಾಗ' ಎಂಬ ಭಾವಗೀತೆಗಳ ಕ್ಯಾಸೆಟ್‌ ಒಂದಿದೆ। ಸಿ ಅಶ್ವಥ್‌ ಸಂಗೀತ ನೀಡಿದ್ದ ಆ ಕ್ಯಾಸೆಟ್‌ನಲ್ಲಿ ಹಲವು ತರುಣ ಕವಿಗಳು ಬರೆದ ಗೀತೆಗಳಿದ್ದವು। ಅದರಲ್ಲಿದ್ದ ಎಲ್ಲ ಗೀತೆಗಳನ್ನು ಹಾಡಿದ್ದವರು ನಮ್ಮ ಪ್ರೀತಿಯ ರಾಜ್‌ಕುಮಾರ್! `ಅನಿಸುತಿದೆ'ಗಿಂತ ಬಹಳ ಹಿಂದೆ ಜಯಂತ್‌ ಬರೆದ ಈ ಚೆನ್ನಾದ ಕವಿತೆಯನ್ನು ಓದಿ ಆನಂದಿಸಿ, ಇದರಲ್ಲಿ ನಿಮಗೆ ಬಹು ಇಷ್ಟವಾದ ಸಾಲು ಯಾವುದು ಅಂತ ಹೇಳಿ। ಹಾಡನ್ನು ಕೇಳಬೇಕೆಂದಿದ್ದರೆ ಕನ್ನಡ ಆಡಿಯೋ ಡಾಟ್ ಕಾಮ್‌ಗೆ ಹೋಗಿ .

ಕಣ್ಣಿಗೆ ಬಂದವಳು

ಕನಸಿಗೆ ಬಾರದಿರುವೆಯಾ

ಮಾತಿಗೆ ಬಂದವಳು

ಮನಸಿಗೆ ಬಾರದಿರುವೆಯಾ

*

ಗಾಯವೆಲ್ಲ ಮಾಯುವಂಥ

ರಾತ್ರಿಯೊಂದು ಕನಸೇ

ದಳದಳಗಳ ನೋವಿನಲ್ಲಿ

ಅರಳಿನಿಂತ ಮನಸೇ

ತಂಗಾಳಿಯ ಕರೆಯೇ

ಹೊಸಲೋಕವ ತೆರೆಯೇ

ಕೊನೆಗೂ ಬಂದವಳು

ಬೆಳಗು ತಾರದಿರುವೆಯಾ

*

ಬಾಯಾರಿದ ಬಿಸಿಲಿನಲ್ಲಿ

ಹೊಸ ಹಗಲ ತೇರು

ಎಳೆಯದೇ ದಾರಿಯಲ್ಲಿ

ಬಿಟ್ಟು ಹೋದವರಾರು?

ಹುಚ್ಚು ನೂರು ಸಂತೆ

ನೆಚ್ಚಿ ಕಾದು ನಿಂತೆ

ಸಖ ಎಂದವಳು

ಮುಖ ತೋರದಿರುವೆಯಾ?

*

ಕಣ್ಣಿಗೆ ಬಂದವಳು

ಕನಸಿಗೆ ಬಾರದಿರುವೆಯಾ

ಮಾತಿಗೆ ಬಂದವಳು

ಮನಸಿಗೆ ಬಾರದಿರುವೆಯಾ?