೨೦
ಯಾರದೋ ದುಡುಕಿನ ಕೋಪಕೆ
ಹಾದಿಬದಿಯ ಕಲ್ಲಾಗಿರುವೆ ನಾನು
ನೆಲ ನೋಡಿಕೊಂಡು ನಡೆ ದಾರಿಹೋಕಾ
ನನ್ನ ಮುಕ್ತಿಗೆ ಹೂಪಾದ ನಲುಗಬೇಕಾ?
೨೧
ನಾನು ಹೋದಲ್ಲೆಲ್ಲಾ ಬೆನ್ನಟ್ಟಿ ಬಂದಿರಿ
ಊರು ಸಂತೆ ಕಾಡು ಬಿಡದೆ ಕಾಡಿದಿರಿ
ಈ ಬೆಟ್ಟದ ತುದಿಗೂ ಅಟ್ಟಿಸಿಕೊಂಡು ಬಂದಿರಿ
ಕೆಳಗೆ ಜಿಗಿಯುವೆ ಈಗ, ಹಿಂಬಾಲಿಸಬಲ್ಲಿರಾ?
೨೨
ಕಡೆಗೊಮ್ಮೆ ಯಾವುದೋ ಒಬ್ಬ ರಾಜಕುಮಾರಿ
ನನ್ನ ಕಪ್ಪೆ ಮುಖಕ್ಕೆ ಕಣ್ಮುಚ್ಚಿ ಮುತ್ತಿಟ್ಟಳು
ಆದರೂ ಆಗಲಿಲ್ಲವಲ್ಲ ಏನೆಂದರೆ ಏನೂ
ಮೊದಲಾದರೂ ರಾಜಕುಮಾರನಾಗಿದ್ದೆನೆ ನಾನು?