Monday, November 24, 2008

ನೀವು ‘ಮ್ಯಾಕ್ಸಿಮಮ್ ಸಿಟಿ’ ಓದಬೇಕು...

-ಗುರುಪ್ರಸಾದ್ ಕಾಗಿನೆಲೆ

‘ಸದ್ಯದಲ್ಲಿಯೇ ಆಸ್ಟ್ರೇಲಿಯಾಖಂಡಕ್ಕಿಂತಾ ಹೆಚ್ಚುಜನ ಬಾಂಬೆಯಲ್ಲಿ ವಾಸಿಸಿರುತ್ತಾರೆ. ‘Urbs Prima in Indis’ ಅನ್ನುತ್ತದೆ, ಗೇಟ್‌ವೇ ಆಫ್ ಇಂಡಿಯಾ ಮುಂದಿರುವ ಒಂದು ಫಲಕ. ಅದರ ಜನಸಂಖ್ಯೆ ಒಂದು ಅರ್ಥದಲ್ಲಿ ಶಹರದ ಓಜಸ್ಸಿಗೆ ಹಿಡಿದ ಪರೀಕ್ಷೆಯೂ ಆಗಿದೆ,. ಹದಿನಾಲ್ಕು ಮಿಲಿಯ ಜನಸಂಖ್ಯೆಯುಳ್ಳ ಬಾಂಬೆ ಈ ಜಗತ್ತಿನ ನಗರವಾಸಿಗಳ ಪಂದ್ಯದ ಅತೀ ದೊಡ್ಡ ಓಟವಾಗಿದೆ. ಬಾಂಬೆ, ಜಗತ್ತಿನ ನಗರ ನಾಗರೀಕತೆಯ ಭವಿಷ್ಯ. God help us.
ನಾನು ಬಾಂಬೆ ಬಿಟ್ಟದ್ದು ೧೯೭೭ರಲ್ಲಿ, ಮತ್ತೆ ವಾಪಸ್ ಬಂದದ್ದು ಇಪ್ಪತ್ತೊಂದು ವರ್ಷದ ಬಳಿಕ, ಅದು ‘ಮುಂಬೈ’ ಆಗಿ ಬೆಳೆದಾದಮೇಲೆ. ಇಪ್ಪತ್ತೊಂದು ವರ್ಷ: ಒಬ್ಬ ಮನುಷ್ಯನಿಗೆ ಹುಟ್ಟಲಿಕ್ಕೆ, ವಿದ್ಯಾಭ್ಯಾಸ ಪೂರೈಸಲಿಕ್ಕೆ, ಮದುವೆಯಾಗಲಿಕ್ಕೆ, ಡ್ರೈವ್ ಮಾಡುವುದಕ್ಕೆ, ವೋಟ್ ಮಾಡುವುದಕ್ಕೆ, ಯುದ್ಧಕ್ಕೆ ಹೋಗಲಿಕ್ಕೆ, ಮತ್ತು ಯಾರನ್ನಾದರೂ ಕೊಲುವುದಕ್ಕೂ... ಸಾಕಾಗುವಷ್ಟು ವಯಸ್ಸು. ಬಾಂಬೆ ಬಿಟ್ಟು ಇಷ್ಟೆಲ್ಲಾ ವರ್ಷಗಳಾಗಿದ್ದರೂ ನಾನು ನನ್ನ ಉಚ್ಚಾರವನ್ನು ಕಳೆದುಕೊಂಡಿರಲಿಲ್ಲ. ನಾನು ಈಗಲೂ ಬಾಂಬೆಯ ಹುಡುಗನಂತೆಯೇ ಮಾತಾಡೋದು: ಹಾಗೆಯೇ ನನ್ನನ್ನು ಕಾನ್‌ಪುರದಿಂದ ಕಾನ್ಸಾಸ್ ಸಿಟಿಯವರೆಗೆ ಎಲ್ಲರೂ ಗುರುತಿಸೋದು. ‘ನೀನು ಯಾವೂರಿನವನು?’ ನನ್ನ ಕೇಳಿದರೆ, ಪ್ಯಾರಿಸ್, ಲಂಡನ್, ಮನ್ಹಾಟನ್ ಮುಂತಾದ ಪದಗಳಲ್ಲಿ ಉತ್ತರ ಹುಡುಕುತ್ತಾ ಕೊನೆಗೆ ಪ್ರತಿಯೊಂದು ಬಾರಿಯೂ ‘ಬಾಂಬೆ’ ಅನ್ನುವ ಪದಕ್ಕೇ ಸೆಟಲ್ ಆಗುತ್ತೇನೆ. ಭಗ್ನಗೊಂಡ ಸದ್ಯದ ಅದರ ಪ್ರಸ್ತುತ ಅವಘಡದ ಆಳದಲ್ಲಿ ಎಲ್ಲೋ ನನ್ನ ಹೃದಯವನ್ನು ಭದ್ರವಾಗಿ ಹಿಡಿದಿರುವ ಆ ಶಹರಿದೆ, ಕಡಲ ಬದಿಯ ಆ ಸುಂದರ ಶಹರ, ಪುರಾತನ ರಾಷ್ಟ್ರದ ಭರವಸೆಗಳ ದ್ವೀಪ. ಒಂದು ಸರಳವಾದ ಪ್ರಶ್ನೆಗೆ ಉತ್ತರ ಅರಸುತ್ತಾ ನಾನು ಆ ನಗರಕ್ಕೆ ಹೋದೆ: ನಾನು ಮತ್ತೆ ತಾಯಿನಾಡಿಗೆ ವಾಪಸ್ಸು ಹೋಗಬಲ್ಲೆನೇ? ಹುಡುಕುತ್ತಾ ನನ್ನಲ್ಲೇ ಇರುವ ಅನೇಕ ಶಹರಗಳನ್ನು ಕಂಡೆ.’
ಹೀಗೆ ಆರಂಭವಾಗುತ್ತದೆ, ಸುಕೇತು ಮೆಹತಾರ ‘ಮ್ಯಾಕ್ಸಿಮಮ್ ಸಿಟಿ’ ಹದಿನಾಲ್ಕನೆಯ ವಯಸ್ಸಿನಲ್ಲಿ ಬಾಂಬೆಯನ್ನು ಬಿಟ್ಟು ನ್ಯೂಯಾರ್ಕಿನಲ್ಲಿ ನೆಲಸಿದ ಸುಕೇತು ಮೆಹತಾ ಈ ಮಹಾನಗರದ ಒಳನೋಟವನ್ನು ಅತ್ಯಂತ ನಿಕಟವಾಗಿ, ವಿವರವಾಗಿ ಪ್ರೀತಿಯಿಂದ ಚಿತ್ರಿಸುತ್ತಾನೆ. ಆತ ಮತ್ತೆ ಬಾಂಬೆ ( ಈ ಮಹಾನಗರವನ್ನು ಮುಂಬೈ ಎಂದು ಕರೆಯಲು ಆತ ಒಪ್ಪುವುದಿಲ್ಲ) ಗೆ ವಾಪಸ್ಸು ಬಂದು ಅಲ್ಲಿರಬೇಕೆಂದು ಯೋಚಿಸಿದಾಗ ಬಾಂಬೆಯನ್ನು ಅವರು ನೋಡುವುದು ಬೇರೆಬೇರೆ ಕೋನಗಳಿಂದ- ಅಂಡರ್‍ವರ್ಲ್ಡ್ ಡಾನ್‌ಗಳ ಕಣ್ಣಿನಿಂದ, ಬಿಯರ್ ಬಾರ್‍ಗಳ ಹುಡುಗಿಯರ ಬೆವರಿನಿಂದ, ಎನ್‌ಕೌಂಟರ್ ಪೋಲಿಸ್ ಅಕಾರಿಗಳ ಬಂದೂಕಿನ ನಳಿಕೆಗಳ ಹೊಗೆಯ ಮಬ್ಬಿನಿಂದ.
ಈ ಪುಸ್ತಕವನ್ನು ‘ಇನ್‌ಸೈಡರ್’ ಆಗಿ ಸುಕೇತು ನೋಡಿದ್ದಾನೆ ಎಂದು ಪಶ್ಚಿಮದ ಮಾಧ್ಯಮಗಳು ವರ್ಣಿಸಿವೆ. ಬಾಂಬೆಯನ್ನು ಮುಂಬೈಯನ್ನಲ್ಲೊಪ್ಪದ, ಭೌಗೋಳಿಕ ಸರಹದ್ದುಗಳಿಂದ ರಾಷ್ಟ್ರೀಯತೆಯನ್ನು ಮಿತಿಗೊಳಿಸುವುದನ್ನೊಪ್ಪದ, ಶಬ್ದ ಮಾಲಿನ್ಯ, ಧೂಳು, ಭರಪೂರ ಗಾಳಿಗೆ ತನ್ನ ದುಬಾರಿ ಅಪಾರ್ಟ್‌ಮೆಂಟಿನೊಳಗೆ ನುಗ್ಗುವ ಪಕ್ಕದ ಪಾರ್ಕಿನ ಮಕ್ಕಳ ಹೊಲಸಾದ ಡಯಾಪರ್‍ಗಳು, ಬಾಂಬೆಯ ಗಾಳಿಯನ್ನು ಉಸಿರಾಡಿದ ಮಾತ್ರ ಹುಷಾರು ತಪ್ಪಿ ಮಲಗುವ ತನ್ನ ಮಕ್ಕಳನ್ನು ನೋಡಿ ತಡೆಯಲಾಗದೇ ಬಾಂಬೆಯನ್ನು ಮನಃಪೂರ್ತಿ ಬಯ್ಯುವ ಈತ ‘ಇನ್ಸೈಡರ್’ ಎಂದು ನಾವು ಒಪ್ಪಲಾರವೇನೋ? ತನ್ನ ಈ ಎನ್ನಾರೈ ಗುಣವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಪರಿ ಯಾವ ಭಾರತೀಯನಿಗೂ ಅಸಹಜ ಅನ್ನಿಸುವುದಿಲ್ಲ. ಈ ಕಾರಣಕ್ಕಾಗಿಯೇ ಆತ ಪ್ರತಿಪಾದಿಸುವ ರಾಷ್ಟ್ರೀಯತೆ ಇಷ್ಟವಾಗುತ್ತದೆ.
ಒಂದಕ್ಕೊಂದು ಹೆಣೆದುಕೊಂಡಿರುವ ರಾಜಕೀಯ ಮತ್ತು ಪಾತಕಿಗಳ ಲೋಕ, ಒಬ್ಬರನ್ನೊಬ್ಬರು ನಾಶಮಾಡುವ ಮತ್ತು ಪರಸ್ಪರ ರಕ್ಷಿಸುವ, ಶರಾ ಹಾಕುವ ‘ಪವರ್ ಆಫ್ ಅಟಾರ್ನಿ’ (ಮುಂಬಯ್ಯಾ ಭಾಷೆಯಲ್ಲಿ ಇದು ‘ಪವರ್ಟನಿ’) ಗಳಾಗುವ ರಾಜಕಾರಣಿ ಶಿವಸೇನಿಕರು, ತಮ್ಮನ್ನು ತಾವೇ ‘ಸ್ಕಾಟ್‌ಲೆಂಡ್ ಯಾರ್ಡು ಬಿಟ್ಟರೆ ನೆಕ್ಸ್ಟು’ ಎಂದು ಕರಕೊಳ್ಳುವ ಎನ್‌ಕೌಂಟರ್ ಪೋಲೀಸರು, ಸುಕೇತು ‘ಬ್ಲಾಕ್ ಕಾಲರ್’ ಕೆಲಸಗಾರರೆನ್ನುವ ಡಿ-ಕಂಪೆನಿಯ ಭೂಗತರು, ಛೋಟಾ ರಾಜನ್, ಬಾಳಾ ಥಾಕ್ರೆ, ಬಿಯರ್ ಬಾರ್‌ಗಳ ರಾತ್ರಿರಾಣಿಯರು, ಬಾಲಿವುಡ್, ಹೀಗೇ ಬಾಂಬೆಯ ಅನೇಕ ಮುಖಗಳನ್ನು ಪರಿಚಯಿಸುತ್ತಾ ಹೋಗುತ್ತನೆ. ಬಾಲಿವುಡ್ಡನ್ನು ಕುರಿತು ಈತ ಹೇಳುವುದು ನೋಡಿ. ‘ಈ ಚಲನ ಚಿತ್ರ ಅನ್ನುವ ಪ್ರಾಡಕ್ಟ್ ನ್ನು ನೋಡಿದರೆ, ಅದರ ಸೃಷ್ಟಿಕರ್ತರುಗಳು ಇಷ್ಟು ಬುದ್ಧಿವಂತರು ಎಂದು ಹೇಳಲಾಗುವುದೇ ಇಲ್ಲವಲ್ಲ.’ (ವಿದೂ ವಿನೋದ್ ಚೋಪ್ರಾನ ಜತೆ ಮಿಶನ್ ಕಶ್ಮೀರ್ ಚಿತ್ರಕ್ಕೆ ಚಿತ್ರಕತೆ ತಯಾರು ಮಾಡುತ್ತಿರುವಾಗ ಈತನಿಗೆ ಅನ್ನಿಸಿದ್ದು) ಬಾಲಿವುಡ್‌ನ ಕುರಿತ ಒಳನೋಟ ಯಾವ ನುರಿತ ಇನ್‌ಸೈಡರ್’ ಗೂ ದಕ್ಕದ್ದು ಸುಕೇತುವಿಗೆ ದಕ್ಕಿದೆ.
ಪ್ರತಿಯೊಂದು ಕತೆಯ ಮೂಲಕವೂ ಸುಕೇತು ತನ್ನ ಕತೆ ಹೇಳುತ್ತಾನೆ-ಪ್ರೀತಿ, ಹತಾಶೆ, ತನ್ನ ಬಾಂಬೆಯನ್ನು ‘ಮುಂಬೈ’ ಮಾಡಿದ ರಾಜಕೀಯ ಕುರಿತು ಸಿಟ್ಟು, ಹುಡುಕಿ ಸಿಗದ ಕೊನೆಗೆ ಬದಲಾಯಿಸಿಕೊಳ್ಳಬೇಕಾದ ನಾಸ್ಟಾಲ್ಜಿಯ-ಪ್ರತಿಯೊಂದರಲ್ಲಿಯೂ ಇಪ್ಪತ್ತು ವರ್ಷದ ನಂತರ ತನ್ನನ್ನು ತಾನು ಮತ್ತೆ ತಾನು ಹುಟ್ಟಿದ ಮಹಾನಗರಿಯಲ್ಲಿ ಹುಡುಕಿಕೊಳ್ಳಬೇಕಾದ, ಆ ಮೂಲಕ ಮಹಾನಗರಿಯನ್ನು ಮತ್ತದರ ವಿವಿಧ ಮುಖಗಳನ್ನು ವಿವರಿಸುವ ಮತ್ತು ಭವಿಷ್ಯದ ಮುಖ್ಯ ಮೆಟ್ರೊಪೊಲಿಸ್ ಆದ ‘ಬಾಂಬೆ’ಯನ್ನು ಆತ ತನಗಾಗಿ, ಆ ನಗರದ ಮೇಲಿನ ಪ್ರೀತಿಗಾಗಿ ಪುನರ್‌ನಿರ್ಮಿಸಿಕೊಳ್ಳುವ ಪರಿಯೇ ‘ಮ್ಯಾಕ್ಸಿಮಮ್ ಸಿಟಿ’
ಮಸ್ಟ್ ರೀಡ್.

5 comments:

Keshav.Kulkarni said...

ಗುರು,


ಖಂಡಿತ ಓದಿ ಅಭಿಪ್ರಾಯ ತಿಳಿಸುವೆ. ಪುಸ್ತಕ ಪರಿಚಯಿಸಿದ್ದಕ್ಕೆ ವಂದನೆಗಳು.

ಕೇಶವ

Anonymous said...

ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

sunanda said...

Guru, chennagittappa, nanagoo odabekenisuttide.. thanks.
-sunanda kadame

ಪ್ರಿಯಾ ಕೆರ್ವಾಶೆ said...

ನಮ್ಮೂರಿನಿಂದ ಹೊಟೆಲ್‌ ಕೆಲಸಕ್ಕೆಂದು ಬಹಳ ಹುಡುಗರು ಬಾಂಬೆ ಹಾದಿ ಹಿಡಿಯುತ್ತಾರೆ. ಅವರಲ್ಲಿ ಮಾತಲ್ಲಿ ಈ ನಗರಿ ಬೊಂಬಾಯಿ ಆಗುತ್ತದೆ. ಈ ಲೇಖನ ಓದುವಾಗ ಶಾಲೆ ಅರ್ಧಕ್ಕೆ ಬಿಟ್ಟು ಹೊಟೆಲ್‌ ಕೆಲಸಕ್ಕೆ ಬೊಂಬಾಯಿಗೆ ಹೋದ ನನ್ನ ಮಿತ್ರರು ನೆನಪಿಗೆ ಬರುತ್ತಾರೆ. ತುಂಬ ಚೆನ್ನಾಗಿದೆ ಬರಹ.

Anonymous said...

ಏನೇ ಬರೆದರೂ ಹೊಟ್ಟೆ ಕಿಚ್ಚಾಗುವಂತೆ ಬರೀತೀರಿ ಅನ್ನೋದು ಮಾತ್ರ ನಂಗೆ ನಿಮ್ ಬಗ್ಗೆ ಇರೋ ಕಂಪ್ಲೇಂಟು.. (ಇದಕ್ಕೂ "ಸಾರಿ ಪದ್ಮಿನಿ" ಗೂ ಸೇರಿ )
-ಶಮ, ನಂದಿಬೆಟ್ಟ